ಸತ್ತಾಗ ಅತ್ತರೇನು?
ನೆನೆನೆನೆದು ಬಿಕ್ಕಿದರೇನು?
ವ್ಯಕ್ತಿ ಮರಳಿ ಬರುವನೇನು?
ಬಂದು ದುಖಃ ನೀಗುವನೇನು?
ಅಳುವರಯ್ಯಾ ಇವರು ಸತ್ತಾಗ ಅಳುವರು!
ಇದ್ದಾಗ ಬಾ ಎನಲಿಲ್ಲ ಬಂದರೆ
ನಾಲ್ಕು ದಿನವಿರು ಎಂದೆನ್ನಲಿಲ್ಲ
ಎರಡೇ ದಿನಕ್ಕೆ ಮುಖ ತಿರುವಿಬಿಟ್ಟಿರಲ್ಲ!
ಅಳುವರಯ್ಯಾ ಇವರು ಸತ್ತಾಗ ಅಳುವರು
ಮತ್ತೆ ನಾಳೆ ಬೆಳಕು ಹರಿವುದೆಂದರು
ನಗುತಾ ಮುನ್ನಡೆಯೋಣವೆಂದರು
ಶಾಂತಿಯ ಜೀವನದ ಹೊಸ ಕನಸ ಕಂಡರು
ಆ ಕನಸಿಗೆ ಮನಸು ಮಾಡಿದಿರಾ?ಜೈ ಎಂದಿರಾ?
ಕನಿಷ್ಟ ಹೂಂ ಎಂದಿರಾ? ಅಳುವರಯ್ಯಾ
ಇವರು ಸತ್ತಾಗ ಅಳುವರು
ಇದ್ದಾಗ ಕೈಗೂಡಲಿಲ್ಲ, ಜೊತೆ ನಡೆಯಲಿಲ್ಲ
ವೈರಿಗಳಂತೆ ವಿರೋಧಿಸಲೂ ಇಲ್ಲ
ಸದ್ದು ಮಾಡದೆ, ಸಕಾರಣವೂ ಇಲ್ಲದೇ
ಓಟ ಕಿತ್ತರು,ಓಟೂ ಕಿತ್ತರು
ಇವರಿಗೊಂದೆ ಗೊತ್ತು ಇದ್ದಾಗ ಮರೆತು
ಸತ್ತಾಗ ಹೂತು, ಅಳುವರಯ್ಯಾ
ಇವರು ಸತ್ತಾಗ ಅಳುವರು!
- ವಿಶಾಲಕುಮಾರ ಕುಲಕರ್ಣಿ. ಬದಾಮಿ
Facebook ಕಾಮೆಂಟ್ಸ್