X

ವೈದ್ಯರ ನಿರ್ಲಕ್ಷಕ್ಕೆ ಶಿಕ್ಷೆಯೇನು ಹಾಗಾದ್ರೆ??

ಅನಂತಕುಮಾರ್ ಹೆಗಡೆ, ಸದ್ಯದ ಹಾಟ್ ಟ್ರೆಂಡಿಂಗ್ ವ್ಯಕ್ತಿ. ಬಯಸದೆ ಬಂದ ಭಾಗ್ಯ ಎಂಬಂತೆ ಸೆಪ್ಟೆಂಬರ್ ಮೂರರಂದು ಕೇಂದ್ರ ಸಚಿವರಾಗಿ ಅವರು ಅಧಿಕಾರ ಸ್ವೀಕರಿಸಿದರು. ಅದಾಗಿ ಮೂರು ದಿನದ ನಂತರ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆ.ಕೆ. ಅಗರವಾಲ್‌ ಪ್ರಧಾನಿ ಮೋದಿ ಅವರಿಗೊಂದು ಪತ್ರ ಬರೆದರು.  ವೈದ್ಯರ ಮೇಲಿನ ಹಲ್ಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಅನಂತಕುಮಾರ್‌ ಹೆಗಡೆ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದೇ ಆ ಪತ್ರದ ಮೂಲ ವಿಷಯ.

ಡಾ. ದಯಾನಂದ ಲಿಂಗೇಗೌಡರು ನಿನ್ನೆ  ಅಯ್ಯೋ ,ಕೆಂಪು ರತ್ನವೆಂದುಕೊಂಡಿದ್ದು ಸುಡುವ ಕೆಂಡವಾಯ್ತೆ!  ಎನ್ನುವ ಲೇಖನವನ್ನು ರೀಡೂ ಕನ್ನಡದಲ್ಲಿ ಬರೆದಿದ್ದರು. ಅದರಲ್ಲಿ ಅವರು  ಅನಂತಕುಮಾರ ಹೆಗಡೆ ಅವರು ವೈದ್ಯರ ಮೇಲೆ ದಾಳಿ ಮಾಡಿದ್ದರ ಬಗ್ಗೆ ಬರೆದಿದ್ದಾರೆ. ಅನಂತಕುಮಾರ್ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಮತ್ತು ಜೊತೆಗೆ ಜನರು ಆರಿಸಿ ಕಳಿಸಿರುವ ಜನಪ್ರತಿನಿಧಿ ಅವರು ಸ್ವಲ್ಪ ಎಡವಿದರೂ ಅದು ತಪ್ಪು. ಅನಂತಕುಮಾರ್ ಹೆಗಡೆ ವೈದ್ಯರ ಮೇಲೆ ಹಲ್ಲೆ ಮಾಡಿರುವುದು ತಪ್ಪು. ಇದನ್ನು ಖಂಡಿಸಲೇಬೇಕು. ಕಾನೂನನ್ನು ರೂಪಿಸುವ ಸ್ಥಾನದಲ್ಲಿರುವ ವ್ಯಕ್ತಿ ಕಾನೂನನ್ನು ಕೈಗೆತ್ತಿಕೊಂಡಿದ್ದು ಖಂಡಿತ ತಪ್ಪು. ಅನಂತಕುಮಾರ ಹೆಗಡೆ  ಅವರು ಮಾಡಿರುವ ಕೃತ್ಯವನ್ನು ಬೆಂಬಲಿಸುವ ಲೇಖನ ಇದಲ್ಲ. ಆದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ದೊರಕದೆ ಇದ್ದಾಗ ಮತ್ತು ಕಾಲ ಚಕ್ರದ ಸುಳಿಯೊಳಗೆ ಅವು ಕೊಚ್ಚಿಹೋದಾಗ  ಮತ್ತೆ ಆ ಪ್ರಶೆಗಳನ್ನು ಪ್ರಸ್ತುತಕ್ಕೆ ತರುವ ಕೆಲಸ ಮಾಡಲೇಬೇಕು ಅದನ್ನೇ ನಾನು ಈಗ ಮಾಡುತ್ತೇನೆ.

