X

‘ಜಲಪಾತಗಳ ತೊಟ್ಟಿಲು’ ಉತ್ತರ ಕನ್ನಡ

ಜಲಪಾತಗಳ ತೊಟ್ಟಿಲು’ ಎಂದೇ ಹೆಸರುವಾಸಿಯಾದ ‘ಉತ್ತರ ಕನ್ನಡ’ ಜಿಲ್ಲೆ, ತನ್ನ ಮಡಿಲಿನೊಳಗೆ ಜಲಪಾತಗಳ ಸಮೂಹವನ್ನೆ ತನ್ನದಾಗಿಸಿಕೊಂಡಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯದ ಜೊತೆ ಜೊತೆಗೆ ಹಾಲಿನ ಹೊಳೆಯಂತೆ ರಭಸವಾಗಿ ಧುಮ್ಮಿಕ್ಕುವ  ಜಲಪಾತದ ಸೌಂದರ್ಯ ರಮ್ಯ ರಮಣೀಯ. ‘ಉತ್ತರ ಕನ್ನಡ’ದಲ್ಲಿ ಅಪರೂಪ ಹಾಗೂ ಜನಸಾಮಾನ್ಯರಿಗೆ ವಿರಳವಾಗಿ ಪರಿಚಿತವಿರುವ ಜಲಪಾತಗಳ ಕುರಿತು ಮಾಹಿತಿ ಒದಗಿಸುವ ಕಿರು ಪ್ರಯತ್ನವಿದು .

 ) ಬೆಣ್ಣೆಹೊಳೆ

ಬೆಣ್ಣೆಯ ಬಣ್ಣದಂತೆ  ಬಿಳುಪಾಗಿ ಧುಮ್ಮಿಕ್ಕುವ ಈ ಜಲಪಾತ ‘ಸಿರಸಿ-ಕುಮುಟ’ ದಾರಿಯ ನಡುವಿನಲ್ಲಿದೆ. ಇಲ್ಲಿ ವಿಶೇಷವಾಗಿ  ಬಿಳಿಯ ನುಣುಪಾದ ಕಲ್ಲುಗಳು ಮತ್ತು ಜಲಪಾತದ ಅಂದವನ್ನು ಶಿರೋಭಾಗದಿಂದಲು ಹಾಗೂ ತುತ್ತತುದಿಯಿಂದಲೂ ನೋಡಬಹುದಾಗಿದೆ.

‘ಸಿರಸಿ’ಯಿಂದ  ‘ಕುಮುಟಾ’ಗೆ  ಹೋಗುವ ಮಾರ್ಗದಲ್ಲಿ ಸುಮಾರು ೨೧ ಕಿ.ಮೀ ಪ್ರಯಾಣಿಸಿದ ನಂತರ ‘ಕಸಗೆ’ ಹೆಸರಿನ ಸ್ಥಳ ಸಿಗುತ್ತದೆ. ’ಕಸಗೆ’ಯಿಂದ ‘ಬೆಣ್ಣೆಹೊಳೆ’ಗೆ  ಸುಮಾರು  ೬ ಕಿ.ಮೀ  ಪ್ರಯಾಣ . ಸುಮಾರು ೪ ಕಿ.ಮೀ ವಾಹನದಲ್ಲಿ ಸಂಚರಿಸಿದ ನಂತರ  ೨ ಕಿ.ಮೀ ಕಾಡುದಾರಿಯಲ್ಲಿ  ಕಾಲ್ನಡಿಗೆಯಲ್ಲಿ ಸಂಚರಿಸಿದರೆ‘ಬೆಣ್ಣೆಹೊಳೆ’ ಜಲಪಾತ ಎದುರಾಗುತ್ತದೆ.

