ಪ್ರಾಯಕ್ಕೆ ಬಂದವರನ್ನು ಜನ ಮಾತನಾಡಿಸುವ ಪರಿಯನ್ನು ಆಸ್ವಾದಿಸುವುದೇ ಒಂದು ಚಂದ.
ಹತ್ತಿರಕ್ಕೆ ಬಂದು ಮೈದಡವಿ ಅಪಾದ ಮಸ್ತಕರಾಗಿ ನೋಡಿ ಖುಷಿಯಿಂದ ಕೇಕೆ ಹಾಕುತ್ತಾ, ಜನ ಮಾತಿಗೆ ಪೀಠಿಕೆ ಹಾಕುವುದು ಹೀಗೆ “ಈ ವರ್ಷ ಏನಾದ್ರೂ ಸ್ಪೆಷಲ್ ಉಂಟಾ?” ಈ ಮಾತಿಗೆ ಎದುರಿಗಿದ್ದವ ದಂಗುಬಡಿದೋ ಕಕ್ಕಾಬಿಕ್ಕಿಯಾಗಿಯೋ ಏನೂ ಅರ್ಥವಾಗದಂತೆ ನೋಡಿದರೆ “ಅದೇ ಮಹರಾಯಾ.. ಎಲ್ಲಾದ್ರೂ ಸಂಬಂಧ ನೋಡ್ಲಿಕ್ಕೆ ಶುರು ಮಾಡಿದ್ರಾ” ಎಂದು ವೀಳ್ಯದೆಲೆಗೆ ಸುಣ್ಣ ಹಚ್ಚಿದಂತೆ ಮಾತಿಗೆ ಏಣಿ ಇಡುತ್ತಾರೆ. ಈಗಿನ ಕಾಲದಲ್ಲಿ ಬಹುತೇಕ ಪ್ರಾಯಕ್ಕೆ ಬಂದ ಜನಗಳು ಅವರವರಿಗೆ ಬೇಕಾದ್ದನ್ನು ಅವರವರೇ ನೋಡಿಕೊಳ್ಳುತ್ತಾರೆ ಎಂಬುದು ಪಾಪ ಅವರಿಗಾದರೂ ಹೇಗೆ ಗೊತ್ತಾಗಬೇಕು? ಇನ್ನು ಕೆಲವರಿಗೆ ವಯಸ್ಸಿಗೆ ಬಂದವರ ಘನಕಾರ್ಯಗಳ ಬಗೆಗೆ ವಿವರವಾಗಿ ಅಲ್ಲದಿದ್ದರೂ, ಸ್ಥೂಲ ಪರಿಚಯವಾದರೂ ಇರುತ್ತದೆ, ಆದರೂ ಹದಿಹರೆಯದವರನ್ನು ಛೇಡಿಸುವುದು, ಕಿಚಾಯಿಸುವುದು, ರಂಗುರಂಗಿನ ಕನಸಿನ ಲೋಕಕ್ಕೆ ಮಾತಿನಲ್ಲೇ ಉಡ್ಡಯನ ಮಾಡುವುದೆಂದರೆ ಹಿರೀಕರಿಗೆಲ್ಲ ಎಲ್ಲಿಲ್ಲದ ಹಬ್ಬ. ಹಾಗೆ ನೋಡ ಹೊರಟರೆ ಈ ತರಹದ ಮಾತುಗಳಿಗೆ ಸಮಯ , ಸಂಧರ್ಭಗಳ ಹಂಗುಗಳೇ ಇಲ್ಲ. ಬಸ್‍ಸ್ಟ್ಯಾಂಡು, ಕಛೇರಿ, ದೇವಸ್ಥಾನ, ಜಾತ್ರೆ, ಫ್ಯಾಮಿಲಿ ಪ್ರೋಗ್ರಾಮು ಹೀಗೆ ಮಾತಿನ ಬುಗ್ಗೆಗಳು ಅನವರತ ಚಿಮ್ಮುತ್ತಲೇ ಇರುತ್ತವೆ. ಹದಿಹರೆಯದವರಿಗೆ ಒಳಗೊಳಗೆ ಮದುವೆಗೆ ರೆಡಿಯಾಗಿಬಿಟ್ಟೆನೆಂಬ ಹಿಗ್ಗು ಬೇರೆ.
