X

ತಪೋವನದೆಡೆಗಿನ ತಪಸ್ಸಿನ ತಪೋಭಂಗ- 3

ಹಿಂದಿನ ಭಾಗ

ಗುಡ್ಡದ ಮೇಲೆ ಸಾಲಾಗಿ ನಿಂತ ಬಸ್ಸು ಜೀಪುಗಳು ನಾವು ನಿಂತಿದ್ದ ಗುಡ್ಡದ ತಗ್ಗಿನಿಂದ ಕಾಣುತ್ತಿದ್ದವು. ಒಂದು ಗಂಟೆಯಾದರೂ ನಾವು ನಿಂತಲ್ಲಿಂದ ಒಂದಿಂಚೂ ಮುಂದೆ ಹೋಗಿರಲಿಲ್ಲ. ಮಳೆ ಕೂಡ ಕಡಿಮೆಯಾಗಿರಲಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ಉತ್ತರಾಖಂಡದಂಥ ಪ್ರದೇಶಗಳಲ್ಲಿ 5-5.30 ಕ್ಕೆಲ್ಲ ಕತ್ತಲಾಗಿ ಬಿಡುತ್ತದೆ. ಬೆಳಗಿನಿಂದ ಮೋಡ ಮುಸುಕಿಕೊಂಡಿದ್ದ ಬಾನು ಅಂದು ಕೂಡ ಕತ್ತಲ ತೆರೆಯನ್ನು ಬಹುಬೇಗ ಎಳೆಯಿತು. ಅಷ್ಟರಲ್ಲಿ ಗಂಟೆಯಿಂದ ನಿಂತೆ ಇದ್ದ ವಾಹನಗಳ ಸಾಲು ಬಡಬಡನೆ ಮುಂದುವರೆಯಿತು. ರಸ್ತೆ ಕ್ಲಿಯರ್ ಆಗಿದೆಯಂತೆ ಎಂಬ ಸುದ್ದಿ. ಹಾಗೆಯೇ ಅತ್ತಕಡೆಯಿಂದ ಬರುತ್ತಿರುವ ವಾಹನಗಳು. ಅಂತೂ ಇವತ್ತು ಉತ್ತರಕಾಶಿ ತಲುಪುತ್ತೇವೆ ಎಂದು ನಿಟ್ಟುಸಿರು ಬಿಟ್ಟು ಮತ್ತೆ ಉತ್ಸಾಹ ತಂದುಕೊಂಡು ಕುಳಿತುಕೊಂಡೆವು. ಆದರೆ ಅದ್ಯಾಕೋ ಪ್ರಕೃತಿಯಲ್ಲಿ ಹೇಳಿಕೊಳ್ಳಲಾಗದ ಭಾವ ತುಂಬಿಕೊಂಡಿತ್ತು. ಕೆಲವೊಂದು ವಿಚಾರಗಳು ಮನಸ್ಸಿಗೆ ಹೀಗೆಯೇ ಹೊಳೆಯಿತು ಅಥವಾ ಅರಿವಾಯಿತು ಎಂದು ಹೇಳುವುದು ಬಹಳ ಕಷ್ಟ. ಅದು ಭಾವಗಳಿಗೆ ಬಿಟ್ಟಿದ್ದು. ಓವರ್ ಟೇಕ್ ಮಾಡಲು ಹಿಂದಿನಿಂದ ನುಗ್ಗಿ ಬರುತ್ತಿರುವ ವಾಹನಗಳು, ತಿರುವು ಮುರುವಾದ ರಸ್ತೆ, ರಸ್ತೆಯ ಪಕ್ಕದಲ್ಲಿನ ಕಂದರ, ಜೋರಾದ ಮಳೆ, ಕತ್ತಲು.. ಪ್ರಕೃತಿಯಲ್ಲಿನ ಟೆನ್ಶನ್ನಾ ಅಥವಾ ನನ್ನ ಮನದಲ್ಲಿರುವ ಭಯವಾ? ಒಟ್ಟಿನಲ್ಲಿ ಸಮಯ ಕರಾಳವಾಗಿತ್ತು.

  ನಮ್ಮ ಬಸ್ಸು ನಿಧಾನವಾಗಿ ಸಾಗುತ್ತ ಒಂದೆರಡು ಕಿಲೋಮೀಟರ್ ಮುಂದೆ ಹೋಗಿ ಮತ್ತೆ ಗುಡ್ಡದ ಮೇಲೆ ನಿಂತುಕೊಂಡಿತು. ಮಳೆಯೂ ಸ್ವಲ್ಪ ಕಡಿಮೆಯಾಗಿತ್ತು.

