X

ಭಾರತಕ್ಕೆ ಬುಲೆಟ್ ಬೇಕೆ?

ಹಿಂದಿನ ಭಾಗ: ಬಾಂಬ್, ಕ್ಷಿಪಣಿಗಳ ಯುಗದಲ್ಲಿ ಭಾರತದಲ್ಲೊಂದು “ಬುಲೆಟ್ ಟ್ರೈನ್” -1 : “ಬುಲೆಟ್” ಎಂಬ ಪ್ರಗತಿಯ ಪಟರಿ (Track)

ಬುಲೆಟ್ ರೈಲನ್ನು ಭಾರತಕ್ಕೆ ಈಗಿನ ಬೆಲೆಯಲ್ಲಿ ಮಾರಲು ಜಪಾನಿಗಿರುವ ಅನಿವಾರ್ಯತೆ

ಹೊಸತನ, ಆಧುನಿಕತೆಯನ್ನು ಹೊತ್ತು ತರುವ ನೂತನ ತಂತ್ರಜ್ಞಾನಗಳ ಕುರಿತು ಭಾರತೀಯರ ಒಂದು ವಲಯದಲ್ಲಿ ಸಹಜವಾದ ಅನುಮಾನ, ಗೊಂದಲ ಹಾಗೂ ಅದರ ಅನಿವಾರ್ಯತೆಯ ಕುರಿತು ಪ್ರಶ್ನೆಗಳು ಏಳುತ್ತವೆ. ಮೊದಲಿಗೆ ಇದು ಕೇವಲ ಶ್ರೀಮಂತರಿಗೆ ಉಪಯೋಗಕಾರಿ. ರೈಲ್ವೆ ಇಲಾಖೆಯ, ಸಂಚಾರ ವ್ಯವಸ್ಥೆಯ ಮಿತಿಗಳನ್ನು, ಕಂದಕಗಳನ್ನು ಸುಧಾರಿಸುವುದು ಬಿಟ್ಟು ಹೊಸತರ ಅಗತ್ಯವೇನು? ಬಡತನ, ನಿರುದ್ಯೋಗದಂತಹ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಇಂತಹ ಯೋಜನೆಗಳಲ್ಲಿ ಹಣ ವಿಯೋಗಿಸುವ(ಪೋಲುಮಾಡುವ) ಅಗತ್ಯವೇನು? ಇಂತಹ ಹತ್ತಾರು ಪ್ರಶ್ನೆಗಳು ಸಮಾಜದಲ್ಲಿ ಎದುರಾದರೂ ನಮಗೆ ಬೇಕಿರುವುದು ಸುಧಾರಣೆ ಹಾಗೂ ಅಭಿವೃದ್ಧಿಯನ್ನು ಜೊತೆಯಲ್ಲಿಯೇ ಕೊಂಡೊಯ್ಯುವ ಮನಸ್ಥಿತಿ ಮತ್ತು ಯೋಜನೆಗಳು. ಇವುಗಳ ಸಮನ್ವಯ ಹಾಗೂ ಸಂಕಲನತೆಯಲ್ಲಿಯೇ ಭಾರತದ ಸುಧಾರಾಣಾತ್ಮಕ ಭವಿಷ್ಯ ಅಡಗಿದೆ. ಒಂದರ ಲಾಭಕ್ಕಾಗಿ ಮತ್ತೊಂದನ್ನು ತ್ಯಾಗ ಮಾಡುವುದು ಜಾಣತನವಲ್ಲ.

