ಸಾಮಾಜಿಕ ಜಾಲತಾಣ ಮತ್ತೆ ಸುದ್ದಿಯಲ್ಲಿದೆ. ಸದಾ ಒಂದಲ್ಲ ಒಂದು ಹಾಟ್ ಟಾಪಿಕ್ ಚರ್ಚಿಸಲ್ಷಡುವ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಕಾಮೆಂಟ್’ಗಳನ್ನಾಧರಿಸಿ ಕೆಲವೊಂದು ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಕೇಸು ಜಡಿದು ಅವರನ್ನು ಹಣಿಯುವ ಪ್ರಯತ್ನ ಇತ್ತೀಚಿಗೆಯಂತೂ ಬಹಳ ಎಗ್ಗಿಲ್ಲದೇ ಸಾಗುತ್ತಿದೆ. ಎಡ, ಬಲ, ಜಾತಿ, ಧರ್ಮಗಳ ಆಧಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧಿಗಳನ್ನು ಹೀಯಾಳಿಸಿ ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಹೊಸ ಟ್ರೆಂಡ್ ಬಂದಾಗಿದೆ.
ಬದಲಾಗುತ್ತಿರುವ ಜಗತ್ತಿನ ಜೊತೆ ಭಾರತದ ರಾಜಕಾರಣ ಕೂಡಾ ಬದಲಾಗುತ್ತಿದೆ ಮತ್ತು ಸಧ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣ ಬಳಕೆ ರಾಜಕೀಯ ಪಕ್ಷಗಳಿಗೆ ಅನಿವಾರ್ಯ ಕೂಡಾ. ಮೋದಿ ಹವಾ ಈ ಪರಿ ಎದ್ದಿರುವುದಕ್ಕೆ ಮುಖ್ಯ ಕಾರಣ ಸಾಮಾಜಿಕ ಜಾಲತಾಣಗಳು ಅನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ೨೦೧೫ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮೊರೆ ಹೋದದ್ದು ಸಾಮಾಜಿಕ ಜಾಲತಾಣ ಪ್ರಚಾರಕ್ಕೆ! ಕೇಜ್ರಿವಾಲರಿಂದ ಹಿಡಿದು ಪಕ್ಷದ ಅನೇಕ ನಾಯಕರು ಟ್ವಿಟರ್ ಮತ್ತು ಫೇಸ್ಬುಕ್ ಮೂಲಕ ಜನರಿಗೆ ಹತ್ತಿರವಾದರು. ನಂತರ ಜನಗಳಿಗೆ ಆಮ್ ಆದ್ಮಿಗಳ ನಿಜಬಣ್ಣ ಬಯಲಾದಾಗ ಅದೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಕ್ ಥೂ ಅಂತಲೂ ಉಗಿದರು! ಈಗಂತೂ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣವನ್ನು ನೆಚ್ಚದೇ ರಾಜಕೀಯ ಮಾಡದಷ್ಟು ಮಟ್ಟಕ್ಕೆ ಬೆಳೆದು ಬಿಟ್ಟಿದೆ ಸಾಮಾಜಿಕ ಜಾಲತಾಣಗಳು. ಚುನಾವಣೆಗೆ ಇನ್ನೂ ಒಂದು ವರ್ಷಕ್ಕಿಂತಲೂ ಜಾಸ್ತಿ ಸಮಯವಿದ್ದರೂ ಕರ್ನಾಟಕದಲ್ಲಿ ಹಲವಾರು ನಾಯಕರ ಹೆಸರಿನಲ್ಲಿ ಸಿಎಂ ಪೇಜ್ಗಳು ಆಗಲೇ ಹುಟ್ಟಕೊಂಡಿವೆ ಮತ್ತು ಕಾಲ ಕಾಲಕ್ಕೆ ಬೇಕಾದ ಅಪ್ಡೇಟ್ಗಳನ್ನು ಜನರಿಗೆ ಒದಗಿಸುತ್ತಿವೆ ಅಂದರೆ ಯೋಚಿಸಿ ರಾಜಕೀಯ ಪಕ್ಷಗಳ ಯಾವ ರೀತಿ ಸಾಮಾಜಿಕ ಜಾಲತಾಣ ಪಾಲಿಸಿಯನ್ನು ಅಳವಡಿಸಿಕೊಳ್ಳುತ್ತಿವೆ ಅನ್ನುವುದರ ಬಗ್ಗೆ!
