X

ಯಾರು ಮಹಾತ್ಮ? -೪

ಯಾರು ಮಹಾತ್ಮ?- ೩

ವಿಭಜನೆಗೆ ಹಲವಾರು ವರುಷಗಳ ಮುನ್ನವೇ ಪಾಕಿಸ್ತಾನ ಸ್ಥಾಪನೆಗೆ ತಳಹದಿಯಾಗಿತ್ತು. ಎಲ್ಲಿದ್ದರೂ ತಮ್ಮ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಳ್ಳುವ ಮನೋಭಾವವಿರುವ ಮುಸಲರಿಗೆ ಈ ಕಾರ್ಯಕ್ಕೆ ಬೀಜರೂಪ ಒದಗಿದ್ದು ಸೈಯ್ಯದ್ ಮೊಹಮ್ಮದನ “ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ”. ಮುಸ್ಲಿಂ ಲೀಗಿನ ಸ್ಥಾಪನೆಗೆ ಬೀಜಾರೋಪವಾದದ್ದು ಮುಂದೆ ಅಲಿಗಢ ವಿವಿಯಾಗಿ ಬದಲಾದ ಈ ಮೊಹಮ್ಮದ್ ಆಂಗ್ಲೋ ಓರಿಯಂಟಲ್ ಕಾಲೇಜಿನಲ್ಲೇ! ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತ ಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್’ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ “ಪಾಕಿಸ್ತಾನ್” ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ & ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ಹೀಗೆ ಪ್ರತ್ಯೇಕತೆಯನ್ನೇ ಒಡಲಲ್ಲಿಟ್ಟುಕೊಂಡು ಬೆಳೆದಿದ್ದ, ಪ್ರತ್ಯೇಕತೆಯನ್ನೇ ಪ್ರತಿಪಾದಿಸುತ್ತಿದ್ದ, ಶಿಕ್ಷಣ-ರಾಜಕೀಯ-ಅಂತಾರಾಷ್ಟ್ರೀಯ ಸಂಗತಿಗಳೆಲ್ಲದರಲ್ಲೂ ಮುಸ್ಲಿಂ ಹಿತಾಸಕ್ತಿಯನ್ನೇ ಮುಂದು ಮಾಡುತ್ತಿದ್ದ, ಬ್ರಿಟಿಷರ ಕುಟಿಲ ಕಾರ್ಯಕ್ರಮ “ವಂಗ ಭಂಗ”ವನ್ನು ಬೆಂಬಲಿಸಿ, ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿದ್ದ, ಖಿಲಾಫತ್ ಚಳುವಳಿಯನ್ನು ಇಲ್ಲೂ ಹುಟ್ಟು ಹಾಕಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳ ಮೇಲೆ ಭೀಕರ ಅತ್ಯಾಚಾರವೆಸಗಿದ್ದ ಮುಸ್ಲಿಂ ಲೀಗ್ ಮೇಲೆ ನಂಬಿಕೆಯಿರಿಸಿದ್ದ; ಹಿಂದೂಗಳ ಕೊಲೆ-ಅತ್ಯಾಚಾರಕ್ಕೆ ಕಾರಣವಾಗಿದ್ದ ಖಿಲಾಫತ್ ಚಳುವಳಿಗೆ ಹಿಂದೂಗಳಿಂದಲೇ ಧನ ಸಂಗ್ರಹ ಮಾಡುತ್ತಾ, ಹಿಂದೂಗಳ ಕೊಲೆಯನ್ನು ನಿರ್ಲಕ್ಷ್ಯಿಸಿದ್ದ ಗಾಂಧಿ ಮಹಾತ್ಮ ಅಥವಾ ರಾಜಕೀಯ-ಸಾಮಾಜಿಕ ನಾಯಕ ಬಿಡಿ, ಯಾವ ಕೋನದಿಂದ “ಮನುಷ್ಯ”ನಾಗಿ ಕಾಣುತ್ತಾರೆ ಎನ್ನುವುದನ್ನು ಅವರ ಭಕ್ತರೇ ಹೇಳಬೇಕು.

