X

ಸಂಧ್ಯೆಯಾ ಮುಸುಕಲಿ ಮಿಂಚಂತೆ ಬಂದು ಹೋಗುವನೇನು ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೦

ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ? |
ಶಶಿರವಿಗಳವನ ಮನೆ ಕಿಟಕಿಯಾಗಿರರೇಂ? ||
ಮಸುಕು ಬೆಳಕೊಂದಾದ ಸಂಜೆ ಮಂಜೇನವನು |
ಮಿಸುಕಿ ಸುಳಿಯುವ ಸಮಯ ? – ಮಂಕುತಿಮ್ಮ || ೦೪೦ ||

ಹಿಂದಿನ ಹಲವಾರು ಪದ್ಯಗಳಂತೆಯೆ ಹೀಗೆ ತಮ್ಮ ಪ್ರಶ್ನೆಗಳನ್ನು ಸುರಿಸುತ್ತಲೆ ಸಾಗುವ ಕವಿ, ಈಗ ಬಹುಶಃ ಪರಬ್ರಹ್ಮವು ಯಾವುದೊ ಹೊತ್ತಿನಲ್ಲಿ, ಯಾವುದೊ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರಬಹುದೇನೊ – ಆದರೆ ಅದರ ಸರಿಯಾದ ಅರಿವಿಲ್ಲದೆ ನಾವೆ ಅದರ ಅಸ್ತಿತ್ವವನ್ನು, ಸ್ವರೂಪವನ್ನು ಗುರುತಿಸಲಾಗದೆ ಹೋಗುತ್ತಿದ್ದೇವೇನೊ ? ಎಂಬ ಅನುಮಾನಕ್ಕು ಸಿಲುಕಿಬಿಡುತ್ತಾರೆ.

ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ? |
ಶಶಿರವಿಗಳವನ ಮನೆ ಕಿಟಕಿಯಾಗಿರರೇಂ? ||

ಒಂದು ವೇಳೆ ಅವನು ಹಗಲಿನಲ್ಲಿ ಎಲ್ಲರ ನಡುವೆ ಪ್ರಕಟಗೊಳ್ಳುವ ಬಯಕೆ ಇರದಿದ್ದರೆ, ಇರುಳಿನ ಕತ್ತಲಲ್ಲಾದರೂ ಯಾಕೆ ಕಾಣಸಿಗನು? ಈ ಹಗಲೂ ರಾತ್ರಿಗಳ ವಕ್ತಾರರಾದ ಸೂರ್ಯಚಂದ್ರರೂ ಅವನ ಸೃಷ್ಟಿಗಳೇ ಅಲ್ಲವೆ? ಬ್ರಹ್ಮಾಂಡದೊಡೆತನದ ಅಗಾಧ ವ್ಯಾಪ್ತಿಯ ನಡುವಲ್ಲೂ ಧರಣಿಯಂತ ಪುಟ್ಟ ಜಗದ ಮೇಲೆ ಕಣ್ಣಿಡಲು ಗೋಚರಾಗೋಚರ ಪ್ರಪಂಚದ ನಿಯಂತ್ರಕರಾದ ಸೂರ್ಯಚಂದ್ರರೇ ಅವನ ಮನೆಯ ಕಿಟಕಿಗಳಾಗಿರಬಾರದೇಕೆ ? ಅವರನ್ನು ಕಿಟಕಿಯಾಗಿಸಿಕೊಂಡು ತಾನೆ ಈ ಇಳೆಯನ್ನು ಅವನು ನೋಡುತ್ತಿರುವುದು ?