“ಮುಂದೆ ಗುಡ್ಡಗಳು ಭಾರಿ ರೀತಿಯಲ್ಲಿ ಕುಸಿದಿವೆ. ಕತ್ತಲೆಯೂ ಆಯಿತು. ರಸ್ತೆ ಓಪನ್ ಆಗುವುದು ಕಷ್ಟ. ಇನ್ನು ನಾಳೆ ಬೆಳಿಗ್ಗೆಯೇನೋ?” ಎಂಬ ಮಾತುಗಳು ಕೇಳಿ ಬಂತು. ಆ ಬಸ್ಸಿನ ಮೇಲೆ ರಾತ್ರಿಯಿಂದ ಬೆಳಗಿನವರೆಗೆ ಕಳೆಯಬೇಕೆಂಬ ಯೋಚನೆಯೇ ಭಯ ಹುಟ್ಟಿಸಿತ್ತು. ಅದು ನಿಜವಾದರೆ ನಿಜಕ್ಕೂ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ನನಗೆ ಗೊತ್ತಿತ್ತು. ಮಳೆ ನಿಂತಿದ್ದರಿಂದ ಮುಂದೆ ಏನಾಗಿದೆ ನೋಡಿ ಬರುತ್ತೇವೆ ಎಂದು ನಾನು ಅಮೋಘ ಹೊರಗಿಳಿಯಲು ನೋಡಿದೆವು. ಡ್ರೈವರ್ ಕುಳಿತಲ್ಲಿಂದಲೇ “ಅಣ್ಣಾ, ಕೆಳಗೆ ಇಳಿಯಬೇಡಿ.. ಗುಡ್ಡದಿಂದ ಕಲ್ಲುಗಳು ಜಾರುತ್ತಿವೆ.. ಒಳಗೆ ಕುಳಿತಿರಿ..” ಎಂದ. ಮತ್ತೇನು ಮಾಡುವುದು ಎಂದುಕೊಂಡು ವಾಪಸ್ ಬಂದು ಸುಮ್ಮನೆ ಕುಳಿತೆವು. ಥ್ರಿಲ್ ಗಾಗಿ ಹಪಹಪಿಸುತ್ತಿದ್ದ ನಮ್ಮ ಮನಸ್ಸು ಈಗ ಯಾವುದಾದರೂ ನೆಲೆ ಸಿಕ್ಕರೆ ಸಾಕು ಎಂಬ ಜಪಿಸತೊಡಗಿತ್ತು.

 ಅರ್ಧ ಗಂಟೆ ಕಳೆದ ನಂತರ ಬಸ್ ಮತ್ತೆ ಹೊರಟಿತು. ಗುಡ್ಡದ ತಲೆಯಲ್ಲಿ ಇರುವ ಹೋಟೆಲ್ ಬಳಿ ಸ್ವಲ್ಪ ಜಾಗವಿದೆಯಂತೆ, ಹಾಗೆಯೇ 2 ಪುಟ್ಟ ಹೋಟೆಲ್ ಗಳು.  ಅಲ್ಲಿಯವರೆಗೆ ಜನರನ್ನು ತಲುಪಿಸಿಬಿಟ್ಟರೆ ಸಮಾಧಾನ ಎಂಬ ಯೋಚನೆಯಲ್ಲಿದ್ದ ಶಾಂತಮೂರ್ತಿ ಡ್ರೈವರ್.

