X

ಉಳಿ ಪೆಟ್ಟು ಸರಿಯಾಗಿ ಬಿದ್ದರೆ ತಾನೇ ಕಲ್ಲೊಂದು ಮೂರ್ತಿಯಾಗುವುದು??

ನೆನಪಿದೆ ನನಗೆ.. 90 ರ ದಶಕದಲ್ಲಿ ನಾವು ಕಲಿಯುತ್ತಿರುವ ಶಿಕ್ಷಣದ ಗುಣಮಟ್ಟ, ರೀತಿಯೇ ಬೇರೆ ಆಗಿತ್ತು. ಈಗಿನ ಹಾಗೆ ಪ್ಲೇ ಹೋಮ್, ನರ್ಸರಿ, ಎಲ್.ಕೆಜಿ, ಯುಕೆಜಿ ಅಂತ ಏನು ಇರಲಿಲ್ಲ. ಆವಾಗ ಊರಿಗೆ ಒಂದು ಬಾಲವಾಡಿ ಅಂತಾ ಇದ್ದ ಕಾಲ. ಬೆಳಗ್ಗೆ ಎದ್ದ ತಕ್ಷಣ ಕೆಲವೊಬ್ಬರು ಸ್ನಾನ ಮಾಡಿದರೆ, ಇನ್ನು ಕೆಲವರು ಹಾಗೆ ಮುಖದ ಮೇಲೆ ಸ್ವಲ್ಪ ನೀರು ಹಾಕಿಕೊಂಡು ಹಾಗೆ ಬಾಲವಾಡಿಗೆ ಬರುತ್ತಿದ್ದರು. ಅವರು ಹೇಗೆ ಬಂದರೂ ಅವರ ಮನಸ್ಸು ಶುದ್ಧ, ನಿಷ್ಕಲ್ಮಶ ಮನಸ್ಸಿನಿಂದ ಕಲಿಯೊದಕ್ಕೆ ಅಂತಾನೆ ಬರುತ್ತಿದ್ದರು. ನಮಗೆ ಬಾಲವಾಡಿಗೆ ಗೆಳೆಯರೆಲ್ಲರ ಜೊತೆ ಸೇರಿ ಹೋಗೋದೇ ಒಂದು ದೊಡ್ಡ ಖುಷಿ.. ಕೈಯಲ್ಲಿ ಒಂದು ಪಾಟಿ, ಒಂದೇ ಒಂದು ಪೆನ್ಸಿಲ್ ಕೊಡಿಸುತ್ತಿದ್ದರು. ಆಗಿನ ಕಾಲದಲ್ಲಿ, ಹರಕು-ಮುರಕು ಅಂಗಿ ಚಡ್ಡಿ, ಬರಿಗಾಲಿನಲ್ಲಿ ಕಲ್ಲು ಮುಳ್ಳು ತುಳಿಯುತ್ತಾ ಹಾಗೆ ಓಡಿದ್ದೇ ಓಡಿದ್ದು ಕಾಲಿಗೆ ಚುಚ್ಚಿದ ಕಲ್ಲು ಮುಳ್ಳಿನ ನೋವು ಸಹ ಅರಿವು ಇರುತ್ತಿರಲಿಲ್ಲ.


