X

ತಲಾಕ್ ಗೆ ತಲಾಕ್ – ಮುಸ್ಲಿಂ ಮಹಿಳೆಯರ ಬ್ರಹ್ಮಾಸ್ತ್ರ

`ನಿನ್ನ ಗಂಡ ಇನ್ನೊಂದು ಮದುವೆ ಮಾಡಿಕೊಂಡರೆ ನಿನಗೆ ಪರವಾಗಿಲ್ಲೆನಮ್ಮಾ..?’ ಎಂದು ಜಗತ್ತಿನ ಯಾವುದೇ ಹೆಣ್ಣು ಮಗಳನ್ನು ಕೇಳಿ ನೋಡಿ. ಭಾಷೆ, ಗಡಿ ಖಂಡಗಳನ್ನು ಮೀರಿ ಆಕೆ ನಿಮ್ಮನ್ನು ರಪ್ಪನೆ ಬಾರಿಸದಿದ್ದರೆ ಪುಣ್ಯ. ಅದರಲ್ಲೂ ಜಗತ್ತಿನ ಯಾವ ಧರ್ಮವೂ ಇವತ್ತು ಹೆಣ್ಣು ಮಗಳಿಗೆ ಅನ್ಯಾಯವಾಗುವುದನ್ನು ಆಕೆಯ ಭವಿಷ್ಯ ಬರ್ಬರಗೊಳ್ಳುವುದನ್ನು ಸಹಿಸುವುದೇ ಇಲ್ಲ. ಅದರಲ್ಲೂ ಜಗತ್ತಿನ ಅತ್ಯಂತ ಉದಾರ ಮತ್ತು ಮಾನವತಾವಾದಿ ಧರ್ಮದ ತಿರುಳು ಕೂಡಾ ಅಪೂಟು ಇದರ ವಿರುದ್ಧ ಇದೆ. ಆದರೆ ಎಲ್ಲೆಡೆಗೆ ಅಮರಿಕೊಂಡಿರುವ ಸ್ವಘೋಷಿತ ಬುದ್ಧಿಜೀವಿಗಳ ಕಿರಿಕ್ಕು ಜಗತ್ತಿನ ಯಾವ ಧರ್ಮವನ್ನೂ, ಜಾತಿಯನ್ನು ಸುಖವಾಗಿರಲು ಬಿಡುತ್ತಿಲ್ಲ ಎನ್ನಲು ಇದಕ್ಕಿಂತ ಉತ್ತಮ ಉದಾ. ಬೇಕೇ..? ಅಂದ ಹಾಗೆ ಭಾರತದಾದ್ಯಂತ ತೀವ್ರವಾಗಿ ಇದಕ್ಕೆ ತಿರುಗಿ ಬಿದ್ದಿರುವವರು ಹೆಣ್ಣು ಮಕ್ಕಳೆ ಅದರಲ್ಲೂ ಮುಸ್ಲಿಂ ಮಹಿಳಾ ಸಂಘಟನೆಗಳು ಅಕ್ಷರಶ: ಬೀದಿಗಿಳಿದಿವೆ.

ಜಾಗತಿಕವಾಗಿ ಮುಸ್ಲಿಂ ಪ್ರಾಬಲ್ಯ ಇರುವ ದೇಶಗಳು ಮತ್ತು ಅದನ್ನು ಧರ್ಮ ಹಾಗು ಮೆಜಾರಿಟಿಯನ್ನಾಗಿ ಒಪ್ಪಿಕೊಂಡಿರುವ ದೇಶಗಳ ಒಟ್ಟು ಸಂಖ್ಯೆ ಸರಿ ಸುಮಾರು 48. ಇಲ್ಲೆಲ್ಲಾ ಮುಸ್ಲಿಂ ಅವರವರದ್ದೇ ಷರಿಯತ್ ಕಾನೂನು ಮತ್ತು ಸುವ್ಯವಸ್ಥೆ ಇತ್ಯಾದಿ ನಡೆದು ಹೋಗುತ್ತಿದೆ. ಅಲ್ಲೆಲ್ಲಾ ಆಯಾ ಪ್ರದೇಶಾನುಸಾರ ಅಲ್ಲಿನ ಸಂವಿಧಾನ ರಚಿಸಲಾಗಿದೆ. ಜನಗಳಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲವಾಗಿದ್ದು ವ್ಯವಸ್ಥೆ ವ್ಯವಸ್ಥಿತವಾಗಿ ಚಲಿಸುತ್ತಿದೆ. ಆದರೆ ತೀರ ಜನಾಂಗೀಯ ಬಾಹುಳ್ಯ ಹೊಂದಿದ್ದೂ, ಅಲ್ಪಸಂಖ್ಯಾತ ಸ್ಥಾನದಿಂದ ಬಹುಸಂಖ್ಯಾತ ವರ್ಗದತ್ತ ಜರುಗುತ್ತಿರುವ ಭಾರತೀಯ ಮುಸ್ಲಿಂರಲ್ಲಿನ ಕೆಲವೇ ಶೇ. ವಾರು ಹಿತಾಸಕ್ತಿಗಳ ವೈರುಧ್ಯ ನೋಡಿ.