ಗುಡ್ಡದ ತಲೆಯಾದರೆ ಕಲ್ಲುಗಳು ಉರುಳಿ ಬರಲಾರವು ಎಂಬುದು ಹಲವರ ಯೋಚನೆ. ಹಾಗಾಗಿ ನಾವೂ ಬಸ್ ಅಲ್ಲಿಯವರೆಗೆ ಹೋದರೆ ಸಾಕೆನಿಸಿ ಕುಳಿತಿದ್ದೆವು. ಅಂತೂ ಒಂದೂವರೆ ಗಂಟೆಯಲ್ಲಿ ನಾವು ಗಮ್ಯ ತಲುಪಿದ್ದೆವು. ಆದರೆ ಅದು ನಾವಂದುಕೊಂಡಂತೆ ಗುಡ್ಡದ ತಲೆಯಾಗಿರಲಿಲ್ಲ. ಬದಲಾಗಿ ಧರಾಸು ಬ್ಯಾಂಡ್ ನಿಂದ ಗಂಗೋತ್ರಿ ಮತ್ತು ಯಮುನೋತ್ರಿಗೆ ಹೋಗುವ ಎರಡು ದಾರಿಗಳು ಬೇರಾದ ಕವಲಿನಲ್ಲಿ ನಿಂತಿದ್ದೆವು. ಅಲ್ಲಿ ಕೂಡ ಕಲ್ಲು ಉರುಳಿ ಬರುತ್ತಿತ್ತು. ಅಷ್ಟೇ ಅಲ್ಲದೆ ಈ ಮೊದಲು ಬಂದ ಹಲವಾರು ವಾಹನಗಳು.. ಪ್ರವಾಸಿಗರು.. ಜಾತ್ರೆಯೇ ನೆರೆದಂತಿತ್ತು.

ರಾತ್ರಿ ಎಂಟು ಗಂಟೆಯ ಸಮಯ. ಮತ್ತೆ ಮಳೆ ಕೂಡ ಪ್ರಾರಂಭವಾಗಿತ್ತು. ಹೋಟೆಲ್ ನ ಹೊರಗಡೆ ಕಾಣುವ ಟ್ಯೂಬ್ ಲೈಟ್ ಬೆಳಕು ನೋಡುತ್ತಾ ನಾನು ಅಮೋಘ ಕುಳಿತಿದ್ದೆವು.

ಅಷ್ಟರಲ್ಲಿ “ಪತ್ಥರ್ ಆ ರಹಾ ಹೇ” ಎಂದು ಯಾರೋ ಕೂಗಿದ್ದು, ಸ್ಟೇರಿಂಗ್ ಮೇಲೆ ತಲೆಯಿಟ್ಟು ಮಲಗಿದ್ದ ಡ್ರೈವರ್ ಒಮ್ಮೆಲೇ ಬಸ್ ಸ್ಟಾರ್ಟ್ ಮಾಡಿ ಹಿಂದೆ ಮುಂದೆ ನಿಂತ ವಾಹನಗಳನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಸಂದಿಗ್ಧತೆಯಲ್ಲಿ ಸಿಲುಕಿದ್ದು, ಸುಮಾರಿನ ಗಾತ್ರದ ಕಲ್ಲೊಂದು ಯಾವುದೋ ಬಸ್ಸಿಗೆ ಅಪ್ಪಳಿಸಿ ದೊಡ್ಡ ಸದ್ದಾಗಿದ್ದು ಎಲ್ಲವೂ ನಡೆಯಿತು. ಒಮ್ಮೆಗೆ ಎದ್ದ ಜನರ ಹಾಹಾಕಾರ ಶಾಂತ ಸ್ಥಿತಿಗೆ ಬರಲು ೧೦ ನಿಮಿಷ ಬೇಕಾಯಿತು.

ನಂತರದಲ್ಲಿ ಬಸ್ಸಿನೊಳಗೆ ಜನರು ಬೀಡಿಯ ಹೊಗೆ ಎಬ್ಬಿಸತೊಡಗಿದರು. ಮದ್ಯದ ವಾಸನೆ ಕೂಡ ಸುಳಿದಾಡಿತು.

 ಉತ್ತರಕಾಶಿಯಂತೂ ಇಂದು ಕನಸೇ. ಇವತ್ತು ರಾತ್ರಿಗೆ ಈ ಬಸ್ಸೇ ಗತಿ.. ಏನಾದರೂ ಮಾಡಿ ಹೋಟೆಲಿನಲ್ಲಿ ರೂಮ್ ಇದೆಯಾ ಎಂದು ಕೇಳೋಣ ಎಂಬ ಆಲೋಚನೆ ಬಂದು ನಾವಿಬ್ಬರೂ ಬಸ್ಸಿನಿಂದ ಕೆಳಗಿಳಿದೆವು.

