X

“ರಾಮಾ ರಾಮಾ ರೇ” ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ..

ಚಿತ್ರ: ರಾಮಾ ರಾಮಾ ರೇ

ನಿರ್ದೇಶನ: ಡಿ. ಸತ್ಯಪ್ರಕಾಶ್

ಸಂಗೀತ: ವಾಸುಕಿ ವೈಭವ್

ಕ್ಯಾಮೆರಾ: ಲವಿತ್

ತಾರಾಗಣ: ನಟರಾಜ್ ಭಟ್, ಜಯರಾಜ್, ಧರ್ಮಣ್ಣ ಕಡೂರು, ಬಿಂಬಶ್ರೀ, ಎಂ.ಕೆ ಮಠ

ಸ್ನೇಹಿತರಿಬ್ಬರು ನಿರ್ಧರಿಸಿದಂತೆ ಭಾನುವಾರ ಮಂಗಳೂರಿಗೆ ಹೋಗುವುದೆಂದು ಫಿಕ್ಸ್ ಆಗಿತ್ತು. ಮಧ್ಯಾಹ್ನ ಮಂಗಳೂರು ತಲುಪಿದರೆ ಸಿಟಿ ಸೆಂಟರ್ ಅಲ್ಲಿ ಇಲ್ಲಿ ಅಲೆದು ರಾತ್ರಿಯ ವೇಳೆಗೆ ಮನೆ ತಲುಪುವುದು ನಮ್ಮ ಪ್ಲಾನ್ ಆಗಿತ್ತು. ಭಾನುವಾರ್ ಬೆಳಗ್ಗೆ ಸ್ನೇಹಿತನೊಬ್ಬನಿಗೆ ಅದೆಲ್ಲಿಂದ ಹೊಳೆಯಿತೋ ಗೊತ್ತಿಲ್ಲ, “ಮೂವಿಗೆ ಹೋಗೋಣ್ವಾ, ರಾಮಾ ರಾಮಾ ರೇ ಚಿತ್ರ ಒಳ್ಳೆದುಂಟಂತೆ” ಅಂತ ಒಂದೇ ಮೆಸ್ಸೇಜಿನಲ್ಲಿ ಹೇಳಿ ಬಿಟ್ಟ. ಈಗೀಗ ಹೆಚ್ಚಿನ ಮೂವಿಗಳು ಟ್ರೇಲರಿನಲ್ಲಿಯೇ ಸುದ್ದಿ ಮಾಡುತ್ತವೆ, ಇಲ್ಲಾ ಅಬ್ಬರದ ಪ್ರಚಾರದ ಮೂಲಕ ಸದ್ದು ಮಾಡುತ್ತವೆ. ಮತ್ತು ಚಿತ್ರ ಚೆನ್ನಾಗಿರಬಹುದೋ ಇಲ್ಲವೋ ಎಂಬುದನ್ನು ಟ್ರೇಲರುಗಳೇ ನಮಗೆ ಬಿಚ್ಚಿಡುತ್ತವೆ. ಆದರೆ ಟ್ರೇಲರ್ ಬಿಡಿ,  ರಾಮಾ ರಾಮಾ ರೇ ಚಿತ್ರ ಬಿಡುಗಡೆಯಾಗಿ ಒಂದಷ್ಟು ಕಡೆಗಳಿಂದ ಪ್ರಶಂಸೆಗೊಳಗಾಗುವವರೆಗೂ ನಾನದರ ಹೆಸರನ್ನೂ ಕೇಳಿರಲಿಲ್ಲ. ಬಿಡುಗಡೆಯಾದ ಮರುದಿನ ಕೆಲವರ ಫೇಸ್ಬುಕ್ ವಾಲಿನಲ್ಲಿ ಮತ್ತು  ಕೆಲ ಸೆಲೆಬ್ರಿಟಿಗಳ ವಿಮರ್ಶೆಯನ್ನು ನೋಡಿದ ಬಳಿಕ ಸ್ವಲ್ಪ ಆಸಕ್ತಿ ಮೂಡಿದ್ದರಿಂದ ಸ್ನೇಹಿತ ಆ ಚಿತ್ರದ ಹೆಸರೆತ್ತಿದ ತಕ್ಷಣ ಗ್ರೀನ್ ಸಿಗ್ನಲ್  ಕೊಟ್ಟೆ. ಗಡುಬಿಡಿಯಲ್ಲಿ ಥಿಯೇಟರ್ ತಲುಪುವಾಗ ಐದು ನಿಮಿಷದ ಸಿನೆಮಾ ಮುಗಿದಿತ್ತು, ಥಿಯೇಟರ ಹೌಸ್’ಫುಲ್ ಇತ್ತು. ಇದಿಷ್ಟು ನನ್ನ ಫ್ಲ್ಯಾಶ್’ಬ್ಯಾಕ್.

