X

‘ಸರಕಾರಿ ಹಿ.ಪ್ರಾ.ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ ರೈ’.

“ಒಂದು ಮಗು ಯಾವ ಭಾಷೆಯಲ್ಲಿ ಕನಸು ಕಾಣುತ್ತಾನೋ ಅಥವಾ ಕನಸಿನಲ್ಲಿ ಯಾವ ಭಾಷೆ ಮಾತಾಡುತ್ತಾನೋ ಆ ಭಾಷೆಯಲ್ಲಿ ಅವನಿಗೆ ಶಿಕ್ಷಣ ಕೊಡಬೇಕು. ಅದನ್ನು ಹೊರತಾಗಿ ಇದೇ ಭಾಷೆಯಲ್ಲಿ ಕನಸು ಕಾಣು ಎಂದು ಒತ್ತಡ ಹೇರುವುದು ಅದೆಷ್ಟು ಬಾಲಿಶ ಅಲ್ಲವೇ?”

ನಿಜ. ‘ಸರಕಾರಿ ಹಿ. ಪ್ರಾ. ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ ರೈ’ ಚಿತ್ರ ಹೇಳಹೊರಟಿರುವುದು ಇದನ್ನೇ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರಾಗಿಯೂ ಕರ್ನಾಟಕದವರಲ್ಲದ, ಕೇರಳದವರಾಗಿಯೂ ಕನ್ನಡದಲ್ಲಿ ಉಸಿರಾಡುವ ಮನಸುಗಳ ತೊಳಲಾಟವನ್ನ ನಗುನಗುತ್ತಲೇ ವಿಡಂಬಿಸುವ ಚಿತ್ರ ಇದು. ಚಿತ್ರ ಸಾಗುತ್ತಿದ್ದಂತೆ ನಗುವಿನ ಹಿಂದಿನ ನೋವುಗಳು ಸಹ ಅದಾಗದೇ ಪ್ರೇಕ್ಷಕನಿಗೇ ಅರಿವಾಗುತ್ತಾ ಸಾಗುತ್ತದೆ.

ಚಿತ್ರದ ಶೀರ್ಷಿಕೆ ಕೇಳಿದಾಗಿನಿಂದಲೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಂಡಿತ್ತು ನನಗೆ. ಹಾಗೆಯೇ ಅದೇನೋ ಒಂದು ಆತ್ಮೀಯತೆ ಕೂಡ. ಕಾರಣ ಇಷ್ಟೇ. ದಶಕಗಳ ಕಾಲ ‘ಸ. ಹಿ. ಪ್ರಾ. ಶಾಲೆ, …’, ‘ಸ. ಪ್ರೌ. ಶಾಲೆ, …’ ಎಂದೆಲ್ಲ ಲೆಕ್ಕವಿಲ್ಲದಷ್ಟು ಸಾರಿ ಬರೆಯುತ್ತ ಬೆಳೆದವರು ನಾವು. ಬಹುಶಃ ನಮ್ಮ ನಮ್ಮ ಮನೆ ವಿಳಾಸಗಳು ಸರಿಯಾಗಿ ಬರೆಯಲು ಬಾರದ ದಿನಗಳಲ್ಲಿ ಕೂಡ ಇದನ್ನು ನಾವು ತಪ್ಪಿಲ್ಲದೆ ಬರೆಯುತ್ತಿದ್ದೆವು. ಹೀಗೆ ಬಾಲ್ಯಕ್ಕೆ ವಿಳಾಸವೊಂದಿದ್ದರೆ ಅದು ಇದೇ ಆಗಿರುತ್ತಿತ್ತೇನೋ. ಹೀಗೆ ಬಾಲ್ಯವನ್ನು ಮತ್ತೆ ನೆನಪಿಸುವ ಶೀರ್ಷಿಕೆಯೊಂದಿಗೆ, ಬಾಲ್ಯದ ತುಂಟಾಟಗಳನ್ನೆಲ್ಲ ಮತ್ತೆ ನೆನಪಿಸುತ್ತ ಒಂದು ಮುಗ್ಧ ನಗುವನ್ನ ಎಲ್ಲರ ಮೊಗದಲ್ಲೂ ಈ ಚಿತ್ರ ಮೂಡಿಸುತ್ತದೆ. “ಅಯ್ಯ, ರಜೆ ಮುಗೀತು” ಎನ್ನುತ್ತ ಸಮವಸ್ತ್ರ ಧರಿಸಿ ಶಾಲೆಗೆ ಬರುವ ವಿದ್ಯಾರ್ಥಿಗಳೊಂದಿಗೆ ನಾವೂ ಕ್ಲಾಸಿನ ಒಳಗೆ ನಡೆದುಬಿಡುತ್ತೇವೆ. ಚಿತ್ರ ಮುಂದುವರೆಯುತ್ತಿದ್ದಂತೆ ಅದು ನಮ್ಮದೇ ಶಾಲೆ ಅನಿಸಿಬಿಡುತ್ತದೆ. ಆ ಆತ್ಮೀಯತೆಯನ್ನು ಸೃಷ್ಟಿಸಿದ ಶ್ರೇಯ ನಿರ್ದೇಶಕ ರಿಷಭ್ ಶೆಟ್ಟಿಯವರಿಗೆ ಸೇರಬೇಕು.