ದಾಳಿಯಾದ ಮೇಲೆ ನನ್ನೂರಿನಲ್ಲಿ ಅದರಲ್ಲೂ ಪ್ರಮುಖವಾಗಿ ಸಾಮಾನ್ಯರಲ್ಲಿ ಸಾಮಾನ್ಯರು ಒಂದಿಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಬಾಲಿಶ ಎನ್ನುವಂತಹ ಪ್ರಶ್ನೆಗಳಲಲ್ಲ. ಅನಂತಕುಮಾರ್ ಹೆಗಡೆ ಏಕಾಏಕೀ ಸುಖಾಸುಮ್ಮನೆ ವೈದ್ಯರ ಮೇಲೆ ದಾಳಿ ಮಾಡಿದರು ಎಂಬುದು ಆ ಲೇಖನದ ವಾದ. ಆದರೆ ಅಲ್ಲಿ ನಿಜಕ್ಕೂ ನಡೆದಿದ್ದೇನು? ಇದಕ್ಕೆ ಉತ್ತರ ದೊರೆಯಬೇಕೆಂದರೆ ಹಲ್ಲೆಗೊಳಗಾದ ವೈದ್ಯರುಗಳು ಒಂದು ದೂರನ್ನು ದಾಖಲಿಸಬಹುದಿತ್ತು, ಏಕೆ ವೈದ್ಯರು ದೂರು ದಾಖಲಿಸಲಿಲ್ಲ? ದಾಳಿಗೊಳಗಾದ ವ್ಯಕ್ತಿ ನೀಡುವ ದೂರಿಗೆ ಇರುವ ಮಹತ್ವ ಪೊಲೀಸರು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಳ್ಳುವ ದೂರಿಗೆ ಇರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಆ ಡಾಕ್ಟರ್ ಗೂ ಗೊತ್ತಿರುವಂತದ್ದೆ ಅಲ್ಲವಾ? ವೈದ್ಯರು ಆ ಸಮಯದಲ್ಲಿ ಆಪರೇಶನ್ ಮಾಡುತ್ತಿದ್ದರು ಎಂಬುದಕ್ಕೆ ಏನು ಸಾಕ್ಷಿ?

ಅನಂತಕುಮಾರ್ ಹೆಗಡೆಯವರ ತಾಯಿ ಅತ್ಯಂತ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ನಿರ್ದಿಷ್ಟ ಸಮಯದವರೆಗೆ ಅನಂತ ಹೆಗಡೆಯವರು ಕಾದರು ಎಂಬುದು ಅವರ ಬೆಂಬಲಿಗರ ಮತ್ತು ಪ್ರಮುಖವಾಗಿ ಪ್ರತ್ಯಕ್ಷದರ್ಶಿಗಳ ನೇರವಾದ. ಅದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ದಯಾನಂದ್ ಅವರೇ, ಒಂದು ವಿಷಯ ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಅನಂತಕುಮಾರ ಹೆಗಡೆಯವರನ್ನು ಈ ಘಟನೆಯ ವಿಷಯದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರು ಪ್ರಮುಖವಾಗಿ ಶಿರಸಿಯ ಜನ ಬೆಂಬಲಿಸಿಬಿಟ್ಟರು. ಕಾರಣ? ಒಬ್ಬ ಸಂಸದ ವೈದ್ಯರಿಗೆ ದಾಳಿ ಮಾಡಿದಾಗ ಸಾಮಾನ್ಯ ಜನ ಬೆಂಬಲಿಸುತ್ತಾರೆ ಎಂದರೆ ವಾಸ್ತವ ಬೇರೆ ಇನ್ನೇನೋ ಇದೆ ಎಂದರ್ಥವಲ್ಲವೇ? ಎಲ್ಲ ವೈದ್ಯರೂ ಹಣ ಪೀಕುವವರಂತೂ ಅಲ್ಲ. ಆದರೆ ಒಂದನ್ನು ನೀವು ನಂಬಬೇಕು, ಆ ಆಸ್ಪತ್ರೆಯ ವಿಷಯದಲ್ಲಿ ನಮ್ಮ ಶಿರಸಿಯ ಜನ ಕಠೋರವಾಗಿಬಿಟ್ಟಿದ್ದರು. ಕೊನೆಗೌಡನೊಬ್ಬ ಮರದಿಂದ ಕೆಳಗೆ ಬಿದ್ದು ಜೀವನ್ಮರಣದ ಹೋರಾಟದಲ್ಲಿ ಇರುವಾಗ ನೇರವಾಗಿ ಅಡ್ಮಿಟ್ ಮಾಡಿಕೊಳ್ಳದೆ ಸತಾಯಿಸಿದ್ದು ಇದೇ ಆಸ್ಪತ್ರೆಯವರು. ಕೊನೆಗೂ ಆತ ಬದುಕಲಿಲ್ಲ. ಮನೆಗೆ ಆಧಾರವಾಗಿದ್ದ ಆತನ ಉಸಿರು ಸ್ವಲ್ಪ ಸಮಯದಲ್ಲಿ ನಿಂತುಹೋಯಿತು. ಯಾರನ್ನು ದೂಷಿಸೋಣ? ಇದೇ ಆಸ್ಪತ್ರೆಯ ಮೇಲೆ ಇಂತಹ ಅನೇಕ ‘ಮೆಡಿಕಲ್ ನೆಗ್ಲಿಜೆನ್ಸ್’ ಆರೋಪ ಇದೆ. ಆದರೆ ಯಾರೂ ಯಾವತ್ತೂ ಕೇಸ್ ಹಾಕಲಿಲ್ಲ. ಕಳೆದುಕೊಂಡ ಜೀವದ ನೋವು ಒಂದು ಕಡೆಯಿದ್ದಾಗ ಕೋರ್ಟು ಕೇಸು ಎಂದು ಅಲೆಯಲು ಸಾಮಾನ್ಯರ್ಯಾರೂ ಬಯಸುವುದಿಲ್ಲ.