    ಜಾಗತಿಕವಾಗಿ ಮಹಿಳೆಯರನ್ನು ಅತ್ಯಂತ ಗೌರವಿಸಬೇಕಾದ ಗೌರವದಿಂದ ನೋಡಿಕೊಳ್ಳಬೇಕಾದ ಧರ್ಮದ ಮುಖಂಡರಲ್ಲೇ ಕೆಲವರಿಗೆ ತೀರ ಅಮಾನವೀಯವಾದ ತಲಾಖ್ ಪದ್ಧತಿಯ ಈಗಲೂ ಬೇಕಿದೆ ಎಂದರೆ ಧರ್ಮದ ವಿರುದ್ಧ ಹೋಗುತ್ತಿರುವವರು ಯಾರು..? ಜಗತ್ತಿನ ಯಾವ ಮಹಿಳೆಗೂ, ಆಕೆಯ ಸಹೋದರರಿಗೂ, ಯಾವ ತಾಯಿಗೂ ಬೇಕಿಲ್ಲದ ಮುಲಾಜಿಲ್ಲದೇ ತಲಾಖ್ ಹೇಳುವ ಮತ್ತು ಅದರ ನಂತರದ ಅವಧಿಯ ಅಮಾನವೀಯ ಬರ್ಬರ ಭವಿಷ್ಯದ ಬಗೆಗೆ ತುರ್ತಾಗಿ ಕ್ರಮ ಕೈಗೊಂಡು ಮಹಿಳೆಯರ ಬದುಕನ್ನು ನೇರ್ಪುಗೊಳಿಸುವ ಕಾರ್ಯಕ್ಕೆ ಕೇಂದ್ರ ಸರಕಾರ ಮುಂದಾಗಿದ್ದರೆ ಇತ್ತ ಬುಡಕ್ಕೆ ಬೆಂಕಿ ಬಿದ್ದಂತಾಡುತ್ತಿರುವವರ ಬುದ್ಧಿಜೀವಿಗಳ ಹಿಂದಿನ ಅಸಲಿಯತ್ತು ಈಗ ಬಹಿರಂಗವಾಗುತ್ತಿದೆ.

ಇವತ್ತು ಯಾರೇ ಒಬ್ಬ ಕರ್ಮಠ ಮುಸ್ಲಿಂನನ್ನು ನಿಲ್ಲಿಸಿ ಕೇಳಿ ನೋಡಿ. `ನಿನ್ನ ತಂಗಿಯೊಬ್ಬಳಿಗೆ ಹೀಗೆ ಇದ್ದಕ್ಕಿದ್ದಂತೆ ಮೂರು ಬಾರಿ ತಲ್ಲಾಖ್ ಹೇಳಿ ಸಂಸಾರ ಕಿತ್ತು ಹೋದರೆ ಪರವಾಗಿಲ್ಲವಾ..?’ ಎಂದು. ಬರೀ ಮುಸ್ಲಿಂ ಅಲ್ಲ ಜಗತ್ತಿನ ಯಾವ ಸಹೋದರನೂ, ಅಪ್ಪನೂ, ಚಿಕ್ಕಪ್ಪನೂ ಕೊನೆಗೆ ಸ್ವಂತ ತಾಯಿಯೂ ತನ್ನ ಮಗಳ ಬದುಕಿನಲ್ಲಿ ಇಂತಹದ್ದೊಂದು ಅಪಸವ್ಯವನ್ನು ಸಹಿಸಲಾರರು. ಸ್ವತ: ಅವನೆಷ್ಟೇ ಅಪದ್ಧನಾಗಿದ್ದರೂ ತನ್ನ ಕುಟುಂಬದ ವಿಷಯಕ್ಕೆ ಬಂದಾಗ ಪ್ರತಿಯೊಬ್ಬನೂ ಆಕೆಯ ಬೆಂಬಲಕ್ಕೆ ಧಾವಿಸುವುದಕ್ಕೆ ಯಾವುದೇ ಧರ್ಮದ ಬೋದನೆಯೂ ಬೇಕೇ ಆಗಿಲ್ಲ. ಅವನು ಹಿಂದೂ, ಮುಸ್ಲಿಂ ಅಥವಾ ಜಗತ್ತಿನ ಕೊಟ್ಟ ಕೊನೆಯ ಮಂಗೊಲಿಯನ್ ಆಗಿರಲಿ, ಕೊನೆಗೆ ಕ್ರೆಟ್ಟ ಬುಡಕಟ್ಟಿನ ತೀರ ಹಿಂದುಳಿದ ಜನಾಂಗದ ಮೂಲ ನಿವಾಸಿಗಳೇ ಆಗಿರಲಿ. ಯಾರೊಬ್ಬರಿಗೂ ಕುಟುಂಬ ಎನ್ನುವ ಆಪ್ತತೆಯ ಆಚೆಗೆ ದುರ್ಬರವಾದ ಬದುಕು ಬೇಕೇ ಆಗಿಲ್ಲ. ಅದರಲ್ಲೂ ವಿಚ್ಛೇದನ ಮತ್ತು ಪುನರ್ವಸತಿಯಂತಹ ಹೀನಸುಳಿಯನ್ನು ಯಾವ ಧರ್ಮವೂ ನ್ಯಾಯಸಮ್ಮತವೆನ್ನಲು ಸಾಧ್ಯವೇ ಇಲ್ಲ.