ಶಾಲೆಯ ಮೊದಲ ದಿನ ಬಸ್ ಕಂಡಕ್ಟರ್ ಕೇಳುವ “ಮಕ್ಕಳಿಗೆಲ್ಲ ಶಾಲೆ ಶುರುವಾ ಇವತ್ತು…?” ಎಂಬ ಪ್ರಶ್ನೆ,  ಕಳೆದ ವರ್ಷ ತಮ್ಮ ಜೊತೆಯಲ್ಲೇ ತಮ್ಮದೇ ಶಾಲೆಯಲ್ಲಿದ್ದ ಗೆಳೆಯ ಈ ಬಾರಿ “ನಂಗೆ ನಮ್ಮ ಅಪ್ಪ ಬೇರೆ ಶಾಲೆಗೆ ಸೇರಿಸಿದ್ದಾರೆ” ಎನ್ನುವ ಸಂದರ್ಭ, ಪ್ರೀತಿಯ ಗೆಳತಿಯನ್ನು ರಜೆಯ ಬಳಿಕ ಮೊದಲ ಬಾರಿ ಕಾಣುವ ಆ ತವಕ ಹೀಗೆ ಈ ಸಣ್ಣ ಸಣ್ಣ ನಮ್ಮದೇ ಕಥೆ ಎನಿಸುವನಂತಹ ದೃಶ್ಯಗಳನ್ನು ಹೆಣೆದದ್ದಕ್ಕೆ ರಿಷಭ್ ಶೆಟ್ರಿಗೆ ನನ್ನ ಕಡೆಯಿಂದ ಧನ್ಯವಾದ ಹೇಳಲೇಬೇಕು. “ನಾ ಶಾಲೆಗ್ ಹೋಗುದಿಲ್ಲ…” ಎನ್ನುವ ಪುಟ್ಟ ಹುಡುಗನಲ್ಲಿ ನನ್ನನ್ನು ನಾನೇ ಕಂಡಿದ್ದು ಸುಳ್ಳಲ್ಲ. ಎರಡನೇ ತರಗತಿಗೂ ಹೋಗಲು ಹಟ ಮಾಡಿದವ ನಾನು. ಹಾಗಾಗಿ ಆ ದೃಶ್ಯ ಕಂಡು ಸ್ವಲ್ಪ ಜೋರಾಗೇ ನಗು ಬಂದು ಬಿಡ್ತು. ಇಂತಹ ಚಿಕ್ಕ ಚಿಕ್ಕ ವಿವರಣೆಗಳಲ್ಲಿಯೇ ಚಿತ್ರ ಮನಸಲ್ಲುಳಿಯುವುದು ಅಲ್ಲವೇ?  ಆ ವಿಚಾರದಲ್ಲಿ ರಿಷಭ್ ಮತ್ತೆ ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಚಿತ್ರದ ಮೂಲ ಉದ್ದೇಶವಾದ ಗಡಿನಾಡ ಕನ್ನಡ ಮಾಧ್ಯಮ ಶಾಲೆಗಳ ಉಳಿವಿನ ಹೋರಾಟದ ಕುರಿತು . ಶಾಲೆಗೆ ಹೊಸದಾಗಿ ಬರುವ ಮಲಯಾಳಂ ಮೇಷ್ಟ್ರು, ಶಾಲೆಗೆ ಹೋಗದೆ ಕುಳಿತ ಮಗಳ ಸಲುವಾಗಿ “ಉಗ್ರ ಹೋರಾಟ” ಉಂಟು ಎನ್ನುತ್ತಾ ಕತ್ತಿ ಹಿಡಿದು ಯಕ್ಷಗಾನ ವೇಷದಲ್ಲಿಯೇ ಶಾಲೆ ಪ್ರವೇಶಿಸಿ ತಂದೆಯೊಬ್ಬ ಎಬ್ಬಿಸುವ ಗದ್ದಲ, ಪದೇ ಪದೇ ಶಾಲೆ ಮುಚ್ಚಿಸಲು ಹುನ್ನಾರ ನಡೆಸುವ ಎ.ಇ.ಓ., ಶಾಲೆಗೆ ಬೀಗ ಬೀಳುತ್ತಲೇ ಬೇರೆ ಕಡೆಗಳಿಗೆ ಕಲಿಯಲು ಹೋಗುವ ಶ್ರೀಮಂತರ ಮಕ್ಕಳು, ಶಾಲೆಯಿಲ್ಲ ಎಂಬ ಕಾರಣಕ್ಕೆ ಅಪ್ಪಂದಿರ ಜೊತೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕುವ ಬಡ ವಿದ್ಯಾರ್ಥಿಗಳು, ಇದೇ ಕಾರಣಕ್ಕೆ ಹಚ್ಚಿಕೊಂಡ ಗೆಳತಿಯೊಬ್ಬಳು ದೂರದ ಪೇಟೆಗೆ ವಿದ್ಯೆ ಕಲಿಯಲು ಹೋಗುವಾಗ ಉಳಿದ ಗೆಳೆಯ ಗೆಳತಿಯರ ಆ ಹುಡುಗಾಟದ ಮುಗ್ಧ ಮನಸುಗಳಲ್ಲಿ ನಡೆವ ಮುದ್ದಾದ ಒದ್ದಾಟ, ಹೀಗೆ ಪ್ರತಿಯೊಂದನ್ನೂ ಕಣ್ಣಿಗೆ ಕಟ್ಟುವಂತ ಚಿತ್ರಣಗಳ ಮೂಲಕ ಸಮಸ್ಯೆಯ ಗಂಭೀರತೆಯನ್ನು ಪ್ರೇಕ್ಷಕನಲ್ಲಿ ಮೂಡಿಸುತ್ತ ಚಿತ್ರ ಸಾಗುತ್ತದೆ. ಇವೆಲ್ಲದರ ನಡುವೆಯೂ ಪ್ರತಿ ದೃಶ್ಯದಲ್ಲೂ ಒಂದು ಹಿತವಾದ ಹಾಸ್ಯ ಪ್ರೇಕ್ಷಕನ ಮೊಗದಲ್ಲಿ ನಗುವೊಂದನ್ನು ಚಿತ್ರದುದ್ದಕ್ಕೂ ಕಾಯ್ದುಕೊಂಡು ಹೋಗುತ್ತದೆ. ಕೆಲವೊಮ್ಮೆ ಅದೇ ಹಾಸ್ಯ, ಸಮಸ್ಯೆ ಸೃಷ್ಟಿಸುವ ವ್ಯವಸ್ಥೆಯನ್ನು ಅಣಕಿಸುವಂತೆ ಕಾಣುತ್ತದೆ. ಹಾಸ್ಯಭರಿತವಾಗಿಯೇ ನಡೆಯುವ ಚಿತ್ರದ ಕೆಲವು ಸಂಭಾಷಣೆಗಳು ಅತ್ಯಂತ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಈ ಕಾರಣಕ್ಕೆ ಮತ್ತೆ ರಿಷಭ್ ಶೆಟ್ಟಿ ಇಷ್ಟವಾಗುತ್ತಾರೆ ನನಗೆ.

