ಮಗುವೊಂದು ಹುಟ್ಟಿದಾಗ ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಕೆಲವು ದಿನಗಳ ನಂತರ ಅದಕ್ಕೆ ಅದರ ದೇಹದ ಅಳತೆಗೆ ಸರಿ ಹೊಂದುವ ಬಟ್ಟೆಯನ್ನು ಕೊಂಡುತಂದು ಹಾಕಲಾಗುತ್ತದೆ. ಮಗುವಿಗೆ ಸುಮಾರು ಮೂರು ವರ್ಷವಾಗುವವರೆಗೂ ಡೈಪರ್ ಹಾಕಬಹುದು.ಆದರೆ ನಂತರವೂ ಡೈಪರ್ ಹಾಕುವ ಅನಿವಾರ್ಯತೆ ಇದೆಯೆಂದರೆ ಮಗುವಿನ ಸಹಜ ಬೆಳವಣಿಗೆಯಲ್ಲಿ ಏನೋ ತೊಡಕಾಗಿದೆ ಎಂದೇ ಅರ್ಥ. ಅದೇ ರೀತಿ ಆ ಮಗುವಿಗೆ ಹತ್ತನೇ ವರ್ಷಕ್ಕೆ ಹಾಕುವ ಬಟ್ಟೆ ಹದಿನೈದನೇ ವರ್ಷವೂ ಹಾಕಲಾಗದು. ಬೇರೆ ಅಳತೆಯ ಬಟ್ಟೆಯೇ ಬೇಕು.
ಹಾಗೆಯೇ ಜಗತ್ತೂ ಕೂಡಾ. ಆದಿಮಾನವನಿಂದ ಆಧುನಿಕಮಾನವನವರೆಗೂ ಸಾಕಷ್ಟು ಬದಲಾಗಿದೆ. ಬದಲಾಗುತ್ತಲೇ ಇದೆ. ಬದಲಾಗಲೂ ಬೇಕು. ಹಾಗಿರುವಾಗ ಸುಮಾರು ಅರವತ್ತೇಳು ವರ್ಷದ ಹಿಂದೆ ರಚಿಸಲಾದ ನಮ್ಮ ದೇಶದ ಸಂವಿಧಾನ ಮಾತ್ರ ಅರವತ್ತೇಳು ವರ್ಷ ಹಿಂದೆ ಇದ್ದಂತೆಯೇ ಇರಬೇಕು ಎನ್ನಲಾದೀತೆ? ಕಾಲಕ್ಕೆ ತಕ್ಕಂತೆ ಅದೂ ಕೂಡಾ ಬದಲಾಗಬಾರದೇ?
ಇದನ್ನು ಹೇಳಲು ಕಾರಣವೂ ಇದೆ. ಇತ್ತೀಚಿಗೆ ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿರುವುದು ವಿವಾದದ ಕಿಡಿ ಹೊತ್ತಿಸಿದೆ. ಸ್ವಾಮೀಜಿಯೊಬ್ಬರು ಎಲ್ಲ ಸಮುದಾಯದವರಿಗೂ ಅನುಕೂಲ ಕಲ್ಪಿಸುವ ರೀತಿಯಲ್ಲಿ ಸಂವಿಧಾನದಲ್ಲಿ ಬದಲಾವಣೆಯಾಗಬೇಕು ಎಂದಿದ್ದು ಕೂಡಾ ವಿವಾದಕ್ಕೆ ಕಾರಣವಾಗಿದೆ. ಅದೇ ರೀತಿ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರು ಸಂವಿಧಾನದಲ್ಲಿ ಬದಲಾವಣೆ ಆಗಬೇಕೆಂದು ಟೀವಿ ಚರ್ಚೆಯೊಂದರಲ್ಲಿ ಹೇಳಿದ ಮಾತು ಕೆಲವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದಷ್ಟೇ ಅಲ್ಲದೆ ಅವರುಗಳ ವಿರುದ್ಧ ರಾಜ್ಯದಾದ್ಯಂತ ಹೋರಾಟಗಳು ನಡೆದವು. ಅವರ ಪ್ರತಿಕೃತಿಗಳನ್ನು ಬೀದಿ ಬೀದಿಗಳಲ್ಲಿ ಸುಟ್ಟು ಹಾಕಲಾಯಿತು.ಅವರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆಯಲಾಯಿತು. ಅವರು ಕೆಲವು ಊರುಗಳಿಗೆ ಪ್ರವೇಶಿಸುವುದನ್ನು ತಡೆಯುವಂತೆ ಫತ್ವಾ ಹೊರಡಿಸಲಾಯಿತು. ಅವರ ಹೇಳಿಕೆಗಳನ್ನು ವಿರೋಧಿಸಿ ಬಂದ್ ಕರೆಕೊಡಲಾಯಿತು. ವಿಚಿತ್ರವೆಂದರೆ ಕಾನೂನು ಮಾತ್ರ ಅವರುಗಳ ವಿರುದ್ಧ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಏಕೆಂದರೆ ಅವರ ಹೇಳಿಕೆಗಳು ಕಾನೂನಿಗೆ ವಿರುದ್ಧವಾಗಿ ಇರಲೇ ಇಲ್ಲ!
