ಮಂಜುನಾಥ ರೈಗಳು ಥಟ್ಟನೆ ಎಚ್ಚರವಾಗಿ ಎದ್ದು ಕುಳಿತರು..ಹೊರಗಿನಿಂದ ಕೋಳಿಯ ಕೂಗು ಕೇಳಿಸುತ್ತಿದೆ..ಅದರ ಜೊತೆಗೆ ಕೆಲವು ಹಕ್ಕಿಗಳ ಕಲರವವೂ ಕೇಳಿಸುತ್ತಿದೆ..ಸಮಯ ಎಷ್ಟಾಗಿದೆಯೆಂದು ನೋಡಿದರೆ ಬೆಳಗ್ಗೆ ಐದು ಗಂಟೆ..!! ಹೊರಗೆ ಕತ್ತಲು ಸ್ವಲ್ಪ ಸ್ವಲ್ಪವೇ ಸರಿದು ಬೆಳಕು ಹರಿಯತೊಡಗಿತ್ತು..ಹಾಲ್ಗೆ ಬಂದವರು ಬೆಚ್ಚಿ ಬಿದ್ದರು..ಮುಂಬಾಗಿಲು ತೆರೆದಿದೆ.!! ಇದೇನು ಇಷ್ಟು ಹೊತ್ತಲ್ಲಿ ಹೊರಗೆ ಹೋದವರು ಯಾರು..?! ಮಗಳ ರೂಮಿಗೆ ಹೋಗಿ ನೋಡಿದರು..!! ಮಗಳಿಲ್ಲ..!! ಎಲ್ಲಿ ಹೋದಳು..?! ಮನೆಯಲ್ಲಿ ಎಲ್ಲ ಕಡೆ ಹುಡುಕಿದರು..ಕವಿತಾಳ ಪತ್ತೆಯಿಲ್ಲ..!! ತರುಣ್ಗೆ ಮಲಗಲು ಕೊಟ್ಟಿದ್ದ ರೂಮಿಗೆ ಹೋದರೆ ಅವನೂ ಕಾಣಿಸಲಿಲ್ಲ..!! ಮಂಜುನಾಥ ರೈಗಳು ಗಾಬರಿಯಾದರು..!! ಒಂದೇ ಸಮನೆ ಮಗಳ ಹೆಸರನ್ನು ಕೂಗುತ್ತಾ ಮನೆಯ ಹೊರಗೆ ಬಂದರು..!! ಕರೆಗೆ ಪ್ರತ್ಯುತ್ತರ ಇಲ್ಲ..!! ಹಟ್ಟಿಯಲ್ಲಿ ಹಸುಗಳ ಕೂಗು ಕೇಳಿಸಿ ಅತ್ತ ನಡೆದರು..ಅಲ್ಲಿಯೂ ಇಲ್ಲ..!! ಹಟ್ಟಿಯ ಸಮೀಪದಲ್ಲಿ ಸುನಿಲ್ ಉಳಿದುಕೊಳ್ಳುವ ರೂವಿತ್ತು..ಅಲ್ಲಿಗೆ ಹೋಗಿ ಅವನ ಹೆಸರಿಡಿದು ಕರೆದರು..ಉತ್ತರವಿಲ್ಲ..ಅಂದರೆ ಅವನು ಕೂಡಾ ಕಾಣಿಸುತ್ತಲ್ಲ..!! ಅಯ್ಯೋ..!! ಇದೇನಿದು..?! ಯಾರೂ ಕಾಣಿಸುತ್ತಿಲ್ಲ..ಎಲ್ಲಿ ಹೋದರು..?! ಮನಸ್ಸು ಕೇಡನ್ನು ಶಂಕಿಸಿತು.ಆ ಸಮಯದಲ್ಲಿ ಕಣ್ಣಿಗೆ ಆ ದೃಶ್ಯ ಬಿತ್ತು..!! ಹತ್ತಿರ ಹೋಗಿ ನೋಡಿದರು..ಅವರ ಮನೆಯ ನಾಯಿ ಜಿಮ್ಮಿ ಸತ್ತು ಬಿದ್ದಿತ್ತು..!! ಈಗಂತೂ ಉಂಟಾದ ಗಾಬರಿಗೆ ಏನು ಮಾಡಬೇಕೆಂಬುದೇ ತಿಳಿಯದಾಗಿತ್ತು..”ಮಂಜಣ್ಣ ಇಷ್ಟು ಬೆಳಗ್ಗೆ ಏನು ಮಾಡ್ತಿದ್ದೀರಾ..?!” ಗಂಡಸಿನ ಸ್ವರಕ್ಕೆ ಬೆಚ್ಚಿ ಬಿದ್ದು ನೋಡಿದರು..ಕಂಪೌಂಡ್ ಆ ಕಡೆಯಿಂದ ಪಕ್ಕದ ಮನೆಯ ಶ್ಯಾಮ ಭಟ್ಟರು ಕಾಣಿಸಿದರು..
“ಅದು..ಅದು..ಕವಿತ ಎಲ್ಲೂ ಕಾಣಿಸ್ತಿಲ್ಲ ಭಟ್ರೇ..?!” ಎಂದವರ ಧ್ವನಿ ನಡುಗಿತ್ತು..”ಏನು ಕವಿತ ಕಾಣಿಸ್ತಿಲ್ವೇ..?! ಎಲ್ಲ ಕಡೆ ಸರಿಯಾಗಿ ಹುಡುಕಿದ್ದೀರಾ..ಮಂಜಣ್ಣ..” “ಹೌದು ಭಟ್ರೇ..ಎಲ್ಲೂ ಇಲ್ಲ..!! ಜೊತೆಗೆ ಸುನಿಲ್ ಮತ್ತು ನಿನ್ನೆ ಬಂದ ತರುಣ್ ಕೂಡಾ ಕಾಣಿಸ್ತಿಲ್ಲ..!!” ಎಂದರು ರೈಗಳು..ಶ್ಯಾಮ ಭಟ್ಟರು ಅಚ್ಚರಿಯಿಂದ ಪ್ರಶ್ನಸಿದರು..”ತರುಣ್ ಅಂದ್ರೆ ಯಾರು..?!” ಅದಕ್ಕೆ ರೈಗಳು ಉತ್ತರಿಸಿದರು “ನನ್ನ ಇಂಟರ್ವ್ಯೂ ಮಾಡಲು ಬೆಂಗಳೂರಿನಿಂದ ಬಂದ ಜನಧ್ವನಿ ಪತ್ರಿಕೆಯ ಪರ್ತಕರ್ತ..!!” “ಏನು ಇಂಟರ್ವ್ಯೂನಾ..?! ಅಲ್ಲ..ಯಾರು ಅಂತ ಗೊತ್ತೇ ಇಲ್ಲ..ಮತ್ತೆ ಇಂಟರ್ವ್ಯೂ ಮಾಡಲು ಬಂದೆ ಅಂದವನನ್ನು ಅದೇಗೆ ನಂಬಿದ್ರಿ..?!” “ಆ ಸಮಯದಲ್ಲಿ ನನಗೆ ಅದು ಗೊತ್ತಾಗ್ಲಿಲ್ಲ..
