X

ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ.

‘ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ’ ಸಂದರ್ಶನವೊಂದರಲ್ಲಿ ಒಬ್ಬ ಕ್ಯಾನ್ಸರ್ ಸರ್ವೈವರ್ ಹೇಳಿದ ಮಾತಿದು. ಈ ವಾಕ್ಯ ಕೇಳುವುದಕ್ಕೆ ಎಷ್ಟು ಸುಲಭ ಎನಿಸುವುದೋ ನಿಜವಾಗಿಯೂ ಅಷ್ಟು ಸುಲಭವಾಗಿ ಇರುವುದಿಲ್ಲ. ಈ ಘಟ್ಟ ತಲುಪುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಕ್ಯಾನ್ಸರ್ ನಂತರವೂ ಸಾಕಷ್ಟು ಸವಾಲುಗಳನ್ನ ಎದುರಿಸಿದ ನಂತರವೇ ಈ ಘಟ್ಟವನ್ನು ತಲುಪುವುದು.

   ಸಾಮಾನ್ಯವಾಗಿ ಕ್ಯಾನ್ಸರ್ ಮುಗಿದ ನಂತರ ಎಲ್ಲವೂ ಸರಿಯಾಯಿತು ಎಂದು ಎಲ್ಲಾ ಅಂದುಕೊಂಡಿರುತ್ತಾರೆ. ಆದರೆ ಅದು ನಿಜವಲ್ಲ. ಇಲ್ಲಿ ಇನ್ನೊಂದಿಷ್ಟು ಹೊಸ ಸವಾಲುಗಳಿರುತ್ತದೆ.  ಇಡೀ ಜಗತ್ತು ಮುನ್ನಡೆದು ಬಿಟ್ಟಿರುತ್ತದೆ. ನಾವು ಮಾತ್ರ  ನಿಂತು ಹೋಗಿದ್ದ ಬದುಕನ್ನ ಪುನಃ ಆರಂಭಿಸುವ ಪ್ರಯತ್ನದಲ್ಲಿರುತ್ತೇವೆ. ಹೇಗೆ ಶುರು ಮಾಡಬೇಕು? ಎಲ್ಲಿಂದ? ಯಾವುದಕ್ಕೆ ಗಮನ ಹರಿಸಬೇಕು? ಎಂಬಂತಹ ನೂರು ಪ್ರಶ್ನೆ. ಅದರ ಜೊತೆಗೆ ಇಲ್ಲ ಸಲ್ಲದ ಯೋಚನೆಗಳು. ಕಳೆದು ಹೋದ ದಿನಗಳು ಆ ನೆನಪುಗಳು ಇನ್ನೂ ಬೆನ್ನು ಬಿಟ್ಟಿರುವುದಿಲ್ಲ. ಭವಿಷ್ಯ ಹೇಗೋ ಎಂಬ ಭಯ. ಇದೆಲ್ಲದರ ಜೊತೆ ಇನ್ನೊಂದು ದೊಡ್ಡ ಸವಾಲು ನಮಗೆ ಎದುರಾಗುವುದು ಜನರನ್ನು ಎದುರಿಸುವುದು. ನಮ್ಮ ಸೊಶಿಯಲ್ ಲೈಫ್’ನ್ನ ಮತ್ತೆ ಆರಂಭಿಸುವುದು!!