ಮಸುಕು ಬೆಳಕೊಂದಾದ ಸಂಜೆ ಮಂಜೇನವನು |
ಮಿಸುಕಿ ಸುಳಿಯುವ ಸಮಯ ? – ಮಂಕುತಿಮ್ಮ ||

ಅವರಿಬ್ಬರು ಅವನ ಮನೆಯ ಕಿಟಕಿಗಳಿದ್ದಂತೆ ಅಂದ ಮೇಲೆ ಅವನಿಚ್ಛೆಯಂತೆ ಹಗಲಿನಲ್ಲೊ, ಇರುಳಿನಲ್ಲೊ – ಯಾವಾಗಲಾದರೂ ಸರಿ, ಅವರ ಮೂಲಕವಾದರೂ ತೋರಿಕೊಳ್ಳಬಾರದೆ? ಅಥವಾ ಅವರಿಬ್ಬರ ಸ್ಥಿತ್ಯಂತರವಾಗುವ ಸಂಧಿಕಾಲವನ್ನೆ ಮುಸುಕಾಗಿಟ್ಟುಕೊಂಡು, ಅವರಿಬ್ಬರು ಒಟ್ಟಾಗಿರುವ ಸಂಜೆಮಬ್ಬಿನ ರೂಪದಲ್ಲೇನಾದರೂ ಯಾರಿಗೂ ಕಾಣದಂತೆ, ಸಿಗದಂತೆ ಬಂದು ಹೋಗುತ್ತಿರುವನಾ? ಆ ಸಂಧಿಕಾಲದ ಮುಂಜಾವು, ಮುಸ್ಸಂಜೆಗಳೇ ಏನು ಅವನು ಮಿಂಚಿನಂತೆ (ಮಿಸುಕು) ಸುಳಿದು ಬಂದು ಮಾಯವಾಗುವ ಸಮಯ? ಎಂದು ಕೇಳುವ ಕವಿಭಾವ ಇಲ್ಲಿ ವ್ಯಕ್ತವಾಗಿದೆ.

ಸಾಧಾರಣವಾಗಿ ಸೂರ್ಯನಮಸ್ಕಾರ, ಸಂಧ್ಯಾವಂದನೆಗಳಂತಹ ಕ್ರಿಯೆಗಳನ್ನೆಸಗುವ ಈ ಹೊತ್ತುಗಳ ಪೂಜನೀಯತೆಯೂ ಕವಿಯ ಈ ಊಹೆಯ ಹಿನ್ನಲೆಯಲ್ಲಿ ಕೆಲಸ ಮಾಡಿರಬಹುದು. ಜತೆಗೆ ಕತ್ತಲೆ ಬೆಳಕಿನ ಸಮನ್ವಿತ ರೂಪಾದ ನೆರಳಿನ ವಿಶೇಷತೆಯೆಂದರೆ ಅದೂ ಇದ್ದು ಇಲ್ಲದಂತೆ ವರ್ತಿಸುವ ರೀತಿ. ಕಾಣಬಹುದು, ಆದರೆ ಹಿಡಿಯಲಾಗದು. ಏನೊ ಸ್ವರೂಪ ಕಂಡರೂ ಸ್ಪಷ್ಟ ಚಹರೆ, ರೂಪುರೇಷೆಗಳು ಗೊತ್ತಾಗುವುದಿಲ್ಲ. ಭೌತಿಕದಂತೆ ಕಂಡರೂ ಯಾವ ಭೌತಿಕ ಪಾತ್ರ ಪ್ರಮಾಣದಲ್ಲೂ ಹಿಡಿದಿಡಲಾಗುವುದಿಲ್ಲ. ಇಂತಹ ನೆರಳು ಉಂಟಾಗಬೇಕಿದ್ದರೆ ಬೆಳಕು ಮತ್ತು ಕತ್ತಲೆ ಎರಡೂ ಒಟ್ಟಾಗಿದ್ದರೆ ಮಾತ್ರ ಸಾಧ್ಯ. ಅವೆರಡರ ಸಂಕೇತವಾದ ಸೂರ್ಯಚಂದ್ರರು ಒಟ್ಟಾಗಿ ಸಂಯೋಗದ ರೂಪದಲ್ಲಿರುವಂತೆ ಕಾಣಿಸಿಕೊಳ್ಳುವ ನೆರಳಿನ ಪ್ರತೀಕವಾದ ಮುಂಜಾನೆ, ಮುಸ್ಸಂಜೆಗಳು ಪರಬ್ರಹ್ಮದ ಇರುವಿಕೆಯನ್ನು , ಸ್ವರೂಪವನ್ನು ಸುಲಭವಾಗಿ ಹೋಲುವ ಕಾರಣದಿಂದ ಆ ಹೋಲಿಕೆ ಈ ಊಹೆಯಾಗಿ ಮೂರ್ತರೂಪ ಪಡೆದಿರಬಹುದು.

ಒಟ್ಟಾರೆ ಇದು ಮತ್ತೆ ಪರಬ್ರಹ್ಮದ ಕುರಿತ ಅಸ್ಪಷ್ಟತೆಗೆ ಚೆಲ್ಲಿದ ಮತ್ತಷ್ಟು ಬೆಳಕು ಎನ್ನುವುದರಲ್ಲಿ ಸಂದೇಹವಿಲ್ಲ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post