ಈಗ ಕೇಂದ್ರ ಸಚಿವರು ಹೇಳಿದ ಮಾತು ಸಂವಿಧಾನಾತ್ಮಕವಾಗಿ ಸರಿಯೇ ಅಥವಾ ತಪ್ಪೇ ಎನ್ನುವುದನ್ನು ವಿಶ್ಲೇಷಿಸೋಣ.
ಸಂವಿಧಾನ ಬದಲಾವಣೆಯ ಬಗ್ಗೆ ಮಾತಾಡುವುದನ್ನು ಸಂವಿಧಾನದಲ್ಲಿ ನಿಷೇಧಿಸಲಾಗಿದೆಯೇ?
ಖಂಡಿತಾ ಇಲ್ಲ. ಸಂವಿಧಾನದಲ್ಲಿ ಬದಲಾವಣೆ ತರಲು ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿ ಮಾಡುವ ಕಾರ್ಯ ವಿಧಾನವನ್ನು ಕೂಡಾ ಅದರಲ್ಲೇ ಹೇಳಲಾಗಿದೆ. ಅದರಂತೆ ತಿದ್ದುಪಡಿಗಳು ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಶ್ರೇಷ್ಠ-ಬಹುಮತದಿಂದ ಅಂಗೀಕೃತವಾಗಬೇಕು. ಹಾಗೂ ಕೆಲವು ತಿದ್ದುಪಡಿಗಳನ್ನು ರಾಜ್ಯಗಳೂ ಒಪ್ಪಿದನಂತರವೇ ಅಳವಡಿಸಲು ಅನುಮತಿಸಲಾಗುವುದು.ಈ ಕಾರ್ಯವಿಧಾನವು ಸಂವಿಧಾನದ ಭಾಗ XX, ಕಲಂ 368ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಹೀಗೆ ಸಂವಿಧಾನದಲ್ಲಿ ಇಂದಿನ ಕಾಲದ ಆವಶ್ಯಕತೆಗಳಿಗೆ ತಕ್ಕಂತೆ ಕೆಲ ಬದಲಾವಣೆ ಮಾಡಲು ನಮ್ಮ ಸಂವಿಧಾನವು ಸಂಸತ್ತಿಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ. ಸಂವಿಧಾನವೇ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಿರುವಾಗ ಸಂವಿಧಾನದಲ್ಲಿ ತಿದ್ದುಪಡಿಯಾಗಲಿ ಎಂದು ಜನರು ಬಯಸುವುದು ಮತ್ತು ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷದ ಒಬ್ಬ ಜನಪ್ರತಿನಿಧಿಯಾಗಿ ಮತ್ತು ಸಚಿವ ಸಂಪುಟದ ಸದಸ್ಯನಾಗಿ ಜನರ ಮುಂದೆ ಸಂವಿಧಾನವನ್ನು ಅವಶ್ಯಕತೆಗೆ ತಕ್ಕಂತೆ ನಾವು ಬದಲಿಸುತ್ತೇವೆ ಎಂದು ಹೇಳುವುದು ಕೂಡಾ ಸಂವಿಧಾನಾತ್ಮಕವೇ ಆಗಿದೆ. ಹಾಗಾಗಿ ಅನಂತ ಕುಮಾರ್ ಹೆಗಡೆಯವರು ಹಾಗೆ ಹೇಳಿರುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಸಂವಿಧಾನ ರಕ್ಷಣೆಯ ಹೆಸರಿನಲ್ಲಿ ಸಂವಿಧಾನಾತ್ಮಕವಾಗಿ ಅವರು ಹೇಳಿದ ಮಾತಿಗೆ ವಿರೋಧಿಸುವುದು ಮತ್ತು ದಂಗೆ ಎಬ್ಬಿಸುವುದು ಕಾನೂನು ವಿರೋಧೀ ಕ್ರಮವಾಗುತ್ತದೆ. ಅವರ ನಾಲಿಗೆ ಕತ್ತರಿಸಿ, ರಕ್ತಪಾತ ನಡೆಸಿ ಎಂದು ಕರೆಕೊಡುವುದು ಕೂಡಾ ಕಾನೂನು ವಿರೋಧೀ ಕ್ರಮವಾಗುತ್ತದೆ.
ಮೋದಿ ಸರ್ಕಾರ ಸಂವಿಧಾನದಲ್ಲಿ ಬದಲಾವಣೆಗಳನ್ನು ಬಯಸುತ್ತಿರುವುದು ಸರಿಯೇ?
ಖಂಡಿತಾ ಸರಿ. ದೇಶದಲ್ಲಿ ಬದಲಾವಣೆ ತರುವ ಕನಸು ಹೊತ್ತು ಬಂದಿರುವ ಮೋದಿ ಸರ್ಕಾರ ಆ ಬದಲಾವಣೆಗೆ ಬೇಕಾದಂತೆ ಸಂವಿಧಾನದಲ್ಲಿ ಒಂದಷ್ಟು ಬದಲಾವಣೆ ಬಯಸಿದ್ದರೆ ಅದು ಸಂವಿಧಾನವಿರೋಧೀ ಕ್ರಮವಲ್ಲ. ಅಷ್ಟಕ್ಕೂ ಸಂವಿಧಾನದಲ್ಲಿ ಬದಲಾವಣೆ ತರುತ್ತಿರುವುದು ಇದೇ ಮೊದಲೇನೂ ಅಲ್ಲ. ಸಂವಿಧಾನದ ಅಳವಡಿಕೆಯ ಒಂದು ವರ್ಷದೊಳಗೇ ಮೊಟ್ಟಮೊದಲ ತಿದ್ದುಪಡಿ ಆಯಿತು. ಭಾರತದ ಸಂವಿಧಾನ ಪ್ರಪಂಚದ ಅತೀ ಹೆಚ್ಚು ತಿದ್ದಲ್ಪಟ್ಟ ಸಂವಿಧಾನಗಳಲ್ಲಿ ಒಂದಾಗಿದೆ. ಒಂದು ವರ್ಷಕ್ಕೆ ಸರಾಸರಿ ಎರಡು ಬಾರಿಯಂತೆ ಇದುವರೆಗೂ ನೂರಾರು ಬಾರಿ ನಮ್ಮ ಸಂವಿಧಾನ ತಿದ್ದುಪಡಿಯಾಗಿದೆ. ಆದರೆ ಹಾಗೆ ತಿದ್ದುಪಡಿ ಮಾಡಿದಾಗ ಯಾರೂ ಕೂಡಾ ಇಷ್ಟು ಬೊಬ್ಬೆ ಹೊಡೆದ ನಿದರ್ಶನಗಳಿಲ್ಲ. ಇದೀಗ ಮೋದಿ ಸರ್ಕಾರ ಬಂದ ನಂತರ ಮಾತ್ರ ಸಂವಿಧಾನಪರ ಹೋರಾಟಗಾರರು ನಿದ್ದೆಯಿಂದೆದ್ದಂತೆ ನಟಿಸುತ್ತಿದ್ದಾರೆ ಅಷ್ಟೆ.
