X

ವೈಭವದ ಉತ್ಸವಗಳು ಬೇಕೆ??

ಹಬ್ಬ ಅಂದರೆ ಸಾಕು ನೂರಾರು ಕೆಲಸ. ಎಷ್ಟು ತಯಾರಿ ಮಾಡಿಕೊಂಡರೂ ಮುಗಿಯುವುದೇ ಇಲ್ಲ. ಹೀಗೆಯೇ ಹಬ್ಬದ ಕೆಲಸಗಳಲ್ಲಿ ಮಗ್ನಳಾಗಿದ್ದ ಅಮ್ಮನನ್ನು ಕರೆದುಕೊಂಡು ಬಂದು ಟಿ.ವಿ. ಮುಂದೆ ಕೂರಿಸಿ “ನೋಡು ಅಯೋಧ್ಯೆಯ ದೀಪಾವಳಿ” ಎಂದೆ. ಒಂದೂ ಮುಕ್ಕಾಲು ಲಕ್ಷಕ್ಕಿಂತಲೂ ಹೆಚ್ಚು ದೀಪಗಳಿಂದ ಕಂಗೊಳಿಸುತ್ತಿದ್ದ ಅಯೋಧ್ಯೆ, ಸರಯೂ ಆರತಿ, ಲೇಸರ್ ಶೋ ಇದನ್ನೆಲ್ಲಾ ನೋಡಿ “ಎಷ್ಟು ಚನ್ನಾಗಿದೆ ಇದೆಲ್ಲ..” ಎಂದು ಕಣ್ಣು ತುಂಬಿ ಹೇಳಿ, “ಒಂದು ಸಲ ಅಯೋಧ್ಯೆಗೆ ಹೋಗಬೇಕು ಅಲ್ವಾ?” ಎಂದಿದ್ದಳು. ಈ ಉತ್ಸವಗಳೆಂದರೇನೆ ಒಂದು ರೀತಿಯ ಉತ್ಸಾಹ. ಅದೇನೋ ಭಾವನಾತ್ಮಕವಾಗಿ ನಮ್ಮನ್ನ ನಾವು ಅದರಲ್ಲಿ ಜೋಡಿಸಿಕೊಂಡು ಬಿಡುತ್ತೇವೆ. ಈ ಬಾರಿಯ ದೀಪಾವಳಿಗೆ ಇನ್ನಷ್ಟು ಉತ್ಸಾಹ ತುಂಬಿದ್ದು ಅಯೋಧ್ಯೆಯ ದೀಪಾವಳಿ!

