“ನಿಮಗೆ ಕ್ಯಾನ್ಸರ್ ಇದೆ” ಎಂಬ ಮೂರು ಪದಗಳನ್ನ ಕೇಳಿದಾಗ ಎಲ್ಲವೂ ಮುಗಿದೇಹೋಯಿತು ಎಂದುಕೊಂಡಿರುತ್ತೇವೆ. ಇದು ಅಂತ್ಯ ಅಷ್ಟೇ, ಇನ್ನೇನು ಉಳಿದಿಲ್ಲ ಎನಿಸುತ್ತದೆ. ಆದರೆ ನಿಜವಾಗಿಯೂ ಅದು ಅಂತ್ಯವೇ? ಕ್ಯಾನ್ಸರ್ ಎಂದರೆ ಆರಂಭ ಎನ್ನುತ್ತಾನೆ ಬಿಲ್ ಆರೋನ್! ಹೊಸ ಆರಂಭ.. ಕ್ಯಾನ್ಸರ್ ಎಂದಾಗ ಒಂದು ಹೊಸ ಬದುಕು ಆರಂಭವಾಗುತ್ತದೆ. ನಾವೆಂದೂ ಊಹಿಸಿರದ ಬದುಕು. ಒಂದರ್ಥದಲ್ಲಿ ಬದುಕು ಆರಂಭವಾಗುವುದೇ ಆಗ ಎಂದರೂ ತಪ್ಪಿಲ್ಲ. ಯಾಕೆಂದರೆ ಅಲ್ಲಿಯ ತನಕ ಬದುಕಿನ ಬಗ್ಗೆ ಅಷ್ಟೊಂದು ಆಳವಾಗಿ ಯೋಚಿಸಿಯೂ ಇರುವುದಿಲ್ಲ, ಬದುಕುವ ಬಗ್ಗೆ ತೀವ್ರ ಹಂಬಲವೂ ಇರುವುದಿಲ್ಲ. ಬದುಕು ಒಂದು ರೂಢಿಯಷ್ಟೇ ಆಗಿಬಿಟ್ಟಿರುತ್ತದೆ. ಆದರೆ ಕ್ಯಾನ್ಸರ್ ಎಂದ ಕೂಡಲೇ ಛೇ, ಇಷ್ಟು ಕಾಲ ಬದುಕು ಎನ್ನುವುದನ್ನ ಅಸ್ವಾದಿಸಲೇ ಇಲ್ಲವಲ್ಲ ಎನ್ನುವುದರ ಅರಿವಾಗುತ್ತದೆ..! ವರ್ಷಗಳ ಕಾಲ ಯಾಂತ್ರಿಕವಾಗಿ ಬದುಕುತ್ತಾ, ಬದಿಗಿಟ್ಟಿದ್ದ ಭಾವಗಳೆಲ್ಲ ಪ್ರಾಮುಖ್ಯತೆ ಪಡೆದುಕೊಳ್ಳಲು ಆರಂಭವಾಗುತ್ತದೆ. ಅದಕ್ಕಾಗಿಯೇ ಬಿಲ್ ಆರೋನ್ ಹೇಳಿದ್ದು ಇದು ಹೊಸ ಆರಂಭ ಎಂದು.
ಬಿಲ್ ಆರೋನ್ ಅಮೇರಿಕಾದ ಫೋಟೋಗ್ರಾಫರ್. ಪ್ರೊಸ್ಟ್ರೇಟ್ ಕ್ಯಾನ್ಸರ್’ಗೆ ಒಳಗಾದ ಬಿಲ್ ತನ್ನ ಕ್ಯಾನ್ಸರ್’ನ್ನು ಒಂದು ಹೊಸ ಆರಂಭದಂತೆಯೇ ನೋಡಿದ. ಗುಣಮುಖನಾದ ನಂತರ ಇತರ ಕ್ಯಾನ್ಸರ್ ಸರ್ವೈವರ್’ಗಳ ಬಗ್ಗೆ ತಿಳಿದಕೊಳ್ಳುತ್ತಾ ಹೋದ ಬಿಲ್, ಅದ್ಭುತ ಎನಿಸುವಂತಹ ಸುಮಾರು ೧೨೦ ಜನರ ಕ್ಯಾನ್ಸರ್ ಪಯಣವನ್ನು “ನ್ಯೂ ಬಿಗಿನಿಂಗ್” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಅಂತಹ ೧೨೦ ಜನರಲ್ಲಿ ಸೋಫಿಯಾ ಕೂಡ ಒಬ್ಬಳು. ಇಲ್ಲಿ ’ಹೊಸ ಆರಂಭ’ ಎನ್ನುವುದು ಕೇವಲ ಆಕೆಗೆ ಸೀಮಿತವಾಗಿರಲಿಲ್ಲ, ಆಕೆಯ ತಂದೆ-ತಾಯಿಯ ಬದುಕು ಕೂಡ ಹೊಸ ರೀತಿಯಲ್ಲಿ ಆರಂಭವಾಗಿತ್ತು.