ಕ್ಯಾನ್ಸರ್’ನ ನಂತರದ ಒಂದು ಘಟ್ಟ ಇದೆಯಲ್ಲ ಅಲ್ಲಿ ನಾವೇನಾಗಿದ್ದೇವೆ ಎಂದು ನಮಗೇ ಅರ್ಥವಾಗುತ್ತಿರುವುದಿಲ್ಲ. ಚಿಕಿತ್ಸೆ ಎಲ್ಲಾ ಮುಗಿಯುತ್ತೆ; ಡಾಕ್ಟರ್ ನಮ್ಮ ಸೆಲ್ ನೆಕ್ರೊಸಿಸ್ ರಿಪೋರ್ಟ್ ತೋರಿಸಿ ‘ನೀವಿನ್ನು ಕ್ಯಾನ್ಸರ್ ಮುಕ್ತ’ ಎಂದು ಬಿಡುತ್ತಾರೆ. ನಾವೂ ಕೂಡ ನೆಮ್ಮದಿಯ ನಿಟ್ಟುಸಿರು ಬಿಡುತ್ತೇವೆ ‘ಇನ್ನು ನಾನು ಕ್ಯಾನ್ಸರ್ ರೋಗಿ ಅಲ್ಲಪ್ಪಾ’ ಎಂದು. ಹಾಗಾದರೆ ನಾವೀಗ ಎಲ್ಲರಂತೆ ನಾರ್ಮಲ್ ಆಗಿದ್ದೀವಾ? ಉಹುಂ.. ಇಲ್ಲ. ಕೀಮೋ ಸೈಡ್ ಎಫೆಕ್ಟ್’ನಿಂದ ಸಾಕಷ್ಟು ಬದಲಾವಣೆಗಳಾಗಿರುತ್ತದೆ; ಅದಿನ್ನೂ ಸರಿ ಹೋಗಿರುವುದಿಲ್ಲ.  ಕ್ಯಾನ್ಸರ್’ನ್ನು ಸಂಪೂರ್ಣವಾಗಿ ತೆಗೆದು ಹಾಕಲು ಕೆಲವೊಮ್ಮೆ ದೈಹಿಕವಾಗಿ ಶಾಶ್ವತ ಬದಲಾವಣೆಗಳುಂಟಾಗುತ್ತದೆ. ಅದಕ್ಕೆ ನಾವಿನ್ನು ಹೊಂದಿಕೊಂಡಿರುವುದಿಲ್ಲ. ತುಂಬಾ ನಿರ್ಬಲರಾಗಿರುತ್ತೇವೆ. ರೋಗಿ ಅಲ್ಲದಿದ್ದರೂ ಈ ಎಲ್ಲ ಕಾರಣಗಳಿಗೆ ಆ ‘ರೋಗಿ’ ಎನ್ನುವ ಫೀಲ್ ಇನ್ನೂ ಹೋಗಿರುವುದಿಲ್ಲ. ನಮಗೇ ಅರ್ಥವಾಗುವುದಿಲ್ಲ ನಾವೀಗ ಏನಾಗಿದ್ದೇವೆ ಅಂತ. ಸರಿ.. ನಾವು ಅದರಿಂದ ಹೊರಗೆ ಬಂದೆವು ಅಂತಾನೇ ಇಟ್ಟುಕೊಳ್ಳೋಣ ನಮ್ಮ ಸುತ್ತಮುತ್ತಲಿನ ಜನ ಇನ್ನೂ ಅದೇ ಗುಂಗಿನಲ್ಲಿರುತ್ತಾರೆ. ನೀವು ಅದರಿಂದ ಹೊರ ಬಂದರೂ ಜನ ನಿಮ್ಮನ್ನು ರೋಗಿಯಂತೆಯೇ ನೋಡುತ್ತಾರೆ.