ಒಂದು ಪ್ರಮುಖ ತಿದ್ದುಪಡಿಯ ಬಗ್ಗೆ ಹೇಳುವುದಾದರೆ 1976ರಲ್ಲಿ ಇಂದಿರಾ ಫಿರೋಜ್ ಗಾಂಧಿಯವರು(ಆಗ ಅವರು ಸರ್ವಾಧಿಕಾರಿಯಾಗಿದ್ದರಿಂದಾಗಿ ಅವರ ಸರ್ಕಾರ ಎನ್ನುವ ಪದ ಬಳಸಿಲ್ಲ) ನಮ್ಮ ಸಂವಿಧಾನಕ್ಕೆ ಬದಲಾವಣೆ ತಂದು ಸಂವಿಧಾನದ ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯತೀತ, ಸಮಗ್ರತೆ ಎನ್ನುವ ಪದವಿಗಳನ್ನು ಸೇರಿಸಿದರು.ಅಲ್ಲದೆ ರಾಷ್ಟ್ರಪತಿಗಳು ಕ್ಯಾಬಿನೆಟ್ ಸಲಹೆಯ ಮೇರೆಗಷ್ಟೇ ನಡೆಯಬೇಕೆಂದು ಕಡ್ಡಾಯಗೊಳಿಸಿ ಅವರ ಅಧಿಕಾರವನ್ನು ಕೊಂಚಮಟ್ಟಿಗೆ ಮೊಟಕುಗೊಳಿಸಲಾಯಿತು.ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಸಭೆ ಸೇರಲು ಅಗತ್ಯವಾದ ಸದಸ್ಯರ ಕನಿಷ್ಠ ಹಾಜರಾತಿಯನ್ನು ತೆಗೆದು ಹಾಕಲಾಯಿತು. ಹೀಗೆ ಒಂದೇ ತಿದ್ದುಪಡಿಯಲ್ಲಿ ಹಲವಾರು ಬದಲಾವಣೆಯನ್ನು ಮಾಡಿದ್ದರಿಂದಾಗಿ ಆ ತಿದ್ದುಪಡಿಯನ್ನು ಪುಟ್ಟ ಸಂವಿಧಾನ ಎಂದೇ ಕರೆಯಲಾಯಿತು. ಆದರೆ ಹಾಗೆ ಒಂದೇ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಹಲವಾರು ಬದಲಾವಣೆಯನ್ನು ಮಾಡಿದ ಇಂದಿರಾ ಗಾಂಧಿಯವರನ್ನು ಯಾವ ಸಂವಿಧಾನ ತಿದ್ದುಪಡಿ ವಿರೋಧೀ ಹೋರಾಟಗಾರರೂ ವಿರೋಧಿಸಲಿಲ್ಲವಷ್ಟೇ ಅಲ್ಲದೆ ಇಂದಿಗೂ ಕೂಡಾ ಅವರ ಮನೆತನಕ್ಕೆ ನಿಷ್ಠರಾಗಿಯೇ ಇದ್ದಾರೆ!
ಒಂದು ವೇಳೆ ಇಂದಿರಾ ಫಿರೋಜ್ ಗಾಂಧಿಯವರು ಅಂದು ಮಾಡಿದ ತಿದ್ದುಪಡಿಗೆ ವಿರೋಧಿಸಿದ್ದರೆ ಏನಾಗುತ್ತಿತ್ತು? “ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು” ಮಾಡಬಹುದಾದ ಅದೇ ಸಂವಿಧಾನದತ್ತ ಅವಕಾಶವನ್ನು ಉಪಯೋಗಿಸಿಕೊಂಡು ಹಾಗೆ ವಿರೋಧಿಸಿದವರನ್ನು ನಿರ್ದಯವಾಗಿ ಎಳೆದು ಜೈಲಿನ ಕೋಣೆಗಳಲ್ಲಿ ಬಂಧಿಯಾಗಿಸುತ್ತಿದ್ದರು. ಬಹುಶಃ ಅದೇ ಭಯಕ್ಕೆ ಸಂವಿಧಾನರಕ್ಷಕರು ಅಂದು ಸುಮ್ಮನಿದ್ದಿರಬಹುದು.
“ಅವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆಯೇ ಹೊರತೂ ಸಂವಿಧಾನದಲ್ಲಿ ತಿದ್ದುಪಡಿ ತರುತ್ತೇವೆ ಎಂದು ಹೇಳಿದ್ದಲ್ಲ,ಬದಲಾವಣೆಗೂ ತಿದ್ದುಪಡಿಗೂ ವ್ಯತ್ಯಾಸವಿದೆ” ಎನ್ನುವುದು ಅನಂತ್ ಕುಮಾರ್ ಹೆಗಡೆಯವರ ವಿರುದ್ಧ ಹೋರಾಡುತ್ತಿರುವ ಸಂವಿಧಾನರಕ್ಷಕರ ಪ್ರಮುಖ ವಾದ.
ಹಾಗಾದರೆ ಅದೇ ಸಂದರ್ಭದಲ್ಲಿ “ಸಂವಿಧಾನ ಹಿಂದೆಯೂ ಬದಲಾಗಿದೆ, ಮುಂದೆಯೂ ಬದಲಾಯಿಸುತ್ತೇವೆ” ಎಂದು ಸಚಿವರಾಡಿದ ಮಾತಿನ ಅರ್ಥವೇನು? ಹಿಂದೆ ಕೂಡಾ ಇಡೀ ಸಂವಿಧಾನವನ್ನೇ ಬದಲಾಯಿಸಿದ್ದರ ಬಗ್ಗೆ ಸಂವಿಧಾನರಕ್ಷಕರು ದಾಖಲೆ ಕೊಡುತ್ತಾರೆಯೇ? ಒಂದೊಮ್ಮೆ ಹೋರಾಟಗಾರರ ಬಳಿ ಯಾರಾದರೂ ‘ನಿಮ್ಮ ಪತ್ನಿ ಈ ಎರಡು ವರ್ಷದಲ್ಲಿ ತುಂಬಾ ಬದಲಾಗಿದ್ದಾರೆ ಅಲ್ಲವೇ’ ಎಂದರೆ ‘ಆಕೆ ಬದಲಾಗಿಲ್ಲ, ತಿದ್ದುಪಡಿಯಾಗಿದ್ದಾಳೆ’ ಎನ್ನುತ್ತಾರೋ ಹೇಗೆ? ಆಡು ಭಾಷೆಯ ಮಾತನ್ನು ತಮಗೆ ಬೇಕಾದಂತೆ ತಿರುಚಿ ತಮ್ಮ ಸ್ವಾರ್ಥ ಸಾಧನೆಯ ಹೋರಾಟಗಳಿಗೆ ಬಳಸಿಕೊಳ್ಳುವುದು ಎಷ್ಟು ಸರಿ?
ಇನ್ನು ಅದೇ ಸಮಾರಂಭದಲ್ಲಿ ಸಚಿವರು ಆಡಿದ ಇನ್ನೊಂದು ಮಾತಿಗೂ ಉಗ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜಾತ್ಯತೀತರು ಎಂದು ಕರೆದುಕೊಳ್ಳುವವರಿಗೆ ಅಪ್ಪ ಅಮ್ಮನ ರಕ್ತದ ಪರಿಚಯವೇ ಇರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಹೆಚ್ಚು ಮಾತಾಡದೆ ಇರುವುದೇ ಒಳ್ಳೆಯದು. ಏಕೆಂದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಸ್ತುನಿಷ್ಠ ಮತ್ತು ತರ್ಕಬದ್ಧ ಚರ್ಚೆಗಳು ಅತ್ಯಂತ ಅಗತ್ಯವಾದ ಗುಣಲಕ್ಷಣವಾಗಿದೆ. ಪ್ರಮುಖವಾಗಿ ಸಾಮಾಜಿಕ ನ್ಯಾಯ ಮುಂತಾದ ವಿಚಾರಗಳನ್ನು ಬೇರೆ ಬೇರೆ ಆಯಾಮದ ಮೂಲಕ ವಿಮರ್ಶೆ ಮಾಡುವುದು ಮತ್ತು ಆ ಕುರಿತು ಚರ್ಚಿಸುವುದು ಮತ್ತು ಯಾವುದೇ ಬಗೆಯಲ್ಲಿ ಸೃಜನಾತ್ಮಕ ರೀತಿಯಲ್ಲಿ ಭಿನ್ನ ಅಭಿಪ್ರಾಯಗಳನ್ನು ಮಂಡಿಸುವುದು ಒಂದು ಆರೋಗ್ಯಕರ ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಅಂಶ. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನದ 19 (1) (a) ವಿಧಿಯು ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಖಚಿತಪಡಿಸಿದೆ.ಮತ್ತು ಅದೇ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಬಳಸಿಯೇ ಕೆಲವು ಪ್ರಗತಿಪರ ಸ್ವಾಮೀಜಿಗಳು, ಕೆಲವು ಬುದ್ದಿಜೀವಿಗಳು,ಕೆಲವು ಪತ್ರಕರ್ತರು “ಹಿಂದೂಗಳಿಗೆ ಅಪ್ಪ ಅಮ್ಮ ಇಲ್ಲ,ರಾಮ ಕುಡುಕ, ಕೃಷ್ಣ ಲಂಪಟ” ಎನ್ನುವ ಮಾತುಗಳನ್ನು ಬಹಿರಂಗವಾಗಿ ಆಡಿಯೂ, ಭಗವದ್ ಗೀತೆಯನ್ನು ಸಾರ್ವಜನಿಕವಾಗಿ ಸುಟ್ಟೂ ಸ್ವಚ್ಛಂದವಾಗಿ ನಮ್ಮ ನಡುವೆಯೇ ಬದುಕುತ್ತಿದ್ದಾರೆ. ಇದುವರೆಗೂ ಅವರಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ, ಯಾರನ್ನೂ ಕೆಲಸದಿಂದ ತೆಗೆದಿಲ್ಲ. ಅಷ್ಟೇ ಅಲ್ಲದೆ ಆ ನಂತರ ಅವರುಗಳಿಗೆ ಸರ್ಕಾರದ ವತಿಯಿಂದಲೇ ಹಲವಾರು ಗೌರವಗಳೂ, ಪ್ರಶಸ್ತಿ ಪುರಸ್ಕಾರಗಳೂ,ಜವಾಬ್ಧಾರಿಗಳೂ ದೊರೆತಿವೆ.
ಹಾಗಿರುವಾಗ ಅನಂತಕುಮಾರ್ ಹೆಗಡೆ ಅವರು ಜಾತ್ಯತೀತರು ಎಂದು ಕರೆದುಕೊಳ್ಳುವವರಿಗೆ ಅಪ್ಪ ಅಮ್ಮನ ರಕ್ತದ ಪರಿಚಯವೇ ಇರುವುದಿಲ್ಲ ಎಂದು ಹೇಳಿದ್ದರೆ ಅದು ಸಂವಿಧಾನ ಅವರಿಗೆ ನೀಡಿದ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡೇ ಹೇಳಿರುತ್ತಾರೆ. ಒಂದು ವೇಳೆ ಅದು ತಪ್ಪಾಗಿದ್ದರೆ ಈ ಹಿಂದೆ ಯಾರೆಲ್ಲಾ ಅದೇ ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡು ಏನೇನೆಲ್ಲಾ ಮಾತಾಡಿ ಏನೇನು ಶಿಕ್ಷೆ ಅನುಭವಿಸಿದ್ದಾರೋ ಅದೇ ಶಿಕ್ಷೆಯನ್ನು ಅವರೂ ಅನುಭವಿಸುತ್ತಾರೆ.
