X

ಚೀನಾ ಮತ್ತೊಂದು ಸುತ್ತಿನ ತಯಾರಿಯಲ್ಲಿದೆಯೇ..?

 ನಾವು ಕಳೆದ ಸ್ವತಂತ್ರೋತ್ಸವದ ಸಂಭ್ರಮದಲ್ಲಿದ್ದಾಗ ಅತ್ತ ನಮ್ಮ ಈಶಾನ್ಯ ರಾಜ್ಯದ ಸಿಕ್ಕಿಂ ಗಡಿಯಲ್ಲಿ ಸದ್ದಿಲ್ಲದೆ  ಟಿಬೆಟ್‍ನ ರಾಜಧಾನಿ ಲಾಸಾದಿಂದ ಶೀಗಾಛೆವರೆಗೆ, 131 ಶತಕೋಟಿ ವೆಚ್ಚದಲ್ಲಿ, 253 ಕಿ.ಮಿ. ಉದ್ದದ ರೈಲು ಸಂಪರ್ಕ ನಿರ್ಮಿಸಿಕೊಂಡು ಚೀನಾ ತನ್ನ ಮೊದಲ ವ್ಯಾಗನ್ ಓಡಿಸಿದೆ. ತೀರಾ ಕಳವಳಕಾರಿ ಎಂದ್ರೆ ಚೀನಾ ನಿರ್ಮಿಸಿರುವ ಈ ದಾರಿ ನಮ್ಮ ಸಿಕ್ಕಿಂ ರಾಜ್ಯದ ಗಡಿಗೆ ಹೊಂದಿಕೊಂಡಿದ್ದರೆ, ಆತ್ತ ಕಡೆಯಿಂದ ಸಂಚರಿಸಲಿರುವ ಆ ದಾರಿಯಲ್ಲಿ ಇರುವ ಒಟ್ಟಾರೆ ಜನಸಂಖ್ಯೆ ಎರಡು ಲಕ್ಷ ಕೂಡಾ ದಾಟುವುದಿಲ್ಲ. 253 ಕಿ.ಮೀ. ಉದ್ದದ ಹಳಿಯನ್ನು ಯಾವ ಸರಕಾರವೂ ಕೇವಲ ತನ್ನ ಎರಡೂ ಚಿಲ್ರೆ ಲಕ್ಷ ಜನ ಸಂಪರ್ಕಕ್ಕಾಗಿ ನಿರ್ಮಿಸುವುದಿಲ್ಲ ಎನ್ನುವುದೇ ಹುಬ್ಬೇರಿಸುವ ವಿಷಯ.

ಯಾವ ದೇಶವೂ ದಾರಿಯುದ್ದಕ್ಕೂ ಹಳ್ಳಿ ಹಳ್ಳಿಗಳಲ್ಲಿ ನೂರು ಸಾವಿರ ಎಂದಿರುವ ಲೆಕ್ಕದ ಜನಸಂಖ್ಯೆಗಾಗಿ ನೂರು ಚಿಲ್ರೆ ಶತಕೋಟಿ ಲೆಕ್ಕದಲ್ಲಿ ರೈಲು ನಿಲ್ದಾಣ ನಿರ್ಮಿಸಲಾರದು. ಅದೂ ಕೂಡಾ ಅಂತರಾಷ್ಟ್ರೀಯವಾಗಿ ವಿವಾದಾತ್ಮಕವಾಗಿರುವ ಪ್ರದೇಶದಲ್ಲಿ. ಆದರೆ ಚೀನಾ ಇಂತಹದ್ದೊಂದು ದಾರಿ ನಿರ್ಮಿಸಿದ್ದಲ್ಲದೆ ಸಧ್ಯದಲ್ಲೇ ಲಡಾಖ್‍ವರೆಗೂ ವಿಸ್ತರಿಸಲಿರುವ ಅದರ ರೈಲು ಜಾಲದಲ್ಲಿ ಸಂಪೂರ್ಣ ನಮ್ಮ ಈಶಾನ್ಯ ರಾಜ್ಯಗಳ ಗಡಿಯನ್ನು ಮತ್ತು ಸುಲಭವಾಗಿ ಲಡಾಕ್ ಸಂಪರ್ಕವನ್ನು ತಲುಪುವ ನೀಲ ನಕ್ಷೆ ಪೂರ್ಣಗೊಳಿಸಲು ಅದರ ಎದುರಿಗಿರುವ ಸಮಯ ಇನ್ನು ಕೇವಲ ಆರು ವರ್ಷ ಮಾತ್ರ ಬಾಕಿ ಇದೆ. ಕಾರಣ ಬರಲಿರುವ 2021 ಕ್ಕೆ ಚೀನಾ `ಧೋಗ್ಲಾ ಪೋಸ್ಟ್ ಕಾರ್ಯಾಚರಣೆ’ ಮಾಡಿ ತವಾಂಗ್‍ನ್ನು ವಶಪಡಿಸಿಕೊಂಡು ಸರಿಯಾಗಿ ಆರು ದಶಕ ಕಳೆದಿರುತ್ತದೆ. ಅಂದರೆ ಚೀನಾ ದೂರದೃಷ್ಠಿ ಏನಿರಬಹುದು..? ಹಿಂದೊಮ್ಮೆ ಹೀಗೆ ತವಾಂಗ್ ಮೇಲೆ ಹತ್ತಿ ಇಳಿದು ಕಿತ್ತು ಹೋದ ಬಿದಿರು ಸೇತುವೆಗಳನ್ನು ರಕ್ಷಿಸಿಕೊಳ್ಳಲು ಹೋದ ನಮ್ಮವರನ್ನು ಹುಳುಗಳಂತೆ ಹೊಸಕಿದರೂ, ಚೀನಿಯರಿಗೆ ನಿರೀಕ್ಷಿತ ನೆಲ ಮತ್ತು ಜಲದ ಗಡಿ ಎರಡೂ ದೊರಕಿಲ್ಲ. ಈ ಬಾರಿ ಹಾಗಾಗಲಾರದು ಮತ್ತು ಆಗಲೂಬಾರದು ಎನ್ನುವುದೇ ಅವರ ಉದ್ದೇಶವಿರಬಹುದು. ಅದಕ್ಕಾಗೇ ಅದು ಭದ್ರವಾಗಿರುವ ನಮ್ಮ ಬೇಲಿಯ ಗುಂಟ ರಾಕ್ಷಸ ಗಾತ್ರ ರೈಲು ದಾರಿ ಏಳೆದಿದೆ.