ಇನ್ನು ಪಾತ್ರಗಳ ಕುರಿತು ಹೇಳುವುದಾದರೆ, “ದಡ್ಡ ದಡ್ಡ ದಡ್ಡ…” ಎನ್ನುತ್ತಲೇ ಪ್ರಖ್ಯಾತವಾದ ‘ಪ್ರವೀಣ’ ನಟನೆಯಲ್ಲ ದಡ್ಡ ಅಲ್ಲವೇ ಅಲ್ಲ. ಇನ್ನು ಡ್ರಾಮಾ ಜ್ಯುನಿಯರ್ಸ್ ಖ್ಯಾತಿಯ ಮೂರು ಮಕ್ಕಳು; ಅವರುಗಳ ನಟನೆಗೆ ಆ ಸಮಯದಲ್ಲೇ ಮರುಳಾದವನು ನಾನು. ಇಲ್ಲಿಯೂ ಅದೇ ಛಾಪನ್ನು ಮುಂದುವರೆಸಿದ್ದಾರೆ ಎಂಬುದರಲ್ಲ ಎರಡು ಮಾತಿಲ್ಲ. ಹಾಗೆಯೇ “ಶಾಲೆಗ್ ಹೋಗ್ತೇನಲ್ಲ ರಜೆ ಇರುವಾಗ ಆಡ್ಲಿಕ್ಕೆ”  ಎನ್ನುತ್ತಾ ‘ಉಳಿದವರು ಕಂಡಂತೆ’ಯಲ್ಲಿ ನಗಿಸಿದ್ದ ‘ಡೆಮೋಕ್ರಸಿ’ ಇಲ್ಲಿಯೂ ಅದೇ ಮುಗ್ಧ ನಗು ಮಾತುಗಳ ಮೂಲಕ ಸೆಳೆಯುತ್ತಾನೆ. ಈ ಬಳಗಕ್ಕೆ ಇನ್ನೊಂದು ಸೇರ್ಪಡೆ ಎನಿಸುವಂತೆ, “ನಂಗೆ ರಾಮಣ್ಣ ರೈ ಮೇಲೆ ‘ಕ್ರಶ್’ ಆಗಿದೆ” ಎನ್ನುತ್ತಾ ಇಡೀ ಚಿತ್ರಮಂದಿರವನ್ನ ನಗೆಗಡಲಲ್ಲಿ ತೇಲಿಸುವ ಪುಟಾಣಿ ಚಿತ್ರಮಂದಿರದ ಹೊರಬಂದಮೇಲೂ ನೆನಪಾದಾಗೆಲ್ಲ ತುಟಿಯಂಚನ್ನು ಅರಳಿಸುತ್ತಾನೆ. ಇನ್ನು ಪ್ರಮೋದ್ ಶೆಟ್ಟಿ ಹಾಗೂ ಪ್ರಕಾಶ್ ತುಮಿನಾಡ್ ಅವರ ಜುಗಲ್ಬಂದಿ ಚಿತ್ರದಲ್ಲಿರುವ ಲವಲವಿಕೆಗೆ ಒಂದು ಮುಖ್ಯ ಕಾರಣ. ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಪರ ಹೋರಾಟಗಾರನಾಗಿ ಬರುವ ‘ಅನಂತಪದ್ಮನಾಭ ಪಿ, ಪಿ ಫ಼ಾರ್ ಪಿಕಾಕ್’ ಎನ್ನುತ್ತ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಅನಂತನಾಗ್ ಪಾತ್ರ ಇಡೀ ಚಿತ್ರಕ್ಕೆ ಒಂದು ಘನತೆ ತಂದುಕೊಡುತ್ತದೆ. “ಐ.ಸಿ.ಯು.ವಿನಲ್ಲಿ ಪೇಶಂಟ್ ಇಲ್ಲ ಅಂತ ಹಾಸ್ಪಿಟಲ್ ಗಳನ್ನೂ ಮುಚ್ಚಲ್ಲ, ಅಸ್ಸೆಂಬಲಿಗೆ, ಪಾರ್ಲಿಮೆಂಟ್’ಗೆ ಸದಸ್ಯರು ಬರೋಲ್ಲ ಅಂತ ಅಸ್ಸೆಂಬಲಿನ ಮುಚ್ಚೊಲ್ಲ. ಹಾಗೆಯೇ ಎಲ್ಲಿಯವರೆಗೆ ಕನ್ನಡ ಕಲೀಬೇಕು ಅಂತ  ಒಬ್ಬ ವಿದ್ಯಾರ್ಥಿ ಶಾಲೆಗೆ ಬಂದು ಕೂರ್ತಾನೋ ಅವನಿಗೆ ಕನ್ನಡದಲ್ಲಿ ಶಿಕ್ಷಣ ಕೊಡೋದು ಸರ್ಕಾರದ ಕರ್ತವ್ಯ” ಎಂದು ಹೇಳುವಾಗ ಆ ದನಿಯಲ್ಲಿರುವ ಖಡಾಖಂಡಿತತೆ ಖಂಡಿತ ಒಂದಿಷ್ಟು ಕನ್ನಡ ಮನಸುಗಳನ್ನು ಜಾಗ್ರತಗೊಳಿಸದೇ ಇರದು.