“ನೀವು ಹೀಗೆ ಕೆಲಸ ಗಿಲಸ ಅಂತ ಊರೂರು ಸುತ್ತಿಕೊಂಡು ಕಡೆಗೆ ಎಂತಕ್ಕಾದ್ರೂ ಪರ್ಮೆನೆಂಟಾಗಿ ನೇತು ಹಾಕಿಕೊಳ್ಳಿ, ಆದ್ರೆ ಮದುವೆಗೆ ಒಂದು ಕರೀರಿ ಮರಾಯ್ರೆ” ಹೀಗೊಂದು ಮಾತು ಸಮಾರಂಭದಲ್ಲಿ ಎಷ್ಟು ಸಾರಿ ನುಸುಳಿ ಅನುರಣಿಸಿದೆಯೋ ದೇವರೇ ಬಲ್ಲ. “ಅದ್ಯಾವ ಅಂಡಮಾನಿನಲ್ಲಿ ಇದ್ರೂ ನಿಮ್ಮ ಮದುವೆ ಊಟಕ್ಕೆ ಮಿಸ್ಸೇ ಇಲ್ಲ” ಎಂದು ಜನ ಪೌರುಷದ ಮಾತನ್ನಾಡಿ ಹಸ್ತಲಾಘವದೊಂದಿಗೆ ಬೀಳ್ಕೊಟ್ಟು ನಡೆಯುತ್ತಾರೆ. ಹಾಗೆಂದ ಮಾತ್ರಕ್ಕೆ ಸಿಟ್ಟಾಗ್ಬೇಡಿ ಮರಾಯ್ರೆ , ಈ ಸತ್ಯನಾರಾಯಣ ಪೂಜೆ, ಗೃಹಪ್ರವೇಶ, ಉಪನಯನ, ಪ್ರಸ್ಥ, ಸೀಮಂತ ನಾಮಕರಣ, ಹುಟ್ಟುಹಬ್ಬ ಇದರಲ್ಲೆಲ್ಲ ಬಂದವರಿಗೆ ಊಟ ಕೊಡದೆ ಆಚೆ ಕಳಿಸುತ್ತಾರೆ ಎಂದು ನನ್ನ ಮಾತಿನ ಅರ್ಥವಲ್ಲ. ಈ ಫಂಕ್ಷನ್ನುಗಳಿಗೆ ಗತ್ತು ಗೈರತ್ತುಗಳು ಇಲ್ಲವೇ ಇಲ್ಲ ಎಂದಲ್ಲ. ಆದರೂ ಮದುವೆ ಊಟಕ್ಕೆ, ವಿವಾಹದ ಗೌಜಿಗೆ ಜನಮಾನಸದ ಮಧ್ಯೆ ಇರುವ ಮಾನ್ಯತೆ ಬೇರೆ ಯಾವ ಕಾರ್ಯಕ್ರಮಕ್ಕೂ ಇಲ್ಲ. ಅದರ ಖದರ್ರುಗಳು ಸಪ್ತಪದಿ ತುಳಿದು ಬಾಳಿನ ನೊಗ ಏರಿಸಿಕೊಂಡವನಿಗೇ ಗೊತ್ತು.
ಮದುವೆಗೆ ಪೂರ್ವಾರ್ಧದಲ್ಲಿ ಮತ್ತು ಉತ್ತರಾರ್ಧದಲ್ಲಿ ಹಲವು ಉಪಕ್ರಮಗಳಿರುತ್ತವೆ. ಅವುಗಳೆಲ್ಲ ಮದುವೆಯ ಯಶಸ್ಸಿನ ಹಿನ್ನಲೆಯಲ್ಲಿ ಬಹುಮಹತ್ತ್ವದ್ದೂ ಆಗಿದೆ. ಈ ಆಭರಣ ಖರೀದಿ, ವಸ್ತ್ರಖರೀದಿಯ ಉಸಾಬರಿಗಳನ್ನೆಲ್ಲ ನಿಭಾಯಿಸುವಾಗ ಮೈಯೆಲ್ಲ ಕಣ್ಣಾಗಿರಬೇಕು. ಜೊತೆಗೆ ಎಲ್ಲವನ್ನೂ ಅರಗಿಸಿಕೊಂಡು, ಸಾಗಹಾಕಿಕೊಂಡು ಜೈ ಎನ್ನುವ ಸಮಷ್ಟಿಪ್ರಜ್ಞೆಯನ್ನೂ ಮೈಗೂಡಿಸಿಕೊಳ್ಳಬೇಕು. ಸ್ವಲ್ಪ ಎಡವಿಬಿಟ್ಟರೂ ಜೊತೆಗಿದ್ದವರು ಸಹಸ್ರನಾಮಾರ್ಚನೆ, ಪಂಚಕಜ್ಜಾಯ, ಮಹಾಮಂಗಳಾರತಿಯನ್ನು