X

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ.

    ಕನ್ನಡ, ತುಳು, ಕೊಂಕಣಿ ಹೀಗೆ ನಾಲ್ಕೈದು ಭಾಷೆಗಳನ್ನು ತನ್ನ ಮಡಿಲಿನಲ್ಲಿರಿಸಿಕೊಂಡ ಮಂಗಳೂರು ನಗರಿಯಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಪ್ರತಿ ಭಾಷೆಯೂ ಬರೀ ಸಾಹಿತ್ಯಕ್ಕೆ ಸೀಮಿತವಲ್ಲ. ಅದರ ಹಿಂದೆ ಒಂದು ಸಂಸ್ಕಾರವಿರುತ್ತೆ. ನಾಲ್ಕೈದು ಭಾಷೆಗಳನ್ನು ತನ್ನೊಳಗಿನ ಅಂತಃಶಕ್ತಿಯಾಗಿಸಿಕೊಂಡ ಮಂಗಳೂರಿನ ಸಂಸ್ಕಾರ ಶ್ರೀಮಂತಿಕೆಯನ್ನು ನೂರ್ಮಡಿ ಮಾಡಿದ ಕೀರ್ತಿ ಯುವಾಬ್ರಿಗೇಡ್ ತಂಡಕ್ಕೆ ಸಲ್ಲಬೇಕು. ಫೆಬ್ರವರಿ ೧೧ ರ ಶನಿವಾರ ಬೆಳಿಗ್ಗೆ ೯.೩೦ ರ ಸುಮಾರಿಗೆ ವಿವೇಕಾನಂದರು ಮತ್ತು ಸೋದರಿ ನಿವೇದಿತಾ ಇರ್ವರ ಅಷ್ಟೂ ಪ್ರಕಟಿತ ಸಾಹಿತ್ಯವನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಜಿಲ್ಲಾಧಿಕಾರಿಗಳ ಕಛೇರಿಯಿಂದ ಕೇಂದ್ರ ಮೈದಾನದವರೆಗೆ ಮೆರವಣಿಗೆ ಮಾಡುವುದರಿಂದ ಶುರುವಾದ ಸಮ್ಮೇಳನ ೧೫೦ ಕಡೆ ಏಕ ಕಾಲಕ್ಕೆ ಸೋದರಿ ನಿವೇದಿತಾ ಬಗ್ಗೆ ಸಮ್ಮೇಳನವನ್ನು ನಡೆಸುವ ಸಂಕಲ್ಪದೊಂದಿಗೆ ಮುಗಿಯಿತು. ಮೆರವಣಿಗೆಯನ್ನು ಶ್ರೀಯುತ ಮೋಹನ್ ಆಳ್ವ ಅವರು ಉದ್ಘಾಟಿಸಿದರು. ಯುವಕರ ಪುಸ್ತಕಗಳನ್ನು ಹೆಗಲ ಮೇಲಿಟ್ಟುಕೊಂಡು ಹೊರಟಾಗ ಇಡಿಯ ಮಂಗಳೂರಿನ ವಾತಾವರಣಕ್ಕೆ ಆಮ್ಲಜನಕಕ್ಕಿಂತ ಜಾಸ್ತಿ ಆಧ್ಯಾತ್ಮ ಮತ್ತು ದೇಶಪ್ರೇಮ ಬೆರೆತುಹೋಗಿತ್ತು.