ಇನ್ನೊಬ್ಬರ ಆಪರೇಶನ್ ನಡೆಯುತ್ತಿರುವುದು ಗೊತ್ತಿದ್ದೂ ಸುಮ್ಮನೆ ಹೋಗಿ ವೈದ್ಯರ ಮೇಲೆ ಎರಗುವ ಗುಣ ಅನಂತರದ್ದಲ್ಲ. ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆದರೆ ಹೇಗೆ ಎರಡು ವರ್ಷಗಳ ಶಿಕ್ಷೆ ಇದೆಯೋ, ಅದೇ ರೀತಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದರೆ ಕಲಂ 202ರ ಪ್ರಕಾರ 7 ವರ್ಷಗಳ ಶಿಕ್ಷೆ ಎಂಬುದನ್ನು ವೈದ್ಯರು ಗಮನದಲ್ಲಿಟ್ಟುಕೊಂಡು ಮಾನವೀಯ ಮೌಲ್ಯಗಳನ್ನು ಆದರ್ಶವಾಗಿಟ್ಟುಕೊಂಡು ವೈದ್ಯ ವೃತ್ತಿಯ ಸೇವೆಯನ್ನು ಮಾಡಬೇಕು ಅಲ್ಲವಾ?  ದೇಶದಲ್ಲಿ ‘ಮೆಡಿಕಲ್ ನೆಗ್ಲಿಜೆನ್ಸ್’ ಕೇಸ್’ಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಅಂದರೆ ಜನ ಅವರ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ಮೆಡಿಕಲ್ ನೆಗ್ಲಿಜೆನ್ಸ್ ಆಧಾರದ ಮೇಲೆ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಶೇಕಡಾ 40-50% ಜಾಸ್ತಿ ಆಗಿದೆ. ಆದರೆ ಶೇಕಡಾ ಹತ್ತಕ್ಕಿಂತಲೂ ಕಡಿಮೆ ವೈದ್ಯರುಗಳು ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಎಷ್ಟೋ ದೂರುಗಳು ತನಿಖೆಯ ಕೊನೆಯ ಹಂತಕ್ಕೆ ಹೋಗಿ ಇನ್ನೂ ಕೊಳೆಯುತ್ತಿವೆ. ತಪ್ಪು ಮಾಡಿರುವ ವೈದ್ಯ ಒಪ್ಪಿಕೊಳ್ಳಲು ಹಿಂಜರಿಯುವುದೇಕೆ? ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ದೂರುಗಳನ್ನು ಪರಿಶೀಲಿಸಿ ಆ ವೈದ್ಯ ಅಪರಾಧಿಯಾಗಿದ್ದರೆ ಆತನ ಮೇಲೆ ‘ಗಿಲ್ಟೀ ಆಫ್ ನೆಗ್ಲಿಜೆನ್ಸ್’ ಎಂದು ಷರಾ ಬರೆಯಬೇಕಲ್ಲವ? ಅದನ್ನು ಸಂಸ್ಥೆ ಎಷ್ಟು ರಿಲೈಯಬಲ್ ಆಗಿ ನಡೆಸುತ್ತಿದೆ?

