X

ಅತಿ ವೇಗಿ ಕಂದು ಚಾಣ

ಮೂರು ವರ್ಷಗಳ ಹಿಂದೆ, ನಾನು ನನ್ನ ಗೆಳೆಯರೊಂದಿಗೆ ಕುದುರೆಮುಖ ಶಿಖರವನ್ನೇರಿದ್ದೆವು. ಕರ್ನಾಟಕದಲ್ಲಿರುವ ಚಾರಣ ತಾಣಗಳಲ್ಲಿ ಇದು ಪ್ರಸಿದ್ಧ ಮತ್ತು ಕಠಿಣ. ಬೆಟ್ಟದ ತಟದಿಂದ ತುದಿಗೇರಲು ನಾವಾದರೋ ಸುಮಾರು ಆರು ಗಂಟೆ ಸಮಯವನ್ನು ತೆಗೆದುಕೊಂಡಿದ್ದೆವು. ನಮ್ಮ ಚಾರಣವೆಂದರೆ ಅದು ಬರೀ ಏರುವುದಲ್ಲ, ಏರುವಾಗ ಅಲ್ಲಿರುವ ಗಿಡ ಮರಗಳನ್ನು ನೋಡುವುದು, ವಿಶೇಷವಾದ ಗಿಡಗಳನ್ನು ಸಂಗ್ರಹಿಸುವುದು. ಹಾಗಾಗಿ ನಮ್ಮ ಬೆನ್ನು ಚೀಲದ ಭಾರ ಗಿಡಗಳಿಂದಾಗಿ ಸದಾ ಏರುತ್ತಲೇ ಇತ್ತು. ಏರುವ ಹಾದಿಯಲ್ಲಿ ಕಂಡು ಬರುವ ಹುಳ ಹುಪ್ಪಟೆಗಳನ್ನು ಚಿತ್ರೀಕರಿಸುತ್ತಾ ಖಗ ಮೃಗಗಳ ಚಲನೆಯ ಜಾಡನ್ನು ಗಮನಿಸುತ್ತಾ ಏರಲು ಆರು ಗಂಟೆಗಳು ಬೇಕಾಯಿತು. ಹಾಗಲ್ಲವಾದರೂ ಖಂಡಿತ ನಾಲ್ಕು ಗಂಟೆ ಬೇಕಾಗುತ್ತಿತ್ತು. ನಮಗಾದರೋ ನಮ್ಮ ಕಾಲುಗಳನ್ನು ಜಿಗಣೆಗಳು ಏರದಂತೆ, ಕಲ್ಲು ಮುಳ್ಳುಗಳು ತಾಗದಂತೆ ಸುರಕ್ಷಿತ ಗೊಳಿಸುವ ಅನುಕೂಲವಿತ್ತು. ಅದಾಗ ಸಮಯ 12 ಗಂಟೆ, ನಮ್ಮ ಹೊಟ್ಟೆ ತಾಳ ಹಾಕುತ್ತಿತ್ತು. ಆದರೆ ಇನ್ನೂ ಊಟ ಬರಲಿಲ್ಲವಲ್ಲಾ!

 

ನಾವು ಊಟಕ್ಕೆ ತಟದಲ್ಲಿರುವ ಗೌಡರ ಮನೆಯಲ್ಲ್ಲಿ ಹೇಳಿದ್ದೆವು. ನಾವು ಹೊತ್ತುಕೊಂಡು ಹೋಗುವೆವೆಂದರೆ  ಅವರು ಕೇಳಲಿಲ್ಲ. ಊಟ ಬಿಸಿಬಿಸಿಯಾಗಿರಬೇಕು, ನೀವು ಹೋಗಿ, ನಮ್ಮ ಮಾಣಿ ನೀವಿರುವಲ್ಲಿಗೆ ತಂದು ಕೊಡುವ ಎಂದಿದ್ದರು. ಅರರೆ ಏನಾಶ್ಚರ್ಯ, ನಮ್ಮ ಹೊಟ್ಟೆಯ ಕೂಗು ಗೌಡರಿಗೆ ಕೇಳಿಸಿತೋ ಏನೋ! ಮಾಣಿ ನಮ್ಮೆದುರು ಹಾಜರಿದ್ದ. ಊಟ ಬೆಚ್ಚಗಿತ್ತು. ನಾವು ಆರು ಗಂಟೆಗಳಲ್ಲಿ ಏರಿದ್ದ ಆ ಬೆಟ್ಟವನ್ನು ಆ ಕೇವಲ ಒಂದೂವರೆ ಗಂಟೆಗಳಲ್ಲಿ ಏರಿದ್ದ. ಅದೂ ಕಾಲಲ್ಲಿ ಲೂನಾರ್ಸ್ ಚಪ್ಪಲಿ ಮಾತ್ರ! ಕೈಯಲ್ಲಿ ಏಳು ಮಂದಿಯ ಊಟ.