ಅದೇ ನಾನು ಮಾಡಿದ ತಪ್ಪು!!” “ಛೆ! ಈಗನ ಕಾಲದಲ್ಲಿ ಗುರುತು ಪರಿಚಯ ಇಲ್ಲದವರನ್ನು ನಂಬಲೇಬಾರ್ದು..!!” ಎಂದವರು ಗೇಟನ್ನು ತೆರೆದು ಒಳಗೆ ಬಂದರು..ರೈಗಳು ನಿಂತಿದ್ದ ಕಡೆ ನಾಯಿ ಸತ್ತು ಬಿದ್ದಿದ್ದನ್ನು ಕಂಡು
ಹೌಹಾರಿದರು..”ಇದೇನು ಮಂಜಣ್ಣ..!! ನಾಯಿ ಸತ್ತಿದೆ..!!” “ಹೌದು ಭಟ್ರೇ..ನಮ್ಮ ಜಿಮ್ಮಿ ಸತ್ತಿದ್ದು ನೋಡಿದರೆ ನನಗ್ಯಾಕೋ ಯಾಕೋ ತುಂಬಾನೇ ಭಯವಾಗ್ತಿದೆ..ಕವಿತನಿಗೇನಾದರೂ..” ಎನ್ನುತ್ತಿರಬೇಕಾದರೆ ಶ್ಯಾಮ ಭಟ್ಟರು ಮಾತನ್ನು ಅರ್ಧದಲ್ಲೇ ತಡೆದರು..”ಬಿಡ್ತು ಅನ್ನಿ..ಅಂತದ್ದೇನು ಆಗಿರಲ್ಲ..ನೋಡಿ ನಮ್ಮನ್ನು ಕಾಪಾಡಲು ಮಹಲಿಂಗೇಶ್ವರನಿರುವಾಗ ಹಾಗೇನಾದರೂ ಕೆಟ್ಟದ್ದು ನಡೆಯಲು ಸಾಧ್ಯವೇ..?!” ಎಂದವರು ದೇವರೇ ಕವಿತಳಿಗೇನು ಆಗದಿರಲಿ..ಅವಳನ್ನು ನೀನೇ ಸೇಫಾಗಿ ಬರುವಂತೆ ಮಾಡು ಎಂದು ಮನಸ್ಸಲ್ಲೇ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದರು..ಈಗ ಕತ್ತಲನ್ನು ಹೊಡೆದೋಡಿಸಿ ಬೆಳಕು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸತೊಡಗಿತ್ತು..ಇನ್ನೇನು ಸೂರ್ಯನ ಆಗಮನದ ಮುನ್ಸೂಚನೆ ಎಂಬಂತೆ ಆಗಸದಲ್ಲಿ ತುಂಬ ರಂಗ್ ರಂಗಾಗಿ ಹರಡಿರುವ ಕೆಂಬಣ್ಣವು ಸೂಚನೆ ಕೊಡುತ್ತಿತ್ತು..
“ಏನಾಯ್ತು..ಮಂಜಣ್ಣ..” ಎಂದು ಪ್ರಶ್ನಿಸುತ್ತ ಬಂದರು ಇನ್ನೂ ನೆರೆ ಹೊರೆಯ ಮಿತ್ರರು..ಅವರಿಗೆಲ್ಲ ತನ್ನ ಮಗಳ ಬಗ್ಗೆ ತಿಳಿಸಿದರು..ಅವರಿಗೂ ಕವಿತಳ ಬಗ್ಗೆ ಏನೂ ತಿಳಿದಿರಲಿಲ್ಲ..”ಅವಳನ್ನು ಕರೆದುಕೊಂಡು ಹೋಗಿದ್ದದರೂ ಇಷ್ಟು ಬೇಗ ಈ ಪುತ್ತೂರಿನಿಂದ ಹೋಗಿರಲು ಸಾಧ್ಯವಿಲ್ಲ..ಬೇಗ ಎಲ್ಲ ಕಡೆ ಹುಡುಕಿದರೆ ಸಿಗಬಹುದು..” ಎಂದು ಸಲಹೆಯಿತ್ತ ರಾಜಣ್ಣ.. ಅವನ ಮಾತಲ್ಲಿ ಸತ್ಯವಿದೆಯೆನಿಸಿತು ಉಳಿದವರಿಗೆ..!! ಕೂಡಲೇ ಅಲ್ಲಿ ನರೆದಿದ್ದ ಕೆಲವರು ಕಾಲ್ ಮಾಡಿ ತಮ್ಮ ತಿಳಿದವರೊಡನೆ ಅವಳನ್ನು ಎಲ್ಲ ಕಡೆ ಹುಡುಕುವ ವ್ಯವಸ್ಥೆ ಮಾಡಿದರು..”ಪೋಲೀಸ್ ಕಂಪ್ಲೇಂಟ್ ಕೊಡುವುದು ಸೂಕ್ತ..” ಎಂದವನ ಬಳಿ ರಾಜಣ್ಣ ಹೇಳಿದ..”ಅದು ಬೇಡ..ಸುಮ್ಮನೆ ಊರಿಡೀ ಸುದ್ದಿಯಾಗಿ ಮಂಜಣ್ಣನಿಗೂ ಮುಜುಗರ..ಸ್ವಲ್ಪ ಹೊತ್ತು ಕಾಯೋಣ..ಆಮೇಲೂ ಅವಳು ಸಿಗದಿದ್ದರೆ ಕಂಪ್ಲೇಂಟ್ ಕೊಟ್ಟರಾಯಿತು..!!” ಎಲ್ಲರೂ ಅದು ಸರಿಯೆಂದರು..ಆಗ ಮನೆಯೊಳಗಿನಿಂದ ಬಂದ ಶಾರದಮ್ಮನಿಗೆ ಮನೆಯ ಮುಂದೆ ಜನ ಸೇರಿದ್ದು ಮಸುಕು ಮಸುಕಾಗಿ ಕಾಣಿಸಿತು..ಮಗನೊಡನೆ ಏನಾಯಿತೆಂದು ಪ್ರಶ್ನಿಸಿದರು..ತಾಯಿಗೆ ಆಘಾತವಾಗಬಹುದೆಂದು ಮಗಳ ವಿಷಯವನ್ನು ತಿಳಿಸದೆ ಕಂಬಳದ ತಯಾರಿಗಾಗಿ ಬಂದವರೆಂದು ಸುಳ್ಳು ಹೇಳಿದರು..