ನೋಟು ಅಮಾನ್ಯ ಮಾಡಿರುವ ಕ್ರಮ ವಿರೋಧಿಸಿ ದೇಶಾದ್ಯಂತ ಹರತಾಳ ಮಾಡುತ್ತಿದ್ದಾರೆ ಇವತ್ತು ಒಂದು ಗುಂಪಿನ ಮಂದಿ. ಆ ಸುದ್ದಿ ಬಂದಾಗ, ನನ್ನ ಗಮನವನ್ನು ಮೊದಲು ಸೆಳೆದದ್ದು ಹರತಾಳವೆಂಬ ಶಬ್ದ. ತಾಳವೆಂಬುದು ವಿಷ್ಣು ಭಕ್ತರ, ಅಂದರೆ ವೈಷ್ಣವರ ವಾದ್ಯ. ಹರನದೇನಿದ್ದರೂ ಡಮರು, ಡೋಲು ಮುಂತಾದ ಚರ್ಮ ವಾದ್ಯಗಳು. ಹಾಗಿದ್ದ ಮೇಲೆ ಹರನಿಗೂ ತಾಳಕ್ಕೂ ತಾಳ ಮೇಳ ಕೂಡಿ ಬಂದದ್ದು ಹೇಗೆ ಎಂದು ಮನಸ್ಸು ಯೋಚಿಸ ಹತ್ತಿತು. ಅದು ಹರ ಬಡಿವ ತಾಳ ಅಲ್ಲಯ್ಯ! ಹಟ್ಟತಾಲ ಎಂಬ ಮಾತು, ಅಪಭ್ರಂಶವಾಗಿ ಹೀಗಾಗಿದೆ ಅಷ್ಟೆ. ಹಟ್ಟ ಎಂದರೆ ಅಂಗಡಿ ಪೇಟೆ. ತಾಲ ಎಂದರೆ ಬೀಗ. ಪೇಟೆಗೆಲ್ಲ ಬೀಗ ಜಡಿಯುವುದೇ ಹಡತಾಲ ಅಥವಾ ಹರತಾಳ ಅಲ್ಲವೇನಯ್ಯ – ಎಂದು ಭಾಷಾ ಪಂಡಿತರೊಬ್ಬರು ಗೊಂದಲ ನಿವಾರಣೆ ಮಾಡಿದರು. ತಾಲಃ ಸಂಸ್ಕತ ಪದ. ಅದುವೇ ಹಿಂದಿಗೆ ಬಂದು ತಾಲ್, ತಾಲಾ ಆಗಿದೆ. ನನಗೆ ಆಜನ್ಮ ರಹಸ್ಯವಾಗಿ ಉಳಿದಿರುವ ನಿರ್ಜೀವ ವಸ್ತುಗಳ ಲಿಂಗ ನಿರ್ಧಾರದ ಸಮಸ್ಯೆ ಇಲ್ಲೂ ಮೂಡಿ, ತಾಲದ ವಿಷಯದಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿತು. ಸಂಸ್ಕತದಲ್ಲಿ ತಾಲಃ ಪುಲ್ಲಿಂಗ; ಆದರೆ ಆ ಬೀಗಕ್ಕೆ ಸೇರಿಸುವ ಕೀಲಿಕೈ – ಕುಂಚಿಕಾ – ಅದು ಸ್ತ್ರೀಲಿಂಗ. ಅದೇಕೆ ಹಾಗೆ? ಪ್ರಕೃತಿ ಸಹಜವಾದ ಕಾಮದ ಕಲ್ಪನೆ ಮಾಡಿದರೆ ಬೀಗ ಸ್ತ್ರೀಯೂ, ಕೀಲಿ ಪುರುಷನೂ ಆಗಬೇಕಿತ್ತಲ್ಲ? ಅಥವಾ ಕೀಲಿಯೊಂದಿದ್ದರೆ ಸಾಕು ತಾಲ ಹೇಗೆ ಬೇಕೋ ಹಾಗೆ ಕುಣಿಯುತ್ತದೆ; ಕೀಲಿಯ ಮಾತನ್ನು ಮನಸಾ ಕೇಳುತ್ತದೆ ಎಂಬ ಕಾರಣಕ್ಕೆ ಕೀಲಿಗೆ ಸ್ತ್ರೀಲಿಂಗವನ್ನೂ ಬೀಗಕ್ಕೆ ಪುಲ್ಲಿಂಗವನ್ನೂ ಆರೋಪಿಸಿರಬಹುದೆ ಎಂದು ಮನಸ್ಸು ಮತ್ತೆ ತರ್ಕಿಸಿತು. ಸಂಸ್ಕತದಲ್ಲಿ ವಸ್ತುಗಳ ರೂಪ ವಿಶೇಷಕ್ಕೂ ಅವುಗಳ ಲಿಂಗ ನಿರ್ಧಾರಕ್ಕೂ ಸಂಬಂಧವಿಲ್ಲಯ್ಯ; ನದೀ ತೀರ ಎಂದು ಹೇಳುವ ತಟ ಶಬ್ದ ಕಾಲ-ಸಂದರ್ಭಕ್ಕೆ ತಕ್ಕಂತೆ ಮೂರೂ ಲಿಂಗಗಳನ್ನು ಧರಿಸುತ್ತದೆ. ತಟಃ, ತಟೀ, ತಟಮ್ ಆಗುತ್ತದೆ ಎಂದರು ಭಾಷಾ ತಜ್ಞರು. ಸರಿ ಎನ್ನುತ್ತ ಸುಮ್ಮನಾದೆ.