ಈಗಿನ ಕಾಲದ ಮಕ್ಕಳ ಹಾಗೆ ನೋಡಿದರೆ ಅವರೆ ನಿಜಕ್ಕೂ ಪುಣ್ಯವಂತರು ಅನ್ಸುತ್ತೆ ಅಲ್ಲವಾ..? ಇವತ್ತಿನ ಅಂತರ್ಜಾಲ ಯುಗದಲ್ಲಿ ಬಹಳಷ್ಟು ಬದಲಾವಣೆಗಳು ಸದ್ದಿಲ್ಲದೆ ಶಿಕ್ಷಣದಲ್ಲಿ ನಡೆಯುತ್ತಿವೆ. ಇವತ್ತಿನ ದಿನದಲ್ಲಿ ಶಿಕ್ಷಣ ಹೇಗಿದೆ ಅಂದರೆ “ಶಿಕ್ಷಣ ಅಂದರೆ ವ್ಯಾಪಾರ, ವ್ಯಾಪಾರ ಅಂದರೆ ಶಿಕ್ಷಣ” ಈ ಥರಾ ಆಗಿದೆ.. ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ? ಇವತ್ತು ಏನೆಲ್ಲ ಬದಲಾವಣೆ ಆಗಿದೆ ನೋಡಿ, ಒಂದು ಮಗು ನರ್ಸರಿ ಸೇರಿತು ಎಂದರೆ ಆ ಮಗುವಿಗೆ ಬುಕ್ಸ್, ಪೆನ್ಸಿಲ್, ಶೂಸ್, ಸಾಕ್ಸ್, ಬೆಲ್ಟ್-ಟೈ,ಸ್ಕೂಲ್ ಡ್ರೆಸ್, ಮತ್ತೆ ವಾರಕ್ಕೊಂದು ದಿನ ಚಂದದ ಅಂದದ ಡ್ರೆಸ್, ಸ್ಟಡಿ ಟೇಬಲ್, ಪ್ರತ್ಯೇಕವಾದ ಸ್ಟಡಿ ರೂಮ್, ಪ್ರತಿ ದಿನ ನಾನಾ ಬಗೆಯ ತಿಂಡಿ ತಿನಿಸುಗಳ ಟಿಫನ್ ಬಾಕ್ಸ್ ಹೀಗೆ ನರ್ಸರಿ ಇಂದ ಹಿಡಿದು ಉನ್ನತ ವ್ಯಾಸಂಗದ ವರೆಗೂ ಹತ್ತು ಹಲವಾರು ಸವಲತ್ತುಗಳನ್ನ ಕೊಡಿಸಿದರು ಸಹ ನೂರಕ್ಕೆ ಶೇಕಡಾ ಎಂಬತ್ತು ಪ್ರತಿಶತ ಮಕ್ಕಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸದಿರುವದು ವಿಪರ್ಯಾಸವೇ ಸರಿ…


ಮೊದಲಿನ ಶಿಕ್ಷಣದ ಸ್ಥಿತಿಗೆ ಈಗಿನ ಕಾಲದ ಶಿಕ್ಷಣದ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ. ಆವಾಗ ಬಾಲವಾಡಿಯಲ್ಲಿ ಬೆಳಿಗ್ಗೆ ಎದ್ದು ಹೋದ ತಕ್ಷಣ ‘ತಾಯೆ ಶಾರದೆ, ಲೋಕ ಪೂಜಿತೇ ಜ್ಞಾನದಾತೇ ನಮೋಸ್ತುತೇ’ ಎನ್ನುವ ಪ್ರಾರ್ಥನೆ, ‘ವಕ್ರ ತುಂಡ ಮಹಾ ಕಾಯ’ ಎಂಬ ಶ್ಲೋಕ ಆಗಿರಬಹುದು ಕಾಲ ಕ್ರಮೇಣ ಕಡಿಮೆ ಆಗುತ್ತ ಹೋಗಿದೆ. ಇರಲಿ ಈ ಕಂಪ್ಯೂಟರ್ ಯುಗದ ಶಿಕ್ಷಣಕ್ಕೆ ಎಲ್ಲರೂ ಒಗ್ಗಲೇ ಬೇಕಾದ ಪರಿಸ್ಥಿತಿ ನಮ್ಮ ನಿಮ್ಮೆಲ್ಲರ ನಡುವೆ ಒದಗಿ ಬಂದಿದೆ.. ಒಂದು ಮಗು ಕಲಿತು, ಬೆಳೆದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂದರೆ ಅದರಲ್ಲಿ ವಿದ್ಯೆ ಕಲಿಸುವ ಗುರುವಿನ ಪಾತ್ರ ಮತ್ತು ತಿದ್ದಿ ತೀಡಿ ಬುದ್ದಿ ಹೇಳುವ ತಂದೆ ತಾಯಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ..


ಇದನ್ನೆಲ್ಲ ಯಾಕೆ ಪ್ರಸ್ತಾಪ ಮಾಡುತ್ತಿರುವೆ, ಅಂತಾ ವಿಚಾರ ಮಾಡ್ತಾ ಇರಬಹುದಲ್ಲವಾ ನೀವೆಲ್ಲಾ…? ಕಾರಣ ಇದೆ..

