ಮಹದಾಯಿ ಹೋರಾಟ ಇಂದು ನೆನ್ನೆಯದಲ್ಲ. ಅದು ಮೂರು ವರ್ಷದ ಹೋರಾಟ. ರಾಜಕೀಯದ ನಿರ್ಲಕ್ಷದಿಂದ, ರಾಜ್ಯಸರ್ಕಾರದ ಆಲಸ್ಯದಿಂದ ಮಹದಾಯಿ ತಾರ್ಕಿಕ ಅಂತ್ಯಕಾಣದೆ ನಿಂತಿದೆ. ಮಹದಾಯಿ ನದಿ ನೀರು ಮತ್ತು ಕಳಸಾ-ಬಂಡೂರಿ ಯೋಜನೆಯ ಸಂಪೂರ್ಣ ಅರಿವಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ, ರಾಜ್ಯಾಧ್ಯಕ್ಷರೂ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾದಾಯಿ ನೀರಿಗೆ ತಾರ್ಕಿಕ ಅಂತ್ಯ ಕಾಣಲು ಪ್ರಾಮಾಣಿಕ ಪ್ರಯತ್ನಪಟ್ಟರು. ಭಾ.ಜ.ಪ.ದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರ ಮನವೊಲಿಸಿ ಗೋವಾ ಮುಖ್ಯಮಂತ್ರಿಗಳಾದ ಮನೋಹರ ಪರಿಕ್ಕರ್ ಅವರನ್ನು ಕರೆಸಿ ಸಂಧಾನ ಸೂತ್ರವೊಂದನ್ನು ಮಾಡಿಕೊಂಡು ಅಲ್ಲಿ ಅವರು ಕೊಟ್ಟ ಭರವಸೆಯೊಂದಿಗೆ ಸಿಹಿಸುದ್ದಿಯನ್ನು ಹುಬ್ಬಳ್ಳಿಯ ಪರಿವರ್ತನಾ ಯಾತ್ರೆಯಲ್ಲಿ ನೀಡುವುದಾಗಿ ಘೋಷಿಸಿಬಿಟ್ಟರು. ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹಾಗೆ ಘೋಷಿಸಬೇಕಾದರೆ ಅದರ ಹಿಂದೆ ಹಲವಾರು ಚಿಂತನ-ಮಂಥನ, ಪರ-ವಿರೋಧ, ಉಪಾಯ-ಅಪಾಯ, ಅನುಕೂಲ-ಅನಾನುಕೂಲ ಎಲ್ಲವೂ ಚರ್ಚೆಯಾಗಿರುತ್ತದೆ. ಏಕಾಏಕಿ ಹಾಗೆ ಚುಣಾವಣೆಯ ಹೊಸ್ತಿಲಲ್ಲಿ ರಾಜ್ಯದ ಜನರ ಮುಂದೆ ಘೋಷಿಸಲು ಸಾಧ್ಯವಿಲ್ಲ, ರಾಜ್ಯಗಳ ವಿವಾದವನ್ನು ಪರಿಹರಿಸುವ ಸೂತ್ರವನ್ನು ಸಾರ್ವಜನಿಕವಾಗಿ ನಿಭಾಯಿಸಬೇಕಾದರೆ ಚಾಕಚಕ್ಯತೆ ಇರಬೇಕು.