      ಸಾಮಾನ್ಯವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾತ್ರ ಮಾಡುವುದು ವಾಡಿಕೆ. ಡಾ.ಹೆಡಗೆವಾರ್ ಅವರು ಭಗವಾಧ್ವಜವೆಂಬ ಶಾಶ್ವತ ಆದರ್ಶದ ಮುಂದೆ ಒಂದಲ್ಲ ಒಂದು ದಿನ ಭೌತಿಕ ಅಸ್ತಿತ್ವ ಕಳೆದುಕೊಳ್ಳುವ ವ್ಯಕ್ತಿ ಗುರುವಾಗಲಾರ ಎಂಬ ಮಾತಿಗೆ ಕನ್ನಡಿ ಹಿಡಿದಂತಿತ್ತು. ಪುಸ್ತಕಗಳೆಂಬ ಶಾಶ್ವತ ಆಸ್ತಿಯ ಮೆರವಣಿಗೆ ವ್ಯಕ್ತಿಯ ಮೆರವಣಿಗೆಗಿಂತ ಶ್ರೇಷ್ಟ. ಅದಲ್ಲದೆ ಅಧ್ಯಕ್ಷರಾಗಿ ಬಂದ ಮಾತಾ  ಯತೀಶ್ವರಿ ಕೃಷ್ಣಪ್ರಿಯಾ ಅಂಬಾಜಿ ಅವರು ಅಕ್ಕ ನಿವೇದಿತೆಯ ಬಗ್ಗೆ ಹೆಚ್ಚು ತಿಳಿದುಕೊಂಡವರು ಎಂದರೆ ಕ್ಲೀಷೆಯಾದೀತು ಅವರು ಅದೇ ವಿಷಯದ ಮೇಲೆ ಪಿ.ಎಚ್.ಡಿ ಗಳಿಸಿದವರು. ನಿವೇದಿತೆ ವಿವೇಕಾನಂದರ ಬಗ್ಗೆ ನಿರರ್ಗಳವಾಗಿ ಮಾತಾಡುವವರು.
      ಉದ್ಘಾಟನೆಯಲ್ಲಿ ಬರೋಡಾದ ಸ್ವಾಮಿ ನಿಖಿಲೇಶ್ವರಾನಂದಜಿ ಮಹರಾಜಜೀ, ಗದಗ ವಿಜಯಪುರದ ರಾಮಕೃಷ್ಣ ಆಶ್ರಮಗಳ ಸ್ವಾಮಿ ನಿರ್ಭಯಾನಂದಜಿಯವರು ಉಪಸ್ಥಿತರಿದ್ದರು. ಉದ್ಘಾಟನೆ ಗೋಪಿಭಟ್ ಮತ್ತು ತಂಡದವರಿಂದ ವೇದಘೋಷ ಮೊಳಗುವುದರೊಂದಿಗೆ ಶುರುವಾಯಿತು. ನಿರ್ಭಯಾನಂದಜಿ ಮಾತಾಡುತ್ತಾ “ಬರೆದಿದ್ದೆಲ್ಲ ಸಾಹಿತ್ಯ ಆಗೊಲ್ಲ. ಸಾಹಿತ್ಯದ ಹೆಸರಿನಲ್ಲಿ ನಡೆಯುವ ಸಮಾರಂಭಗಳೆಲ್ಲ ಸಾಹಿತ್ಯ ಸಮ್ಮೇಳನಗಳಲ್ಲ. ಸಾಹಿತ್ಯ ಒಂದು ಮಹಾಮೌಲ್ಯವನ್ನು ಎತ್ತಿಹಿಡಿಯಬೇಕು. ಎಲ್ಲವನ್ನೂ ಏಕಕಾಲಕ್ಕೆ ಹೇಳದೆ ಕುತೂಹಲ ಉಳಿಸಬೇಕು. ಓದುಗರ ವಿಮರ್ಶೆಗೊಂದು ಮುಕ್ತ ಅವಕಾಶ ಒದಗಿಸಿಕೊಡಬೇಕು.” ಎಂದು ಸಾಹಿತ್ಯದ ಚೌಕಟ್ಟು ಮತ್ತು ವ್ಯಾಪ್ತಿ  ಹಾಗೂ ಕರ್ತವ್ಯವನ್ನು ಬಿಚ್ಚಿಟ್ಟರು. ಚಕ್ರವರ್ತಿ ಸೂಲಿಬೆಲೆಯವರು ಸಾಹಿತ್ಯ ಸಮ್ಮೇಳನದ ಉದ್ದೇಶ ಮತ್ತು ವೇದಿಕೆಯಲ್ಲಿ ಆಸಿನರಾದವರ ಪರಿಚಯ ಮಾಡಿಕೊಟ್ಟರು. ನಿಖಿಲೇಶ್ವರಾನಂದಜೀ ಮಾತಾಡುತ್ತಾ ವಂಗಭಂಗ ಚಳುವಳಿಯ ಸಮಯಕ್ಕೆ ನಿವೇದಿತಾ ಭಾರತದಲ್ಲಿ ಯಾವ ರೀತಿ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದಳು ಎಂಬುದನ್ನು ವಿವರಿಸಿದರು.