ಸೋಫಿಯಾಗೆ ಕ್ಯಾನ್ಸರ್ ಉಂಟಾದಾಗ ಆಕೆಗಿನ್ನೂ ೧೫ ತಿಂಗಳು! ಆಕೆ ಹೇಗೆ ಉಳಿದುಕೊಂಡಳು ಎನ್ನುವುದು ಎಲ್ಲರನ್ನೂ ಇನ್ನೂ ಅಚ್ಚರಿಗೊಳಿಸುತ್ತದೆ. ಆಕೆಯ ಡಯೋಗ್ನೋಸಿಸ್ ಬಹಳ ಸಮಯ ತೆಗೆದುಕೊಂಡಿತ್ತು. ಹಾಗೆಯೇ ಆಕೆಯ ಚಿಕಿತ್ಸೆ ಕೂಡ. ಚಿಕಿತ್ಸೆಯೊಂದಿಗೆ ಆಕೆ ಬೆಳೆಯುತ್ತಿದ್ದಳು. ಆಸ್ಪತ್ರೆಯಲ್ಲಿದ್ದಾಗಂತೂ ಆಕೆ ಸುಮ್ಮನೆ ಒಂದೆಡೆ ಕೂರುತ್ತಿದ್ದವಳಾಗಿರಲಿಲ್ಲ. ಪಕ್ಕದ ಪೇಷೆಂಟ್ ಕೊಠಡಿಗೆ ಹೋಗುವುದು ಅವರೊಂದಿಗೆ ಹರಟುವುದು, ಮಕ್ಕಳಾಗಲಿ, ದೊಡ್ಡವರಾಗಲಿ ಅವರನ್ನ ಬಿಡದೆ ತನ್ನೊಂದಿಗೆ ಆಟಕ್ಕೆ ಸೇರಿಸಿಕೊಂಡುಬಿಡುತ್ತಿದ್ದಳು. ಕೆಲವೊಮ್ಮೆ ಡ್ರಿಪ್ ಹಾಕುತ್ತಿದ್ದ ಐ.ವಿ ಪೋಲನ್ನು ಕೂಡ ಎಳೆದುಕೊಂಡು ಓಡಾಡುತ್ತಾ ಅಕ್ಕಪಕ್ಕದವರನ್ನ ಮಾತನಾಡಿಸಲು ಹೋಗುತ್ತಿದ್ದಳು. ಆಕೆ ಎಷ್ಟು ಚೂಟಿಯಾಗಿದ್ದಳು ಎಂದರೆ ಡಾಕ್ಟರ್ ಒಮ್ಮೆ,” ಈ ಮಗೂಗೆ ನಿಜವಾಗಿಯೂ ಕೀಮೋ ಕೊಡುತ್ತೀದ್ದೀರಲ್ಲವೇ” ಎಂದು ಪ್ರಶ್ನಿಸಿದ್ದರು ನರ್ಸ್’ಗಳನ್ನ! ಆಕೆಯ ತಂದೆ ತನ್ನ ಮಗಳನ್ನ “ಸೋಶಿಯಲ್ ಬಟರ್’ಫ್ಲೈ” ಎನ್ನುತ್ತಾರೆ. ಒಮ್ಮೆ ಸೋಫಿಯಾ ಬದುಕು ಇನ್ನೇನು ಮುಗಿದೇಹೋಯಿತು ಎನ್ನುವ ಸ್ಥಿತಿಯಾಗಿತ್ತು. ಡಾಕ್ಟರ್’ಗಳು ಆಕೆಯ ಹೃದಯವನ್ನು ಪುನಶ್ಚೇತನಗೊಳಿಸುವಲ್ಲಿ ನಿರತಾಗಿದ್ದರು, ಹೊರಗೆ ಆಕೆಯ ತಂದೆ ತಾಯಿ ಕಣ್ಣೀರಿಡುತ್ತಿದ್ದರೆ, ಮಕ್ಕಳ ವಾರ್ಡ್’ನಲ್ಲಿದ್ದ ಎಲ್ಲ ಮಕ್ಕಳ ತಂದೆ ತಾಯಿ ಅಲ್ಲಿ ಇವರೊಂದಿಗೆ ನಿಂತು ಸೋಫಿಯಾಗಾಗಿ ಪ್ರಾರ್ಥಿಸುತ್ತಿದ್ದರು! ಅವರ ಪ್ರಾರ್ಥನೆಯ ಫಲವೇ ಇರಬೇಕು ಸೋಫಿಯ ಇಂದು ಸಾವಿನ ದವಡೆಯಿಂದ ಹೊರಬಂದು ಹೊಸ ಬದುಕು ಆರಂಭಿಸಿದ್ದಾಳೆ. ಈ ಬದುಕು ಆಕೆಗೆ ಮಾತ್ರ ಹೊಸದಾಗಿರಲಿಲ್ಲ, ಆಕೆಯ ತಂದೆ ತಾಯಿಗೂ ಕೂಡ. ಬದುಕಿನ ಮೌಲ್ಯ ಅರ್ಥವಾಗಿದೆ, ಮಗಳು ಒಂದು ಉಡುಗೊರೆಯಾಗಿದ್ದಾಳೆ, ಆಕೆಯೊಂದಿಗೆ ಬದುಕನ್ನ ಪ್ರತಿದಿನ, ಪ್ರತಿ ಗಂಟೆ, ಪ್ರತಿ ಸೆಕೆಂಡ್ ಎನ್ನುವಂತೆ ಬದುಕುತ್ತಿದ್ದಾರೆ. ಕ್ಯಾನ್ಸರ್ ನಂತರ ಆರಂಭವಾದ ಬದುಕಿದು!
