X

ಅಯ್ಯೋ ,ಕೆಂಪು ರತ್ನವೆಂದುಕೊಂಡಿದ್ದು  ಸುಡುವ ಕೆಂಡವಾಯ್ತೆ!

BJP MP Ananth Kumar Hegde at parliament house in new delhi on thursday.Express photo by Anil Sharma.03.03.2016

ವೈದ್ಯಕೀಯ ವೆಚ್ಚವನ್ನ ತಗ್ಗಿಸುವ ನಿಟ್ಟಿನಲ್ಲಿ ಮೋದಿ ತುಳಿಯುತ್ತಿರುವ  ಹಾದಿ, ಹೆಚ್ಚು ಜನ ನಾಯಕರು ನಡೆಯದ ಅಪರೂಪದ ದಾರಿ  ಎಂದರೆ ತಪ್ಪಾಗಲಾರದು . ಕರ್ನಾಟಕ ಸರ್ಕಾರ ಅವೈಜ್ಞಾನಿಕವಾಗಿ ಚಿಕಿತ್ಸೆಯ ವೆಚ್ಚಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿರುವಾಗ , ಮೋದಿಯವರು ವೈದ್ಯಕೀಯ ವೆಚ್ಚದ ಮೂಲಕ್ಕೆ ಕೈ ಹಾಕುತ್ತಿದ್ದಾರೆ.

ಫೆಬ್ರವರಿ ತಿಂಗಳನಲ್ಲಿ  ಮೋದಿಯ ಕಣ್ಣು ಬಿದ್ದಿದ್ದು ಹೃದಯದ ಚಿಕಿತ್ಸೆಗಳ ಮೇಲೆ.  ನಲವತ್ತು ಸಾವಿರದಿಂದ ಎರಡು ಲಕ್ಷದವರೆಗೂ ಇದ್ದ ಹೃದಯದ ಸ್ಟೆಂಟ್ಗಳ ಬೆಲೆಯನ್ನು, ೭೨೬೦ ರಿಂದ  ೨೯,೬೩೦ ರು ಗಳಿಗೆ ನಿಗದಿಪಡಿಸಿ, ಬಹಳಷ್ಟು ಜನರ ಹೃದಯದ ಭಾರ ಕಡಿಮೆ ಮಾಡಿದ್ದರು . ಈ ನಿರ್ಣಯದ ದೂರಗಾಮಿ ಪರಿಣಾಮಗಳು ಏನೇ ಇದ್ದರೂ , ಸದ್ಯದ ಪರಿಸ್ಥಿಯಲ್ಲಿ ಲಕ್ಷಾಂತರ ರೋಗಿಗಳಿಗೆ ಈ ನಿರ್ಧಾರದಿಂದ ಸಹಾಯವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ .

ಕಳೆದ ಏಪ್ರಿಲ್’ನಲ್ಲಿ ಕಡ್ಡಾಯವಾಗಿ ವೈದ್ಯರು ಖಡ್ಡಾಯವಾಗಿ  ಔಷಧಗಳ ಹೆಸರನ್ನು ಜೆನೆರಿಕ್ ಹೆಸರಿನಲ್ಲಿಯೇ ಬರೆಯಬೇಕೆಂದು ಆದೇಶ ಹೊರಡಿಸಿದರು. ಜೆನೆರಿಕ್ ಔಷದ ಕಂಪನಿಗಳ ಗುಣಮಟ್ಟದ ಬಗ್ಗೆ ವಿವಾದ ಏನೇ ಇದ್ದರೂ ,  ಜನರು  ದುಬಾರಿ ಮೂಲ ಔಷಧ ಕಂಪನಿಗಳ ಔಷಧಗಳ ಬದಲು  ,   ಅಗ್ಗವಾದ ಔಷಧ ಖರೀದಿಸಿ ಸಂತೋಷ ಪಟ್ಟರು . ಜೊತೆ ಜೊತೆಗೆ ‘ ಜನೌಷಧ  ‘ ಮಳಿಗೆಗಳನ್ನು ಸ್ಥಾಪಿಸಿ , ಕಡಿಮೆ ದರಕ್ಕೆ ಜನರಿಗೆ ಔಷಧಗಳು ಸಿಗುವಂತೆ ಮಾಡಿದರು .