    ಶಾನ್’ನ ಬದುಕಿನ ಒಂದು ಘಟನೆ ಹಾಗೇ ಇದೆ. ಶಾನ್ ಕ್ಯಾನ್ಸರ್’ನಿಂದ ಗುಣಮುಖನಾದ ನಂತರ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಆಗ ಅಲ್ಲಿ ನೆರೆದಿದ್ದ ಹಲವಾರು ಜನ ಇವನೆಡೆ ಬೊಟ್ಟು ಮಾಡಿ “ ಆ ಹುಡುಗ ಥೇಟ್ ಶಾನ್’ನಂತೆಯೇ ಕಾಣುತ್ತಾನೆ ಅಲ್ಲವೇ..?!” ಎನ್ನುತ್ತಿದ್ದರಂತೆ. ಯಾಕೆಂದರೆ ಅವರೆಲ್ಲಾ ಅದಾಗಲೇ ಶಾನ್ ಇನ್ನಿಲ್ಲ ಅಂತ ನಿರ್ಧರಿಸಿಯಾಗಿತ್ತು. ಈ ತರಹದ ಜನರನ್ನ ಎದುರಿಸುತ್ತಿರಲೇ ಬೇಕಾಗುತ್ತದೆ. ಕೆಲವೊಮ್ಮೆ ನಾವು ಹೀಗೆ ನಮ್ಮ ಬದುಕಲ್ಲಾದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವ ಸಂದರ್ಭಗಳಲ್ಲಿ ಕೆಲ ಜನರು ಎಷ್ಟು ಕ್ರೂರವಾಗಿ ವರ್ತಿಸಿಬಿಡುತ್ತಾರೆಂದರೆ ನಮ್ಮನ್ನೂ ಸೇರಿಸಿ ಜಗತ್ತಿನಲ್ಲಿರುವ ಪ್ರತಿ ಮನುಷ್ಯನನ್ನೂ ದ್ವೇಷಿಸುವಷ್ಟು ಕೋಪ ಬಂದು ಬಿಟ್ಟಿರುತ್ತದೆ. ಆದರೆ ತಾಳ್ಮೆ ಅನ್ನುವುದು ಕೆಲಸ ಮಾಡಬೇಕಾಗುವುದು ಇಂತಹ ಸಂದರ್ಭಗಳಲ್ಲಿಯೇ..!!!

      ಸ್ವಲ್ಪ ಚೇತರಿಸಿಕೊಂಡ ನಂತರ ನಾವಿನ್ನು ನಮ್ಮ ಸೋಶಿಯಲ್ ಲೈಫ್’ನ್ನು ಆರಂಭಿಸುವ ಹಂತ. ಎಷ್ಟು ದಿನ ಅಂತ ಮನೆಯಲ್ಲೇ ಇರೋದಿಕ್ಕೆ ಸಾಧ್ಯ. ಒಂದಲ್ಲ ಒಂದು ದಿನ ಹೊರಗೆ ಹೊರಡಲೇ ಬೇಕು. ನಾಲ್ಕಾರು ಜನ ಸೇರಿದಲ್ಲಿ ಹೋಗೋಕೆ ಅರಂಭಿಸುತ್ತೇವೆ. ಸಮಾರಂಭಗಳಿಗೆ ಹೋಗೋಕೆ ಶುರು ಮಾಡುತ್ತೀವಿ. ಅಲ್ಲಿರುವ ಜನರು ಎಲ್ಲೋ ಯಾರಿಂದಲೋ ನಮ್ಮ ಬಗ್ಗೆ ಕೇಳಿರುತ್ತಾರೆ. ಈಗ ನಾವೇ ಹೋಗಿ ಅವರ ಮುಂದೆ ನಿಂತು ಬಿಟ್ಟಿರುತ್ತೀವಿ. ಎಲ್ಲರೂ ನಮ್ಮನ್ನೇ ನೋಡುವವರು ನಮ್ಮ ಬಗ್ಗೆಯೇ ಮಾತನಾಡುವವರು. ಕೆಲವೊಮ್ಮೆ ನಿಮ್ಮ ಸುತ್ತ ನಿಂತು ಎಲ್ಲರೂ ನಿಮ್ಮನ್ನೇ ಮಾತನಾಡಿಸಲು ಆರಂಭಿಸಿಬಿಡುತ್ತಾರೆ. ‘ಈಗೇನು ಮಾಡುತ್ತಿದ್ದೀಯ’ ಎನ್ನುತ್ತಾರೆ; ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನ ವಿವರಿಸುವುದು ತುಂಬಾ ಕಷ್ಟ. ಮುಂದೇನು? ಎನ್ನುತ್ತಾರೆ. ಈ ಪ್ರಶ್ನೆಗೆ ಉತ್ತರ ನಮಗೇ ಗೊತ್ತಿರುವುದಿಲ್ಲ. ಇದನ್ನೆಲ್ಲಾ ನೋಡಿದಾಗ ಅಲ್ಲಿಂದ ಓಡಿ ಹೋದರೆ ಸಾಕು ಎನಿಸುತ್ತಿರುತ್ತದೆ. ಹೀಗೆ ಜನಗಳ ಮಧ್ಯೆ ಇರೋದಕ್ಕಿಂತ  ಒಬ್ಬರೇ ಇರೋದು ವಾಸಿ ಎನಿಸುತ್ತದೆ. ಆದರೆ ನಾವದನ್ನ ಮಾಡಲೇಬೇಕು. ಹೊಸ ಬದುಕನ್ನು ಆರಂಭಿಸುವಾಗ ಇಂತಹ ಹೆಜ್ಜೆಗಳನ್ನ ಇಡಲೇಬೇಕಾಗುತ್ತದೆ. ಇದೆಲ್ಲ ಸಹಜವೂ ಹೌದು.