 ವೈದ್ಯರ ಮೇಲೆ ಹಲ್ಲೆಯಾದ ನಂತರ ಶಿರಸಿಯಲ್ಲಿ ಒಂದು ಸಂಘಟನೆ ಜೀವ ತಳೆಯಿತು. ಅದೇ ತಾಲೂಕು ಜಾಗೃತ ಸಮಾಜ ವೇದಿಕೆ. ಈ ಸಂಘಟನೆಯಲ್ಲಿ ಯಾರೂ ರಾಜಕೀಯದ ಪುಡಾರಿಗಳಿರಲಿಲ್ಲ. ಬದಲಾಗಿ ಆಸ್ಪತ್ರೆಯ ವಿರುದ್ಧ ರೊಚ್ಚಿಗೆದ್ದಿದ್ದ ಎಷ್ಟೋ ಜನಸಾಮಾನ್ಯರು ಇದ್ದರು. ಮಂಗಳೂರಿನ ಕೆ. ಎಸ್. ಹೆಗಡೆ ಆಸ್ಪತ್ರೆಗೆ ಶಿರಸಿಯಿಂದ ದಿನವೂ ನೂರಾರು ಜನರು ಹೋಗುತ್ತಾರೆ ಅಂದರೆ ಶಿರಸಿಯ ಆಸ್ಪತ್ರೆಗಳಿಗೇನಾಗಿದೆ? ಈಗ ಮುಂದಿನ ದಿನಗಳಲ್ಲಿ ಅನಂತಕುಮಾರ ಹೆಗಡೆಯವರ ಮುಂದಾಳತ್ವದಲ್ಲಿಯೇ ಸಿರಸಿಯಲ್ಲಿ ಕೆ ಎಸ್ ಹೆಗಡೆ ಆಸ್ಪತ್ರೆಯ ಘಟಕವೊಂದನ್ನು ಸ್ಥಾಪಿಸುವ ಕಾರ್ಯ ಜೀವ ಪಡೆದಿದೆ. ಜನ ಬಯಸುತ್ತಿರುವುದೂ ಅದನ್ನೇ. ಅಷ್ಟಕ್ಕೂ ವೈದ್ಯರು ಅನಂತಕುಮಾರ ಹೆಗಡೆಯವರನ್ನು ಕಂಡು ಈ ಪರಿ ಉರಿದುಕೊಳ್ಳುವ ಅಗತ್ಯತೆ ಇತ್ತಾ?

ದೇವರ ಮೇಲೆ ನಂಬಿಕೆ ಇರುವ ಎಲ್ಲರೂ ದೇವರ ನಂತರ ಅತಿಯಾಗಿ ನಂಬಿರುವುದು ವೈದ್ಯರನ್ನು ಮಾತ್ರ. ವೈದ್ಯರನ್ನು ‘ಸೆಕೆಂಡ್ ಲೈಫ್ ಸೇವರ್ಸ್ ಆಫ್ಟರ್ ಗಾಡ್’ ಎಂದು ಸಾಮಾನ್ಯರು ಕರೆಯುತ್ತಾರೆ. ಆದರೆ ಜನಕ್ಕೆ ಬಳುವಳಿಯಾಗಿ ಏನು ಸಿಗುತ್ತಿದೆ?