ಅದೇ ಸಮಯದಲ್ಲಿ ಮಂಜುನಾಥ ರೈಗಳ ಮನೆಯ ಪಕ್ಕದ ಬೀದಿಯಲ್ಲಿರುವ ಪುತ್ತೂರಿನ ಶ್ರೀಮಂತ ವ್ಯಕ್ತಿ ಸುರೇಂದ್ರ ಬಂದ..ನೋಡಲು ಗೋಧಿ ಮೈ ಬಣ್ಣ..ತೀಕ್ಷ್ಣ ಕಂಗಳು..ದಪ್ಪ ಮೀಸೆಗೆ ಜೊತೆಯಾಗಿ ಪೊದೆಯಂತೆ ಬಿಟ್ಟಂತಹ ಗಡ್ಡ..ತಲೆಯಲ್ಲಿ ಅಲ್ಲಿ ಇಲ್ಲಿ ಇಣುಕುತ್ತಿರುವ ಬೆಳ್ಳಿ ಕೂದಲುಗಳು..ವಯಸ್ಸು ಮೂವತ್ತೋ-ಮೂವತ್ತೈದಿರಹುದೇನೋ..ನೀಳ ಕಾಯದ ವ್ಯಕ್ತಿ..!! ಧರಿಸಿದ್ದ ಶರ್ಟ್’ನ ಹೊರಗೆ ಕೊರಳಲ್ಲಿ ಎದ್ದು ಕಾಣಿಸುತ್ತಿರುವ ಚಿನ್ನದ ಸರ..ಕೈಗಳಲ್ಲಿಯೂ ಚಿನ್ನದ ಉಂಗುರಗಳು ಎಲ್ಲವೂ ಅವನು ದೊಡ್ಡ ಶ್ರೀಮಂತನೆಂದು ಸಾರಿ ಹೇಳುತ್ತಿತ್ತು..”ಏನು ಮಂಜಣ್ಣ..!! ಏನು ಸಮಾಚಾರ..?!” ಎಂದು ನಗುತ್ತಾ ಗಡ್ಡವನ್ನು ಸವರುತ್ತಾ ಕೇಳಿದ..ಅವನನ್ನು ಕಂಡರೆ ಊರಿನಲ್ಲಿ ಯಾರಿಗೂ ಆಗುತ್ತಿರಲಿಲ್ಲ..ಅವನಿಗೆ ಹಣ..ಪ್ರತಿಷ್ಟೆಯೇ ಮುಖ್ಯ..!! ಅಲ್ಲದೆ ತಾನೇ ದೊಡ್ಡ ಶ್ರೀಮಂತನೆಂಬ ಅಹಂ ಬೇರೆ..!! ಉಳಿದವರು ತೊಂದರೆಯಲ್ಲಿದ್ದರೂ ಅದು ಏನೆಂಬುವುದನ್ನೂ ನೋಡದೆ ಹಂಗಿಸುವುದು ಅವನ ಇನ್ನೊಂದು ಅಭ್ಯಾಸ..!!
“ಯಾಕೆ ಯಾರು ಏನೂ ಮಾತಾಡ್ತಿಲ್ಲ..ಓ ಸುನಿಲ್ ಕಾಣಿಸ್ತಿಲ್ವಾ..?! ಮಂಜಣ್ಣ ಮತ್ತೆ ಹೇಗೆ ಕೋಣಗಳನ್ನು ಓಡಿಸ್ತೀರಾ..?!” ಎಂದು ಪುನಃ ಪ್ರಶ್ನಿಸಿದವ ಜೋರಾಗಿ ನಕ್ಕು ಬಿಟ್ಟ..ಅಲ್ಲಿ ಸೇರಿದವರಿಗೆ ಸುರೇಂದ್ರನನ್ನು ಕೊಂದು ಬಿಡುವಷ್ಟು ಕೋಪ ಬಂದರೂ ತಡೆದುಕೊಂಡರು..”ಏನು ರಾಜಣ್ಣ..ನಾನು ಹೇಳಿದ್ದು ಸರಿಯಾಗಿದೆ ತಾನೇ..?!” ಯಾರೂ ತನ್ನೊಡನೆ ಮಾತನಾಡದ್ದನ್ನು ಕಂಡು ರಾಜಣ್ಣನೊಡನೆ ಪ್ರಶ್ನಿಸಿದ ಸುರೇಂದ್ರ..”ಹುಂ..ಅದು ಮಂಜಣ್ಣನ ಮಗಳು ಕೂಡ ಕಾಣಿಸ್ತಿಲ್ಲ..!!” ಎಂದು ಉತ್ತರಿಸಿದ ರಾಜಣ್ಣ..”ಓ…ಇದಾ ಸಮಾಚಾರ..ಅವಳು ಯಾವನೋ ಜೊತೆ ಓಡಿ ಹೋಗಿರ್ಬೇಕು..!!” ಇದೊಂದು ದೊಡ್ಡ ವಿಷಯಾನೇ ಅಲ್ಲವೆಂಬಂತೆ ಹೇಳಿದ ಅವನು..ಆಗಲೇ ಮನೆಯ ಗೇಟಿನ ಮುಂದೆ ವಾಹನದ ನಿಂತ ಸದ್ದು ಕೇಳಿಸಿ ಎಲ್ಲರೂ ಅತ್ತ ನೋಡಿದರು..ನಿಂತ ಪೋಲೀಸ್ ಜೀಪು ಕಾಣಿಸಿತು..ಅದರಿಂದ ತರುಣ್,ಕವಿತ ಮತ್ತು ಸುನಿಲ್ ಇಳಿದರು..!! ಅಲ್ಲಿ ನೆರೆದಿದ್ದವರಿಗೆಲ್ಲ ಶಾಕ್ ಆಗಿತ್ತು..!! ಮಂಜುನಾಥ ರೈಗಳು ಮಗಳ ಬಳಿಗೆ ನಡೆದರು..”ಕವಿತ ಏನಿದೆಲ್ಲ..?!” ಎಂದು ಮಗಳನ್ನು ಪ್ರಶ್ನಸಿದರು..ಅವರಿಗೆ ಒಂದು ಕಡೆ ಮಗಳು ಬಂದಿದ್ದು ಸಮಾಧಾನ ತಂದರೆ ಇನೊಂದು ಕಡೆ ಅವಳು ಪೋಲಿಸ್ ಜೀಪಲ್ಲಿ ಬಂದಿದ್ದು ನೋಡಿ ಹೆದರಿಕೆಯಾಗಿತ್ತು..ಆಗ ತರುಣ್ ಉತ್ತರಿಸಿದ..”ಅದನ್ನು ನಾನು ಹೇಳ್ತೀನಿ ಸಾರ್..!!” ಎಂದು ರಾತ್ರಿ ನಡೆದ
ಎಲ್ಲ ಫಟನೆಗಳನ್ನೂ ವಿವರಿಸತೊಡಗಿದ..ಫ್ಲಾಶ್ ಬ್ಯಾಕ್..!!