       ಇಂತಹ ಘಟ್ಟಗಳಲ್ಲಿ ನಮಗೆ ಬೇಕಾಗುವುದು ‘ಇಟ್ಸ್ ಓಕೆ’ ಎನ್ನುವಂತಹ ವರ್ತನೆಗಳು. It is okay to be a survivor ಎಂಬಂತಹ ವಾತಾವರಣವನ್ನು ಅಪೇಕ್ಷಿಸುತ್ತಿರುತ್ತೇವೆ. ಆದರೆ ಎಲ್ಲರೂ ಅಂತಹ ವಾತಾವರಣವನ್ನು ಕಲ್ಪಿಸಿಕೊಡುವುದಿಲ್ಲ. ಸುಮಾರು ೮೦% ಜನರು ನಮ್ಮನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ತಮಗೆ ತಿಳಿದಂತೆ ಸಾಂತ್ವಾನ ನೀಡಿ ಧೈರ್ಯ ತುಂಬಿ; ಭವಿಷ್ಯ ಸುಂದರವಾಗುವ ಸಾಧ್ಯತೆಗಳಿವೆ ಎಂಬ ಭರವಸೆ ತುಂಬುತ್ತಾರೆ. ಆದರೆ ೨೦% ಜನರ ಅಸಂಬದ್ಧ ವರ್ತನೆ ಮಾತ್ರ ಅದೆಲ್ಲವನ್ನು ಹಾಳುಗೆಡವಿರುತ್ತದೆ. ಅದೆಲ್ಲದರ ನಡುವೆಯೂ ಬದುಕು ಮುಂದೆ ಸಾಗಲೇಬೇಕು!!