ಒಮ್ಮೆ ಯಾರೋ ಗಾಂಧಿಗೆ ಕೇಳಿದರು “ಹುಚ್ಚು ನಾಯಿ ಬೇಕಾಬಿಟ್ಟಿ ವರ್ತಿಸಿದರೆ ಏನು ಮಾಡಬೇಕು?” ಆಗ ಗಾಂಧಿ “ಈ ಮಾತು ಅಕ್ಷರಶಃ ಹುಚ್ಚುನಾಯಿಯ ಕುರಿತಾಗಿದ್ದರೆ ಅದನ್ನು ಶೂಟ್ ಮಾಡಬೇಕು. ಅದು ಮುಸ್ಲಿಂ ದಂಗೆಕೋರರ ಕುರಿತಾಗಿದ್ದರೆ ಅದನ್ನು ಅನ್ವಯಿಸಲಾಗದು. ಒಬ್ಬಾತನ ವೈರಿ ಉನ್ಮಾದದಿಂದ ವರ್ತಿಸಿದರೆ ಅವನನ್ನು ಶೂಟ್ ಮಾಡಬಾರದು , ಬದಲಾಗಿ ಚಿಕಿತ್ಸೆಗೆ ಮಾನಸಿಕ ಆಸ್ಪತ್ರೆಗೆ ಕಳಿಸಬೇಕು.” ಎಂದರು. ಈ ಮಾತುಕತೆಯಿಂದ ಒಂದು ಸ್ಪಷ್ಟವಾಗುತ್ತದೆ. ಗಾಂಧಿಯ ಬೆಂಬಲಿಗರೂ ಕ್ರುದ್ಧರಾಗುವಷ್ಟು ಅನಾಚಾರವನ್ನು ಮುಸಲರು ಎಸಗುತ್ತಿದ್ದರು. ಹಾಗೂ ಗಾಂಧಿ ಅವರ ತಪ್ಪನ್ನು ಮನ್ನಿಸುತ್ತಿದ್ದರು. ಗಾಂಧಿ ಇಲ್ಲಿ ಮರೆಮಾಚುವ ಸಂಗತಿ ಇನ್ನೊಂದಿದೆ. ಮುಸ್ಲಿಮರು ಉನ್ಮಾದರಾಗುವುದು ಮನದ ಹುಚ್ಚಿನಿಂದಲ್ಲ; ಮತದ ಹುಚ್ಚಿನಿಂದ! ಅದು ವಾಸಿಯಾಗುವ ಕಾಯಿಲೆಯಲ್ಲ!

ಅಹಿಂಸೆ ಅಹಿಂಸೆ ಎಂದು ಹೇಳುತ್ತಾ ಕ್ರಾಂತಿಕಾರಿಗಳನ್ನು ದಾರಿ ತಪ್ಪಿದ ದೇಶಭಕ್ತರು ಎಂದು ಕರೆಯುತ್ತಿದ್ದ ಗಾಂಧಿ 1947ರ ಜೂನ್ 16ರಂದು ಪ್ರಾರ್ಥನಾ ಸಭೆಯಲ್ಲಿ ಮಾತನಾಡುತ್ತಾ “ನಮ್ಮ ಬಳಿ ಅಣುಬಾಂಬ್ ಇದ್ದಿದ್ದರೆ ಅದನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಬಹುದಿತ್ತು. ನಾವು ನಮ್ಮ ಅಸಹಾಯಕತೆಯಿಂದ ಅಹಿಂಸೆ ಎನ್ನುವ ಅಸ್ತ್ರವನ್ನು ಅದು ದೋಷಪೂರಿತವಾಗಿದ್ದರೂ, ದುರ್ಬಲವಾಗಿದ್ದರೂ ಅದನ್ನು ಅಳವಡಿಸಿಕೊಂಡಿದ್ದೇವೆ” ಎಂದರು. ಎಂತಹಾ ಎಡಬಿಡಂಗಿತನ! ಸಾವರ್ಕರ್ ಬಿಡುಗಡೆಗೆ ಭಾರತೀಯರು ಸಹಿ ಸಂಗ್ರಹಿಸುತ್ತಿದ್ದಾಗ ಅವರು ಕ್ರಾಂತಿಕಾರಿ ನಾಯಕ ಎನ್ನುವ ಏಕೈಕ ನೆಪವೊಡ್ಡಿ ಹಿಂದೊಮ್ಮೆ ಸಾವರ್ಕರ್ ಭಾಷಣ ಕೇಳಲೆಂದೇ ದಕ್ಷಿಣಾ ಆಫ್ರಿಕಾದಿಂದ ಇಂಗ್ಲೆಂಡಿಗೆ ತೆರಳಿದ್ದ ಗಾಂಧಿ ಸಹಿ ಹಾಕಿರಲಿಲ್ಲ. ಭಗತ್ ಸಿಂಗ್ ಗಲ್ಲು ಶಿಕ್ಷೆ ತಪ್ಪಿಸುವ ಸಹಿ ಸಂಗ್ರಹದಲ್ಲೂ ಇದನ್ನೇ ಅನುಸರಿಸಿದ ಗಾಂಧಿ ಎಲ್ಲಾ ಮುಗಿದ ಮೇಲೆ ಅಣು ಬಾಂಬು ಪ್ರಯೋಗದ ಮಾತನ್ನಾಡುತ್ತಿದ್ದಾರೆ! ಅಲ್ಲದೆ ಅವರು ಅಸಹಾಯಕತೆಯಿಂದ ಅಹಿಂಸೆಯನ್ನು ಅನುಸರಿಸಿದ್ದಂತೆ! ಅಸಹಾಯಕರು ಯಾರೂ ಇರಲಿಲ್ಲ; ಈ ಗಾಂಧಿ ಬೆಂಬಲಿಗ ಮಂದಗಾಮಿಗಳು ಕನಿಷ್ಟ ತೆಪ್ಪಗಿದ್ದರೆ ಸಾಕಿತ್ತು; ಕ್ರಾಂತಿಕಾರಿಗಳು ಭವ್ಯ ಭಾರತವನ್ನೇ ಸೃಷ್ಟಿಸುತ್ತಿದ್ದರು. ಭಾರತೀಯರ ಕ್ಷಾತ್ರವನ್ನು ಮರೆಸುವಂತಹ ಅವರೇ ಮನಗಂಡ ದೋಷಪೂರಿತ, ದುರ್ಬಲ ಅಹಿಂಸೆಯನ್ನು ತಾನು ಮಾತ್ರ ಅನುಸರಿಸಿ, ಉಳಿದ ಭಾರತೀಯರಿಗೆ ಬೋಧಿಸದೆ, ತನ್ನ ಪ್ರಯೋಗಗಳನ್ನು ಸಮಾಜದ ಮೇಲೆ ಹೇರದೆ ತನ್ನ ಕ್ರೈಸ್ತ ಪ್ರಣೀತ ಆಧ್ಯಾತ್ಮಿಕತೆಯನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಬೆರೆಸದೆ ತೆಪ್ಪಗೆ ತನ್ನಷ್ಟಕ್ಕೆ ತಾನಿದ್ದರೆ ಸಾಕಿತ್ತು! ಭಾರತೀಯರು ಸಾವರ್ಕರ್, ವಿವೇಕಾನಂದರು, ಅರವಿಂದರಾದಿಯಾಗಿ ರಾಷ್ಟ್ರವೀರರು ಪ್ರತಿಪಾದಿಸಿದ್ದ, ಪುರಾತನ ಭಾರತ ಹೊಂದಿದ್ದ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದರು!