ಚಿತ್ರದ ಹಾಡುಗಳ ಕುರಿತು ಹೇಳುವುದಾದರೆ, ಎಲ್ಲವು ಒಂದೊಂದು ರೀತಿ ವಿಭಿನ್ನವಾದವು. ಚಿತ್ರ ಬಿಡುಗಡೆಗೂ ಮುನ್ನವೇ ಸದ್ದು  ಮಾಡಿದ “ದಡ್ಡ…ದಡ್ಡ…” ಹಾಡಿಗೆ ಈಗಾಗಲೇ ಅಭಿಮಾನಿಯಾದವ ನಾನು. ಆದರೆ ಚಿತ್ರ ನೋಡುವಾಗ ನನಗೆ ಇಂದು ಅತಿಯಾಗಿ ಇಷ್ಟವಾದ ಹಾಡು ಕೆ. ಕಲ್ಯಾಣ್ ಬರೆದಿರುವ “ಹೇ ಶಾರದೆ…”. ನಾನೇ ಹಿಂದೊಮ್ಮೆ ಎಲ್ಲಿಯೋ ಈ ಹಾಡನ್ನು ಪ್ರಾರ್ಥನೆಯ ರೂಪದಿ ಗುನುಗಿದ್ದೆನೇ ಅನಿಸುವಷ್ಟು ಹತ್ತಿರವಾಯಿತು ಆ ಹಾಡು. ಈ ಹಾಡಿನ ಸಂಗೀತಕ್ಕೆ ವಾಸುಕಿ ವೈಭವ್ ಅವರಿಗೆ ತುಂಬು ಹೃದಯದ ಧನ್ಯವಾದ.