ಇಂತಹ ಯೋಜನೆಗಳು ಕೇವಲ ಶ್ರೀಮಂತರ ಸೊತ್ತಲ್ಲ. ಹೀಗೆಂದು ಭಾವಿಸುವುದು ಕೇವಲ ಮೇಲ್‍ಸ್ತರದ ಯೋಚನೆಗಳ ಮಿತಿ. ಬುಲೆಟ್ ರೈಲಿನ ದರ, ಈಗಿನ ವೆಚ್ಚದಲ್ಲಿ ಏಸಿ ರೈಲಿನ ದರಕ್ಕಿಂತ ಹೆಚ್ಚು ಆದರೆ ವಿಮಾನಯಾನದ ದರಕ್ಕಿಂತ ಕಡಿಮೆ. ಅಂದರೆ ಕಡಿಮೆ ಹಣದಲ್ಲಿ ಹೆಚ್ಚು ದೂರವನ್ನು ವೇಗವಾಗಿ, ಸುರಕ್ಷಿತವಾಗಿ ಕ್ರಮಿಸಬಲ್ಲ ತಂತ್ರಜ್ಞಾನದ ಸಾಧ್ಯತೆಯಿಂದ ಸಂಚಾರದ ಹೊರೆ ತಗ್ಗಲಿದೆ. ಕಡಿಮೆ ಅವಧಿಯ ಪ್ರಯಾಣವೆಂದರೆ ಮನುಷ್ಯರ ಉತ್ಪಾದಕತೆಗೆ ಹೆಚ್ಚು ಸಮಯ ಸಿಕ್ಕಂತೆ, ಇದರಿಂದ ವೈಯ್ಯಕ್ತಿಕ ಹಾಗೂ ದೇಶದ ಆರ್ಥಿಕತೆಗೂ ಮಹತ್ವದ ಕೊಡುಗೆ ಲಭಿಸಲಿದೆ. ಹೊಸ ಯೋಜನೆಯೊಂದು ಬರುತ್ತಿದೆಯೆಂದರೆ ಅದರಿಂದ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಾರ ಈ ಯೋಜನೆಯಿಂದ 20,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಪ್ರಾದೇಶಿಕ ಅಭಿವೃದ್ಧಿಯೂ ಆಗಲಿದೆ. ಮೇಲಾಗಿ ಹೊಸದಾಗಿ ಉದಯಿಸುವ ಉದ್ಯೋಗಗಳಿಂದ ಬಡತನ ನಿರ್ಮೂಲನೆಗೂ ಸಹಾಯವಾಗಲಿದೆ.

ಅನೇಕ ಅಧ್ಯಯನಗಳ ಪ್ರಕಾರ ಹೈ ಸ್ಪೀಡ್ ರೈಲು ವ್ಯವಸ್ಥೆ ಇಂಧನ ಉಳಿತಾಯ ಹಾಗೂ ಇಂಧನ ದಕ್ಷತೆಯಲ್ಲಿ ವಿಮಾನಯಾನಕ್ಕಿಂತ ಮೂರು ಪಟ್ಟು ಹಾಗೂ ಕಾರ್‍ಗಳಿಗಿಂತ ಐದು ಪಟ್ಟು ಉತ್ತಮ, ಶಕ್ತ ಮತ್ತು ಸಮರ್ಪಕವಾಗಿವೆ. ಮುಂಬಯಿಯಿಂದ ಅಹಮದಬಾದ್ ನಡುವಿನ ಪ್ರದೇಶ ದೇಶದ ಅಭಿವೃದ್ಧಿ ಹೊಂದುತ್ತಿರುವ ಜನ ದಟ್ಟನೆಯ ತೀವ್ರ ಕೈಗಾರಿಕಾ ಪ್ರದೇಶ. ಈ ಪ್ರದೇಶದಲ್ಲಿ ಹಾದುಹೋಗಲಿರುವ ಈ ಬುಲೆಟ್ ರೈಲು ಕೇವಲ ಸಂಚಾರ ದಟ್ಟನೆಯನ್ನಷ್ಟೇ ಅಲ್ಲ, ಭಾರತದ “ಹಸಿರು ಅನಿಲ”ಗಳ(Green House Gases) ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಲಿದೆ. ಇಂಗಾಲದ ಡೈ ಆಕ್ಸೈಡ್, ಮೊನಾಕ್ಸೈಡ್ ಮೊದಲಾದ ವಿಷಾನಿಲಗಳು, ಬರಿಗಣ್ಣಿಗೆ ಕಾಣದ ಪರ್ಟಿಕ್ಯುಲೆಟ್ ಮ್ಯಾಟರ್ (Particulate Matter: PM 2.5, PM 10) ಸೂಕ್ಷ್ಮಾತಿಸೂಕ್ಷ್ಮ ವಿಷವಸ್ತುಗಳ ಸೂಸುವಿಕೆಯಲ್ಲಿ ಕಡಿತ ಸಾಧಿಸಬಹುದು. ಅಮೆರಿಕ ಇಂತಹ ಬಾಧ್ಯತೆಯಿಂದ ಹಿಂದೆ ಸರಿಯುತ್ತಿರಬಹುದು ಆದರೆ ಪ್ಯಾರಿಸ್ ಒಪ್ಪಂದಕ್ಕಿಂತಲೂ ಮಿಗಿಲಾಗಿ ಭಾರತದ ಪರಂಪರೆ, ಪರಿಸರ ಕಾಳಜಿಯನ್ನು ನೈತಿಕ ಹಕ್ಕಾಗಿಸಿದೆ.