  ಬೆಳಿಗ್ಗೆಯಿಂದ ಒಂದೇ ರೀತಿ ಕುಳಿತು ಹಿಡಿದು ಹೋಗಿದ್ದ ಕಾಲುಗಳು ನೆಟ್ಟಗಾಗುತ್ತಿದ್ದಂತೆ ಜುಮ್ ಎಂದಿತು. ಆದರೆ ಅದನ್ನು ಗಮನಿಸಲೂ ಸಮಯವಿರಲಿಲ್ಲ. ಅಲ್ಲಿ ಹೋಗಿ ಕೇಳಿದರೆ ಅದು ಅದು ಹೋಟೆಲ್ ಆಗಿರದೆ ಮನೆಯಾಗಿದ್ದು ಹೋಗಿ ಬರುವವವರಿಗೆ ಊಟಕ್ಕಷ್ಟೇ ನಿಲ್ಲುವ ಸ್ಥಳವಾಗಿತ್ತು. ಆದರೂ ಆತ ಇರುವ ಜಾಗದಲ್ಲಿಯೇ ಕೆಲವರಿಗೆ ಮಲಗಲು ವ್ಯವಸ್ಥೆ ಮಾಡಿದ್ದ. ಜಾಗ ತುಂಬಿ ಹೋಗಿದೆ.. ತಾನೇನು ಮಾಡಲಾರೆ ಎಂದು ತನ್ನ ಅಸಹಾಯಕತೆ ವ್ಯಕ್ತಪಡಿಸಿದ. ಇನ್ನೇನು ಮಾಡಲು ಸಾಧ್ಯವಿಲ್ಲದ್ದರಿಂದ ಪಕ್ಕದಲ್ಲಿಯೇ ಇರುವ ಗೂಡಂಗಡಿಯ ಪರೋಟದಿಂದ ಹೊಟ್ಟೆ ತುಂಬಿಸಿಕೊಂಡು ಮತ್ತೆ ಬಸ್ ಏರಿ ಕುಳಿತೆವು. ಮಳೆ ಮತ್ತೆ ಸುರಿಯತೊಡಗಿತು.

 ಅರ್ಧ ಗಂಟೆ ಬಸ್ಸಿನಲ್ಲಿ ಸಮಯ ಕೊಲ್ಲುವುದು ಏಳು ಜನ್ಮ ಕಳೆದಂತಾಯಿತು. “ಅಮೋಘ, ನಾನು ಹೊರಗೆ ಜೀವ ತೇಯುತ್ತೇನೆ.. ಈ ಬಸ್ಸಿನಲ್ಲಿ ಸಾಧ್ಯವಿಲ್ಲ.. ಬರುವುದಿದ್ದರೆ ಬಾ..” ಎಂದು ಮೇಲೆದ್ದೆ. ಅವನಿಗೂ ಅಷ್ಟರಲ್ಲಿ ಸುಸ್ತಾಗಿತ್ತು. ನಾನು ಬರುತ್ತೇನೆಂದು ಆತನೂ ಎದ್ದು ಬಂದ.

 ಆಗಲೇ ರಾತ್ರಿ ಹತ್ತೂವರೆ. ಮಲಗಲು ಎಲ್ಲೂ ಜಾಗ ಸಿಗದ ಹಲವರು ಸಣ್ಣ ಹೋಟೆಲ್ಲಿನ ಸೂರಿನ ಅಡಿಯಲ್ಲಿ ಅರ್ಧ ಮಳೆಗೆ ನೆನೆಯುತ್ತ ನಿಂತಿದ್ದರು. ಚಾರ್ ಧಾಮ್ ಯಾತ್ರೆಗೆ ಹೊರಟವರು ಹಲವರಿದ್ದರು. ಹೈದ್ರಾಬಾದಿನಿಂದ ಬಂದ ವ್ಯಕ್ತಿಯೊಬ್ಬ ಮಾತಿಗೆ ಸಿಕ್ಕಿದ. ನನಗೆ ತೆಲುಗು ಕೂಡ ಅಲ್ಪ ಸ್ವಲ್ಪ ಬರುತ್ತಿದ್ದರಿಂದ ಅವನ ಜೊತೆಯೂ ಹರಟತೊಡಗಿದೆ. ಏನಾದರೂ ಮಾಡಿ ಬೆಳಗು ಹಾಯಿಸಬೇಕಿತ್ತು. ಅವನಂತೂ ಚಳಿಗೆ ಒಳ್ಳೆಯ ವ್ಯವಸ್ಥೆ ಮಾಡಿಕೊಂಡಿದ್ದ. ತಂಬಾಕಿನ ಎಸಳನ್ನೇ ಚೆನ್ನಾಗಿ ಹುರಿ ಮಾಡಿ, ಅದರ ತುದಿಗೆ ಬೆಂಕಿ ಹಿಡಿಸಿ ಸಿಗಾರ್ ನಂತೆ ಹಿಡಿದು ಧಮ್ ಎಳೆದುಕೊಳ್ಳುತ್ತಿದ್ದ. ಅದರೆದುರು ಸಿಗರೇಟ್ ಏನೂ ಅಲ್ಲ. ಹಾಗಾಗಿ ಚಳಿ ಆತನಿಗೆ ಅಷ್ಟೊಂದು ತೊಂದರೆ ಕೊಟ್ಟಿರಲಿಲ್ಲ. ನಮ್ಮಿಬ್ಬರ ಬ್ಯಾಗ್ ಕೂಡ ಬಸ್ಸಿನ ಡಿಕ್ಕಿಯಲ್ಲಿದ್ದರಿಂದ, ಈ ಮಳೆಯಲ್ಲಿ ಅದನ್ನು ತೆಗೆಯಲು ಸಾಧ್ಯವೂ ಇಲ್ಲದ್ದರಿಂದ ಮೈ ಮೇಲಿದ್ದ ಒದ್ದೆ ಬಟ್ಟೆಯಲ್ಲೇ ನಿಂತಿದ್ದೆವು. ಚಳಿ ಇಂಚಿಂಚಾಗಿ ನನ್ನನ್ನು ಆವರಿಸಿಕೊಳುತ್ತಿತ್ತು. ಜೊತೆಗೆ ಈ ರಾತ್ರಿ ಹೇಗೆ ಕಳೆಯುವುದು ಎಂಬ ಸಂಕಟ.