ಮುಸಲ್ಮಾನರಿಗೆ ಎಳ್ಳಷ್ಟು ನೋವಾಗಬಾರದು ಎನ್ನುವ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ ಆಶ್ರಮ(?)ದ ಜಾಗಕ್ಕೆ ದಾಂಗುಡಿಯಿಡುತ್ತಿದ್ದ ಮಂಗಗಳ ಮೇಲೆ ದಾಳಿ ಮಾಡಲು ಅನುಮತಿ ಕೊಟ್ಟರು! ಗಾಂಧಿಯ ದೃಷ್ಠಿಯಲ್ಲಿ ತನ್ನ ಆಹಾರಕ್ಕಾಗಿ ಬೆಳೆ ಹಾನಿ ಮಾಡುವ ವಾನರಗಳಿಗಿಂತ ಜೀವ ಹಾನಿ ಮಾಡುವ ಮತಾಂಧರು ಶ್ರೇಷ್ಠರು! “ಹಿಂಸೆ” ಎನ್ನುವ ನೆಪವೊಡ್ಡಿ ತಮ್ಮ ಪತ್ನಿ ಕಸ್ತೂರ್ ಬಾ ಅವರಿಗೆ ಪೆನ್ಸಿಲಿನ್ ಅನ್ನು ಚುಚ್ಚುಮದ್ದು ಮೂಲಕ ನೀಡುವುದಕ್ಕೆ ಅನುಮತಿ ಕೊಡದ ಗಾಂಧಿ ಮೊಮ್ಮಗಳು ಮನುವಿನ ಶಸ್ತ್ರಚಿಕಿತ್ಸೆಗೆ ಲಗುಬಗೆಯಿಂದ ಅನುಮತಿ ನೀಡಿದರು! ಕಸ್ತೂರ್ ಬಾ ಹೀಗೆ ಚಿಕಿತ್ಸೆ ಇಲ್ಲದೆ ಕೊನೆಯುಸಿರೆಳೆದರು. ಒಂದು ರೀತಿಯಲ್ಲಿ ಅವರ ಸಾವಿಗೆ ಗಾಂಧಿಯೇ ಕಾರಣ!

1947ರ ಹೊಸವರ್ಷದ ದಿನದಂದು ಶ್ರೀರಾಮ್ ಪುರದಲ್ಲಿ ಮುಸ್ಲಿಮ್ ಗೂಂಡಾಗಳು ಇದ್ದಕ್ಕಿದ್ದಂತೆ ಹಿಂದೂಗಳ ಮೇಲೆ ಮುಗಿ ಬಿದ್ದರು. ಹಲವರನ್ನು ಕತ್ತರಿಸಿದರು. ಹೆಂಗಳೆಯರ ಅತ್ಯಾಚಾರಗೈದರು. ಮನೆಗಳ ಸುಲಿಗೆ ಮಾಡಿ ಬೆಂಕಿ ಹಚ್ಚಿದರು. ಗೋಮಾಂಸ ತಿನ್ನುವಂತೆ ನೆರೆಯವರನ್ನು ಬಲಾತ್ಕರಿಸಿದರು. ಗಾಂಧಿಯ ಗುಡಿಸಲಿಗೂ ಬೆಂಕಿಬಿತ್ತು. ಗಾಂಧಿ ನಡೆಯುತ್ತಿದ್ದ ದಾರಿಗೂ! ಆದರೂ ಗಾಂಧಿ ಬದಲಾಗಲಿಲ್ಲ. ಅವರ ಮುಸ್ಲಿಂ ಪ್ರೇಮ ವಿಪರೀತಕ್ಕೇರಿತು!