      ಕೆಲ ಸಮಯದ ನಂತರ ಬದುಕು ನಿಧಾನವಾಗಿ ಒಂದು ಸ್ಥಿತಿಗೆ ಬರುತ್ತಿದೆ ಎನಿಸಲು ಶುರುವಾಗುತ್ತದೆ. ನಮ್ಮನ್ನ ನಾವು ಸರ್ವೈವರ್ ಎಂದುಕೊಳ್ಳುವ ಮಟ್ಟಕ್ಕೆ ನಾವು ಬರುತ್ತೇವೆ. ಏನೋ ಒಂದು ರೀತಿಯ ತೃಪ್ತಿ ಸಿಗಲು ಆರಂಭವಾಗುತ್ತದೆ. ಆಸುಪಾಸಿನ ಜನರಿಗೆ ನಮ್ಮ ವಿಷಯ ಹಳೆಯದಾಗಿ ಅನೇಕ ಹೊಸ ಹೊಸ ವಿಚಾರ ಸಿಕ್ಕಿ ಬ್ಯುಸಿಯಾಗಿ ಬಿಟ್ಟಿರುತ್ತಾರೆ. ಅಲ್ಲಿಗೆ ನಮಗೆ ಒಂದು ರೀತಿಯ ನೆಮ್ಮದಿ. ಹೊಸ ಹೊಸ ಪರಿಚಯಗಳಾಗಲು ಆರಂಭವಾಗುತ್ತದೆ. ಅವರು ನಮ್ಮ ಬದುಕಿನ ಬಗ್ಗೆ ಕೇಳಿದಾಗ ನಾವು ನಮ್ಮನ್ನ ‘ಕ್ಯಾನ್ಸರ್ ಸರ್ವೈವರ್’ ಎಂದು ಹೇಳಿಕೊಳ್ಳಲು ಯಾವುದೇ ಮುಜುಗರಪಟ್ಟುಕೊಳ್ಳುವುದಿಲ್ಲ. ಆದರೆ ಅವರು ನಮ್ಮನ್ನ ಹೇಗೆ ಸ್ವೀಕರಿಸುತ್ತಾರೆ..??!!  ಮೊದಲು ನನ್ನ ತಾಯಿಗೆ ಈ ಬಗ್ಗೆ ಆಕ್ಷೇಪಣೆ ಇತ್ತು. “ಎಲ್ಲರಿಗೂ ಅದನ್ನು ಹೇಳುವ ಅವಶ್ಯಕತೆ ಇರುವುದಿಲ್ಲ” ಎಂದಿದ್ದರು. “ನಾನು ಇಡೀ ಪ್ರಪಂಚಕ್ಕೂ ಹೇಳುತ್ತೀನಿ” ಎಂದು ವಾದಿಸಿದ್ದೆ. ಅಮ್ಮನಿಗೆ ಯಾವಾಗಲೂ ಜನ ಅದನ್ನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಆದರೆ ನಮಗೆ ಜನಕ್ಕಿಂತ ನಮ್ಮನ್ನ ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಮುಖ್ಯವಾಗಬೇಕು. ಕ್ಯಾನ್ಸರ್ ಮುಜುಗರ ಪಟ್ಟುಕೊಳ್ಳುವಂತಹ ವಿಷಯವಂತೂ ಖಂಡಿತ ಅಲ್ಲ. ಹಾಂ.. ಕ್ಯಾನ್ಸರ್ ಎನ್ನುವುದು ಭಯ ಹುಟ್ಟಿಸುವಂತದ್ದು ನಿಜ. ನಮಗೆ ಮೊದಲು ಕ್ಯಾನ್ಸರ್ ಎಂದಾಕ್ಷಣ ಅದನ್ನ ಸ್ವೀಕರಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ಆದರೆ ಜನ ನಮ್ಮನ್ನ ಯಾವ ರೀತಿ ನೋಡುತ್ತಾರೆ; ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವಂತಹ ಗೊಂದಲ ಹುಟ್ಟುವಂತಹ ವಾತಾವರಣ ಯಾಕಿದೆಯೋ ಇನ್ನೂ ಅರ್ಥವಾಗಿಲ್ಲ. ಬೇರೆ ದೇಶಗಳಲ್ಲಿ ಅಷ್ಟೊಂದಿಲ್ಲ. ಆದರೆ ನಮ್ಮಲ್ಲಿ ಮೊದಲಿನಷ್ಟು ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಈಗಲೂ ಇದೆ.