  ಮಾತನಾಡುತ್ತ ನಿಂತಿದ್ದಾಗ ಆ ಹೋಟೆಲ್ಲಿನ ಓನರ್ ಬಾಗಿಲು ಮುಚ್ಚುತ್ತೇನೆ ಎಂದು ಬಂದ. ಇದೆ ಕೊನೆಯ ಅವಕಾಶ. ಹೇಗಾದರೂ ಮಾಡಿ ಕಾಲು ಚಾಚುವಷ್ಟು ಜಾಗ ಪಡೆಯಬೇಕು ಎಂದು ಮಾತಿಗಿಳಿದೆ.

 “ಅಣ್ಣಾ, ಕರ್ನಾಟಕದಿಂದ ಬಂದಿದ್ದೇವೆ. ಎರಡು ದಿನದಿಂದ ನಿದ್ರೆ ಕೂಡ ಸರಿಯಾಗಿಲ್ಲ. ಬಸ್ ಒಳಗೆ ಕುಳಿತು ಕುಳಿತು ಸಾಕಾಗಿದೆ. ಎಲ್ಲಾದರೂ ಸರಿ, ಹೇಗಾದರೂ ಸರಿ ಸ್ವಲ್ಪ ಜಾಗ ಮಾಡಿಕೊಡಿ..” ಎಂದು ಅಂಗಾಲಾಚುವ ದನಿ ಮಾಡಿ ಕೇಳಿದೆ. ಪರಿಸ್ಥಿತಿಯು ಹಾಗೆಯೇ ಇತ್ತು. ದೂರದಿಂದ ಬಂದಿದ್ದೇವೆ ಎಂದರೆ ಮನುಷ್ಯರು ಆಸಕ್ತಿ ತೋರಿಸುತ್ತಾರೆ ಎಂಬುದು ನಾನು ಕಂಡು ಕೊಂಡ ಸತ್ಯ. ನಾವು ಹೋಗಿದ್ದು ದೆಹಲಿಯಿಂದ ಆದರೂ ಕರ್ನಾಟಕದಿಂದ ಎಂದಿದ್ದೆ. ನನ್ನ ಪ್ರಯತ್ನ ಪಾಲಿಸಿತ್ತು ಕೂಡ. ಏನನ್ನಿಸಿತೋ ಆ ಪುಣ್ಯಾತ್ಮನಿಗೆ  “ಸರಿ, ಒಂದು ಜಾಗ ಇದೆ.. ನೀವು ಮಲಗುವುದಾದರೆ ಅಲ್ಲೇ ಹಾಸಿಗೆ ಮಾಡಿಕೊಡುತ್ತೇನೆ..” ಎಂದ. ಅಬ್ಬಬ್ಬಾ.. ಅಷ್ಟಾದರೆ ಸಾಕು ತೋರಿಸಿ ಎನ್ನುತ್ತಾ ಆತನ ಹಿಂದೆ ನಡೆದೆವು. ಆತ ನಮ್ಮನ್ನು ಹೋಟೆಲ್ ಬದಿಯ ಮೆಟ್ಟಿಲುಗಳಿಂದ ಕೆಳಗಡೆ ಕರೆದುಕೊಂಡು ಹೋದ.

