“ನಿಮ್ಮ ಬದುಕು ಒಂದು ಪುಸ್ತಕವಾಗಿದ್ದಿದ್ದರೆ, ನೀವು ಅದರ ಲೇಖಕರಾಗಿದ್ದರೆ, ಆ ಕಥೆಯನ್ನು ಹೇಗೆ ಬರೆಯಬಯಸುತ್ತೀರಿ?” ಖಂಡಿತವಾಗಿಯೂ ಎಲ್ಲರೂ ಅದನ್ನು ಬಹಳ ಸುಂದರವಾದ ಕಥೆಯನ್ನಾಗಿ ಮಾಡಿಕೊಳ್ಳಬಯಸುತ್ತಾರೆ. ಏಮಿ ಕೂಡ ಚಿಕ್ಕಂದಿನಲ್ಲಿ ಕೇಳುತ್ತಿದ್ದ ಸುಂದರ ಕಥೆಗಳಂತೆಯೇ ತನ್ನ ಬದುಕನ್ನು ರೂಪಿಸಿಕೊಳ್ಳ ಬಯಸಿದ್ದಳು. ಮಂಜು ಬೀಳುವ ಪ್ರದೇಶದಲ್ಲಿ ತನ್ನದೊಂದು ಮನೆ ಮಾಡಿಕೊಂಡು ಇರಬೇಕೆಂದುಕೊಂಡಿದ್ದಳು. ಒಬ್ಬ ಉತ್ತಮ ಸ್ನೋಬೋರ್ಡರ್ ಆಗಬೇಕೆಂದುಕೊಂಡಿದ್ದಳು, ಜೊತೆಗೆ ಇಡೀ ಜಗತ್ತನ್ನು ಸುತ್ತಬೇಕೆಂದುಕೊಂಡಿದ್ದಳು. ಅದರಂತೆಯೇ ೧೯ನೇ ವರ್ಷದಲ್ಲಿ ಹೈಸ್ಕೂಲ್ ಗ್ರಾಜುಯೇಟ್ ಆದ ನಂತರ, ಒಬ್ಬ ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಪಡೆದು ಮಂಜು ಬೀಳುವ ಪ್ರದೇಶದಲ್ಲಿ ಮನೆಯನ್ನೂ ಪಡೆದಿದ್ದಳು. ಆದರೆ ಆಕೆಯ ಬದುಕಿನ ಕಥೆ ಚಿಕ್ಕಂದಿನಲ್ಲಿ ಕೇಳುತ್ತಿದ್ದ ಕಥೆಗಳಂತೆ ಸುಲಭವಾಗಿರಲಿಲ್ಲ.
ಜೀವನದ ತಿರುವು
ಫ್ಲೂ ಆಗಿರಬಹುದೆಂದು ಊಹಿಸಿ ಆಸ್ಪತ್ರೆ ಸೇರಿದ್ದ ಏಮಿ ೨೪ ಗಂಟೆಯೊಳಗೆ ಲೈಫ್ ಸಪೋರ್ಟ್’ನೊಂದಿಗೆ ಇರುವಂತಾಯಿತು. ಆಕೆಯ ಬದುಕುವ ಸಾಧ್ಯತೆ ಶೇಕಡಾ ೨ಕ್ಕೂ ಕಡಿಮೆಯಿದ್ದು, ಕೆಲ ತಿಂಗಳುಗಳ ಕಾಲ ಕೋಮಾದಲ್ಲಿದ್ದಳು. ಎರಡೂವರೆ ತಿಂಗಳುಗಳಲ್ಲಿ ಬ್ಯಾಕ್ಟೀರಿಯಲ್ ಮೆನಂಜಿಟಿಸ್’ನಿಂದಾಗಿ ಸ್ಪ್ಲೀನ್ ಕಳೆದುಕೊಂಡಿದ್ದಳು, ಕಿಡ್ನಿ ವೈಫಲ್ಯ ಉಂಟಾಗಿತ್ತು. ಅದಷ್ಟೇ ಅಲ್ಲದೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಳು. ಇಷ್ಟೆಲ್ಲ ಆಗಿ ಏಮಿ ಬದುಕಿ ಬಂದಳು. “ಬೇರೆ ಬೇರೆ ಪೀಸ್’ಗಳನ್ನು