1924ರ ಸೆಪ್ಟೆಂಬರ್ 13ರ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಗಾಂಧಿ ಬರೆಯುತ್ತಾರೆ “ಅನೇಕ ಬಾರಿ ವ್ಯಕ್ತಿಯೊಬ್ಬನ ಕ್ರಿಯೆಗಳು ಅಹಿಂಸೆಯ ಅರ್ಥದಲ್ಲಿ ವಿಶ್ಲೇಷಣೆಯನ್ನು ನಿರಾಕರಿಸುತ್ತವೆ. ಆ ಶಬ್ಧದ ಉನ್ನತ ನೆಲೆಯಲ್ಲಿ ವ್ಯಕ್ತಿಯೊಬ್ಬ ಪೂರ್ಣ ಅಹಿಂಸಾವಾದಿಯಾಗಿದ್ದರೆ ಹಲವು ಸಾರಿ ಆತನ ಕ್ರಿಯೆಗಳು ಹಿಂಸೆಯ ಚಹರೆಯನ್ನು ಧರಿಸಬಹುದು”. ಇದು ವೇದಗಳು, ದೃಷ್ಟಾರರು, ಋಷಿಮುನಿಗಳು ಹೇಳಿದ ಅಹಿಂಸೆಯೂ ಅಲ್ಲ; ಸಾಮಾನ್ಯ ಜನರಿಗೆ ತಿಳಿದಿರಬಹುದಾದ ಅಹಿಂಸೆಯೂ ಅಲ್ಲ. ಅಷ್ಟರ ಮಟ್ಟಿಗೆ ಗಾಂಧಿ ಹೊಸತೊಂದು “ಅಹಿಂಸೆ”ಯನ್ನು ಕಂಡು ಹಿಡಿದರು. ವ್ಯಕ್ತಿಯೊಬ್ಬನ ಕ್ರಿಯೆಗಳು ಹಿಂಸಾ ರೂಪ ತಾಳಿದುದೆವೆಂದರೆ ಆತ ಅಹಿಂಸಾವಾದಿ ಹೇಗಾಗುತ್ತಾನೆ? ಬಹುಷಃ ಗಾಂಧಿ ತಮ್ಮ ಉದಾಹರಣೆಯನ್ನೇ ಕೊಡಬಹುದು. ಅವರ ಅಹಿಂಸೆಯ ಕಾರಣದಿಂದ ಹಿಂದೂಗಳು ನಿರ್ವೀರ್ಯರಾಗಿ ಮುಸ್ಲಿಮರಿಂದ ದೌರ್ಜನ್ಯಕ್ಕೊಳಗಾದರಲ್ಲ. ಅಥವಾ ಗಾಂಧಿ ಆ ಮತಾಂಧ ಮುಸ್ಲಿಮರನ್ನೇ ಅಹಿಂಸಾವಾದಿಗಳೆನ್ನಬಹುದು. ತಮ್ಮ ಮತಕ್ಕಾಗಿ ಅವರು ದೌರ್ಜನ್ಯವೆಸಗುವುದರಿಂದ, ಕ್ರಿಯೆಯಲ್ಲಿ ಹಿಂಸೆ ಕಂಡರೂ ಅವರು ಅಹಿಂಸಾವಾದಿಗಳೇ ಎಂದು. ಈ ರೀತಿ ಗಾಂಧಿ ಹೇಳಿದ ಮಾತುಗಳೂ ಇಲ್ಲದಿಲ್ಲ(ಮುಸ್ಲಿಮರು ಹಿಂದೂಗಳನ್ನು ಖಿಲಾಫತ್, ಕಪ್ಪು ದಿನಗಳ ಹೆಸರಲ್ಲಿ ಕೊಲ್ಲುತ್ತಿದ್ದಾಗ ಗಾಂಧಿಯಿಂದ ಇಂತಹ ಹಲವಾರು ಅಣಿಮುತ್ತುಗಳು ಹೊರಬಿದ್ದಿದ್ದವು). ಅಂದರೆ ಕೇವಲ ಶಬ್ಧಾರ್ಥದಲ್ಲಿ ಅಹಿಂಸೆ ಇದ್ದರಾಯಿತೇ? ಕ್ರಿಯೆಯಲ್ಲಿ ಆತ ಹಿಂಸೆ ಎಸಗಿದ್ದರೂ ಆತ ಅಹಿಂಸಾವಾದಿ! ಎಂತಹ ವಿಪರ್ಯಾಸ ಇಂತಹ ಗೊಂದಲ ಪುರುಷನಿಗೆ ಅಹಿಂಸಾವಾದಿಯ, ಮಹಾತ್ಮನ ಪಟ್ಟ ಕಟ್ಟಿದವರ ಬುದ್ಧಿಮಟ್ಟವೇ!