ಆದರೆ ತಾಲ ಮಾತ್ರ ಮನಸ್ಸಿನಲ್ಲಿ ತಾಳ ಹೊಡೆಯುತ್ತಲೇ ಇತ್ತು. ಹಿಂದೆಲ್ಲ ಮನೆಗಳಿಗೆ ಬೀಗ ಹಾಕುತ್ತಿದ್ದರು. ಅದೇನು ಸ್ವಾಮಿ, ಈಗ ಹಾಕೋಲ್ಲವೇ ಎನ್ನಬೇಡಿ! ಈಗಿನ ಮನೆಗಳಿಗೆ ಬಾಗಿಲಿನಲ್ಲೇ ಅಡಕವಾಗಿರುವ, ಹೊರಗಿನ ಕಣ್ಣಿಗೆ ಕಾಣಿಸದ ಡೋರ್ ಲಾಕ್‍ಗಳು ಬಂದಿವೆ. ಹಾಗಾಗಿ ಹೊರಗಿನಿಂದ ನೋಡಿ ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅದೂ ಅಲ್ಲದೆ, ಇತ್ತೀಚೆಗೆ ಬೆಂಗಳೂರಂಥ ಆಧುನಿಕ ನಗರಗಳಲ್ಲಿ, ಕೀಲಿ ಹಾಕಿ ತಿರುಪಲು ತೂತು ಕೂಡ ಇಲ್ಲದಿರುವ ಎಲೆಕ್ಟ್ರಾನಿಕ್ ಬಾಗಿಲುಗಳು ಬಂದಿವೆ. ಇವುಗಳ ಮುಂದೆ, ಕಾರಿನಲ್ಲಿದ್ದಂತೆ, ಒಂದು ಕೀಲಿಯನ್ನು ಕೈಯಲ್ಲೇ ಹಿಡಿದು ಸಣ್ಣಗೆ ಅದುಮಿದರೆ ಸಾಕು, ಅಲಿಬಾಬನ ಕತೆಯಂತೆ ಬಾಗಿಲು ತೆರೆದು ಸ್ವಾಗತ ಕೋರುತ್ತದೆ. ಹಾಗಾಗಿ, ಬಾಗಿಲು, ಅದಕ್ಕೊಂದು ಅಗುಳಿ, ಅಗುಳಿಗೊಂದು ಬೀಗ, ಬೀಗಕ್ಕೊಂದು ಕೀಲಿ ಎಂಬ ಹಳೆ ಪದ್ಧತಿ ನಿಧಾನವಾಗಿ ಕಣ್ಮರೆಯಾಗುವ ಹಾದಿ ಹಿಡಿದಿದೆ ಎನ್ನಬಹುದು. ಮನೆಯ ಚಿನ್ನಾಭರಣಗಳನ್ನೂ ಕಪ್ಪು ಹಣವನ್ನೂ ಇಡುವ ಲಾಕರ್‍ಗಳಿಗೂ ಎಲೆಕ್ಟ್ರಾನಿಕ್ ಸಂಕೇತ ಕೇಳುವ ಲಾಕಿಂಗ್ ವ್ಯವಸ್ಥೆಗಳೇ ಬಂದಿರುವುದರಿಂದ, ಇನ್ನು ಮುಂದೆ, ಮನೆಯ ಸಕಲ ತಿಜೋರಿಗಳ ಬೀಗದ ಕೈಗಳ ಗೊಂಚಲನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಅಧಿಕಾರ ಮೆರೆಯುತ್ತಿದ್ದ ಅತ್ತೆಯಮ್ಮಂದಿರೂ ಕಡಿಮೆಯಾಗಬಹುದು. ಅತ್ತೆಯರಿಲ್ಲದ ಮನೆಗಳನ್ನು ಹುಡುಕಿ ಮದುವೆಯಾಗುತ್ತಿರುವ ಬುದ್ಧಿವಂತ ಹುಡುಗಿಯರು ಸಮಸ್ಯೆಯನ್ನು ಮೂಲದಲ್ಲೇ ಪರಿಹರಿಸಿಕೊಂಡು ಬಿಟ್ಟಿದ್ದಾರೆ ಎನ್ನುತ್ತೀರೇನೋ ನೀವು!
ಅಂದ ಹಾಗೆ, ಜಗತ್ತಿನ ಮೊದಲ ಬೀಗ ರಚನೆಯಾದದ್ದು ಎಲ್ಲಿ ಎಂಬ ಪ್ರಶ್ನೆಗೆ ಇದುವರೆಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಈಜಿಪ್ಟ್’ನಲ್ಲಿ ಮೊದಲ ಬೀಗ ತಯಾರಾಯಿತು ಎಂದು ಬಹಳ ವರ್ಷಗಳ ಕಾಲ ಇತಿಹಾಸಕಾರರು ಭಾವಿಸಿದ್ದರು. ಆದರೆ, ಅದಕ್ಕೂ ಮೊದಲು ಮೆಸಪೊಟೋಮಿಯದಲ್ಲಿ ಬಳಕೆಯಾಗಿದ್ದ ಬೀಗ ಸಿಕ್ಕಿದೆಯಂತೆ. ಅವು ನಾವೀಗ ಬಳಸುವ ಬೀಗಗಳಂತೆ ಇರಲಿಲ್ಲ ಎನ್ನಬಹುದಾದರೂ ಮನುಷ್ಯನಿಗೆ ತನ್ನ ಅಮೂಲ್ಯ ವಜ್ರ ವೈಡೂರ್ಯಗಳನ್ನೋ ಕಾಗದ ಪತ್ರಗಳನ್ನೋ ಜಾಗರೂಕತೆಯಿಂದ ಪೆಟ್ಟಿಗೆಯಲ್ಲಿಟ್ಟು ಬೀಗ ಜಡಿಯಬೇಕೆಂಬ ಪ್ರಜ್ಞೆ ಆಗಲೂ ಇತ್ತೆನ್ನಬಹುದು. ಅಲ್ಲದೆ ಆ ಕಾಲದಲ್ಲಿ ಜನ ತೀರ್ಥಯಾತ್ರೆಗಳಿಗೆಂದು ದೂರದೂರುಗಳಿಗೆ ಹೋಗುವುದೂ, ಹಾಗೆ ಹೋಗಬೇಕಾದಾಗ ತಮ್ಮ ಆಸ್ತಿಪಾಸ್ತಿಯನ್ನು ಪೆಟ್ಟಿಗೆಯಲ್ಲಿ ತುಂಬಿ ಆಜುಬಾಜಿನ ಜನರ ಸುಪರ್ದಿಗೆ ಒಪ್ಪಿಸುವುದೂ ಅನಿವಾರ್ಯವಾಗಿತ್ತಲ್ಲ?
