ಕತಾರ್ ಪ್ರವಾಸ ನನ್ನ ಎರಡನೇ ಅಂತಾರಾಷ್ಟ್ರೀಯ ಪ್ರವಾಸ. ನಿಜವಾಗಿಯೂ ಹೇಳಬೇಕಾದರೆ ಕತಾರ್’ನಲ್ಲಿ ಇಲ್ಲಿಂದ ಅಷ್ಟು ದೂರ ಹಣ ಖರ್ಚು ಮಾಡಿ ಹೋಗಿ ನೋಡುವಂತಹಾ ಯಾವ ಪ್ರವಾಸಿ ತಾಣವೂ ಇಲ್ಲ. ಪ್ರವಾಸಕ್ಕೆ ಹೇಳಿದ ಒಂದು ಡೆಸ್ಟಿನೇಶನ್ನೇ ಅದಲ್ಲ. ಒಳ್ಳೆಯ ಕೆಲಸ ಸಿಕ್ಕಿದರೆ ಅಲ್ಲಿ ಹೋಗಿ ಸಾವಿರಾರು ರಿಯಲುಗಳಲ್ಲಿ ಸಂಬಳ ಎಣಿಸುತ್ತಾ ಐಷಾರಾಮಿ ಜೀವನ ನಡೆಸುವುದಕ್ಕೆ ಕತಾರ್ ಲಾಯಕ್ಕೇ ಹೊರತು ಅದರಿಂದಾಚೆಗೆ ಕತಾರಿನ ಬಗ್ಗೆ ಹೇಳುವಂತಹಾ ವಿಶೇಷಗಳೇನೇನೂ ಇಲ್ಲ. ಉಳಿದಂತೆ ಎಲ್ಲವೂ ಮಾಮೂಲು. ಅಷ್ಟೆ.
ಅವೆಲ್ಲವನ್ನೂ ಮೀರಿ ನನಗೆ ಕತಾರಿನ ಬಗ್ಗೆ ವಿಶೇಷವಾಗಿ ಕಂಡ ಸಂಗತಿಯೊಂದಿದೆ. ವಿಶೇಷ ಎನ್ನುವುದಕ್ಕಿಂತಲೂ ಅಚ್ಚರಿ ಎಂದರಷ್ಟೇ ಸೂಕ್ತ. ಅದೇನೆಂದರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಕತಾರ್ ಎನ್ನುವ ಪುಟ್ಟ ರಾಷ್ಟ್ರದೊಡನೆ ಇದ್ದ ಎಲ್ಲಾ ಸಂಬಂಧಗಳನ್ನು ನೆರೆಹೊರೆಯ ದೇಶಗಳಾದ ಸೌದಿ ಅರೇಬಿಯ, ಯು.ಎ.ಇ, ಬಹರೇನ್ ಮತ್ತು ಈಜೀಪ್ಟ್, ಈ ನಾಲ್ಕು ರಾಷ್ಟ್ರಗಳು ಕಡಿದುಕೊಂಡಿದೆ. ಎಷ್ಟೆಂದರೆ ನೆಲಮಾರ್ಗ, ವಾಯುಮಾರ್ಗ, ಜಲಮಾರ್ಗ ಎಲ್ಲವನ್ನೂ ಸಹ ರಾತ್ರೋರಾತ್ರಿ ಕತಾರ್ ಪಾಲಿಗೆ ಮುಚ್ಚಲಾಗಿದೆ.