 

ನಮ್ಮ ಊರಲ್ಲಿ ನನ್ನ ಸನ್ಮಿತ್ರರೊಬ್ಬರು ಒಂದು ಇಂಗ್ಲಿಷ್ ಮೀಡಿಯಂ ಸ್ಕೂಲ್ ಒಂದನ್ನ ತೆರೆದು ಸುಮಾರು ಏಳರಿಂದ ಎಂಟು ವರ್ಷ ಕಳೆದಿದೆ.. ಅವರು ಕೂಡಾ ನನ್ನ ಆತ್ಮೀಯರಲ್ಲಿ ಒಬ್ಬರಾದ್ದರಿಂದ ಆವಾಗ ಆವಾಗ ಸ್ಕೂಲ ಕಡೆ ಬನ್ನಿ ಎಂದು ಹೇಳುತ್ತಿರುತ್ತಾರೆ,, ನಾನು ಕೂಡಾ ನನ್ನ ಬಿಡುವಿನ ಸಮಯದಲ್ಲಿ ಶಾಲೆ ಕಡೆ ಹೋಗಿ ಬರುವುದು ರೂಢಿ. ಕೆಲವು ತಿಂಗಳ ಹಿಂದೆ ಒಂದು ದಿನ ನಾನು ಅವರ ಆ ಕಡೆ ಹೋಗಿ ಮ್ಯಾನೇಜ್ಮೆಂಟ್ ಕೊಠಡಿಯಲ್ಲಿ ಅವರ ಜೊತೆ ಮಾತನಾಡುತ್ತಾ ಕುಳಿತಿದ್ದೆ. ತಕ್ಷಣ ಅಲ್ಲಿಗೋಬ್ಬರು ಆ ಸ್ಕೂಲನಲ್ಲಿ ಕಲಿಯುತ್ತಿರುವ ಮಗುವಿನ ತಂದೆ ರಾಜಾ ರೋಷವಾಗಿ ಬಂದು “ಯಾವನ್ನ ರೀ ಅವನು ಸರ್ರು, ನನ್ನ ಮಗನ ಮೇಲೆ ಕೈ ಮಾಡೋಕೆ ಎಷ್ಟು ರೀ ಧೈರ್ಯ ಅವನಿಗೆ, ಕರಿಸಿ ಅವನ್ನ” ಹೀಗೆ ಏಕವಚನದಲ್ಲಿ ಶಿಕ್ಷಕರು ಎಂಬುದು ಮರೆತು ಕೂಗಾಡತಿರಬೇಕಾದ್ರೆ ನಾನು ತಕ್ಷಣ ಎದ್ದು ನಿಂತು ಸಮಾಧಾನದಿಂದ ಅವರನ್ನ ಕೇಳಿದೆ “ಏನ್ರಿ ಅಂಕಲ್..? ಏನಾಯ್ತು..? ಯಾಕೆ ಈ ತರಾ ಗಲಾಟೆ ಮಾಡತಾ ಇದಿರಾ” ಅಂತಾ ಕೇಳಿದೆ.. ನನ್ನ ಸನ್ಮಿತೃರು/ಸಂಸ್ಥೆಯ ಅಧ್ಯಕ್ಷರು ಸಹ ಹೀಗೆ ಪ್ರಶ್ನಿಸಿದರು. “ಏಕೆ ಸರ್…? ಅಂತಹುದೇನು ಅನಾಹುತವಾಗಿದೆ..? ಈ ಪಾಟಿ ಸುಮ್ಮ ಸುಮ್ಮನೇ ಬಾಯಿ ಮಾಡುತ್ತಿರುವಿರಲ್ಲ” ಎಂದಾಗ ಅವರು “ನನ್ನ ಮಗ ಏನು ತಪ್ಪು ಮಾಡಿದ್ಧಾನೆಂದು ನಿಮ್ಮ ಸ್ಕೂಲನ ಸಹ ಶಿಕ್ಷಕರು ಎರಡೂ ಏಟು ಹೊಡಿದಿದ್ದಾರೆ..? ನನ್ನ ಮಗನನ್ನು ಹೊಡಿಯುವ ಅಧಿಕಾರ, ಬೈಯುವ ಅಧಿಕಾರ ಯಾರಿಗೂ ಇಲ್ಲ” ಅಂತಾ ಹೇಳಿದ್ರು… ನಾನು ಮಧ್ಯ ಪ್ರವೇಶಿಸಿ ಅವರ ಮಾತನ್ನು ತಡೆದು “ನೋಡಿ ಸರ್, ಯಾರದು ತಪ್ಪು..! ಯಾರದು ಒಪ್ಪು..! ವಿಚಾರಿಸಿ ನೋಡುನಾ ಸ್ವಲ್ಪ ತಾಳ್ಮೆ ಇಂದ ಇರಿ” ಅಂತಾ ಹೇಳಿ ಸಿಫಾಹಿ(ಅಟೆಂಡರ್)ಯನ್ನು ಕರೆದು ಆ ಮಗುವಿನ ಕ್ಲಾಸ್ ಟೀಚರನ್ನು ಮ್ಯಾನೇಜಮೆಂಟ್ ಕೊಠಡಿಗೆ ಬರಲು ಸೂಚಿಸಿ ಎಂದು ಹೇಳಿದೆ.. ಕೆಲವು ಕ್ಷಣಾರ್ಧದಲ್ಲಿ ಆ ಮಗುವಿನ ಕ್ಲಾಸ್ ಟೀಚರ್ ಕೊಠಡಿಗೆ ಬಂದು ‘ಏಕೆ ಸರ್..? ನನ್ನನು ಬರಲು ಸೂಚಿಸಿದರಿ’ ಎಂದು ಕೇಳಿದಾಗ ನಾನು ‘ನಮಸ್ಕಾರ ಸರ್.. ಆ ಮಗುವಿನ ಕ್ಲಾಸ್ ಟೀಚರ್ ನೀವೇನಾ..? ಆ ಮಗುವನ್ನು ಏಕೆ ಹೊಡೆದಿರುವಿರಿ..? ಎಂದು ಕೇಳಲು ಅವರು ‘ಹೌದು..ಸರ್ ಆ ಮಗು ನನ್ನ ತರಗತಿಯ ಹುಡುಗ.. ಅವನಿಗೆ ಮೂರು ದಿನಗಳ ಹಿಂದೆ ಹೋಮ್’ವರ್ಕ್ ಮಾಡಿಕೊಂಡು ಬರುವಂತೆ ಹೇಳಿದ್ದೆ. ಆದರೆ ಮಾರನೇ ದಿನ ಅವನು ಹೋಮ್ ವರ್ಕ್ ಮಾಡಿಕೊಂಡು ಬಂದಿರಲಿಲ್ಲ ಅದಕ್ಕೆ ಒಂದೆರಡೂ ಏಟು ಕೆನ್ನೆಗೆ ಹೊಡೆದೆ ಸರ್’ ಅಂತಾ ಹೇಳಿದರು..