ಸಂಪೂರ್ಣ ಹೊಸಬರದ್ದೇ ಚಿತ್ರ. ಒಬ್ಬೇ ಒಬ್ಬನ ಮುಖವನ್ನು ನಾನಂತೂ ಇದುವರೆಗೂ ನೋಡಿಲ್ಲ. ಆದರೆ ಚಿತ್ರ ಮುಗಿದಾಗ ಇದು ಹೊಸಬರು ಮಾಡಿದ ಚಿತ್ರ ಎಂಬ ಸಣ್ಣ ಅನುಮಾನವೂ ನಮ್ಮಲ್ಲಿ ಮೂಡುವುದಿಲ್ಲ. ಚಿತ್ರಕ್ಕೆ ಅಬ್ಬರದ ಪ್ರಚಾರ ಇಲ್ಲ, ಟಪಾಂಗುಚ್ಚಿ ಐಟಂ ಸಾಂಗ್ ಇಲ್ಲ, ಲಾಂಗ್ ಮಚ್ಚುಗಳುಳ್ಳ ಮಾಸ್ ಫೈಟುಗಳಿಲ್ಲ, ಹೇಸಿಗೆ ಹುಟ್ಟುವಂತಹಾ ಒಂದೇ ಒಂದು ದೃಶ್ಯವಿಲ್ಲ. ಹಾಗೆ ನೋಡಿದರೆ ಈಗಿನ ಕಾಲದ ಚಿತ್ರಗಳಿಗೆ ಹೋಲಿಸಿದರೆ ರಾಮಾ ರಾಮಾ ರೇ ಯಲ್ಲಿ ಏನೇನೂ ಇಲ್ಲ. ಅಂತಹಾ ಏನೂ ಇಲ್ಲಗಳ ಜೊತೆಗೆಯೇ ಎಲ್ಲವನ್ನೂ ಗಳಿಸಿಕೊಂಡಿರುವ ಚಿತ್ರವಿದು.

ಹೌದು ರಾಮಾ ರಾಮಾ ರೇಯಲ್ಲಿ ಮೇಲಿನವುಗಳಿಲ್ಲದಿದ್ದರೂ ಕಲಾತ್ಮಕತೆಯಿದೆ, ನಟನೆಯಲ್ಲಿ ಚಿತ್ರ ಗೆಲ್ಲಬೇಕೆಂಬ ತುಡಿತವಿದೆ, ನಿರ್ದೇಶಕನ ಕನಸಿದೆ, ಇಡೀ ಚಿತ್ರ ತಂಡದ ಹಗಲಿರುಳಿನ ಪರಿಶ್ರಮವಿದೆ. ಚಿತ್ರ “ಮಾಸ್” ಅಲ್ಲದಿದ್ದರೂ “ಕ್ಲಾಸ್” ಇದೆ, ಇನ್ ಫ್ಯಾಕ್ಟ್, “ಹೈ ಕ್ಲಾಸ್” ಎನ್ನುವಂತಿದೆ, ಅದಕ್ಕೆಯೇ ಚಿತ್ರ ಗೆದ್ದಿದೆ.