 

ಚಾರಣದ ಮಧ್ಯೆ ಆಗಾಗ ಕಂಡು ಬರುತ್ತಿದ್ದ ಮಲೆನಾಡು ಗಿಡ್ಡ ದನಗಳು ನಮ್ಮನ್ನು ನಾಚಿಸುವಂತೆ ಆ  ಗುಡ್ಡವನ್ನೇರುತ್ತಿದ್ದವು. ದನ ಕಾಯುವವನ ದನಿ ಕೇಳಿದಾಕ್ಷಣ ಅವನೆಡೆಗೆ ಪುನಃ ಸರಸರನೆ ಇಳಿಯುತ್ತಿದ್ದವು. ಕುದುರೇಮುಖದ ಅರ್ಧ ಹಾದಿಯಲ್ಲಿ ನಮಗೆ ದರ್ಶನವಾದ ಸಾಂಬಾರ ಜಿಂಕೆ ನಮ್ಮನ್ನು ನೋಡಿದ್ದೇ ತಡ ಆ ಕಡಿದಾದ ಬೆಟ್ಟವನ್ನು ಲಬಲಬನೆ ಏರಿ ಇನ್ನೊಂದು ದಿಕ್ಕಿಗೆ ಓಡಿ ಕಣ್ಮರೆಯಾಗಿದ್ದವು. ಅರರೆ ಎಂಥಾ ವೇಗ! ನಮ್ಮ ಚಾರಣದ ವೇಗ ಇವರುಗಳ ಮುಂದೆ ನಗಣ್ಯವಾಗಿತ್ತು. ಇಂಥಾ ವಿಷಯಗಳನ್ನು ಚರ್ಚಿಸುತ್ತಾ ನಾವು ಬೆಟ್ಟದ ತುದಿಯಲ್ಲಿ, ಕುದುರೆಮುಖದಲ್ಲಿ ಊಟ ಮುಗಿಸಿ, ಅಲ್ಲೇ ಆಕಾಶವನ್ನು  ನೋಡುತ್ತಾ, ನಾವಿರುವ ಎತ್ತರಕ್ಕಾಗಿ ಬೀಗುತ್ತಾ ಮಲಗಿದ್ದೆವು.

 

ಏನಾಶ್ಚರ್ಯ! ಆಕಾಶದಲ್ಲೊಂದು ಸದ್ದು! ಅದು ಹದ್ದಿನ ಸದ್ದು. ಆ ಸದ್ದಿನ ಹದ್ದು ನಮ್ಮೆಡಗೇ ಬರುತ್ತಿತ್ತು. ನೋಡ ನೋಡುತ್ತಿದ್ದಂತೆ ಅದು ನಮ್ಮ ಕಣ್ಣ ಮುಂದೆ ತೇಲಿ ಬಂತು. ಓ ಹೋಹೋ!!! ಚಾಣ, ಕಂದು ಚಾಣ, Peregrine Falcon.

ಈ ಹದ್ದಿನ ಬಣ್ಣ ಕಂದು. ಈ ಪ್ರಭೇದ ಭಾರತ, ಪಾಕಿಸ್ತಾನಕ್ಕೆ ಮಾತ್ರ ಸೀಮಿತ. ಹಾಗಾಗಿ ಇದಕ್ಕೆ “Shaheen Falcon” (falco peregrinator) ಎಂಬ ಹೆಸರು. ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಚಾಣನ ಬಣ್ಣ ಬೂದು ಮಿಶ್ರಿತ ಕಪ್ಪು ಅದಕ್ಕೆ Peregrine Falcon (falco peregrines) ಎನ್ನುವರು. ಈ ಚಾಣ ಯುರೋಪ್ ಖಂಡದಿದ ಬರುತ್ತದೆ.

ನಾನು ಬಲು ದಿನದಿಂದ ನೋಡಲು ಬಯಸಿದ್ದ ಚಾಣ ಇಂದು ನನ್ನ ಮುಂದೆ. ವಾಹ್! ಮತ್ತೊಮ್ಮೆ ಕುದುರೆಮುಖವನ್ನೇರಿದ್ದು ಸಾರ್ಥಕವೆಂಬ ಭಾವ. ಸರಿಯಾಗಿ ನೋಡಿ ಬಿಡುವೆ ಎಂದು ನನ್ನ ಕ್ಯಾಮೆರಾವನ್ನು ಎತ್ತುವಷ್ಟರಲ್ಲಿ ಅದು ಅಲ್ಲಿಂದ ಮಾಯ! ಹೋಯಿತಲ್ಲಾ ಎಂದಂದುಕೊಂಡ ಐದೇ ನಿಮಿಷಗಳಲ್ಲಿ ಮತ್ತೆ ಪ್ರತ್ಯಕ್ಷ! ನೋಡ ನೋಡುತ್ತಿದ್ದಂತೆ ಮತ್ತೆ ಬೆಟ್ಟದ ಬುಡಕ್ಕೆ! ವಾಹ್ ಅದೆಂಥಾ ವೇಗ. ನಮಗೆ ಊಟ ನೀಡಿದ ಮಾಣಿ, ಮಲೆನಾಡು ಗಿಡ್ಡ, ಸಾಂಬಾರು ಜಿಂಕೆಗಳ ವೇಗಸಾಮರ್ಥ್ಯವನ್ನು ಈ ಚಾಣ ಮರೆಸಿ ಬಿಟ್ಟಿತ್ತು. ಆ ಬಗೆಯಲ್ಲಿ ಅದು ತನ್ನ ವೇಗವನ್ನು ಮೆರೆಸಿಬಿಟ್ಟಿತ್ತು. ವೇಗದ ಚಾಣ ಸಾಮಾನ್ಯವಾಗಿ ಹಾರುವಾಗ ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರುವುದಂತೆ. ಅದೇ ಕಮರಿಗಳಲ್ಲಿ ಇಳಿಯುವಾಗ ಮತ್ತು ತನ್ನ ಆಹಾರದ ಮೇಲೆ ಎರಗುವಾಗ ಇದು ತನ್ನ ವೇಗವನ್ನು 320 ಕಿ.ಮೀನ ವರೆಗೂ ಏರಿಸುವ ಸಾಮರ್ಥ್ಯ ಹೊಂದಿದೆಯಂತೆ.

 

ಇಂಥಾ ವೇಗ ದರ್ಶನದ ಧನ್ಯತೆಯಲ್ಲಿ ನನಗೂ ಇಳಿಯಲು ಹೆಚ್ಚಿನ ವೇಗ ಬಂದದ್ದು ಸುಳ್ಳಲ್ಲ. ಆದರೆ ನಾವು ಅದು ಅಲ್ಲವಲ್ಲಾ! ಹಾಗಾಗಿ ಅತಿ ವೇಗ ಅಪಾಯಕ್ಕೆ ಆಹ್ವಾನವೆಂಬ ರಸ್ತೆ ವಾಹನ ನಿಯಮವನ್ನು ನೆನಪಿಸಿಕೊಂಡು ನಿಧಾನವಾಗಿಯೇ ಕುದುರೆಮುಖವನ್ನು ಇಳಿದೆವು.  ನಾವು ಏರಿ ಇಳಿಯುವಷ್ಟರಲ್ಲಿ ಆ ಕಂದು ಚಾಣ ಅದೆಷ್ಟು ಬಾರಿ ಹತ್ತಿ ಇಳಿದಿತ್ತೋ? ಬಲ್ಲವರು ಯಾರು?