ಭಯೋತ್ಪಾದನೆಗೆ ಕತಾರ್ ಬೆಂಬಲವಾಗಿ ನಿಂತಿದೆ ಎನ್ನುವುದು ಇದರ ಹಿಂದಿರುವ ಬಲವಾದ ಕಾರಣ ಒಂದಾದರೆ ಇರಾನ್ ಜೊತೆಗೆ ಕತಾರ್’ಗೆ ಇರುವ ಅತ್ಯುತ್ತಮ ರಾಜತಾಂತ್ರಿಕ ಸಂಬಂಧ, ಕಾರಣ ಮತ್ತೊಂದು. ಭಯೋತ್ಪಾದಕ ಸಂಘಟನೆಗಳಾದ ಅಲ್ ಖಾಯ್ದಾ, ISIL, ಫಾತೆಹ್ ಅಲ್ ಶಾಮ್ ಮುಂತಾದವುಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಬಿತ್ತರಿಸುವ ಜಗತ್ತಿನ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲೊಂದಾಗಿರುವ ಅಲ್-ಜಝೀರಾ ವಾಹಿನಿಯನ್ನು ನಿಷೇಧಿಸುವುದು, ದೇಶದೊಳಗಿರುವ ಭಯೋತ್ಪಾದಕರ ಆಸ್ಥಿಪಾಸ್ತಿಯನ್ನು ಜಪ್ತಿ ಮಾಡುವುದಲ್ಲದೆ ಅವರ ಸಂಪೂರ್ಣ ಮಾಹಿತಿಯನ್ನು ನೀಡುವುದು, ಇವೆಲ್ಲಾ ನಾಲ್ಕು ಗಲ್ಫ್ ರಾಷ್ಟ್ರಗಳು ಕತಾರ್ ಅನ್ನು ಬ್ಯಾನ್ ಮಾಡುವುದಕ್ಕೆ ನೀಡಿದ ಕೆಲ ಪ್ರಮುಖ ಕಾರಣಗಳು. ಇವುಗಳ ಜೊತೆಗೆ ಕೆಲವು ಸೌದಿ ಅರೇಬಿಯಾದ ಅಧಿಕಪ್ರಸಂಗಿ ಕಾರಣಗಳೂ ಇದ್ದವೆನ್ನಿ!
ವಾಸ್ತವದಲ್ಲಿ ಕತಾರ್ ಮತ್ತು ಈ ಮೇಲಿನ ರಾಷ್ಟ್ರಗಳ ನಡುವೆ ಶೀತಲ ಸಮರ ಮೊದಲಿನಿಂದಲೂ ಇತ್ತು. ಯಾವಾಗ ಮೇಲಿನ ಕಂಡಿಶನ್’ಗಳನ್ನು ಕತಾರಿನ ಮೇಲೆ ಹೇರಲಾಯ್ತೊ ಆವಾಗ ಪರಿಸ್ಥಿತಿ ಅತ್ಯಂತ ಗಂಭೀರ ಸ್ವರೂಪವನ್ನು ಪಡೆಯಿತು. ಈ ಗಲ್ಫ್ ರಾಷ್ಟ್ರಗಳಲ್ಲಿ ನಮಗೆ ಹೇರಳವಾಗಿ ಸಿಗುವ ಎರಡು ಪ್ರಮುಖ ಅಂಶಗಳೆಂದರೆ ಪೆಟ್ರೋಲಿಯಂ ಹಾಗು ಗ್ಯಾಸ್, ಮತ್ತೊಂದು ಬಟಾ ಬಯಲಾಗಿ ನಿಂತಿರುವ ವಿಶಾಲವಾದ ಮರುಭೂಮಿ. ಇನ್ನು ಆಹಾರ ಉತ್ಪನ್ನಗಳ ಮಾತೆಲ್ಲಿಂದ ಬಂತು? ಅದರಲ್ಲೂ ಕತಾರ್’ನಲ್ಲಿ ಏನೆಂದರೆ ಏನನ್ನೂ ಬೆಳೆಯುವುದಿಲ್ಲ ಖರ್ಜೂರವೊಂದನ್ನು ಬಿಟ್ಟು. (ಈಗ ಸ್ವಲ್ಪ ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ) ಆ ದೇಶಕ್ಕೆ ತೊಂಬತ್ತೊಂಬತ್ತು ಶೇಕಡಾ ಆಹಾರ ಪದಾರ್ಥಗಳು ಬರುವುದು ಯು.ಎ.ಇ, ಸೌದಿ ಮಾರ್ಗವಾಗಿ ಬೇರೆ ಬೇರೆ ದೇಶಗಳಿಂದ. ಹೆಚ್ಚಿನ ವಾಯುಯಾನಗಳೂ ಕೂಡಾ ಯು.ಎ.ಇ, ಸೌದಿಯನ್ನು ಹಾದು ಬರಬೇಕು. . ಅಂತಾದ್ದರಲ್ಲಿ ಯು.ಎ.ಇ, ಸೌದಿ ಅರೇಬಿಯಾ ಕತಾರ್’ಗೆ ಹೋಗುವ ದಾರಿಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ರಾತ್ರೋರಾತ್ರಿ ಬಂದ್ ಮಾಡಿದವೆಂದರೆ ಅಲ್ಲಿನ ಪರಿಸ್ಥಿತಿ ಹೇಗಾಗಬೇಡ ಊಹಿಸಿ?!