ಸೇರಿಸಿ ಪ್ಯಾಚ್’ವರ್ಕ್ ಮಾಡಿದ ಹಾಗಾಗಿದ್ದೆ” ಎನ್ನುತ್ತಾಳೆ ಏಮಿ ಆ ಸಂದರ್ಭವನ್ನು ನೆನಪು ಮಾಡಿಕೊಳ್ಳುತ್ತಾಳೆ. ಎರಡು ವಾರಗಳ ನಂತರ ಆಕೆಗೆ ಕೃತಕ ಕಾಲುಗಳನ್ನು ನೀಡಲಾಗಿತ್ತು. ತನ್ನ ಕಾಲುಗಳು ಹೀಗಿರುತ್ತವೆಂದು ಆಕೆ ನಿರೀಕ್ಷಿಸಿರಲಿಲ್ಲ. ದೊಡ್ಡದಾದ, ಭಾರವಾದ, ತುಂಬಾ ನೋವನ್ನುಂಟುಮಾಡುತ್ತಿದ್ದ ಆ ಕೃತಕ ಕಾಲುಗಳನ್ನು ಹಾಕಿಕೊಂಡು ತನ್ನ ತಾಯಿಯ ಪಕ್ಕ ನಿಂತ ಏಮಿ ಜೋರಾಗಿ ಅಳಲಾರಂಭಿಸಿದ್ದಳು. ಈ ಕಾಲುಗಳಲ್ಲಿ ಹೇಗೆ ಸ್ನೋಬೋರ್ಡ್ ಮಾಡಲಿ, ಹೇಗೆ ಪ್ರಪಂಚವನ್ನು ಸುತ್ತಲಿ ಎಂದು ನೊಂದುಕೊಂಡಿದ್ದಳು. ದೈಹಿಕವಾಗಿ, ಮಾನಸಿಕವಾಗಿ ಏಮಿ ಕುಗ್ಗಿ ಹೋಗಿದ್ದಳು. ಕೆಲ ತಿಂಗಳುಗಳು ಹಾಗೆಯೇ ಹತಾಶಳಾಗಿಯೇ ಕಳೆದಳು. ಆದರೆ ಒಂದು ದಿನ ಆಕೆ ತನ್ನ ಬದುಕಿನ ಕಥೆ ಹೇಗಿರಬೇಕು ಎಂದು ತನ್ನನ್ನು ತಾನೇ ಕೇಳಿಕೊಂಡಳು. ಅಲ್ಲಿಂದ ಆಕೆಯ ಬದುಕು ಬದಲಾಗಿ ಹೋಯಿತು!
ನಡೆಯುವ ಕನಸು
ಆ ದಿನ ಮತ್ತೆ ಪುಟ್ಟ ಹುಡುಗಿಯ ಹಾಗೆ ಏಮಿ ಕನಸು ಕಾಣಲಾರಂಭಿಸಿದ್ದಳು, ತಾನು ಆರಾಮಾಗಿ ಓಡಾಡಿದಂತೆ, ಸ್ನೋಬೋರ್ಡರ್ ಆದಂತೆ, ತನ್ನಂತೆಯೇ ಇರುವ ಇತರರಿಗೆ ಸಹಾಯ ಮಾಡಿದಂತೆ, ಜಗತ್ತನ್ನು ಸುತ್ತಿದಂತೆ. ಬದುಕಲ್ಲಿ ನಾವು ಎಷ್ಟೆಲ್ಲಾ ವಿಷಯಗಳಿಗೆ ಕೃತಜ್ಞರಾಗಿರಬೇಕು ಎನ್ನುವುದನ್ನು ಇಲ್ಲಿಯೇ ಗಮನಿಸಬೇಕು. ಹಲವರಿಗೆ ನಡೆಯುವುದು ಒಂದು ವಿಷಯವೇ ಅಲ್ಲ, ಆದರೆ ಏಮಿಯಂತಹ ಕೆಲವರಿಗೆ ಅದು ಕನಸಾಗಿರುತ್ತದೆ. ನಾವು ನಡೆಯಬಹುದು,ನೋಡಬಹುದು, ಕೇಳಬಹುದು, ಮಾತಾಡಬಹುದು. ಕೆಲವರಿಗೆ ಅದು ಸವಾಲು, ಗುರಿ, ಕನಸಾಗಿರುತ್ತದೆ. ನಮ್ಮ ಬಳಿ ಎಷ್ಟೊಂದಿದೆ ಎಂದು ನಾವು ಗಮನಿಸುವುದೇ ಇಲ್ಲ!!