ಉದ್ಘಾಟನೆಯ ನಂತರ ಗೋಷ್ಠಿಗಳು ಶುರುವಾದವು. ಎರಡು ದಿನಗಳಲ್ಲಿ ನಡೆದ ಒಟ್ಟು ಆರು ಗೋಷ್ಠಿಗಳನ್ನು ಒಂದೇ ಲೇಖನದಲ್ಲಿ ಕಟ್ಟಿಕೊಡುವುದು ಅಸಾಧ್ಯ.ಗೋಷ್ಠಿಗಳ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ೧. ವಿವೇಕ-ನಿವೇದನಾ ೨.ಪ್ರೇರಣೆಯ ಮಾತುಗಳಿಗೆ ಪ್ರತಿನಿಧಿಗಳ ದನಿ ೩. ರಾಷ್ಟ್ರಭಕ್ತಿ ೪.ಮಹಾಗುರು ೫.ದಶದಿಕ್ಕು ೬. ಕವನವಾಚನ ಮತ್ತು ಗಾಯನ.
ಈ ಆರು ಗೋಷ್ಠಿಗಳಲ್ಲಿ ಪ್ರೇರಣೆಯ ಮಾತುಗಳಿಗೆ ಪ್ರತಿನಿಧಿಗಳ ದನಿ ಮತ್ತು ಕವನ ವಾಚನ ಗಾಯನಗಳು ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮಹತ್ಕಾರ್ಯವನ್ನು ಮಾಡಿದರೆ ಉಳಿದ ನಾಲ್ಕು ಗೋಷ್ಠಿಗಳಲ್ಲಿ ತತ್ಕಾಲಕ್ಕೆ ತುಂಬಾ ಅವಶ್ಯ ಮತ್ತು ಪ್ರಸ್ತುತ ಅನಿಸುವ ವಿಷಯಗಳ ಚರ್ಚೆ ಆಯಿತು. ಸ್ವಾಮಿ ವಿವೇಕಾನಂದರು ಮತ್ತು ನಿವೇದಿತೆಯರ ಬಗ್ಗೆ ಸಂಪೂರ್ಣ ಅರಿವನ್ನು ಮೂಡಿಸುವಲ್ಲಿ ಅಕ್ಷರಶಃ ಯಶಸ್ವಿಯಾದವು. ಪುಸ್ತಕದಲ್ಲಿನ ವಿದ್ಯೆಯನ್ನು ಮಸ್ತಕಕ್ಕೆ ಇಳಿಸಲು ಈ ವೇದಿಕೆ ಸೇತುವಾಯಿತು. ವಾಚನಾಭಿರುಚಿ ಕಡಿಮೆಯಾಗಿರುವ ಈಗಿನ ಕಾಲದಲ್ಲಿ ಕೆಲವು ಗೋಷ್ಠಿಯ ವಿಚಾರಗಳು ನೀರಿಳಿಯದ ಗಂಟಲೊಳಗೆ ಕಡುಬು ತುರುಕಿದಂತಿದ್ದರೂ ಗೋಷ್ಠಿಯನ್ನು ನಡೆಸಿಕೊಡುವವರು ಕಡುಬನ್ನು ನೀರನಷ್ಟು ಸರಳಿಕರಿಸುವುದನ್ನು ಬಲ್ಲವರಾಗಿದ್ದರು.  ಪ್ರೇರಣೆಯ ಮಾತುಗಳಿಗೆ ಪ್ರತಿನಿಧಿಗಳ ದನಿಯಲ್ಲಿ ಹಲವರಿಗೆ ಅಭಿಪ್ರಾಯ ಮತ್ತು ವಿವೇಕಾನಂದರ ನುಡಿಗಳ ಬಗ್ಗೆ ಮಾತಾಡಲು ಅವಕಾಶವಿತ್ತು. ಇದೊಂದು ತರಹ ಕಾರ್ಯಕ್ರಮದ ಫೀಡ್’ಬ್ಯಾಕ್ ಹೇಳಲು ಲಭಿಸಿದ ಮುಕ್ತ ಅವಕಾಶವೂ ಆದಂತಿತ್ತು. ಎರಡನೆಯ ದಿನ ನಡೆದ ಕವನ ವಾಚನದಲ್ಲಿ ವಾಚಿಸಿದ ಕವಿಗಳೇನು ಈಗಾಗಲೇ ಚಿರಪರಿಚಿತರಲ್ಲ ಎಲ್ಲರೂ ಹೊಸಬರೇ. ಅಂಥವರಿಗೆ ವೇದಿಕೆ ಒದಗಿಸಿಕೊಟ್ಟಿದ್ದು ಪ್ರಶಂಸನಾರ್ಹ. ಇದರ ಮಧ್ಯೆ ವಿವೇಕಾನಂದರು ಬಗ್ಗೆ ಈಗಾಗಲೇ ರಚನೆಗೊಂಡ ಹಾಡುಗಳನ್ನು ಕೃಷ್ಣ ಪ್ರಸಾದ್ ಅವರು ಸುಶ್ರಾವ್ಯವಾಗಿ ಹಾಡಿದರು.