ಈ Falcon ಎಂದರೆ ವೇಗಕ್ಕೆ ಉಪಮೆಯಾಗಿ ನಮ್ಮ ಕವಿಗಳು ಬಳಸಿದ್ದಾರೆ. ಅರಬ್ಬರು Falcon ಸಾಕುವುದೂ ಇದೆ. ತಮ್ಮ ಶತ್ರುಗಳ ಹತ್ಯಾರು ವಶ ಪಡಿಸಿಕೊಳ್ಳಲು ಇವನ್ನು ಬಳಸುತ್ತಿದ್ದರಂತೆ. Falcon tyre  ನ್ನು ನೀವು ಕೇಳಿರಬಹುದು. ಅದೂ ಇದರ ವೇಗದಿಂದಲೇ  ಬಂದ ಸ್ಪೂರ್ತಿ.

 

ನಿಮಗೆ ನಿಜವಾಗಿಯೂ Falcon ನೋಡಬೇಕಾದರೆ ಬೆಟ್ಟಗುಡ್ಡವನ್ನೇರಬೇಕು ಅಥವಾ ದೊಡ್ಡ ದೊಡ್ಡ ಕೆರೆಗಳೆಡೆಗೆ ಸಾಗಬೇಕು.

ಇವು ಸುಂದರವಾದ ಬೆಟ್ಟದ ಕಮರಿಗಳಲ್ಲಿ, ಕಂದಕಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. (ಇತ್ತೀಚಿನ ದಿನಗಳಲ್ಲಿ, ಎಲ್ಲವೂ ಹಾಳಾಗುತ್ತಿರುವ ಸಮಯದಲ್ಲಿ ಮೊಬೈಲ್ ಟವರ್ರೇ ಬೆಟ್ಟವೆಂದು ತಿಳಿದು ಈ ಚಾಣಗಳು ಬೇರೆ ಗತಿ ಇಲ್ಲದೆ ಟವರ್‍ಗಳಲ್ಲೇ ಸಂತಾನೋತ್ಪತ್ತಿ ಮಾಡಿದ ನಿದರ್ಶನಗಳೂ ಇವೆ!).

 

ಹೇಗೆಂದರೆ ಹಾಗೆ, ಎಲ್ಲೆಂದರೆ ಅಲ್ಲಿ ಹಾರಿ ಹೋಗುವ ಸೌಕರ್ಯವಿದಕ್ಕಿರುವುದರಿಂದ ಬೇಟೆ ಇದಕ್ಕೊಂದು ಸಮಸ್ಯೆಯಲ್ಲ. ಹಾಗಾಗಿ ಇದು ಸುಲಭದ ಭೇಟೆಗೆಂದು ನಮ್ಮ ಮೈಸೂರು ಸುತ್ತಮುತ್ತಲಿನ  ಕೆರೆಗಳಿಗೂ ಭೇಟಿ ಕೊಡುತ್ತವೆ. ತಿಂಗಳೊಂದರ ಹಿಂದೆ (ನವಂಬರ 2016) ನಮ್ಮ ತೋಟದ ಹಿಂದಿರುವ ದಡದಳ್ಳಿ ಕಟ್ಟೆಯಲ್ಲಿ ನಾನು ಕೆಂಫು ರಾಟೇವಾಳನ (Red Avadavat) ಅಧ್ಯಯನಕ್ಕೆಂದು  ಕುಳಿತಿದ್ದೆ. ಇದರ ಗಂಡು ಹಕ್ಕಿ ಬಲು ಸುಂದರ, ತನ್ನ ಕೊಕ್ಕಿನಲ್ಲಿ ಹುಲ್ಲುಗಳನ್ನು ತರುವಾಗ ಮೆಲು ದನಿಯನ್ನು ಹೊರಡಿಸುತ್ತಿತ್ತು. ಹೆಣ್ಣು ರಾಟೇವಾಳ  ಆ ಹುಲ್ಲನ್ನು ಗೂಡಿನಲ್ಲಿ ಜೊಡಿಸುತ್ತಿತ್ತು. ಆ ಮೆಲು ದನಿ ಬಲು ಇಂಪಾಗಿತ್ತು. ತುಸು ಸಮಯ ಎಲ್ಲಾ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ರಾಟೇವಾಳದ ದನಿಯಲ್ಲಿ ಬದಲಾವಣೆ. ಭಯಭರಿತ ಕರ್ಕಶ ಧ್ವನಿ. ಅಲ್ಲೇ ಇದ್ದ ಮೈನಾಗಳ ದನಿಯಲ್ಲೂ ಬದಲಾವಣೆ. ಸಾಮಾನ್ಯವಾಗಿ ಕೂಗಾಡದ ಹಳದಿ ಸಿಪಿಲೆಗಳು Yellow wagtail ಕೂಡಾ ಕೂಗತೊಡಗಿದವು. ಸೂರಕ್ಕಿಗಳ ಕೂಗು ಮುಗಿಲು ಮುಟ್ಟಿತ್ತು. ಏನೋ ಅಪಾಯ ಬಂದಿದೆ ಎಂದು ನನಗೆ ಮನದಟ್ಟಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ತಲೆ ಮೇಲೆತ್ತಿ ನೋಡಿದರೆ, ಅಲ್ಲೇ ಸಮೀಪದಲ್ಲಿದ್ದ High tension ಕಂಬದಲ್ಲೊಂದು ಹಕ್ಕಿ, ಅದರ ನಖದಲ್ಲಿ ಮರಳುಗೊರವ ( little stint) . ಆ ಹಕ್ಕಿ ಬೇರಾವುದೂ ಅಲ್ಲ, ಅಂದು ಕುದುರೆಮುಖದಲ್ಲಿ ನೋಡಿದ್ದೆನಲ್ಲಾ ಅದೇ! Falcon. Shaheen Falcon. ಆಹಾರಕ್ಕೆಂದು ನಮ್ಮ ದಡದಳ್ಳಿಗೆ ಬಂದಿತ್ತು.