ಏಮಿ ತನ್ನ ೧೫ನೇ ವಯಸ್ಸಿನಿಂದಲೇ ಸ್ನೋಬೋರ್ಡಿಂಗ್ ಮಾಡುತ್ತಿದ್ದವಳು. ಸ್ನೋಬೋರ್ಡಿಂಗ್ ಬಗ್ಗೆ ಅತೀವ ಪ್ರೀತಿ ಉಳ್ಳವಳಾಗಿದ್ದ ಏಮಿ ಮತ್ತೆ ಕನಸು ಕಾಣಲಾರಂಭಿಸಿದ್ದಳು. ಪ್ರತಿದಿನ ಆಕೆ ತಾನು ಸ್ನೊಬೋರ್ಡಿಂಗ್ ಮಾಡಿದಂತೆ ಕಲ್ಪನೆ ಮಾಡಿಕೊಳ್ಳುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ, ಪರ್ವತದ ಆ ಚಳಿಗಾಳಿ ತನ್ನ ಮುಖಕ್ಕೆ ರಾಚುವುದನ್ನು, ಆ ವೇಗದಲ್ಲಿ ಹೃದಯ ಬಡಿತ ಜೋರಾಗುವುದನ್ನು ಕೂಡ ಕಲ್ಪನೆ ಮಾಡಿಕೊಳ್ಳುತ್ತಿದ್ದಳು. ಆದರೆ ಆಕೆಯ ಕೃತಕ ಕಾಲುಗಳು ಸ್ನೋಬೋರ್ಡಿಂಗ್’ಗೆ ಸರಿಯಾಗುವಂತಿರಲಿಲ್ಲ. ಆಕೆ ಒಮ್ಮೆ ಅದೇ ಕೃತಕ ಕಾಲುಗಳಲ್ಲಿ ಪ್ರಯತ್ನಿಸಿ ನೋಡಿದ್ದಳು ಕೂಡ. ತನ್ನ ಕೃತಕ ಕಾಲುಗಳನ್ನು ಬಳಸಿ, ಸ್ನೋಬೋರ್ಡ್ ಏರಿದ ಏಮಿ, ಕೆಲವೇ ಕ್ಷಣದಲ್ಲಿ ಕೆಳಗೆ ಬಿದ್ದಿದ್ದಳು. ಕಾಲುಗಳಿನ್ನೂ ಸ್ನೋಬೋರ್ಡ್’ನಲ್ಲಿಯೇ ಇದ್ದು, ಪರ್ವತದ ಕೆಳಗೆ ಹೋಗುತ್ತಿದ್ದರೆ, ಏಮಿ ಇನ್ನೂ ಪರ್ವತದ ತುದಿಯಲ್ಲಿಯೇ ಇದ್ದಳು. ಈ ಸನ್ನಿವೇಶವನ್ನು ನಗುತ್ತಲೇ ಹೇಳಿಕೊಂಡಿದ್ದಳು ಏಮಿ. ಇದಾದ ನಂತರ ಆಕೆ ತನ್ನ ಕೃತಕ ಕಾಲುಗಳ ತಯಾರಕರೊಂದಿಗೆ ಸೇರಿ ಕೊನೆಗೂ ಸ್ನೋಬೋರ್ಡಿಂಗ್’ಗೆ ಅನುಕೂಲವಾಗುವಂತಹ ಕಾಲುಗಳನ್ನು ಮಾಡಿಸಿಕೊಂಡಳು. ಅಲ್ಲಿಂದ ಏಮಿಯ ಬದುಕಲ್ಲಿ ಹೊಸ ಕಥೆಯೇ ಆರಂಭವಾಯಿತು. ಇಂದು ಏಮಿ ಜಗತ್ತಿನ ಟಾಪ್ ರ‍್ಯಾಂಕ್’ನ ಅಡಾಪ್ಟಿವ್ ಸ್ನೋಬೋರ್ಡರ್’ಗಳಲ್ಲಿ ಒಬ್ಬಳಾಗಿದ್ದಾಳೆ. ೨೦೧೪ರಲ್ಲಿ ಪ್ಯಾರಾ ಒಲಂಪಿಕ್’ನಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಳು. ಅದಾಗಿ ಕೆಲವೇ ದಿನಗಳಲ್ಲಿ ಎಬಿಸಿ’ಯ ಡ್ಯಾನ್ಸಿಂಗ್ ವಿಥ್ ಸ್ಟಾರ್ಸ್ ಎಂಬ ಶೋನಲ್ಲಿ ಭಾಗವಹಿಸಿ ತನ್ನ ಡಾನ್ಸ್’ನ ಮೂಲಕ ಮಿಲಿಯನ್’ಗಟ್ಟಲೇ ಅಭಿಮಾನಿಗಳನ್ನ ಗಳಿಸಿದ್ದಲ್ಲದೇ, ಫೈನಲ್ ಪ್ರವೇಶಿಸಿ ರನ್ನರ್ ಅಪ್ ಕೂಡ ಆದಳು. ಆಕೆಯ ಡ್ಯಾನ್ಸ್’ನ ತುಣುಕುಗಳು ಈಗಲೂ ಯೂಟ್ಯೂಬ್’ನಲ್ಲಿ ಲಭ್ಯ. ಆಕೆ ಮಾಡಿದ ಸಾಲ್ಸಾವನ್ನು ನೋಡಿದರೆ ದಂಗಾಗಿ ಬಿಡುತ್ತೀರಿ, ಅಷ್ಟು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ ಏಮಿ.