ನಾವಿದನ್ನು ಕೊಂಚ ಬೆಂಗಳೂರು ಕೇಂದ್ರಿಕೃತ ವ್ಯವಸ್ಥೆಯ ಆಚೆಗೆ ನೋಡಬೇಕಿದೆ. ಕಾರಣ ಇವತ್ತು ಇಂಥಾ ಕಾರ್ಪೋರೇಟ್ ಕಲ್ಚರ್‍ನ ನಗರದಲ್ಲಿ ಎಕಾಂಗಿಯಾಗಿ, ಬೇಕೆಂದಾಗ ಸಂಗಾತಿಯನ್ನು ಬದಲಿಸಲು, ಕರೆದುಕೊಳ್ಳಲು ಬಾಡಿಗೆಗೆ ಪ್ರತ್ಯೇಕ ಮನೆ ಹಿಡಿದು ಬದುಕುತ್ತಿರುವ ಹೆಂಗಸರಿಗೆ ಇಂಥಹದ್ದು ಪಥ್ಯವಾಗುವುದಿಲ್ಲ. ಅವರೆಲ್ಲಾ ಮಂಚೂಣಿಯಲ್ಲಿದ್ದೂ ಜಾಲತಾಣದಲ್ಲಿ ಸಕ್ರೀಯರಾಗಿದ್ದೂ ಮನಸ್ಸಿಗೆ ಬಂದಾಗೆಲ್ಲಾ ಒಬ್ಬೊಬ್ಬ ಸಂಗಾತಿಯನ್ನು ಹೊಂದುವ ಪ್ರಕ್ರಿಯೆಗೆ ತಮ್ಮ ಬದುಕು ಮತ್ತು ಖಾಸಗಿತನ ಎರಡನ್ನೂ ಒಡ್ಡಿಕೊಳ್ಳುತ್ತಿರುವಾಗ, ನಾಲ್ಕಾರು ವರ್ಷಕ್ಕೆ ಆರೆಂಟು ಸಂಗಾತಿಗಳು ಬದಲಾಗುವ ಹೊತ್ತಿಗೆ ಅಲ್ಲೇನಿರುತ್ತದೆ ಖಾಸಗಿತನ ಮುಚ್ಚಿಟ್ಟುಕೊಳ್ಳಲು. ಎಡ,ಬಲ ಎಲ್ಲಾ ಖಾಲಿ ಖಾಲಿ. ಬುಡಕ್ಕೊಂದು ಬಾಡಿಗೆ ಬುಲೆಟ್ಟು ಖರ್ಚು ನೋಡಿಕೊಳ್ಳಲೊಬ್ಬ ಎನ್ನುವದಷ್ಟೆ ಬದುಕಾಗಿರುತದೆ. ಹಾಗಾಗಿ ಇಂತಹ ಶೇ.ವಾರು ಮಹಿಳೆಯರನ್ನು ನಾವು ಸಮೀಕರಿಸಿ ಮಾತಾಡುವುದು ಬೇಡ. ಕೊಚ್ಚೆಗೆ ಕಲ್ಲೇಕೆ ಎಸೆಯಬೇಕು…? ನನ್ನ ಚರ್ಚೆ ಏನಿದ್ದರೂ ಪ್ರಜ್ಞಾವಂತ ಮಹಿಳೆ, ನಿಸ್ಸಾಹಯಕ ಸ್ತ್ರೀ ಸೇರಿದಂತೆ ಎಲ್ಲಾ ರೀತಿಯಲ್ಲೂ ಶೋಷಣೆಗೆ ಒಳಗಾಗುತ್ತಿರುವವರ ಕುರಿತು.

ಆದರೆ ಇಲ್ಲೇನಾಗುತ್ತಿದೆ ನೋಡಿ. ಯಾವ ಮಹಿಳೆಯನ್ನು ಇವತ್ತು ಜಗತ್ತಿನ ಅತ್ಯಂತ ಪವಿತ್ರ ಧರ್ಮದಲ್ಲಿ ಪೋಷಿಸಬೇಕು ರಕ್ಷಿಸಬೇಕು ಅಂದು ಬರೆಯಲಾಗಿದೆಯೋ ಅದನ್ನು ಕೆಲವರು ತಮಗೆ ತಿಳಿದಂತೆ ಅರ್ಥೈಸುತ್ತಿದ್ದಾರೆ. ಅಸಲಿಗೆ ಕೇಂದ್ರ ಸರಕಾರ ಇಲ್ಲಿ ಏಕರೂಪ ನಾಗರಿಕ ಕಾನೂನಿನ ಪ್ರಶ್ನೆಯನ್ನೇ ಎತ್ತಿಲ್ಲ. ಕೇವಲ ತ್ರಿವಳಿ ತಲಾಕ್ ಅದರ ಹಿಂದಿರುವ ಹಲಾಲ ಮತ್ತು ಹಿಂದೂ ಮೈತ್ರಿ ವಿವಾಹ, ಕ್ರಿಶ್ಚಿಯನ್ನರ ಮಹಿಳಾ ಹಕ್ಕುಗಳು ಹೀಗೆ ಹಲವು ರೀತಿಯ ಸುಧಾರಣಾ ಕಾಯ್ದೆಗಳಿಗಾಗಿ ಸುಪ್ರಿಂ ಕೋರ್ಟಿಗೆ ತನ್ನ ಅಫಿಡಾವೇಟ್ ಸಲ್ಲಿಸಿದೆ ಹೊರತಾಗಿ ಯಾವ ಧರ್ಮ ಅಥವಾ ವ್ಯಕ್ತಿ ಅಥವಾ ರಾಜಕೀಯ ಕೇಂದ್ರಿಕೃತ ಯುದ್ಧವಿದಲ್ಲವೇ ಅಲ್ಲ. ಆದರೆ ಎಲ್ಲ ಸಮಯದಲ್ಲೂ ರಾಜಕೀಯ ಕೀಳು ಮಾಡುವವರು ಇಲ್ಲೂ ಅದನ್ನೇ ಮಾಡುತ್ತಿದ್ದಾರೆ ಸರಿಯಾಗಿ ಅರ್ಥೈಸಿಕೊಳ್ಳದೆ ಅಲ್ಪಸಂಖ್ಯಾತರ ಭಾವನೆಗಳಿಗೆ ಇನ್ನಷ್ಟು ಅಜ್ರ್ಯ ಸುರಿಯುತ್ತಿದ್ದಾರೆ.