ಯಡಿಯೂರಪ್ಪನವರ ಎಲ್ಲಾ ನಿರೀಕ್ಷೆಗಳು, ರಾಷ್ಡ್ರೀಯ ನಾಯಕರ ಭರವಸೆಗಳು ದೆಹಲಿಯ ಅಂಗಳಬಿಟ್ಟು ಕರ್ನಾಟಕ ಸೇರುವಷ್ಟರಲ್ಲೆ ತಲೆಕೆಳಗಾದವು. ಗೋವಾ ಮುಖ್ಯಮಂತ್ರಿ ಪರಿಕ್ಕರ್‍ರವರು ಗೋವಾದ ಮಾಧ್ಯಮವೊಂದಕ್ಕೆ ನೀರಿನ ವಿಷಯದಲ್ಲಿ ರಾಜಿಯ ಮಾತಿಲ್ಲ, ತೀರ್ಮಾನವೇನಿದ್ದರು ಕೋರ್ಟ್ ಮಾಡುತ್ತದೆ ಎಂದರು. ಅಲ್ಲಿನ ಜಲಸಂಪನ್ಮೂಲ ಸಚಿವ ನೀರು ಬಿಡುವ ಮಾತೇ ಇಲ್ಲ ಎಂದು ಹೇಳಿಬಿಟ್ಟರು. ಇತ್ತ ಯಡಿಯ್ಯೂರಪ್ಪನವರು ನಿರೀಕ್ಷೆಯೊಂದಿಗೆ ಕಾದು ಕುಳಿತರು. ಪ್ರಯತ್ನ ಫಲಕಾರಿಯಾಗದೆ ವಿಚಲಿತರಾದರು. ಆದರೆ ಜನಕ್ಕೆ ಹುಬ್ಬಳ್ಳಿ ಸಮಾವೇಶದ ಮೇಲೆ ನಿರೀಕ್ಷೆ ಜಾಸ್ತಿಯಾಯಿತು. ಉತ್ತರಕರ್ನಾಟಕದ ಹೆಬ್ಬಾಗಿಲಿನಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರವನ್ನು ಭಾ.ಜ.ಪ. ನೀಡುತ್ತದೆ ಎಂಬ ಮಹತ್ವಾಕಾಂಕ್ಷೆಯನ್ನು ಹೊತ್ತು ಜನ ಬಂದರು. ಆದರೆ ಪರಿಸ್ಥಿತಿ ಬೇರೆಯದೇ ಇತ್ತು. ಯಡಿಯ್ಯೂರಪ್ಪನವರು ನೀರಿನ ನಿರ್ಣಯದ ಬದಲು ಮನೋಹರ ಪರಿಕ್ಕರ್ ಬರೆದ ಪತ್ರದ ಸಾರಾಂಶವನ್ನು ಓದಿದರು. ರೈತರ, ಸಾರ್ವಜನಿಕರ ಸಹನೆಯ ಕಟ್ಟೆ ಒಡೆಯಿತು.
ಪೂರ್ವನಿಗದಿಯಂತೆ ಹಾಗೂ ಯಡಿಯೂರಪ್ಪನವರಿಗೆ ಮೊದಲೆ ತಿಳಿಸಿದಂತೆ ರೈತರು ಭಾ.ಜ.ಪ.ದ ಕಛೇರಿ ಜಗನ್ನಾಥ ಭವನದ ಮುಂದೆ ಧರಣಿ ಕೂರಲು ದಕ್ಷಿಣದತ್ತ ಪಯಣ ಬೆಳೆಸಿದರು. ನಾಲ್ಕುದಿನದ ಹೋರಾಟ ಮಾಡಿದರು, ನಾಲ್ಕನೇ ದಿನ ಪರಿವರ್ತನಾ ಯಾತ್ರೆಯ ಬಿಡುವಿನ ಸಮಯದಲ್ಲಿ ಯಡಿಯೂರಪ್ಪನವರು ರೈತರ ಬಳಿ ಬಂದು ಹತ್ತು ನಿಮಿಷ ಮಾತನಾಡಿ ನನ್ನ ಕೈಯಲ್ಲೆ ಇಷ್ಟೆ ಆದದ್ದು ಎಂದು ಹೇಳಿ ಪರಿಕರ್‍ನ ಪತ್ರ ಬರೆದು ಹೊರಟರು. ರೈತರು ಆಕ್ರೋಶಗೊಂಡರು. ಈ ಸಂದರ್ಭದಲ್ಲಿ ನೀರು ಸಿಗಲಿಲ್ಲವೆಂದು ರೈತರಷ್ಟೇ ಯಡಿಯೂರಪ್ಪನವರು ಕಂಗಾಲಾಗಿದ್ದರು. ಅವರ ರಾಜಕೀಯ ಭವಿಷ್ಯ, ಮುಂದಿನ ಚುಣಾವಣೆ, ಮುಖ್ಯಮಂತ್ರಿಯ ಗಾದಿ, ದಕ್ಷಿಣಭಾರತಕ್ಕೆ ಭಾ.