 

ನಮ್ಮ ಇಲ್ಲಿನ ಹಕ್ಕಿಗಳಿಗೆ ಇದು ತುಸು ಅಪರಿಚಿತವೇ ಆದರೂ, ಅಪರೂಪಕ್ಕೊಮ್ಮೆ ಇಲ್ಲಿಗೆ ಬರುವುದಾದರೂ, ದುರ್ಬಲ ಹಕ್ಕಿಗಳೆಲ್ಲಾ ಚಾಣದ ಗತಿಯನ್ನು ಅರಿಯುವಷ್ಟು ಮತಿವಂತರಾಗಿರುವುದು ನಮ್ಮ ಪ್ರಕೃತಿಯಲ್ಲಿ ಆ ಚಾಣದ ವೇಗ ಗತಿಯಷ್ಟೇ ವಿಸ್ಮಯ. ದೇಹ ಶಕ್ತಿ ಕಡಿಮೆಯಾದರೂ  ನಮ್ಮ ದಡದಳ್ಳಿಯ ಪಕ್ಷಿಯಾದರೂ ಸುಲಭದಲ್ಲಿ ಚಾಣಕ್ಕೆ ತನ್ನನ್ನೊಡ್ಡಿಕೊಳ್ಳುವ ಬಂಡೆಯ ಮಂಡೆಯಲ್ಲದಿರುವುದರಿಂದ ನಾನು ನೋಡುತ್ತಿದ್ದಂತೆ ತನ್ನ ಕುಲ ಬಾಂಧವರನ್ನು ಎಚ್ಚರಿಸುತ್ತಾ ಓಟಕ್ಕಿತ್ತಿದ್ದವು. ಅಧ್ಯಯನವೊಂದರ ಪ್ರಕಾರ ಚಾಣಗಳು ಹತ್ತು ಬಾರಿ ದಾಳಿ ಮಾಡಿದರೆ ಅದರಲ್ಲಿ ಒಂದು ಬಾರಿ ಮಾತ್ರ ಭೇಟೆ ಫಲಿಸುವುದಂತೆ!

ಈ ಪಕ್ಷಿಗಳು ಹರಟೆ ಸುರು ಮಾಡಿ ಎರಡು ನಿಮಿಷವಾಗುವಷ್ಟರಲ್ಲಿ ಆ High tension ಕಂಬದಲ್ಲಿ ಕಾ-ಕಾ ಸದ್ದು.  ಊರ ಕಾಗೆಗಳೆಲ್ಲಾ ರಕ್ಷಣೆಗಾಗಿ ಒಂದೊಂದಾಗಿ ಅಲ್ಲಿ ಬಂದು ಸೇರಿದವು. ಸಂಖ್ಯೆ ಹತ್ತು ದಾಟುತ್ತಿದ್ದಂತೆ ಕಾಗೆಗಳು ಚಾಣವನ್ನು ಅಟ್ಟಿಸಿದವು.