ಅಲ್ಲಿ ಹೆಚ್ಚು ಕಡಿಮೆ ಇಪ್ಪತ್ತೈದು ಲಕ್ಷ ಜನರಿದ್ದಾರೆ, ಅವರಲ್ಲಿ ಏಳು ಲಕ್ಷ ಭಾರತೀಯರೇ ಇದ್ದಾರೆ. ಅಷ್ಟು ಜನಕ್ಕೆ ಆಹಾರ ಪೂರೈಕೆ ಮಾಡುವುದು ಎಲ್ಲಿಂದ? ಅಕ್ಕಿ, ಗೋದಿ, ತರಕಾರಿಗಳು, ಸಾಂಬಾರ ಪದಾರ್ಥಗಳು ಎಲ್ಲವೂ ಬೇರೆ ದೇಶಗಳಿಂದಲೇ ಬರಬೇಕು. ಹೋಗಲಿ ಹಾಲಾದರೂ ಇದೆಯಾ? ಅದೂ ಇಲ್ಲ ಅವರ ಹಣೆಬರಕ್ಕೆ, ಅದನ್ನೂ ಕೂಡ ಬೇರೆ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕು. ಅವುಗಳಲ್ಲಿ ಹೆಚ್ಚಿನವು ಸೌದಿ ಅರೇಬಿಯಾ ಮಾರ್ಗವಾಗಿಯೇ ಬರಬೇಕಾಗಿರುವುದರಿಂದ ಅವುಗಳೂ ಕೂಡಾ ಮರೀಚಿಕೆಯೇ ಅಂತ ಬೇರೆ ಹೇಳಬೇಕಾಗಿಲ್ಲವಲ್ಲ.. ದೋಹಾದಲ್ಲಿ ನೆಲೆಸಿರುವ ನನ್ನ ಆತ್ಮೀಯ ಸ್ನೇಹಿತರೊಬ್ಬರು ಹೇಳಿದ್ದರು ಆ ದಿನ, “ಈ ಥರ ಬ್ಯಾನ್ ಮಾಡಿದ್ದಾರೆ ಕತಾರ್ ಅನ್ನು. ಆಹಾರ ಸಾಮಾಗ್ರಿಗಳಿಗಾಗಿ ಈಗಾಗಲೇ ಮಾಲ್’ಗಳಲ್ಲಿ ಜನ ದೊಡ್ಡ ದೊಡ್ದ ಕ್ಯೂ ನಿಂತಿದ್ದಾರೆ.ನಾನು ಹೇಗೋ ಕಷ್ಟ ಪಟ್ಟು ಒಂದು ತಿಂಗಳಿಗಾಗುವಷ್ಟು ಅಕ್ಕಿ ಮುಂತಾದ ಸಾಮಾಗ್ರಿಗಳನ್ನು ಖರೀದಿಸಿ ತಂದೆ” ಅಂತ. ಮತ್ತೊಮ್ಮೆ ಊಹಿಸಿ.. ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗುವುದು ಆಹಾರ, ಅದೇ ಸಿಗದಿದ್ದರೆ ಎಂತಹಾ ಪರಿಸ್ಥಿತಿ ನಿರ್ಮಾಣವಾಗಬಹುದೆಂದು.