       ಮೊದಲ ದಿನದಾಂತ್ಯದಲ್ಲಿ ಚಕ್ರವರ್ತಿಯವರ ಎಂದಿನ ವಾಗ್ಝರಿಯಲ್ಲಿ ಭಾರತದ ಪುರಾಣಗಳಿಂದ ಪ್ರಸ್ತುತ ಕಾಲಘಟ್ಟದವರೆಗೆ ಆಗಿ ಹೋದ ಮೂರು ಪ್ರಮುಖ ವ್ಯಕ್ತಿಗಳ ಬಗ್ಗೆ ಉಪನ್ಯಾಸವಾಯಿತು. “ನರೇಂದ್ರ ಭಾರತ” ಕಾರ್ಯಕ್ರಮದ ಶೀರ್ಷಿಕೆಯೇ ಕುತೂಹಲ ಕೆರಳಿಸುವಂತಿತ್ತು. ಪುರಾಣದಲ್ಲಿ ಬರುವ ಕೃಷ್ಣ , ಒಂದು ಕಾಲಕ್ಕೆ ರಾಜರ ದಬ್ಬಾಳಿಕೆಗಳೇ ಜಾಸ್ತಿಯಾದಾಗ ಉದಿಸಿದ ಚಾಣಕ್ಯ ಮತ್ತು ಪ್ರಥಮ ಸ್ವತಂತ್ರ ಸಂಗ್ರಾಮದಲ್ಲಿ ಸೋತು ಆತ್ಮವಿಶ್ವಾಸ ಕಳೆದುಕೊಂಡ ಭಾರತಕ್ಕೆ ನವಚೇತನ ತಂದುಕೊಡಲು ಬಂದ ನರೇಂದ್ರ( ವಿವೇಕಾನಂದ)ರ ಕುರಿತು ಮತ್ತು ಅವರ ಮೌಲ್ಯಗಳ ಕುರಿತು ಒಂದೂವರೆಯಿಂದ ಎರಡು ಗಂಟೆಗಳ ಕಾಲ ಉಪನ್ಯಾಸ. ಇಷ್ಟೇ ಹೇಳಿ ಬಿಟ್ಟಿದ್ದರೆ ಉಪನ್ಯಾಸ ಅಪೂರ್ಣ ಎನಿಸುತ್ತಿತ್ತೋ ಏನೋ. ಭಾರತ ಇವತ್ತಿನ ಶ್ರೇಷ್ಟತೆ ಮತ್ತು ಜಗತ್ತು ಇವತ್ತು ಭಾರತದೆಡೆಗೆ ಬೀರುತ್ತಿರುವ ಗೌರವ ನೋಟದ ಕುರಿತಾಗಿಯೂ ಮಾತಾಡಿದರು. ಇದೇ ಉಪನ್ಯಾಸದ ಮಧ್ಯೆ ಅರ್ಹರಿಗೆ ಸನ್ಮಾನಗಳಾದವು. ಕೊನೆಯಲ್ಲಿ ಆರತಿ ಗೀತೆ ನಡೆಯುವಾಗ ವಾಲ್ಮೀಕಿಯಿಂದ ಹಿಡಿದು ಇತ್ತೀಚಿನ ಪುಟಪೋರ್ತಿ ಸಾಯಿ ಬಾಬಾರವರೆಗಿನ ಎಲ್ಲರ ಭಾವಚಿತ್ರಗಳು ಪರದೆಯ ಮೇಲೆ ಬರುತ್ತಿದ್ದವು. ಅದು ಭಾರತದ ಸಂಪೂರ್ಣ ಸಂತ ಪರಂಪರೆಯನ್ನು ಕಟ್ಟಿಕೊಡುವಂತಿತ್ತು.