ಸಾಫ್ಟವೇರ್ ಕ್ಷೇತ್ರದಲ್ಲೂ ಸಾಮಾಜಿಕ ಜಾಲತಾಣಗಳು ಬಹಳ ಉಪಯೋಗಕ್ಕೆ ಬರುತ್ತಿದೆ. ಹೊಸ ಪ್ರಾಜೆಕ್ಟ್ ಬಂದ ಕೂಡಲೇ ಸಾಫ್ಟವೇರ್ ಕಂಪನಿಗಳ ಮ್ಯಾನೇಜರ್ ಮಾಡೋ ಪ್ರಥಮ ಕೆಲಸ ಏನು ಗೊತ್ತೇ? ಆ ಪ್ರಾಜೆಕ್ಟಿನಲ್ಲಿ ಕೆಲಸ ಮಾಡಲಿರುವ ಇಂಜಿನಿಯರ್ಗಳ ಬಳಿ ಅವರ ವಾಟ್ಸಾಪ್ ನಂಬರ್ ಪಡೆದುಕೊಂಡು ವಾಟ್ಸಾಪ್ ಗ್ರೂಪ್ ಸ್ಥಾಪಿಸುವುದು. ಕಾರಣ ಇಷ್ಟೇ. ಪ್ರಾಜೆಕ್ಟ್ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಲು ಮತ್ತು ಕೆಲವೊಮ್ಮೆ ತುರ್ತು ಸನ್ನಿವೇಶಗಳಲ್ಲಿ ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸಾಪ್ ಮೂಲಕ ಸಂಬಂಧಿಸಿದ ಇಂಜಿನಿಯರನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಲು.!! ಕೆಲವೊಂದು ಸಾಫ್ಟವೇರ್ ಕಂಪನಿಗಳ ನೇಮಕಾತಿ ಜಾಹೀರಾತುಗಳೂ ಫೇಸ್ಬುಕ್ಕಿನಲ್ಲಿರುತ್ತವೆ ಮತ್ತು ಎಷ್ಟೋ ಜನರು ಆ ಜಾಹೀರಾತಿನ ಮೂಲಕವೇ ಕೆಲಸವನ್ನೂ ಗಿಟ್ಟಿಸಿಕೊಂಡ ಉದಾಹರಣೆಯೂ ನಮ್ಮಲ್ಲಿದೆ.
ಮನುಷ್ಯ ಎಷ್ಟು ಅಂತರ್ಜಾಲಕ್ಕೆ ಮಾರು ಹೋಗಿದ್ದಾನೆ ಅಂದರೆ ಎಲ್ಲಿ ಹೋದೆ, ಎಲ್ಲಿ ಊಟ ಮಾಡಿದೆ, ಯಾವ ಸಿನಿಮಾ ನೋಡಿದೆ, ಸಿನಿಮಾ ಹೇಗಿತ್ತು, ಊಟಕ್ಕೆ ಹೋಗಿದ್ದ ಹೋಟೆಲ್ ಹೇಗಿತ್ತು ಎನ್ನುವುದನ್ನು ವ್ಯಕ್ತಪಡಿಸುವುದು ಸಾಮಾಜಿಕ ಜಾಲತಾಣಗಳಲ್ಲಿ.! ಲಾಂಗ್ ಜರ್ನಿ ಹೋಗುವವರಿದ್ದರೆ ಅದಕ್ಕೆ ಬೇಕಾದ ಮಾರ್ಗಸೂಚಿಯನ್ನು ಫೇಸ್ಬುಕ್’ನಲ್ಲೇ ಆ ಊರಿನ ಗೆಳಯರಲ್ಲಿ ಕೇಳುವವರಿದ್ದಾರೆ. ಪ್ರವಾಸದ ಅನುಭವ, ರಸ್ತೆಗಳ ಪರಿಸ್ಥಿತಿ, ಖುಷಿ ಮತ್ತು ದುಃಖ ಎರಡೂ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಟ್ರಾಫಿಕ್ ಪೋಲಿಸ್ ಲಂಚ ತೆಗೆದುಕೊಳ್ಳುತ್ತಿರುವುದು, ಮತ್ತು ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿರುವುದು, ರಾಜಕಾರಣಿಯೊಬ್ಬ ನಿಯಮ ಪಾಲನೆ ಮಾಡದ ವಿಡಿಯೋ ಹೆಚ್ಚಾಗಿ ಮೊದಲು ಪ್ರಕಟವಾಗುವುದು ಸಾಮಾಜಿಕ ಜಾಲತಾಣಗಳಲ್ಲಿ. ಟಿವಿ ಚಾನೆಲ್ಗಳು ಎಷ್ಟೋ ಬಾರಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿಯ ಹುರುಳನ್ನಿಟ್ಟುಕೊಂಡೇ ಹೆಡ್ ಲೈನ್ಸ್ ಪ್ರಕಟಿಸಿದ ಉದಾಹರಣೆಗಳಿವೆ.