ಇವತ್ತು ಭಾರತದಾದ್ಯಂತ ಈ ಬೇಡಿಕೆಯನ್ನು ಮೊದಲು ಬೆಂಬಲಿಸಿದ್ದೇ ಮುಸ್ಲಿಂ ಮಹಿಳಾ ಸಂಘಟನೆಗಳು. `ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಪುರುಷರ ದಬ್ಬಾಳಿಕೆಯ ಪೆÇಷಣೆ ಮಾಡುತ್ತಿದೆ ಅಲ್ಲದೆ ತನ್ನ ಅನುಕೂಲಕ್ಕೆ ತಕ್ಕಂತೆ ಷರಿಯತ್ ಕಾನೂನನ್ನು (ಷರಿಯತ್ ಕಾನೂನು ಅದೆಷ್ಟು ಎಂದರೆ ಮೊನ್ನೆ ಸೌದಿಯ ರಾಜಕುಮಾರನನ್ನೇ ಅಲ್ಲಿ ಗಲ್ಲಿಗೇರಿಸಲಾಗಿದೆ. ಷರಿಯತ್ತಿನ ಮೌಲ್ಯಗಳ ಎದುರಿಗೆ ಪ್ರತಿಯೊಬ್ಬನೂ ಸಮ ಎನ್ನುವ ಅಲ್ಲಿನ ಈ ಕೃತಿ ಜಾಗತಿಕವಾಗಿ ಪ್ರಶಂಶೆಗೊಳಗಾಗುತ್ತಿದೆ. ನೆನಪಿರಲಿ ಅದು ಷರಿಯಾ ಕಾನೂನು. ವೈಯಕ್ತಿಕ ಕಾನೂನು ಮಂಡಳಿಯ ಕಾಯ್ದೆಯಲ್ಲ)  ತಿರುಚುತ್ತಿದೆ ಎಂದು ಮುಸ್ಲಿಂ ಮಹಿಳಾ ಫೌಂಡೆಶನ್ ಅಧ್ಯಕ್ಷೆ ಹಾಗು ಪ್ರಸ್ತುತ ತ್ರಿವಳಿ ತಲ್ಲಾಖ್ ವಿರುದ್ಧ ಹೋರಾಡುತ್ತಿರುವ `ನಾಜ್ನಿನ್ ಅನ್ಸಾರಿ’ ದೂರಿನ ಮೂಲಕ ಹೇಳಿಕೆ ನೀಡಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋದ ನಾಜ್ನಿ ಹೇಳಿಕೆ ನೀಡಿ `…ಹೆಣ್ಣು ಮಕ್ಕಳ ವಿಷಯದಲ್ಲಿ ಮಾತ್ರ ಮಹಿಳೆಯರ ಸ್ವತಂತ್ರ, ಹಕ್ಕಿನ ವಿಷಯ ಬಂದಾಗ ಷರಿಯತ್ ಕಾನೂನು ನೆನಪಾಗುವ ಮಂಡಳಿಗೆ ನಮ್ಮ ಮೇಲಾದ ಅತ್ಯಾಚಾರ ಅಥವಾ ಹತ್ಯೆ ಇನ್ನಾವುದೇ ರೀತಿಯ ಕೌಟುಂಬಿಕ ದೌರ್ಜನ್ಯಗಳಾದಾಗ ಯಾಕೆ ಪುರುಷರಿಗೂ ಷರಿಯತ್ ಕಾನೂನು ಅನ್ವಯಿಸುತ್ತಿಲ್ಲ..’ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಸಿದ್ಧ ಪಡಿಸಿರುವ ಪ್ರಶ್ನಾವಳಿಗೆ ಸಂಬಂಧಿಸಿದಂತೆ ತ್ರಿವಳಿ ತಲಾಖ್ ಮತ್ತು ಬಹು ಪತ್ನಿತ್ವದ ವಿರುದ್ಧದ ಕಾನೂನಿನ ಪ್ರಶ್ನಾವಳಿಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿರಸ್ಕರಿಸುವ ಹೇಳಿಕೆಗೆ ಕಿಡಿಕಾರಿರುವ ನಾಜ್ನಿ `ತಮ್ಮಂತೆ ದೇಶಾದ್ಯಂತ ಇರುವ ಮಹಿಳಾ ಸಂಘಟನೆಗಳು ಅದಕ್ಕೆ ಧನಾತ್ಮಕವಾಗಿ ಅಭಿಪ್ರಾಯಗಳನ್ನು ತಿಳಿಸುವುದಾಗಿ’ ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಭಾರತೀಯ ಮಹಿಳಾ ಮುಸ್ಲಿಂ ಅಂದೋಲನದ’ ನಾಯಕಿ `ಝಾಕೀಯಾ’ ಕಾನೂನು ಇಲಾಖೆಯಿಂದ ಐವತ್ತು ಸಾವಿರ ಅಭಿಪ್ರಾಯ ಫಾರಂ ಅನ್ನು ನಾವು ತರಿಸಿಕೊಂಡು ಸಲ್ಲಿಸುತ್ತಿದ್ದೇವೆ ಇನ್ನಷ್ಟು ಫಾರಂಗಳಿಗೆ ಬೇಡಿಕೆ ಇಟ್ಟಿದ್ದೇವೆ ಎಂದಿದ್ದಾರೆ. ಹೀಗೆ ಇವತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಅದರಲ್ಲಿರುವ ಪುರುಷರ ನಾಯಕತ್ವಕ್ಕೆ ಮುಸ್ಲಿಂ ಸಮುದಾಯದ ನೊಂದ ಮತ್ತು ಬದಲಾವಣೆ ಬಯಸುತ್ತಿರುವ ಮಹಿಳೆಯರೆ ಲೀಡರ್‍ಗಳಾಗಿದ್ದಾರೆ.