ಅಷ್ಟಾಗಿಯೂ ಈ ದೇಶದಲ್ಲಿ ಜಾತಿ ಎನ್ನುವುದು ವಾಸ್ತವ. ಯಾವ ಜಾತ್ಯತೀತನೂ ಆ ವಾಸ್ತವವನ್ನು ನಿರಾಕರಿಸಲಾಗದು. ಸ್ವತಃ ಜಾತ್ಯತೀತನೆಂದು ಹೇಳಿಕೊಳ್ಳುವವನು ಕೂಡಾ ಜನನ ಪ್ರಮಾಣಪತ್ರದಿಂದ ಹಿಡಿದು ಮರಣ ಪ್ರಮಾಣಪತ್ರದವರೆಗೆ ತನ್ನ ಜಾತಿಯನ್ನು ಪ್ರಾಮಾಣಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಶಾಲೆಗೆ, ಉದ್ಯೋಗಕ್ಕೆ ಸೇರುವಲ್ಲಿಂದ ಹಿಡಿದು ತನ್ನ ಸ್ವಂತ ಮದುವೆ ನೋಂದಣಿಯವರೆಗೆ ಎಲ್ಲ ಕಡೆಯೂ ಜಾತಿ ಪ್ರಮಾಣಪತ್ರವನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಸರ್ಕಾರದಿಂದ ಪ್ರಮಾಣೀಕರಿಸಿಕೊಳ್ಳಲೇಬೇಕು. ಒಂದೊಂದು ಧರ್ಮದವರ ವಿವಾಹಗಳಿಗೆ ಒಂದೊಂದು ಪ್ರತ್ಯೇಕ ಕಾಯ್ದೆಯಿರುವುದೂ ಸುಳ್ಳಲ್ಲ. ಸಂವಿಧಾನ ಜಾರಿಯಾದ ನಂತರವೇ ಈ ದೇಶದಲ್ಲಿ ನೂರಾರು ಹೊಸ ಹೊಸಾ ಉಪಜಾತಿಗಳು ಸೃಷ್ಟಿಯಾಗಿರುವುದೂ,ಆಗುತ್ತಿರುವುದೂ ಕೂಡಾ ಸುಳ್ಳಲ್ಲ. ಬ್ರಹ್ಮನ ಶಿರದಿಂದ ಹುಟ್ಟಿದವರು ಬ್ರಹ್ಮನ ಪಾದದಿಂದ ಹುಟ್ಟಿದವರನ್ನು ತುಳಿದರು ಎಂದು ಹೇಳುತ್ತಾ ಜಾತಿ ಜಾತಿಗಳ ವಿರುದ್ಧ ಎತ್ತಿ ಕಟ್ಟುವವವರು ಯಾರೂ ಸಂವಿಧಾನದ ಅಡಿಯಲ್ಲೇ ಹುಟ್ಟಿಕೊಳ್ಳುತ್ತಿರುವ ಜಾತಿಗಳಿಗೆ ಆ ಬ್ರಹ್ಮನನ್ನು ಲಿಂಕ್ ಮಾಡಲು ಸಾಧ್ಯವಿಲ್ಲ.
ಹಾಗಾಗಿ ಜಾತ್ಯತೀತರು ಎಂದು ಕರೆದುಕೊಳ್ಳುವವರಿಗೆ ಅಪ್ಪ ಅಮ್ಮನ ರಕ್ತದ ಪರಿಚಯವೇ ಇರುವುದಿಲ್ಲ (ತಮ್ಮ ಕೌಟುಂಬಿಕ ಇತಿಹಾಸದ ಪರಿಚಯವೇ ಇರುವುದಿಲ್ಲ ಎನ್ನುವ ಅರ್ಥದಲ್ಲಿ)ಎಂದು ಅವರು ಹೇಳಿದ್ದರೆ ಅದರಲ್ಲಿ ಯಾವ ತಪ್ಪೂ ಇಲ್ಲ. ಅವರ ಮನಸ್ಸಿಗೆ ಅನ್ನಿಸಿದ್ದನ್ನು ಅಭಿವ್ಯಕ್ತಪಡಿಸುವ ಸಂಪೂರ್ಣ ಸ್ವಾತಂತ್ರ್ಯ ಅವರಿಗೂ ಇದೆ.
ಆದರೆ ಅವರು ಹಾಗೆ ಹೇಳಿದ್ದಕ್ಕೆ ಪ್ರತಿಯಾಗಿ ಜಾತ್ಯತೀತರೆಂದು ಹೇಳಿಕೊಳ್ಳುವ ಕೆಲವರು ತಮ್ಮ ಹುಟ್ಟಿನ ಮೂಲ, ತಮ್ಮ ರಕ್ತದ ಗುಂಪು ಮುಂತಾದ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಸಮಜಾಯಿಷಿ ಕೊಡುತ್ತಿರುವುದನ್ನು ಕಂಡಾಗ ಮಾತ್ರ ನಿಜವಾಗಿಯೂ ಅವರು ಕುಂಬಳಕಾಯಿ ಹೊತ್ತ ತಮ್ಮ ಬೆನ್ನನ್ನು ತಾವೇ ಮುಟ್ಟಿ ನೋಡಿಕೊಳ್ಳುತ್ತಿದ್ದಾರೇನೋ ಎಂದು ನಮಗನ್ನಿಸಿದರೆ ಅದು ನಮ್ಮ ತಪ್ಪಲ್ಲ.
