X

ಮತ ಖಾತ್ರಿಗಾಗಿ ಹೊರಟಿವೆ ರಥಯಾತ್ರೆಗಳು

ಬೇಸಿಗೆಯ ಕಾಲವೆಂದರೆ ಅದು ಜಾತ್ರೆಗಳ ಸೀಸನ್. ಜಾತ್ರೆಯ ವಿವಿಧ ಪ್ರಕ್ರಿಯೆಗಳಲ್ಲಿ ರಥೋತ್ಸವವೂ ಪ್ರಮುಖವಾದುದು. ಆದರೆ ಈ ಬಾರಿ ಮಾತ್ರ ಬೇಸಿಗೆಗೂ ಮುನ್ನವೇ, ಜಾತ್ರೆಗಳ ಆರಂಭಕ್ಕೂ ಮುಂಚಿತವಾಗಿಯೇ ತೇರುಗಳ ಬಗ್ಗೆ ಏರುಗತಿಯ ಚರ್ಚೆ ನಡೆಯುತ್ತಿದೆ. ರಥವನ್ನು ಸಜ್ಜುಗೊಳಿಸುವ ಸಿಂಗರಿಸುವ, ರಥ ಬೀದಿಯನ್ನು ನಿಶ್ಚಯಿಸುವ ಕೆಲಸಗಳು ಬಿರುಸಿನಿಂದ ನಡೆಯುತ್ತಿದ್ದು ಆ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಆದರೆ ಅದು ಜಾತ್ರೆಯ ರಥೋತ್ಸವದ ಬಗ್ಗೆಯಲ್ಲಾ. ರಥಯಾತ್ರೆಯೆನ್ನುವ ಅಧಿಕಾರದ ಸಾರಥ್ಯ ಹಿಡಿಯುವ, ನಮ್ಮ ರಾಜಕಾರಣಿಗಳು ಅನುಸರಿಸುವ ತಂತ್ರವೊಂದರ ಬಗ್ಗೆ. ಏಕೆಂದರೆ ಇದು, ಚುನಾವಣಾ ಪರ್ವ. ಇದರಲ್ಲೊಂದು ಬಹುಮುಖ್ಯವಾದ ವ್ಯತ್ಯಾಸವಿದೆ. ರಥೋತ್ಸವವನ್ನು ಕೈಗೊಳ್ಳುವ ಪ್ರಮುಖರು ಸಾಮಾನ್ಯವಾಗಿ ವ್ರತ ನಿಷ್ಠರಾಗಿರುತ್ತಾರೆ. ಆದರೆ ನಿಷ್ಠೆಯನ್ನು ನಿಕೃಷ್ಟವಾಗಿ ಕಂಡು ಸಿಕ್ಕ ಅವಕಾಶಗಳಲ್ಲಿ ವೃಥಾ ಗೊಂದಲ ಸೃಷ್ಟಿಸಿಕೊಂಡು ಎಲ್ಲಿ ಅಧಿಕಾರ ಗೋಥಾ ಆಗುತ್ತದೋ ಎಂಬ ಭಯದಲ್ಲಿ ಸಿಕ್ಕಿ ಒದ್ದಾಡುವ ರಾಜಕಾರಣಿಗಳು ಮಾತ್ರ ಇಂಥ ಯಾತ್ರೆಗಳನ್ನು ಕೈಗೊಳ್ಳಲು ಓಡಾಡುತ್ತಾರೆ.

ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪೌರಾಣಿಕವಾಗಿ ಪ್ರಾಧಾನ್ಯತೆಯನ್ನು ಗಳಿಸಿರುವ ರಥ ರಾಜಕೀಯ ಮನ್ನಣೆಯನ್ನೂ ಗಳಿಸಿರುವುದು ಈಗ್ಗೆ ಕೆಲವು ವರ್ಷಗಳಿಂದೀಚೆಗೆ. ಅಧಿಕಾರಕ್ಕಾಗಿ ತರಹೇವಾರಿ ತಂತ್ರಗಳನ್ನು, ಪಟ್ಟಕ್ಕಾಗಿ ಬಗೆಬಗೆಯ ಪಟ್ಟುಗಳನ್ನು ಹೂಡುವವರ ಬತ್ತಳಿಕೆಯಲ್ಲಿ ಈ ರಥಯಾತ್ರೆಯೂ ಸೇರಿಕೊಂಡಿದೆ. ಅಧಿಕಾರದಲ್ಲಿರುವಷ್ಟೂ ದಿನವೂ ತಲೆತಗ್ಗಿಸುವಂತಹ ಕೆಲಸಗಳನ್ನು ಮಾಡಿಕೊಂಡಿರುವವರು ಕೊನೆಗೆ ಜನರು ತಮ್ಮತ್ತ ತಲೆಯೆತ್ತಿ ನೋಡುವಂತೆ ಮಾಡಲೋಸುಗವೇನೋ ಎಂಬಂತೆ ಈ ರಥಯಾತ್ರೆಗಳನ್ನು ಆಯೋಜಿಸುತ್ತಾರೆ. ಹಿಂದೆಲ್ಲಾ ಅಧಿಕಾರದ ಗದ್ದುಗೆ ಏರಬೇಕಾದರೆ ಅವಿರತವಾಗಿ ಶ್ರಮಿಸಬೇಕು ಎಂಬ ಮೌಲ್ಯಯುತ ಯೋಚನೆ ರಾಜಕಾರಣಿಗಳಲ್ಲಿತ್ತು. ಆದರೆ ಈಗ ಕೊನೇ ಕ್ಷಣದಲ್ಲಿ ರಥವನ್ನು ಏರಿಯೂ ಅದನ್ನು ಸಾಧಿಸಬಹುದೆನ್ನುವುದನ್ನು ರಾಜಕಾರಣಿಗಳು ಕಂಡುಕೊಂಡಿದ್ದಾರೆ. ಜನರೂ ಕೂಡಾ ಅದಕ್ಕೆ ಬಲಿಬೀಳುತ್ತಿದ್ದಾರೆ ಎನ್ನುವುದು ನಿಜಕ್ಕೂ ಆತಂಕದ ಸಂಗತಿ.

