X

ಅವನ ಸೃಷ್ಟಿಯೊಳಗವನೆ ಸೂತ್ರಧಾರ..

ಮಂಕುತಿಮ್ಮನ ಕಗ್ಗ ೦೮೪ 

ಅಣು ಭೂತ ಭೂಗೋಲ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ |
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || ೦೮೪ ||

ಕಂತುಕ – ಚೆಂಡು.

ಅಣು ಭೂತ ಭೂಗೋಲ ತಾರಾಂಬರಾದಿಗಳ(ನ್) 
..ಅಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||


ಅಣುವೆಂದರೆ ವಸ್ತುವಿನ ಬರಿಗಣ್ಣಿಗೆ ಕಾಣಿಸದ ಸೂಕ್ಷ್ಮರೂಪ. ಸಕಲವು ಅಣುಗಳೆಂಬ ಮೂಲವಸ್ತುವಿನಿಂದಲೆ ಮಾಡಲ್ಪಟ್ಟಿದೆ – (ಪಂಚ)ಭೂತಗಳೂ ಸೇರಿದಂತೆ. ಬ್ರಹ್ಮಾಂಡದಲ್ಲಿ ಎಲ್ಲಕ್ಕು ಮೂಲವಸ್ತು ಪಂಚಭೂತಗಳೆ. ನಾವಿರುವ ಭೂಗೋಳವಾಗಲಿ, ತಾರೆಗಳಂತಹ ಕಾಯಗಳಿರುವ ಅಂಬರ (ಆಕಾಶ) ವಾಗಲಿ ಎಲ್ಲವು ಅದರಲ್ಲಿ ಮಾಡಲ್ಪಟ್ಟ ಸರಕುಗಳೆ (ಎಲ್ಲಕ್ಕು ಅವಕಾಶವಿತ್ತಿರುವ ಆಕಾಶವೆ ಪಂಚ ಭೂತಗಳಲ್ಲೊಂದು). ಇಂತಹ ಸಂಕೀರ್ಣವೆನಿಸುವ ಅಗಾಧಗಾತ್ರದ ವ್ಯವಸ್ಥೆಯಲ್ಲಿ, ಮೂಲತಃ ಅವುಗಳು ಹೀಗೇ ಇರಬೇಕೆಂದು ಚಿಂತಿಸಿ, ಆಲೋಚಿಸಿ, ಕಾರ್ಯರೂಪಕ್ಕಿಳಿಸುವವನೊಬ್ಬನಿರಬೇಕಲ್ಲವೆ? ಅವನೆ ಪರಬೊಮ್ಮ.
ಹೀಗೆ ಗ್ರಹ ತಾರೆಗಳೆಲ್ಲವನ್ನು ತಯಾರಿಸಿ ಅಣಿಮಾಡಿಟ್ಟುಕೊಂಡವನ ಆಲೋಚನೆ ಅವನ್ನೆಲ್ಲ ಹೇಗೆಂದರೆ ಹಾಗೆ ಚದುರಿಸಿ ಚೆಲ್ಲಾಪಿಲ್ಲಿಯಾಗಿಸಲೆಂದೇನು ಇರಲಿಕ್ಕಿಲ್ಲ.  ಅವುಗಳನ್ನೆಲ್ಲ ಹೇಗಾದರೊಂದು ಸಾಮಾನ್ಯ ಸೂತ್ರದಲ್ಲಿ ಬಂಧಿಸಿಡಬೇಕೆಂದು ಅನಿಸಿದ್ದರಿಂದಲೆ ಸೌರವ್ಯೂಹದ ಪರಿಕಲ್ಪನೆ ಮೂಡಿರಬೇಕು; ಅಂತಹದ್ದೆ ವ್ಯೂಹಗಳ ತುಂಬಿಸಿಟ್ಟ ನೀಹಾರಿಕೆ, ಆಕಾಶಗಂಗೆಗಳ  ಸಂಪೂರ್ಣ ಸಮೀಕರಣವೆ ಬ್ರಹ್ಮಾಂಡದ ಮೂರ್ತರೂಪಾಗಿ ಮೂಡಿರಬೇಕು ಅವನ ಚಿತ್ತದಲ್ಲಿ. ಅದರನುಸಾರವೆ ಇವೆಲ್ಲ ಗ್ರಹತಾರೆಗಳ ಮೂಲಸರಕನ್ನು ಅಣಿ ಮಾಡಿಟ್ಟುಕೊಂಡು ಅದ್ಭುತ ಬ್ರಹ್ಮಾಂಡದ ಸೃಷ್ಟಿಗೆ ಅಸ್ತಿಭಾರ ಹಾಕಿರಬೇಕು. ಆ ಯೋಜನೆಯ ಹೊತ್ತಲ್ಲೆ ಅವನ ಚತುರ ಬುದ್ಧಿಮತ್ತೆ, ಸಾಧಕಬಾಧಕಗಳೆಲ್ಲವನ್ನು ಆಲೋಚಿಸಿದೆ; ತನ್ನ ಸೃಷ್ಟಿ ಸ್ವೇಚ್ಛೆಗನುವು ಮಾಡಿಕೊಡದ ಬಿಗಿತ ಮತ್ತು ಜಡತೆಯದಾಗಿರಬೇಕೆ? ಅಥವಾ ಸಂಪೂರ್ಣ ಸ್ವೇಚ್ಛೆಯ ಸಂಕೀರ್ಣ ಸ್ತರದ್ದಾಗಿರಬೇಕೆ? – ಎಂದು. ಕೊನೆಗೆ ಇವೆರಡೂ ಕೊನೆಗಳನ್ನು ಬಿಟ್ಟು ನಡುವಿನ ಸುವರ್ಣ ಮಾಧ್ಯಮವನ್ನು ಆಯ್ದುಕೊಂಡಿದೆ – ಎಷ್ಟು ಬೇಕೊ ಅಷ್ಟು ಬಿಗಿ, ಎಷ್ಟು ಬೇಕೊ ಅಷ್ಟೇ ಸಡಿಲ !
ಈ ಬಿಗಿ ಸಡಿಲಗಳನ್ನು ಅರ್ಥೈಸಲು ಒಂದು ಉದಾಹರಣೆಯ ಮೂಲಕ ಯತ್ನಿಸಿದರೆ ಒಳಿತು. ನಮ್ಮ ಭೂಗೋಳವನ್ನೆ ತೆಗೆದುಕೊಳ್ಳೋಣ. ತನ್ನಿಚ್ಛೆ ಬಂದಂತೆ ಇರುವ ಸ್ವೇಚ್ಛೆ ಅದಕ್ಕಿದೆಯೆ ? ಊಹುಂ ! ಅದು ಸೌರವ್ಯೂಹದ ನಿಯಮದಲಿ ಬಂಧಿ. ಸೂರ್ಯನೆಂಬ ತಾರೆ ಗ್ರಹಗಳನ್ನೆಲ್ಲ ಹಿಡಿದು ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದಾನೆ – ಪ್ರತಿಯೊಂದು ಗ್ರಹವನ್ನು ತಂತಮ್ಮ ಕಕ್ಷೆಯಲ್ಲಿರುವಂತೆ ನಿರ್ಬಂಧಿಸುತ್ತ. ಇದು ಸೂತ್ರದಲಿ ಬಿಗಿದಿಡುವ ಪರಿ. ಹಾಗೆಂದು ಉಸಿರು ಕಟ್ಟಿಸುವ ಕರಾಳ ಬದುಕೆನ್ನಲಾದೀತೆ? ಅದೂ ಇಲ್ಲ! – ಯಾಕೆಂದರೆ ತನ್ನ ಹಿಡಿತವನ್ನು ಸಡಿಲಬಿಟ್ಟ ಸೂರ್ಯ, ಭೂಗೋಳ ತನ್ನ ಸುತ್ತ ಸುತ್ತುತ್ತಲೆ ಹಗಲಿರುಳಾಗಿಸಿಕೊಳ್ಳುವ ಸ್ವೇಚ್ಛೆ ಕೊಟ್ಟಿದ್ದಾನೆ. ಜತೆಗೆ ಗ್ರಹಗಳನ್ನೆಲ್ಲ ತನ್ನ ಸುತ್ತ ನಿಯಮಿತ ದೂರದಲ್ಲಿ ಸುತ್ತಲು ಸಡಿಲ ಬಿಟ್ಟು, ಋತುಮಾನಗಳ ಪ್ರಬೇಧವನ್ನು ಸೃಜಿಸಿದ್ದಾನೆ. ಹೀಗೆ ಬ್ರಹ್ಮ ತನ್ನ ಸೃಷ್ಟಿಯಲ್ಲಿ ತುಸು ಬಿಗಿಯನ್ನು , ತುಸು ಸಡಿಲತೆಯನ್ನು ಏಕಕಾಲದಲ್ಲಿ, ಒಟ್ಟಾಗಿಯೆ ಇರಿಸಿದ್ದಾನೆ!

