ಮಂಕುತಿಮ್ಮನ ಕಗ್ಗ ೦೭೮.
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |
ಮೆರೆಯುವನು ಪರಬೊಮ್ಮ – ಮಂಕುತಿಮ್ಮ || ೦೭೮ ||
ಮುಕುರ – ಕನ್ನಡಿ
ವಿಲಸಿಪ – ವಿಲಾಸಪಡುವ
ಹದಿಹರೆಯದ, ಪ್ರಾಯಕ್ಕೆ ಬಂದ ತರುಣ ತರುಣಿಯರ ಕೆಲವು ಚರ್ಯೆಗಳನ್ನು ಗಮನಿಸಿದ್ದೀರಾ? ತಮ್ಮ ಮನಸಿಗೆ ಪ್ರಿಯವಾದ ಕೆಲಸದಲ್ಲಿ ಮಾತಿನಲ್ಲಿ ಹಿಡಿದಿಡಲಾಗದ ತನ್ಮಯತೆ, ತಲ್ಲೀನತೆ, ಪರವಶತೆ, ಆಪ್ತತೆ, ಆಪ್ಯಾಯತೆಗಳು ತಾನೇ ತಾನಾಗಿ ಕಾಣಿಸಿಕೊಂಡುಬಿಡುತ್ತವೆ. ಯಾರ ಒತ್ತಡವಿರದೆಯೂ, ಯಾರ ಮೇಲ್ವಿಚಾರಣೆ, ಪ್ರೇರಣೆ ಇರದೆಯೂ ತಂತಾನೆ ಆಯಾಚಿತವಾಗಿ ಅನಾವರಣಗೊಳ್ಳುವ ಚರ್ಯೆಗಳಿವು. ಈ ಪ್ರಕ್ರಿಯೆಯ ಒಂದು ಗಮನಾರ್ಹ ಅಂಶವೆಂದರೆ, ಇದರಲ್ಲಿ ತೊಡಗಿಕೊಂಡವರಿಗೆ ಸುತ್ತಮುತ್ತಲ ಪರಿವೆಯಾಗಲಿ, ಗೊಡವೆಯಾಗಲಿ ಇರದ ಅವರದೇ ಆದ ಪ್ರಪಂಚದಲ್ಲಿ ಮುಳುಗಿ ಹೋಗಿರುವುದು. ಒಂದೆಡೆ ಅದು ತೊಡಗಿಸಿಕೊಂಡ ಆಳದ ಸಂಕೇತವಾದರೆ ಕೆಲವೊಮ್ಮೆ ಅದು ಕಣ್ಮುಚ್ಚಿ ಹಾಲು ಕುಡಿವ ಬೆಕ್ಕಿನ ಚರ್ಯೆಯಂತೆಯೂ ಆಗಬಹುದು. ಅದೇನೆ ಇದ್ದರು ಆ ಹೊತ್ತಿನ ತಾದಾತ್ಮ್ಯಕತೆಯ ಭಾವ ಮಾತ್ರ ಅನನ್ಯ. ಬೇರೆಲ್ಲ ಮರೆತು ತಮ್ಮದೇ ಜಗದಲ್ಲಿ ವಿಹರಿಸುವ ಆ ಭಾವೈಕ್ಯತೆ ಅಸಾಧಾರಣ.
ಆ ರೀತಿಯ ಭಾವ ಪರವಶತೆಯನ್ನು ತನ್ನ ಕಾಯಕದಲ್ಲಿ ಅಳವಡಿಸಿಕೊಂಡು ವಿಶ್ವದ ನಿಭಾವಣೆಯಲ್ಲಿ ಮೈ ಮರೆತಿರುವನಂತೆ ಪರಬ್ರಹ್ಮ! ಅದನ್ನು ತನ್ನಂದಕೆ ತಾನೆ ಪರವಶಗೊಂಡ ತರುಣಿಯ ಉದಾಹರಣೆಯ ಮೂಲಕ ವಿವರಿಸುತಿದ್ದಾನಿಲ್ಲಿ ಮಂಕುತಿಮ್ಮ.