ಮುಖ್ಯ ಭೂಮಿಕೆಯಲ್ಲಿರುವ ನಟರಾಜ್ ಭಟ್ ಜಾಸ್ತಿ ಮಾತನಾಡುವುದಿಲ್ಲ, ಅವರ ನಟನೆಯೇ ಜಾಸ್ತಿ ಮಾತನಾಡಿದೆ, ಬಹುಶಃ ಇವರಿಂತಹಾ ನಟನಾಗುತ್ತಾನೆಂದು ಮೊದಲೇ ಭಾವಿಸಿ “ನಟರಾಜ”ನೆನ್ನುವ ಹೆಸರಿಟ್ಟಿದ್ದೋ ಗೊತ್ತಿಲ್ಲ. ಚಿತ್ರದುದ್ದಕ್ಕೂ ಇರುವ ಜಯರಾಜ್ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯವನ್ನೊದಗಿಸಿದ್ದಾರೆ. ಸಾಧು ಕೋಕಿಲ, ಶರಣ್ ಮುಂತಾದವರ ಕಾಮಿಡಿಯನ್ನು ದಶಕಕ್ಕಿಂತಲೂ ಹೆಚ್ಚು ವರ್ಷಗಳಿಂದ ನೋಡುತ್ತಾ ಬಂದಿರುವ ನಮಗೆ ಧರ್ಮಣ್ಣ ಕಡೂರು ಅವರ ಕಚಗುಳಿಯಿಡುವ ಡೈಲಾಗ್’ಗಳು ಮತ್ತು ತಮ್ಮದೇ ಆದ ವಿಭಿನ್ನವಾದ ಮ್ಯಾನರಿಸಂ ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಬಿಂಬಶ್ರೀ ಕೂಡಾ ತಾನೇನೂ ಕಡಿಮೆಯಿಲ್ಲ ಎನ್ನುವಂತೆ ನಟಿಸಿದ್ದಾರೆ. ಒಟ್ಟಾರೆಯಾಗಿ ಪಾತ್ರವರ್ಗದ ಬಗ್ಗೆ ಹೇಳುವುದಾರೆ, ಯಾವುದೇ ನೇಮು ಫೇಮುಗಳಿಲ್ಲದ ಒಂದಷ್ಟು ಜನ ಸೇರಿಕೊಂಡು, ಪ್ರತಿಭೆ ಮತ್ತು ಪರಿಶ್ರಮವನ್ನೇ ಬಂಡವಾಳವನ್ನಾಗಿಸಿಕೊಂಡು ಜನರ ಮನ ಗೆಲ್ಲಬಹುದೆಂದು ‘ರಾಮಾ ರಾಮಾ ರೇ’ಯ ಸಾರಿ ಹೇಳಿದ್ಡಾರೆ. ಈ ಎಲ್ಲಾ ಕಲಾವಿದರಿಗೂ ಒಂದು ಬಿಗ್ ಸ್ಟಾಂಡ್ ಸೆಲ್ಯೂಟ್.

ರಾಮಾ ರಾಮಾ ರೇ ಚಿತ್ರದಲ್ಲಿ ಆನ್ ಸ್ಟೇಜ್ ಕಾಣಿಸಿಕೊಳ್ಳುವವರು ಮಾತ್ರ ಮಿಂಚಿದ್ದಲ್ಲ, ತೆರೆಯ ಹಿಂದಿರುವವರೂ ಸಹ ತಮ್ಮ ತಮ್ಮ ಕೆಲಸಗಳಿಂದಾಗಿ ಪ್ರೇಕ್ಷಕ ಪ್ರಭುಗಳ ಗಮನ ಸೆಳೆಯುತ್ತಾರೆ. ಹಾಡುಗಳಿರುವುದು ಎರಡೇ ಆದರೂ ಅದನ್ನು ನಮ್ಮ ನಾಲಗೆಯ ತುದಿಯಲ್ಲಿ ಸದಾ ಕುಣಿಯುವಂತೆ ಮಾಡುವ ವಾಸುಕಿ ವೈಭವ್ ಅವರ ಸಂಗೀತ ನಮಗೆ ರುಚಿಸುತ್ತದೆ, ಕೆಲವೇ ಕೆಲವು ಸೀಮಿತ ಲೊಕೇಶನ್ನುಗಳಲ್ಲಿ ಚಿತ್ರ ಶೂಟ್ ಆಗಿದ್ದರೂ, ಅಷ್ಟರಲ್ಲೇ ಕ್ಯಾಮೆರಾ ಮೂಲಕ ಮತ್ತೊಂದು ಜಗತ್ತನ್ನು ತೋರಿಸಿರುವ ಲವಿತ್ ಅವರ ಛಾಯಾಗ್ರಹಣ ಇಷ್ಟವಾಗುತ್ತದೆ. ನಿರಂತರ ಪರಿಶ್ರಮದ ಮೂಲಕ ಅಳೆದು ತೂಗಿ ಚಿತ್ರ ನಿರ್ದೇಶಿಸಿರುವ ಸತ್ಯಪ್ರಕಾಶ್ ನಿರ್ದೇಶನವನ್ನಂತೂ ಮುಕ್ತ ಕಂಠದಿಂದ ಹೊಗಳದೇ ಇರಲು ಸಾಧ್ಯವೇ ಇಲ್ಲ.

