X

‘ ಯಾವ ಹುಚ್ಚುತನ ನನ್ನ ಇನ್ನೊಬ್ಬರ ತಪ್ಪುಗಳ ಹುಡುಕುವಂತೆ ಮಾಡುತ್ತದೆ, ನನ್ನಲ್ಲೇ ಇರುವ ಅಗಣಿತ ತಪ್ಪುಗಳ ಪಟ್ಟಿ ಮಾಡದೆ ? ‘

 ಜಗತ್ತಿನ ತೊಂಬತ್ತು ಜನ ಬದುಕುವುದು ಹೀಗೆ ., ಅವರಿಗೆ ಅವರ ತಪ್ಪು ಎಂದೂ ಕಾಣುವುದಿಲ್ಲ ತಾವು ಮಾಡಿದ್ದು ಸರಿ ಬೇರೊಬ್ಬರು ಮಾಡಿದ್ದು ತಪ್ಪು ಎನ್ನುವುದ ಉಸಿರಾಡಿದಷ್ಟೇ ಸಹಜವೆನ್ನುವಂತೆ ಆಡುತ್ತಾರೆ . ಅದು ನಮಗೆ ಪರಿಚಯಸ್ಥರ ಬಗ್ಗೆ ಇರಬಹದು ಅಥವಾ ಗೊತ್ತೇ ಇಲ್ಲದ ಮೂರನೇ ವ್ಯಕ್ತಿಯ ಬಗ್ಗೆಯಿರಬಹದು ಒಟ್ಟಿನಲ್ಲಿ ಎಲುಬಿಲ್ಲದ ನಾಲಿಗೆಯನ್ನ ಇಚ್ಛೆ ಬಂದಂತೆ ಹರಿಯ ಬಿಟ್ಟರೆ ಅನಾಹುತವಾಗುವುದು ತಪ್ಪಿದ್ದಲ್ಲ . ಇರಲಿ ಈಗ ಈ ವಿಷಯ ಬರಲು ಮುಖ್ಯ ಕಾರಣ ಬಾರ್ಸಿಲೋನಾದಲ್ಲಿ ನೆಡೆದ ಒಂದು ಘಟನೆಯನ್ನ ನೆನಪಿಸಿಕೊಳ್ಳುವುದು, ಆ ಮೂಲಕ ಅಲ್ಲಿನ ಒಂದು ಗಾದೆಯನ್ನ ನಮ್ಮ ಆಡು ಮಾತಿನೊಂದಿಗೆ ತಳುಕು ಹಾಕುವುದೇ ಆಗಿದೆ .

ನಾವು ನಾಲ್ವರು ಗೆಳೆಯರು ಬಾರ್ಸಿಲೋನಾದಿಂದ ವಾಲ್ ದೇ ನುರಿಯಾ ಎನ್ನುವ ಜಾಗಕ್ಕೆ ಹೊರಟ್ಟಿದ್ದೆವು ಅದರಲ್ಲಿ ನನ್ನ ಬಿಟ್ಟರೆ ಉಳಿದ ಮೂವರು ಬಾರ್ಸಿಲೋನಾ ಭೇಟಿಗೆ ಬಂದವರು. ಆ ನನ್ನ ಗೆಳೆಯರು ಉತ್ತರ ಭಾರತೀಯರು. ವಿದೇಶಕ್ಕೆ ಬಂದ ತಕ್ಷಣ ಸಾಮಾನ್ಯವಾಗಿ ಅಲ್ಲಿನ ವ್ಯವಸ್ಥೆಯನ್ನ ತನ್ನ ದೇಶದ ವ್ಯವಸ್ಥೆಯೊಂದಿಗೆ ಹೋಲಿಸುವುದು, ಭಾರತವನ್ನ ಹೀಯಾಳಿಸುವುದು, ವಿದೇಶದ ಚಮಕ್ ಚಮಕ್ ಬದುಕನ್ನ ಹೊಗಳುವುದು ಮಾಮೂಲು . ಇಂತಹ ಕಿರಿಕಿರಿಯನ್ನ ನಾನು ಬಹಳ ಕೇಳಿದ್ದೇನೆ, ಅನುಭವಿಸಿದ್ದೇನೆ . ನನ್ನ ಗೆಳೆಯರಲೊಬ್ಬ ಇದಕ್ಕೆ ಉಲ್ಟಾ.  ಸ್ಪಾನಿಷ್ ಸಂಸ್ಕಾರವನ್ನ ., ಸ್ಪಾನಿಷ್ ಊಟವನ್ನ ., ಕೊನೆಗೆ ಪ್ರಕೃತಿ ನೀಡಿರುವ ಅಲ್ಲಿನ ಚಳಿಯನ್ನ ಹೀಗೆ ಸಕಲವನ್ನೂ ಹೀಯಾಳಿಸತೊಡಗಿದ . ‘ ಹೇ  ಗೋರಾ ಲೋಗ್ ಕ ಧಿಮಾಕ್ ಮೇ ಕಾನಾ ಪಿನಾ ಔರ್ ಮೊಜ್ ಮಸ್ತಿ ಕ ಬಿನ ಕುಚ್ ನಹಿ ಹೈ ‘ ಹೀಗೆ ಅವನ ಬಾಯಿಂದ ಬಿಳಿಯರ ಬಗ್ಗೆ ಬರಿಯ ಅಗೌರವದ ಮಾತುಗಳೇ ಹೊರಡುತ್ತಿದ್ದವು . ಕೊನೆಗೆ ತಡೆಯಲಾರದೆ ಗೆಳೆಯ ‘ ಎಲ್ಲರ ಮನೆಯ ದೋಸೆಯೂ ತೂತೆ ‘ ಸುಮ್ಮನಿರು ಎಂದೆ . ಅವನ ಮಾತು ಹೀಯಾಳಿಕೆ ಮಾತ್ರ ನಿಲ್ಲಲಿಲ್ಲ . ನಾವೆಷ್ಟು ಸುಲಭವಾಗಿ ಒಂದು ದೇಶ , ಭಾಷೆ ಅಥವಾ ವ್ಯಕ್ತಿಯನ್ನ ಬ್ರಾಂಡ್ ಮಾಡಿ ಬಿಡುತ್ತೇವೆ ಅಲ್ವಾ? ಹಾಗೆ ಇನ್ನೊಬ್ಬರ ಹೀಯಾಳಿಸಲು ನಾನೆಷ್ಟು ಸಾಚಾ ? ಎನ್ನುವ ಪ್ರಶ್ನೆ ಮಾತ್ರ ಹಾಕಿಕೊಳ್ಳುವುದೇ ಇಲ್ಲ ಎನ್ನುವುದು ದುರ್ದೈವ .