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||
ಇಲ್ಲಿ ತರುಣಿಯ ಎರಡು ಮುಖ್ಯ ಭಾವ ಪದರಗಳ ಚಿತ್ತಾರ ಬಿತ್ತರವಾಗಿರುವುದನ್ನು ಗಮನಿಸಬೇಕು. ತರುಣಿಗೆ ಆ ವಯಸಿನಲ್ಲಿ ಮುಖ್ಯವೆನಿಸುವ ವಿಷಯವೆಂದರೆ ತಾನು ಅಂದಚಂದದಿಂದ ಸುಂದರವಾಗಿ ಕಾಣುವುದು; ತನ್ಮೂಲಕ ತನ್ನ ಅಹಮಿಕೆಯನ್ನು ತೃಪ್ತಿಪಡಿಸಿಕೊಂಡು ಸಂತೃಪ್ತಿಯಿಂದ ಮೈಮರೆಯುವುದು. ಇದು ಮೊದಲ ಅಂಶವಾದರೆ ಅದರ ಪೂರೈಕೆಗೆ ಬಳಕೆಯಾಗುವ ಮಾಧ್ಯಮ ಎರಡನೆಯದು. ಅದು ಹೊಸ ಉಡುಗೆ ತೊಡುಗೆಯಾಗಬಹುದು, ಅಭರಣವಿರಬಹುದು, ಮುಡಿಗೆ ಮುಡಿಸುವ ಹೂವಿರಬಹುದು ಅಥವಾ ಮತ್ತಾವುದೋ ಶೃಂಗಾರ ಸಾಧನವಿರಬಹುದು – ಒಟ್ಟಾರೆ ಅವಳ ಅಹಮಿಕೆಯ ಪೂರೈಕೆಯ ತರ್ಕಕ್ಕೆ ಹೊಂದುವ ಯಾವ ಸರಕಾದರೂ ಆಗಿರಬಹುದು.
ಇಲ್ಲಿ, ತರುಣಿಯೊಬ್ಬಳು ತನ್ನಲ್ಲಿರುವ ಒಡವೆಗಳನ್ನೆಲ್ಲ ತನ್ನ ಮುಂದೆ ಹರವಿಕೊಂಡು ಕನ್ನಡಿಯ (ಮುಕುರದ) ಜೊತೆ ಕೂತುಬಿಟ್ಟಿದ್ದಾಳೆ. ಅವಳಿಗೋ ಆಗಾಧ, ಅದಮ್ಯ ಕುತೂಹಲ – ಯಾವ ಒಡವೆಯಲ್ಲಿ ತಾನು ಹೇಗೆ ಕಾಣಬಹುದೆಂದು. ಯಾವುದು ತನಗೆ ಹೆಚ್ಚು ಚಂದ ಕಾಣಬಹುದೆಂಬ ಪರಿಶೀಲನೆ ನಡೆಸಲು ತನ್ನಲ್ಲಿರುವ ಪ್ರತಿಯೊಂದು ಒಡವೆಯನ್ನು ಹಾಕಿಕೊಳ್ಳುತ್ತಾಳಂತೆ; ಮತ್ತದರ ಸೊಗಸನ್ನು ಕನ್ನಡಿಯಲ್ಲಿ ನೋಡಿಕೊಂಡು ಮೈಮರೆಯುತ್ತಾಳಂತೆ. ಹಾಗೆ ಪರೀಕ್ಷಾ ದೃಷ್ಟಿಯಿಂದ ನೋಡುತ್ತ ಎಲ್ಲೊ ತುಸು ಕುಂದಿರಬಹುದೆಂಬ ಅನುಮಾನದಲ್ಲಿ ತಾನು ತೊಟ್ಟಿದ್ದನ್ನ ತೆಗೆದಿಟ್ಟು ಮತ್ತೊಂದನ್ನು ಧರಿಸುತ್ತಾ ಆ ಕಾರ್ಯವನ್ನು ಮುಂದುವರೆಸುತ್ತಾಳಂತೆ. ಹೀಗೆ ತಳೆಯುತ್ತ ( ಧರಿಸುತ್ತಾ) ತೆಗೆಯುತ್ತ ( ಬಿಚ್ಚುತ್ತಾ) ಅದರ ಫಲಿತವನ್ನು ಕನ್ನಡಿಯ ಪ್ರತಿಬಿಂಬದಲ್ಲಿ ಪರಿಕಿಸುತ್ತ ಮೈಮರೆತು ಕೂತುಬಿಡುತ್ತಾಳಂತೆ ಮತ್ತಾವುದರ ಪರಿವೆಯೆ ಇಲ್ಲದವಳ ಹಾಗೆ – ಆ ಒಡವೆಯಲ್ಲಿ ಹೆಚ್ಚಿದ ತನ್ನ ಅಂದ ಚಂದ ಚೆಲುವಿಗೆ ತಾನೇ ಪರವಶಳಾದವಳಂತೆ ಮನಸೋಲುತ್ತ..
