X

ಓ ಮಾನವ ನೀನ್ಯಾಕೆ ಹೀಗೆ?

ಜಗತ್ತು ತುಂಬಾ ವೇಗವಾಗಿ ಮುಂದಕ್ಕಡಿಯಿಡುತ್ತಿದೆ. ಜಾಗತೀಕರಣದ ಹಿಂದೆ ನಾವು ಓಡುತ್ತಿದ್ದೇವೋ ಅಥವಾ ಅದೇ ನಮ್ಮನ್ನು ಓಡಿಸುತ್ತಿದೆಯೋ ಅನ್ನುವುದೇ ತಿಳಿಯದಾಗಿದೆ. ಆಧುನೀಕರಣಗೊಳ್ಳುವ ಭರದಲ್ಲಿ  ನಮ್ಮ ಮಾನವೀಯತೆಯನ್ನು ನಾವೇ ಮರೆತು ಬಿಟ್ಟೆವಾ?? ನಿಜವಾಗಿಯೂ ಇಂತಹದ್ದೊಂದು ಯೋಚನೆ ಮಾಡುವಂತೆ ಮಾಡಿದ್ದು ಕೊಪ್ಪಳದಲ್ಲಿ  ನಡೆದಂತಹ ಹೃದಯವಿದ್ರಾವಕ ಘಟನೆ.


ಅನ್ವರ್ ಎಂಬಾತ ಯುವಕ ಸೈಕಲ್ನಲ್ಲಿ ಹೋಗುತ್ತಿರುವಾಗ ಬಸ್ ಡಿಕ್ಕಿಯಾಗಿ, ಒದ್ದಾಡಿ ಒದ್ದಾಡಿ ತನ್ನ ಜೀವವನ್ನು ಕಳೆದುಕೊಳ್ಳುತ್ತಾನೆ. ಕಾಪಾಡಿ ಸಾರ್, ಕಾಪಾಡಿ ಎಂದು ಬೇಡಿಕೊಂಡರೂ ಕೂಡ ಅಲ್ಲಿದ್ದವರು ನೀರು ನೀಡಿ, ವಿಡಿಯೋ ಮಾಡಿ ಸುದ್ದಿಯನ್ನು ಹರಡಿಸಿದರೇ ವಿನಃ, ಆಸ್ಪತ್ರೆಗೆ ಸೇರಿಸಲೇ ಇಲ್ಲ. ಹದಿನೈದು ನಿಮಿಷ ಒದ್ದಾಡಿ ತೀವ್ರವಾದ ರಕ್ತ ಸ್ರಾವದಿಂದ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಒಬ್ಬ ಪೊಲೀಸ್ ಹೀಗೆ ಆಸ್ಪತ್ರೆಗೆ ಸಾಗಿಸದೇ ಇದ್ದುದರಿಂದ ಪ್ರಾಣ ಕಳೆದುಕೊಳ್ಳುತ್ತಾನೆ. ಹೋದ ವರ್ಷ ನೆಲಮಂಗಲದಲ್ಲಿ ಇದೇ ರೀತಿ ಹರೀಶ್ ಎಂಬ ಯುವಕ ಪ್ರಾಣ ಕಳೆದುಕೊಂಡಾಗ ಸರ್ಕಾರ ಅವನ ಕುಟುಂಬಕ್ಕೆ ಸಾಂತ್ವನ ಸಲ್ಲಿಸಿ, ಅವನ ಹೆಸರಿನಲ್ಲಿ ಯೋಜನೆ ತಂದರೂ,ಆತನ ಕುಟುಂಬ  ಸಹ ವಯಸ್ಸಲ್ಲದ ವಯಸ್ಸಿನಲ್ಲಿ  ಪ್ರಾಣ ಕಳೆದುಕೊಂಡ ಮನೆ ಮಗನಿಗೆ ಇಂದಿಗೂ ಮರುಗುತ್ತಿದೆ.

ಇಂತಹ ಅದೆಷ್ಟೋ ಘಟನೆಗಳು ನಡೆದಿದೆ, ನಡೆಯುತ್ತಲೂ ಇರುತ್ತದೆ.ಆದರೆ ನಾವ್ಯಾವಾಗ ಬದಲಾಗುವುದೆಂದು ತಿಳಿದಿಲ್ಲ.ಆದರೆ ಅದೆಷ್ಟೋ ಜನ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮತ್ತೊಂದು ಜೀವವನ್ನು ರಕ್ಷಿಸಿದವರನ್ನು  ನಮ್ಮ ಸುತ್ತಮುತ್ತ ಕಾಣಬಹುದು. ದೇಶದ  ಗಡಿಯುದ್ದಕ್ಕೂ  ಸೈನಿಕರು ಬಿಸಿಲು, ಗಾಳಿ, ಮಳೆ, ಚಳಿ ಬಿಟ್ಟು ಕಾವಲು ಕಾಯುತ್ತಿರುವುದರಿಂದ ನಾವಿಲ್ಲಿ  ನೆಮ್ಮದಿಯಿಂದ(ಪೂರ್ಣವಾಗಿ ಅಲ್ಲ) ಬದುಕು ನಡೆಸುತ್ತಿದ್ದೇವೆ. ಕೆಲವು ದಿನಗಳ ಹಿಂದಷ್ಟೆ ಹಿಮಪಾತದಿಂದಾಗಿ ಸೈನಿಕರು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಅವರು ಪ್ರಾಣ ಕಳೆದುಕೊಂಡದ್ದು ನಮಗಾಗಿ ಕಾವಲು ಕಾಯುವಂತ ಸಂದರ್ಭದಲ್ಲಿ.  ಅಪಘಾತದಲ್ಲಿ ಒದ್ದಾಡಿ ಮೃತ ಪಡುವವರು ನಮ್ಮನ್ನು ಕಾಯುವ  ಸೈನಿಕರ ಕುಟುಂಬದವರಾಗಿರಬಹುದು. ಹಾಗಾಗಿ ಮತ್ತೊಂದು ಜೀವವನ್ನು ರಕ್ಷಿಸುವ ಸುವರ್ಣಾವಕಾಶ ದೊರೆತಾಗ ಅದನ್ನು ಬಳಸಿಕೊಳ್ಳೋಣ.