ಜೀವನ ದೃಷ್ಟಿ
ಏಮಿ ಎಲ್ಲದರಲ್ಲೂ ಒಳ್ಳೆಯದೇನೋ ಒಂದನ್ನು ಹುಡುಕಿ ತೆಗೆಯಬಲ್ಲಳು. ಅದಕ್ಕೆ ಒಳ್ಳೆಯ ಉದಾಹರಣೆ ಎಂದರೆ, ಆಕೆ ತನ್ನ ಕಾಲುಗಳ ಬಗ್ಗೆ ಹೇಳಿಕೊಂಡ ಈ ಮಾತುಗಳು. “ಕೃತಕ ಕಾಲುಗಳಿಂದಲೂ ಲಾಭ ಇದೆ. ಮುಖ್ಯವಾಗಿ ಸ್ನೋಬೋರ್ಡಿಂಗ್ ಮಾಡುವಾಗ ಕಾಲುಗಳಿಗೆ ಚಳಿಯಾಗುವುದಿಲ್ಲ. ಅಲ್ಲದೇ, ನಾನು ಐದು ಅಡಿ ಐದು ಇಂಚು ಆಗಿರಬೇಕು ಅಂತೇನಿಲ್ಲ. ನಾನೆಷ್ಟು ಬಯಸುತ್ತೇನೋ ಅಷ್ಟು ಉದ್ದ ಆಗಬಹುದು! ಅದು ನಾನು ಎಷ್ಟು ಉದ್ದದ ಹುಡುಗನನ್ನು ಡೇಟ್ ಮಾಡುತ್ತಿದ್ದೇನೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಕಾಲಿನ ಅಳತೆಗೆ ಶೂ ತೆಗೆದುಕೊಳ್ಳಬೇಕೆಂದೇನಿಲ್ಲ. ಯಾವ ಶೂ ತೆಗೆದುಕೊಳ್ಳುತ್ತೀರೋ ಅದಕ್ಕೆ ತಕ್ಕನಾದ ಕಾಲು ಹಾಕಿಕೊಂಡರಾಯಿತು.” ಹೀಗೆ ಹೇಳಿ ಜೋರಾಗಿ ನಗುತ್ತಾಳೆ ಏಮಿ. ಅವಳ ಬಳಿ ಬೇರೆ ಬೇರೆ ಅಳತೆಯ ಕಾಲುಗಳಿರುವುದೂ ಹೌದು!!
ಏಮಿ ಮೊದಲಿಂದಲೂ “ಓಹ್.. ಈ ಕಾಲುಗಳನ್ನು ಹಾಕಿಕೊಳ್ಳಬೇಕಲ್ಲ” ಎಂದು ಮನಸ್ಸಿಲ್ಲದೇ ಹಾಕಿಕೊಳ್ಳುವಂತಿರಬಾರದು ಎಂದುಕೊಳ್ಳುತ್ತಿದ್ದಳು. ಇಂದು ಆ ಕಾಲುಗಳು ಆಕೆಯ ಭಾಗವೇ ಆಗಿದೆ. ಮೊದಲು ಏಮಿಗೆ ಕೃತಕ ಕಾಲುಗಳೊಂದಿಗೆ ಸಮುದ್ರದ ನೀರಿಗೆ ಹೋಗುವಂತಿಲ್ಲ ಎಂದಿದ್ದರು. ಅವುಗಳಿಗೆ ತುಕ್ಕು ಹಿಡಿಯಬಹುದು ಎನ್ನುವ ಕಾರಣಕ್ಕೆ. ಆಕೆ ತನ್ನ ಗಂಡನೊಂದಿಗೆ ಎಷ್ಟೊ ಬಾರಿ ಸಮುದ್ರದ ಬಳಿ ಹೋಗಿದ್ದರೂ, ನೀರಿನ ಬಳಿ ಹೋಗಿರಲಿಲ್ಲ. ಆದರೆ ಒಮ್ಮೆ,’ತುಕ್ಕು ಬಂದರೆ ಬರಲಿ ಬೇರೆಯದನ್ನು ಮಾಡಿಸಿಕೊಂಡರಾಯಿತು’ ಎಂಬ ಯೋಚನೆ ಬರುತ್ತಿದ್ದಂತೆ ನೀರಿನ ಬಳಿ ಧಾವಿಸಿದ್ದಳು ಏಮಿ. ಈಗ ಆಕೆಯನ್ನು ಸಮುದ್ರದ ನೀರಿಗೆ ಇಳಿಯುವುದನ್ನು ಯಾರೂ ತಡೆಯುವಂತಿಲ್ಲ. ತುಕ್ಕು ಹಿಡಿಯುತ್ತದೆ ಎಂದು ತನ್ನ ಆಸೆಗಳಿಗೇಕೆ ತುಕ್ಕು ಹಿಡಿಸಬೇಕು ಎನ್ನುತ್ತಾಳೆ ಆಕೆ.