ಅಲ್ಲಿನ ರಾಜ ಶೇಕ್ ತಮೀಮ್ ಮಾತ್ರ ಸುಮ್ಮನೆ ಕೂರಲಿಲ್ಲ. ಉಳಿದ ರಾಷ್ಟ್ರಗಳು ಬ್ಯಾನ್ ಮಾಡಿದವು ಅಂತ ಅವುಗಳು ಹಾಕಿದ ಕಂಡಿಶನ್’ಗಳನ್ನು ಒಪ್ಪಿಕೊಂಡು ಸಲಾಂ ಹೊಡಿಲೂ ಇಲ್ಲ. ಹೇಗೂ ಸೌದಿ, ಬಹರೇನ್, ದುಬೈ, ಈಜಿಪ್ಟ್ ಮುಂತಾದೆಡೆಗೆ ದಿನವೂ ಪ್ರಯಾಣಿಸುತ್ತಿದ್ದ ಕತಾರ್ ಏರ್’ವೇಸ್’ನ ನೂರಾರು ವಿಮಾನಗಳು ಖಾಲಿ ಬಿದ್ದಿದ್ದವಲ್ಲಾ, ಅವುಗಳೆಲ್ಲವನ್ನೂ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾದ. ಮೊದಲಿದ್ದ ಸ್ಟಾಕ್ ಮುಗಿಯುವ ಮೊದಲು ಅಂದರೆ ಎಪ್ಪತ್ತೆರಡೇ ಘಂಟೆಗಳೊಳಗೆ ಆಹಾರ ಪದಾರ್ಥಗಳು ಕತಾರ್ ಸೇರುವಂತೆ ಮಾಡಿದ. ಊಟಕ್ಕೇನಾದರೂ ಸಿಗುತ್ತೋ ಇಲ್ಲವೋ ಎನ್ನುವ ಭಯದಲ್ಲಿದ್ದ ಜನಕ್ಕೆ ಈ ಮೂವ್ ಧೈರ್ಯ ತುಂಬಿತ್ತಾದರೂ ಅಲ್ಲಾ ಆಹಾರಗಳ ಬೆಲೆ ಗಗನಕ್ಕೇರಿದವು. ಇಪ್ಪತ್ತು ರಿಯಲ್’ಗೆ(ಒಂದು ರಿಯಲ್ ಅಂದರೆ ಹೆಚ್ಚು ಕಡಿಮೆ ಹದಿನೇಳುವರೆ ರೂಗೆ ಸಮ) ಸಿಗುತ್ತಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಅರುವತ್ತು ರಿಯಲುಗಳಾದವು. 6 ರಿಯಲ್’ಗೆ ಸಿಗುತ್ತಿದ್ದ ಹಾಲು 10 ರಿಯಲ್ ಆಯ್ತು. ಉಳಿದ ಸಾಮಾಗ್ರಿಗಳ ಬೆಲೆ ಎಷ್ಟಾಗಿರಬಹುದೆಂದು ನಿಮ್ಮ ಊಹೆಗೇ ಬಿಡುತ್ತೇನೆ.
ಕತಾರ್’ನಲ್ಲಿ ಅದಕ್ಕೂ ಮೊದಲು ಒಂದೇ ಒಂದು ಡೈರಿ ಇರಲಿಲ್ಲವಂತೆ. ಹಾಲು ಅಗತ್ಯವಾಗಿ ಬೇಕಾಗಿದ್ದರಿಂದ ಹಾಲೆಂಡಿನಿಂದ ನಾಲ್ಕು ಸಾವಿರ ದನಗಳನ್ನು ಖರೀದಿಸಿ ತರಲಾಯಿತು. ಅವುಗಳಲ್ಲಿ ಎಂಟು ನೂರು ದನಗಳನ್ನು ಏರ್ ಲಿಫ್ಟ್ ಮಾಡಿದರೆಂದರೆ ನೀವೊಮ್ಮೆ ಹುಬ್ಬೇರಿಸದೇ ಇರಲಾರಿರಿ!
ನಮ್ಮಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿತು ಅಂತ ಸುದ್ದಿ ಬಂದಾಗಲೇ ಕಾವೇರುವ ಪ್ರತಿಭಟನೆ ನೆನಪಾಯ್ತಾ? ಅಲ್ಲೂ ಕೂಡ ಪ್ರತಿಭಟನೆಗಳು ನಡೆದಿರಬಹುದಾ ಎನ್ನುವ ಕುತೂಹಲ ಮೂಡಿತಾ? ಉಹೂ.. ಇಲ್ಲವೇ ಇಲ್ಲ. ಹೇಗೂ ಶ್ರೀಮಂತ ರಾಷ್ಟ್ರ ಅದು. ಇಂತಹಾ ಬೆಲೆ ಹೆಚ್ಚಳಗಳೆಲ್ಲಾ ಅಲ್ಲಿನ ಜನರಿಗೆ ಅದೊಂದು ದೊಡ್ದ ಹೊರೆ ಅಂತ ಅನಿಸಲಿಲ್ಲವೋ ಏನೂ.. ಹಾಗೋ ಹೀಗೊ, ರಾಜ ಜನರಿಗೆ ಆಹಾರ ಸಾಮಾಗ್ರಿಗಳ ಕೊರತೆಯಾಗದಂತೆ ನೋಡಿಕೊಂಡಿದ್ದನಲ್ಲಾ, ಅಷ್ಟು ಮಾತ್ರ ಸಾಕಾಗಿತ್ತು ಅಲ್ಲಿನ ಜನರಿಗೆ. ವ್ಯಾಪಕ ಪ್ರಮಾಣದಲ್ಲಿ ಬೆಲೆ ಹೆಚ್ಚಳವಾದರೂ, ದೇಶದಾದ್ಯಂತ ಎಲ್ಲಾ ನಮುನೆಯ ಉದ್ಯಮಗಳು ನೆಲಕಚ್ಚಿದರೂ, ಸಾವಿರಾರು ಜನ ಉದ್ಯೋಗ ಕಳೆದುಕೊಂಡರೂ, ದೇಶದ ಆರ್ಥಿಕತೆಗೆ ಅಷ್ಟು ದೊಡ್ಡ ಪೆಟ್ಟು ಬಿದ್ದರೂ ಸಹ ಜನ ತನ್ನ ರಾಜನ ಬೆನ್ನಿಗೆ ನಿಂತರು. ಎಷ್ಟೆಂದರೆ, ಈ ಕ್ರೈಸಿಸ್ ಆರಂಭವಾದ ಬಳಿಕ ಅಲ್ಲಿನ ಸ್ಥಳೀಯ ಜನ ತಮ್ಮ ಕಾರುಗಳಲ್ಲಿ, ಮನೆಗಳ-ಕಛೇರಿಗಳ ಗೋಡೆಗಳಲ್ಲಿ ತಮ್ಮ ರಾಜನ ಫೋಟೋ ಹಾಕಿ ರಾಜನೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಆ ನಾಲ್ಕು ರಾಷ್ಟ್ರಗಳಿಗೆ ಸಾರಿ ಹೇಳುವ ಪ್ರಯತ್ನವನ್ನು ಮಾಡಿದರು. ಮೊನ್ನೆಯಷ್ಟೇ( ಡಿಸೆಂಬರ್ 18) ನಡೆದ “ಕತಾರ್ ರಾಷ್ಟ್ರೀಯ ದಿನ”ದಲ್ಲಿ ಹಿಂದೆಂದಿಗಿಂತಲೂ ದೊಡ್ಡದಾದ ಪರೇಡನ್ನು ಪ್ರದರ್ಶಿಸುವ ಮೂಲಕ ನಾವೇನೂ ಎದೆಗುಂದಿಲ್ಲ, ಎಂತಹಾ ಪರಿಣಾಮವನ್ನು ಎದುರಿಸಲೂ ಸಿದ್ಧ ಅಂತ ಕತಾರ್ ಸಾರಿ ಹೇಳಿತು.
ಕತಾರ್ ವಿಶ್ವದಲ್ಲಿಯೇ ಗ್ಯಾಸ್ ರಫ್ತು ಮಾಡುವ ಪ್ರಮುಖ ರಾಷ್ಟ್ರಗಳಲ್ಲೊಂದು. ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇಲ್ಲಿಂದಲೇ ಗ್ಯಾಸ್ ಅನ್ನು ಆಮದು ಮಾಡಿಕೊಳ್ಳುತ್ತಿವೆ. ಅದರಲ್ಲೂ ಕತಾರ್ ಮೇಲೆ ನಿರ್ಬಂಧ ಹೇರಿದ ದುಬೈ(ಯು.ಎ.ಇ) ಗ್ಯಾಸ್’ಗಾಗಿ ಕತಾರನ್ನೇ ಅವಲಂಭಿಸಿದೆ. ನಾವು ನೀರು ಖರ್ಚು ಮಾಡಿದಂತೆ ಕರೆಂಟನ್ನು ಖರ್ಚು ಮಾಡುವ ಯು.ಎ.ಇ ಆ ಕರೆಂಟನ್ನು(ಶೇಕಡಾ 70) ಉತ್ಪಾದಿಸುವುದು ಕತಾರ್ ನೀಡುವ್ ಗ್ಯಾಸ್’ನಿಂದ! ಇಲ್ಲಿ ನನಗೆ ಸೋಜಿಗವಾಗಿ ಕಂಡ ಒಂದು ಸಂಗತಿಯೆಂದರೆ, ಇಷ್ಟೆಲ್ಲಾ ರಂಪಾಟಗಳ ನಡುವೆಯೂ ಯು.ಎ.ಇ ಮತ್ತು ಕತಾರ್ ನಡುವಿನ ಗ್ಯಾಸ್ ಸಂಬಂಧ ಹಾಗೆಯೇ ಮುಂದುವರಿದೆ. ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡ ಬಳಿಕ ಯು.ಎ.