ಹೀಗೆ ಐದು ವರ್ಷದ ಹಿಂದೆ ರಸ್ತೆ ದಾಟುವಾಗ,ನನಗೆ ಬೈಕ್ ಡಿಕ್ಕಿ ಹೊಡೆದಂತ ಸಂದರ್ಭದಲ್ಲಿ ಅಲ್ಲಿದ್ದವರು(ಪರಾರಿಯಾಗದ ಬೈಕ್ ಸವಾರನು ಸೇರಿ)ಆಸ್ಪತ್ರೆಗೆ ಸೇರಿಸದಿದ್ದರೆ ಇಂದು ಈ ಲೇಖನ ಬರೆಯಲು ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸೇರಿಸಿದವರು ಪೊಲೀಸ್ ವಿಚಾರಣೆಗೊಳಪಡಬೇಕಾಗಿಲ್ಲ, ವೈದ್ಯರು ಕೂಡಲೇ ಚಿಕಿತ್ಸೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದರೂ ಸಹ ಇನ್ನೂ ಅದೆಷ್ಟೋ ಜನ ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸೇರಿಸಲು ಮನಸ್ಸು ಮಾಡದೆ ಹಿಂದೇಟು ಹಾಕುತ್ತಿರುವುದು ವಿಪರ್ಯಾಸವೇ ಸರಿ.


ಮೊನ್ನೆ ಮೊನ್ನೆ ಒಡಿಶಾದಲ್ಲೂ ಮನಕಲುಕುವಂತಹ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಶವವನ್ನು ಸಾಗಿಸಲು ವಾಹನ ದೊರೆಯದೆ ತನ್ನ ಹೆಗಲ ಮೇಲೆ ಹೊತ್ತು ೧೦ ಕಿಲೋಮೀಟರ್ ಸಾಗಿದ್ದು ಹಾಗೂ ಮತ್ತೊಬ್ಬ ವ್ಯಕ್ತಿ ತನ್ನ ಮಗಳ ಶವವನ್ನು ೧೫ ಕಿಲೋಮೀಟರ್ ಸಾಗಿದ ಸಂದರ್ಭಲ್ಲೂ ಮಾನವೀಯತೆಯೂ ಸತ್ತು ಮಲಗಿತ್ತು. ಈ ಘಟನೆ ನಡೆದ ಬಳಿಕ ಸರ್ಕಾರ ತನಿಖೆಗೆ ಆದೇಶ ನೀಡಿದರೂ,ಅದೊಂದು ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ.


ಜೀವನ ಎಂಬುದು ಅದ್ಭುತ ಪಯಣ. ಜೀವವನ್ನು ಕಳೆದುಕೊಂಡ ಮೇಲೆ ಏನೇ ನೀಡಿದರು ಮರಳಿ ಬರಲು ಕೊಡುಕೊಳ್ಳುವಿಕೆಯ ಆಟವಲ್ಲ.  ಹಾಗಾಗಿ ಜೀವನವೆಂಬ ಈ ಪಯಣದಲ್ಲಿ ಮತ್ತೊಂದು ಪ್ರಾಣವನ್ನ ಉಳಿಸುವ ಅವಕಾಶ ದೊರೆತಾಗ ಅದನ್ನು ಸದುಪಯೋಗಪಡಿಸಿಕೊಂಡು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಮಾನವೀಯತೆ ಮೆರೆಯುವಂತಹ ಕೆಲಸಗಳಾಗಬೇಕು.ಮತ್ತೊಂದು ಪ್ರಾಣವನ್ನುಳಿಸಿದ,ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ ಹೆಮ್ಮೆಯಿಂದ ಜೀವನವೆಂಬ ಈ ಅದ್ಭುತ ಪಯಣವನ್ನು ಅತ್ಯದ್ಭುತವಾಗಿ ಕೊನೆಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಏನಾದರೂ ಆಗು ಮೊದಲು ಮಾನವನಾಗು ಅನ್ನೋ ಮಾತಿದೆ. ಹಾಗೆಯೇ ಇಂತಹ ಘಟನೆಗಳು ನಡೆದಾಗ ನಾವು ಮಾನವರು ಹೀಗೆ ಯಾಕೆ ಅಂತ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ.

 

ಚಿತ್ರಕೃಪೆ: ಇಂಟರ್’ನೆಟ್(ಸಾಂದರ್ಭಿಕ ಚಿತ್ರ)

 

-ಸುದೇಶ್ ಪಿ

sudeshp31@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post