ಚುನಾವಣೆಯನ್ನು ಎದುರಿಸುವುದೆಂದರೆ ಅಕ್ಷರಶಃ ರಣರಂಗದಲ್ಲಿ ಎದುರಾಳಿಯ ಜೊತೆಗೆ ಕಾದಾಡಿದಂತೆಯೇ ಸರಿ. ಹಾಗಾಗಿಯೇ ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಹೇಳುವಾಗ ರಣೋತ್ಸಾಹ ಎಂಬ ಪದವನ್ನು ಬಳಸಲಾಗುತ್ತಿತ್ತು. ಇನ್ನುಮುಂದೆ ಅದನ್ನು ಬೇಕಾದರೆ ‘ರಥೋತ್ಸಾಹ’ ಎಂದೇ  ಬದಲಾಯಿಸಬಹುದು. ಅಷ್ಟೊಂದು ರಥ ಯಾತ್ರೆಗಳು ನಡೆಯುತ್ತಿರುತ್ತವೆ.  ಲೂಟಿ ಹೊಡೆದ ದುಡ್ಡಿನಿಂದ ಹೀಗೆ ಕೋಟಿ ಕೋಟಿ ಸುರಿದು ಅಧಿಕಾರದ ಮುಂದಿನ ಕೋಟಾವನ್ನು ಹೇಗಾದರೂ ಪಡೆದೇ ತೀರಬೇಕೆಂದು ಹಟತೊಟ್ಟು ನಿಲ್ಲುತ್ತಾರೆ. ಹೀಗೆ ಜನಜಾತ್ರೆಯನ್ನು ಸೇರಿಸಿ ಯಾತ್ರೆ ಮಾಡಿದ ಮಾತ್ರಕ್ಕೆ ಉತ್ತಮ ಆಡಳಿತ ನೀಡಬಲ್ಲರೆಂಬ ಯಾವುದೇ ಖಾತ್ರಿಯೂ ಜನರಲ್ಲಿ ಮೂಡುವುದಿಲ್ಲ. ನೀಡಿದ ಅವಧಿಯಲ್ಲಿ ಉತ್ತಮ ಹಾಗೂ ಜನಪರ ಆಡಳಿತ ನೀಡಿ ಜನರ ಮನಸ್ಸು ಗೆಲ್ಲುವುದನ್ನು ಬಿಟ್ಟು ಕುರ್ಚಿಗೆ ಸಂಚಕಾರ ಬಂದಾಗ ಹೇರಳವಾಗಿ ಖರ್ಚು ಮಾಡಿ ಆ ಯಾತ್ರೆ ಈ ಯಾತ್ರೆ ಎಂದು ಸಂಚಾರ ಮಾಡಿದರೆ ಅಧಿಕಾರ ಮರು ಸಂಚಯನಗೊಳ್ಳುವುದಿಲ್ಲ ಎನ್ನುವುದು ಯಾವಾಗ ಅರ್ಥವಾಗುತ್ತದೋ ಕಾಣೆ. ಒಂದನ್ನಂತೂ ನಾವು ನೆನಪಿಟ್ಟುಕೊಳ್ಳಲೇಬೇಕು. ಇಂದು ಯಾರೆಲ್ಲಾ ರಥ ಯಾತ್ರೆಯ ಮೂಲಕ ಮತ ಕೇಳಲು ಬರುತ್ತಿದ್ದಾರೋ ಅವರೆಲ್ಲಾ ಒಂದಿಲ್ಲೊಂದು ಸಂದರ್ಭದಲ್ಲಿ ದಕ್ಕಿದ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳದೇ ದೇಶ ಇಲ್ಲವೇ ರಾಜ್ಯದ ಅಭಿವೃದ್ಧಿಯ ಪಥವನ್ನು ದಿಕ್ಪಲ್ಲಟಗೊಳಿಸಿ ಜನರನ್ನು ಪತರುಗುಟ್ಟುವಂತೆ ಮಾಡಿದವರು. ಆದಾಗ್ಯೂ ತಾವು ಮಾತ್ರ ನಿತ್ಯವೂ ಸುಖದ ಪಲ್ಲಂಗದಲ್ಲಿ ಪವಡಿಸುವವರು.

ಅಧಿಕಾರದ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ಕಾರುಬಾರು ನಡೆಸಿ ಈಗ ಟಾರು ಕಿತ್ತುಹೋದ ರಸ್ತೆಯಲ್ಲಿ ತೇರು ಏರಿ ಊರೂರು ತಿರುಗುತ್ತಿದ್ದಾರೆ. ಓಟಿಗಾಗಿ ಆಶ್ವಾಸನೆಗಳನ್ನು ಮಾರುವವರ ಕುತಂತ್ರಕ್ಕೆ ಮಾರು ಹೋಗದೆ ಜನರು ಅಂತಹವರನ್ನು ಮಾರು ದೂರ ಓಡಿಸುವಂತಾದರಷ್ಟೇ ಜನತಂತ್ರ ಹಳ್ಳಕ್ಕೆ ಜಾರದೇ ಏರುಗತಿಯಲ್ಲಿ ಸಾಗಲು ಸಾಧ್ಯ. ನಾವು ದಾರಿ ಮಾಡಿಕೊಡಬೇಕಿರುವುದು ಜಾತ್ರೆಯ ರಥಕ್ಕೇ ಹೊರತು ಇವರ ಯಾತ್ರೆಗಳ ನಕಲಿ ರಥಗಳಿಗಲ್ಲ!

ಓವರ್ ಡೋಸ್: ರಥಯಾತ್ರೆ ಯಶಸ್ವಿಯಾದರೆ ಅಧಿಕಾರವೆಂಬ ಪ್ರಸಾದ, ವಿಫಲವಾದರೆ ಜೀವನದ ಸಂಧ್ಯಾಕಾಲದ ತೀರ್ಥಯಾತ್ರೆಗೆ ಹೊರಡಬೇಕಾದ ಅನಿವಾರ್ಯ ವೈರಾಗ್ಯದ ವಿಷಾದ.

 

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post