“ಹೂವಲ್ಲಿ ಜೇನು ಗುಡಿ ಕಟ್ಟದೇನು?

ನೀರಲ್ಲಿ ಮೀನು ಅಡಿ ಮುಟ್ಟದೇನು?

ಆ ದೈವದಾಜ್ಞೆನೇ ಎಲ್ಲಾನೂ…”

“ಈ ಲೋಕವೇ ರಂಗಭೂಮಿ

ತಂತಾನೇ ನಡೆಯುತ್ತೆ ಸ್ವಾಮಿ

ಪಾಲಿಗೆ ಬಂದಂಥ ಪಾತ್ರನಾ ಎಲ್ಲಾರೂ ಜೀವಂತಿಸಿ!”

ಈ ಸಾಲುಗಳು ತುಂಬಾ ಇಷ್ಟವಾದವು.

ತ್ರಿಲೋಕ್ ತ್ರಿವಿಕ್ರಮ ಬರೆದ ‘ಅರೆರೆ ಅವಳ ನಗುವ…’ ಹಾಡಿನ “ಓಡೋ  ಕಾಲದ ಕಾಲಿಗೆ ಕಾಲುಗೆಜ್ಜೆಯ ಕಟ್ಟಿದೆ…” ಸಾಲು ಇಷ್ಟವಾಯ್ತು.

“ರಾಮಣ್ಣ ರೈ ಎಂದರೆ ಭಾರಿ ದೊಡ್ಡ ಮನುಷ್ಯ; ಅವರಂತೆ ಆಗ್ಬೇಕು” ಎನ್ನುವ ಪುಟಾಣಿಯೊಬ್ಬ ಶಾಲೆ ಮುಚ್ಚಿಸುವುದ ತಪ್ಪಿಸಲು ಆಗದೆ ಹೋದಾಗ ಅವರಿಗೆ ಹಿಡಿ ಶಾಪ ಹಾಕುತ್ತ ಹಾಡುವ “ಕೊಡುಗೆ ರಾಮಣ್ಣ ರೈ , ಕೊನೆಗೂ ಕೊಟ್ರಲ್ಲ ಕೈ… ನಿಮ್ಮ ಗಾಡಿಯ ವೀಲು ಆಗ್ಲಿ ಪಂಕ್ಚರು” ಹಾಡು ಇಡೀ ವ್ಯವಸ್ಥೆಯನ್ನು ಮುಟ್ಟಿ ನೋಡುವಂತೆ ಅಣಕಿಸುತ್ತದೆ. “ಕಾಲ ಕೈಯ ಹಿಡಿವ ದಿನಕೆ ಕಾಯೋಣ…” ಎಂಬ ಸಾಲು ಸಮಸ್ಯೆಗಳ ವಿರುದ್ಧ ಹೊರಡುವ ಮನಸುಗಳಿಗೆ ಕೊಟ್ಟ ಟಾನಿಕ್’ನಂತೆ ಕಂಡಿತು ನನಗೆ.