ಬೀಗದ ಚರಿತ್ರೆ ತಡಕಾಡಿದರೆ ಕೆಲವು ವಿಸ್ಮಯ ಹುಟ್ಟಿಸುವ ಸಂಗತಿಗಳು ಸಿಗುತ್ತವೆ. 1818ರಲ್ಲಿ ಇಂಗ್ಲೆಂಡಿನ ಪೋರ್ಟ್ಸ್’ಮೌತ್ ಎಂಬ ರೇವು ಪಟ್ಟಣದಲ್ಲಿ ಒಂದು ಭಾರೀ ಕಳ್ಳತನವಾಯಿತಂತೆ. ಕಳ್ಳರು ಅದುವರೆಗಿನ ಅತ್ಯಂತ ಆಧುನಿಕ ಬೀಗವನ್ನು ಕೂಡಾ ಒಡೆದು ತಮ್ಮ ಬುದ್ಧಿವಂತಿಕೆಯನ್ನೂ ಅಧಿಕಾರಿಗಳ ವ್ಯವಸ್ಥೆಯ ಅಸಮರ್ಥತೆಯನ್ನೂ ಏಕಕಾಲಕ್ಕೆ ತೋರಿಸಿ ಬಿಟ್ಟರಂತೆ. ಈ ಪ್ರಕರಣದಿಂದ ತೀವ್ರ ಮುಖಭಂಗ ಅನುಭವಿಸಿದ ಸರಕಾರ, ಎಂದೂ ಯಾರಿಗೂ ಮುರಿಯಲಾಗದ ಏಳು ಸುತ್ತಿನ ಕೋಟೆಯಂಥ ಬೀಗವನ್ನು ತಯಾರಿಸಿ ಕೊಡುವವರಿಗೆ ನೂರು ಪೌಂಡ್ ಬಹುಮಾನ ಕೊಡುತ್ತೇವೆಂದು ಘೋಷಿಸಿತು. ಅದನ್ನು ಪಂಥವೆಂದು ಸ್ವೀಕರಿಸಿ ಜೆರೆಮಿಯಾ ಚಬ್ ಎಂಬ ಬುದ್ಧಿವಂತ, ಹಗಲಿರುಳು ಪ್ರಯತ್ನಪಟ್ಟು ಒಂದು ಹೊಸ ಬೀಗ ರಚಿಸಿ ಅಧಿಕಾರಿಗಳ ಕೈಯಲ್ಲಿಟ್ಟ. ಈಗ ಅದರ ಪರೀಕ್ಷೆ ನಡೆಸಬೇಕಲ್ಲ? ಅದಕ್ಕೆಂದು ಅಧಿಕಾರಿಗಳು ಆ ಪ್ರಾಂತ್ಯದಲ್ಲಿ ಸಕಲ ವಿದ್ಯೆಗಳನ್ನೂ ಕರತಲಾಮಲಕ ಮಾಡಿಕೊಂಡಿದ್ದ ಒಬ್ಬ ಚಾಣಾಕ್ಷ ಕಳ್ಳನನ್ನು ಕರೆದು ತಂದರು! ಆತ ಈ ಬೀಗದೊಡನೆ ಮೂರು ತಿಂಗಳು ಒದ್ದಾಡಿದರೂ ಗುದ್ದಾಡಿದರೂ ತೆರೆಯಲು ಆಗಲಿಲ್ಲವಂತೆ. ಪರವಾಯಿಲ್ಲ; ಈ ಪರೀಕ್ಷೆಯಲ್ಲಿ ಚಬ್ ಪಾಸಾಗಿದ್ದಾನೆಂದು ಪರಿಗಣಿಸಿ, ಅಧಿಕಾರಿಗಳು ಅವನಿಗೆ ನೂರು ಪೌಂಡುಗಳ ಇನಾಮು ಕೊಟ್ಟು ಕಳಿಸಿದರು. 1820ರಲ್ಲಿ ಆತ ತನ್ನ ಸೋದರ ಚಾಲ್ರ್ಸ್ ಜೊತೆ ಸೇರಿ ಚಬ್ ಹೆಸರಿನ ಬೀಗದ ಕಂಪೆನಿಯನ್ನೇ ಪ್ರಾರಂಭಿಸಿಬಿಟ್ಟ.
ಜೆರೆಮಿಯಾ ತಯಾರಿಸಿದ ಬೀಗದಲ್ಲಿ ಇನ್ನೊಂದು ವೈಶಿಷ್ಟ್ಯವಿತ್ತು. ಅದೇನೆಂದರೆ ಬೀಗದಲ್ಲಿ ಮೂರ್ನಾಲ್ಕು ಕೊಂಡಿಗಳಿದ್ದು, ಬೀಗ ತೆರೆಯುವ ಹೊತ್ತಲ್ಲಿ ಅವನ್ನು ನಿರ್ದಿಷ್ಟ ಅಳತೆಯಷ್ಟು ಮಾತ್ರ ಮೇಲಕ್ಕೆ ಎತ್ತಬೇಕಾಗಿತ್ತು. ಅದು ಗೊತ್ತಿಲ್ಲದ ಹೊಸಬ, ಕೊಂಡಿಗಳನ್ನು ಒಂದಷ್ಟು ಹೆಚ್ಚು ಎತ್ತಿ ಹಿಡಿದರೂ ಬೀಗ ಒಳಗಿಂದ ತನ್ನ ಅಗುಳಿ ಹಾಕಿಕೊಂಡು ಬಿಡುತ್ತಿತ್ತು. ಆಮೇಲೆ ಜಪ್ಪಯ್ಯ ಎಂದರೂ ಅದನ್ನು ಹಿಂದಿನ ಸ್ಥಿತಿಗೆ ತರುವುದಾಗಲೀ, ಮುಂದುವರೆದು ತೆರೆಯುವುದಾಗಲೀ ಸಾಧ್ಯವಾಗುತ್ತಿರಲಿಲ್ಲ. ಬೀಗದ ಮಾಲಿಕ ಬಂದು ನೋಡಿದಾಗ, ಅವನಿಗೆ ಕಳ್ಳರು ಕೈಚಳಕ ತೋರಲು ಯತ್ನಿಸಿದ್ದು ತಕ್ಷಣ ಪತ್ತೆ ಹತ್ತುತ್ತಿತ್ತು. ಇಂಥ ಬೀಗದ ಸಹವಾಸ ಯಾಕಪ್ಪ ಬೇಕು ಎಂದು ಕಳ್ಳರೇ ತುರಿಸುವ ಕೈಗಳಿಗೆ ಸ್ವನಿಯಂತ್ರಣ ಹಾಕಿಕೊಂಡು ದೂರವಿದ್ದು ಬಿಡುತ್ತಿದ್ದರು. ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ ಜೆರೆಮಿಯಾ, ಮುಂದೆ ಕಳ್ಳಕಾಕರು ಕೈಯಾಡಿಸಿದರೆ ಅದನ್ನು ಮಾಲಿಕನಿಗೆ ಹೇಳಬಲ್ಲ ಲಾಕರ್‍ಗಳನ್ನು ತಯಾರಿಸುವ ವಿಷಯದಲ್ಲಿ ಪೇಟೆಂಟ್‍ಅನ್ನು ಕೂಡ ಪಡೆದ.