ಜ.ಪ.ದ ಹೆಬ್ಬಾಗಿಲೆ ಕರ್ನಾಟಕ ಅದರಲ್ಲಿ ಈ ಬಾರಿ ಸೋತರೆ ದಕ್ಷಿಣ ಭಾರತ ಭಾ.ಜ.ಪ ಕ್ಕೆ ಕೇವಲ ಕನಸಾಗೆ ಉಳಿಯುತ್ತದೆ. ಇದೆಲ್ಲದರ ಅರಿವಿರುವ ನಾಯಕ ಇಂತಹ ವಿಷಯದಲ್ಲಿ ಸೋಲಾದಾಗ ವಿಚಲಿತನಾಗಿ ಅಸಾಹಯಕನಾಗಿ ನಿಲ್ಲುವುದು ಸಹಜ ಹಾಗೂ ಅದನ್ನು ಸಹನೆ ಮತ್ತು ತಾಳ್ಮೆಯಿಂದ ಮೆಟ್ಟಿನಿಂತು ಎದುರುಸಿ ಸಮಸ್ಯೆ ಬಗೆಹರಿಸುವವನೆ ನಾಯಕ!! ಆ ನಾಯಕನಿಲ್ಲದಿರುವುದೇ ಭಾ.ಜ.ಪ.ದ ವಿಪರ್ಯಾಸ.
ಸಮಸ್ಯೆಯ ಆಳ-ಅಗಲ ರಾಜಕಾರಣ ಎಲ್ಲವನ್ನು ಅರಿತ ಕಾಂಗ್ರೆಸ್ ರೈತರ ಹೋರಾಟವನ್ನು ಹೈಜಾಕ್ ಮಾಡಿತು. ಭಾ.ಜ.ಪ. ಕಛೇರಿಯ ಮುಂದೆ ತನ್ನ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಜಲಸಂಪನ್ಮೂಲ ಸಚಿವರನ್ನು ಕಳಿಸಿ ಅವರ ಬಳಿ ಮಾತನಾಡಿಸಿ ಭಾ.ಜ.ಪ.ದ ಮೇಲಿನ ಆಕ್ರೋಶವನ್ನು ಹಿಮ್ಮಡಿಗೊಳಿಸಿ ಅವರನ್ನು ಕೆರಳಿಸಿ ರಾಜಕಾರಣದ ಬೀಜವ ಬಿತ್ತಹೊರಟಿತು. ತನ್ನದೇ ತಪ್ಪುಗಳಿಂದ ಭಾ.ಜ.ಪ. ‘ಬ್ಯಾಕ್ ಫಯರ್’ ಅನುಭವಿಸಿತು. ಭಾ.ಜ.ಪ. ಮಾಡಿದ ತಪ್ಪುಗಳು:
ವಿಷಯದ ಪ್ರತಿಕೂಲ ಪರಿಣಾಮ ಗೊತ್ತಿದ್ದರು ಒಂದು ಹಂತ ತಲುಪುವ ಮೊದಲೆ ಸಂಪೂರ್ಣ ಸಾಧಿಸಿದಂತೆ ಬಿಂಬಿಸಿದ್ದು.
ಪರಿಕರ್ ಉಲ್ಟಾ ಹೊಡೆದಾಗ ಅದನ್ನು ಸರಿಯಾಗಿ ನಿಭಾಯಿಸದೇ ಇದ್ದದ್ದು.
ಸಾಮೂಹಿಕ ನಾಯಕತ್ವವನ್ನು ಮರೆತು ಯಡಿಯೂರಪ್ಪನವರೊಬ್ಬರೆ ಬಗೆಹರಿಸಲು ಮುಂದಾಗಿದ್ದು.
ಸಂಧಾನ ಫಲಕಾರಿಯಾಗದಿದ್ದಾಗ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲದ ಪಕ್ಷದ ಇತರೆ ನಾಯಕರು.
ರೈತರು ನಾಲ್ಕು ದಿನಗಳ ನಿರಂತರ ಹೋರಾಟವನ್ನು ಮಾಡುತ್ತಿದ್ದಾಗ ಮಾಧ್ಯಮಗಳಿಗೆ ಪುರುಸೊತ್ತುಮಾಡಿಕೊಂಡು ಮಾತನಾಡಲು ಬರುವ ಭಾ.ಜ.ಪ.ದ ಯಾವ ನಾಯಕರು ರೈತರನ್ನು ಮಾತನಾಡಿಸುವ ಜವಬ್ಧಾರಿ ತೆಗೆದುಕೊಳಲಿಲ್ಲ.