    ಒಂದು ಕಾಲಕ್ಕೆ ಡಾಕ್ಟರ್ HIV ಪೊಸಿಟಿವ್ ಎಂದು ಹೇಳಿದ ಮೇಲೂ ಅಂಥ ಮಹಾಮಾರಿಯನ್ನೇ ಎದುರಿಸಿ ನಿಂತು ಆಶ್ರಯ ಪೌಂಡೇಶನ್ ಎಂಬ ಸಂಸ್ಥೆಯನ್ನು ಕಟ್ಟಿದ ಶ್ರೀಮತಿ ನಾಗರತ್ನ. ತಾನೇ ಒಬ್ಬ ಅಂಧಳಾಗಿ ಹಲವು ಅಂಧ ಮಕ್ಕಳಿಗೆ ಬೆಳಕಾಗಿರುವ ಕುಮಾರಿ ಅಶ್ವಿನಿ ಅಂಗಡಿ .್ ಇವರಿಬ್ಬರ ಪ್ರೇರಣೆಯಲ್ಲಿ ಮಧ್ಯಾಹ್ನದ ಭೋಜನ ಪ್ರೇಮಪ್ರಸಾದ. ತಾವೇ ಎಂಬತ್ತರ ಆಸುಪಾಸಿನ ವೃದ್ಧೆಯಾಗಿ ಕಾಸರಗೋಡು ಜಿಲ್ಲೆಯ ಕನ್ಯಪ್ಪಾಡಿಯಲ್ಲಿ “ಆಶ್ರಯ” ಎಂಬ ಹೆಸರಿನ
ವೃದ್ಧಾಶ್ರಮ ನಡೆಸಿಕೊಂಡು ಹೋಗುತ್ತಿರುವ ಶಾರದಮ್ಮ. ದೇಶದ ಸೇನೆಯಲ್ಲಿ ಹೋರಾಡುವಾಗ ಕಾಲು ಕಳೆದುಕೊಂಡ ಕ್ಯಾಪ್ಟನ್ ನವೀನ್ ನಾಗಪ್ಪ. ನವಚೇತನ ಟ್ರಸ್ಟ್ ಹೆಸರಿನಲ್ಲಿ ಸುಮಾರು ೭೯ ಬುದ್ಧಿಮಾಂದ್ಯ ಮಕ್ಕಳನ್ನು ಸಾಕುತ್ತಿರುವ ವಿಜಯಕ್ಕ,
ಇವರೆಲ್ಲರಿಗೂ ಸನ್ಮಾನಗಳಾದವು. ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗೆ ಮಾತ್ರ ಸನ್ಮಾನ ಮಾಡುವುದು ರೂಢಿ. ಆದರೆ ಬರೆದಂತೆ ಬದುಕಿದವರು ವಿರಳ ಇವರ ಬದುಕೇ ಬರಹಕ್ಕೆ ಸ್ಪೂರ್ತಿದಾಯಕ. ತಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜೀವನ್ಮುಖಿಯಾಗಿ ಹರಿಯುವ ಇವರ ಬದುಕಿನ ಬಗೆ ವಿವೇಕಾನಂದರ ಸಾಹಿತ್ಯದ ಫಲಶ್ರುತಿಯಂತೆ. ಇದರ ಮಧ್ಯೆ ಅಪರೂಪ ಎನಿಸುವ ಚಿತ್ರಕಲೆ ಮಹೇಂದ್ರ ಅವರ ಕುಂಚದಿಂದ ಅರಳಿತು. ಒಂದು ವಿವೇಕಾನಂದರ ಚಿತ್ರವಾದರೆ ಮತ್ತೊಂದು ಅಮೇರಿಕಾದ ಸ್ವತಂತ್ರ ದೇವತೆಯ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿರುವಂತ ಚಿತ್ರ. ಒಂದು ಚಿತ್ರ ಸಾವಿರ ಸಾಲುಗಳ ಭಾಷಣ ಕೊಡುವ ಸಂದೇಶಕ್ಕೆ ಸಮ ಎಂಬ ಮಾತು ದಿಟವಾಯಿತು.