ಶಿಂಕಾನ್ಸೆನ್ ರೈಲ್ವೆ ವ್ಯವಸ್ಥೆಯ ಬಹುದೊಡ್ಡ ಸಮಸ್ಯೆಯೆಂದರೆ ಅದು ಎದುರಿಸುತ್ತಿರುವ ನಷ್ಟ. ಟೊಕಿಯೊ-ಒಸಾಕಾ ಮಾರ್ಗ ಹೊರತುಪಡಿಸಿದರೆ ಜಪಾನ್‍ನ ಬಹುತೇಕ ಮಾರ್ಗಗಳು ನಷ್ಟದಲ್ಲಿವೆ. ಆರ್ಥಿಕವಾಗಿ ಇಳಿಮುಖವಾಗುತ್ತಿರುವ ಚೀನಾದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಯುರೋಪ್ ಕೂಡ ಇದಕ್ಕೆ ಹೊರತಾಗಿಲ್ಲ. 2007ರಲ್ಲಿ ಪ್ರಾರಂಭವಾದ ತೈವಾನ್ ಕೂಡ ನಷ್ಟದಿಂದ ತತ್ತರಿಸುತ್ತಿದೆ. ಅದಕ್ಕೆ ದುಬಾರಿ ಟಿಕೆಟ್ ದರ ಅಥವಾ ಈಗಾಗಲೇ ಉತ್ತಮವಾಗಿರುವ ಇತರ ಸಂಪರ್ಕ ವ್ಯವಸ್ಥೆ ಅಥವಾ ಇತರ ಪ್ರಾದೇಶಿಕ ಸವಾಲುಗಳು ಕಾರಣವಿರಬಹುದು. ಅದೇ ಪರಿಸ್ಥಿತಿ ಭಾರತದಲ್ಲಿಯೂ ಮರುಕಳಿಸಬಾರದು. ಇದು ನಿಜಕ್ಕೂ ಸವಾಲಿನ ಸಂಗತಿ. ಯಾಕೆಂದರೆ ಜಪಾನ್‍ನ ಟೊಕಿಯೊ-ಒಸಾಕಾ ಏಕಮುಖಿ ಮಾರ್ಗದ ದರ 130 ಡಾಲರ್‍ಗಳು (ಅಂದರೆ 8,340 ರೂಪಾಯಿಗಳು). ಈ ದರ ಭಾರತಕ್ಕೆ ಅನ್ವಯಿಸಿದರೆ ಏನಾಗಬಹುದು? ಭಾರತದಲ್ಲಿ ಈ ಮೊತ್ತಕ್ಕೆ ಎಕನಮಿ ಕ್ಲಾಸ್ ವಿಮಾನ ಪ್ರಯಾಣವನ್ನೇ ಮಾಡಬಹುದು. ಈ ದರ ಜನಸಾಮಾನ್ಯರಿಗೆ ಖಂಡಿತವಾಗಿಯೂ ಹೊರೆಯಾಗಲಿದೆ. ಇಷ್ಟು ಗರಿಷ್ಟ ಮೊತ್ತವಲ್ಲದಿದ್ದರೂ ಏಕಮುಖಿ ಪ್ರಯಾಣಕ್ಕೆ ಸರಾಸರಿ 3,000-5,000 ರೂಪಾಯಿಗಳಾಗಬಹುದೆಂದು ಅಂದಾಜಿಸಲಾಗಿದೆ. ಬುಲೆಟ್ ಜನಸ್ನೇಹಿಯಾಗಲು 2022ರ ಹೊತ್ತಿಗೆ ಅದು ಮತ್ತಷ್ಟು ಕಡಿಮೆಯಾಗಬೇಕಿದೆ. ಅದು ಹೇಗೆ ಸಾಧ್ಯ?