“ಕಾಸರಗೋಡನ್ನೇ ಉಳಿಸಿಕೊಳ್ಳಲಿಕ್ಕೆ ಸಾಧ್ಯ ಆಗ್ಲಿಲ್ಲ, ಶಾಲೆ ಉಳಿಸಿಕೊಳ್ಳಲಿಕ್ಕೆ ಆಗ್ತಾದಾ?”

“ಕಾಸರಗೋಡಲ್ಲಿ ಕನ್ನಡ ಬರದೇ ಇರುವವರು ಇದ್ದಾರಾ?”

“ಹೊಸ ಭಾಷೆಯಲ್ಲಿ ಕಲಿಯುವುದು ಸಮಸ್ಯೆ ಅಲ್ಲ. ಇರುವ ನಮ್ಮ ಭಾಷೆ ಕಳೆದುಹೋಗ್ತಾ ಇರೋದು ನಿಜವಾದ ಸಮಸ್ಯೆ”

ಇಂತಹ ಕೆಲವು ಸಂಭಾಷಣೆಗಳು ಮತ್ತೆ ಮತ್ತೆ ಕಾಡುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಕರ್ನಾಟಕದಲ್ಲಿಯೇ ದಿನೇ ದಿನೇ ಕನ್ನಡ ಮಾಧ್ಯಮ ಶಿಕ್ಷಣ ಅಳಿಯುತ್ತಿರುವುದನ್ನು ಕಾಣುವಾಗ ಕಾಸರಗೋಡಿನ ಸಮಸ್ಯೆಗಳ ಕುರಿತ ಅರಿವು ಜಾಸ್ತಿ ಇರದಿದ್ದರೂ ಇಂತಹದ್ದೊಂದು ಸಮಸ್ಯೆಗೆ ನಾವೂ ನಮ್ಮ ಸನಿಹದಲ್ಲೇ ನಮಗೆ ಅರಿವಿಗೆ ಬಾರದಂತೆ ಸಾಕ್ಷಿಯಾಗುತ್ತಿದ್ದೇವೋ ಅಥವಾ ಅರಿವಿಗೆ ಬಂದರೂ ಅಸಹಾಯಕರಂತೆ ಕೂತಿದ್ದೇವೋ ಎಂಬ ಆತ್ಮವಿಮರ್ಶೆಗೆ ನಮ್ಮನ್ನು ನೂಕಿ ಆ ಮೂಲಕ ಎಚ್ಚರಿಕೆಯ ಕರೆಗಂಟೆಯೊಂದನ್ನು ಚಿತ್ರ ರವಾನಿಸುತ್ತದೆ. ಮನರಂಜನೆಯ ನಿಟ್ಟಿನಲ್ಲಿ ಕೂಡ ಎಲ್ಲಿಯೂ ಬೇಸರ ತರಿಸದೆ ನಗಿಸುತ್ತಲೇ ಸಾಗುವ ಚಿತ್ರಕಥೆಯಿದೆ. ಆ ಮೂಲಕ ಪ್ರತಿಯೊಬ್ಬರೂ ಸಕುಟುಂಬ ಪರಿವಾರ ಸಮೇತ ಹೋಗಿ ನೋಡಬಹುದಾದ ಅಪ್ಪಟ ಸದಭಿರುಚಿಯ ಚಿತ್ರವಾಗಿ ಮೂಡಿಬಂದಿದೆ  ‘ಸರಕಾರಿ ಹಿ. ಪ್ರಾ. ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ ರೈ’.

ಹಾಗಾಗಿ ನನ್ನ ಕಡೆಯಿಂದ ಪ್ರೇಕ್ಷಕವರ್ಗಕ್ಕೆ ಹೇಳುವ ಸಂದೇಶ ಇಷ್ಟೇ “ಮರೆಯದಿರಿ, ಮರೆತು ನಿರಾಶರಾಗದಿರಿ, ತಪ್ಪದೇ ಚಿತ್ರ ನೋಡಿ.”

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post