ಚಾಣ ಅತ್ತ ಸಾಗುತ್ತಿದ್ದಂತೆ ರಾಟೇವಾಳ ಮತ್ತೆ ತನ್ನ ಕೆಲಸವನ್ನು ಆರಂಭಿಸಿತು. ದನಿ ಮೆಲುವಾಯಿತು. ಐದೇ ನಿಮಿಷ! ಮತ್ತೆ ಎಲ್ಲೆಡೆ ಹರಟೆ. ಕಾಗೆಗಳನ್ನು ಸುಸ್ತು ಪಡಿಸಿದ್ದ ಚಾಣ ಕರೆಂಟು ಕಂಬಿ ಏರಿತ್ತು. ದಡದಳ್ಳಿಯ ಹಕ್ಕಿಗಳಿಗೆ ಕರೆಂಟು ಬಡಿದಂತಾಗಿತ್ತು. ಈ ಬಾರಿ ಗರುಡಾಸ್ತ್ರ ಪ್ರಯೋಗವಾಯ್ತು. ಬಿಳಿಗರುಡನ ಮರಿ (Brahminy kite) ಚಾಣನಿಗೆ ದಾಳಿ ಮಾಡಿತ್ತು. ಹೆದರಿದ ಚಾಣ ವೇಗವಾಗಿ ಹಾರಿತು. ಎಲ್ಲಿದ್ದವೋ ಏನೋ ಇನ್ನೂ ನಾಲ್ಕು ಗರುಡಗಳು ಚಾಣದ ಬೆನ್ನು ಹತ್ತಿದವು. ಗರುಡಗಳು ಎಷ್ಟೇ ವೇಗವಾಗಿ ಹಾರಿದರೂ ಈ ಕಂದು ಚಾಣದ ಹತ್ತಿರವೂ ಸುಳಿಯಲಾಗಲಿಲ್ಲ. ಆದರೆ ಈ ಬಾರಿ ಚಾಣವು ಹೆದರಿತ್ತು. ಕಿರುಚಿಕೊಂಡೇ ಹಾರುತ್ತಿತ್ತು. ಚಾಣವು ಈ ದಡದಿಂದ ಆ ದಡಕ್ಕೆ ಹೋದರೆ ಮತ್ತಲ್ಲಿ ವೈನತೇಯನ ಕಾಟ. ಗರುಡಗಳು ಒಗ್ಗಟ್ಟಾಗಿದ್ದವು. ಚಾಣವನ್ನು ಜಾಣತನದಿಂದ ಜಾಡಿಸಿದ್ದವು. ಇತರೆ ಹಕ್ಕಿಗಳಿಗೀಗ High tension ಕಡಿಮೆಯಾಗಿತ್ತು. ಗರುಡಾಸ್ತ್ರ ಯಶಸ್ವಿಯಾಗಿತ್ತು.

 

ಇಲ್ಲಿ ಇನ್ನೊಂದು ಸ್ವಾರಸ್ಯವಿದೆ. ಗರುಡನ ದಾಳಿಯಿಂದ ಕಿರುಚಿಕೊಂಡು ದಿಕ್ಕಾಪಾಲಾಗಿ ಚಾಣ ಹಾರುತ್ತಿದ್ದರೆ, ಇದೀಗ ಅಪಾಯವೋ ನಿರಪಾಯವೋ ಎಂದು ಅರಿಯದೆ ದಡದಳ್ಳೀಯ ಬಾತುಕೋಳಿಗಳು, ಗದ್ದೆ ಗೊರವಗಳು, ಸಿಪಿಲೆಗಳು ಚಾಣವು ತಮ್ಮ ಮೇಲೆರಗುತ್ತಿದೆಯೋ ಎಂದು ಭ್ರಮಿಸಿ ದಿಕ್ಕಾಪಾಲಾಗುತ್ತಿದ್ದ ದೃಶ್ಯ ಆ ಮುಂಜಾವಿನ ಮಂಜಿನಲ್ಲಿ ಬಲು ಸುಂದರವಾಗಿತ್ತು.