  ಕರೆಂಟ್ ಗಾಗಿ ಜನರೇಟರ್ ಗಡಗಡ ಸದ್ದು ಮಾಡುತ್ತಾ ನಿಂತಿತ್ತು. ಅಲ್ಲೇ ಪಕ್ಕದಲ್ಲಿ ಶೌಚಾಲಯ. ಮಳೆ ಸುರಿದಾಗ ಎಲ್ಲಿಂದಲೋ ಹರಿದು ಬಂದ ನೀರು ಶೌಚಾಲಯದೆದುರು ತುಂಬಿಕೊಂಡಿತ್ತು. ಇದೆ ನೀವು ಮಲಗುವ ಜಾಗ ಎಂದ. ನಾನು ಅಮೋಘ ಮುಖ ಮುಖ ನೋಡಿಕೊಂಡೆವು. ಹೋಟೆಲಿನ ಶೌಚಾಲಯದೆದುರು ಮಲಗಬೇಕು. ಒಂದು ಕಡೆ ಹೋಟೆಲ್ಲಿನ ಗೋಡೆ.. ಇನ್ನೊಂದು ಕಡೆ ಸಾಲಾಗಿ ನಾಲ್ಕು ಶೌಚಾಲಯಗಳು. ಪಕ್ಕದಲ್ಲೇ ಸದ್ದು ಮಾಡುವ ಜನರೇಟರ್. ನಮ್ಮ ಸಂದಿಗ್ಧ ಕಂಡು “ಭಾಯಿ ಸಾಬ್, ಮೇ ಕ್ಯಾ ಕರೂ? ಯೇ ಹೀ ಜಗಹ್ ಬಚಾ ಹೇ (ನಾನೇನು ಮಾಡಲಿ? ಇದೊಂದೇ ಜಾಗ ಉಳಿದದ್ದು) ನೀರು ಖಾಲಿ ಮಾಡಿ ಬೆಡ್ ಹಾಕಿ ಕೊಡುತ್ತೇನೆ” ಎಂದ. ಆಗಲ್ಲ ಎಂದು ಹೇಳುವಷ್ಟು ಪೊಗರು , ತ್ರಾಣ ಎರಡು ನಮ್ಮಲ್ಲಿ ಉಳಿದಿರಲಿಲ್ಲ.

 ಆತ ನೀರು ಹೋಗಲು ಜಾಗ ಮಾಡಿ, ಪ್ಲಾಸ್ಟಿಕ್ಕಿನ ಮೊರದಿಂದ ಉಳಿದ ನೀರನ್ನು ಹೊರ ಚೆಲ್ಲಿ ಒಳಗಿನಿಂದ ಪ್ಲಾಸ್ಟಿಕ್ ಶೀಟ್ ತಂದು ಹಾಕಿ ಅದರ ಮೇಲೆ ಎರಡು ಹಾಸಿಗೆ ಹಾಕಿ ಹೊದೆಯಲು ನೀಡಿದ. ಜೀವನದಲ್ಲಿ ಇದೆ ಮೊದಲ ಬಾರಿ ಶೌಚಾಲಯದೆದುರು ಮಲಗುವ ಪರಿಸ್ಥಿತಿ ಬಂದಿದ್ದು. ನನಗೆ ಸಾಮಾನ್ಯವಾಗಿ ಬೆಳಕು ಮತ್ತು ಶಬ್ದವಿದ್ದರೆ ನಿದ್ದೆ ಹತ್ತುವುದಿಲ್ಲ. ಅದರ ಜೊತೆಗೆ ಶೌಚಾಲಯದ ವಾಸನೆ, ಮಳೆಯ ಜಿಮಿರು, ಕೆಳಗಡೆ ಬೋರ್ಘರೆಯುತ್ತಿರುವ ಗಂಗೆಯ ಸದ್ದು, ಪಕ್ಕದಲ್ಲಿನ ಜನರೇಟರ್..