ಈ ಉತ್ಸವಗಳು, ಅದನ್ನು ಹತ್ತಿರದಿಂದ ನೋಡಿದಾಗ, ಅದರಲ್ಲಿ ಭಾಗಿಯಾದಾಗ ಆಗುವ ಅನುಭವಗಳು ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿ ಬಿಟ್ಟಿರುತ್ತದೆ. ನಮಗೆ ಹತ್ತಿರದಲ್ಲಿ ನಡೆದ ದೊಡ್ಡ ಉತ್ಸವ ಎಂದರೆ ಅದು ರಾಮಚಂದ್ರಾಪುರಮಠದಲ್ಲಿ ನಡೆದ ‘ರಾಮಸತ್ರ’ ಮತ್ತು ‘ವಿಶ್ವ ಗೋಸಮ್ಮೇಳನ’. ಇದೆಲ್ಲ ನಡೆದಾಗ ನನಗೆ ತುಂಬಾ ತಿಳುವಳಿಕೆ ಏನೂ ಇರಲಿಲ್ಲ. ಆದರೆ ಆ ಉತ್ಸವಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ರಾತ್ರಿಯಿಡಿ ನಿದ್ದೆಗೆಟ್ಟು ಪಬ್’ನಲ್ಲಿ ಪಾರ್ಟಿ ಮಾಡುವವರಿಗೆ ಎಷ್ಟು ಖುಷಿಯಾಗುತ್ತದೋ ಗೊತ್ತಿಲ್ಲ, ಆದರೆ ಅಂದು ಆ ಉತ್ಸವದಲ್ಲಿ ರಾತ್ರಿಯಿಡಿ ನಿದ್ದೆಗೆಟ್ಟು ಅಖಂಡ ಭಜನೆಯಲ್ಲಿ ಭಾಗಿಯಾಗಿದ್ದಾಗ ಮಾತ್ರ ಅತ್ಯಂತ ಸಂತಸ ಮತ್ತು ಹೆಮ್ಮೆ ಎನಿಸಿದ್ದಂತು ನಿಜ. ಅಲ್ಲಿ ಬಂದಿದ್ದ ಉತ್ತರದ ಕಡೆಯ ಸಂತರನ್ನು ನೋಡಿದಾಗ ರೋಮಾಂಚನವಾಗುತ್ತಿದ್ದದ್ದು ನಿಜ. ವಿಶ್ವ ಗೋ ಸಮ್ಮೇಳನದಲ್ಲಿ ಸಂದರ್ಭದಲ್ಲಂತೂ ಬೃಂದಾವನ ಬಹುಶಃ ಹೀಗೆ ಇತ್ತೇನೋ ಎನ್ನುವಂತಹ ಅನುಭವ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಮೇಲೆ ಗರ್ವ ಉಂಟಾಗುವುದು ಇಂತಹ ಸಂದರ್ಭಗಳಲ್ಲೇ!

ಇವೆಲ್ಲ ಕೆಲಸಕ್ಕೆ ಬಾರದ ಆಚರಣೆಗಳು, ದುಂದುವೆಚ್ಚ ಎನ್ನುವವರಿಗೆ ಇಂತಹ ಉತ್ಸವಗಳು ನಿಜವಾಗಿಯೂ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದು ಅರ್ಥವಾಗುವುದೇ ಇಲ್ಲ. ಅದರಲ್ಲೂ ಎಳೆಯ ಮನಸ್ಸುಗಳ ಮೇಲೆ. ಒಂದು ಸಣ್ಣ ಉದಾಹರಣೆ. ಈಗೊಂದು ಆರೇಳು ವರ್ಷಗಳ ಹಿಂದಿನ ಮಾತು, ರಾಮೋತ್ಸವದಲ್ಲಿ ನಡೆದ ವೈಭವದ ರಾಮಕಥೆಯನ್ನು ನೋಡಲು ಹೋಗಿದ್ದಳು ನನ್ನ ತಂಗಿ. ಆಗಿನ್ನೂ ಅವಳು ೬ ಅಥವಾ ೭ ತರಗತಿಯಲ್ಲಿದ್ದಿರಬಹುದು. ನೋಡಿ ವಾಪಾಸ್ಸಾಗಿ ಮನೆಗೆ ಕಾಲಿಡುತ್ತಿದ್ದಂತೆಯೇ ನಮ್ಮೆಲ್ಲರಿಗೆ ರಾಮಕಥೆಯನ್ನು ವರ್ಣಿಸಲು ಶುರುವಿಟ್ಟುಕೊಂಡಿದ್ದಳು.. ಸುಮಾರು ಅರ್ಧಗಂಟೆ ಆ ಕಾರ್ಯಕ್ರಮವನ್ನು ಉತ್ಸಾಹದಿಂದ ವಿವರಿಸಿ ಕೊನೆಯಲ್ಲಿ, “ಅಕ್ಕ.. ನಾನು ರಾಮಾಯಣ ಓದಬೇಕು” ಎಂದಿದ್ದಳು. ಅಲ್ಲಿಯ ತನಕ ಶಾಲೆಯ ಪುಸ್ತಕವನ್ನು ಬಿಟ್ಟು ಬೇರೆ ಪುಸ್ತಕವನ್ನು ಓದಿದ ದಾಖಲೆ ಇರಲಿಲ್ಲ. ಓದು ಎಂದು ನಾವು ಹೇಳಿದ್ದರೂ, “ಅದನ್ನೆಲ್ಲಾ ಯಾರು ಓದುತ್ತಾರೆ..ಬೋರ್” ಎನ್ನುತ್ತಿದ್ದಳು. ಆದರೆ ಅಂದು ಮಾತ್ರ ಬರುವಾಗಲೇ ನಿರ್ಧರಿಸಿಕೊಂಡು ಬಂದಂತ್ತಿದ್ದಳು. ಸುಮಾರು ಮುನ್ನೂರು ನಾನೂರು ಪುಟಗಳ ರಾಮಾಯಣವನ್ನು ಇವಳು ನಿಜವಾಗಿಯೂ ಓದುತ್ತಾಳ ಅನ್ನೋ ಸಂಶಯ ನಮಗಿದ್ದಿದ್ದಂತು ನಿಜ. ಆದರೆ ಅವಳು ಕೇವಲ ನಾಲ್ಕು ದಿನಗಳಲ್ಲಿ ಓದಿ ಮುಗಿಸಿದ್ದಳು. ಅಂದು ರಾಮಾಯಣದೊಂದಿಗೆ ಆರಂಭವಾದ ಪುಸ್ತಕ ಓದುವ ಹವ್ಯಾಸ ಇಂದು ಸದ್ಗುರುವಿನ ‘ಮಿಸ್ಟಿಕ್ಸ್ ಮ್ಯೂಸಿಂಗ್ಸ್’ವರೆಗೆ ಬಂದಿದೆ.