ಫೇಸ್ಬುಕ್ಕಿನಲ್ಲಿ ಮೇಮ್ಸ್ ಮತ್ತು ಟ್ರಾಲ್ ಪೇಜುಗಳು ಗಲ್ಲಿಗೊಂದರಂತೆ ಹುಟ್ಟಿಕೊಳ್ಳುತ್ತಿವೆ. ಬಹಳ ಮುಖ್ಯ ವಿಷಯ ಅಂದರೆ ಈ ಪೇಜುಗಳ ಮೂಲಕ ಲಕ್ಷಗಟ್ಟಲೇ ಸಂಪಾದಿಸುವವರೂ ಇದ್ದಾರೆ. ಮೇಮ್ಸ್ ಮೂಲಕ ಟ್ರಾಲ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಾ ಇದೆ. ಮತ್ತು ಹತ್ತಾರು ಲೇಖನಗಳನ್ನು ಜೋಡಿಸಿ ಬರೆದ ಲೇಖನಗಳಿಗಿಂತ ಒಂದು ಸಣ್ಣ ಮೇಮ್ ಬಹಳ ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತಿದೆ. ಮಜಾ ಟಾಕೀಸ್ ಸೃಜನ್ ಮತ್ತು ಬಿಗ್ಬಾಸ್ ಸ್ಪರ್ಧಿ ಸಂಜನಾ ಇತ್ತೀಚಿಗೆ ಟ್ರಾಲ್ ಮಾಡೋರ ಕಣ್ಣಿಗೆ ಬಿದ್ದು ಟ್ರಾಲ್ ಆಗಿದ್ದರು. ರಾಹುಲ್ ಗಾಂಧಿ, ಕೇಜ್ರಿವಾಲ್, ಪ್ರಧಾನಿ ಮೋದಿಯನ್ನೂ ಟ್ರಾಲ್ ಮಾಡುತ್ತಾರೆ. ಫೇಸ್ಬುಕ್ನಲ್ಲಿ ತಮ್ಮ ಫನ್ನಿ ಮತ್ತು ಕ್ಯಾಚಿ ಸ್ಟೇಟಸ್ಗಳಿಂದಾಗಿಯೇ ಬಹಳ ಪ್ರಸಿದ್ಧರಾದವರು ಇದ್ದಾರೆ.