ಪಕ್ಷಕ್ಕೆ ಉಂಟಾಗುವ ಹಾನಿಯನ್ನು ಯಾವ ವಕ್ತಾರರು ಅರಿಯಲಿಲ್ಲ.
ಕಾಂಗ್ರೆಸ್ ನಾಯಕರು ಭಾ.ಜ.ಪ.ದ ಕಛೇರಿಯ ಮುಂದೆ ಬರುವ ತನಕ ಅತ್ತಕಡೆ ಗಮನ ಹರಿಸದಿದ್ದುದು.
ಯಡಿಯೂರಪ್ಪನವರ ಪ್ರಾಮಾಣಿಕ ಪ್ರಯತ್ನವನ್ನು ರೈತರಿಗೆ ವಿವರಿಸುವಲ್ಲಿ ಪಕ್ಷ ಎಡವಿತು.
ಯಡಿಯ್ಯೂರಪ್ಪನವರೆ ನಿಭಾಯಿಸಲಿ ಎಂದು ಕುಳಿತ ಪಕ್ಷದ ಇತರೆ ನಾಯಕರು.
ಸಂಪೂರ್ಣ ಜವಬ್ಧಾರಿ ಮರೆತ ಬೆಂಗಳೂರು ಭಾ.ಜ.ಪ.ದ ಚುನಾಯಿತ ಪ್ರತಿನಿಧಿಗಳು.
ಇದೆಲ್ಲದರಿಂದ ಬೇಸತ್ತ ರೈತನಾಯಕರು ಉತ್ತರಕರ್ನಾಟಕ ಬಂದ್ ಘೋಷಿಸಿದರು. ಜೊತೆಗೆ ಬೆಂಗಳೂರಿನಲ್ಲಿ ವಿವಿಧ ಮುಖಂಡರ ಭೇಟಿ, ರಾಜ್ಯಪಾಲರ ಭೇಟಿ, ಚುನಾವಣೆ ಆಯೋಗದ ಭೇಟಿ, ಪಾದಯಾತ್ರೆ ಹಮ್ಮಿಕೊಂಡರು. ಅವರು ಅಂದುಕೊಂಡಂತೆ ಅವರ ಮನವಿಯನ್ನು ರಾಜ್ಯಪಾಲರ ಬಳಿ, ಮುಖ್ಯಮಂತ್ರಿಗಳ ಬಳಿ, ಮಾಜಿ ಪ್ರಧಾನಿ ದೇವೆಗೌಡರ ಬಳಿ ತೆಗೆದುಕೊಂಡು ಹೋದರು. ಆದರೆ ಅವರ್ಯಾರು ಅವರ ಕೈಗೆ ಸಿಗಲೇ ಇಲ್ಲ. ಮನವಿಯನ್ನು ಅವರವರ ಕಾರ್ಯದರ್ಶಿಗಳಿಗೆ ಕೊಟ್ಟುಬಂದರು. ಮುಖ್ಯಮಂತ್ರಿಗಳಿಗೆ ಅವರ ಸಧಾನ ಸಮಾವೇಷವೇ ರೈತರ ಸಮಸ್ಯೆಗಿಂತ ದೊಡ್ಡದಿತ್ತು. ರಾಜ್ಯಪಾಲರಿಗೆ ಪೂರ್ವಅನುಮತಿ ಇಲ್ಲದೆ ಬೇಟಿಮಾಡಲು ಆಗಲ್ಲ. ಮಾಜಿ ಪ್ರಧಾನಿಗಳು ತಮ್ಮ ಕರ್ತವ್ಯದಂತೆ ಸಂಸದ್ ಕಲಾಪಕ್ಕೆ ಹೋಗಿದ್ದರು ಅವರನ್ನು ದೂರುವ ಹಾಗಿಲ್ಲ.