******************************************************************
ಮುಖದ ಮೇಲೆ ನೀರಿನ ಹನಿ ಬಿದ್ದಂತಾಗಿ ಕಣ್ತೆರೆದು ನೋಡಿದ ತರುಣ್..ಮೇಲೆ ಆಗಸದಿ ಮೋಡಗಳ ಜೊತೆ ಆಟವಾಡುತ್ತಿರುವ ಚಂದ್ರ ಮತ್ತು ನಕ್ಷತ್ರಗಳು ಕಾಣಿಸಿದುವು..”ಹಲೋ..” ಎಂಬ ಧ್ವನಿ ಕೇಳಿಸಿ ನೋಡಿದವನಿಗೆ ಅಚ್ಚರಿ..ಒಂದು ಕೈಯಲ್ಲಿ ಟಾರ್ಚ ಮತ್ತು ಇನ್ನೊಂದು ಕೈಯಲ್ಲಿ ನೀರಿನ ತಂಬಿಗೆ ಹಿಡಿದಿದ್ದ ಕವಿತ ಕಾಣಿಸಿದಳು..”ಇದೇನು ಇಲ್ಲಿ ಮಲಗಿದ್ದೀರಾ.?!” ಎಂದವಳ ಧ್ವನಿಯಲ್ಲಿ ಗಾಬರಿಯಿತ್ತು..”ಅಯ್ಯೋ..ಹಾಗೇನು ಇಲ್ಲ..!!” ಎಂದು ಗಡಿಬಿಡಿಯಿಂದ ಎದ್ದು ಕುಳಿತವನಿಗೆ ತಲೆ ನೋವಿನಿಂದ ಧೀಂ!! ಎಂದಿತ್ತು..ಆದರೂ ಎದ್ದು ಸೀದಾ ಸುನಿಲ್ ಇದ್ದ ರೂಮಿನತ್ತ ಓಡಿದ..”ಹಲೋ..ಏನಾಯಿತು..?! ಯಾಕೆ ಓಡ್ತಿದ್ದೀರಾ..?!” ಎನ್ನುತ್ತಾ ಕವಿತಳೂ ಅವನ ಹಿಂದೆ ಓಡಿದಳು..ಸುನಿಲ್ ರೂಮಲ್ಲಿ ಇಲ್ಲದ್ದು ನೋಡಿ ಗಾಬರಿಗೊಂಡ..”ಕವಿತಾವ್ರೇ..ಸುನಿಲ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ..!!” ಎಂದ..ಅವಳಿಗೂ ಗಾಬರಿಯಾಗಿತ್ತು..”ಏನು ಕಿಡ್ನ್ಯಾಪ್ಪಾ..?!” “ಈಗೇನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ..!!” ಎಂದು ಕೈ ಕೈ ಹೊಸಕಿಕೊಂಡ..”ಅಪ್ಪನಿಗೆ ಹೇಳ್ಲಾ..?!” ಎಂದಳು ಅವಳು..”ಬೇಡ..ಬೇಡ..ಅವರಿಗೆ ಹೇಳುವುದು ಬೇಡ..ಸುಮ್ನೆ ಗಾಬರಿಯಾಗ್ತಾರೆ..” ಎಂದ..ಆಗ ಅಲ್ಲೇ ಸಮೀಪದಲ್ಲಿ ನಾಯಿ ಬಿದ್ದಿದ್ದು ಕಾಣಿಸಿತು..ಅದರ ಕೊರಳ ಮೇಲೆ ಕಾಣಿಸಿದ ಗಾಯದಿಂದ ರಕ್ತ ಒಸರುತ್ತಿತ್ತು..”ಜಿಮ್ಮಿ..” ಎನ್ನುತ್ತಾ ಕವಿತ ಅದರ ಬಳಿಗೆ ಓಡಿದಳು..ಅದಾಗಲೇ ಸತ್ತು ಹೋಗಿತ್ತು..” ಕವಿತಾವ್ರೆ..ನಾಯಿಯನ್ನು ಕೊಂದು ಸುನಿಲ್ನನ್ನು ಎಳೆದುಕೊಂಡು ಹೋಗಿದ್ದಾರೆ..!!” ಎಂದು ಹೇಳಿದ ತರುಣ್…ಅದೇ ಸಮಯದಲ್ಲಿ ಇಬ್ಬರಿಗೂ ಟಿನ್..ಟಿನ್..!! ಎಂಬ ಸದ್ದು ಆ ನಿಶ್ಶಬ್ಧ ವಾತಾವರಣದಲ್ಲಿ ಸ್ಪಷ್ಟವಾಗಿ ಕೇಳಿಸಿತ್ತು..”ಇದು ಮೊಬೈಲ್ಗೆ ಬರುವ ಮೆಸೇಜ್ ಟ್ಯೂನ್ ಅಲ್ವಾ..?!” ಎಂದ ತರುಣ್..”ಹೌದು..ಇಲ್ಲೆಲ್ಲೋ ಮೊಬೈಲ್ ಇದೆ ಅಂತ ಅನಿಸ್ತಿದೆ..” ಎಂದವಳು ಟಾರ್ಚ್ ಬೆಳಕಿನ ಸಹಾಯದಿಂದ ಹುಡುಕತೊಡಗಿದಳು..ಅವನು ಅವಳಿಗೆ ಹುಡುಕುವುದಕ್ಕೆ ಸಹಾಯ ಮಾಡಿದ..ಕೊನೆಗೆ ಇಬ್ಬರಿಗೂ ಮೊಬೈಲ್ ಸಿಕ್ಕಿತ್ತು..ನೋಕಿಯಾ ಬೇಸಿಕ್ ಸೆಟ್ ಅದು..!! ಅದನ್ನು ತೆಗೆದು ನೋಡಿದ ತರುಣ್..ಯಾವುದೋ ಕಂಪೆನಿ ಮೆಸೇಜ್ ಕಾಣಿಸಿತ್ತು..!! ಅದನ್ನು ನೊಡಿದವನು ತನ್ನ ಮೊಬೈಲ್ ನಂಬರನ್ನು ಅದರಲ್ಲಿ ಟೈಪ್ ಮಾಡಿ ರಿಂಗ್ ಮಾಡಿದ..ಅವನ ಮೊಬೈಲ್ ರಿಂಗಾಗಿತ್ತು..ತೆಗೆದು ನೋಡಿದವನಿಗೆ ಹೊಸ ನಂಬರ್ ಡಿಸ್ಪ್ಲೇಯಲ್ಲಿ ಕಾಣಿಸಿತ್ತು..ಆ ನಂಬರನ್ನು ಟ್ರೂ ಕಾಲರ್ನಲ್ಲಿ ಯಾರದೆಂದು ನೋಡಿದ..ಅದರಲ್ಲಿ ಸಂತೋಷ್ ಎಂಬ ಹೆಸರನ್ನು ತೋರಿಸಿತ್ತು..ಅದನ್ನು ಕವಿತಳಿಗೆ ತೋರಿಸಿ ಇದು ಯಾರೆಂದು ಕೇಳಿದ..ಅವಳಿಗೂ ಗೊತ್ತಿರಲಿಲ್ಲ..