ಈ ಮೆಡಿಕಲ್ ನೆಗ್ಲಿಜೆನ್ಸ್ ದೂರನ್ನು ದಾಖಲಿಸುವ ವ್ಯಕ್ತಿ ಆರ್ಥಿಕವಾಗಿ ಶ್ರೀಮಂತನಾಗಿದ್ದಾರೆ ಮಾತ್ರ ಕಾನೂನಾತ್ಮಕವಾಗಿ ಹೊಡೆದಾಡಬಹುದು. ಇಲ್ಲವಾದರೆ ಆತ ಸತ್ತಂತೆ. ಎಸ್. ಪಿ. ಮಂಚಂಡ ಎಂಬುವವರು 2009ರ ಮೇ ತಿಂಗಳಲ್ಲಿ ತನ್ನ ಮಗಳನ್ನು ಆಸ್ಪತ್ರೆಯ ವೈದ್ಯನೋರ್ವನ ನಿರ್ಲಕ್ಷ್ಯದಿಂದ ಕಳೆದುಕೊಂಡರು. ಅದಾದ ಮೇಲೆ ಅವರು ಆತನ ಮೇಲೆ ‘ಮೆಡಿಕಲ್ ನೆಗ್ಲಿಜೆನ್ಸ್’ ದೂರು ದಾಖಲಿಸಿದರು ಮತ್ತು ಈ ದೂರು ಇತ್ಯರ್ಥವಾಗಲು ಬಹಳ ಶ್ರಮಿಸಿದರು. ಕೊನೆಗೆ ಇದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ‘ಸ್ಟಕ್’ ಆಗಿ ಹೋಯಿತು. ಕಾರಣ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಆ ವೈದ್ಯನನ್ನು ಅಪರಾಧಿ ಎಂದು ಘೋಷಿಸಬೇಕಿತ್ತು. ಅದಾಗಲೇ ಇಲ್ಲ. ಕಳೆದ ವರ್ಷ ಮಂಚಂಡ ಅವರು ಅವರ ಹೆಂಡತಿಯನ್ನು ಕಳೆದುಕೊಂಡರು. ಈಗಲೂ ಅವರು ಸತ್ಯಕ್ಕಾಗಿ ಕಾದು ಕುಳಿತಿದ್ದಾರೆ. ಏನ್ಮಾಡಬೇಕು ಆ ಮನುಷ್ಯ? ಅನಂತಕುಮಾರ್ ಹೆಗಡೆಯವರನ್ನು ಸಚಿವ ಸ್ಥಾನದಿಂದ ಕೈಬಿಟ್ಟರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಎಲ್ಲ ಕೇಸ್ ಗಳನ್ನು ಬಗೆಹರಿಸುತ್ತದೆಯೇ? ಮೊನ್ನೆ ಉತ್ತರಕನ್ನಡ ಯುವ ಬ್ರಿಗೇಡ್’ನ ಜಿಲ್ಲಾ ಸಂಚಾಲಕರಾದ ರಾಮದಾಸ್ ಅವರು ಒಂದು ವಿಷಯವನ್ನು ಶೇರ್ ಮಾಡಿದ್ದರು. ಸಾಗರದ ಸಹೋದರಿಯೊಬ್ಬಳು ತನ್ನ ಕಷ್ಟವನ್ನು ಹೇಳಿದ್ದಳು  ‘ ಅಣ್ಣಾ ಹುಷಾರಿರಲಿಲ್ಲ ಅಂತ ಸಾಗರದ ಒಂದು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡ್ಸಿದ್ವಿ. ಆಗ ಪ್ಲೇಟ್ಲೆಟ್ಸ್ 1.2 ಲಕ್ಷ ಇದೆ ನೀವು ಬೇಗ ಅಡ್ಮಿಟ್ ಆಗ್ಬೇಕು ಅಂದ್ರು, ಆದ್ರೆ ನಮಗೆ ನಂಬೋಕೆ ಕಷ್ಟ ಆಯ್ತು .ಸೊ ಬೇರೆ ಇನ್ನೊಂದು ಕಡೆ ಟೆಸ್ಟ್ ಮಾಡ್ಸಿದ್ವಿ ಆಗ ಅಲ್ಲಿ ಪ್ಲೇಟ್ಲೆಟ್ಸ್ 3.5 ಲಕ್ಷ ಇದೆ ಅಂತ ರಿಪೋರ್ಟ್ ಬಂತು. ಆಗಿದ್ದು ಬ್ಯಾಕ್ಟೀರಿಯಲ್ ಇನ್ಫೆಕ್ಶನ್.  ಆದರೆ ಅದಾಗಲೇ ಮುಂಚೆ ತೋರ್ಸಿದ್ದ ಆಸ್ಪತ್ರೆಲಿ ಹನ್ನೊಂದು ಸಾವಿರ ಹಣವನ್ನು ಕಟ್ಟಾಗಿತ್ತು. ವಾಪಸ್ ಬಂದು ಆಸ್ಪತ್ರೆಯ ಸಿಬ್ಬಂದಿಯ ಬಳಿ ಪ್ರಶ್ನೆ ಮಾಡಿದಾಗ ಅವರು ಹೇಳಿದ್ದು ‘ ರಿಪೋರ್ಟ್ ಬದಲಾಗಿಬಿಟ್ಟಿತ್ತು ಅನ್ಸತ್ತೆ, ಸಣ್ಣ ತಪ್ಪಾಗಿದೆ ಕ್ಷಮಿಸಿಬಿಡಿ’ ಏನ್ಮಾಡಲಿ ಅಣ್ಣಾ ?’ ಅವಳು ಏನು ಮಾಡಬೇಕು? ರಾಷ್ಟ್ರೀಯ ವೈದ್ಯಕೀಯ ಸಂಘದವರಿಗೆ ದೂರು ಸಲ್ಲಿಸಬೇಕೆ? ಅವಳ ಒಡಲೊಳಗೆ ಒಂದು ಸಿಟ್ಟು ಜಾಗೃತವಾಗಿತ್ತು. ಆದರೂ ಅವಳು ಕೈಚೆಲ್ಲಿ ಕುಳಿತುಕೊಳ್ಳಲೇಬೇಕಾಯಿತು. ಆಸ್ಪತ್ರೆಯನ್ನು ಅಥವಾ ವೈದ್ಯಕೀಯ ಸೇವೆಯನ್ನು ಒಂದು ವ್ಯಾಪಾರದ ಸರಕಾಗಿ ಮಾಡಿಕೊಂಡು ಬಡವರ ಹಣ ಪೀಕುವ ಎಷ್ಟೋ ಜನ ವೈದ್ಯರು ಸಮಾಜದಲ್ಲಿ ಇದ್ದಾರಲ್ಲ. ಅವರ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಸಂಘ ಎಷ್ಟು ಬಾರಿ ಕ್ರಮ ತೆಗೆಕೊಂಡಿದೆ? ಎಷ್ಟು ಸಮಯಮಿತಿಯಲ್ಲಿ ಇಂತಹ ಸಮಸ್ಯೆಗಳನ್ನು ಕೌನ್ಸಿಲ್ ಬಗೆ ಹರಿಸುತ್ತದೆ?    