ಅದ್ದೂರಿಯಾಗೇ ನೆರವೇರಿಸುತ್ತಾರೆ. ಕರಿಮಣಿಸರ, ತಾಳಿ, ಇನ್ನಿತರ ಒಡವೆಗಳನ್ನು ಪೇಟೆಗೆ ಹೋಗಿ ಟೊಮೆಟೋ ಈರುಳ್ಳಿ ಕೊಂಡು ಬಂದಂತೆ ತರಲು ಸಾಧ್ಯವೇ? ಮಜಾ ಎಂದರೆ ಟೊಮೆಟೋ, ಈರುಳ್ಳಿ, ಸೌತೆಕಾಯಿ ಹೀಗೆ ವಗೈರೆ ವಗೈರೆ ತರಕಾರಿ ತರುವಾಗಲೇ ಮನೆಯಲ್ಲಿ ಹಾಕಿಕೊಂಡು ರುಬ್ಬಲು ತಕ್ಕ ಸಮಯಕ್ಕೆ ಆಪ್ತೇಷ್ಟರು ಕಾದು ಕುಳಿತಿರುತ್ತಾರೆ! ಆಗೆಲ್ಲ ಮಾತುಗಳು ಮಸಲುವ ಪರಿ ಕೇಳಿಯೇ ಆನಂದಿಸಬೇಕು. “ಯಾವುದು ಚೆನ್ನಾಗಿದೆ, ಯಾವುದು ಕೊಳೆತಿದೆ, ಯಾವುದು ಎಷ್ಟು ತರಬೇಕು ಎನ್ನುವ ಜ್ಞಾನ ಬೇಡವಾ?? ಎಷ್ಟಯ್ಯಾ… ವಯಸ್ಸು ನಿಂದು ಕತ್ತೆ ತರಾ ಒಂದೇ ಸಮನೆ ಅಡ್ಡಡ್ಡ ಬೆಳ್ದಿದ್ದಿಯಾ… ಬುದ್ಧಿ ಬೆಳ್ದಿಲ್ಲ.. ಎಂದು ಎಲ್ಲರೆದುರಿಗೆ ಒಂದು ಅಭಿನಂದನಾ ಸಭೆಯ ಪ್ರಾಸ್ತಾವಿಕ ಮಾತನ್ನಾಡುತ್ತಾರೆ. ಅಂತಹುದರಲ್ಲಿ ಇನ್ನು ಆಭರಣದಲ್ಲೆಲ್ಲ ಎಡವಟ್ಟಾದರೆ ಜೀವನ ಪರ್ಯಂತ ನಿತ್ಯಪೂಜೆ ಖಾಯಂ ಎಂದು ಮುಂದಡಿಯಿಡಲಾಗದ ಪೀಕಲಾಟ ಬೇರೆ.
ಆಭರಣ ತೆಗೆಯಲು ಅಪ್ಪನ ಅಕ್ಕ, ಭಾವ, ಅಮ್ಮನ ಫ್ರೆಂಡು, ಅಮ್ಮನ ಅಣ್ಣನ ಕಡೆಯವರು ಹೀಗೆ ಎಲ್ಲರನ್ನೂ ಅಹ್ವಾನಿಸದೆ ಬಿಡಲಾಗುತ್ತದೆಯೇ? ಅವರನ್ನು ಆಹ್ವಾನಿಸದೇ ಹೋದರೆ ದೂರ್ವಾಸ, ಜಮದಗ್ನಿ, ವಿಶ್ವಾಮಿತ್ರರೆಲ್ಲ ಮದುವೆಯ ದಿನವೇ ಅಂಗಳದಲ್ಲಿ ಬಂದು ಯಜ್ಞ ಶುರುಮಾಡುತ್ತಾರೆ. “ಮದುವೆಗೆ ಮುಯ್ಯಿ ಸಿಗುತ್ತದೆ ಅಂತ ಈಗ ಕರೆದದ್ದಾ ಎಂದೇ ಕೆಲವರೆಲ್ಲ ಕೆಣಕುತ್ತಾರೆ” ಅದಕ್ಕೆ ಅಣ್ಣನ ಪರವಾಗಿ ನಾನೇ ಅಮ್ಮನ ಪಟಾಲಮ್ಮು, ಅಪ್ಪನ ಗ್ಯಾಂಗು, ಚಿಕ್ಕಪ್ಪ, ಚಿಕ್ಕಮ್ಮರ ಸಂಬಂಧದವರಿಗೆ ಫೋನು ಹಚ್ಚಲಾರಂಭಿಸಿದೆ. ವಿಚಿತ್ರವೆಂದರೆ ನಾನು ಆಭರಣ, ಜವಳಿ ತೆಗೆಯುವ ಸಲುವಾಗಿ ಬನ್ನಿ ಎಂದು ಫೋನು ಮಾಡಿದರೆ ಈ ಆಸಾಮಿಗಳು ಮದುವೆಯ ಖರ್ಚು, ನಿಶ್ಚಿತಾರ್ಥದ ಉಂಗುರ, ಹುಡುಗಿಯ ವಿದ್ಯಾಭ್ಯಾಸ, ಅಣ್ಣ ಕುಡಿತ ಬಿಟ್ಟಿದುದು, ಮದುವೆಯ ಮುಂಚೆಯೇ ಲವ್ ಇದ್ದ ಗುಮಾನಿಗಳನ್ನೆಲ್ಲ ಗುಡ್ಡೆ ಹಾಕಿ ಮಾತಿಗೆ ನಿಲ್ಲುತ್ತಿದ್ದರು. ನನ್ನ ಕರ್ಮಕ್ಕೆ ಎಲ್ಲರೂ ಮಾತಿನ ಮಹಲು ಕಟ್ಟಿದ ತರುವಾಯ “ಈ ಜವಳಿ ತೆಗೆಯುವುದು, ಗೋಲ್ಡ್ ಪರ್ಚೇಸ್‍ಗೆಲ್ಲ ನಮಗೆ ಎಂತಕ್ಕೆ ಹೇಳಬೇಕು(ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಒಳ್ಳೆಯದಾಯಿತೆಂಬುದನ್ನು ಒಳಗೇ ನುಂಗಿಕೊಂಡು) ನೀವೇ ಸುಧಾರಿಸಿ ಬಿಡಿ ಎನ್ನುವವರೇ ಎಲ್ಲ ಆಗಿದ್ದರು.
ಈ ಮಹಾಶಯರು ಅಣ್ಣನ ಮದುವೆಯ ನೆಪದಲ್ಲಿ “ನಿನ್ನದೇನಾದರೂ ಲವ್, ಪವ್ ಇದ್ಯಾ ಕಡೆಗೆ” ಎಂದು ಜಾಗ ಸಿಕ್ಕಿದಲ್ಲಿ (ನಂದೆಲ್ಲಿಡ್ಲಿ ನಂದಗೋಪಾಲನ ಹಾಗೆ) ಕೇಳಿ ಧನ್ಯರೂ ಆಗುತ್ತಿದ್ದರು. ಮದುವೆಗೆ ಮಿಸ್ಸೇ ಇಲ್ಲ ಮೂರು ದಿನ ಮುಂಚೆಯೇ ಬಂದು ಠಿಕಾಣಿ ಹೊಡೆದು ಬಿಡುತ್ತೇವೆ ಎಂದು ಹೇಳಿದವರ ಸಂಖ್ಯೆಯೇ ಸರಿಸುಮಾರು ಅರವತ್ತು ದಾಟಿತ್ತು. ಎಲ್ಲರ ಅಹವಾಲುಗಳನ್ನು ಸಮಚಿತ್ತದಿಂದ ಆಲಿಸಿದ ನಮ್ಮಣ್ಣ ಮದುವೆ ಆದಿತ್ಯವಾರವೇ ನಡೆಯಬೇಕು, ಎಲ್ಲರಿಗೂ ಅನುಕೂಲವೂ ಆಗುತ್ತದೆಂದು ಪಟ್ಟು ಹಿಡಿದು ಹಿರಿಯರಲ್ಲಿ ಮಸೂದೆ ಅಂಗೀಕಾರ ಮಾಡಿಸಿಕೊಂಡೂ ಇದ್ದ. ಮನೆಯಲ್ಲಿ ಎಲ್ಲರಿಗೂ ಮದುವೆಯೆಂದರೆ ಕೇಳಬೇಕೇ ಖುಷಿಯೇ ಖುಷಿ. ಅಮ್ಮನಿಗೆ ಮನೆಗೆ ಸೊಸೆ ಬಂದರೆ ತನ್ನ ಅರ್ಧ ಹೊರೆ ಇಳಿಯಿತೆಂಬ ಖುಷಿ, ಅಪ್ಪನಿಗೆ ವರುಷವೊಂದು ಉರುಳಿದರೆ ಕೈಯಲ್ಲಿ ಮೊಮ್ಮಗು ಕುಣ ಯುತ್ತದೆ ಎಂಬ ಖುಷಿ. ಓರಗೆಯವರ ಖುಷಿ ಕೇಳಬೇಕೇ?? ಅವರೆಲ್ಲ ಪಂಚಾಯ್ತಿ ಮಾಡಿಕೊಂಡು ಅಮ್ಮನ ಬಗೆಗೆ “ಬಾರೀ ಹಾರಾಡ್ತಾ ಇದ್ಲು ಈ ಮಾಡರ್ನ್ ಸೊಸೆ ಬಂದು ಸರ್ಯಾಗೀ ಬೆಂಡೆತ್ತ್ಬೇಕು ಗೊತ್ತಾಗ್ತದೆ” ಅಂತ ಹುಳ್ಳಹುಳ್ಳಗೆ ಖುಷಿ ಪಡುತ್ತಿದ್ದರು. ಅಂದ ಹಾಗೆ ಮದುಮಗನಾದ ನಮ್ಮಣ್ಣನನ್ನು ಗುಂಪಿಗೆ ಸೇರದ ಪದ ಮಾಡಿಬಿಟ್ಟರೆ ಹೇಗೆ?? ಆತನೂ ಖುಷಿಯಲ್ಲಿ, ಸಿನಿಕತೆಯಲ್ಲಿ ಸಿನಿಮಾದ ರಂಗುರಂಗು ಕತೆಗಳನ್ನು ನೆನೆಸಿಕೊಂಡು “ನವಿಲೂರಿನಲ್ಲಿ ನಾನೇ ಬರಿ ಚೆಲುವ” ಎಂದು ನಲಿಯುತ್ತಿರುವುದು ಕೆಲದಿನಗಳಿಂದ ಎಲ್ಲರ ಗಮನಕ್ಕೆ ಬರುತ್ತಲೇ ಇತ್ತು.
ಮದುವೆಗೆ ಕೆಲವೇ ದಿನಗಳು ಬಾಕಿಯಿದ್ದವು. ಮನೆಯಲ್ಲಿ ಎಷ್ಟು ಜನ ಸೇರಬಹುದೆಂಬುದಾಗಿ ಮಾತುಕತೆ ನಡೆಯುತ್ತಿತ್ತು. “ನನ್ನ ಆಫೀಸಿನಿಂದ ಕಡೇ ಪಕ್ಷ ಎಪ್ಪತ್ತು ಜನ ಆದ್ರೂ ಬರ್ತಾರೆ!!” ಅಣ್ಣ ಧೈರ್ಯದಿಂದ ಮಾತುಗಳನ್ನು ಮುಂದುವರೆಸುತ್ತಿದ್ದ. “ನಾನೆಂದರೆ ಸುಮ್ಮನೆಯಾ ನಮ್ಮ ಆಫೀಸಿನ ಎಷ್ಟು ಜನರ ಮದುವೆಗೆ ನನ್ನದೇ ಇನಿಷಿಯೇಟಿವ್, ನಿನ್ನೆ ಎಲ್ರಿಗೂ ಒಂದ್ ರೌಂಡ್ ಫೋನ್ ಹಾಕಿದೆ ನೋಡಿ, ಬರದೆ ಎಲ್ಲಿಗೆ ಹೋಗ್ತಾರೆ, ಸಂಡೆ ಬೇರೆ ಕೇಳಿಕೊಂಡು ಮುಹೂರ್ತ ಇಟ್ಟಿದ್ದೇನೆ, ಉಜಿರೆಯಲ್ಲಿ ಕಾರ್ಕಳಕ್ಕೆ ಹೋಗುವ ಐರಾವತ ಬಸ್ಸು ಖಾಲಿಯಾಗಿ ಬಿಡ್ಬೇಕು, ಏನಿದಚ್ಚರಿ ಅಂತ ಕಂಡೆಕ್ಟರ್ರೂ ಡ್ರೈವರ್ರೂ ಮಿಕ ಮಿಕ ನೋಡ್ಬೇಕು ಆ ಪಾಟಿ ಜನ ಹರಿದು ಬರ್ತಾರೆ ಎಂದ. ಬೆಂಗಳೂರಿನ ಕತೆ ನಮಗೇನಾದರೂ ಗೊತ್ತಿದೆಯಾ ಇರಲೂಬಹುದೆಂಬಂತೆ ಅಜ್ಜ ವೀಳ್ಯದೆಲೆಯ ತಟ್ಟೆಗೆ ಕೈಹಾಕಿ ಅಡಕೆಯ ನಾಲ್ಕು ಹೋಳು ಬಾಯಿಗೆ ತೂರಿ ‘ಪರವಾಗಿಲ್ಲ ಮೊಮ್ಮಗ ಜನ ಸಂಪಾದನೆ ಮಾಡಿದ್ದಾನೆ’ ಎಂಬಂತೆ ಬೀಗಿದರು.