ಮುಂಬೈನಲ್ಲಿ ಬಾಳಾ ಠಾಕ್ರೆ ಮರಣ ಹೊಂದಿದಾಗ ನಡೆದ ಮೆರವಣಿಗೆ ವಿರೋಧಿಸಿ ಕಾಮೆಂಟ್ ಹಾಕಿದ್ದ ಎರಡು ಯುವತಿಯರನ್ನು ಮುಂಬೈ ಪೋಲೀಸರು ಬಂಧಿಸಿದ್ದರು. ಕರ್ನಾಟಕದಲ್ಲೂ ಫೇಸ್ಬುಕ್ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತಂದವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಅದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರು ತಮ್ಮ ವಿರುದ್ಧ ಮಾತಾಡುತ್ತಾರೋ ಅವರ ಮೇಲೆ ದೂರು ದಾಖಲಿಸಿ ಅವರನ್ನು ಹಣಿಯೋ ಯತ್ನ ನಡೆಯುತ್ತಿದೆ. ಇದು ನಿಜಕ್ಕೂ ಕಳವಳಕಾರಿ. ಒಂದು ಕಡೆ ಫ್ರೀಡಮ್ ಆಫ್ ಸ್ಪೀಚ್ ಬಗ್ಗೆ ಮಾತಾಡುವ ನಾವು ಇನ್ನೊಂದೆಡೆ ಇಂತಹ ಘಟನೆಗಳನ್ನು ನೋಡುತ್ತಿದ್ದೇವೆ. ಸಾಮಾಜಿಕ ಜಾಲತಾಣ ಮುಖಾಂತರ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವುದು ಸರಿಯಲ್ಲ ಆದರೆ ತಮ್ಮ ವಿರೋಧಿಗಳನ್ನು ಹಣಿಯಲು ಅವರ ಯಾವುದೋ ಪೋಸ್ಟ್ ಅಥವಾ ಕಾಮೆಂಟ್ ಹಿಡಿದು ಹೊರಡುವುದು ಸರಿಯೇ?? ರೈಲ್ವೆ ಸಚಿವ ಸುರೇಶ್ ಪ್ರಭು ಕೇವಲ ಒಂದು ಟ್ವೀಟ್’ಗೆ ರೈಲಿನಲ್ಲಿ ಬೇಕಾದ ವ್ಯವಸ್ಥೆ ಮಾಡಿಕೊಡುವಾಗ, ವಿದೇಶಾಂಗ ಸಚಿವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೇರೆ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸುತ್ತಿರುವಾಗ ಸಾಮಾಜಿಕ ಜಾಲತಾಣಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿರುವುದು ನೋಡುತ್ತಿದ್ದರೆ ನಾವಿನ್ನೂ ಎಲ್ಲಿದ್ದೇವೆ ಅನ್ನೋ ಪ್ರಶ್ನೆ ಉದ್ಭಿವಿಸುವುದು ಸಹಜವೇ ಸರಿ.
ಈಗಂತೂ ಟಿವಿ ಮತ್ತು ಪೇಪರುಗಳಿಗಿಂತ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತದೆ. ಕೆಲವು ಟವಿ ಚಾನೆಲ್ಗಳೂ ತಮ್ಮ ನೇರ ಪ್ರಸಾರದ ಕಾರ್ಯಕ್ರಮಗಳನ್ನು ಫೇಸ್ಬುಕ್ ಲೈವ್ ಮುಖಾಂತರ ಶೇರ್ ಮಾಡುತ್ತವೆಂದರೆ ಮುಂಬರುವ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ವಹಿಸಬಹುದಾದ ಪಾತ್ರ ಬಹಳ ಸ್ಪಷ್ಟವಾಗುತ್ತದೆ. ಪತ್ರಿಕೆಗಳ ಹಾರ್ಡ್ ಕಾಪಿ ಓದುವವರು ಮತ್ತು ಟಿವಿ ಮೂಲಕ ದೃಶ್ಯಮಾಧ್ಯಮ ವೀಕ್ಷಿಸುವವರು ಮೊದಲಿನಷ್ಟಿಲ್ಲ. ಮೊಬೈಲ್’ನಲ್ಲಿ ಎಲ್ಲವೂ ಸಿಗುವ ಈ ಕಾಲದಲ್ಲಿ, ಎಲ್ಲವೂ ಡಿಜಿಟಲ್’ಮಯವಾಗುತ್ತಿರುವ ಈ ಮಹತ್ತರ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳನ್ನು ಹಿಮ್ಮೆಟ್ಟಿಸುವುದು ಅಸಾಧ್ಯದ ಮಾತೇ ಸರಿ.