ವೈದ್ಯರ ಮೇಲೆ ಹಲ್ಲೆ ಮಾಡಿದರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ ಎನ್ನುವುದನ್ನು ಒಪ್ಪುವಂತಹುದಲ್ಲ. ಅವರಿಗೂ ಭದ್ರತೆಯ ಅವಶ್ಯಕತೆ ಇದೆ. ಸಣ್ಣ ಪುಟ್ಟ ವಿಷಯಕ್ಕೆ ವೈದ್ಯರ ಮೇಲೆ ಹಲ್ಲೆ ಮಾಡಿದರೆ ಅದು ಒಪ್ಪುವಂತಹ ಬೆಳವಣಿಗೆಯಲ್ಲ. ಅಂತವರಿಗೆ ಶಿಕ್ಷೆಯಾಗಲೇಬೇಕು.ಅನಂತಕುಮಾರ್ ಹೆಗಡೆಯವರು ಏನೂ ಕೆಲಸ ಮಾಡದೆ ಐದು ಬಾರಿ ಸಂಸದರಾಗಲು ಸಾಧ್ಯವಿಲ್ಲ. ಉತ್ತರ ಕನ್ನಡದ ಜನ ಪದೇ ಪದೇ ಅವರನ್ನು ಸುಮ್ಮನೆ ಕಾರಣವಿಲ್ಲದೆ  ಆರಿಸಿತರಲು ದಡ್ಡರಂತೂ ಅಲ್ಲ. ನನಗೆ ತಿಳಿದ ಹಾಗೆ ಎಲ್ಲ ರಾಜಕಾರಣಿಗಳಿಗಿಂತ ಅನಂತ್ ಸ್ವಲ್ಪ ಭಿನ್ನವಾಗಿ ನಿಲ್ಲುವವರು.ಇನ್ನು ಅನಂತಕುಮಾರ್ ಹೆಗಡೆಯವರ ಮೇಲಿನ ಕೇಸನ್ನು ಮೋದಿಯವರು ಬಗೆ ಹರಿಸಬೇಕೆಂಬ ಬೇಡಿಕೆ ಒಪ್ಪಬೇಕಾದದ್ದೆ ಆದರೆ ಅದಕ್ಕೂ ಮುಂಚೆ ರಾಜ್ಯದ ವೈದ್ಯಕೀಯ ಸಂಘ ನಮ್ಮ ರಾಜ್ಯದ ಗೃಹ ಇಲಾಖೆಯ ಎದಿರು ಈ ವಿಚಾರವನ್ನು ಇಡಬಹುದಲ್ಲವೇ?