ಈಗ ಶೀಗಾಛೆವರೆಗೆ ಓಡುತ್ತಿರುವ ರೈಲಿನ ಉದ್ದೇಶ ಮಿಲಿಟರಿಗೆ ಅನುಕೂಲ ಬಿಟ್ಟರೆ ಬೇರೆನೂ ಇಲ್ಲವೇ ಇಲ್ಲ. ಕಾರಣ ಅದು ದಶಕಗಳ ಹಿಂದೆಯೂ (1965 ರ ಸುಮಾರಿಗೆ) ಚೀನಾ ಅತೀವ ಬಿರುಸಿನ ವಾತಾವರಣ ವೈಪರಿತ್ಯದಲ್ಲೂ ರಸ್ತೆ ನಿರ್ಮಿಸಿತ್ತಲ್ಲ ಆಗಲೂ ಅದಕ್ಕೆ ಕಾರಣಗಳೇ ಇರಲಿಲ್ಲ. ಈಗಲೂ ಶೀಗಾಛೆಯಿಂದ ಲಡಾಖ್ ಸಂಪರ್ಕ ಮಾತ್ರ ಬಾಕಿ. ಆಗ ಭಾರತದ ಮತ್ತು ಭೂತಾನ್ ಸೇರಿದಂತೆ ಅದರ ಅಷ್ಟೂ ಗಡಿಯುದ್ದಕ್ಕೂ ಸರಾಗವಾಗಿ ಕೇವಲ ನಾಲ್ಕು ಗಂಟೆಯಲ್ಲಿ ಬೇಕಾದ ಯುದ್ಧ ಸಾಮಗ್ರಿ ರಾಜಧಾನಿ ಕೇಂದ್ರದಿಂದ ರವಾನೆಯಾಗಬಲ್ಲದು. ಈಗಿನ ಶೀಗಾಛೆ ರೈಲು ಸಿಕ್ಕಿಂ ಗಡಿ ತಲುಪಲು ಸಹಾಯ ಮಾಡಿದರೆ, ಈಗಾಗಲೇ ನಿರ್ಮಿಸಿರುವ ಹೆದ್ದಾರಿ ಆ ಕಡೆಯ ಧೊಗ್ಲಾ ರಿಡ್ಜ್‍ವರೆಗೂ ಸುವಿಶಾಲವಾಗಿದೆ.