   ಕೆಲಕಾಲದ ಹಿಂದೆ ಪರಿಚಯದವರೊಬ್ಬರ ಮನೆಗೆ ಹೋದಾಗಿನ ಘಟನೆ. ಎಲ್ಲರಿಗೂ ಕೆಳಗೆ ಕೂರಲು ಮಣೆ ಹಾಕಿದ್ದರು. ನನಗೆ ಮಾತ್ರ ಖುರ್ಚಿ ಕೊಟ್ಟಿದ್ದರು. ಆಗ ಅವರ ಮನೆಯ ಹಿರಿಯರೊಬ್ಬರು “ನೀನ್ಯಾಕೆ ಕೆಳಗೆ ಕೂರಲಿಲ್ಲ? ಏನಾಗಿದೆ” ಎಂದು ಪ್ರಶ್ನಿಸಿದರು. ಆದರೆ ನಾನು ಉತ್ತರ ಕೊಡುವುದಕ್ಕೂ ಮೊದಲೆ ಪರಿಚಯದವರು ಏನೋ ಒಂದು ಸಬೂಬು ಹೇಳಿ ಸುಮ್ಮನಾದರು. ನನಗೆ ಮುಜುಗರವಾಗಬಹುದು ಎಂದು ಹಾಗೆ ಮಾಡಿರಬಹುದು ಅಂತ ಒಮ್ಮೆ ಯೊಚಿಸಿದರೂ. ನಾನು ಯಾವುದೇ ಅಳುಕಿಲ್ಲದೆ ನನ್ನ ಉತ್ತರ ಕೊಡಲು ತಯಾರಿದ್ದಾಗಲೂ ನನ್ನನ್ನ ತಡೆದದ್ದು ಆಶ್ಚರ್ಯವೆನಿಸಿತ್ತು…! ಈ ರೀತಿಯ ಕೆಲ ಪರಿಸ್ಥಿತಿಗಳು ಆಗಾಗ ನಿರ್ಮಾಣವಾಗುತ್ತಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ಹೇಳಬೇಕೋ ಬೇಡವೋ ಎಂಬಂತಹ ಗೊಂದಲದ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತಾರೆ ಕೆಲವರು. ನಮ್ಮನ್ನ ನಾವು ‘ಕ್ಯಾನ್ಸರ್ ಸರ್ವೈವರ್’ ಎಂದು ಹೇಳಿಕೊಳ್ಳುವಷ್ಟು ಆತ್ಮವಿಶ್ವಾಸ ಬೆಳೆದ ನಂತರವೂ  ಕೆಲ ಜನರಿಂದ ಆ ಮುಕ್ತತೆ ಸಿಗುವುದಿಲ್ಲ..

   ಹೆಮ್ಮೆ ಎನ್ನುವ ಘಟ್ಟ ತಲುಪುವುದು ಸಾಕಷ್ಟು ಸಮಯ ಕಳೆದ ನಂತರವೇ. ಕ್ಯಾನ್ಸರ್’ನ ನಂತರ ಹಂತ ಹಂತವಾಗಿ ಹಲವು ಸವಾಲುಗಳನ್ನ ದಾಟಿದ ಮೇಲೆಯೇ ಹೆಮ್ಮೆಯ ಅನುಭವವಾಗುವುದು. ಅದೆಲ್ಲವನ್ನೂ ದಾಟಿ ಬದುಕಿನ ಬಗ್ಗೆ ಪ್ರೀತಿ ಉಂಟಾದಾಗ; ನಮ್ಮನ್ನ ನಾವೇ ಪ್ರೀತಿಸಿಕೊಳ್ಳುವಂತಾದಾಗ; ನಾವು ನಮ್ಮ ಫೇವರೇಟ್ ಆದಾಗ ಹೆಮ್ಮೆಯ ಅನುಭವವಾಗುವುದು. ಜನ ತಮ್ಮ ಬದುಕನ್ನ ಗಣಿತದ ಸಮಸ್ಯೆಯ ರೀತಿ ಪರಿಗಣಿಸಿ ಕ್ಯಾಲುಕ್ಯುಲೇಟೆಡ್ ಆಗಿ ಬದುಕುತ್ತಿರುವಾಗ ನಾವು ಅವರಿಗಿಂತ ಭಿನ್ನವಾಗಿ ಬದುಕಿನ ಪ್ರತಿದಿನ ಆಸ್ವಾದಿಸುವಾಗ ಹೆಮ್ಮೆ ಎನಿಸುತ್ತದೆ. ಕ್ಯಾನ್ಸರ್ ಇಷ್ಟೆಲ್ಲಾ ನೋವುಗಳನ್ನ ಕೊಟ್ಟ ನಂತರವೂ ಬದುಕುವುದನ್ನು ಕಲಿಸಿತಲ್ಲಾ ಎಂಬ ಅರಿವಾದಾಗ ಹೆಮ್ಮೆ ಎನಿಸುತ್ತದೆ. ನಿಜ ನಾನೊಬ್ಬ ಕ್ಯಾನ್ಸರ್ ಸರ್ವೈವರ್. ನನಗದರ ಬಗ್ಗೆ ಹೆಮ್ಮೆ ಇದೆ…!!!

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post