“ಕಲ್ಪನೆಗಳು ನಮ್ಮಲ್ಲಿರುವ ಅದ್ಭುತವಾದ ಉಪಕರಣ, ಅದನ್ನು ನಮ್ಮ ಮಿತಿಗಳನ್ನು ಮೀರಿ ಬೆಳೆಯುವುದಕ್ಕೆ ಬಳಸಿಕೊಳ್ಳಬಹುದು. ಕಲ್ಪನೆಗಳಿಗೆ ಮಿತಿ ಇಲ್ಲ, ಕಲ್ಪನೆಗಳಲ್ಲಿ ನಾವು ಏನು ಬೇಕಾದರೂ ಆಗಬಹುದು, ಏನು ಬೇಕಾದರೂ ಮಾಡಬಹುದು. ಆ ಕಲ್ಪನೆಗಳಿಂದಲೇ ನನ್ನ ಹೊಸ ಬದುಕು ಆರಂಭವಾಗಿದ್ದು. ಸವಾಲುಗಳು ಎಂದರೆ ಅದು ಕೊನೆ ಅಲ್ಲ, ಅಲ್ಲಿಂದಲೇ ಕಲ್ಪನೆಗಳ, ಹೊಸ ಕಥೆಯೊಂದರ ಆರಂಭ” ಎನ್ನುತ್ತಾಳೆ ಏಮಿ.
ಬದುಕು-ಬರಹ
ಏಮಿ ಇಂದು ನಿಜವಾಗಿಯೂ ತನ್ನ ಬದುಕಿನ ಕಥೆಗೆ ಲೇಖಕಿಯಾಗಿದ್ದಾಳೆ. ‘ಆನ್ ಮೈ ಓನ್ ಟು ಫೀಟ್’ ಎಂಬ ಆಕೆಯ ಪುಸ್ತಕ ಸದ್ಯ ನ್ಯೂಯಾರ್ಕ್ ಟೈಮ್ಸ್’ನ ಬೆಸ್ಟ್ ಸೆಲ್ಲಿಂಗ್ ಪುಸ್ತಕಗಳಲ್ಲೊಂದಾಗಿದೆ. ತಾನು ಕನಸು ಕಂಡಂತೆಯೇ ಜಗತ್ತಿನೆಲ್ಲೆಡೆ ಸುತ್ತಾಡುತ್ತಿದ್ದಾಳೆ. ‘ಅಡಾಪ್ಟಿವ್ ಆಕ್ಷನ್ ಸ್ಪೋರ್ಟ್ಸ್’ ಎಂಬ ಆಕೆಯ ಸಂಸ್ಥೆ ಮೂಲಕ ಸ್ನೋಬೋರ್ಡಿಂಗ್, ಸ್ಕೇಟ್ ಬೋರ್ಡಿಂಗ್, ವೇಕ್ ಬೋರ್ಡಿಂಗ್ ಮಾಡುವವರಿಗೆ ಸಹಾಯ ಮಾಡುತ್ತ ಅವರಲ್ಲಿ ಸ್ಪೂರ್ತಿ ತುಂಬುತ್ತಿದ್ದಾಳೆ. ಸದ್ಯ ಮುಂಬರಲಿರುವ ಪ್ಯಾರ ಒಲಂಪಿಕ್’ನಲ್ಲಿ ಮತ್ತೆ ಭಾಗವಹಿಸಲು ತಯಾರಿ ನಡೆಸುತ್ತಿರುವ ಏಮಿಗೆ ಇನ್ನಷ್ಟು ಯಶಸ್ಸು ಸಿಗಲಿ. ಆಕೆಯ ಬದುಕಿನ ಪುಸ್ತಕ ಅವಳಂದುಕೊಂಡಂತೆಯೇ ಮೂಡಿಬರಲಿ.
Facebook ಕಾಮೆಂಟ್ಸ್