ಆಗಸ್ಟ ತಿಂಗಳಿನಲ್ಲಿ  ಮೋದಿಯ ಹೊಡೆತ ಬಿದ್ದಿದ್ದು ಮೊಣಕಾಲಿಗೆ .  ಮೊಣಕಾಲು ಮತ್ತು ಇತರ ಕೀಲುಳನ್ನು  ಬದಲಿಸುವ ಚಿಕಿತ್ಸೆಯಲ್ಲಿ ಉಪಯೋಗಿಸುವ ಇಂಪ್ಲಾಂಟ್ ಗಳ ಬೆಲೆಯನ್ನು ೪೦೯೯ ರಿಂದ ೬೨೭೭೦ ರ ಒಳಗೆ ನಿಗದಿಮಾಡಿದರು . ಇದು ಚಿಕಿತ್ಸೆಯ ಬೆಲೆಯನ್ನು  ಶೇಕಡಾ ೫೦ ರಿಂದ ೬೦ ರ  ವರೆಗೆ ಕಡಿಮೆ ಮಾಡುವಲ್ಲಿ  ಯಶಸ್ವಿ ಯಾಗಿದೆ.

ಈ ಎಲ್ಲಾ ಬೆಳವಣಿಗೆಯಿಂದ ಉತ್ಸಾಹಗೊಂಡಿರುವ, ವೈದ್ಯರ ಸಂಘ , ಹದಿನೈದು ಲಕ್ಷ ಬೆಲೆಯಿರುವ ಶ್ರವಣ ದೋಷ ಇದ್ದವರಿಗೆ ಅಳವಡಿಸುವ , ಕಾಕ್ಲಿಯಾರ್ ಇಂಪ್ಲಾಂಟ್  ಯಂತ್ರ ಬೆಲೆಯನ್ನು ಕಡಿಮೆ ಮಾಡುವಂತೆ ವೈದ್ಯರು  , ಮೋದಿಗೆ ಪತ್ರ ಬರೆದಿದ್ದಾರೆ . ಮೋದಿಯವರು ಇದರ  ಬಗ್ಗೆ  ಭರವಸೆ ನೀಡಿದ್ದಾರೆ.

ಒಂದು ವಿಷಯವನ್ನು ಗಮನಿಸಬೇಕು . ಈ ಎಲ್ಲಾ ನಿರ್ಧಾರಗಳನ್ನು , ರೋಗಿಗಳು ಮಾತ್ರವಲ್ಲ, ಇಡೀ ವೈದ್ಯ ಸಮುದಾಯ ,ತುಂಬು ಹೃದಯದಿಂದ ಸ್ವಾಗತಿಸಿತ್ತು .  ಕರ್ನಾಟಕ ಸರ್ಕಾರ ಜಾರಿಗೆ ತರಲು  ಯತ್ನಿಸುತ್ತಿರುವ   ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯನ್ನು ಶತಾಯಗತಾಯ ವಿರೋಧಿಸಿದ್ದ ವೈದ್ಯರು , ಮೋದಿಯವರ ಆದೇಶಗಳನ್ನು ಸ್ವಾಗತಿಸಿತ್ತು . ಉದ್ಯಮಿಗಳ ಸರ್ಕಾರ ಎಂದು ಮೂದಲಿಸುತಿದ್ದ ಪ್ರತಿಪಕ್ಷಗಳಿಗೆ , ವೈದ್ಯಕೀಯ ಉಪಕರಣ ತಯಾರಿಕಾ ಕಂಪನಿಗಳ ವಿರುದ್ಧ ಮೋದಿಯವರ ನಿರ್ಣಯ ಬಾಯಿ ಮುಚ್ಚುವಂತೆ ಮಾಡಿತ್ತು .

ಆದರೆ ಮೋದಿಯವರ ಇತ್ತೀಚಿನ ಒಂದು ನಿರ್ಧಾರ ವೈದ್ಯರನ್ನು ಕೆರಳಿಸಿದೆ . ಇದರ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಏಮ್ಸ್ ನ ವಿದ್ಯಾರ್ಥಿ ಸಂಘವು ಮೋದಿಯವರಿಗೆ ಖಾರವಾದ ಪತ್ರ ಬರೆದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ . ಅದಕ್ಕೆ ಕಾರಣ ಕರ್ನಾಟಕದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಯರನ್ನು ಕೇಂದ್ರ ಸಂಪುಟಕ್ಕೆ ಆಯ್ಕೆ ಮಾಡಿ ಮಂತ್ರಿಯನ್ನಾಗಿ ಮಾಡಿದ್ದು . ಎಲ್ಲದಕ್ಕೆ ಕಾರಣ ಜನವರಿ ೨ ರಂದು ಸಿರಸಿಯ ನೆಡೆದ ಘಟನೆ .

ಇದೆ ವರ್ಷದ ಮೊದಲ ತಿಂಗಳಲ್ಲಿ ಸಂಸದ ಅನಂತ ಕುಮಾರ್ ಹೆಗ್ಡೆಯವರ ತಾಯಿ ಲಲಿತ ಹೆಗ್ದೆಯರು  , ಮನೆಯಲ್ಲಿ ಬಿದ್ದು ಕಾಲು ಮುರಿತದ ಚಿಕಿತ್ಸೆಗಾಗಿ ಸಿರಸಿಯ TSS ಆಸ್ಪತ್ರೆಗೆ ಬಂದಿದ್ದಾರೆ . ಅದೇ ಸಮಯದಲ್ಲಿ ಆಪರೇಷನ್ ಮಾಡುತಿದ್ದ ಕಾರಣ , ಮೂಳೆ ತಜ್ಞರು ತಕ್ಷಣವೇ , ಸಂಸದರ ತಾಯಿಯನ್ನು ನೋಡಲು ಸಾಧ್ಯವಾಗಿಲ್ಲ. ಆಪರೇಷನ್ ಮಾಡುತಿದ್ದ ರೋಗಿಯನ್ನು ಅಲ್ಲಿಯೇ ಬಿಟ್ಟು , ತಮ್ಮ ತಾಯಿಯನ್ನು ನೋಡಬೇಕು ಸಂಸದರು ರಂಪ ಮಾಡಿದ್ದಾರೆ . ಅಷ್ಟೇ ಅಲ್ಲ ಆಪರೇಷನ್ ಮುಗಿಸಿ ಸಂಸದರ ತಾಯಿಯನ್ನು ನೋಡಲು ತಡವಾಗಿ  ಬಂದ ಡಾ ಮಧುಕೇಶ್ವರ್ ರವರ ಮೇಲೆ ಹಲ್ಲೆ ನೆಡೆಸಿದ್ದಾರೆ . ಅಷ್ಟೇ ಅಲ್ಲದೆ , ಡಾ ಮಧುಕೇಶ್ವರ್’ರವರನ್ನು ರಕ್ಷಿಸಲು ಯತ್ನಿಸಿದ ಡಾ ಬಾಲಚಂದ್ರ ಭಟ್ ಮತ್ತು  ರಾಹುಲ್ ಎಂಬ ಆಸ್ಪತ್ರೆ ಸಿಬ್ಬಂದಿಗೂ  ಬಾರಿಸಿ ಕುತ್ತಿಗೆ , ತುಟಿ ಹರಿಯುವಂತೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ಘಟನೆ ನೆಡೆದ ಸ್ಥಳದಲ್ಲಿಯೇ ಇದ್ದ ಮಹಿಳಾ ವೈದ್ಯರಿಗೂ ಕೂಡ ಪೆಟ್ಟುಗಳು ಬಿದ್ದಿವೆ .