ಅಯೋಧ್ಯೆಯಲ್ಲಿ ನಡೆದ ದೀಪಾವಳಿ ಉತ್ಸವ ಕೂಡ ಅಂತಹದೇ ಪರಿಣಾಮ ಉಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಬನಾರಸ್’ನ ಹೋಳಿ, ಮಹಾರಾಷ್ಟ್ರದ ‘ದಹಿಹಾಂಡಿ’ ಎಷ್ಟು ಪ್ರಸಿದ್ಧವೋ ಅದೇ ರೀತಿಯಲ್ಲಿ ಅಯೋಧ್ಯೆಯಲ್ಲಿ ಕೂಡ ಪ್ರತಿವರ್ಷ ದೀಪಾವಳಿ ವಿಜೃಂಬಣೆಯಿಂದ ಆಚರಿಸುವ ಯೋಜನೆ ಇದೆ. ಈಗಾಗಲೇ ಒಂದೂ ಮುಕ್ಕಾಲು ಲಕ್ಷ ದೀಪ ಹಚ್ಚಿದ್ದು ಗಿನ್ನಿಸ್ ರೆಕಾರ್ಡ್ ಆಗಿದೆ. ಅಲ್ಲದೇ ಇಂಡೋನೇಶಿಯಾದ ಮುಸಲ್ಮಾನ ಕಲಾವಿದರುಗಳಿಂದ ನಡೆಸಿದ ವಿಶಿಷ್ಟ ‘ರಾಮಲೀಲಾ’ ಕೂಡ ವಿಭಿನ್ನವಾಗಿತ್ತು. ಹಾಗಂತ ಆ ಅಂಶ ನಮ್ಮ ಸೆಕ್ಯುಲರ್’ಗಳಿಗೆ ಸಂತಸವನ್ನುಂಟು ಮಾಡಿರುತ್ತದೆ ಅಂತೇನಲ್ಲ. ಅದೇನೆ ಇರಲಿ, ಅಯೋಧ್ಯೆ ಎಂದರೆ ಕೇವಲ ವಿವಾದಕ್ಕೆ ಸೀಮಿತ ಎನ್ನುವಂತಾಗಿದ್ದು ಇನ್ನು ಮುಂದೆ ಬದಲಾಗಬಹುದು ಎನ್ನುವ ಸೂಚನೆಯಂತೂ ಸಿಗುತ್ತಿದೆ.