ಹಾಗಂತ, ತಾಲಗಳ ವಿಷಯದಲ್ಲಿ ಆಧುನಿಕತೆಯ ಸ್ಪರ್ಶ ಕೊಟ್ಟವನೇ ಜೆರೆಮಿಯಾ ಎಂದು ಹೇಳಲಾಗದು. ಅವನಿಗಿಂತ ಹಿಂದೆ, ಹದಿನೆಂಟನೇ ಶತಮಾನದಲ್ಲಿ ಹಲವು ಕುಶಲಕರ್ಮಿಗಳು, ಅಕ್ಕಸಾಲಿಗ ಕೆಲಸ ಮಾಡುತ್ತಿದ್ದವರು, ಲೋಹವಿದ್ಯೆಯಲ್ಲಿ ಪರಿಣಿತಿ ಪಡೆದವರು ಬೀಗಗಳನ್ನು ತಯಾರಿಸುವುದರಲ್ಲಿ ತಮ್ಮ ಚಾತುರ್ಯ ಪರೀಕ್ಷೆಗೊಡ್ಡಿದ್ದವರೇ. ಅವರಲ್ಲೊಬ್ಬನಾದ ಜೋಸೆಫ್ ಬ್ರಾಮ, ಈಗ ನಾವು ಬಳಸುವ ಬೀಗ-ಕೀಲಿಗಳಿಗೆ ಬಹಳ ಸನ್ನಿಹಿತವಾಗಿ ಹೋಲುವ ಬೀಗ-ಕೀಲಿ ತಯಾರಿಸಿದ. ತಾಲದ ತಂತ್ರಜ್ಞಾನವನ್ನು ಕೈವಶ ಮಾಡಿಕೊಂಡವನೇ 1784ರಲ್ಲಿ “ಬ್ರಾಮ ಲಾಕ್ಸ್ ಕಂಪೆನಿ” ಶುರುಮಾಡಿದ. ಅಲ್ಲಿ ತನ್ನ ಮಾಸ್ಟರ್ ಪೀಸ್ ಎನ್ನಬಹುದಾದ ತಾಲವೊಂದನ್ನು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ತೂಗು ಹಾಕಿ, ಇದನ್ನು ಒಡೆದು ತೋರಿಸಿದವರಿಗೆ 200 ಪೌಂಡುಗಳ ಭಕ್ಷೀಸ್ ಕೊಡುವೆನೆಂದು ಘೋಷಣಾ ವಾಕ್ಯವನ್ನು ದೊಡ್ಡದಾಗಿ ಬರೆಸಿದ. ಒಂದೆರಡಲ್ಲ, ಬರೋಬ್ಬರಿ 67 ವರ್ಷಗಳ ಪರ್ಯಂತ ಬ್ರಾಮನ ಸವಾಲನ್ನು ಸ್ವೀಕರಿಸಿ ತಾಲಭೇದನ ಮಾಡಬಲ್ಲ ಒಬ್ಬ ಪ್ರವೀಣನೂ ಹುಟ್ಟಿ ಬರಲಿಲ್ಲ. ಕೊನೆಗೆ, 1851ರಲ್ಲಿ ಆಲ್ಫ್ರೆಡ್ ಚಾಲ್ರ್ಸ್ ಹಾಬ್ ಎಂಬವನು 16 ದಿನಗಳಷ್ಟು ಕಾಲ ಈ ಬೀಗದೊಡನೆ ತನ್ನ ಅರವತ್ತನಾಲ್ಕೂ ವಿದ್ಯೆಗಳನ್ನು ಖರ್ಚು ಮಾಡಿದ ಮೇಲೆ ತೆರೆಯಲು ಸಾಧ್ಯವಾಯಿತು. ಅಂತೂ ಇಂತೂ 200 ಪೌಂಡು ಅವನ ಉಡಿಗೆ ಬಿತ್ತು.
ಮುಚ್ಚಿದ ಡಬ್ಬದ ಸಕ್ಕರೆ ಇರುವೆಗಳಿಗೆ ಹೇಗೆ ಹೆಚ್ಚು ಸಿಹಿಯೋ ಹಾಗೆ, ಮುಚ್ಚಿದ ಬಾಗಿಲ ಹಿಂದಿನ ರಹಸ್ಯಗಳೇ ನಮಗೆ ಬೇಕು. ಮನೆಯಲ್ಲಿ ಮುಚ್ಚಿಟ್ಟು ಬೀಗ ನೇತಾಡಿಸಿದ ಪೆಟ್ಟಿಗೆಯೋ ಕೋಣೆಯೋ ಇದ್ದರೆ ಅದರ ಮೇಲೆ ನಮ್ಮದೊಂದು ಕಣ್ಣು ಸದಾ ನೆಟ್ಟಿರುತ್ತದೆ ನೋಡಿ! ಚಿಕ್ಕ-ದೊಡ್ಡವೆನ್ನುತ್ತ ಒಂದೈದಾರು ಪೆಟ್ಟಿಗೆಗಳಾದರೂ ನಮ್ಮ ಹಳ್ಳಿ ಮನೆಗಳಲ್ಲಿ ಇದ್ದವಾದ್ದರಿಂದ ಅವುಗಳ ಕಿವಿ ತಿರುಪುವ ಕೀಲಿಗಳನ್ನು ಜೋಪಾನ ಮಾಡುವುದೂ ಮುಖ್ಯವಾಗಿತ್ತು. ಯಾವುದಾದರೂ ಕೀಲಿ ಕಳೆದು ಹೋದರೆ ಹಳ್ಳಿಯನ್ನು ಹಾದು ಹೋಗುವ ಲೋಹದ ಆಚಾರಿ ಬರುವವರೆಗೂ ಕಾಯಬೇಕು; ಇಲ್ಲವೇ ತಾವೇ ಪೆಟ್ಟಿಗೆಗಳನ್ನು ಹೊತ್ತು ಪೇಟೆಗೆ ಹೋಗಬೇಕು! ಅದೆಂಥ ಬೀಗವೇ ಇರಲಿ, ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ಕೀಮೇಕರ್‍ಗಳೆಂಬ ಆ ಚತುರಬುದ್ಧಿಗಳು ಅವನ್ನು ಫಟಾರೆಂದು ಒಡೆದು, ಬೀಗವು ಬಾಯಿ ತೆರೆದು ಪೆಟ್ಟಿಗೆಗಳನ್ನು ಸ್ವತಂತ್ರಗೊಳಿಸುವಂತೆ ಮಾಡುತ್ತಿದ್ದರು. ಬೀಗ ತೆರೆಯಿತೆಂದರೆ ನಮಗೊಂದು ದೀರ್ಘ ನಿಟ್ಟುಸಿರು. ನಾವು ಮಕ್ಕಳ ಕೈಯಲ್ಲಿ ಕೀಲಿ ಕಳೆದು ಹೋಯಿತೋ, ಗುಟ್ಟಾಗಿ ಬೀಗ ಒಡೆಯಲು ಏನೆಲ್ಲ ಹಾಕುತ್ತಿದ್ದೆವು ಬೀಗದ ಸಣ್ಣ ಸಂದಿಯಲ್ಲಿ! ಪಿನ್ನು, ಸೇಫ್ಟಿ ಪಿನ್ನು, ಸೂಜಿ, ದಬ್ಬಣ, ಸರಿಗೆ, ಚಮಚ ಏನೆಲ್ಲ ಹಾಕಿ ಬೀಗಕ್ಕೊಂದು ಶಸ್ತ್ರಚಿಕಿತ್ಸೆ ಮಾಡಿ ಬಾಯಿ ತೆರೆಸಲೇಬೇಕೆಂದು ನಾವು ಹಾಕಿದ ಶೀರ್ಷಾಸನಗಳು ಅವೆಷ್ಟೋ! ಕೀಲಿ ಕಳೆದು ಹಾಕುವುದರಲ್ಲಿ ನಾವು ಸ್ಪೆಷಲ್ ಡಿಗ್ರಿ ಮಾಡಿದ್ದೇವೆಂದು ಗೊತ್ತಿದ್ದೇ ಬಹುಶಃ ನಮ್ಮ ಹಿರಿಯರು ಅವನ್ನು ಜನಿವಾರದಿಂದ ಬಿಚ್ಚುತ್ತಿರಲಿಲ್ಲ. ಉಪಾಕರ್ಮದ ದಿನ ಹಳೆ ಜನಿವಾರ ತುಂಡರಿಸಿದ ಒಡನೆ, ಅದರಲ್ಲಿ ನೇತಾಡುತ್ತಿದ್ದ ಕೀಲಿಗಳನ್ನು ತೆಗೆದು ಹೊಸ ಜನಿವಾರಕ್ಕೆ ಬಿಗಿದುಕೊಳ್ಳುತ್ತಿದ್ದರು. ಅವರ ಮೈಗೆ ವರ್ಷಕ್ಕೊಂದು ಹೊಸ ಜನಿವಾರ ಹೇಗೋ, ಹಾಗೆಯೇ ಕೀಲಿಗೂ ವರ್ಷಂಪ್ರತಿ ಹೊಸ ನೂಲಿನ ಭಾಗ್ಯ.