  ನಿದ್ರೆ ಬರುವುದೋ ಬಿಡುವುದೋ? ಕಾಲು ಚಾಚಲು, ಬೆನ್ನು ನೆಲಕ್ಕೆ ಅನಿಸಲು ಜಾಗ ಸಿಕ್ಕಿತಲ್ಲ ಎಂಬ ಸಮಾಧಾನದಿಂದಲೇ ಅಡ್ಡಾದೆವು. ನಾನು ಗೋಡೆಯ ಪಕ್ಕ ಮಲಗಿದರೆ, ಅಮೋಘ ಮತ್ತೊಂದು ಕಡೆ. ಅದೊಂದು ಸಿಂಗಲ್ ಬೆಡ್. ಅಷ್ಟರಲ್ಲಿ ಎಲ್ಲಿಂದ ಪ್ರತ್ಯಕ್ಷನಾದನೋ ಅಥವಾ ನಮ್ಮನ್ನು ಹಿಂಬಾಲಿಸಿ ಬಂದಿದ್ದನೋ ಒಬ್ಬ ಅಂಗ್ರೇಜಿ ಬಂದು ನನಗು ಸ್ವಲ್ಪ ಜಾಗ ಕೊಡಿ ಎಂದ. ಇಲ್ಲ ಎನ್ನಲೂ  ಮನಸ್ಸಾಗಲಿಲ್ಲ. ಸರಿ, ಮೇರಾ ಭಾರತ್ ಮಹಾನ್ ಎನ್ನುತ್ತಾ ಅವನಿಗೂ ಜಾಗ ಕೊಟ್ಟೆವು.

  ಹತ್ತು ನಿಮಿಷ ಎಚ್ಚರಿತ್ತೇನೋ..!? ಅದೆಂಥ ನಿದ್ರೆ..!! ವಿಷಮ ಪರಿಸ್ಥಿತಿಗಳಲ್ಲಿ ನಮ್ಮ ದೇಹ ಮನಸ್ಸು ಪ್ರತಿಕ್ರಿಯಿಸುವ ರೀತಿಯೇ ಬೇರೆ. ನಿದ್ರಾದೇವಿ ನನ್ನನ್ನು ಆಕೆಯ ಮಡಿಲಲ್ಲಿ ಎಳೆದುಕೊಂಡು ಸುಖ ನಿದ್ರೆ ಉಣಿಸಿದ್ದಳು. ಅಂದು ಒಂದು ಸತ್ಯ ಅರಿವಾಯಿತು. ಅತಿಯಾದ ಸುಖ, ಕಷ್ಟವಿಲ್ಲದ, ಬಡತನವಿಲ್ಲದ ಬದುಕು ಮನುಷ್ಯನನ್ನು ತಾನು ಹೀಗೆ, ಹಾಗೆ ಎಂಬ ಭ್ರಮೆಯಲ್ಲಿ ಬದುಕಿಸುತ್ತದೆ. ಅವೆಲ್ಲವನ್ನು ಮೀರಿ ನಿಂತು, ನಮ್ಮನ್ನು ನಾವು ನೋಡಿಕೊಂಡರೆ ವಾಸ್ತವದ ಅರಿವಾಗುತ್ತದೆ. ಬೇಲಿಗಳನ್ನು ಹಾಕಿಕೊಳ್ಳುವುದು ನಾವೇ. ಹೀಗೆ ಹತ್ತು ಹಲವು ಯೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡು ಹಿಮಾಲಯದ ಜೀವನ ನಾವಂದುಕೊಂಡಷ್ಟು ಸುಲಭವಲ್ಲ ಎಂದುಕೊಳ್ಳುವಾಗ ನಿದ್ರೆ ಆವರಿಸಿಬಿಟ್ಟಿತ್ತು.