ಜಲಪಾತವನ್ನು ತಲುಪುವ ಮಾರ್ಗದಲ್ಲಿ ಉಂಬುಳ,ಕಪ್ಪು ಇರುವೆ ,ಇನ್ನಿತರ ಅಪಾಯಕಾರಿ ಜಂತುಗಳು ಹಾಗೂ ದಟ್ಟಾರಣ್ಯ ಇರುವದರಿಂದ ಮುನ್ನೆಚರಿಕೆ ಇರುವುದು ಅವಶ್ಯಕ. ಭೇಟಿ ನೀಡಲು ಸೂಕ್ತ  ಸಮಯ ಅಕ್ಟೋಬರ್’ನಿಂದ ಮಾರ್ಚ್ವರಗೆ.ಮಳೆಗಾಲದ ಸಮಯ ಅಷ್ಟು ಸೂಕ್ತವಲ್ಲ.

)ವಿಭೂತಿ ಜಲಪಾತ

ಅಷ್ಟೇನೂ  ಜನಪರಿಚಿತವಿಲ್ಲದ ಸುಂದರವಾದ ಈ ಜಲಪಾತ ಪ್ರಸಿದ್ಧ ‘ಯಾಣ’ ಪುಣ್ಯ ಕ್ಷೇತ್ರದಿಂದ ಸುಮಾರು ೯ ಕಿ.ಮೀ  ದೂರದಲ್ಲಿದೆ. ಅಷ್ಟೇನೂ ಜನಜಂಗುಳಿಯಿಂದ  ಕೂಡಿರದ ಜಲಪಾತದಲ್ಲಿ ನೀರಿನೊಂದಿಗೆ ಅಮೂಲ್ಯ ಸಮಯವನ್ನು ಕಳೆಯುವದರಲ್ಲಿ ಅನುಮಾನವಿಲ್ಲ.ಜಲಪಾತದಂಚಿನ ಕಡೆಗೆ ಹೋಗುವ ದಾರಿಯು ನುಣುಪಾದ ಬಂಡೆಕಲ್ಲುಗಳಿಂದ ಆವರಿಸಿರುವುದರಿಂದ  ಅತ್ಯಂತ ಜಾಗರೂಕತೆಯಿಂದ ನಡೆಯುವುದು ಅವಶ್ಯ.

ವಿಭೂತಿ ಜಲಪಾತಕ್ಕೆ ಪ್ರಸಿದ್ಧ ‘ಯಾಣ’ ಕ್ಷೇತ್ರದಿಂದ ೯ ಕಿ.ಮೀ ಪ್ರಯಾಣ.’ವಡ್ಡಿ ಘಾಟ್’ ನ್ನು ದಾಟಿದ ನಂತರ ‘ಮಾಬಗಿ’ ಎಂಬ ಗ್ರಾಮ ಸಿಗುತ್ತದೆ. ‘ಮಾಬಗಿ’ಯಿಂದ  ಜಲಪಾತಕ್ಕೆ ಸುಮಾರು ೩ ಕಿ.ಮೀ ಪ್ರಯಾಣ ಮಾಡಬೇಕು.ಸುಮಾರು ೧ ಕಿ. ಮೀ ಕಾಲ್ನಡಿಗೆಯಲ್ಲಿ ಸಾಗಿದರೆ ಸುಂದರ ‘ವಿಭೂತಿ’ಜಲಪಾತ ಸಿಗುತ್ತದೆ. ‘ ‘ಅಂಕೋಲಾ’ದಿಂದ ಕೂಡಾ ವಿಭೂತಿ’ ಜಲಪಾತವನ್ನು ತಲುಪಲು ಮಾರ್ಗವಿದೆ.