ಕಳೆದ ಆರು ದಶಕದಲ್ಲಿ ಮಹಿಳೆಯರಿಗೆ ಗಟ್ಟಿ ದನಿ ಒದಗಿಲಾಗದ ಹಿತಾಸಕ್ತಿಗಳಿಗೆ ತಿಕ್ಷ್ಣವಾಗಿ ಪ್ರತಿಕ್ರಿಯಿಸಿರುವ `ಭಾರತೀಯ ಮಹಿಳಾ ಮುಸ್ಲಿಂ ಅಂದೋಲನದ’ ಉಪಾಧ್ಯಕ್ಷೆ ನಿಯಾಜ್ ನೂರ್ ಜಹಾನ್ ಸೋಫಿಯಾ `ಇದಕ್ಕೆ ರಾಜಕೀಯ ಬೆರೆಸಬೇಡಿ’ ಎಂದಿರುವ ಹೇಳಿಕೆ ಜಾಗತಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. `ಅಲ್ಪ ಸಂಖ್ಯಾತರಲ್ಲೇ ನಾವು ಅಲ್ಪ ಸಂಖ್ಯಾತರು’ ಎಂದಿರುವ ಸಾಲುಗಳು ಮುಸ್ಲಿಂ ಮಹಿಳೆಯರ ಸ್ಥಿತಿಗತಿಯನ್ನು ಬಿಂಬಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಇದಕ್ಕೆ ಕೋಮು ಬಣ್ಣ ಬೆರೆಸುವುದು ಬೇಡ ಎಂದು ಅವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಗೆ ಕಿವಿ ಹಿಂಡಿದ್ದಾರೆ. ಒಂದು ಗೊತ್ತಿರಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಷರಿಯತ್ ಕಾನೂನು ಒಂದೇ ಅಲ್ಲ.

ಸುಪ್ರಿಂ ಕೋರ್ಟಿನೆದುರಿಗೆ ತೀರ ತಾರ್ಕಿಕವಾಗಿ ವಾದ ಮಂಡನೆಯಾಗಿದ್ದು ಶಾಯಿರಾಬಾನೋ ಕೇಸಿನಲ್ಲಿ. ಅದರ ಪ್ರಕಾರ ಮುಸ್ಲಿಂ ಕಾನೂನಿನಲ್ಲಿರುವ ತಲಾಕ್ ನಾಮಾ, ತಲಾಕ್-ಇ-ಬಿದ್ದತ್ ಮತ್ತು ನಿಖಾಹ್ ಹಲಾಲಾ ಪದ್ಧತಿಗಳನ್ನು ಆಚರಿಸುವುದರಿಂದ ಸಂವಿಧಾನದ ಅನುಚ್ಛೇದ 14-ಎಲ್ಲರೂ ಸಮಾನರು, 15-ಜಾತಿ, ಧರ್ಮ, ಲಿಂಗ ಆಧರಿಸಿದ ತಾರತಮ್ಯ ನಿಷೇಧ, 21- ವ್ಯಕ್ತಿಯ ವೈಯಕ್ತಿಕ ಬದುಕು ಮತ್ತು ಸ್ವಾತಂತ್ರ್ಯ ರಕ್ಷಣೆ…ಹೀಗೆ ಪೌರತ್ವದ ಹಕ್ಕುಗಳೇ ಮೌಲ್ಯ ಕಳೆದುಕೊಳ್ಳುತ್ತವಲ್ಲ…? ಹಾಗಿದ್ದಲ್ಲಿ ಸಂವಿಧಾನತ್ಮಕ ಹಕ್ಕಿಗೆ ಬೆಲೆ ಇಲ್ಲವೇ…? ಎಂಥಾ ಪ್ರಶ್ನೆ.

ಇಸ್ಲಾಂನ ಷರಿಯತ್ ಮತ್ತು ಫಿಕಾಹ್ ಪ್ರಕಾರ ತಲ್ಲಾಖ್‍ಗೂ ಕೂಡಾ ತುಂಬ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ನಿಯಮಗಳಿವೆ. ಇದ್ದಕ್ಕಿದ್ದಂತೆ ಫೇಸ್‍ಬುಕ್ ಮೂಲಕ, ಮೊಬೈಲ್, ವಾಟ್ಸಾಪ್ ಮೂಲಕ ಮೂರು ಬಾರಿ ತಲ್ಲಾಖ್ ಎಂದು ಗೊಣಗಿ ಸುಮ್ಮನಾಗುವಂತೆಯೇ ಇಲ್ಲ. ಅಪ್ಪಟ ಇಸ್ಲಾಂ ಇದನ್ನು ಪುರಸ್ಕರಿಸುವುದೇ ಇಲ್ಲ. ಮೆಹರ್ ಎನ್ನುವ ಒಪ್ಪಿತ ಸುರಕ್ಷಾ ನಿಧಿಯ ಕೊಡುಗೆ ಇಲ್ಲದೆ ತಲ್ಲಾಖ್ ಮಾಡುವಂತೆಯೇ ಇಲ್ಲ. ಮೆಹರ್ ಸಂಪೂರ್ಣ ಹೆಣ್ಣಿನ ಕೈ ಸೇರಿದ ಮೇಲಷ್ಟೆ ತಲ್ಲಾಖ್ ಪೂರ್ತಿಯಾಗುತ್ತದೆ ಎನ್ನುತ್ತದೆ ಷರಿಯಾ ಕಾನೂನು. ಆದರೆ ಇದನ್ನು ಪುರುಷ ದಬ್ಬಾಳಿಕೆಯ ಸಮಾಜದಲ್ಲಿ ಅನುಸರಿಸಲಾಗುತ್ತಿಲ್ಲ ಎನ್ನುವುದು ಮುಸ್ಲಿಂ ಮಹಿಳೆಯರ ಕೂಗಾಗಿದ್ದು, ತಲ್ಲಾಖ್‍ನಂತೆಯೇ `ಖುಲಾ’ ಎನ್ನುವ ಅಧಿಕಾರ ಕೂಡಾ ಮಹಿಳೆಯರಿಗೆ ಇದೆ ಎನ್ನುವುದು ಎಷ್ಟು ಜನರಿಗೆ ಗೊತ್ತಿದೆ..? ಇದೆಲ್ಲದಕ್ಕೂ ಪ್ರಮುಖ ಕಾನೂನಾತ್ಮಕ ತೊಡಕಾಗಿರುವುದೆಂದರೆ ಬಾಕಿ ಸಮಾಜದಂತೆ ಮುಸ್ಲಿಂ ಸಮಾಜದಲ್ಲಿ ಮದುವೆ ಎನ್ನುವ ಸಂಪ್ರದಾಯವನ್ನು ರಿಜಿಸ್ಟ್ರಾರ್ ಕಚೇರಿಯಲ್ಲೂ ನೊಂದಣಿಯಾಗಿಸುವ ಪ್ರಕ್ರಿಯೆಯೇ ನಡೆಯುವುದಿಲ್ಲ. ಹಾಗಾಗಿ ಕಾನೂನಿನ ಮೊರೆ ಹೋಗಲೂ ಆಗದೆ ಮಹಿಳೆ ಒದ್ದಾಡುತ್ತಾಳೆ.