ಇದೇ ವಿಚಾರವಾಗಿ ಕನ್ನಡದ ಸುದ್ದಿ ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ಅತೀ ಹೆಚ್ಚಿನ ಕನ್ನಡಿಗರು ಅನಂತ್ ಕುಮಾರ್ ಹೆಗಡೆ ಅವರು ಬಾಯಿಗೆ ಬಂದಂತೇನೂ ಮಾತಾಡುತ್ತಿಲ್ಲ, ಅವರ ಬಾಯಿಗೆ ಪ್ರಧಾನಿಯವರು ಬೀಗ ಹಾಕಬೇಕಾದ ಆವಶ್ಯಕತೆಯೇನೂ ಇಲ್ಲ, ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿಲ್ಲ ಮತ್ತು ಅವರ ಹೇಳಿಕೆಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಮಾತೇ ಅಂತಿಮ ಎನ್ನುವುದಾದರೆ ಪ್ರಜೆಗಳಿಂದಲೇ ಆಯ್ಕೆಯಾದ ಅನಂತ್ ಕುಮಾರ್ ಹೆಗಡೆಯವರ ಅಭಿಪ್ರಾಯವನ್ನೂ ಮತ್ತು ಅವರ ಮಾತಿನ ಬಗ್ಗೆ ಪ್ರಜೆಗಳೇ ವ್ಯಕ್ತಪಡಿಸಿದ ಈ ಮೇಲಿನ ಅಭಿಪ್ರಾಯವನ್ನೂ ನಾವು ಗೌರವಿಸಲೇಬೇಕಾಗುತ್ತದೆ. ಆದ್ದರಿಂದ ಆ ಎರಡೂ ವಿಚಾರಗಳ ಬಗ್ಗೆ ಅವರು ಹಾಗೆ ಹೇಳಿದ್ದು ತಪ್ಪು ಎಂದು ನಾವು ಆಕ್ಷೇಪಿಸುವುದು, ಬೆಂಕಿ ಹಚ್ಚುವುದು, ಅವರ ಭಾವಚಿತ್ರಕ್ಕೆ ಅವಮಾನ ಮಾಡುವುದು, ನಾಲಿಗೆ ಕತ್ತರಿಸಿ ಎನ್ನುವಂತಹಾ ಹೇಳಿಕೆ ಕೊಡುವುದು ಸಂವಿಧಾನ ಅವರಿಗೆ ನೀಡಿದ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆಯಷ್ಟೇ ಅಲ್ಲದೆ ಶಿಕ್ಷಾರ್ಹ ಅಪರಾಧವೂ ಹೌದು. ಆದ್ದರಿಂದ ಈ ಹಿಂದೆ ಪ್ರೊ. ಭಗವಾನ್, ಪ್ರೊ. ಮಹೇಶ್ ಚಂದ್ರಗುರು, ಗೌರಿ ಲಂಕೇಶ್ ಮತ್ತು ಹಲವಾರು ಪ್ರಗತಿಪರ ಸ್ವಾಮೀಜಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಂತವರೂ ಸೇರಿದಂತೆ ಸಂವಿಧಾನದ ಬಗ್ಗೆ ಗೌರವ ಹೊಂದಿರುವ ಪ್ರತಿಯೊಬ್ಬ ಭಾರತೀಯರೂ ಇದೀಗ ಅನಂತ್ ಕುಮಾರ್ ಹೆಗಡೆಯವರ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲುವ ಮೂಲಕ ನಮ್ಮ ಹೆಮ್ಮೆಯ ಸಂವಿಧಾನ ನಮಗೆ ನೀಡಿದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಬೇಕಿದೆ.
Facebook ಕಾಮೆಂಟ್ಸ್