)ಉಂಚಳ್ಳಿ ಜಲಪಾತ

ಹಾಲಿನ ಹೊಳೆ ಎ೦ಬ೦ತೆ ಭಾಸವಾಗುವ ಈ ಜಲಪಾತ ೧೧೬ ಸೆಂ. ಮೀ ಎತ್ತರದಿಂದ ಧುಮ್ಮಿಕ್ಕಿ‘ಅಘನಾಶಿ’ನಿ ನದಿಯನ್ನು ಸೇರುತ್ತದೆ . ‘ಕೆಪ್ಪುಜೋಗ’ಎಂದು ಪ್ರಸಿದ್ಧವಾಗಿರುವ ಈ  ಜಲಪಾತದ ಸೌಂದರ್ಯವನ್ನು ಕಾಣಲು ಮೆಟ್ಟಿಲುಗಳ ವ್ಯವಸ್ಥೆಯನ್ನು ಕಲ್ಪಿಸಿದ್ದು ಪ್ರವಾಸಿಗರಿಗೆ ಅನುಕೂಲವಾಗಿದೆ . ಮೆಟ್ಟಿಲುಗಳ ವ್ಯವಸ್ಥೆ ಇರುವದರಿಂದ ಮಳೆಗಾಲದಲ್ಲಿ ಭೇಟಿಯನ್ನು ನೀಡಬಹುದಾಗಿದೆ ಆದರೆ  ನೀರಿನೊಂದಿಗೆ  ಆಡಲು ಆಸಕ್ತಿ ಇರುವವರು ಅಕ್ಟೋಬರ್’ನಿಂದ ಮಾರ್ಚ್’ವರೆಗೆ ಭೇಟಿ ನೀಡಿದರೆ ಸೂಕ್ತವಾದದ್ದು .ಜಲಪಾತದಂಚಿಗೆ ತಲುಪಲು  ದಟ್ಟ ಅರಣ್ಯದಲ್ಲಿ ಸುಮಾರು ೩ ಕಿ.ಮೀ ನಡೆಯುವುದು ಅವಶ್ಯಕ .ಮಾರ್ಗದರ್ಶಕರ ಜೊತೆ ಹೋದರೆ ಒಳ್ಳೆಯದು ಹಾಗೂ ಸೂಕ್ತವಾದದ್ದು  ಕೂಡಾ.

‘ಸಿರಸಿ’ಯಿಂದ ಕುಮುಟಾಗೆ ಹೋಗುವ ಮಾರ್ಗದಲ್ಲಿ ಸುಮಾರು ೧೨ ಕಿ.ಮೀ ನಂತರ  ‘ಅಮ್ಮಿನಳ್ಳಿ’  ಎಂಬ ಊರು ಸಿಗುತ್ತದೆ.  ಅಲ್ಲಿಂದ ಸುಮಾರು ೧೮ ಕಿ.ಮೀ ಪ್ರಯಾಣಿಸಿದರೆ ‘ಹೆಗ್ಗರಣಿ’ ಬಸ್ಸು ತಂಗುದಾಣ ಸಿಗುತ್ತದೆ. ಅಲ್ಲಿಂದ ಸುಮಾರು ೬ ಕಿ.ಮೀ ಹೋದರೆ‘ಉಂಚಳ್ಳಿ’ ಜಲಪಾತವನ್ನು ತಲುಪಬಹುದಾಗಿದೆ.

 

ಭೀಮನ ಗುಡ್ಡ

‘ಭೀಮನ ಗುಡ್ಡ’ ಉಂಚಳ್ಳಿ ಜಲಪಾತದ ವೀಕ್ಷಣೆಯ ನಂತರ ನೋಡಲೇಬೇಕಾದಂತಹ ಇನ್ನೊಂದು ಪ್ರೇಕ್ಷಣಿಯ ಸ್ಥಳ. ಜನರು ಸೂರ್ಯಾಸ್ತದ ಅಂದವನ್ನು ಕಣ್ತುಂಬಿಸಿಕೊಳ್ಳಲು ಈ ಜಾಗಕ್ಕೆ ಭೇಟಿ ನಿಡುತ್ತಾರೆ. ‘ಭೀಮನ ಗುಡ್ಡ’ ಸಮುದ್ರದಿಂದ ಸುಮಾರು

೬೩೬ ಮೀ ಎತ್ತರದಲ್ಲಿದೆ.ಇಲ್ಲಿಂದ ‘ಸಹ್ಯಾದ್ರಿ’ಯ ಹಸಿರಿನ ಸೌಂದರ್ಯ ಹಾಗು ಕಣಿವೆಯಲ್ಲಿ‘ಅಘನಾಶಿನಿ’ಯ ಹರಿವಿಕೆಯು ಬಹಳ ಸೊಗಸಾಗಿ ಕಾಣಿಸುತ್ತದೆ.