ಇಗೆ ಕತಾರ್’ನ ಗ್ಯಾಸ್ ಏಕೆ ಬೇಕು? ಕತಾರ್ ಮೇಲೆ ನಿರ್ಬಂಧ ಹೇರುವಾಗ ಇದ್ದ ಅಡೆತಡೆಗಳೆಲ್ಲವೂ ಗ್ಯಾಸ್ ಅಮದು ಮಾಡಿಕೊಳ್ಳುವಾಗ ಲೆಕ್ಕಕ್ಕೆ ಬರುವುದಿಲ್ಲವಾ ಅಂತ ನೀವು ಕೇಳಬಹುದು. ವಿಷಯ ಏನಪ್ಪಾ ಅಂದ್ರೆ ಯು.ಎ.ಇಗೆ ಕರೆಂಟ್ ಬೇಕೆಂದರೆ ಕತಾರಿನ ಗ್ಯಾಸ್ ಬೇಕು. ತನ್ನ ಆರ್ಥಿಕತೆಯ ಅತಿ ಪ್ರಮುಖ ಮೂಲವಾಗಿರುವ ಗ್ಯಾಸ್’ನ್ನು ಇತರ ದೇಶಗಳಿಗೆ ರಫ್ತು ಮಾಡಬೇಕಾದರೆ ಯು.ಎ.ಇ ಮಾರ್ಗವಾಗಿಯೇ ಹೋಗಬೇಕು. ಈ ವಿಷಯದಲ್ಲೂ ಕಿರಿಕ್ ಮಾಡಿಕೊಂಡರೆ ಎರಡೂ ದೇಶಗಳಿಗೆ ಆಪತ್ತು ತಪ್ಪಿದ್ದಲ್ಲ ಎನ್ನುವ ಅರಿವು ಇದ್ದಿದ್ದರಿಂದ ಇಬ್ಬರೂ ತೆಪ್ಪಗೆ ಇದ್ದಾರೆ.
ಇಷ್ಟೆಲ್ಲ ಏರುಪೇರುಗಳಾಗಿದ್ದರೂ ಸಹ 2022ರ ಕತಾರಿನಲ್ಲಿ ನಡೆಯಲಿರುವ ಫಿಫಾ ಸಿದ್ಧತೆಗಳು ನಿರಾತಂಕವಾಗಿ ಮುಂದುವರಿದಿದೆ. ಹೊಸ ಹೊಸ ಸ್ಟೇಡಿಯಂಗಳು, ದೇಶ ವಿದೇಶಗಳಿಂದ ಬರುವ ಫುಟ್ಬಾಲ್’ಪ್ರೇಮಿಗಳಿಗಾಗಿ ಹೊಸ ಹೊಸ ಹೋಟೇಲುಗಳು, ಮೆಟ್ರೋ ಇನ್ನಿತರ ಇನ್’ಫ್ರಾಸ್ಟ್ರಕ್ಚರ್ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಇಲ್ಲಾ ಅಂತ ಹೇಳುವುದಿಲ್ಲ, ನಿರ್ಮಾಣ ಸಾಮಾಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವುದರಿಂದ ಕೆಲಸಗಳು ಸ್ವಲ್ಪ ಮಟ್ಟಿಗೆ ನಿಧಾನಗೊಂಡಿವೆ. ಅಸಲಿಗೆ ವಿಸ್ತೀರ್ಣದಲ್ಲಿ ಕೇರಳದಷ್ಟೂ ದೊಡ್ಡವಿಲ್ಲದ ಕತಾರ್ ಫಿಫಾದಂತಹ ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದೇ ಒಂದು ದೊಡ್ಡ ಸಂಗತಿ.(ಆತಿಥ್ಯ ವಹಿಸಿಕೊಳ್ಳುವ ಹಕ್ಕು ಸಿಗುವುದಕ್ಕಾಗಿ ಕತಾರ್ ಲಂಚ್ ನೀಡಿತ್ತು ಎನ್ನುವ ಆರೋಪವೂ ಇದೆ.) ಅಂತಾದ್ದರಲ್ಲಿ ಇಷ್ಟೆಲ್ಲಾ ಏರುಪೇರಿನ ನಡುವೆಯೂ ಅದು ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದೆಯೆಂದರೆ ನೀವು ಅದರ ಆಸಕ್ತಿಗೆ, ಸಾಮರ್ಥ್ಯಕ್ಕೆ ಶಬ್ಬಾಶ್ ಎನ್ನಲೇಬೇಕು. ಹ್ಹ..! ಕತಾರ್ ಇದುವರೆಗೆ ಫಿಫಾ ಆಡುವುದಕ್ಕೆ ಅರ್ಹತೆಯನ್ನೇ ಗಳಿಸಿಲ್ಲ ಎನ್ನುವ ಸತ್ಯವನ್ನು ನೀವು ನಂಬಲೇಬೇಕು!