ಇತ್ತೀಚೆಗೆ ಕ್ರಿಸ್ ಲ್ಯಾಂಕೆಶರ್ ಎಂಬಾಕೆಯೊಬ್ಬಳ ಪರಿಚಯವಾಯಿತು. ಆಕೆ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುತ್ತಿರುವುದಲ್ಲದೇ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ, ಅದರಲ್ಲೂ ಆಸ್ಟಿಯೊಸರ್ಕೋಮ ಬಗ್ಗೆ. ಆಕೆ ಕ್ಯಾನ್ಸರ್ ಸರ್ವೈವರ್ ಅಲ್ಲ. ಆದರೆ ಕ್ಯಾನ್ಸರ್’ನಿಂದಾಗಿ ತನ್ನ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡಿದ್ದಾಳೆ..!
ಆಂಡ್ರೂ ಜೇಮ್ಸ್ ಲ್ಯಾಂಕೆಶರ್ ತನ್ನ ೨೧ನೇ ಹುಟ್ಟುಹಬ್ಬದ ದಿನವೇ ಆಸ್ಟಿಯೋಸರ್ಕೋಮಾ ಉಂಟಾಗಿದ್ದರ ಬಗ್ಗೆ ತಿಳಿದುಕೊಂಡಿದ್ದು. ಅದರ ನಂತರ ೧೫ ತಿಂಗಳುಗಳ ಕಾಲ ಚಿಕಿತ್ಸೆ. ೧೬ ಕೀಮೋಗಳು, ಸುಮಾರು ೧೦ ಮೇಜರ್ ಆಪರೇಷನ್’ಗಳು. ಇಷ್ಟರ ನಂತರವೂ ಕಾಲನ್ನು ಹಾಗೂ ಹಿಪ್’ನ್ನು ತೆಗೆಯಲಾಯಿತು. ಆದರೂ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ. ಇದ್ದ ಒಬ್ಬನೇ ಒಬ್ಬ ಮಗ ಕ್ಯಾನ್ಸರ್’ಗೆ ಬಲಿಯಾದಾಗ ತಾಯಿಗಾಗುವ ನೋವನ್ನ ನಾವು ಕಲ್ಪಿಸಿಕೊಳ್ಳಲು ಆಗುವುದಿಲ್ಲ. “ಕ್ಯಾನ್ಸರ್ ಯಾಕಿಷ್ಟು ಕ್ರೂರ?” ಅಂತ ಅನ್ನಿಸದೇ ಇರಲಾರದು!! ಆದರೆ ಕ್ರಿಸ್ ಲಾಂಕೆಶರ್ ಬದುಕು ಅಂದಿನಿಂದ ಬದಲಾಗಿಹೋಯಿತು. ಮಗನ ಹೆಸರಲ್ಲಿ ಮೆಮೊರಿಯಲ್ ಫಂಡ್ ಆಂರಭಿಸಿರುವ ಕ್ರಿಸ್ ಆಸ್ಟಿಯೋಸರ್ಕೋಮ ಬಗ್ಗೆ ಜಾಗೃತಿ ಮೂಡಿಸಲು ತನ್ನ ಸಮಯ, ಶಕ್ತಿ ಎಲ್ಲವನ್ನೂ ಧಾರೆಯೆರೆಯುತ್ತಿದ್ದಾಳೆ. ಆಂಡ್ರ್ಯೂ ಬದುಕು ಅಂತ್ಯವಾಗಿದ್ದು ನಿಜ, ಆದರೆ ಆತನ ತಾಯಿ ಕ್ರಿಸ್’ಳ ಹೋರಾಟ ಆರಂಭವಾಗಿದ್ದು ಕ್ಯಾನ್ಸರ್ ನಂತರವೇ! ಆಕೆ ಕೂಡ ಊಹಿಸಿರಲಿಲ್ಲವೇನೊ ಆಕೆಯ ಬದುಕು ಇಂತಹ ಒಂದು ’ಹೊಸ ಆರಂಭ’ವನ್ನು ಪಡೆದುಕೊಳ್ಳುತ್ತದೆ ಎಂದು!!