ಇಲ್ಲವೇ ಇಲ್ಲ ಅಂತಲ್ಲ, ಎಲ್ಲೋ ಒಂದೆರಡು ಕಡೆ ಚಿತ್ರ ಬೋರೆನಿಸುವುದೂ ಇದೆ. ಅಲ್ಲಿ ಸ್ವಲ್ಪ ಕತ್ತರಿ ಹಾಕಿದಿದ್ದರೆ ಚಿತ್ರ 100% ಆಗುತ್ತಿತ್ತು. ಈಗ 99.99% ಅಂತ ನನ್ನ ಅನಿಸಿಕೆ.

ರಾಮಾ ರಾಮಾ ರೇ ಚಿತ್ರ ಗೆಲ್ಲಬೇಕಾಗಿದೆ, ಈ ತಂಡಕ್ಕೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕಾಗಿದೆ. ತೀರಾ ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡದಲ್ಲಿ ಓಂದೂ ಸದಭಿರುಚಿಯ ಚಿತ್ರಗಳು ಬರುತ್ತಿಲ್ಲ ಅಂತ ಬೈಯುತ್ತಿದ್ದೆವು. ಆದರೆ ಲೂಸಿಯಾ, ಉಳಿದವರು ಕಂಡಂತೆ, ರಂಗಿ ತರಂಗ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮುಂತಾದ ಚಿತ್ರಗಳು ನಮಗೆ ಕನ್ನಡ ಚಿತ್ರ ರಂಗದ ಮೇಲಿದ್ದ ಅಭಿಪ್ರಾಯವನ್ನೇ ಬದಲಿಸಿತು. ಅಂತಹಾ ಚಿತ್ರಗಳ ಸಾಲಿಗೆ “ರಾಮಾ ರಾಮಾ ರೇ” ಹೊಸ ಸೇರ್ಪಡೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ದೊಡ್ಮನೆ ಹುಡುಗ ಚಿತ್ರವನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಸ್ಟಾರ್ ನಟ, ನಿರ್ದೇಶಕರಿಂದ ಅದು ನಿರ್ಮಿಸಲ್ಪಟ್ಟಿತ್ತು. ಅದರ ಬರೀ ಒಂದು ಹಾಡಿಗೇ ಕೋಟಿಗಟ್ಟಲೆ ಸುರಿಯಲಾಗಿತ್ತು. “ಕನ್ನಡದಲ್ಲಿ ಇಂತಹಾ ಹಾಡು ಬಂದೇ ಇಲ್ಲ” ಎನ್ನುವ ಮಟ್ಟಿಗೆ ನಮ್ಮ ಮಾಧ್ಯಮಗಳು ಹಗಲಿರುಳು ಆ ಹಾಡಿಗೆ, ಆ ಮೂಲಕ ಚಿತ್ರಕ್ಕೆ ಪ್ರಚಾರ ಕೊಟ್ಟವು. ಆದರೆ ಮುಂದೆ ಚಿತ್ರವೇನಾಯ್ತು ಅಂತ ಗೊತ್ತೇ ಇದೆಯಲ್ಲಾ ನಿಮಗೆ? ಅದಕ್ಕಿಂತಲೂ ಮೊದಲು ಬಂದ ಕೋಟಿಗೊಬ್ಬ-2 ಏನಾಯ್ತು?  