ನಾನು ಕಂದು ಚಾಣನನ್ನು ಕಣ್ತುಂಬ ನೋಡಿದ ಇನ್ನೊಂದು ಸಂದರ್ಭ ಕೊಪ್ಪದ ಸಮೀಪವಿರುವ ಕುಂದಾದ್ರಿ ಬೆಟ್ಟದಲ್ಲಿ. ಬೆಟ್ಟದ ತುದಿಯಲ್ಲಿ ನಿಂತು ಅಲ್ಲಿನ ವಿಹಂಗಮ ನೋಟ ನೋಡುತ್ತಿರುವಾಗ ಯಾರೋ ಬಾಣ ಬಿಟ್ಟ ಅನುಭವ. ಆ ಬಾಣ ನಮ್ಮೆಡೆಗೇ ನುಗ್ಗಿ ಬರುತ್ತಿತ್ತು. ಹತ್ತಿರ ಬಂದಾಗ ತಿಳಿಯಿತು, ಅದು ಬಾಣವಲ್ಲ, ಚಾಣ! ಮತ್ತೆ ಕುದುರೆ ಮುಖದ ಮೊದಲ ನೆನಪು. ಈ ಚಾಣ ಮಾಯ! ಕುಂದಾದ್ರಿ ಬೆಟ್ಟದ ತುದಿ ಕರ್ಗಲ್ಲು. ಭಯಂಕರ ಪ್ರಪಾತ! ಇಂಥಾ ಪ್ರಪಾತಗಳಲ್ಲಿ ಚಾಣನ ವಾಸ ಎಂಬ ತಿಳಿವು ನನ್ನಲ್ಲಿದ್ದುದರಿಂದ, ಈ ಚಾಣವು ಕಂದಕದಲ್ಲಿನ ಕಲ್ಲುಗಳ ನಡುವೆ ಎಲ್ಲಾದರು ಕುಳಿತಿರಬಹುದೆಂದು ಗ್ರಹಿಸಿ ನಾನು ಜೋಪಾನವಾಗಿ ಪ್ರಪಾತವನ್ನು ಇಳಿಯ ತೊಡಗಿದೆ. ಕೆಳ ಬಗ್ಗಿದರೆ ಎದೆ ಬಡಿತ ಜಾಸ್ತಿಯಾಗುತ್ತಿತ್ತು. ಎಚ್ಚರ ತಪ್ಪಿದರೆ ಪಾತಾಳ! ಆದರೂ ಚಾಣನನ್ನು ನೋಡುವ ತವಕ.. ಇನ್ನೊಂದು ಹೆಜ್ಜೆಯೂ ಮುಂದಕ್ಕಿಡಲಾಗದಷ್ಟು ಕೆಳಗೆ ಬಂದಿದ್ದೆ. ನನ್ನ ಅದೃಷ್ಟಕ್ಕೆ ಕಂದು ಚಾಣ ಕಾಣಿಸಿತು. ವಾಹ್ ಎಂತಾ ವರ್ಣತಾದ್ರೂಪ್ಯ. ಆ ಕರಿಯಾದ ಕಲ್ಲಿಗೆ ಇದರ ಮೈ ಬಣ್ಣ ಕೂಡಿ ಹೋಗಿತ್ತು. ಪಕ್ಕನೆ ಅರ ಕಣ್ಣಿಗೂ ಬೀಳದು. ಅಂದು ನನ್ನ ದಿನವಾಗಿತ್ತು. ಹಾಗಾಗಿ ಕಂಡು ಬಿಟ್ಟಿತ್ತು.

 

ಅದು ಕುಳಿತ ಜಾಗಕ್ಕೆ ಎಂದೂ ಯಾರೂ ಹೋಗಲಾರರು. ಹೋಗುವ ಕಲ್ಪನೆಯೂ ಮಾಡಲಾಗದು. ಅಂಥಾ ಕಂದಕ. ಹಾಗಾಗಿಯೇ ಹೇಳುವುದು

““ Where Eagles Dare”!

ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ, ವಿಜಯಲಕ್ಷ್ಮಿ ರಾವ್

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post