ಇಂದಿನ ತಂತ್ರಜ್ಞಾನದಲ್ಲಿ ಅಮೇರಿಕದ ಮೂಗ ಇಂಗ್ಲೆಂಡಿನ ಕಿವುಡನ ಜೊತೆಗೆ ಐದು ನಿಮಿಷದಲ್ಲಿ ಮಾತನಾಡುತ್ತಾನೆ. ಅಂತಹದರಲ್ಲಿ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಅಕ್ಕ ಪಕ್ಕದ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಆಗುವುದಿಲ್ಲವೆಂದರೆ ಅದು ಅವರ ನಿರ್ಲಕ್ಷತನ, ಮೊಂಡುತನ, ಆಲಸ್ಯವನ್ನು ತೋರುತ್ತದೆ. ನೀರು ಬೇಕಾಗಿರುವುದು ನಮಗೆ ನಾವು ಅವರ ಮುಂದೆ ಮಂಡಿಯೂರಿಯಾದರು ಕೇಳಬೇಕು. ಕೇಳುವವರು ಧಿಮಾಕು ತೋರಿಸಿದರೆ ಕೊಡುವವರು ಕೊಡುತ್ತಾರೆಯೇ?? ಒಂದು ರಾಜ್ಯದ ಮುಖ್ಯಮಂತ್ರಿಗೆ ಮೂರು ವರ್ಷ ಬೇಕೆ ಪಕ್ಕದ ರಾಜ್ಯದ ಮುಖ್ಯಮಂತ್ರಿಗೆ ಮಾತನಾಡಲು?? ಇತರೆ ಪಕ್ಷದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಆಸಕ್ತಿ ಇಲ್ಲದಿದ್ದರೆ ಕಡೇ ಪಕ್ಷ ಮಹಾದಾಯಿ ಟ್ರಿಬ್ಯುನಲ್ ಮೇಲಾದರು ಒತ್ತಡ ಹಾಕಿ ತೀರ್ಪನ್ನು ಬೇಗ ಕೊಡುವಂತೆ ಮಾಡಬಹುದಿತ್ತು. ಅದನ್ನು ಮಾಡಲಿಲ್ಲ. ಮಾನ್ಯ ಪ್ರಧಾನಿಯವರನ್ನು ಮಧ್ಯಸ್ತಿಕೆ ವಹಿಸಲಿ ಎಂದು ಅವರಮೇಲೆ ಗೂಬೆ ಕೂರಿಸುತ್ತಾ ಬಂದರು.
ಆದರೆ ಭಾ.ಜ.ಪ. ಸಮಸ್ಯೆ ಬಗೆಹರಿಸಲು ಒಂದು ಹೆಜ್ಜೆ ಮುಂದೆ ಬಂದಾಗ ಇಡೀ ಪ್ರಕರಣವನ್ನು ಒಬ್ಬ ಮುಖ್ಯಮಂತ್ರಿಯಾಗಿ ರಾಜಕೀಯಗೊಳಿಸಿ ಸಮಸ್ಯೆಯನ್ನು ಮತ್ತಷ್ಟು ಬಿಗಿಮಾಡಿದಿರಿ? ಇದೇನಾ ಸ್ವಾಮಿ ನಿಮ್ಮ ಸಾಧನಾ ಸಮಾವೇಶದ ಸಂದೇಶ?? ನಿಮ್ಮ ಈ ರಾಜಕಾರಣದ ಕೆಸರೆರಚಾಟದಲ್ಲಿ ಉತ್ತರ ಸಿಗದೆ ಕುಳಿತ್ತಿದ್ದಾರೆ ಉತ್ತರಕರ್ನಾಟಕ ಜನ! ರಾಜಕಾರಣ ಬಿಟ್ಟು ಎಲ್ಲಾ ಪಕ್ಷದವರು ರಾಜ್ಯದ ಹಿತಕ್ಕಾಗಿ ಒಮ್ಮೆ ಹೋರಾಡಿ ನಮಗೆ ನ್ಯಾಯ ದೊರಕಿಸಲಿ ಎಂಬುದಷ್ಟೆ ನಮ್ಮ ಆಶಯ.
ಪುನೀತ್.ಜಿ.ಕೂಡ್ಲೂರು.
Facebook ಕಾಮೆಂಟ್ಸ್