ಮೊನ್ನೆ ಹೀಗೆ ಇಂಟರ್ನೆಟ್’ನಲ್ಲಿ ಏನನ್ನೋ ಹುಡುಕಿತ್ತಿದ್ದಾಗ ಸಿಕ್ಕಿದ್ದು ಮಾರ್ಟಿನ್ ಇಂದರ್ಬಿಟ್ಜಿನ್ ಎಂಬಾತನ ಟೆಡ್ ಟಾಕ್! ಮಾರ್ಟಿನ್ ಒಬ್ಬ ನರತಜ್ಞ. ಒಳ್ಳೆಯ ಕೆಲಸ, ಒಳ್ಳೆಯ ಸಂಬಳ, ಗರ್ಲ್’ಫ್ರೆಂಡ್ ಎಲ್ಲಾ ತಾನಂದುಕೊಂಡಂತೆ ಇತ್ತು ಬದುಕು. ಆದರೆ ಅದೆಲ್ಲವನ್ನೂ ತಲೆಕೆಳಗೆ ಮಾಡಿದ್ದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್..! ಹೆಚ್ಚೆಂದರೆ ಮೂರು ವರ್ಷ ಬದುಕಬಹುದು ಎಂದಿದ್ದರು ಡಾಕ್ಟರ್. ಬದುಕಿನ ಕೊನೆ ಯಾವುದು, ಯಾವಾಗ ಎಂದು ಗೊತ್ತಿಲ್ಲದೇ ಬದುಕುವುದು ತುಂಬಾ ಸುಲಭ! ಆದರೆ ಒಮ್ಮೆ, ಆ ಅಂತ್ಯಕ್ಕೆ ಡೇಟ್ ಫಿಕ್ಸ್ ಆಗಿಬಿಟ್ಟರೆ!!!! ಕಷ್ಟ… ಹಾಗೆ ತಾನೆ ಅನ್ನಿಸುವುದು?! ನಿಜ ಆ ಡೇಟ್ ಫಿಕ್ಸ್ ಆಗಿಬಿಟ್ಟರೆ ಕಷ್ಟವೇ ಆದರೆ ಮೂರು ವರ್ಷವನ್ನು ಮೂರು ಜನ್ಮದಂತೆ ಬದುಕುವುದು, ಅದನ್ನ ಆಸ್ವಾದಿಸುವುದು ಕೂಡ ಆಗಲೇ. ಬದುಕನ್ನ ಅಷ್ಟು ಆಳವಾಗಿ ಬದುಕಬಹುದು ಎಂದು ಗೊತ್ತಾಗುವುದು ಕೂಡ ಆಗಲೇ! ಮಾರ್ಟಿನ್ ಕೂಡ ಅಂತಹದೇ ಹಂತದಲ್ಲಿದ್ದ. ಮೊದಲಿಗೆ ಇದನ್ನ ಅರಗಿಸಿಕೊಳ್ಳುವುದು ಕಷ್ಟ, ಆದರೆ ಆತ ನಿರ್ಧರಿಸಿದ್ದ ತನ್ನ ಬದುಕಿನಲ್ಲಿರುವ ದಿನಗಳನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು. ಆಸ್ಪತ್ರೆಯಲ್ಲಿ ಮಲಗಿ ಕೀಮೋ ತೆಗೆದುಕೊಳ್ಳುತ್ತಿರುವಾಗಲೇ ಟ್ರೈಏಥ್ಲಾನ್’ಗೆ ಎನ್’ರೋಲ್ ಮಾಡಿಕೊಂಡಿದ್ದ!!! ಟ್ರೈಏಥ್ಲಾನ್’ನಲ್ಲಿ ಭಾಗವಹಿಸಬೇಕು ಎನ್ನುವುದೇ ಪ್ರತಿದಿನ ಆತನಿಗೆ ಭರವಸೆಯನ್ನು