ಮಾರಣಾಂತಿಕ ಗಾಯಗಳಾದರೂ ವೈದ್ಯರು ಪೊಲೀಸರಿಗೆ ದೂರು ನೀಡುವುದಕ್ಕೆ ಹೋಗಿರಲಿಲ್ಲ . ‘ಸಂಸದರು ತಮ್ಮಲ್ಲಿ ವೈಯಕ್ತಿಕವಾಗಿ  ಕ್ಷಮೆಯಾಚಿಸದ್ದಾರೆ ‘ ಎಂದು ವೈದ್ಯರು ದೂರು ನೀಡದಿರುವುದಕ್ಕೆ ಕಾರಣ ಕೊಟ್ಟರೂ , ನಿಜವಾದ ಕಾರಣ ಸಂಸದರ ಧಮಕಿ ಎಂಬುದು ಎಲ್ಲರಿಗು ತಿಳಿದ ಬಹಿರಂಗ  ಸತ್ಯವಾಗಿತ್ತು .

ಹಲ್ಲೆಗೊಳಗಾದ ವೈದ್ಯರು ದೂರು ನೀಡದೇ ಇದ್ದರೂ , ಆಸ್ಪತ್ರೆಯ ಕ್ಯಾಮೆರಾಗಳಲ್ಲಿ ಸಂಸದರ ಪೌರುಷ ದಾಖಲಾಗಿತ್ತು. ಮರು ದಿನವೇ ಎಲ್ಲ ಮಾಧ್ಯಮದಲ್ಲಿ ಪ್ರಸಾರವಾಯಿತು . ಆಸಕ್ತಿ ಇದ್ದವರು ಈಗಲೂ ಯು ಟ್ಯೂಬ್ ನಲ್ಲಿ ಈ ಸಂಸದರ ಸಾಹಸ ದೃಶ್ಯಗಳನ್ನು ವೀಕ್ಷಿಸಬಹುದು (https://www.youtube.com/watch?v=1dHBdj4pGk0) . ದ್ರಶ್ಯಗಳನ್ನೂ ನೋಡಿದ ವೈದ್ಯರ ಆಕ್ರೋಶ ಮುಗಿಲು ಮುಟ್ಟಿತ್ತು . ಮುಂದೆ ಬರಬಹುದಾದ ಅಪಾಯವನ್ನು ತಡೆಯಲು , ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡರು .

ಹೆಸರಿಗೋಸ್ಕರ ಸೆಕ್ಷನ್ ೪  ,  IPC ಸೆಕ್ಷನ್  323 , 341 , 504 , and 506 ರ ಅಡಿ ದೂರು ದಾಖಲಾಗಿದಷ್ಟೇ ಬಂತು . ದೂರಿನಲ್ಲಿ ಹಲ್ಲೆಗೆ ಒಳಗಾದವರ ಎಲ್ಲರ ಹೆಸರು ಇರಲಿಲ್ಲ . ಹಲ್ಲೆಗೊಳಗಾದವರ ಹೇಳಿಕೆ ಇರಲಿ, ದೂರಿನಲ್ಲಿ ಕ್ಯಾಮರಾದಲ್ಲಿ ದಾಖಲಾದ ಸಾಕ್ಷಿ ಬಗ್ಗೆ ಉಲ್ಲೇಖವಾಗಿಲ್ಲ . ಸಿಸಿ ಟಿವಿ ಕ್ಯಾಮರಾದಲ್ಲಿ ಧಾಖಲಾದ , ಮೂಲ  ವಿಡಿಯೋ ಎಲ್ಲಿವೆಯೋ ಏನೋ. ಒಟ್ಟಿನಲ್ಲಿ ಕೇಸು ಪೊಲೀಸ್ ಸ್ಟೇಷನ್ನಲ್ಲಿ ಧೂಳು ತಿನ್ನುತ್ತಾ ಕೂತಿದೆ . ಒಂದು ವೇಳೆ ಕೇಸಿಗೆ  ಜೀವ ಬಂದರೂ, ಸಾಕ್ಷಿ ಕೊರತೆಯಿಂದ  ಬಿದ್ದು ಹೋಗುವ ಎಲ್ಲಾ ವ್ಯವಸ್ಥೆಯನ್ನು ಈಗಲೇ  ಮಾಡಲಾಗಿದೆ .