ಭಾರತದಂತಹ ಜನ ಹಾಗೂ ಕೈಗಾರಿಕಾ ದಟ್ಟನೆಯಿರುವ ಪ್ರದೇಶದಲ್ಲಿ ಸರಳ ಆರ್ಥಿಕತೆಯನ್ನು ಅನ್ವಯಿಸಿದರೆ ಟಿಕೆಟ್ ದರವನ್ನು ಈಗ ಹೇಳಲಾಗುತ್ತಿರುವ ದರಕ್ಕಿಂತ ಅಗ್ಗಗೊಳಿಸಬಹುದು. ಹೆಚ್ಚು ಬೇಡಿಕೆಯಿರುವ ಕಡೆ ದರವನ್ನು ಇಳಿಸಿದರೆ, ಮಾರಾಟ ಹೆಚ್ಚುತ್ತದೆ. ಇದು ಬೇಡಿಕೆ-ಪೂರೈಕೆಯ ಸರಳ ನಿಯಮ. ಅದನ್ನೇ ಬುಲೆಟ್ ಸಂಚಾರ ವ್ಯವಸ್ಥೆಯಲ್ಲಿಯೂ ಅನ್ವಯಿಸಬೇಕಿದೆ. ಆದರೆ ಭಾರತದ ಮಟ್ಟಿಗೆ, ಅದರಲ್ಲೂ ಅನೇಕ ಕೈಗಾರಿಕೆಗಳ ಸಮೂಹ ಮುಂಬಯಿ-ಅಹಮದಾಬಾದ್ ದಾರಿ ಬುಲೆಟ್ ಸಂಚಾರಿ ವ್ಯವಸ್ಥೆಗೆ ‘ಗೇಮ್ ಚೇಂಜರ್’ ಆಗಬಲ್ಲದು. ಅದಕ್ಕೆ ಪೂರಕವೆಂಬಂತೆ 12 ಜನನಿಬಿಡ ನಿಲ್ದಾಣಗಳನ್ನು ಶಿಂಕಾನ್ಸೆನ್ ಆಯ್ದುಕೊಂಡಿದೆ.

ಈ ಯೋಜನೆಯಲ್ಲಿ ಬುಲೆಟ್ ರೈಲುಗಳನ್ನು ಜಪಾನ್ ನಿರ್ಮಿಸಿಕೊಡುತ್ತದೆ. ಅಂದರೆ ಇಲ್ಲಿ ಭಾರತಕ್ಕೆ ಸಿಂಕಾನ್ಸೆನ್(ಬುಲೆಟ್) ತಂತ್ರಜ್ಞಾನದ ಹಸ್ತಾಂತರವಿಲ್ಲ. ಆದರೆ ಬುಲೆಟ್ ತಂತ್ರಜ್ಞಾನ, ಭಾರತದ “ಮೇಕ್ ಇನ್ ಇಂಡಿಯಾ” ಯೋಜನೆಗೆ ಪೂರಕವಾಗಿರಲಿದೆ. ಜೊತೆಗೆ 2022ರ ತರುವಾಯ ಅಂದರೆ ಯೋಜನೆ ಪೂರ್ತಿಯಾಗಿ ಜಾರಿಯಾದ ನಂತರ ಜಪಾನ್ ಭಾರತದಲ್ಲಿಯೇ ಶಿಂಕಾನ್ಸೆನ್ ತಂತ್ರಜ್ಞಾನವನ್ನು ಉತ್ಪಾದಿಸುವ ಘಟಕವನ್ನು ತೆರೆಯಲಿದೆ. ಈ ಹಂತದಲ್ಲಿಯೇ ಭಾರತ ಬುಲೆಟ್ ತಂತ್ರಜ್ಞಾನದ ಮೂಲ, ಆಳಗಳನ್ನು ಅರಿತು ಕಡಿಮೆ ವೆಚ್ಚದ, ಹೆಚ್ಚು ಅಭಿವೃದ್ಧಿಹೊಂದಿದ ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬೆಳೆಸಬೇಕಿದೆ.