ಜಾಗ್ವಾರ್ ಚಿತ್ರದ ಪ್ರಚಾರಕ್ಕಾಗಿಯೇ ಕೋಟಿಗಟ್ಟಲೆ ಹಣ ಹೂಡಲಾಯ್ತು, ಚಿತ್ರಕ್ಕೆ ಜನರಿಂದ ಸಿಕ್ಕಿರುವ ಸ್ಪಂದನೆ ಹೇಗಿದೆ? ಎಲ್ಲಾ ನಿಮಗೆ ಗೊತ್ತಿದೆ. ಎಲ್ಲರೂ ಒಂದು ವಿಷಯವನ್ನು ಗಮನಿಸಬೇಕು, ಕನ್ನಡದಲ್ಲಿ ಸದ್ಯಕ್ಕೆ ಗೆಲ್ಲುತ್ತಿರುವುದು ಸ್ಟಾರ್ ನಟರು ನಟಿಸಿರುವ  ಮಾಸ್ ಚಿತ್ರಗಳಲ್ಲ, ಹೊಸಬರಾದರೂ  ಕಲಾತ್ಮಕತೆಯಿಂದ ಕೂಡಿರುವ ಕ್ಲಾಸ್ ಚಿತ್ರಗಳು. ಆದರೆ ಅವುಗಳು ಕೆಲವೇ ಕೆಲವು ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿವೆಯೇ ಹೊರತು ಬಾಕ್ಸಾಫೀಸಿನಲ್ಲಿ ದೊಡ್ಡ ಮಟ್ತದಲ್ಲಿ ಗೆದ್ದಿಲ್ಲ. ಅಂತಹಾ ಕ್ಲಾಸ್ ಚಿತ್ರಗಳನ್ನು ಮಾಡುತ್ತಿರುವವರನ್ನು, ಅದರಲ್ಲೂ ಹಿಂದೆ ಮುಂದೆ ಗಾಡ್ ಫಾದರುಗಳಿಲ್ಲದ,   ಯಾವುದೇ  ಸ್ಟಾರ್ ಗಿರಿಗಳಿಲ್ಲದೆಯೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿರುವವರನ್ನು ಬಾಕ್ಸಾಫೀಸಿನಲ್ಲಿಯೂ ಗೆಲ್ಲಿಸಿಕೊಡಬೇಕಾದ ಜವಾಬ್ದಾರಿ ಯಾರದ್ದು?

ಕಡೇಯದಾಗಿ ಇಷ್ಟನ್ನು ಹೇಳಬಲ್ಲೆ, ರಾಮಾ ರಾಮಾ ರೇ 2016ರ ಅತ್ಯುತ್ತಮ ಚಿತ್ರ. A Must Watch!  ನಿಮ್ಮ ಸಮೀಪದ ಥಿಯೇಟರಿನಿಂದ ಅದು ಎತ್ತಂಗಡಿಯಾಗುವ ಮುನ್ನ ಚಿತ್ರವನ್ನೊಮ್ಮೆ ನೋಡಿ, ಆಮೇಲೆ ಪರಿತಪಿಸಿಕೊಳ್ಳಬೇಡಿ. ಹಾಗೇನೇ, ನಮ್ಮ ಮಾಧ್ಯಮಗಳಂತೂ ಈ ಚಿತ್ರಕ್ಕೆ ಪ್ರಚಾರವನ್ನು ಕೊಡುತ್ತಿಲ್ಲ, ನೀವಾದರೂ ಫೇಸ್ಬುಕ್ ವಾಟ್ಸಾಪ್’ನಲ್ಲಿ  ಸಾಧ್ಯವಾದಷ್ಟು ಪ್ರಚಾರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ.  ಅಷ್ಟೇ!

ರೇಟಿಂಗ್:  *****

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post