 

ಬಳಿಕ, ಆ ಮಗುವಿನ ತಂದೆಗೆ ಹೇಳಿದೆ “ನೀವೇ ನೋಡಿದ್ರಲ್ಲಾ ಸರ್… ನಿಮ್ಮ ಮಗ ಹೋಮ್’ವರ್ಕ್ ಮಾಡದೆ ಇದ್ದ ಕಾರಣಕ್ಕಾಗಿ ಒಂದೆರಡು ಏಟು ಹೊಡೆದಿದ್ದಾರೆ ಅದರಲ್ಲಿ ಏನಿದೆ ತಪ್ಪು..? ಶಿಕ್ಷಕರು ಕಲಿಸುವ ಶಿಕ್ಷಣಕ್ಕಿಂತ ನಾವು ನಮ್ಮ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಆಗಬೇಕು.. ತಾಯಿನೇ ಮೊದಲ ಗುರು ಆಗಬೇಕು.. ಎರಡು ಪೆಟ್ಟು ನಿಮ್ಮ ಮಗನನ್ನು ಹೊಡೆದರೆಂದು ಇಲ್ಲಿಯ ತನಕ ಜಗಳ ಮಾಡಲು ಬಂದಿರಿವಿರೆಲ್ಲ..? ಇದು ಸರಿನಾ..? ನಿಮ್ಮ ಮಗ ನಿಮ್ಮಲ್ಲಿ ಬಂದು ತನ್ನ ಶಿಕ್ಷಕರು ಹೊಡೆದರೆಂದು ದೂರಿದಾಗ ನಿಮಗೆ ನಿಮ್ಮ ಮಗನ ತಪ್ಪು ಏನೆಂದು ಅರಿಯಲು ಸಾಧ್ಯವಾಗಲಿಲ್ಲವೇ.. ನಾವು ನೀವು ಕಲಿಯುವಾಗ ನಮ್ಮ ಪೂರ್ವಜರು ಹೇಳಿದ ಮಾತುಗಳು ‘ಚಡಿ ಚಮ್ಮ್ ಚಮ್ಮ್.. ವಿದ್ಯಾ ಗಮ್ಮ ಗಮ್ಮ’ ನೆನಪಿಗೆ ಬರಲಿಲ್ಲವೇ..? ನಾವು ನೀವು  ಕಲಿಯುತ್ತಿರುವಾಗ ನಾವು ಹೀಗೆ ಶಿಕ್ಷಕರು ಹೊಡೆದರು ಎಂದು ಹೇಳಿದಾಗ ನಮ್ಮ ಪಾಲಕರು ಹೀಗೆ ನಿಮ್ಮ ತರಾ ಶಾಲೆಯವರೆಗೂ ಯಾಕೆ ನಮ್ಮ ಮಗನನ್ನು ಹೊಡಿದಿರೀ ಎಂದು ಕೇಳಲು ಬರುತ್ತಿದ್ದರೆ..? ನೆನಪಿಸಿಕೊಳ್ಳಿ..ಇಲ್ಲವಲ್ಲ..ಅಸಲಿಗೆ ಅವರು ಒಂದೆರಡು ಏಟು ಹೊಡೆದು ನೀನು ಶಾಲೆಯಲ್ಲಿ ಏನಾದ್ರೂ ತಪ್ಪು ಮಾಡಿರುತ್ತಿಯಾ..ಅದಕ್ಕೆ ಅವರೇರಡೂ ಏಟು ಹೊಡೆದಿರುತ್ತಾರೆ ಅದರಲ್ಲಿ ಏನಿದೆ ಶಿಕ್ಷಕರ ತಪ್ಪು ಎಂದು ಗದರಿಸಿ ಚನ್ನಾಗಿ ಓದಿಕೋ ಹೋಗು ಎನ್ನುವ ಮಾತು ಮರೆತು ಹೋಯಿತೇ ಸರ್” ಎಂದು ನನಗೆ ತಿಳಿದ ಮಟ್ಟಿಗೆ ಹೇಳಿದೆ.. ಅದಕ್ಕವರು “ಕ್ಷಮಿಸಿ ಸರ್, ಮಗನ ಮೇಲಿನ ಪ್ರೀತಿಯಿಂದ ಇಲ್ಲಿಯ ತನಕ ಕೇಳಲು ಬಂದೆ.. ನನ್ನ ತಪ್ಪಿನ ಅರಿವಾಯಿತು ಸರ್”ಎಂದು ಹೇಳಿ ಹೊರಟು ಹೋದರು..