ನೀಡುತ್ತಿತ್ತು. ಆಗಿನಿಂದಲೇ ಆತ ಸ್ಪೋರ್ಟ್ಸ್ ಶೂ ಕೂಡ ಹಾಕಿಕೊಳ್ಳಲು ಆರಂಭಿಸಿದ್ದ. ಹಾಗಂತ ಆತ ಯಾವಾಗಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವನಾಗಿರಲಿಲ್ಲ. ಕ್ಯಾನ್ಸರ್ ಆತನಿಗೆ ಅದೇನು ಮಾಡಿತ್ತೋ ಗೊತ್ತಿಲ್ಲ. ಕೊನೆಗೂ ಆತ ಗುಣಮುಖನಾಗಿ ಟ್ರೈಏಥ್ಲಾನ್’ನಲ್ಲಿ ಭಾಗವಹಿಸಿ ಅದನ್ನ ಪೂರ್ಣಗೊಳಿಸಿದ. ಆತನಿಗೆ ಆ ಸಮಯದಲ್ಲಿ ಸ್ಪೂರ್ತಿ ನೀಡಿದ್ದು ಇತರ ಕ್ಯಾನ್ಸರ್ ಸರ್ವೈವರ್’ಗಳ ಬದುಕು. ಹಾಗಾಗಿಯೇ ಆತ ಈಗ “ಮೈ ಸರ್ವೈವಲ್ ಸ್ಟೋರಿ” ಎಂಬ ಒಂದು ವೆಬ್’ಸೈಟ್’ನ್ನು ಆರಂಭಿದ್ದಾನೆ. ಅಲ್ಲಿ ಸಾಕಷ್ಟು ಜನ ಕ್ಯಾನ್ಸರ್ ಸರ್ವೈವರ್’ಗಳ ಸ್ಪೂರ್ತಿದಾಯಕ ಬದುಕನ್ನ ಪರಿಚಯಿಸಿದ್ದಾನೆ. ನರತಜ್ಞನಾಗಿದ್ದ ಮಾರ್ಟಿನ್ ಒಬ್ಬ ಕ್ರೀಡಾಪಟು ಆಗಿದ್ದಲ್ಲದೇ ಒಬ್ಬ ಫಿಲ್ಮ್’ಮೇಕರ್ ಹಾಗೂ ಲೇಖಕನಾಗಿದ್ದಾನೆ. ಕ್ಯಾನ್ಸರ್’ನ ನಂತರವೇ ಆತನ ಬದುಕು ಈ ರೀತಿ ಹೊಸದಾಗಿ ಆರಂಭಗೊಂಡಿದ್ದು!!
ಮೊನ್ನೆ ಈಗ ತಾನೆ ಆಸ್ಟಿಯೋಸರ್ಕೋಮದಿಂದ ಚೇತರಿಸಿಕೊಳ್ಳುತ್ತಿರುವ ಹುಡುಗಿಯೊಬ್ಬಳು “ನಿಜವಾಗಿಯೂ ಕ್ಯಾನ್ಸರ್’ನ ನಂತರ ಬದುಕು ಬದಲಾಗುತ್ತಾ?” ಅಂತ ಕೇಳುತ್ತಿದ್ದಳು. ಆ ಪ್ರಶ್ನೆಗೆ ಇವರೆಲ್ಲರೂ ಉತ್ತಮ ಉದಾಹರಣೆ. ಕ್ಯಾನ್ಸರ್ ನಂತರವೇ ಇವರೆಲ್ಲಾ ಒಂದು ಹೊಸ ಅರಂಭವನ್ನು ಪಡೆದುಕೊಂಡಿರುವುದು. ಅದಕ್ಕೂ ಮೊದಲು ನಾವು ಹೀಗೆ ಕೂಡ ಬದುಕಬಹುದು ಎಂದು ಊಹಿಸಿಯೇ ಇರಲಿಲ್ಲ. ಕ್ಯಾನ್ಸರ್ ನಮಗೆ ಆ ನಿಟ್ಟಿನಲ್ಲಿ ಒಂದು ಹೊಸ ಆರಂಭವನ್ನು ಕೊಟ್ಟಿದಂತೂ ನಿಜ.
Facebook ಕಾಮೆಂಟ್ಸ್