      ಇನ್ನೂ ಕೆಲವು ವಿಶೇಷತೆಗಳಿದ್ದವು. ಅವೆಂದರೆ ಮೂಲ್ಕಿ ಪಂಜಿನಡ್ಕ K.P.S.K ಪ್ರೌಢಶಾಲೆಯ ಕಲಾಶಿಕ್ಷಕ ಪಲಿಮಾರ್ ಮತ್ತು ವಿದ್ಯಾರ್ಥಿಗಳು ಸೇರಿ ಮಾಡಿದ 21×16 ಗಾತ್ರದ ವಿವೇಕಾನಂದರ ಅತಿ ಎತ್ತರದ ಕೊಲಾಶ್ ಮತ್ತು ೧೦ ನಿಮಿಷದಲ್ಲಿ ೧೦೮ ಸೂರ್ಯ ನಮಸ್ಕಾರ ಮಾಡುತ್ತೇನೆ ಎಂದು ವೇದಿಕೆಯನ್ನೇರಿ ೯ ನಿಮಿಷ ೫೦ ಸೆಕೆಂಡುಗಳಲ್ಲಿ ಮುಗಿಸಿದ ಯುವಕ ನಿರಂಜನ್ . ಇವೆರಡೂ ವಿಶ್ವದಾಖಲೆಗೆ ಸೇರುವ ಅಂಶಗಳು.ಇದಲ್ಲದೆ “ಪಶ್ಚಿಮದಲ್ಲಿ ವಿವೇಕಾನಂದ ಪೂರ್ವದಲ್ಲಿ ನಿವೇದಿತಾ”  ಪ್ರದರ್ಶಿನಿ . ತರಂಗ ವಾರಪತ್ರಿಕೆಯ ಸಂಪಾದಕರಾದ ಶ್ರೀಮತಿ ಸಂಧ್ಯಾ ಪೈ ಅವರಿಂದ ಉದ್ಘಾಟನೆಗೊಂಡಿತು. ವಿವೇಕಾನಂದರ ನುಡಿಗಳು, ಸುಮಾರು 30 ರಿಂದ 35 ಭಾವಚಿತ್ರಗಳು ಮತ್ತು ಕನ್ಯಾಕುಮಾರಿಯಲ್ಲಿ ವಿವೇಕಾನಂದರು ನಿಂತ ಒಂದು ಮೂರ್ತಿ ಗಮನ ಸೆಳೆಯುವಂತಿತ್ತು. ಮರದ ಹುಡಿ, ಕೊತ್ತಂಬರಿ ಮತ್ತು ಹೆಸರುಗಳಿಂದ ಇವು ನಿರ್ಮಿಸಲ್ಪಟ್ಟಿದ್ದವು. ವೇದಿಕೆಗೆ ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ಚಿರಕಾಲ ಜೀವಂತವಾಗಿರಿಸಲು ಕಾರಣೀಭೂತನಾದ ಮತ್ತು “ಕೊಲಂಬೋದಿಂದ ಆಲ್ಮೊರಾಕ್ಕೆ” ಪುಸ್ತಕವನ್ನು ಸಂಪಾದಿಸಿದ ಸ್ಟೆನೋ “ಗುಡ್ವಿನ್” ಅವರ ಹೆಸರಿಟ್ಟಿದ್ದು ಅರ್ಥಪೂರ್ಣವಾಗಿತ್ತು.
“ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರ” ಶಿರಗುಪ್ಪಿ ಸಂಸ್ಥೆಯಲ್ಲಿ ಪಳಗಿದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಹಗ್ಗದಾಟದೊಂದಿಗಿನ ನೃತ್ಯ ಮತ್ತು ಹಗ್ಗದಲ್ಲಿ ಯೋಗಾಸನಗಳನ್ನು ಮಾಡಿ ತೋರಿಸಿದ ಕಾರ್ಯಕ್ರಮಗಳು ಗ್ರಾಮೀಣ ಭಾರತದ ಸೊಬಗನ್ನು ಸಮ್ಮೇಳನಕ್ಕೆ ಒದಗಿಸಿತ್ತು. ಈ ಕಾರ್ಯಕ್ರಮಕ್ಕೆ ಸಮಾಂತರವಾಗಿ (parallel)  ಬೇರೆ ಬೇರೆ ಸಂಸ್ಥೆಗಳಲ್ಲಿ ಹತ್ತು ಹಲವು ವಿವೇಕಾನಂದರ ಕುರಿತ ಸಮಾರಂಭಗಳು ನಡೆಯುತ್ತಿದ್ದವು. ಕಾರ್ಯಕ್ರಮದಲ್ಲಿ ‘ನಿತ್ಯಾನಂದ ವಿವೇಕವಂಶಿ’ಯವರು ಬರೆದ “ಸಾಗರದಾಚೆ ವಿವೇಕಾನಂದ”, ಸೋದರಿ ನಿವೇದಿತಾ ಪ್ರತಿಷ್ಠಾನದ ‘ಪ್ರಿಯಾ ಶಿವಮೊಗ್ಗ’ ಅವರು ಬರೆದ “ಗುರು ಶಿಷ್ಯೆ” ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದವರು ಸಿದ್ಧಗೊಳಿಸಿದ ಬ್ರೈಲ್ ಲಿಪಿಯ ಪುಸ್ತಕ ಬಿಡುಗಡೆಯಾದವು. ಯುವಾ ಬ್ರಿಗೇಡಿನ ಒಂದು ಟೀಶರ್ಟ್ ಮತ್ತು ಯುಗಾದಿಯಿಂದ ಯುಗಾದಿವರೆಗಿನ ಡೈರಿಗಳು ಕೂಡಾ ಬಿಡುಗಡೆಯಾದವು. ಮತ್ತೊಂದೆಡೆ ಮೊಗವೀರರ ಸಮಾವೇಶ(ಅವಕಾಶಗಳ ಸಾಗರ), ಸಾರೋಟ ಸಮಾವೇಶ(ರಾಷ್ಟ್ರರಥದ ಚಾಲಕ ಶಕ್ತಿ) ನಡೆದವು.
 ಕೊನೆಗೆ ಸಮಾರೋಪ ಸಮಾರಂಭದಲ್ಲಿ ರಾಜಕೋಟಿನ ರಾಮಕೃಷ್ಣ ಮಠದ ಸರ್ವಸ್ಥಾನಂದಜಿ ಮಹರಾಜ್ , ಸಮ್ಮೇಳನಾಧ್ಯಕ್ಷೆ ಯತೀಶ್ವರಿ ಕೃಷ್ಣಪ್ರಿಯಾ ಅಂಬಾಜಿ , ಅಭಿನವ ಹಾಲಶ್ರಿ ಉಪಸ್ಥಿತರಿದ್ದು ಅವರ ಆಶಿರ್ವಚನದೊಂದಿಗೆ,  ೧೫೦ ಕಡೆಗಳಲ್ಲಿ ಏಕಕಾಲಕ್ಕೆ ಸೋದರಿ ನಿವೇದಿತಾ ಕುರಿತ ಸಮ್ಮೇಳನಗಳು ನಡೆಯುವ ಸಂಕಲ್ಪದೊಂದಿಗೆ ಮತ್ತು ಎಲ್ಲ ಋಷಿ ಸಮೂಹದವರು ಒಟ್ಟಾಗಿ ವೇದಿಕೆಯಲ್ಲಿ ಕೂತು ಋಷಿಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.
     ಸಪ್ಟೆಂಬರ್ ೧೧,೧೨ ನೇ ತಾರೀಖು ಬೆಳಗಾವಿಯಲ್ಲಿ ಇಂಥದ್ದೇ ಇನ್ನೊಂದು ಸಮ್ಮೇಳನ ನಡೆಸಬೇಕೆಂಬ ಯುವಾಬ್ರಿಗೇಡಿನ ಸಂಕಲ್ಪ ಸಿದ್ಧಿಯಾಗಲಿ ಎಂದು ಹಾರೈಸುತ್ತೇನೆ.  ಇನ್ನೂ ಹೆಚ್ಚು ಹೆಚ್ಚು ಇಂಥ ಕಾರ್ಯಕ್ರಮಗಳು ಯುವಾಬ್ರಿಗೇಡ್ ಕಡೆಯಿಂದ ಜರುಗಲಿ. ಅಭಿನಂದನೆಗಳು.ಚಕ್ರವರ್ತಿಯವರು ಹೇಳಿದಂತೆ ಇದು ಅಪರೂಪ ಎನಿಸುವ ಕಾರ್ಯಕ್ರಮ ” ನುಡಿದಂತೆ ನಡೆದವರ ನುಡಿಸಿರಿ.”

Facebook ಕಾಮೆಂಟ್ಸ್

Rahul Hajare: ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.
Related Post