ಕುಣಿಸುತಿರುವನು ತನ್ನ ಕೃತಿಕಂತುಕವ..
ನದರೊ..!ಳಣಗಿರ್ದು ಪರಬೊಮ್ಮ – ಮಂಕುತಿಮ್ಮ ||

ಹೀಗೆ ತನ್ನ ಬ್ರಹ್ಮಾಂಡವೆಂಬ ಕೃತಿಯನ್ನು ಸೃಜಿಸಿದ್ದೇನೊ ಆಯ್ತು. ಇನ್ನು ಅದನ್ನು ಪರಿಪಾಲಿಸಿಕೊಂಡು ನಿಭಾಯಿಸಬೇಡವೆ? ಅದು ಕೂಡ ಬೊಮ್ಮನಿಗೆ ಚೆಂಡಿನಾಟದಂತ ಲೀಲಾಜಾಲ ಕಾರ್ಯ. ತನ್ನ ಸೃಷ್ಟಿಯೆ ಅವನಿಗೊಂದು ಕಂತುಕ (ಚೆಂಡು) ಇದ್ದ ಹಾಗೆ. ಅದನ್ನು ತನಗೆ ಬೇಕಾದಂತೆ ಎಸೆದಾಡಿಸುತ್ತ ಕುಣಿಸುತ್ತಿದ್ದಾನಂತೆ ಬೊಮ್ಮ. ಆದರೆ ಅದು ಅವನ ಸೃಷ್ಟಿಯೆ ಆದ ಕಾರಣ ಅದು ಅಡ್ಡಾದಿಡ್ಡಿ ದಿಕ್ಕು ತಪ್ಪಿ ಹೋಗಬಾರದೆಂಬ ಕಾಳಜಿಯೂ ಅವನಿಗಿದೆ. ಅದಕ್ಕೆಂದೆ ತಾನು ಸೃಜಿಸಿದ ಅದೇ ಚೆಂಡಿನೊಳಗೆ ತಾನೂ ಕೂಡ ಬಂದು ಸೇರಿಕೊಂಡು, ತನ್ನ ಕೃತಿಯನ್ನು ತನಗೆ ಬೇಕಾದಂತೆ ಕುಣಿಸುತ್ತಿದ್ದಾನಂತೆ! ಅವನು ಕುಣಿಸಿದಂತೆ ಕುಣಿಯುವ ಪಾಡು ಈ ಜಗದ ಜನರಾದ ನಮ್ಮ ನಿಮ್ಮೆಲ್ಲರದು !

ಒಂದೆಡೆ ಆಸ್ತಿಕತ್ವದ ಎಳೆಯಲ್ಲಿ ಪರಬೊಮ್ಮ ಎಲ್ಲವನ್ನು  ಸೃಜಿಸಿ, ನಿಭಾಯಿಸುತ್ತಿದ್ದಾನೆಂದು ಸಾರಿದ ಆಧ್ಯಾತ್ಮಿಕ ನಿಲುವು; ಮತ್ತೊಂದೆಡೆ ಅಣುಗಳೆಂಬ ಮೂಲವಸ್ತುವಿನಿಂದಾದ ಸರಕುಗಳೆ ಬ್ರಹ್ಮಾಂಡದಲ್ಲಿ ತುಂಬಿವೆ ಎನ್ನುವ ವೈಜ್ಞಾನಿಕ ದೃಷ್ಟಿಕೋನದ ಬಿತ್ತರ. ಹೀಗೆ ಎರಡು ದೃಷ್ಟಿಕೋನಗಳ ಸಮಷ್ಟಿಯಲ್ಲಿ ಒಂದು ಸತ್ಯ ಸಾರುವ ಕಗ್ಗದ ಸಾಮರ್ಥ್ಯ, ಚಾಣಾಕ್ಷತೆ ಬೆರಗುಗೊಳಿಸುವಂತದ್ದು! ಆಸ್ತಿಕರಿಗು, ನಾಸ್ತಿಕರಿಗು ಒಂದೇ ತಿನಿಸು ಬಡಿಸಿದರು ಅವರವರ ರುಚಿಗೆ ತಕ್ಕಂತೆ ವಿಶ್ಲೇಷಿಸುವ ಸಾಧ್ಯತೆಯಿರುವುದು ಪ್ರಾಯಶಃ ಈ ಕಾರಣದಿಂದಲೆ ಇರಬಹುದೇನೊ?

#ಕಗ್ಗಕೊಂದು_ಹಗ್ಗ
#ಕಗ್ಗ_ಟಿಪ್ಪಣಿ

– ನಾಗೇಶ ಮೈಸೂರು

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post