ನಮ್ಮ ಮಕ್ಕಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಅವರು ಯಾವುದೇ ಒಂದು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳೋದು ನಮ್ಮ ಕರ್ತವ್ಯವೆಲ್ಲವೇ..? ಮಕ್ಕಳಿಗೆ ತಂದೆ ತಾಯಿ ಆದವರು ಯಾವುದೇ ಮಾನಸಿಕ ಒತ್ತಡ ಹೇರಲು ಹೋಗಬಾರದು. ಯಾವಾಗಲು ನಮ್ಮ ಮಕ್ಕಳು ಕಷ್ಟಪಟ್ಟು ಓದಲು ಹೋಗಬಾರದು,ಮಕ್ಕಳ ಇಷ್ಟದಂತೆ ಓದಬೇಕು ಅಲ್ಲವೇ. ಮಕ್ಕಳ ಇಷ್ಟಗಳನ್ನು ಅನೇಕ ಬಾರಿ ಪಾಲಕರು ಕಡೆಗಣಿಸಿ ತಮಗೆ ಇಷ್ಟವಾದ ಕೋರ್ಸ್ಗಳಿಗೆ ಸೇರಿಸುವುದರಿಂದ ಮಕ್ಕಳು ಕಷ್ಟಪಟ್ಟು ಓದುವಂತಾಗುತ್ತದೆ ಹೌದಲ್ಲವೇ ಸ್ವಲ್ಪ ವಿಚಾರ ಮಾಡಿ. ಇವತ್ತಿನ ದಿನಗಳಲ್ಲಿ  ತಮ್ಮ ಮಕ್ಕಳ ಅರ್ಹತೆ ಅವರ ಶಕ್ತಿ ಸಾಮರ್ಥ್ಯ ತಿಳಿದುಕೊಳ್ಳಬೇಕೆನ್ನುವ ವಿಚಾರ ಇಂದಿನ ಪಾಲಕರಿಗಿಲ್ಲ.ಸಾಕಷ್ಟು ಸಂದರ್ಭಗಳಲ್ಲಿ ಪಾಲಕರಿಗೆ ಸ್ವ-ಪ್ರತಿಷ್ಠೆ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳ ಭವಿಷ್ಯ ಹಾಳು ಮಾಡಿಬಿಡುತ್ತಾರೆ. ನಮ್ಮ ಸ್ನೇಹಿತರ  ಮಕ್ಕಳು ಹೋಗುವ ಶಾಲೆಗೆ ತಮ್ಮ ಮಕ್ಕಳು ಹೋಗಬೇಕು. ಪಕ್ಕದ ಮನೆಯವರ ಮಕ್ಕಳು ಓದುವ ಕೋರ್ಸ್ ತಮ್ಮ ಮಕ್ಕಳೂ ಓದಬೇಕೆಂಬ ಹಠದಿಂದ ಮಕ್ಕಳ ಭವಿಷ್ಯ ಬಲಿತೆಗೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಪ್ರತಿಯೊಬ್ಬರು ತಮ್ಮ ಮಕ್ಕಳು ಇಂಜಿನಿಯರು ಅಥವಾ ವೈದ್ಯರಾಗಬೇಕೆಂದು ಆಸೆ ಪಡುತ್ತಾರೆ. ಆದರೆ ತಮ್ಮ ಮಕ್ಕಳು ‘ಉತ್ತಮ ಮನುಷ್ಯ’ರಾಗಬೇಕು ಎಂಬ ಆಲೋಚನೆ ಏಕೆ ಮಾಡುತ್ತಿಲ್ಲ? ಮನುಷ್ಯರ ಜೀವ ಧಾತು ಆಹಾರ. ಅದನ್ನು ಬೆಳೆಯುವ ಉತ್ತಮ ಕೃಷಿಕನಾಗಬೇಕು,ಮಾನ ಮುಚ್ಚುವ ನೇಕಾರ ಆಗಬೇಕೆಂದು ಎಂದು ಯಾರು ಇಷ್ಟಪಡುವುದಿಲ್ಲ..

ತಮ್ಮ ಮಕ್ಕಳು  ಹೆಚ್ಚು ಅಂಕ ಗಳಿಸಬೇಕು ಎಂಬ ಆಲೋಚನೆಗಿಂತ ಪಕ್ಕದ ಮನೆಯವರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆಯಬೇಕು ಎಂಬ ದುರಾಲೋಚನೆಗಳೇ ಹೆಚ್ಚು ಆಗಿವೆ. ಪಾಲಕರು ಮಕ್ಕಳ ವೈಫಲ್ಯತೆಗಳನ್ನು ಎತ್ತಿತೋರಿಸುವ ಶಿಕ್ಷಕರನ್ನು ಪ್ರಶ್ನಿಸುವ ಪರಿಪಾಟಲು ಬೆಳೆಯುತ್ತಿರುವುದು ಕಳವಳಕಾರಿ. ಹೀಗೆ ನಾವು ಮಾಡುತ್ತಾ ಹೋದರೆ ನಮ್ಮ ಮಕ್ಕಳ ಭವಿಷ್ಯಕ್ಕೆ ನಾವೇ ಮಾರಕ ಎಂಬುದನ್ನು ಮರಿಯಬೇಡಿ.. ಯಾವುದೇ ಒಂದು ಕಲ್ಲು ಮೂರ್ತಿ ರೂಪ ತಾಳಬೇಕಾದರೆ ಆ ಕಲ್ಲಿಗೆ ಸರಿಯಾಗಿ ಉಳಿ ಪೆಟ್ಟು ಬಿದ್ದ ಮೇಲೆ ತಾನೇ ಅದೊಂದು ಸುಂದರ ಮೂರ್ತಿ ಆಗೋದು..? ನಮ್ಮ ಮಕ್ಕಳು ಎಡವಿ ಬಿದ್ದಾಗ ಎಬ್ಬೀಸೋಣ, ತಪ್ಪಿದಾಗ ತಿದ್ದಿ ಬುದ್ದಿ ಹೇಳಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸೊಣ..

ಗುರು ಅರಳಿಮರದ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post