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |
ಮೆರೆಯುವನು ಪರಬೊಮ್ಮ – ಮಂಕುತಿಮ್ಮ ||
ಈ ವಿಶ್ವವನ್ನು ಸೃಜಿಸಿದ ಮತ್ತು ನಿಭಾಯಿಸುತ್ತಿರುವ ಪರಬೊಮ್ಮನ ಕಥೆಯೂ ಆ ತರುಣಿಯ ಪರಿಸ್ಥಿತಿಯ ಹಾಗೆ ಇದೆಯಂತೆ. ಇಲ್ಲವನಿಗೆ ತಳೆವ ತೆಗೆವ ಆಭರಣದ ಗೋಜಿಲ್ಲ. ಬದಲಿಗೆ ಅವನು ಸೃಜಿಸಿದ ಸೃಷ್ಟಿಯೆ ಅವನ ಆಭರಣವಿದ್ದಂತೆ. ಅದರ ವೈವಿಧ್ಯತೆಯ ಚಿತ್ತಾರಗಳನ್ನು ಪದೇಪದೇ ನೋಡುತ್ತಾ , (ಆ ತರುಣಿಯಂತೆ) ಮಿಕ್ಕ ಜಗವನ್ನೆಲ್ಲ ಮರೆತು ತನ್ನ ಸೃಷ್ಟಿ ಮಾಧುರ್ಯದಲ್ಲಿ ಮಗ್ನನಾಗಿ ಆ ವೈವಿಧ್ಯಮಯ ವಿಲಾಸದಲಿ ಆನಂದಿಸುತ್ತಿದ್ದಾನೆ – ಮಂತ್ರಮುಗ್ಧನಂತೆ. ಅದನ್ನು ‘ಹೀಗೆ ಮಾಡಿದರೆ ಚೆಂದ ಕಂಡೀತೆ? ಹಾಗೆ ಬದಲಿಸಿದರೆ ಹೆಚ್ಚು ಸೂಕ್ತವೆ? ಮತ್ತೊಂದು ರೀತಿಯಲಿಟ್ಟರೆ ಇನ್ನೂ ಚಂದವಾದೀತಾ?’ ಎಂದೆಲ್ಲಾ ಪ್ರಯೋಗಿಸಿ ನೋಡುತ್ತ ಪೂರ್ತಿ ಅದರಲ್ಲೆ ಮುಳುಗಿಹೋಗಿದ್ದಾನೆ. ಆ ಸೃಷ್ಟಿಯ ವೈವಿಧ್ಯತೆಯ ಕುಶಲತೆ, ಕುಸುರಿತನ ಅವನಲ್ಲಿ ತುಸು ವೃತ್ತಿಸಹಜ ಹೆಮ್ಮೆ, ಗರ್ವವನ್ನು ಮೂಡಿಸಿ ಆ ಲಹರಿಯಲ್ಲೆ ಮೆರೆಯುತ್ತ ತೇಲಾಡುವ ಹಾಗೆ ಮಾಡಿಬಿಟ್ಟಿದೆ…
ಈ ಅತೀವ ಚಟರೂಪದ ವೃತ್ತಿ-ಪ್ರವೃತ್ತಿ ಸಮ್ಮಿಳಿತ ಚರ್ಯೆಯ ಫಲಿತಗಳನ್ನು ಅನಂದಿಸುತ್ತ , ಅದರ ಲೀಲಾ ವಿಲಾಸಗಳನ್ನು ಆಸ್ವಾದಿಸುತ್ತ ಮಿಕ್ಕೆಲ್ಲದರ ಪರಿವೆಯಿಲ್ಲದ ತರುಣಿಯ ಹಾಗೆ ಕೂತುಬಿಟ್ಟ ವಿಶ್ವಚಿತ್ತದ ಕುರಿತಾದ ಮಂಕುತಿಮ್ಮನ ವಿಸ್ಮಯ ಈ ಕಗ್ಗದ ಸುಂದರ ಪದಗಳಾಗಿ ಮೂಡಿಬಂದಿವೆ. ಬೊಮ್ಮನ ಕಾಯಕವನ್ನು ಅದರ ತೀವ್ರಾಸಕ್ತತೆಯ ನಿರಂತರ ಕಸುವನ್ನು ಪ್ರತಿಯೊಬ್ಬರೂ ಊಹಿಸಿಕೊಳ್ಳಬಲ್ಲ ರೀತಿಯಲ್ಲಿ ತರುಣಿಯ ಭಾವನೆಯ ಸಂಕಿರ್ಣತೆಯಲ್ಲಿ ಕಟ್ಟಿಕೊಡುವ ಅದ್ಭುತ ಕಗ್ಗದ ಸಾಲುಗಳಿವು. ಹಾಗೆ ಮಾಡುತ್ತಲೇ ವೃತ್ತಿ ಧರ್ಮದಲ್ಲಿರಬಹುದಾದ ಪ್ರವೃತ್ತಿ ಸೂಕ್ಷ್ಮಗಳನ್ನು ನಮ್ಮರಿಗೆಟುಕುವ ಮಟ್ಟಿಗೆ ಗ್ರಹಿಸುವಂತೆ ಮಾಡುತ್ತದೆ.
#ಕಗ್ಗ_ಟಿಪ್ಪಣಿ
#ಕಗ್ಗಕೊಂದು ಹಗ್ಗ
Facebook ಕಾಮೆಂಟ್ಸ್