ಅಣ್ಣನನ್ನು ಮರುದಿವಸ ಬೆಳಿಗ್ಗೆ ಒಳ್ಳೆಯ ಮೂಡಿನಲ್ಲಿದ್ದಾಗ ಕೇಳಿದೆ “ಅಲ್ಲ ಮಹಾರಾಯ ಹೇಗೆ, ಈ ಬೆಂಗ್ಳೂರಿಂದ ಅಷ್ಟು ಜನ ನಿಜವಾಗ್ಲೂ ಬರ್ತಾರಾ? ಅವನ ಭಾವಗಳು ನನ್ನನ್ನು ಬರೇ ಪೆದ್ದ ಎಂಬಂತೆ ಬಿಂಬಿಸಿದವು. “ನಿಂಗೆ ಹೀಗೆ ಹೇಳಿದ್ರೆ ಅರ್ಥ ಆಗುದಿಲ್ಲ ಮಾರಾಯ, ನೋಡು ನಿನ್ನೆ ನಮ್ಮ ವಾಟ್ಸಾಪು ಗ್ರೂಪಿನಲ್ಲಿ ನನ್ನ ಮದುವೆದ್ದೇ ಬಿಸಿಬಿಸಿ ಚರ್ಚೆ, ಏನು ಗಿಫ್ಟು ಕೊಡೋದು? ಎಲ್ಲಿಂದ ಬಸ್ ಹತ್ತೋದು?, ಉಜಿರೆಗೆ ಎಷ್ಟೊತ್ತಿಗೆ ರೀಚ್ ಆಗೋದು ಉಳಿದ ಸಮಯದಲ್ಲಿ ಚಾರ್ಮಾಡಿ ಘಾಟ್‍ಗೆ ಒಂದು ಟ್ರಿಪ್ ಇಡೋದಾ? ಸಾರಿ ಉಟ್ರೆ ಹೇಗೆ, ಹುಡುಗರದ್ದು ಏನು ಡ್ರೆಸ್ಸು ಎಂಬುದರ ಬಗೆಗೇ ಪುಂಖಾನುಪುಂಖ ಚಾಟಿಂಗ್ ಮಾಡಿದ್ದು ನೋಡು ಎಂದು ಮೊಬೈಲನ್ನು ನನ್ನತ್ತ ಒಂಥರಾ ಅಸಹಿಷ್ಣುತೆಯಿಂದಲೇ ಚಾಚಿದ. ಅದರಲ್ಲಿ ಮೆಸೇಜುಗಳು ರಾಶಿರಾಶಿ ಘಮಲುತ್ತಿದ್ದವು. ನನ್ನ ಪೆದ್ದುತನಕ್ಕೆ ಮರುಗಿದೆ. ಇವನ ಫ್ರೆಂಡ್ಸುಗಳೆಲ್ಲ ಈ ಹಳ್ಳಿಗೆ ಬಂದ್ರೆ ನಮ್ಮೂರಿನ ಜನ ನೋಡುವ ಪರಿ ಅವರೆಡೆಗೆ ತೋರುವ ಗೌರವ, ಆದರಾತಿಥ್ಯ, ಇದರಿಂದ ಹೆಚ್ಚುವ ಮನೆಯ ಗೌರವ ನೆನೆದು ಹಿರಿಹಿರಿ ಹಿಗ್ಗಿದೆ.