ಇದರ ಜತೆಗೆ ತಲ್ಲಾಖ್ ರದ್ದಾದರೆ ಅದರೊಂದಿಗೆ ಅಮಾನವೀಯ `ಹಲಾಲ’ ಕೂಡ ನಿಸ್ತೇಜವಾಗುತ್ತದೆ ಎನ್ನುವುದೇ ಒಟ್ಟಾರೆ ತಿರುಳು. ಗಂಡನಿಗೆ ಮನಸ್ತಾಪ ಬಂದು ಇದ್ದಕ್ಕಿದ್ದಂತೆ ಆತ ಮೂರು ಬಾರಿ ತಲಾಕ್ ಹೇಳಿ ಬಿಡುತ್ತಾನೆ. ಕೆಲ ಸಮಯದ ಬಳಿಕ ಅವನಲ್ಲಿ ತಪ್ಪಿನ ಅರಿವಾಗಿ ವಾಪಸ್ಸು ನಾವೇ ಬದುಕು ನಡೆಸೋಣ ಎಂದರೆ ಅದಾದರೂ ಸುರಳಿತ ಆಗುತ್ತದೆ ಅದೂ ಇಲ್ಲ. ಅವನಾಗಲೇ ಅವಸರಕ್ಕೆ ಬಿದ್ದು ತಲ್ಲಾಕ್ ಅಂದಾಗಿ ಬಿಟ್ಟಿರುತ್ತದಲ್ಲ. ಮತ್ತೆ ಆಕೆಯೊಂದಿಗೆ ಸಂಸಾರ ಮಾಡಬೇಕಿದ್ದರೆ ಆಕೆ `ಇದ್ದತ್’ ನಲ್ಲಿರಬೇಕಾಗುತ್ತದೆ. ಅಂದರೆ ಸುಮಾರು ನೂರು ದಿನ ಕಾಲ ಆಕೆ ಕಾಯಬೇಕಾಗುತ್ತದೆ. ಅಷ್ಟು ಕಾದ ನಂತರವಾದರೂ ಪುನ: ಇಬ್ಬರೂ ಒಂದಾಗುತ್ತಾರಾ ಅದೂ ಇಲ್ಲ. ಆಕೆಯನ್ನು ಇನ್ನೊಬ್ಬನೊಂದಿಗೆ ನಿಕಾಹ್ ಮಾಡಿ ಕೊಡಬೇಕು. ಅಲ್ಲೂ ಆಕೆ ಸುಮಾರು ನೂರು ದಿನಗಳ ಕಾಲ ಸಂಸಾರ ಮಾಡಬೇಕು. ಹೀಗೆ ಅವನೊಂದಿಗಿದ್ದು ಅಲ್ಲೂ ಮತ್ತೊಮ್ಮೆ ತಲ್ಲಾಖ್ ಮಾಡಿಕೊಂಡ ಬಳಿಕ ಮೊದಲನೆಯ ಗಂಡನೊಡನೆ ಮತ್ತೆ ಸಂಸಾರಕ್ಕೆ ಮರಳಬಹುದು. ಅದ್ಯಾವ ಪರಿಯಲ್ಲಿ ಆಕೆಗೆ ಮಾನಸಿಕ ದೈಹಿಕ ಹಿಂಸೆಯಾಗಬಹುದು ಯೋಚಿಸಿ. ಈ ಕಾರಣಕ್ಕೇನೆ ಮುಸ್ಲಿಂ ಮಹಿಳೆಯರ ತಲ್ಲಾಕ್ ವಿರುದ್ಧದ ಕೂಗು ಬಲಗೊಂಡಿದ್ದು ಉಳಿದ `ಹಲಾಲ’ದಂತಹ ಪದ್ಧತಿಯನ್ನೂ ಕಿತ್ತು ಹಾಕಲು ಹೋರಾಟಕ್ಕಿಳಿದಿದ್ದಾರೆ.