ನಮ್ಮ ಹೆಂಗಸರು ಕೀಲಿಗಳನ್ನು ಸೊಂಟದಲ್ಲಿ ಸಿಕ್ಕಿಸಿದ ಹಾಗೆ, ಅಥವಾ ಗಂಡಸರು ಜನಿವಾರಕ್ಕೋ ಕೊರಳ ಸರಕ್ಕೋ ಬಿಗಿದುಕೊಂಡ ಹಾಗೆ, ಪ್ಯಾರಿಸ್‍ನ ಒಂದು ನದಿಯ ಸೇತುವೆಯಲ್ಲಿ ಬೀಗಗಳನ್ನೇ ನೇತು ಹಾಕುತ್ತಾರೆ. ಬೀಗವೆಂಬುದು ಎರಡು ಹೃದಯಗಳು ಬೆಸೆದುಕೊಂಡ ಸಂಕೇತ ಎಂದು ನಂಬುವ ಪ್ರೇಮಿಗಳು ಅಥವಾ ಅವರನ್ನು ನಂಬಿಸುವ ಬೀಗ ಮಾರಾಟಗಾರರು ಪ್ಯಾರಿಸ್ ನಗರದ ಸೇಯ್ನ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯ ಇಕ್ಕಡೆಗಳನ್ನೂ ಬೀಗಗಳಿಂದ ತುಂಬಿ ಬಿಟ್ಟಿದ್ದಾರೆ. ಸೇಯ್ನ್ ನದಿಯ ಮೇಲಿನ ಸುಂದರ ಪೂನ್ ದಿಸಾರ್ (ಬರೆವಾಗ “ಪಾಂಟ್ ಡೆಸ್ ಆಟ್ರ್ಸ್”) ಸೇತುವೆ ಪ್ರೇಮಿಗಳ ಸೇತುವೆ ಎಂದೇ ಪ್ರಸಿದ್ಧ. ಪ್ಯಾರಿಸ್ ಹೇಳಿ ಕೇಳಿ ಪ್ರಣಯಿಗಳ ನಗರವಲ್ಲವೇ? ಬಾಬ್ಬಿ ಸಿನೆಮಾದಲ್ಲಿ ರಿಷಿ ಕಪೂರ “ಹಮ್ ತುಮ್ ಏಕ್ ಕಮರೇ ಮೆ ಬಂದ್ ಹೋ, ಔರ್ ಚಾಬಿ ಖೋ ಜಾಯೆ” ಎಂದು ಹಾಡುತ್ತ ಡಿಂಪಲ್ ಕಪಾಡಿಯಾಳನ್ನು ಸೇರುವ ಕನಸು ಕಾಣುವ ಹಾಗೆ, ಪ್ಯಾರಿಸ್ಸಿಗೆ ಬಂದಿಳಿವ ಪ್ರತಿಯೊಂದು ಜೋಡಿಯೂ ಪೂನ್ ದಿಸಾರ್ ಸೇತುವೆಗೆ ಬರಬೇಕು; ಜೊತೆಗೊಂದು ಬೀಗ-ಕೀಲಿ ತರಬೇಕು; ಬೀಗವನ್ನು ಸೇತುವೆ ಮೇಲಿನ ಕಬ್ಬಿಣದ ಬೇಲಿಗೆ ಬಿಗಿದು ಕೀಲಿಯನ್ನು ನದಿಗೆ ಎಸೆದು ಬಿಡಬೇಕು; ಆ ಬೀಗ ಜನ್ಮಜನ್ಮಾಂತರಕ್ಕೂ ಹಾಗೆ ಯಾರಿಗೂ ತೆರೆಯಲಾರದಂತೆ ಮುಚ್ಚಿದ್ದು ಬಿಡಬೇಕು – ಎಂಬುದೊಂದು ಅಲಿಖಿತ ನಿಯಮ. ಹೀಗೆ ಪ್ರಣಯಿಗಳೆಲ್ಲ ಸೇತುವೆಯ ಲೋಹದ ಬೇಲಿಯ ಮೇಲೆ ಬೀಗ ಕಟ್ಟೀ ಕಟ್ಟೀ ಅದರ ಭಾರ ತಾಳದೆ ಒಮ್ಮೆ ಬೇಲಿಯ ಒಂದು ಭಾಗ ಕಿತ್ತು ಬಂದು ಕೆಳಗಿನ ನದಿಗೆ ಬಿತ್ತು! ಆ ನದಿಯಲ್ಲಿ ಸದಾ ಬಾರ್ಜುಗಳು, ದೋಣಿಗಳ ಸಂಚಾರ ಬೇರೆ! ಪುಣ್ಯವಶಾತ್ ಈ ಪ್ರೇಮದ ಭಾರ ನದಿಯಲ್ಲಿ ಸಂಚರಿಸುತ್ತಿದ್ದ ಯಾರ ತಲೆ ಮೇಲೂ ಬೀಳದೆ ದುರಂತವೊಂದು ತಪ್ಪಿತು. ಕೂಡಲೇ ಎಚ್ಚೆತ್ತುಕೊಂಡ ನಗರಾಡಳಿತ ಸೇತುವೆಯ ಬೇಲಿಗೆ ತೂಗುಬಿದ್ದಿದ್ದ 45 ಟನ್ ಬೀಗದ ರಾಶಿಯನ್ನು ತೆಗೆದು ಬೇರೆಡೆಗೆ ಸಾಗಿಸಿದರು. “ನಿಮ್ಮ ಪ್ರೇಮವನ್ನು ಗೌರವಿಸುತ್ತೇವೆ. ಆದರೆ ದಯವಿಟ್ಟು ಸೇತುವೆಗೆ ಬೀಗ ಕಟ್ಟಿ ಯಾರ್ಯಾರ ತಲೆ ತೆಗೆಯಬೇಡಿ!” ಎಂದು ನಗರ ಪಿತೃಗಳು ಅಲ್ಲಿಗೆ ಹಾರಿ ಬರುವ ಜೋಡಿ ಹಕ್ಕಿಗಳಿಗೆ ಕೈಜೋಡಿಸಿ ವಿನಂತಿಸಿಕೊಂಡರು.