ಜನರಲ್ ಕಾರ್ಯಪ್ಪ ಭಾರತಕ್ಕೆ ಬೇಕಾದುದು ಅಹಿಂಸೆಯಲ್ಲ, ಬಲಿಷ್ಠ ಸೇನೆ ಎಂದಿದ್ದರು. ಅವರ ಈ ಮಾತನ್ನು ಕೇಳಿದ ಗಾಂಧಿ ತಮ್ಮ ಹರಿಜನ ಸಂಚಿಕೆಯಲ್ಲಿ ಈ ವಿಚಾರವಾಗಿ ಟೀಕಿಸುತ್ತಾ “ಕಾರ್ಯಪ್ಪನವರಿಗಿಂತ ಶ್ರೇಷ್ಠವಾದ ಜನರಲ್’ಗಳು ಕೂಡಾ ಮಹಾನ್ ಶಕ್ತಿಯಾದ ಅಹಿಂಸೆಯ ಸಾಧ್ಯತೆಗಳ ಬಗ್ಗೆ ಮಾತಾಡಲು ತಮಗೆ ಯಾವುದೇ ಹಕ್ಕಿಲ್ಲ ಎಂದು ವಿವೇಕ-ವಿನಮ್ರತೆಯಿಂದ ಒಪ್ಪಿಕೊಳ್ಳುತ್ತಾರೆ. ಇಂದಿನ ಅಣುಬಾಂಬು ಯುಗದಲ್ಲಿ ಹಿಂಸೆಯು ಮುಂದೊಡ್ಡುವ ಎಲ್ಲಾ ಸವಾಲುಗಳನ್ನು ಎದುರಿಸುವ ಏಕೈಕ ಶಕ್ತಿ ಎಂದರೆ ಅಹಿಂಸೆ ಒಂದೇ ಎನ್ನುವುದನ್ನು ನಾನು ಧೈರ್ಯದಿಂದ ಘೋಷಿಸಬಲ್ಲೆ” ಎಂದು ಬರೆದರು. ಗಾಂಧಿಯ ಅಹಿಂಸೆಯನ್ನು ಯಾರಾದರೂ ಅನುಸರಿಸಿದ್ದರೆ ಇವತ್ತು ಜಗತ್ತಿಡೀ ಐಸಿಸ್ ಉಗ್ರರಿಂದ ತುಂಬಿ ಹೋಗಿರುತ್ತಿತ್ತು. ಹಾಗೆಯೇ ಗಾಂಧಿಯೇನಾದರೂ ಬದುಕಿದ್ದರೆ ಐಸಿಸ್ ಉಗ್ರರ “ಹಲಾಲ್ ಕಟ್”ಗೆ ಕೊರಳೊಡ್ಡಿ ಅಹಿಂಸೆಯನ್ನು ಪ್ರತಿಪಾದಿಸುತ್ತಾ ನಸುನಗುತ್ತಾ ಧೈರ್ಯದಿಂದ ಪ್ರಾಣವನ್ನು ಬಿಡುವಂತಹ ಸೌಭಾಗ್ಯವೂ ಸಿಗುತ್ತಿತ್ತು! ಈ ಟೀಕೆಗೆ ಜನರಲ್ ಕಾರ್ಯಪ್ಪ ತಲೆಕೆಡಿಸಿಕೊಳ್ಳಲಿಲ್ಲ. ಅವರು ಈ ಟೀಕೆಯನ್ನು ಸೇನಾಭಾಷೆಯಂತೆ “ರಾಕೆಟ್” ಎಂದು ಬಣ್ಣಿಸಿದರು! ಗಾಂಧಿಯನ್ನು ಭೇಟಿಯಾಗಿ ಕೆಲ ಪ್ರಶ್ನೆಗಳನ್ನು ಕೇಳಿದರು. ಮೌನ ವ್ರತದಲ್ಲಿದ್ದ, ಚರಕದಲ್ಲಿ ವ್ಯಸ್ತರಾಗಿದ್ದ ಗಾಂಧಿ ಉತ್ತರಗಳನ್ನು ಗೀಚಿದರು. ಎರಡು ದಿನಗಳ ಬಳಿಕ “ಸೈನಿಕರ ಕರ್ತವ್ಯ ಪ್ರಜ್ಞೆಯ ಮೇಲೆ ಹಾನಿ ಮಾಡದೆ, ವೃತ್ತಿಪರರಾಗಿಯೇ ಕೆಲಸ ಮಾಡುವ ನಿಟ್ಟಿನಲ್ಲಿ ಸೇನೆಯಲ್ಲಿ ಅಹಿಂಸೆಯ ಪ್ರೇರಣೆ ತುಂಬುವುದು ಹೇಗೆ?” ಎಂದು ಪ್ರಶ್ನಿಸಿದರು. ಆಗ ಗಾಂಧಿ ಕೊಟ್ಟ ಉತ್ತರ :- “ಉತ್ತರಕ್ಕಾಗಿ ನಾನಿನ್ನೂ ಕತ್ತಲಲ್ಲಿ ತಡವರಿಸುತ್ತಿದ್ದೇನೆ!”

ಗಾಂಧಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಕುರಾನ್ ಸಾಲುಗಳನ್ನೂ ಪಠಿಸುತ್ತಿದ್ದರು. ಅವರು ಅದನ್ನು ಮುಂದುವರೆಸಿದರೆ ಮನುವನ್ನು ಕೊಲೆ ಮಾಡುವ ಬೆದರಿಕೆ ಪತ್ರವೂ ಬಂದಿತ್ತು. ಅವರಿಗೆ ಬರುವ ಬಹುತೇಕ ಪತ್ರಗಳು ನಕರಾತ್ಮಕವಾಗಿ ಅವರನ್ನು ದೂಷಿಸಿಯೇ ಇರುತ್ತಿದ್ದವು. ಅವರು ಸ್ವೀಕರಿಸುತ್ತಿದ್ದ 95% ಪತ್ರಗಳಲ್ಲಿ ಬೈಗುಳ, ನಿಂದನೆಗಳೇ ತುಂಬಿರುತ್ತಿದ್ದವು. ಹಿಂದೂಗಳು ಅವರನ್ನು ಮುಸ್ಲಿಮರ ಪಕ್ಷಪಾತಿ ಎಂದು ಜರೆದರೆ, ಮುಸ್ಲಿಮರು ಆತನನ್ನು ತಮ್ಮ ಪರಮ ವೈರಿ ಎನ್ನುವಂತೆ ನೋಡುತ್ತಿದ್ದರು! ಹೀಗೆ ಆತ ಎಲ್ಲಿಯೂ ಸಲ್ಲಲಿಲ್ಲ! ಅವರಿಗೆ ಬರುತ್ತಿದ್ದ ಕೆಲ ಪತ್ರಗಳಲ್ಲಂತೂ “ಮಹಮ್ಮದ್ ಗಾಂಧಿ”, “ಜಿನ್ನಾ ಸೇವಕ” ಎನ್ನುವ ಸಂಭೋದನೆಗಳಿರುತ್ತಿದ್ದವು. ಅವುಗಳಲ್ಲಿ ಕೆಲವೊಂದರ ಒಕ್ಕಣೆ ನೋಡಿ:
“ನಿಮ್ಮ ಅಹಿಂಸಾ ಪದ್ದತಿ ನಿಮ್ಮ ಮೂಗಿನ ಕೆಳಗೇ ದುರ್ವಾಸನೆ ಬೀರುತ್ತಿಲ್ಲವೆ?”