ವಿಮಾನಯಾನ ಸಿಬ್ಬಂದಿಯ ಮೇಲೆ ಹಲ್ಲೆಯಾಗಿದ್ದಾಗ ಮಾಧ್ಯಮ ಮತ್ತು ಸಂಸತ್ತಿನಲ್ಲಿ ದೊಡ್ಡ ಗಲಭೆಗಳೇ ನಡೆದಿದ್ದವು . ಆದರೆ ವೈದ್ಯರ ಮೇಲೆ ಸಂಸದರ ದಾಳಿ ನೆಡೆದಾಗ , ಮಾಧ್ಯಮಗಳು ಬರಿ ಸುದ್ದಿ ಮಾಡಿ ಸುಮ್ಮನಾದವು . ಸಂಸತ್ತಿನಲ್ಲಿ ಚರ್ಚೆ ದೂರವೇ ಉಳಿಯಿತು . ವೈದ್ಯ ದಾಳಿಗಳ ಮೇಲೆ ಸಮಾಜದ ಅನಾಸಕ್ತಿ ತರ್ಕಕ್ಕೆ ನಿಲುಕದ್ದು .

ಈಗ ಗಾಯದ ಮೇಲೆ ಬರೆ ಹಾಕುವಂತೆ , ಟೆಕ್ವಂಡೂ ಸಮರ ಕಲೆಯಲ್ಲಿ ಪರಿಣಿತಿ ಹೊಂದಿರುವ  ಅನಂತ್ ಕುಮಾರ್ ಹೆಗ್ಡೆಯರನ್ನು ಕೌಶ್ಯಲಾಭಿರುದ್ಧಿ ಸಚಿವರನ್ನಾಗಿ ಮಾಡಲಾಗಿದೆ . ಆ ಮೂಲಕ ಮೋದಿಯಯವರು ೨೯/೦೬/೨೦೧೭ ರ ಭಾಷಣದಲ್ಲಿ ಕೊಟ್ಟಿದ್ದ ಭರವಸೆ ಮಣ್ಣಾಗಿಸಿದ್ದಾರೆ . ಈ ಭಾಷಣದಲ್ಲಿ ವೈದ್ಯರ ಮೇಲಿನ ದಾಳಿಗಳನ್ನೂ ಸ್ಪಷ್ಟ ಶಬ್ದಗಳಲ್ಲಿ ಖಂಡಿಸಿದ್ದ ಮೋದಿಯವರು, ಈಗ ವೈದ್ಯರ ಮೇಲೆ ವಿನಾಕಾರಣ ದಾಳಿ ನೆಡೆಸಿ, ಇದುವರೆಗೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸದ ಸಂಸದರೊಬ್ಬರಿಗೆ  ಬಡ್ತಿ ನೀಡಿದ್ದಾರೆ .  