ಈ ಇಂಜಿನಿಯರಿಂಗ್ ಕಲಿಕೆಯಿಂದ ಭಾರತದ ರೈಲ್ವೆಯ ಬೆಳವಣಿಗೆ ಹಾಗೂ ನೂತನ ತಂತ್ರಜ್ಞಾನದ ಪರಿಚಯದಿಂದ ಭಾರತದ ತಾಂತ್ರಿಕ ಅಭಿವೃದ್ಧಿಗೂ ಇದು ಪೂರಕವಾಗಬೇಕಿದೆ. ಇಂತಹ ತಂತ್ರಜ್ಞಾನದ ಕಲಿಕೆ, ನಮ್ಮದೇ ಸ್ವದೇಶಿ ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣವಾಗಿ, ಮೇಕ್ ಇನ್ ಇಂಡಿಯಾದಿಂದ ಮೇಡ್ ಇನ್ ಇಂಡಿಯಾ(ಸ್ವದೇಶಿ ಉತ್ಪಾದನೆ) ಸಾಧ್ಯವಾದರೆ ಮಾತ್ರ ಇಂತಹ ಯೋಜನೆಗಳು ಭಾರತದ ಚಿತ್ರಣವನ್ನು ಆರ್ಥಿಕ ಶಕ್ತಿಯಾಗಿ ಬದಲಿಸಬಲ್ಲವು. ಇಲ್ಲವಾದರೆ ಇಂತಹ ಮತ್ತೊಂದು ಹೈ ಸ್ಪೀಡ್ ರೈಲ್ವೆ ತಂತ್ರಜ್ಞಾನಕ್ಕೂ ನಾವು ಜಪಾನ್ ಅಥವಾ ಚೀನಾವನ್ನೇ ನೆಚ್ಚುವ ಪರಿಸ್ಥಿತಿ ತಪ್ಪಿದ್ದಲ್ಲ. ಹಾಗಾಗಬಾರದೆಂದರೆ ವಡೋದರದಲ್ಲಿ ನಿರ್ಮಿಸಲಿರುವ “ಹೈ ಸ್ಪೀಡ್ ರೈಲ್ವೆ ಸಂಸ್ಥೆ”ಯನ್ನು ಇಂತಹ ಸವಾಲುಗಳನ್ನು ಎದುರಿಸುವ, ಅತ್ಯುತ್ತಮ ಕೌಶಲ್ಯಗಳನ್ನು ಕಲಿಸುವ, ಹೊಸ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವ ಸಶಕ್ತ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು.

ಈ ಯೋಜನೆಯ ಯಶಸ್ಸು ಅದರ ಜಾರಿಯಾಗುವಿಕೆ, ತದನಂತರದ ಸುವ್ಯವಸ್ಥಿತವಾದ ಆಯೋಜನೆ ಹಾಗೂ ದೇಶದ ಉದ್ದಗಲಕ್ಕೂ ಬೆಸೆಯುವಂತೆ ಸೇವೆಯನ್ನು ಕಲ್ಪಿಸುವ ವಿಸ್ತರಣೆಯಲ್ಲಿದೆ. ಆಗ ವಾಸ್ತವದಲ್ಲಿ ಇದೊಂದು “ನವ ಭಾರತ”ದ ಹೊಸ ಕನಸಿನ ವೇಗವರ್ಧಕ ಶಕ್ತಿಯಾಗಲಿದೆ.

 

Facebook ಕಾಮೆಂಟ್ಸ್

Shreyanka S Ranade:
Related Post