ಆನ್ ಲೈನ್ ವೋಟಿಂಗ್ ಅನಿವಾರ್ಯತೆ ಬಗ್ಗೆ ಕೂಗೆದ್ದಿರುವಾಗ ಸಾಮಾಜಿಕ ಜಾಲತಾಣ ಮಾರಕ ಹಾಗೆ ಹೀಗೆ ಅಂತ ವ್ಯರ್ಥ ಪ್ರಲಾಪ ಎದ್ದಿರುವುದು ಸೋಜಿಗ. ಹಿಂದೆ ಎಲ್ಲಾ ದಿನಪತ್ರಿಕೆ ಓದದಿದ್ದರೆ ದಿನವೇ ಸಾಗುವುದಿಲ್ಲ ಎನ್ನುವ ಮಾತಿತ್ತು, ಆದರೀಗ ಹಾಗಿಲ್ಲ. ಇವತ್ತು ಫೇಸ್ಬುಕ್ಕಿನಲ್ಲಿ ಏನು ಬಂದಿದೆ ಎನ್ನುವುದು ನಾಳೆ ಹಳಸಲು ಅನ್ನದ ಥರ ಪತ್ರಿಕೆಯಲ್ಲಿ ಬರುವುದರಿಂದ ಅದನ್ನೋದುವವರು ಯಾರಿದ್ದಾರೆ? ಉದಾಹರಣೆಗೆ ಶಶಿಕಲಾಗೆ ಕೋರ್ಟ್ ಶಿಕ್ಷೆ ವಿಧಿಸಿದ್ದನ್ನು ದೃಶ್ಯ ಮಾಧ್ಯಮಗಳು ವಿಸ್ತೃತವಾಗಿ ಬಿತ್ತರಿಸಿದ್ದು, ಆ ಬಳಿಕ ಜಾಲತಾಣಗಳಲ್ಲಿ ಎ ಟ್ ಝಡ್ ಚರ್ಚೆಯಾಗಿದ್ದು, ನಾಳೆ ಪತ್ರಿಕೆಯಲ್ಲಿ ಬಂದಿದ್ದನ್ನು ಯಾರು ಓದುತ್ತಾರೆ ಹೇಳಿ?. ಹಾಗಾಗಿ ಸಾಮಾಜಿಕ ಜಾಲತಾಣ ಮಾರಕವಾಗಿದೆ, ಯಾರಿಗೆಂದರೆ ದಶಕಗಳಿಂದ ತಮ್ಮ ಬುರುಡೆ ಪುರಾಣಗಳನ್ನು ಜನರ ಮುಂದೆ ಪುಂಗಿಯಂತೆ ಊದಿ ಅವರನ್ನು ಮರುಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಮಹಾನುಭಾವರಿಗೆ. ಸಾಮಾಜಿಕ ಜಾಲತಾಣ ಮಾರಕ ಯಾರಿಗೆಂದರೆ ತಾವು ಪ್ರತಿಪಾದನೆ ಮಾಡಿದ್ದೇ ಶ್ರೇಷ್ಟ, ತಮ್ಮ ವಿರುದ್ಧ ಯಾರಾದರೂ ಮಾತಾಡಿದ್ರೆ ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತೋ ಅನ್ನೋ ಭಯದಲ್ಲಿ ಜೀವನ ಸಾಗಿಸುತ್ತಿರುವವರಿಗೆ! ಸಾಮಾಜಿಕ ಜಾಲತಾಣ ಮಾರಕ ಯಾರಿಗೆಂದರೆ ರಚನಾತ್ಮಕ ಟೀಕೆಗಳನ್ನು ಎದುರಿಸಲು ಧೈರ್ಯ ಇರದವರಿಗೆ.! ಸಾಮಾಜಿಕ ಜಾಲತಾಣಗಳು ಮಾರಕ ಯಾರಿಗೆಂದರೆ ಭಿನ್ನಾಭಿಪ್ರಾಯವನ್ನು ಆರೋಗ್ಯಕರ ರೀತಿಯಲ್ಲಿ ಬಗೆಹರಿಸಿಕೊಳ್ಳಲಾಗದವರಿಗೆ. ಸಾಮಾಜಿಕ ಜಾಲತಾಣಗಳನ್ನು ಸ್ವಚ್ಚ ಮಾಡುವ ಮೊದಲು ತಮ್ಮ ಮನಸ್ಥಿತಿಯನ್ನು ತುರ್ತಾಗಿ ಸ್ವಚ್ಚ ಮಾಡಿಕೊಳ್ಳಬೇಕಿದೆ. ಉಳಿದದ್ದು ತನ್ನಿಂತಾನೇ ಸ್ವಚ್ಚವಾಗುತ್ತದೆ!
Facebook ಕಾಮೆಂಟ್ಸ್