“ಇನ್ನು ಉಳಿದದ್ದು ಒಂದೇ ದಾರಿ..!! ಪೋಲೀಸ್ ಕಂಪ್ಲೇಂಟ್..”ಎಂದ..”ಅಪ್ಪನನ್ನು ಎಬ್ಬಿಸುತ್ತೇನೆ..” ಎಂದು ಹೊರಟ ಕವಿತಳನ್ನು ತಡೆದ..”ಬೇಡ..ನಾನೇ ಹೋಗ್ತೀನಿ..ನೀವು ಹೋಗಿ ಮಲಗಿ..” ಎಂದ “ಬೇಡ..ನಾನೂ ನಿಮ್ಮ ಜೊತೆ ಬರ್ತೀನಿ..ಪೋಲೀಸ್ ಸ್ಟೇಶನ್ ಇಲ್ಲೇ ಹತ್ತಿರದಲ್ಲಿದೆ..” ಎಂದಳು ಕವಿತ..ಅವನು ಸರಿಯೆಂದ..ಇಬ್ಬರೂ ಪೋಲೀಸ್ ಸ್ಟೇಶನ್ಗೆ ಹೋಗಿ ಅಲ್ಲಿ ನಿದ್ದೆ ತೂಗುತ್ತಿದ್ದ ಪೇದೆಯನ್ನು ಎಬ್ಬಿಸಿ ತಾವು ಬಂದ ವಿಷಯವನ್ನು ತಿಳಿಸಿದರು..ಅವನು ಕೂಡಲೇ ಎಸ್.ಐ ಗೆ ತಿಳಿಸಿದ..ತರುಣ್ ತನಗೆ ಸಿಕ್ಕಿದ ಮೊಬೈಲ್ ಕೊಟ್ಟು ನಡೆದ ಎಲ್ಲ ಘಟನೆಗಳನ್ನು ಎಸ್.ಐ ಗೆ ಹೇಳಿದ..ಅವರು ತಡ ಮಾಡಲಿಲ್ಲ..!! ಕೂಡಲೇ ರಾತ್ರಿಯೇ ಎಲ್ಲ ಕಡೆಗೆ ಪೋಲೀಸರನ್ನು ಕಳುಹಿಸಿ ಸುನಿಲ್ ಮತ್ತು ಕಿಡ್ನಾಪರ್ಸ್ಗಳಿಗೋಸ್ಕರ ಹುಡುಕಿಸಿದರು..ಕೊನೆಗೆ ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿರುವಾಗ ಟೋಲ್ಗೇಟಲ್ಲಿ ಸಿಕ್ಕಿ ಬಿದ್ದರು..ಆದರೆ ಇಬ್ಬರು ಕಿಡ್ನಾಪರ್ಸ್ಗಳು ಸಿಕ್ಕಿ ಬಿದ್ದರೆ ಉಳಿದವರು ತಪ್ಪಿಸಿಕೊಂಡರು..ಇದೆಲ್ಲ ಆಗುವ ಹೊತ್ತಿಗೆ ಆಗಲೇ ಬೆಳಗಾಗಿತ್ತು..!! ಆ ಸಿಕ್ಕಿ ಬಿದ್ದವರು ತಾವು ಒಬ್ಬ ವ್ಯಕ್ತಿಗೋಸ್ಕರ ಈ ಕಿಡ್ನಾಪ್ ಮಾಡಿದ್ದಾಗಿ ತಿಳಿಸಿದರು..ಯಾರು ಆ ವ್ಯಕ್ತಿ..?!
**************************************************************
“ಯಾರು ಆ ವ್ಯಕ್ತಿ..?!” ಎಂದು ಎಲ್ಲರೂ ಕುತೂಹಲದಿಂದ ಪ್ರಶ್ನಸಿದರು..”ಅದು ಯಾರೆಂದರೆ..!!” ಎಂದು ಹೇಳುತ್ತಾ ಅಲ್ಲಿ ನೆರೆದಿದ್ದವರನ್ನೆಲ್ಲ ನೋಡಿದ..ಸುರೇಂದ್ರ ಅಲ್ಲಿಂದ ಎಸ್ಕೇಪ್ ಆಗಲು ಹೊರಟಾಗ ಸುನಿಲ್ ತಡೆದು ನಿಲ್ಲಿಸಿದ..”ಯಾಕೆ ಸುರೇಂದ್ರಣ್ಣ ಹೋಗ್ತಿದ್ದೀರಾ..?! ನಿಮಗೆ ಅವರು ಯಾರು ಎಂದು ಗೊತ್ತಾಗುವುದು ಬೇಡ್ವಾ..?!” “ನನಗೆ ಮನೆಯಲ್ಲಿ ಅರ್ಜೆಂಟ್ ಕೆಲಸ ಇದೆ..ಬರ್ತೇನೆ..!!” ಎಂದು ಗಾಬರಿಯಿಂದ ನುಡಿದವನು ಅಲ್ಲಿಂದ ಹೋಗಲು ಮುಂದಾದ..ಅವನನ್ನು ಹಿಡಿದು ನಿಲ್ಲಿಸಿದ ಸುನಿಲ್ ಕೇಳಿದ..”ಆ ವ್ಯಕ್ತಿ ಯಾರೂಂತ ನಿಮಗೆ ಗೊತ್ತಿರ್ಬೇಕಲ್ಲ..ಅದು ಯಾರೆಂದು ಹೇಳಿ..ಆಮೇಲೆ ಹೋಗಿ..” “ಅ..ಅದು ನನಗೆ ಹೇಗೆ ಗೊತ್ತಿರುತ್ತೆ..?!”ಎಂದ
ಸುರೇಂದ್ರ ಹಣೆಯಲ್ಲಿ ಮೂಡಿದ ಬೆವರನ್ನು ಒರೆಸುತ್ತಾ..”ಹಾಗಾದ್ರೆ ಬೇಡ ಬಿಡಿ ಇವನೇ ಹೇಳ್ತಾನೆ..!!” ಎನ್ನುತ್ತಾ ಕೈಗೆ ಬೇಡಿ ಹಾಕಿದವನೊಬ್ಬನನ್ನು ಮುಂದಕ್ಕೆ ತಳ್ಳುತ್ತಾ ಬಂದರು ಎಸ್.ಐ..!! ಈಗಂತೂ ಸುರೇಂದ್ರ ಹೆದರಿಕೆಯಿಂದ ನಡುಗಿ ಹೋದ..!! “ಹೇಳೋ..ಅವನು ಯಾರೂಂತ..!!” ಎಸ್.ಐ ಜೋರಾಗಿ ಹೇಳಿದಾಗ ಕೈಗೆ ಬೇಡಿ ಹಾಕಿದ್ದವನು ಸುರೇಂದ್ರನ ಕಡೆ ಬೆರಳು ಮಾಡಿ ತೋರಿಸಿದ..”ನಾನಾ..!! ಇಲ್ಲ..ಇವನು ಸುಳ್ಳು ಹೇಳ್ತಿದ್ದಾನೆ..ನಾನ್ಯಾಕೆ ಹಾಗೆಲ್ಲ ಮಾಡ್ಲಿ..”ಎಂದು ಅಲ್ಲಿಂದ ನುಣುಚಿಕೊಳ್ಳಲು ಪ್ರಯತ್ನಸಿದ..ಆದರೆ ಸಾಧ್ಯವಾಗಲಿಲ್ಲ..”ಇದಕ್ಕೆ ಸಾಕ್ಷಿ ಬೇರೆ ಇದೆ..” ಎಂದು ಮೊಬೈಲ್ ತೋರಿಸಿದರು..”ಈ ಮೊಬೈಲ್ಗೆ ಒಂದು ನಂಬರ್ನಿಂದ ಹಲವು ಸಲ ಕಾಲ್ ಬಂದಿದೆ..ಅದನ್ನು ಚೆಕ್ ಮಾಡಿದಾಗ ಸುರೇಂದ್ರ ಎಂಬವರಿಗೆ ಸೇರಿದ ನಂಬರ್ ಅದು ಎಂದು ತಿಳಿಯಿತು..ಇದಕ್ಕೆ ಏನಂತೀರಿ..?!” ಎಂದು ಎಸ್.ಐ ಪ್ರಶ್ನಿಸಿದಾಗ ಇನ್ನು ಒಪ್ಪದೆ ವಿಧಿಯಿರಲಿಲ್ಲ..ತನ್ನ ಮೇಲೆ ಸಂಶಯ ಬರಬಾರದೆಂದು ಮಂಜುನಾಥ ರೈಗಳನ್ನು ಮಾತನಾಡಿಸಲು ಬಂದ ಸುರೇಂದ್ರ ಹಾಗೆ ಕಿಡ್ನಾಪರ್ಸ್ ಮಾಡಿದ ಎಡವಟ್ಟಿನಿಂದಾಗಿ ಸಿಕ್ಕಿಬಿದ್ದಿದ್ದ.. ತಾನೇ ಸುನಿಲ್ನ ಕಿಡ್ನಾಪ್ನ ಹಿಂದಿನ ಸೂತ್ರಧಾರನೆಂದು ಒಪ್ಪಿಕೊಂಡ..ಪ್ರತಿ ವರ್ಷವೂ ಕಂಬಳದಲ್ಲಿ ಮಂಜುನಾಥ ರೈಗಳ ಕೋಣಗಳು ಗೆಲ್ಲುತ್ತಿದ್ದು ಇದನ್ನು ಸಹಿಸಲಾಗದೆ ತಾನು ಈ ಕೆಲಸ ಮಾಡಿದೆನೆಂದೂ,ಅಲ್ಲದೆ ಪ್ರತಿಷ್ಟೆಯ ಪ್ರಶ್ನೆಯಾಗಿ ಈ ಸಲ ನನ್ನ ಕೋಣಗಳು ಕಂಬಳದಲ್ಲಿ ಗೆಲ್ಲಬೇಕೆಂಬ ಹಂಬಲ ನನ್ನನ್ನು ಈ ಕಿಡ್ನಾಪ್ ಮಾಡಲು ಪ್ರೇರೇಪಿಸಿತೆಂದು ತಿಳಿಸಿದ..
“ಅಯ್ಯೋ..ಮನೆಹಾಳ..!! ಈ ರೀತಿ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು..?! ನೀನಗೆ ಯಾವತ್ತೂ ಒಳ್ಳೆಯದಾಗಲ್ಲ” ಶ್ಯಾಮ ಭಟ್ಟರು ಹಿಡಿಶಾಪ ಹಾಕಿದರು..”ಮಂಜಣ್ಣ ನಾನು ಬೇಕೂಂತ ಈ ರೀತಿ ಮಾಡಲಿಲ್ಲ..ಏನೋ ಈ ಸಲ ನಾನೇ ಗೆಲ್ಲಬೇಕೆಂಬ ಹುಚ್ಚು ಆಸೆಗೆ ಈ ರೀತಿ ಮಾಡಿದೆ..ಇನ್ನು ಸುನಿಲ್ನನ್ನು ಕೊಲ್ಲುವ ಉದ್ದೇಶ ಇರಲಿಲ್ಲ..ಕಂಬಳ ಮುಗಿಯುತ್ತಿದ್ದಂತೆ ಅವನನ್ನು ಬಿಟ್ಟು ಬಿಡುತ್ತಿದ್ದೆ..” ಎಂದು ಮಂಜುನಾಥ ರೈಗಳ ಬಳಿ ಸುರೇಂದ್ರ ತಾನು ಮಾಡಿದ ಕಾರ್ಯದ ಬಗ್ಗೆ ವಿವರಣೆ ಕೊಟ್ಟು ಕ್ಷಮಾಪಣೆ ಕೋರಿದ..ಅವರು ಏನನ್ನೂ ಹೇಳದೆ ಮೌನವಾಗಿದ್ದರು..ಸುರೇಂದ್ರನನ್ನು ಎಸ್.ಐ ಅರೆಸ್ಟ್ ಮಾಡಿ ಕರೆದುಕೊಂಡು ಹೋದರು..
“ಎಲ್ಲ ಒಳ್ಳೆಯದಾಯಿತಲ್ಲ..ಅದೇ ಸಮಾಧಾನ..!!” ಎಂದು ನಿಟ್ಟುಸಿರು ಬಿಟ್ಟ ರಾಜಣ್ಣ..”ತರುಣ್..ನೀನು ನಮ್ಮನ್ನು ದೊಡ್ಡ ಅಪಾಯದಿಂದ ಕಾಪಾಡಿದ್ದೀಯ..ತುಂಬ ಥಾಂಕ್ಸಪ್ಪಾ..!!” ಎಂದವರು “ಕವಿತ ಕಾಣಿಸದಾಗ ಇದಕ್ಕೆ ಕಾರಣ ನೀನೇ ಅಂತ ತಪ್ಪಾಗಿ ತಿಳಿದುಕೊಂಡಿದ್ದೆ..ಅದಕ್ಕಾಗಿ ಕ್ಷಮೆಯಿರಲಿ” ಎಂದು ಕೇಳಿಕೊಂಡಾಗ ಅವನು ಬೇಸರ ವ್ಯಕ್ತಪಡಿಸಿದ..”ಅಯ್ಯೋ..ಅದಕ್ಯಾಕೆ ಕ್ಷಮೆ ಕೇಳುತ್ತೀರಾ..?! ಮಗಳು ಕಾಣಿಸದಾಗ ಈ ಅಪರಿಚಿತನ ಮೇಲೆ ಅನುಮಾನ ಬರುವುದು ಸಹಜ ತಾನೇ..!!” “ತರುಣ್ ಸಾರ್..ನೀವು ಅಪರಿಚಿತ ಅಂತ ಯಾರು ಹೇಳಿದ್ದು..?!” ಎಂಬ ಧ್ವನಿ ಕೇಳಿಸಿ ಎಲ್ಲರೂ ಆಶ್ಚರ್ಯದಿಂದ ನೋಡಿದರು..ಕರಣ್ ತನ್ನ ದೊಡ್ಡದಾದ ಬ್ಯಾಗ್ ಹಿಡಿದುಕೊಂಡು ನಿಂತಿದ್ದ..!! “ಕರಣ್..ನೀನ್ಯಾವಗಲೋ ಬಂದೆ..” ತರುಣ್ ಅಚ್ಚರಿಯಿಂದ ಪ್ರಶ್ನಸಿದ.. “ಸುರೇಂದ್ರನನ್ನು ಪೋಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋದ್ರಲ್ಲ..ಅವಾಗಲೇ ಬಂದೆ..” ಎಂದ ಸ್ಮೈಲ್ ಮಾಡುತ್ತಾ..”ಕರಣ್ ಇವರು ನಿನಗೆ ಹೇಗೆ ಗೊತ್ತು..?! ಅಲ್ಲ ನಿಮಗಿಬ್ಬರಿಗೂ ಮೊದಲೇ ಪರಿಚಯ ಇದೆಯಾ..?!” ರೈಗಳು ಆಶ್ಚರ್ಯ ವ್ಯಕ್ತಡಿಸಿದರು.. “ಅಪ್ಪಾ..ಇವರನ್ನು ಯಾರೆಂದುಕೊಂಡಿರಿ..?!” “ಜನಧ್ವನಿ ಪತ್ರಿಕೆಯ ಪರ್ತಕರ್ತ..ನನ್ನ ಇಂಟರ್ವ್ಯೂ ಮಾಡಲು ಬಂದವನು ಅಲ್ಲವಾ..?!” ಕರಣ್ ಜೋರಾಗಿ ನಗತೊಡಗಿದ..ತರುಣ್ನನ್ನು ಬಿಟ್ಟು ಮಂಜುನಾಥ ರೈಗಳ ಸಹಿತ ಅಲ್ಲಿ ನೆರೆದಿದ್ದವರೆಲ್ಲ ಅವನ ನಗುವನ್ನು ನೋಡಿ ಬೆಪ್ಪಾಗಿ ನಿಂತರು..