ಈ ಬಗೆಯ ಲವ್ ಲಾಕ್‍ಗಳ ಸೇತುವೆ ಪ್ಯಾರಿಸ್‍ನಲ್ಲಿ ಮಾತ್ರವಲ್ಲ; ಜಗತ್ತಿನ ಹಲವು ಭಾಗಗಳಲ್ಲಿದೆ. ಈ ಸೇತುವೆಗೆ ಬೀಗ ಕಟ್ಟಿ; ನಿಮ್ಮ ಪ್ರೇಮ ಶಾಶ್ವತವಾಗಿ ಆ ಬೀಗದಂತೆ ಉಳಿದು ಬಿಡುತ್ತದೆ ಎಂದರೆ ಸಾಕು ಪ್ರಣಯ ಪಕ್ಷಿಗಳು ರಂಗನತಿಟ್ಟಿಗೆ ಹಾರಿ ಬಂದ ಕೊಕ್ಕರೆಗಳಂತೆ ಜಮಾಯಿಸಿ ಬಿಡುತ್ತವೆ! ಅದೇನೇ ಇರಲಿ, ಬೀಗಗಳನ್ನು ಕಟ್ಟಿದ ಆ ಸೇತುವೆಗಳು ವಿಚಿತ್ರ ಸೌಂದರ್ಯದಿಂದ ಕಂಗೊಳಿಸುತ್ತವೆ ಎನ್ನುವುದು ಮಾತ್ರ ನಿಜ. ಒಂದೊಂದು ಬೀಗವೂ ಒಂದೊಂದು ಆಕಾರ, ಗಾತ್ರ, ಬಣ್ಣ, ವಿನ್ಯಾಸವಾದ್ದರಿಂದ ಅದನ್ನು ನೋಡುತ್ತ ಹೋಗುವುದು ಕೂಡ ಮನಶ್ಶಾಂತಿ ಕೊಡುವ ಕೆಲಸ! ಬೀಗಗಳು ಹೊರಗಿನ ವಿನ್ಯಾಸ ಮಾತ್ರವಲ್ಲ; ಒಳಗಿನ ರಚನೆಯಲ್ಲೂ ಭಿನ್ನವಾಗಿಯೇ ಇರುತ್ತವೆ ಎನ್ನುವುದನ್ನು ಮನಸ್ಸಿಗೆ ತಂದುಕೊಂಡರೆ ಆ ಬೀಗಗಳ ಮೆರವಣಿಗೆ ನಮಗೆ ಒಬ್ಬರಂತೊಬ್ಬರಿಲ್ಲದ ಅನನ್ಯ ಜನರ ಸಾಗರದಂತೆಯೇ ಕಂಡೀತು! ಯೋಚಿಸಿ ನೋಡಿ; ಯಾವುದೇ ಉತ್ಪನ್ನವನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸತೊಡಗಿದಾಗ, ಏಕರೂಪತೆ ಇರಬೇಕು ಎಂದು ಬಯಸುತ್ತೇವೆ. ಒಂದರ ಹಾಗೆ ಇನ್ನೊಂದಿಲ್ಲ ಎಂದರೆ ಅಂಗಡಿ ಮುಚ್ಚಿ ಹೋಗಯ್ಯಾ ಎನ್ನುತ್ತಾರೆ ಗ್ರಾಹಕರು. ಆದರೆ ಬೀಗದ ವಿಷಯದಲ್ಲಿ ಮಾತ್ರ ಅಂಥ ಅನನ್ಯತೆಗೆ ದೊಡ್ಡ ಮಾಫಿಯುಂಟು! ಎರಡು ಬೀಗಗಳು ಒಂದೇ ರೀತಿ ಇವೆ, ಒಂದೇ ಕೀಲಿಯಿಂದ ತೆರೆಯುತ್ತವೆ ಎಂದರೆ ಅಂಥ ಅಂಗಡಿಗಳಿಗೆ ಗ್ರಾಹಕರು ಬರುವುದು ಸಂಶಯ! ಅದೆಷ್ಟು ಬೀಗಗಳು ಸೃಷ್ಟಿಯಾಗಿ ಮಾರುಕಟ್ಟೆಗೆ ಬಂದರೂ ಅವೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿರಲೇಬೇಕು! ಪ್ರತಿ ಬೀಗ ಹೇಗೋ ಹಾಗೆಯೇ ಪ್ರತಿ ಕೀಲಿಯೂ ಭಿನ್ನ, ವಿಶಿಷ್ಟ. ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು.. ಎಂಬ ಪದ್ಯವನ್ನು ಈ ಬೀಗ-ಕೀಲಿಗಳ ಅಪರೂಪದ ಅನುರೂಪ ದಾಂಪತ್ಯಕ್ಕೂ ಧಾರಾಳವಾಗಿ ಹೋಲಿಸಬಹುದು. ಇಲ್ಲೊಂದು ತಮಾಷೆಯೂ ಇದೆ: ಹಲವಾರು ಬೀಗಗಳನ್ನು ತೆರೆಯಬಲ್ಲ ಕೀಲಿ ಏನಾದರೂ ಇದ್ದರೆ, ಅದನ್ನು ಮಾಸ್ಟರ್ ಕೀ ಎನ್ನುತ್ತಾರೆ. ಏನು ಜಂಬ ಅದಕ್ಕೆ, ಏನು ಮರ್ಯಾದೆ ಅದಕ್ಕೆ! ಆದರೆ ಎರಡು ಕೀಲಿಗಳಿಂದ ತೆರೆಯಲ್ಪಡುವ ಬೀಗವೇನಾದರೂ ಇದ್ದರೆ ಅದನ್ನು ಅಮಾನ್ಯ ಮಾಡಿ ಬಿಡುತ್ತಾರೆ; ನಂಬಿಕೆಗೆ ಅರ್ಹವೇ ಅಲ್ಲ ಎನ್ನುವಂತೆ! ಮಾಸ್ಟರ್ ಕೀ, ನೂರಾರು ಹೂಗಳ ಮಕರಂದ ಹೀರಬಲ್ಲ ರಸಿಕ ಶಿಖಾಮಣಿಯಾದರೆ, ಎರಡು ಕೀಲಿಗಳಿಗೆ ಮನ ಸೋಲುವ ಬೀಗ ಕುಲಟೆಯಂತೆ ಅಸಡ್ಡೆಗೊಳಗಾಗುತ್ತದೆ.