ಸ್ಪಾನಿಷ್ ನಲ್ಲಿ ಇದಕ್ಕೆ Qué locura me lleva a contar las ajenas faltas, teniendo tanto que decir de las mías?  ಎನ್ನುತ್ತಾರೆ . ( ಕೆ ಲೊಕುರ ಮೇ ಯೇವ ಆ ಕೊಂತಾರ್ ಲಾಸ್ ಅಹೇನಾಸ್ ಫಾಲ್ಥಸ್  ತೆನೆಯಂದೊ ತಾಂತೋ ಕೆ ದೇಸೀರ್ ದೆ ಲ ಮಿಯಾಸ್ ) ಇದರ ಯಥಾವತ್ತು ಅನುವಾದ ಹೀಗಿದೆ  ‘ ಯಾವ ಹುಚ್ಚುತನ ನನ್ನ ಇನ್ನೊಬ್ಬರ ತಪ್ಪುಗಳ ಹುಡುಕುವಂತೆ ಮಾಡುತ್ತದೆ ? ನನ್ನಲ್ಲೇ ಇರುವ ಅಗಣಿತ ತಪ್ಪುಗಳ ಪಟ್ಟಿ ಮಾಡದೆ ? ”  ಇದರ ಒಳಾರ್ಥ ಕೂಡ ಯಥಾವತ್ತು ಅನುವಾದಕ್ಕೆ ಸಮವಾಗಿದೆ . ಇದಕ್ಕೆ ಸಮೀಪದ ಕನ್ನಡ ಗಾದೆ ‘ ಗಾಜಿನ ಮನೆಯಲ್ಲಿ ನಿಂತವರು ಬೇರೆಯವರಿಗೆ ಕಲ್ಲು ಹೊಡೆಯಬಾರದು ‘ ಎನ್ನುವುದಾಗಿದೆ ಜೊತೆಗೆ ನಮ್ಮ ಮನೆಯ ದೋಸೆಯ ತೂತನ್ನ ನೋಡದೆ ಇನ್ನೊಬರ ಮನೆಯ ದೋಸೆಯ ಹುಳುಕ ಹೋಗಬಾರದು ಎಂದು ಹೇಳುವ ನಾಣ್ಣುಡಿಯು ಇಲ್ಲಿಗೆ ಹೊಂದುತ್ತದೆ .

ಇಂಗ್ಲಿಷ್ ಭಾಷಿಕರು people who live in glass houses should not throw stones ಎನ್ನುತ್ತಾರೆ . ಭಾಷೆ ಯಾವುದಾದರೇನು ಭಾವವೊಂದೇ ಅಲ್ಲವೆ ?

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:

Qué locura : ಕೆ ಲೊಕುರ ಎನ್ನುವುದು ಉಚ್ಚಾರಣೆ . ಯಾವ ಹುಚ್ಚುತನ ಎನ್ನುವುದು ಅರ್ಥ .

me lleva : ಮೇ ಯೇವ ಎನ್ನುವುದು ಉಚ್ಚಾರಣೆ . ನನ್ನ ಕರೆದೊಯ್ಯುತ್ತದೆ ಎನ್ನುವುದು ಅರ್ಥ .

contar las ajenas faltas, : ಕೊಂತಾರ್ ಲಾಸ್ ಅಹೇನಾಸ್ ಫಾಲ್ಥಸ್ ಎನ್ನುವುದು ಉಚ್ಚಾರಣೆ . ತಪ್ಪುಗಳ ಹೇಳುವುದು , ಅಥವಾ ಹುಡುಕುವುದು ಎನ್ನುವ ಅರ್ಥ ನೀಡುತ್ತದೆ

teniendo tanto que decir de las mías? : ತೆನೆಯಂದೊ ತಾಂತೋ ಕೆ ದೇಸೀರ್ ದೆ ಲ ಮಿಯಾಸ್ ಎನ್ನುವುದು ಉಚ್ಚಾರಣೆ . ನನ್ನಲ್ಲೇ ಹೇಳುವುದು ಅಷ್ಟೊಂದು ಇರುವಾಗ ಎನ್ನುವ ಅರ್ಥ ನೀಡುತ್ತದೆ .

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post