ಈ ಪದೋನ್ನತಿ ಸಮಾಜಕ್ಕೆ ಕೆಟ್ಟ ಸಂದೇಶವನ್ನು ಸಾರಿದೆ ಎಂದು ವೈದ್ಯರಷ್ಟೇ ಅಲ್ಲ, ಬಿಜೆಪಿಯವರೇ ಹೇಳುತ್ತಿದ್ದರೆ . ಜಾತಿ, ಧರ್ಮ, ಪ್ರಾದೇಶಿಕ ಕೋಟಾಗಳನ್ನೂ ಮೀರಿ , ವ್ಯಕ್ತಿ ಸಾಮರ್ಥ್ಯ ಆಧಾರದ ಮೇಲೆ ಮಂತ್ರಿಗಳನ್ನು ಆಯ್ಕೆ ಮಾಡುತಿದ್ದ ಮೋದಿಯವರು, ಅನಂತ ಕುಮಾರ್’ರವರಲ್ಲಿ ಕಂಡ ಗುಣಗಳೇನು ಎಂದು ಸ್ಪಷ್ಟವಾಗಿಲ್ಲ . ಅನಂತ ಕುಮಾರ್ ಹೆಗ್ಡೆಯವರು ಐದು ಬಾರಿ ಸಂಸದರಾಗಿದ್ದರೂ ಸ್ವಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೇಳಿಕೊಳ್ಳುವಂತ ಕೆಲಸಗಳು ಏನೂ ಮಾಡಿಲ್ಲ  .  ಸೈದಾಂತಿಕ ಹೋರಾಟಕ್ಕಿಂತ, ದೈಹಿಕ ಹೋರಾಟದಲ್ಲಿ ಹೆಚ್ಚು ನಂಬಿಕೆ ಇರುವ ಸಚಿವರನ್ನಾಗಿ ಆಯ್ಕೆ ಮಾಡಿದರೆ , ಅದು ಸಂಪುಟಕ್ಕೆ ಶೋಭೆ ತರುತ್ತದೆಯೇ ?. ಹಿಂದೂ ಹೋರಾಟಗಾರ ಆಯ್ಕೆ ಅನಿವಾರ್ಯವಾಗಿದ್ದರೆ , ಪ್ರತಾಪಸಿಂಹರವರಂತವರನ್ನು ಆಯ್ಕೆ ಮಾಡಬಹುದಿತ್ತು . ನೀತಿ, ರೀತಿಯಿಂದ ಮತ್ತು  ಸಂವಿಧಾನಿಕ ಚೌಕಟ್ಟಿನಲ್ಲಿ ಹೋರಾಟ ನೆಡೆಸುವ ಪ್ರತಾಪ ಸಿಂಹರವರ ಆಯ್ಕೆ ಆಗಿದ್ದರೆ , ಆಗ ಹಿಂದೂ  ಪರ ಹೋರಾಟಗಳಿಗೂ  ಒಂದು ಘನತೆ ತಂದು ಕೊಡುತಿತ್ತು . ಅನೇಕ ಕ್ರಿಮಿನಲ್ ಕೇಸು ಇರುವ ಅನಂತ ಕುಮಾರವರ ಆಯ್ಕೆಯಿಂದ , ಮೋದಿಯವರು , ಅವಕಾಶಕ್ಕಾಗಿ ಕಾಯುತ್ತಿರುವ ವಿರೋಧಿಗಳ ಕೈಗೆ ದೊಣ್ಣೆ ಕೊಟ್ಟಿದ್ದಾರೆ.