“ತರುಣ್ ಸಾರ್..ನೀವೂ ಹೇಳಿಲ್ವಾ..ಯಾರೂಂತ..?!” ಇನ್ನೂ ಜೋರಾಗಿ ನಗತೊಡಗಿದ..”ಕರಣ್..ಏನಿದು ನಿನ್ನ ಹುಡುಗಾಟ..!!” ಕವಿತ ಗದರಿದಾಗ “ಅಕ್ಕ..ಇವರು ಇಲ್ಲಿಗೆ ಯಾಕೆ ಬಂದಿದ್ದಾರೆ ಎಂದು ತಿಳಿದರೆ ನೀನು ಶಾಕ್ ಆಗ್ತೀಯಾ..ಹೇಳ್ಲಾ..?!” ಎಂದ ಕರಣ್..ಕವಿತ ಗಾಬರಿಯಿಂದ ತರುಣ್ ಕಡೆ ನೋಡಿದಳು..ಅವನು ಅವಳನ್ನೇ ನೋಡುತ್ತಾ ನಿಂತಿದ್ದ..”ನೀನು ಹೇಳಪ್ಪಾ!! ” ಎಂದು ಶ್ಯಾಮ ಭಟ್ಟರು ಕುತೂಹಲದಿಂದ ಹೇಳಿದರು..
“ಅಕ್ಕನನ್ನು ನೋಡಲು ಬಂದವರು..ತರುಣ್ಚಂದ್ರ..ನನ್ನ ಸೀನಿಯರ್ ಆಫೀಸರ್..!!” ಎಂದು ಎಲ್ಲರನ್ನೂ ನೋಡುತ್ತಾ ನುಡಿದ ಕರಣ್..!! ಎಲ್ಲರಿಗೂ ಶಾಕ್..!! “ಏನಪ್ಪಾ ಇದು..?!” ಎಂದ ತಂದೆಗೆ ಕರಣ್ ಉತ್ತರಿಸಿದ..
“ಹೌದು ಅಪ್ಪಾ..ನನ್ನ ಮೊಬೈಲ್ನಲ್ಲಿ ಅಕ್ಕನ ಪೋಟೋ ನೋಡಿದ ಇವರು ಇವಳು ಯಾರೂಂತ ಕೇಳಿದರು..ನಾನು ನನ್ನ ಅಕ್ಕ ಎಂದು ಹೇಳಿ ಎಲ್ಲ ವಿಷಯವನ್ನೂ ಹೇಳಿದೆ..ಅಕ್ಕನ ಹಿಂದಿನ ಕಹಿ ಘಟನೆಗಳನ್ನು ಕೇಳಿ ತುಂಬಾನೇ ಬೇಸರ ವ್ಯಕ್ತಪಡಿಸಿದರು..ನೀನು ನಿಮ್ಮ ಮನೆಯವರೆಲ್ಲ ಒಪ್ಪುವುದಾದರೆ ನಾನು ಮದುವೆಯಾಗ್ತೀನಿ ಎಂದರು..ನನಗೂ ಅಕ್ಕ ಹೀಗೆ ಒಂಟಿಯಾಗಿರುವುದು ಇಷ್ಟವಿರಲಿಲ್ಲ..ಹಾಗಾಗಿ ಒಪ್ಪಿದೆ..”
“ಅಲ್ಲ..ಅದು..” ಮಂಜುನಾಥ ರೈಗಳು ರಾಗವೆಳೆದಾಗ “ಸಾರ್!! ನಾನು ಕವಿತಳನ್ನು ಅವಳ ಕಥೆ ಕೇಳಿ ಸಿಂಪತಿಗೋ ಇಲ್ಲ ಕನಿಕರಕ್ಕೋ ಒಪ್ಪಿದ್ದಲ್ಲ..ನಿಜವಾಗಿಯೂ ನನಗೆ ಇಷ್ಟವಾಗಿದ್ದಾಳೆ..!! ಇನ್ನು ನನ್ನ ಮನೆಯ ಬಗ್ಗೆ ಚಿಂತೆ ಮಾಡ್ಬೇಡಿ..ಅವರನ್ನು ಒಪ್ಪಿಸುವ ಜವಾಬ್ದಾರಿ ನನ್ನದು..” ಎಂದ ತರುಣ್..ಕವಿತ ಇನ್ನೂ ಶಾಕ್ನಿಂದ ಹೊರ ಬಂದಿರಲಿಲ್ಲ..”ಮಂಜಣ್ಣ ಕವಿತ ಹೀಗೆ ಒಂಟಿಯಾಗಿ ಬಾಳ್ಬೇಕಾ..?! ಅವಳ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿದ್ಯಾ..?! ಅವಳಿಗೂ ಎಲ್ಲರಂತೆ ತನಗೂ ಗಂಡ,ಮಕ್ಕಳು ತನ್ನ ಸಂಸಾರ ಅಂತ ಆಸೆ ಆಕಾಂಕ್ಷೆ ಇರಲ್ವಾ..?! ಇನ್ನು ನೀನು ಹೋದ ನಂತರ ಅವಳ ಗತಿಯೇನು..?! ಕರಣ್’ಗೆ ಭಾರವಾಗಿ ಇರಬೇಕೇನು..?! ಯೋಚಿಸಿ ನೋಡು” ಎಂದರು ಶ್ಯಾಮ ಭಟ್ಟರು..ಮಂಜುನಾಥ ರೈಗಳಿಗೂ ಅವರು ಹೇಳಿದ ಮಾತಲ್ಲಿ ಸತ್ಯವಿದೆನಿಸಿತ್ತು..”ಕವಿತ ಒಪ್ಪುವುದಾದರೆ ನನ್ನದೇನು ಅಭ್ಯಂತರ ಇಲ್ಲ..!!” ಎಂದರು..ಈಗ ಎಲ್ಲರೂ ಕವಿತಳ ಒಪ್ಪಿಗೆಗೋಸ್ಕರ ಅವಳ ಕಡೆ ನೋಡಿದರು..”ಅಪ್ಪಾ..ಅಕ್ಕ ಆಗಲೇ ಒಪ್ಪಿಯಾಗಿದೆ..!!” ಎಂದಾಗ ಅವಳು ಅವನ ಕಡೆ ದುರುಗುಟ್ಟಿ ನೋಡಿದಳು..”ನೋಡಿ ಅವರಿಗೆ ಇಷ್ಟವಿಲ್ಲದಿದ್ದರೆ ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ..ನಾನೇನು ಫೋರ್ಸ್ ಮಾಡ್ತಿಲ್ಲ..!!” ಎಂದ ತರುಣ್..”ನನಗೆ ಒಪ್ಪಿಗೆಯಿದೆ” ಎಂದು ತಲೆ ತಗ್ಗಿಸಿ ನುಡಿದ ಕವಿತಳ ಕೆನ್ನೆಗಳು ರಾಗ ರಂಜಿತವಾಗಿದ್ದವು..ಇದನ್ನು ಕೇಳಿ ತರುಣ್’ನ ಮುಖವರಳಿತ್ತು..!! ಅಲ್ಲಿದ್ದವರೆಲ್ಲಗೂ ಸಂತಸವಾಗಿತ್ತು..”ನೀವು ಪತ್ರಕರ್ತ ಅಮತ ಸುಳ್ಳು ಹೇಳಿ ಯಾಕೆ ಬಂದ್ರಿ..” ಎಂದು ರಾಜಣ್ಣ ಕೇಳಿದಾಗ ತರುಣ್ ನಕ್ಕು ಬಿಟ್ಟ..”ಎಲ್ಲರಿಗೂ ದೊಡ್ಡ ಸರ್ಪ್ರೈಸ್ ಕೊಡೋಣ ಎಂದು ಸುಳ್ಳು ಹೇಳಿ ಬಂದೆ ಅಷ್ಟೆ..ಇನ್ನು ನನ್ನ ಬಗ್ಗೆ ಅನುಮಾನ ಬರಬಾರದೆಂದು ಇಂಟರ್ವ್ಯೂ ಮಾಡುವ ತರಹ ಕಂಬಳದ ಬಗ್ಗೆ ವಿಚಾರಿಸಿದೆ..!! ಆದರೆ ಇದೆಲ್ಲದರ ಮೈನ್ ಡೈರೆಕ್ಟರ್ ಇವನೇ..” ಎಂದು ಕರಣ್ ಹೆಗಲ ಮೇಲೆ ಕೈ ಹಾಕುತ್ತಾ ಹೇಳಿದ ತರುಣ್..
ಮಂಜುನಾಥ ರೈಗಳು ಮಗನಿಗೆ ಬೈದರೆ ಕವಿತ ತಮ್ಮನನ್ನು ತರಾಟೆಗೆ ತೆಗೆದುಕೊಂಡಳು..ಇದಾವುದೂ ತಿಳಿಯದೆ ಸುಮ್ಮನೆ ಮನೆ ಮುಂದೆ ಕುಳಿತಿದ್ದ ಶಾರದಮ್ಮನ ಬಳಿ ಹೇಳಿದ ಕರಣ್..”ಅಜ್ಜಿ ಈರೆನ ಪುಲ್ಲಿನ ಪೊಸ ಕಂಡೆನಿನ್ ತೂಲೆ(ಅಜ್ಜಿ ನಿನ್ನ ಮೊಮ್ಮಗಳ ಹೊಸ ಗಂಡನನ್ನು ನೋಡು)..!!” ಅಜ್ಜಿಗೆ ಅದು ಕೇಳಿಸಲಿಲ್ಲ.. “ದಾನೆ ಕಂಡನಾ..ಅವು ಏತುಂಡು ಪಂಡುದು ನಿಕ್ಕೊತ್ತುಜ್ಜಾ(ಏನು ಗದ್ದೆನಾ..ಅದು ಎಷ್ಟಿದೆ ಅಂತ ನಿನಗೆ ಗೊತ್ತಿಲ್ವಾ)..” ಎಂದಾಗ ಎಲ್ಲರೂ ಜೋರಾಗಿ ನಕ್ಕರೆ ಕರಣ್ ಕೈಯಿಂದ ಹಣೆ ಚಚ್ಚಿಕೊಂಡ..ನಂತರ ಶ್ಯಾಮ ಭಟ್ಟರು,ರಾಜಣ್ಣನ ಸಹಿತ ಅಲ್ಲಿ ಸೇರಿದ್ದವರು ಖುಷಿಯಿಂದಲೇ ಅಲ್ಲಿಂದ ತೆರಳಿದರು..ಕರಣ್ ತನ್ನ ಬ್ಯಾಗಿನೊಂದಿಗೆ ಅಜ್ಜಿಯನ್ನು ಕರೆದುಕೊಂಡು ಮನೆಯೊಳಗೆ ಹೋದರೆ ಮಂಜುನಾಥ ರೈಗಳು ಮತ್ತು ಸುನಿಲ್ ಅಂದು ನಡೆಯುವ ಕಂಬಳದ ತಯಾರಿಗಾಗಿ ತೆರಳಿದರು..ಅಲ್ಲಿ ನಿಂತಿದ್ದ ಕವಿತಳ ಬಳಿ ನಡೆದ ತರುಣ್..”ಕವಿತಾವ್ರೇ..ಥಾಂಕ್ಸ್ ನನ್ನ ಒಪ್ಪಿದ್ದಕ್ಕೆ..” ಎಂದ..”ಇಲ್ಲ..ನಿಮ್ಮ ಯೋಗ್ಯತೆಗೆ ನಾನು ತಕ್ಕವಳಲ್ಲ..ಆದರೂ ನೀವು ನನ್ನ ಇಷ್ಟಪಟ್ಟಿರಿ..ನನ್ನ ಪಾಲಿನ ದೇವರಾಗಿ ಬಂದ್ರಿ..!!” ಎಂದವಳ ಕಂಗಳು ತುಂಬಿ ಬಂದಿದ್ದುವು..ತರುಣ್ ಅವಳ ಕಣ್ಣೀರನ್ನು ಒರೆಸಿ ತನ್ನ ತೋಳುಗಳಿಂದ ಅವಳನ್ನು ಬಳಸಿ ತನ್ನೆದೆಗೆ ಒರಗಿಸಿಕೊಂಡ..ಕವಿತ ಅವನ ಅಪ್ಪುಗೆಯಲ್ಲಿ ತನ್ನ ಹೊಸ ಜೀವನದ ಬಗ್ಗೆ ಕನಸು ಕಾಣತೊಡಗಿದಳು..ಇದಾವುದರ ಪರಿವೆಯೇ ಇಲ್ಲದೆ ಮರದ ಮೇಲೆ ಕುಳಿತಿದ್ದ ಕೋಗಿಲೆಯೊಂದು ಮಧುರವಾಗಿ ಹಾಡುತ್ತಿದ್ದರೆ ಆಗಸದಲ್ಲಿ ಆಗ ತಾನೆ ಹುಟ್ಟಿದ ರವಿ ಮೋಡಗಳೊಡನೆ ಆಟವಾಡುತ್ತಿದ್ದ.
Facebook ಕಾಮೆಂಟ್ಸ್