ಈ ದೀಪಾವಳಿ ಉತ್ಸವಕ್ಕೂ ಮುನ್ನ ಜೀ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು, “ಅಯೋಧ್ಯೆಯಲ್ಲಿ ಇಂತಹ ಉತ್ಸವಗಳು ಬೇಕಾ?” ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಅವರು ಉತ್ತರ ನೀಡುತ್ತ, “ಅಯೋಧ್ಯೆ ಒಂದು ವಿಸ್ತೃತವಾದ ಹಾಗೂ ವೈಭವಯುತವಾದ ನಗರಿಯಾಗಿತ್ತು. ಕ್ರಮೇಣ ಅದು ತನ್ನ ಕಳೆಯನ್ನು ಕಳೆದುಕೊಂಡಿದೆ. ಅಯೋಧ್ಯೆಯ ಆ ವೈಭವವನ್ನು ಪುನಃ ಸ್ಥಾಪಿಸುವುದು ಇದರ ಉದ್ದೇಶ” ಎಂದಿದ್ದರು. ಹಲವರು ಇದನ್ನು ರಾಜಕೀಯ ಪ್ರೇರಿತವಾಗಿದ್ದು ಎನ್ನುವವರು ಇದ್ದಾರೆ. ಇದರಿಂದ ರಾಜಕೀಯವಗಿ ಲಾಭ ಆದರೂ ಆಗಬಹುದು. ಆದರೆ ಯೋಗಿ ಆದಿತ್ಯನಾಥ್ ಅವರು ಹೇಳಿದ ಮಾತುಗಳನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರತಿಬಾರಿ ಮೀಡಿಯಾಗಳಲ್ಲಿ ಅಯೋಧ್ಯೆಯ ಹೆಸರು ಕೇಳಿ ಬರುವುದು ವಿವಾದದ ವಿಷಯಕ್ಕೇ! ಮೊದಲ ಬಾರಿ, ವಿವಾದದ ಹೊರತಾಗಿ ಅಯೋಧ್ಯೆಯ ಹೆಸರು ಈ ವೈಭವಯುತ ದೀಪಾವಳಿ ಉತ್ಸವಕ್ಕೆ ಕೇಳಿ ಬಂದಿದೆ.

ಇಂತಹ ಉತ್ಸವಗಳಿಗೆ ಖರ್ಚು ಮಾಡುವುದು ದುಂದುವೆಚ್ಚವಲ್ಲವೇ ಎಂದು ಪ್ರಶ್ನಿಸುವವರಿದ್ದಾರೆ? ವೆಚ್ಚವಾಗುವುದು ನಿಜ, ಅದರ ಜೊತೆಗೆ ಇಂತಹ ಉತ್ಸವಗಳು ಭಾವನಾತ್ಮಕವಾಗಿ ಸಾಕಷ್ಟು ಪರಿಣಾಮ ಬೀರುವುದೂ ಕೂಡ ಅಷ್ಟೇ ನಿಜ. ದುಂದುವೆಚ್ಚ ಎನ್ನುವುದನ್ನು ನೋಡುವುದಾದರೆ, ಎಲ್ಲದರಲ್ಲಿಯೂ ನೋಡಬೇಕಾಗುತ್ತದೆ,  ನಾವು ನಮ್ಮ ಒಣಪ್ರತಿಷ್ಠೆಗಾಗಿ ಎಷ್ಟು ಖರ್ಚು ಮಾಡುತ್ತಿದ್ದೇವೆ ಎನ್ನುವುದನ್ನೂ ನೋಡಿಕೊಳ್ಳುವುದು ಒಳ್ಳೆಯದು.