ವೈದ್ಯರ ಮೇಲಿನ ಹಲ್ಲೆಗಳು ದಿನೇ ದಿನೇ ಹೆಚ್ಚುತ್ತಲೇ ಇವೆ . ದೆಹಲಿಯ ನಡೆದ ಒಂದು ಸಂಶೋಧನೆಯ ಪ್ರಕಾರ ಶೇಕಡಾ ೪೦ ವೈದ್ಯರು ಒಂದಲ್ಲ ಒಂದು ರೀತಿಯ ಮಾನಸಿಕ ಅಥವಾ ದೈಹಿಕ ಹಲ್ಲೆಗೆ ಗುರಿಯಾಗಿದ್ದಾರೆ. ಬಹಳಷ್ಟು ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಇದೆ ಕಾರಣವನ್ನು ಮುಂದಿಟ್ಟುಕೊಂಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜೂನ್ ತಿಂಗಳಿನಲ್ಲಿ ದೆಹಲಿ ಚಲೋ ಚಳುವಳಿ ಮಾಡಿದನ್ನು ನೆನಪಿಸಿಕೊಳ್ಳಬಹುದು . ಇದರ ನಡುವೆಯೂ ವೈದ್ಯರ ಮೇಲಿನ ಕೇಸು ಎದುರಿಸುತ್ತಿರುವ ಅನಂತ ಕುಮಾರ್ ಆಯ್ಕೆ ವೈದ್ಯರಿಗೆ ಅಸಮಾಧಾನ ಉಂಟುಮಾಡಿದೆ . ಅನಂತ ಕುಮಾರ್ ಮೇಲಿನ ಆರೋಪ , ಬರಿ ಆರೋಪ ಅಷ್ಟೇ ಅಲ್ಲ. ಅದು ಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ , ಜಾಲತಾಣದಲ್ಲಿ ಸುಲಭವಾಗಿ ಎಲ್ಲರೂ ವೀಕ್ಷಿಸಬಹುದಾದ ಘಟನೆ . ಅಂಗೈ ಹುಣ್ಣಿಗೆ ಸಾಕ್ಷಿ ಬೇಕೇ .? ದೃಶವಾಳಿ ಮೂಲಕ ಧಾಖಲಾಗಿರುವ ಕೇಸುಗಳ ಗತಿಯೇ ಹೀಗಾದರೆ , ಬೇರೆ ಕೇಸುಗಳ ಗತಿ ಊಹಿಸಿಕೊಳ್ಳಿ . ಆಗಿರುವ ತಪ್ಪನ್ನು ಸರಿಪಡಿಸಲು ಮೋದಿಯವರ ಮುಂದೆ ವೈದ್ಯರ ಸಂಘ ಮೂರೂ ಬೇಡಿಕೆಗಳನ್ನು ಮುಂದಿಟ್ಟಿದೆ .  ಒಂದು ಅನಂತ ಕುಮಾರ್ ಹೆಗ್ಡೆಯವರನ್ನು ಸಂಪುಟದಿಂದ ಕೈಬಿಟ್ಟು , ಉತ್ತಮರನ್ನು  ಆ ಸ್ಥಾನಕ್ಕೆ ತರುವುದು . ಎರಡು ಅನಂತ ಕುಮಾರ್ ಹೆಗ್ಡೆಯವರ ಮೇಲೆ ನಿಂತು ಹೋಗಿರುವ ತನಿಖೆಯನ್ನು ಪೂರ್ಣಗೊಳಿಸುವುದು . ಮೂರು,  ಅನಂತ ಕುಮಾರ್’ರವರು ಸಾರ್ವಜನಿಕವಾಗಿ ವೈದ್ಯರ ಮೇಲಿನ ಹಲ್ಲೆಗೆ ಕ್ಷಮೆ ಯಾಚಿಸುವಂತೆ ಮಾಡುವುದು .

ಮೋದಿಯವರ ಸಂಪುಟದಲ್ಲಿ ಹಲವಾರು ಕೆಂಪು ರತ್ನಗಳಿವೆ . ಆದರೆ  ಸುಡುವ ಕೆಂಡವೊಂದನ್ನು , ಮೋದಿಯವರು ಕೆಂಪು ರತ್ನ ಎಂದು ತಪ್ಪಾಗಿ ಭಾವಿಸಿ ಸೆರಗಿನಲ್ಲಿ ಕಟ್ಟಿಕೊಂಡಿದ್ದಾರೆ .   ಈ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ , ಸೆರಗಿಗೂ ತೊಂದರೆ, ಜೊತೆಗಿರುವ ರತ್ನಗಳಿಗೂ ಮಸಿ  ತಪ್ಪಿದ್ದಲ್ಲ .

-ದಯಾನಂದ ಲಿಂಗೇಗೌಡ

ರೇಡಿಯೊಲೊಜಿಸ್ಟ್

ಲೇಖಕರು ಮತ್ತು ಕಾದಂಬರಿಕಾರರು

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post