ಎಲ್ಲರೂ  ಕೆಲವೊಂದು ವ್ಯವಸ್ಥೆಯ ವಿರುದ್ಧ ಸೌಮ್ಯವಾಗಿ ಪ್ರತಿಭಟಿಸುತ್ತಾರೆ. ಅವರೆಲ್ಲರಿಗೂ ಆ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಳ್ಳಲು ಒಬ್ಬ ವ್ಯಕ್ತಿಯ ಅವಶ್ಯಕತೆ ಇರುತ್ತದೆ. ಅದಕ್ಕೆ ಅನಂತಕುಮಾರ ಹೆಗಡೆಯವರೇ ಬೇಕಿಲ್ಲ. ಅನಂತಕುಮಾರ ಹೆಗಡೆಯವರಿಗೆ ಸಚಿವನಾಗಲು ಅರ್ಹತೆಯೇ ಇಲ್ಲ ಎನ್ನುವುದು ಅತ್ಯಂತ ಬಾಲಿಶವಾದ ಹೇಳಿಕೆ. ಅನಂತಕುಮಾರ ಹೆಗಡೆಯವರು ವೈದ್ಯರಿಗೆ ಹೊಡೆದರು ಎಂಬುದು ಖಂಡನೀಯ ಹೇಗೋ ಅದೇ ತೆರನಾಗಿ ‘ಮೆಡಿಕಲ್ ನೆಗ್ಲಿಜೆನ್ಸ್’ ಕೂಡ ಅಷ್ಟೇ ಪ್ರಶ್ನಾರ್ಹವಾಗಿದ್ದು. ಆಗೆಲ್ಲ ಸಾಮಾನ್ಯರು ಆಡಿಕೊಳ್ಳುತ್ತಿದ್ದ ಮಾತೆಂದರೆ ‘ಸಂಸದರಿಗೇ ಈ ಪರಿಸ್ಥಿತಿಯಾದರೆ ಇನ್ನು ಸಾಮಾನ್ಯರ ಕಥೆ ಏನು?’ ಎಂಬುದು. ಅಲ್ಲಿ ಆ ದಿನ ನಡೆದ ಘಟನೆಯೇನು ಎಂಬುದು ಸ್ಪಷ್ಟವಾಗಿ ಹೊರಬರಬೇಕೆಂದರೆ ಆ ವೈದ್ಯರುಗಳು ನೇರವಾಗಿ ಪೊಲೀಸರಿಗೆ ದೂರು ನೀಡಬೇಕಿತ್ತು. ಅವರೇ ದೂರು ಕೊಡದೆ ಈಗ ಸಮಸ್ಯೆ ಬಗೆಹರಿಸಿ, ಅನಂತರನ್ನು ಸಂಪುಟದಿಂದ ಕೈ ಬಿಡಿ ಎನ್ನುವುದು ಎಷ್ಟು ಸಮಂಜಸವೋ ನನಗಂತೂ ತಿಳಿದಿಲ್ಲ.

ಸಮಾಜದಲ್ಲಿ ಅತ್ಯಂತ ಗೌರವಾರ್ಹರಾದ ವೈದ್ಯರುಗಳು ಯಾವತ್ತೂ ಇಂತಹ ಕ್ಷಣವನ್ನು ಎದುರಿಸದಿರಲಿ ಎಂಬುದೇ ನಮ್ಮ ಆಶಯ ಕೂಡ.

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post