ರಸಿಕ, ಕುಲಟೆ ಎಂದಾಗ ಚಕ್ಕಂತ ನೆನಪಾಗಿ ಬಿಟ್ಟಿತು ಗಿರೀಶ ಕಾರ್ನಾಡರ “ನಾಗಮಂಡಲ” ನಾಟಕ! ಅಲ್ಲೂ ಒಂದು ಬೀಗ ಬರುತ್ತದೆ. ಇಡೀ ನಾಟಕದಲ್ಲಿ ಮುಖ್ಯ ಪಾತ್ರಗಳಲ್ಲಿ ಬರುವವರು ನಾಲ್ಕೇ ಜನ. ರಾಣಿ, ಅವಳ ಗಂಡ ಅಪ್ಪಣ್ಣ, ಪ್ರಿಯತಮನಾದ ನಾಗರಾಜ ಮತ್ತು ಮನೆಯ ಮುಂಬಾಗಿಲಿಗೆ ಸದಾ ನೇತು ಬಿದ್ದಿರುವ ದಪ್ಪನೆ ಬೀಗ! ಹೆಂಡತಿಯನ್ನು ಮನೆಯಲ್ಲಿ ಕೂಡಿ ಹಾಕಿ ವೇಶ್ಯೆಯ ಜೊತೆ ಕಾಲ ಕಳೆವ ಗಂಡ ಅಪ್ಪಣ್ಣನಿಗೆ ಮನೆಯ ಬೀಗದ ಮೇಲಿದ್ದಷ್ಟು ವಿಶ್ವಾಸ ಕಟ್ಟಿಕೊಂಡ ಹೆಂಡತಿಯ ಮೇಲಿರುವುದಿಲ್ಲ. ಅದಕ್ಕಾಗಿಯೇ ಆಕೆಯನ್ನು ಸದಾ ಗೃಹಬಂಧನದಲ್ಲಿಟ್ಟು, ಹೊಸಿಲು ದಾಟಿ ಹೊರ ಹೋಗುವಾಗಲೂ ಎರಡೆರಡು ಸಲ ಬೀಗ ಜಗ್ಗಿ, ಖಾತ್ರಿ ಪಡಿಸಿಕೊಳ್ಳುತ್ತಾನೆ. ಅಷ್ಟೆಲ್ಲ ಭದ್ರಪಡಿಸಿದ ಮೇಲೂ ಆಕೆ ಬಸಿರಾದಾಗ ಅಪ್ಪಣ್ಣ ಕ್ರೋಧಾವಿಷ್ಟನಾಗಿ ಆಕೆಗೆ ಕುಲಟೆಯ ಪಟ್ಟ ಕಟ್ಟುತ್ತಾನೆ. ಅಪ್ಪಣ್ಣನೇನೋ ಕಾಲ್ಪನಿಕ ವ್ಯಕ್ತಿ ಎನ್ನೋಣ; ಆದರೆ ವರ್ತಮಾನದ ಜಗತ್ತಿನಲ್ಲಿ ಕೂಡ ಸಂಶಯ ಪಿಶಾಚಿಗಳು ಕಟ್ಟಿಕೊಂಡವಳ ಸೊಂಟಕ್ಕೆ ಬೀಗ ಜಡಿದ ಪ್ರಸಂಗಗಳು ಇವೆ! ಕೇಳಲು ಅಸಹ್ಯವೆನಿಸಿದರೂ ಮನುಷ್ಯನ ವಿಕೃತಿಗಳ ಪರಾಕಾಷ್ಠೆ ಎಲ್ಲಿಗೆ ಮುಟ್ಟಬಹುದೆಂಬುದಕ್ಕೆ ಅದೊಂದು ವಿಚಿತ್ರ ಸಾಕ್ಷಿಯೇ ಅನ್ನಿ! ಹಾಗಂತ ಜಗತ್ತೆಲ್ಲವೂ ಹಾಗೇ ಇರುತ್ತದೆಂದು ಭಾವಿಸಬಾರದು. ಈ ಪ್ರಪಂಚದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ಇನ್ನೂ ಉಳಿದಿದೆ ಎನ್ನುವುದಕ್ಕೆ ಮಹಾರಾಷ್ಟ್ರದ ಸಿಂಗಣಾಪುರವೇ ಸಾಕ್ಷಿ. ಯಾಕೆಂದರೆ ಈ ಊರಿನ ಎಲ್ಲೂ ಬೀಗವೇ ಇಲ್ಲ. ಬೀಗ ಏಕಿಲ್ಲವೆಂದರೆ ಮನೆಗಳಿಗೆ ಬಾಗಿಲುಗಳೇ ಇಲ್ಲ! ಬಾಗಿಲೇಕಿಲ್ಲವೆಂದರೆ, ಈ ಊರಿನ ಪ್ರತಿಯೊಂದು ಮನೆಯನ್ನೂ ಗ್ರಾಮದೇವತೆ ಶನಿ ಮಹಾತ್ಮ ಕಾಪಾಡುತ್ತಾನೆಂಬ ಗಾಢ ನಂಬಿಕೆ ಊರವರದ್ದು. ಕಳೆದ ನಾಲ್ಕೈದು ಶತಮಾನಗಳಿಂದ ಈ ಊರಲ್ಲಿ ದರೋಡೆ ಬಿಡಿ, ಸಣ್ಣಪುಟ್ಟ ಕಳ್ಳತನ ಕೂಡ ನಡೆದಿಲ್ಲವಂತೆ! ಆಸ್ತಿ ಜಾಸ್ತಿಯಾದಂತೆ ಮನೆಯ ಬೀಗದ ಸೈಜನ್ನು ಹೆಚ್ಚಿಸಿಕೊಂಡು, ಜೊತೆಗೆ ಟೆನ್ಷನ್ನನ್ನೂ ಹೆಚ್ಚಿಸಿಕೊಂಡು ಏಗಬೇಕಾದ ಈ ಯುಗದಲ್ಲಿ ಇಂಥದೊಂದು ಊರಿರುವುದಕ್ಕೂ ಸಾಧ್ಯವಾ ಎಂದು ಅಚ್ಚರಿಯಾದೀತು. ನನಗಂತೂ, ಮನೆಯಿಂದ ಹೊರಟು ನೂರಿನ್ನೂರು ಮೀಟರ್ ದೂರ ಹೋದ ಮೇಲೆ ಬೀಗ ಹಾಕಿದ್ದೇನೋ ಇಲ್ಲವೋ, ಸರಿಯಾಗಿ ಬಿದ್ದಿದೆಯೋ ಇಲ್ಲವೋ ಎಂಬ ಸಂಶಯದ ಗುಂಗಿ ಹುಳವೊಂದು ತಲೆ ಕೊರೆಯತೊಡಗಿ, ಸಮಾಧಾನವಿಲ್ಲದೆ ಮರಳಿ ಬಂದು ಬಾಗಿಲನ್ನೂ ಬಾಗಿಲ ಅಗುಳಿಗೆ ನೇತು ಬಿದ್ದ ಬಾವಲಿಯಂಥ ಬೀಗವನ್ನೂ ಕಂಡು ಸಮಾಧಾನ ಪಟ್ಟಾಗೆಲ್ಲ, ಈ ದರಿದ್ರ ಊರು ಬಿಟ್ಟು ಶನಿಸಿಂಗಣಾಪುರಕ್ಕೇ ಹೋಗಿ ಬಿಡಲೇ ಅನಿಸಿದ್ದೂ ಇದೆ.