1955 ರಲ್ಲಿ ಪ್ರಮುಖವಾಗಿ ಸುದ್ದಿಯಾಗಿದ್ದ ಪಾಕ್‍ನ ಮಹಮ್ಮದ ಅಲಿ ಬೋಗ್ರಾ ಪ್ರಕರಣದಲ್ಲಿ `ಅಖಿಲ ಪಾಕಿಸ್ತಾನ ಮಹಿಳಾ ಸಂಘಟನೆ’ ಮಧ್ಯ ಪ್ರವೇಶಿಸಿ 1956 ರ ಹೊತ್ತಿಗೆ ಹೊಸ ಶಿಫಾರಸನ್ನು ಸೂಚಿಸಿತ್ತು. ಕೊನೆಗೂ 1961 ರಲ್ಲಿ ಇದು ಜಾರಿಯಾದರೆ, ನೆರೆಯ ಇನ್ನೊಂದು ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶ ಉದಯವಾಗುವಾಗಲೇ 1971 ರಲ್ಲಿ ಅದು ತಲ್ಲಾಖ್ ಪದ್ಧತಿಯನ್ನು ಕೈಬಿಟ್ಟಿತ್ತು. (ಇನ್ನುಳಿದ ಧಾರ್ಮಿಕ ಆಚರಣೆ ಮತ್ತು ಕುರಾನ್ ಉಲ್ಲೇಖಗಳು ಮುಂದಿನ ಭಾಗದಲ್ಲಿ – ಲೇ)

ಇದರ ಹಿನ್ನೆಲೆಯಲ್ಲಿ ದೇಶದ ಏಳು ಮಹಿಳಾ ಸಂಘಟನೆಗಳು ತಾವಾಗಿಯೇ ಈ ಕೇಸಿನಲ್ಲಿ ಮಧ್ಯ ಪ್ರವೇಶಿಸಿವೆ. ಒಟ್ಟಾರೆ ಜಾಗತಿಕವಾಗಿ ಯಾವ ದೇಶವೂ ಸುಲಭವಾಗಿ ಒಪ್ಪಲಾಗದ ತಲ್ಲಾಖ್‍ನಂತಹ ಅಮಾನವೀಯ ನಡೆಯನ್ನು ತಡೆದು ಮಹಿಳೆಯರಿಗೆ ಕಾನೂನು ಬದ್ಧವಾಗಿ ಪೌರತ್ವದ ಹಕುಗಳನ್ನು ರಕ್ಷಿಸುತ್ತಲೇ, ಮುಸ್ಲಿಂ ಧರ್ಮದ ಪ್ರಕಾರ ಸಂಪೂರ್ಣ ಸುರಕ್ಷತೆಯ ಬದುಕನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದ್ದು ಬಹುಶ: ಜಾಗತಿಕವಾಗಿ ಇಂತಹ ಇನ್ನೊಂದು ಉದಾ. ಇರಲಿಕ್ಕಿಲ್ಲ. ಯಾವ ಧರ್ಮದ ಬಗ್ಗೆ ಮತ್ತು ಜನಾಂಗದ ಬಗೆಗೆ ತೀವ್ರ ವೈಚಾರಿಕ ಭಿನ್ನಾಭಿಪ್ರಾಯಗಳಿವೆಯೋ ಅವರ ಮಹಿಳೆಯರ ಹಕ್ಕನ್ನು ಇವತ್ತು ರಕ್ಷಿಸಲು ಹೊರಟ ಸರಕಾರ, ಭವಿಷ್ಯದಲ್ಲಿ ತಾನೇ ಅಪಾಯಕ್ಕೆ ಸಿಲುಕಬಹುದಾದರೂ ಮಹಿಳೆಯರ ಔನತ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಇದಕ್ಕೆ ಕಾಲೂರಿನಿಂತಿರುವ ಮೋದಿಯಂತಹ ನಾಯಕ ಮತ್ತು ಧನಾತ್ಮಕ, ರಚನಾತ್ಮಕ ಸರಕಾರ ಎರಡೂ ಬಹುಶ: ಭಾರತಕ್ಕೆ ಭವಿಷ್ಯತ್ತಿನಲ್ಲಿ ಮತ್ತೆ ಸಿಗಲಿಕ್ಕಿಲ್ಲ. ಸರಿಯಾಗಿ ಭವಿಷ್ಯ ರೂಪಿಸಿಕೊಳ್ಳುವುದು ನಮಗೆ ಗೊತ್ತಿರಬೇಕಷ್ಟೆ.

ಕುರಾನ್ ಉಲ್ಲೇಖಗಳು…

ಈ ಲೇಖನ ಬರೆಯುವ ಹೊತ್ತಿಗೆ ಮುಸ್ಲಿಂ ಪಾಲಿನ ಪರಮೋಚ್ಛ ಗ್ರಂಥದ ಕೆಲವು ಸಾಲುಗಳು ನನಗೆ ನೆನಪಾಗುತ್ತಿವೆ. ಪವಿತ್ರ ಕುರಾನ್‍ನಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಗೌರವದ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

•    ಗಂಡು ಹೆಣ್ಣುಗಳನ್ನು ಒಂದೇ ಜೀವದಿಂದ ಸೃಷ್ಟಿಸಲಾಗಿದೆ (4:1)

•    ಸ್ತ್ರೀಯರನ್ನು ಬಲಾತ್ಕಾರವಾಗಿ ಪರಂಪರಾಗತ ಸಂಪತ್ತಿನಂತೆ, ಆಳ್ವಿಕೆಗೆ ಆಧೀನಗೊಳಿಸಿಕೊಳ್ಳುವುದು ಧರ್ಮ ಸಮ್ಮತವಲ್ಲ. (4:19)

•    ಪುರುಷರೇ ನಿಮಗೆ ಸ್ತ್ರೀಯರೂ, ಸ್ತ್ರೀಯರಿಗೆ ಪುರುಷರೂ ಪೋಷಾಕಿದ್ದಂತೆ (2:187)