ಇನ್ನೊಂದು ವಿಚಾರವೆಂದರೆ ನಮ್ಮ ಮನೆಯಲ್ಲಿ ವರುಷಕ್ಕೆ ಸರಾಸರಿ ನಾಲ್ಕಾದರೂ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಪ್ರತೀ ಬಾರಿ ಅಣ್ಣನ ಸ್ನೇಹಿತರು ಬರುವ ಬಗೆಗೆ ಚರ್ಚೆಯಾಗುತ್ತದೆ. ಅಣ್ಣನ ಸ್ನೇಹಿತರ ಬರುವಿಕೆಗಾಗಿ ಮನೆಯಲ್ಲಿ ಮೂಲೆಮೂಲೆಯಲ್ಲಿ ಬೀಡುಬಿಟ್ಟಿದ್ದ ಜೇಡಗಳೆಲ್ಲ ದಿಡೀರನೆ ಎತ್ತಂಗಡಿಯಾಗುತ್ತವೆ. ಮನೆಯೆಲ್ಲ ಕ್ಲೀನ್ ಕ್ಲೀನ್ ಆಗುತ್ತದೆ. ಮಂಚದಡಿಗೆಲ್ಲ ಪೊರಕೆ ಬೇಟಿಕೊಡುತ್ತದೆ. ಕೊನೆಗೆ ಅಣ್ಣನ ಸ್ನೇಹಿತರ ಜೊತೆಗೆ ಅಣ್ಣನೂ ರಜೆ ಸಿಗಲಿಲ್ಲ ಎಂದಾಗ ನಮಗೆಲ್ಲ ಕಡೇ ಪಕ್ಷ ಮನೆಯಾದರೂ ಕ್ಲೀನಾಯಿತಲ್ಲ ಎಂಬ ಖುಷಿ. ಕಡೆಗೆ ಅಮ್ಮ ಕೋಪಗೊಂಡು ಕೇಳುವಾಗ ಅಣ್ಣನ ರೂಂಮೇಟುಗಳು “ಇದೆಲ್ಲ ಇರ್ಲಿ ಆಂಟೀ ನಮ್ಮ ಹುಡ್ಗಂದು ಮದ್ವೆ ಊಟ ರೆಡಿ ಆಗ್ಲಿ ಮೂರು ದಿನ ಅಲ್ಲೇ ಟೆಂಟು” ಅಂತ ಸಮಜಾಯಿಷಿ ಕೊಟ್ಟು ಫೋನಿಡುತ್ತಿದ್ದರು.
ಮದುವೆಗೆರಡು ದಿನ ಮುಂಚೆಯೇ ನೆರೆಹೊರೆಯವರೆಲ್ಲ ಬಂದು ತಾಳೇಗರಿಯ ನವಿರಾದ ಚಪ್ಪರ, ಅಂಗಳಕ್ಕೆ ಸೆಗಣ , ಪರಿಪರಿಯಾದ ಬಣ್ಣದ ಕಾಗದ, ಬಗೆಬಗೆಯ ಅಲಂಕಾರದೊಂದಿಗೆ ಜೋಡಿಸಿಕೊಂಡು ತಯಾರಿಯನ್ನೇನೋ ಅದ್ದೂರಿಯಾಗೇ ಮಾಡಿದರು. ಸಂಬಂಧಿಕರೆಲ್ಲ ಶನಿವಾರಕ್ಕೇ ಫಿಕ್ಸ್ ಎಂಬಂತೆ ಫೋನಾಯಿಸಿ ಹೆವೀ ಡ್ಯೂಟಿ, ಹೆಕ್ಟಿಕ್ ಶೆಡ್ಯೂಲ್, ಮಕ್ಕಳ ಪರೀಕ್ಷೆ, ಮೌಲ್ಯಮಾಪನ ಹೀಗೆ ಒದಗಿದ ತುರ್ತುಗಳನ್ನು ಒಂದೇ ಉಸಿರಿಗೆ ಹೇಳಿ ಸಂಡೇ ಇಟ್ಟಿದ್ದು ಒಳ್ಳೆಯದೇ ಆಯಿತು ನೋಡಿ , ಬೇರೆ ದಿನವಾದರೆ ಬರ್ಲಿಕ್ಕೇ ಆಗುತ್ತಿರಲಿಲ್ಲ ಎಂದು ಅಲವತ್ತುಕೊಂಡು ಕಷ್ಷ ಮನವರಿಕೆ ಮಾಡಲು ಹರಸಾಹಸ ಪಟ್ಟರು. ಅಜ್ಜ “ಆಪತ್ತಿಗಾಗುವವನೇ ನೆಂಟ ಮಗ” ಎಂದು ಅಳೆದು ತೂಗಿ ಫಿರಂಗಿ ಚಲಾಯಿಸುತ್ತಿದ್ದುದು ಗುಟ್ಟಾಗಿ ಏನೂ ಉಳಿಯಲಿಲ್ಲ.
ಕಡೆಗೂ ಗಟ್ಟಿಮೇಳದ ಆ ಶುಭಸಂಡೆಯ ಕಾತರದ ಸೂರ್ಯ ಉದಯಿಸಿಯೇ ಬಿಟ್ಟ. ಮರುದಿವಸ ಅನ್ಯಕಾರ್ಯನಿಮಿತ್ತ ತರಾತುರಿಯಲ್ಲಿ ತೆರಳುವ ಮಹಾಜನಗಳು ರಾತ್ರಿಯೇ ಬಂದು ‘ನಾಳೆ ಟ್ರೈ ಮಾಡ್ತೇನೆ’ ‘ತೊಂಬತ್ತೊಂಬತ್ತು ಪರ್ಸೆಂಟ್ ಬರ್ತೇನೆ’ಎಂದು ಅಣ್ಣನ ಕಿವಿಯಲ್ಲೇ ಉಲಿದು ಶರವೇಗದಲ್ಲಿ ಇನ್ನೆಲ್ಲಿಗೋ ಹೊರಟುನಿಂತಿದ್ದರು. ಬೆಳ್ಳಂಬೆಳಗ್ಗೆ ನೋಡನೋಡುತ್ತಿದ್ದಂತೆಯೇ ವಾಟ್ಸಾಪಿನ ಪ್ರೊಫೈಲ್ ಫೋಟೋ, ಡೀಪಿ, ಸಬ್ಜೆಕ್ಟುಗಳು ಬದಲಾಗಿ ಮೊಬೈಲಿನಲ್ಲಿ ಮದುವೆಯ ಕಳೆ ಗೋಚರಿಸಿತು. ‘ನಿಂದು ಡಿಜಿಟಲ್ ಮದ್ವೆ ನೋಡೋ’ ಅಂತ ಅವನಿಗೆ ಮೊಬೈಲ್ ತೋರಿಸಿದ ಕೂಡಲೇ ಹಿರಿಹಿರಿ ಹಿಗ್ಗಿದ.
ಅರ್ಚಕರು ಮದುವಣಗಿತ್ತಿ, ಮದುಮಗನನ್ನು ‘ಶಾಸ್ತ್ರ’ ಅಂತ ಚೌಟ್ರಿಯ ಸುತ್ತೆಲ್ಲ ಬೆಳಗ್ಗಿನಿಂದ ಸುತ್ತಿಸಿದರು. ಮದುಮಗನ ಮೊಬೈಲು ನನ್ನ ಕೈಯಲಿತ್ತು. ಗಟ್ಟಿಮೇಳದ ಹೊತ್ತಿಗೂ ಯಾರೊಬ್ಬರ ಪತ್ತೆಯೂ ಇರಲಿಲ್ಲ. ಕಡೆಗೂ ಅಣ್ಣ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ. ಊರವರೆಲ್ಲ ಅಕ್ಷತೆ ಹಾಕಿದರು.
ಈಗ ಪ್ರವಾಹ ಶುರುವಾಯ್ತು ನೋಡಿ “ನಿನ್ನೆ ಇನ್ವೆಸ್ಟಿಗೇಷನ್‍ಗೆ ಶುರು ಹಚ್ಚಿಬಿಟ್ರು”, “ಕರ್ಮದವ ಅಸೈನ್‍ಮೆಂಟ್ ಕಂಪ್ಲೀಟ್ ಮಾಡೇ ಹೋಗಿ ಅಂದ್ಬಿಟ್ಟ. ಜಪ್ಪಯ್ಯ ಅಂದ್ರು ಬಿಡ್ಲಿಲ್ಲ”, “ಅಜ್ಜ ತೀರ್ಕೊಂಬಿಟ್ರು”, ‘ಭಾರೀ ಗೋಲ್‍ಮಾಲ್ ಆಗಿದ್ಯಂತೆ ಸೀರಿಯಸ್ ಕಣೋ, ‘ಹಾಸನ್‍ವರೆಗೆ ಬಂದಿದ್ದೆ ಬಸ್ಸು ಸಿಗ್ಲಿಲ್ಲ’, ಹುಷಾರಿರ್ಲಿಲ್ಲ ಆದ್ರೂ ಹೊರಟಿದ್ದೆ ಮನೆಯಲ್ಲಿ ಬೇಡ ಅಂದ್ಬಿಟ್ರು ಹೀಗೆ ಅಣ್ಣನ ಮೊಬೈಲಿನಲ್ಲಿ ಆಪ್ತೇಷ್ಟ ಮಹಾಶಯರು ಒಂದೇ ಸಮನೆ ಗೋಳು ತೋಡಿಕೊಳ್ಳುತ್ತಿದ್ದರು.
ವಿವಾಹ ವೈಪರೀತ್ಯಗಳ ಮಧ್ಯೆ ‘ಮದುವೆಗೆ ಕರಿ ಮರಾಯ ಅಂಡಮಾನಿನಲ್ಲಿದ್ರೂ ಬರ್ತೇನೆ’ ಅಂತ ಯಾರೋ ರೈಲು ಹತ್ತಿಸುತ್ತಿದ್ದರು.
- ಶಿವಪ್ರಸಾದ್ ಸುರ್ಯ, ಉಜಿರೆ
Facebook ಕಾಮೆಂಟ್ಸ್