“ಕಳೆದು ಮೂವತ್ತು ವರ್ಷಗಳಿಂದ ನೀವು ಆಚರಿಸುತ್ತಿರುವ ಅಹಿಂಸಾ ಮಾರ್ಗ ಹಿಂಸೆಯ ಫಲಿತಾಂಶವನ್ನೇ ನೀಡಿದೆ. ಇದಕ್ಕಾಗಿ ನಿಮಗೆ ನಾಚಿಕೆಯಾಗುವುದಿಲ್ಲವೇ?”
ಪ್ರತಿದಿನ ಪ್ರಾರ್ಥನಾ ಸಭೆಯಲ್ಲಿ ಅವರು ಕುರಾನ್ ಪಠಿಸುತ್ತಿದ್ದಂತೆ ಕಡು ವಿರೋಧ ವ್ಯಕ್ತವಾಗುತ್ತಿತ್ತು. “ಅವರು ರಾಜಕೀಯದಿಂದ ಆದಷ್ಟು ಬೇಗ ನಿವೃತ್ತಿಯಾದರೆ ದೇಶಕ್ಕೇ ಒಳ್ಳೆಯದು” ಎನ್ನುವ ಮಾತುಗಳು ಅವರದ್ದೇ ಪ್ರಾರ್ಥನಾ ಸಭೆಯಲ್ಲಿ ಸಾಮಾನ್ಯವಾಗಿತ್ತು! 1947ರ ಸೆಪ್ಟೆಂಬರಿನಲ್ಲಿ ದೆಹಲಿಯ ಕಿಂಗ್ಸ್ ವೇ ಕ್ಯಾಂಪಿನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಗಾಂಧಿ ಕುರಾನ್ ಪಠಿಸುತ್ತಿದ್ದಂತೆ ಹಲವರು “ಈ ಶ್ಲೋಕಗಳ ಪಠಣದಿಂದ ನಮ್ಮ ತಾಯಂದಿರು, ಪ್ರೀತಿಪಾತ್ರರು ಕೊಲ್ಲಲ್ಪಟ್ಟರು. ಇಲ್ಲಿ ಅದರ ಪಠಣಕ್ಕೆ ಅವಕಾಶ ನೀಡುವುದಿಲ್ಲ” ಎಂದು ಘೋಷಣೆ ಕೂಗಿದರು. “ಗಾಂಧಿ ಮುರ್ದಾಬಾದ್” ಎನ್ನುವ ಘೋಷಣೆಯೂ ಮೊಳಗಿತು. ಸಭೆಯನ್ನು ಮುಂದೂಡಲಾಯಿತು. ಗಾಂಧಿ ತೆರಳುತ್ತಿದ್ದಂತೆ ಅವರ ಕಾರಿನ ಮೇಲೆ ಕಲ್ಲು ತೂರಲಾಯಿತು. ಕೆಲ ನಿರಾಶ್ರಿತರು ಸೋಡಾ ಬಾಟಲಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.(ಮಹಾತ್ಮ ಗಾಂಧಿ – ದಿ ಲಾಸ್ಟ್ ಫೇಸ್, ಸಂಪುಟ-೨, ಪ್ಯಾರೇಲಾಲ್) ತುಂಡುಬಟ್ಟೆ ತೊಟ್ಟ ಸರಳತೆಯ ಮೂರ್ತಿ ಮಹಾತ್ಮ “ಕಾರಿನಲ್ಲಿ ಪಯಣಿಸುತ್ತಿದ್ದ”!

ಮುಂದುವರಿಯುವುದು…

Facebook ಕಾಮೆಂಟ್ಸ್

Rajesh Rao: ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್ ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ
Related Post