ಜಗತ್ತು ಆಧುನಿಕವಾಗುತ್ತ ಹೋದಂತೆ, ಆಧುನಿಕ ಬೀಗ-ಕೀಲಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಂತೆ, ಹಳೆಯ ಬೀಗದ ಆಚಾರಿಗಳು ಕಣ್ಮರೆಯಾಗುತ್ತಿದ್ದಾರೆ. ಬೀಗಗಳೆಲ್ಲ ಈಗ, ಡಬ್ಬಲ್ ಲಾಕಿಂಗ್ ಸಿಸ್ಟಮ್ ಎನ್ನುವ ಭರ್ಜರಿ ಜಾಹೀರಾತು ಕೊಟ್ಟುಕೊಂಡೇ ಬರುತ್ತವೆ. ನಮ್ಮ ಬೀಗದಲ್ಲಿ ಡಿಜಿಟಲ್ ಲಾಕ್ ಇದೆ ಎಂದರೆ ಸಾಕು, ಜನ ಅವುಗಳಿಗೇ ಮುಗಿ ಬೀಳುತ್ತಾರೆ. ಈ ಡಿಜಿಟಲ್ ಯುಗದ ಜೊತೆ ಹೆಜ್ಜೆ ಹಾಕಲಾಗದೆ ಹಿಂದುಳಿದ ಬೀಗ ತಯಾರಕರು ತಮ್ಮ ಕುಲಕಸುಬು ಬಿಟ್ಟು ಬೇರೆ ವೃತ್ತಿಗಳನ್ನು ನೋಡಿಕೊಳ್ಳಬೇಕಾಗಿದೆ. ಒಂದಾನೊಂದು ಕಾಲದಲ್ಲಿ ನಮ್ಮ ಉತ್ತರಪ್ರದೇಶದ ಅಲಿಘರದಂತಹ ಊರುಗಳಲ್ಲಿ ಮನೆಮನೆಗಳಲ್ಲೂ, ಅಕ್ಷರಾಭ್ಯಾಸವಿಲ್ಲದ ಮಂದಿ ಕೂಡ ಅತ್ಯದ್ಭುತ ವಿನ್ಯಾಸದ ಬೀಗ ತಯಾರಿಸುತ್ತಿದ್ದರು. ಭಾರತದಲ್ಲಿ, ಮೂರು ಕೀಲಿಗಳಿದ್ದರೆ ಮಾತ್ರ ತೆರೆಯಬಲ್ಲ ಅತಿಸುರಕ್ಷೆಯ ಬೀಗಗಳೂ ಇದ್ದವು. ಬೆಳಗಾವಿಯ ಅವರೊಳ್ಳಿಯಲ್ಲಿ ತ್ರಿವಳಿ ಕೀಲಿಯ ಬೀಗಗಳನ್ನು ಒಂದು ಕಾಲದಲ್ಲಿ ತಯಾರಿಸುತ್ತಿದ್ದುದುಂಟು. ಒಂದೊಮ್ಮೆ ಕರ್ನಾಟಕಕ್ಕೆ ಸೇರಿದ್ದ, ಈಗ ತಮಿಳುನಾಡಿನ ಭಾಗವಾಗಿರುವ ದಿಂಡಿಗಲ್‍ನಲ್ಲಿ ಒಂದೊಂದು ಮನೆಯೂ ಬೀಗ ತಯಾರಿಸುವ ಕಮ್ಮಾರಸಾಲೆಯೇ ಆಗಿತ್ತು. ಹೊನ್ನಾವರದ ಸಮೀಪ ಇರುವ ಮಾವಿನಕುರ್ವೆಯಲ್ಲಿ ಬೀಗ ತಯಾರಿಸುವ ನೂರಾರು ಕುಟುಂಬಗಳಿದ್ದವು. ಅಲಿಘರ, ದಿಂಡಿಗಲ್, ಮಾವಿನಕುರ್ವೆ ಮುಂತಾದ ಊರುಗಳ ತಾಲ-ಕೀಲಿಗಳು ರಾಜಮಹಾರಾಜರ ತಿಜೋರಿಗಳನ್ನು ಕೂಡ ಭದ್ರವಾಗಿ ಕಾಯ್ದ ಹೆಮ್ಮೆ ಸಂಪಾದಿಸಿದ್ದುಂಟು. ಆದರೆ ಒಂದೆಡೆ ಸಾಂಪ್ರದಾಯಿಕ ಬೀಗಗಳಿಗೆ ಬೇಡಿಕೆ ಕಮ್ಮಿಯಾದರೆ, ಇನ್ನೊಂದೆಡೆ ಬರುತ್ತಿರುವ ಬೀಗಗಳು ಕೂಡ ಡಿಜಿಟಲ್ ಎಂಬ ಸುರಕ್ಷೆಯ ಪದರವನ್ನು ಹೊದ್ದು ಬರುತ್ತಿರುವುದರಿಂದ ಮಾವಿನಕುರ್ವೆ ಅಥವಾ ದಿಂಡಿಗಲ್‍ನ ಬೀಗದಂಗಡಿಗಳಿಗೆ ಶಾಶ್ವತ ಬೀಗ ಬೀಳತೊಡಗಿದೆ. ದುರಂತವೆಂದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಫೋನ್ ಲಾಕ್ ಎಂದರೇನು ಗೊತ್ತು; ಆದರೆ ಮುಷ್ಟಿಯಗಲದ ಬೀಗ ಕಾಣ ಸಿಗುವುದು ಅಪರೂಪ. ಕೀಪ್ಯಾಡ್, ಕೀವರ್ಡ್, ಕೀನೋಟ್, ಕೀ ಸ್ಕಿಲ್ಸ್ ಎಲ್ಲವೂ ಗೊತ್ತು; ಆದರೆ ಕೀ ಎಂಬುದು ಬೀಗದ ಕಿವಿ ತಿರುಪಿ ಬಾಯಿ ಬಿಡಿಸುತ್ತಿದ್ದ ಮಾಯಾವಸ್ತು ಎಂಬ ಕಲ್ಪನೆ ಮಾತ್ರ ಇಲ್ಲ! ಅಜ್ಜನ ಮನೆಗಳಲ್ಲಿ ಬೀಗ ಜಡಿದು ಮುಚ್ಚಿಟ್ಟ ಪೆಟ್ಟಿಗೆಗಳು ನಮ್ಮಲ್ಲಿ ಹುಟ್ಟಿಸುತ್ತಿದ್ದ ಬಾಲ್ಯದ ಮುಗ್ಧ ಕುತೂಹಲಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಹೇಗೆ?
Facebook ಕಾಮೆಂಟ್ಸ್