ಈ ಕ್ರೈಸಿಸ್ ಆರಂಭವಾಗಿ ಆರು ತಿಂಗಳಿಗೂ ಮಿಕ್ಕಿ ಸಮಯ ಈಗಾಗಲೇ ಕಳೆದಿದೆ. ಅಲ್ಲಿನ ಈಗಿನ ಪರಿಸ್ಥಿತಿಯನ್ನು ಅವಲೋಕಿಸುತ್ತಾ ಹೇಳುವುದಾದರೆ ಪರಸ್ಪರ ರಾಷ್ಟ್ರಗಳು ಪ್ರತಿಷ್ಠೆಯನ್ನು ಬಿಡಲು ಸಿದ್ಧವಿಲ್ಲದ ಕಾರಣ ಸದ್ಯಕ್ಕಂತೂ ಪರಿಸ್ಥಿತಿ ತಿಳಿಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕತಾರ್ ದೊಡ್ಡ ಮನಸ್ಸು ಮಾಡಿದ್ದಿದ್ದರೆ ಕ್ರೈಸಿಸ್ ಆರಂಭವಾದ ಕೆಲವೇ ದಿನಗಳಲ್ಲಿ ಎಲ್ಲವೂ ಸುಖಾಂತ್ಯಗೊಳ್ಳುತ್ತಿತ್ತು. ಮೊದಲು ಹದಿಮೂರಿದ್ದ ಕಂಡೀಶನ್’ಗಳನ್ನು ಆರಕ್ಕಿಳಿಸಿದರೂ ಸಹ ಕತಾರ್ ಅವುಗಳನ್ನು ಒಪ್ಪಲು ಸಿದ್ಧವಿರಲಿಲ್ಲ. ಕಂಡೀಶನ್’ಗಳನ್ನು ಒಪ್ಪಿಕೊಳ್ಳಲು ಕತಾರ್’ಗೆ ತನ್ನ ಒಣ ಪ್ರತಿಷ್ಟೆ ಬಿಡಲಿಲ್ಲ. ಆದರೆ, ಭಯೋತ್ಪಾದನೆಯೋ ಮತ್ತೊಂದೋ, ಕಾರಣಗಳೇನೇ ಇರಲಿ. ಎಲ್ಲಾ ಬಿಕ್ಕಟ್ಟು, ಹಾಹಾಕಾರಗಳ ನಡುವೆಯೂ, ಕ್ರೈಸಿಸ್ ಆರಂಭವಾಗಿ ಆರು ತಿಂಗಳಾದರೂ ಕತಾರ್ ಇನ್ನೂ ಮಕಾಡೆ ಮಲಗಿಲ್ಲ. ಅದರ ಶ್ರೀಮಂತಿಕೆಯೇ ಅದಕ್ಕೆ ಪ್ರಮುಖ ಕಾರಣವೂ ಇರಬಹುದು. ಆದರೆ ಎಲ್ಲವನ್ನೂ ಸಂಭಾಳಿಸಿಕೊಂಡು ಕತಾರ್ ಇನ್ನೂ ಮುಂದುವರಿದೆ. ಸುಮ್ಮನೇ ಮುಂದುವರಿದಿಲ್ಲ. ತನಗೆ ನಿರ್ಬಂಧ ಹೇರಿದ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ನಿಂತಿದೆ. ಆ ಕಾರಣಕ್ಕೆ ಕತಾರ್’ನ್ನು ಮೆಚ್ಚಿಕೊಳ್ಳದೇ ಇರಲಾಗದು!
Facebook ಕಾಮೆಂಟ್ಸ್