•    ಸುಳ್ಳು ಅರೋಪ ಹೊರೆಸಿ, ಇನ್ನೊಬ್ಬಳನ್ನು ಮದುವೆಯಾಗುವ ಉದ್ದೇಶದಿಂದ ಕೊಡುವ ತಲ್ಲಾಖ್‍ಗೆ ಇಸ್ಲಾಂ ಅವಕಾಶ ಕೊಡುವುದಿಲ್ಲ. ವಿಚ್ಛೇದಿತ ಸ್ತ್ರೀಯ ಜೀವನೋಪಾಯವೂ ಅವನದೇ ಹೊಣೆ. ಇದು ದೈವಭಕ್ತರಾದ ಎಲ್ಲ ಮುಸ್ಲಿಂರ ಹೊಣೆಗಾರಿಕೆಯಾಗಿದೆ (2:241)

ಹೀಗೆ ಮಹಿಳೆಯರ ಔನತ್ಯವನ್ನು ಎತ್ತಿ ಹಿಡಿಯುವ ಕುರಾನ್ ಇತ್ತಿಚಿನ ಬಹು ಪತ್ನಿತ್ವದ ವಿಷಯದಲ್ಲಿ ಅಪಾರ್ಥವನ್ನು ಪಡೆಯುತ್ತಿರುವಾಗ ಅದಕ್ಕೂ ಸಮಂಜಸ ಅಧಾರವನ್ನು ಕೊಟ್ಟಿದೆ. ಹೊರತಾಗಿ ಬೇಕಾಬಿಟ್ಟಿಯಾಗಿ ಇಸ್ಲಾಂ ಬಹು ಪತ್ನಿತ್ವವವನ್ನು ಹೊಂದಲು ಸೂಚಿಸಿದೆ ಎಂದಲ್ಲ. ಅದರ ವಿಶ್ಲೇಷಣೆ ಮುಂದಿನ ಭಾಗಗಳಲ್ಲಿ ಮಾಡಲಿದ್ದೇನೆ. ಅದಕ್ಕೆ ಸಂಬಂಧಿಸಿದ ಕುರಾನ ಸೂಕ್ತಿಯೊಂದು ಇಲ್ಲಿದೆ.

•    ಬಹು ಪತ್ನಿಯರಿದ್ದಾಗ ಅವರ ನಡುವೆ ಸಮಾನ ನ್ಯಾಯ ಪಾಲಿಸಲು ನಿಮ್ಮಿಂದ ಸತತ ಪ್ರಯತ್ನದ ನಂತರವೂ ಸಾದ್ಯವಾಗದು. ಆಗ ನೀವು ಯಾರೊಬ್ಬಳ ಕಡೆಗೆ ವಾಲಿಕೊಂಡು ಇನ್ನೊಬ್ಬಳನ್ನು ನಿಸ್ಸಾಹಯಕ ಸ್ಥಿತಿಯಲ್ಲಿ ಬಿಡುವಂತಿಲ್ಲ (4:129) – ಬಹು ಪತ್ನಿತ್ವವನ್ನು ಸಮರ್ಥಿಸಿಕೊಳ್ಳಲು ಇತಿಹಾಸದಲ್ಲಿ ನಡೆದ ಘಟನೆಗಳು ಕಾರಣವಾಗಿದ್ದವು ಮತ್ತು ಅನಿವಾರ್ಯವಾಗಿತ್ತಾದರೂ ಅಲ್ಲೂ ಮಹಿಳೆಯರ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು.

ಭಾರತೀಯ ಮುಸ್ಲಿಂ ಮಹಿಳಾ ಆಂದೊಲನ್…

ಈ ಸಂಸ್ಥೆ ನಡೆಸಿರುವ ಸಮೀಕ್ಷೆ ತುಂಬಾ ಆಸಕ್ತಿಕರವಾದ ಅಂಶಗಳನ್ನು ಎತ್ತಿ ಹಿಡಿದಿದೆ.

•    ಶೇ. 92 ರ ಷ್ಟು ಭಾರತೀಯ ಮಹಿಳೆಯರು ಮೌಖಿಕ ತಲಾಖ್ ರದ್ದತಿ ಬಯಸುತ್ತಿದ್ದಾರೆ.

•    ಶೇ. 50. ಕ್ಕೂ ಹೆಚ್ಚು ಮಹಿಳೆಯರು 18 ತುಂಬುವ ಮೊದಲೇ ನಿಖಾಹ್‍ಕ್ಕೊಳಗಾಗುತ್ತಾರೆ ಮತ್ತು ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರೇ ಆಗಿದ್ದಾರೆ.

•    ಷರಿಯಾ ಅದಾಲತ್ ಗೆ ಬರುವ ಶೇ.80 ಕೇಸುಗಳ ಮೌಖಿಕ ತಲ್ಲಾಖ್‍ಗೆ ಸಂಬಂಧಿಸಿರುತ್ತವೆ.(2014 ರ ಮಾಹಿತಿ)

•    ಶೇ.97 ರ ಷ್ಟು ಮಹಿಳೆಯರು ತಮ್ಮ ಗಂಡನ ಎರಡನೆ ಮದುವೆಯನ್ನು ಸುತಾರಾಂ ಒಪ್ಪುವುದಿಲ್ಲ.

•    ಸಮೀಕ್ಷೆಯ ಶೇ.83. ರಷ್ಟು ಮಹಿಳೆಯರಿಗೆ ಯಾವುದೇ ಸ್ವತ: ಆದಾಯವಿಲ್ಲ. ಹೆಚ್ಚಿನವರು ಗೃಹಿಣಿಯರು.

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post