ಬೆಳಿಗ್ಗೆ ೫.೩೦ ಕ್ಕೆಲ್ಲಾ ಎಚ್ಚರವಾಗಿತ್ತು. ಇನ್ನು ಬೆಳಕು ಹರಿದಿರಲಿಲ್ಲ. ಮಳೆ ಹರಿಯುತ್ತಲೇ ಇತ್ತು. ಶೌಚಾಲಯ ಹುಡುಕುತ್ತ ಜನ ಕೆಳಗಿಳಿದು ಬರುತ್ತಿದ್ದರು. ಅಂಗ್ರೇಜಿ ಅದ್ಯಾವಾಗಲೋ ಎದ್ದು ಹೋಗಿದ್ದ. ನಾವು ಇಬ್ಬರೂ ಎದ್ದು ಹಾಸಿಗೆ ಮಡಚಿ ಅಲ್ಲೇ ಬದಿಗಿಟ್ಟು ಮೇಲೆ ನಡೆದೆವು. ಮಳೆ ಸ್ವಲ್ಪ ನಿಂತಿತ್ತು. ಸರಿ ಮುಂದೆ ರಸ್ತೆ ಹೇಗಿದೆ ನೋಡೋಣ ನದಿ ಎಂದು ರಸ್ತೆಗುಂಟ ಸ್ವಲ್ಪ ನಡೆದವು. ಅಲ್ಲಿಂದ ಒಂದು ನೂರು ಮೀಟರ್ ಒಳಗೆ ಗುಡ್ಡ ಕುಸಿದು ಬಿದ್ದಿತ್ತು. ಅದರ ಆಕಡೆ ಕೂಡ ಬಸ್ಸುಗಳು ನಿಂತಿದ್ದವು. ಪಕ್ಕದಲ್ಲೇ ಗಂಗೆ ಕೆಂಪಾಗಿ ಹರಿಯುತ್ತಿದ್ದಳು. ಒಂದಂತೂ ಗೊತ್ತಾಗಿತ್ತು. ಗಂಗೋತ್ರಿಗೆ ಹೋಗುತ್ತೇವೆ ಎಂಬುದು ಕನಸು. ಇನ್ನೇನಿದ್ದರೂ ಮನೆ ದಾರಿ ಹಿಡಿಯಬೇಕು. ಆದರೆ ಹೀಗೆ ಗುಡ್ಡ ಕುಸಿದಿರುವುದರಿಂದ ಬಸ್ಸು ಹೋಗುವುದು ಕಷ್ಟವಿದೆ. ಏನು ಮಾಡುವುದು ಎಂಬ ಯೋಚನೆಯಲ್ಲಿರುವಾಗಲೇ ಒಬ್ಬ ಜೀಪ್ ತೆಗೆದುಕೊಂಡು ತಾನು ಹೃಷಿಕೇಶದ ತನಕ ಹೋಗುತ್ತೇನೆ ಬರುವವರು ಬರಬಹುದು ಎನ್ನುತ್ತಿದ್ದ. ನಮಗೂ ಅಷ್ಟು ಸಿಕ್ಕರೆ ಸಾಕಾಗಿತ್ತು. ನಾವು ಬರುತ್ತೇವೆ ಸ್ವಲ್ಪ ತಾಳು ಬಸ್ಸಿನಿಂದ ಬ್ಯಾಗ್ ತರುತ್ತೇವೆ ಎಂದು ಹೇಳಿ ಬಸ್ ಡ್ರೈವರ್ ಹುಡುಕಿ ಡಿಕ್ಕಿ ತೆರೆಸಿ ಬ್ಯಾಗ್ ಗೆ ಕೈ ಹಾಕಿದಾಗ ತಿಳಿಯಿತು. ಹಾಕಿಕೊಳ್ಳಲು ಬಟ್ಟೆ ಉಳಿದಿಲ್ಲ ಎಂದು. ಬ್ಯಾಗ್ ಪೂರ್ತಿ ನೀರು ಕುಡಿದು ಎತ್ತಲಾಗದಷ್ಟು ಭಾರವಾಗಿತ್ತು. ಹೇಗೂ ಮರಳಿ ಹೋಗುತ್ತಿದ್ದೆವಲ್ಲ ತೊಂದರೆ ಇಲ್ಲ ಎಂದು ಬ್ಯಾಗ್ ಬೆನ್ನಿಗೇರಿಸಿ ಜೀಪ್ ಏರಿ ಕುಳಿತೆವು. ಮತ್ತೆ ಮಳೆ ಪ್ರಾರಂಭವಾಯಿತು. ನಾವು ದೆಹಲಿ ಮರಳುವುದು ಅಷ್ಟು ಸುಲಭವಿರಲಿಲ್ಲ ಎಂದು ಆ ಕ್ಷಣದಲ್ಲಿ ಇಬ್ಬರಿಗೂ ತಿಳಿದಿರಲಿಲ್ಲ. ಅಂದು ಉತ್ತರಾಖಂಡದಲ್ಲಿ ತೇಲಿ ಹೋದ ಎಷ್ಟೋ ಜನರಿಗೆ ಕೂಡ ತಮ್ಮ ಸಾವು ಹತ್ತಿರವಿದೆ ಎಂದು ತಿಳಿದು ಇರಲೇ ಇಲ್ಲ.

ಮುಂದುವರೆಯುತ್ತದೆ.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post