‘ಅಮ್ಮಿನಳ್ಳಿ’ಯಿಂದ ಹೆಗ್ಗರಣಿಗೆ ಹೋಗುವ ಮಾರ್ಗದಲ್ಲಿ ನಿಲ್ಕುಂದ ಎಂಬ ಗ್ರಾಮ ಸಿಗುತ್ತದೆ.ನಿಲ್ಕುಂದದಿಂದ  ಭೀಮನ ಗುಡ್ಡಕ್ಕೆ ೩ ಕಿ.ಮೀ ಪ್ರಯಾಣ. ಸೂರ್ಯಾಸ್ತ ವೀಕ್ಷಣೆಗೆ ಜನಪ್ರಿಯವಾಗಿರುವದರಿಂದ ಮುಸ್ಸಂಜೆಯ ಸಮಯ ಸೂಕ್ತವಾದದ್ದು. ಉಂಚಳ್ಳಿ ಜಲಪಾತದ ಅಂದವನ್ನು ಸವಿದ ನಂತರ ಮರಳಿ ಬರುವಾಗ ಭೀಮನ ಗುಡ್ಡಕ್ಕೆ ಭೇಟಿ ಕೊಟ್ಟರೆ ಜಲಧಾರೆಯ ಹಾಗೂ ಪ್ರಕೃತಿಯ ಅಂದವು ಮನಸ್ಸಿಗೆ ಮುದ ನಿಡುವದರಲ್ಲಿ ಯಾವುದೇ ಸಂಶಯವಿಲ್ಲ.

 

) ಮತ್ತೀಘಟ್ಟ ಜಲಪಾತ

‘ಸಿರಸಿ’ಯಿಂದ ಸಮೀಪವಾಗಿರುವ ಈ ಜಲಪಾತ ಪ್ರಚಾರದ ಕೊರತೆಯಿಂದ ಎಲೆಮರ ಕಾಯಿಯಂತಿದೆ . ಚಾರಣಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ . ‘ಸಹ್ಯಾದ್ರಿ’ಯ ತಪ್ಪಲಿನಲ್ಲಿ ಜಲಪಾತವಿರುವದರಿಂದ ಹಸಿರಿನ ಸೌಂದರ್ಯ ಹಾಗೂ ತರತರಹದ  ಪಕ್ಷಿ ವೀಕ್ಷಣೆ ಕಣ್ಣಿಗೆ ಮುದನೀಡುತ್ತದೆ.

‘ಸಿರಸಿ’ಯಿಂದ ಸುಮಾರು ೩೦ ಕಿ.ಮೀ ಪ್ರಯಾಣ.‘ಸಿರಸಿ’ಯಿಂದ ‘ಹೆಗಡೆಕಟ್ಟಾ’ ತಲುಪಲು  ಸುಮಾರು ೧೬ ಕಿ.ಮೀ ಪ್ರಯಾಣಿಸಬೇಕು  ಅಲ್ಲಿಂದ ೭  ಕಿ.ಮೀ ಹೋದರೆ  ‘ದೇವನಹಳ್ಳಿ’ ಗ್ರಾಮ ಸಿಗುತ್ತದೆ. ‘ದೇವನಳ್ಳಿ’ಯಿಂದ ನಂತರ ‘ಮತ್ತೀಘಟ್ಟ’ ಗ್ರಾಮಕ್ಕೆ ಹೋಗಬೇಕು. ‘ಮತ್ತೀಘಟ್ಟ’ದಲ್ಲಿ  ‘ಕೆಳಗಿನಕೇರಿ’ಎಂಬಲ್ಲಿಂದ ಸುಮಾರು ೩  ಕಿ.ಮೀ ಪ್ರಯಾಣಿಸಿದರೆ ಜಲಪಾತವನ್ನು ತಲುಪಬಹುದು.

– ಪ್ರಜ್ಞಾ ಆರ್

prajna.ramachandrabhat@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post