ಇದಲ್ಲದೇ ಅಯೋಧ್ಯೆಯಲ್ಲಿ  ಬೃಹತ್ತಾದ ರಾಮನ ಮೂರ್ತಿ ಹಾಗೂ ರಾಮಕಥಾ ಗ್ಯಾಲರಿ ಮಾಡುವ ಯೋಜನೆಯೂ ಇದೆ. ಉತ್ತರಪ್ರದೇಶದಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳೇ ಸಾಕಷ್ಟಿರುವಾಗ ಇದೆಲ್ಲ ಯಾಕೆ? ಎನ್ನುವವರಿದ್ದಾರೆ. ದೊಡ್ಡದಾದ ಮೂರ್ತಿಯನ್ನು ಮಾಡಿದಾಕ್ಷಣ ಭಕ್ತಿ ಹೆಚ್ಚಾಗುತ್ತದೆಯಾ? ಎಂದು ಕೇಳವವರೂ ಇದ್ದಾರೆ. ಖಂಡಿತವಾಗಿಯೂ ಇಲ್ಲ. ಅದಕ್ಕೆ ಸರಳ ಉತ್ತರ, ಇದು ಒಂದು ರೀತಿಯ ಇನ್ವೆಸ್ಟ್’ಮೆಂಟ್, ಪ್ರವಾಸೋದ್ಯಮ ಹೆಚ್ಚಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಧಾರ ಎನ್ನುವುದು. ಅದಲ್ಲದೇ ರಾಮನ ವ್ಯಕ್ತಿತ್ವವನ್ನು ಸಾರುವಂತಹ ಒಂದು ಗ್ಯಾಲರಿ, ರಾಮನ ಜನ್ಮ ಭೂಮಿಯಲ್ಲಿ ಇರುವುದು ಅವಶ್ಯಕವಲ್ಲವೇ?

ಅದೇನೆ ಇರಲಿ, ಅಯೋಧ್ಯೆಯಲ್ಲಿ ನಡೆದ ಈ ದೀಪಾವಳಿಯ ಉತ್ಸವ ಹಲವರಲ್ಲಿ ಉತ್ಸಾಹ ಹೆಚ್ಚಿಸಿ, ಹೊಸ ಆಶಯಗಳನ್ನು ಹುಟ್ಟು ಹಾಕಿದ್ದಂತು ನಿಜ. ನಮ್ಮಲ್ಲಿ ಎಷ್ಟೋ ಜನ ಅಯೋಧ್ಯೆಯಲ್ಲಿ ಇಲ್ಲದೇ ಇರಬಹುದು. ಆದರೆ ಟಿ.ವಿ.ಯಲ್ಲಿ ನೋಡಿದ ದೀಪಾವಳಿ ಉತ್ಸವ ನೋಡಿ, ಆನಂದಿಸಿ ಈ ಬಾರಿಯ ದೀಪಾವಳಿ ಅದ್ಭುತವಾಗಿತ್ತು ಎನ್ನುವರಿದ್ದಾರೆ. ರಾಮನ ವ್ಯಕ್ತಿತ್ವವನ್ನು ಸಾರುವ ಇಂತಹ ಉತ್ಸವಗಳು ಹಿಂದೂಗಳಲ್ಲಿ ಆಸ್ಥೆಯನ್ನು ಹೆಚ್ಚಿಸುವುದಂತೂ ನಿಜ, ಎಷ್ಟೋ ಎಳೆಯ ಮನಸ್ಸುಗಳಲ್ಲಿ ರಾಮನ ಆದರ್ಶವನ್ನು ಮೂಡಿಸುವಂತೆ ಕೂಡ ಆಗಬಹುದು. ಅದರ ಜೊತೆ ಜೊತೆಗೆ ಅನ್ಯಧರ್ಮೀಯರಲ್ಲಿ ಕೊನೆಯ ಪಕ್ಷ ರಾಮನಂತಹ ವ್ಯಕ್ತಿತ್ವದ ಕುರಿತು ಗೌರವ ಮೂಡಿಸಬಹುದೇನೋ ಎನ್ನುವ ಆಶಯವೂ ಹುಟ್ಟಿಕೊಂಡಿದೆ.

 

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post