ಇನ್ನು ಕಾರಾ ಕೋರಮ್ ಹೈವೆಯ ಪಕ್ಕದಲ್ಲೇ ಚೀನಿಯರಿಗೆ ಸಲೀಸಾಗಿ ಚಲಿಸಲು ಈಗಾಗಲೇ ವಶಪಡಿಸಿಕೊಂಡಿರುವ ಸಿ.ಓ.ಕೆ ಇದೆ. ಅಲ್ಲೊಂದು ಕಾರಿಡಾರ್ ನಿರ್ಮಿಸಿಕೊಂಡು ಬಿಟ್ಟರೆ ಭಾರತೀಯ ಆರ್ಮಿಯ ಮೇಲೆ ಕಣ್ಣಿಡುವುದು ಮತ್ತು ನಿಯಂತ್ರಣ ಎರಡೂ ಸುಲಭ. ಈ ಕಾರಾಕೋರಮ್ ಹೈವೆಯ ಕೊನೆಯ ಹಳ್ಳಿಯಾದ ನುಬ್ರಾ ವ್ಯಾಲಿಯ ಪ್ರದೇಶ ಇತ್ತಿಚಿನವರೆಗೆ ಜನ ಸಂಪರ್ಕಕ್ಕೇ ತೆರೆದೇ ಇರಲಿಲ್ಲ. ನಾನು ಕಳೆದ ವರ್ಷ ಗಡಿ ಮುಟ್ಟಿ `ಸೊಮ್ಡೊ ಟಾಪ್’ ಹತ್ತುವ ತಯಾರಿಯಲ್ಲಿದ್ದಾಗ, ಅಕಸ್ಮಾತಾಗಿ ಭೇಟಿಯಾದ ಐ.ಟಿ.ಬಿ.ಪಿ.ಯ ಸ್ನೇಹಿತ ಆ ತುದಿಗೆ ನನ್ನನ್ನು ಕರೆದೊಯ್ದು ನಿಲ್ಲಿಸಿ ಧನ್ಯವಾಗಿಸಿದ್ದ. ಆ ಕಡೆಯಲ್ಲಿ ಹಾರಲು ಸಿದ್ಧವಾದ ಮಂಗನಂತೆ ಚೀನಿಯರು ಕೆಂಪು ಮುಖದ ಕಿರಿಗಣ್ಣು ಕಾಯಿಸುತ್ತಾ ಗಡಿ ಕಾಯುತ್ತಿದ್ದರು. ಅವರು ಹಲ್ಕಿರಿದರೆ ನಗುತ್ತಿದ್ದರೋ ಬೈಯ್ಯುತ್ತಿದ್ದರೋ ಎರಡೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗಲೂ ಚಾಂಗ್ಡಾನ ಮುಕ್ಕಾಲು ಭಾಗದಲ್ಲಿ ನೀರ ಮೇಲೆ ತೇಲು ತೆಪ್ಪ ಹಾಕಿಕೊಂಡೇ ಚೀನಿಯರು ಸರಹದ್ದು ಕಾಯುವ ಪರಿಯಿದೆಯಲ್ಲ, ಆ ವಿಷಯದಲ್ಲಿ ಮಾತ್ರ ಅವರಿಗಿರುವ ಡೆಡಿಕೇಶನ್ನು ಮತ್ತು ಸರಹದ್ದಿನ ಬಗ್ಗೆ ಅವರಿಗಿರುವ ಮೋಹ ಅಧ್ಭುತ.

ಇತ್ತ ಶೀಗಾಛೆ ರೈಲು ನಿಲ್ದಾಣದಿಂದ, ತೀರಾ ದುರ್ಗಮ ಕಣಿವೆಯಲ್ಲಿರುವ “ಯಡೊಂಗ್”ವರೆಗೂ ಹೆದ್ದಾರಿಯನ್ನು ಸದ್ದಿಲ್ಲದೆ ಮಾಡಿಕೊಂಡು ಕೂತಿರುವ ಚೀನಾ ಶೀಗಾಛೆಯಿಂದ ಯಡೊಂಗ್‍ವರೆಗಿನ ದಾರಿಗಾಗಿ ಮಾಡಿರುವ ಕೋಟ್ಯಾಂತರ ಖರ್ಚಿಗೆ ದಾರಿಯಲ್ಲಿ ಯಾವೊಂದು ಊರೂ ಇಲ್ಲದಿರುವುದು ಸೋಜಿಗ. ಯಾರ ಹಿತಕ್ಕೂ ತನ್ನ ಯಾವ ನಾಗರಿಕನಿಗಾಗಿಯೂ ಸರಕಾರ ಇಲ್ಲಿ ರೈಲು ದಾರಿ ನಿರ್ಮಿಸಿಲ್ಲ ನೆನಪಿರಲಿ. ಸುಮ್ಮನೆ `ಗಂಭಾ’ ಎನ್ನುವ ನಾಲ್ಕು ಮನೆಗಳಿರುವ ಒಂದು ಊರು ಬಿಟ್ಟರೆ “ಯಡೊಂಗ್” ವರೆಗಿನ ದಾರಿಯಲ್ಲಿ ನೇರವಾಗಿ ಸಿಕ್ಕುವ `ಭಿನಾಗ್ಜೇ ಮತ್ತು ಕಂಗಾಮ್’ ಹೇಳಿಕೊಳ್ಳುವಂತಹ ಊರುಗಳೇ ಅಲ್ಲ. ಶೀಗಾಛೆಯಿಂದ ಈ ಯಡೊಂಗ್ ಅಪ್ಪಟ ಕಣಿವೆಯ ದುರ್ಗಮ ಪ್ರದೇಶ. ಮಾನವ ಅಲ್ಲ ಯಾವ ಪ್ರಾಣಿಯೂ ಬದುಕದ ವೈಪರಿತ್ಯಗಳ ಪರಿಸರ ಅಲ್ಲಿದೆ. ಈ `ಗಂಭಾ’ ಕೂಡಾ ಇನ್ಯಾವುದೋ ದಿಕ್ಕಿನಲ್ಲಿದೆ.

ಇಂಥಾ ದುರ್ಗಮ ಕಣಿವೆಯಲ್ಲಿ “ಯಡೊಂಗ್” ಪಾಯಿಂಟ್‍ಗೆ ದಾರಿ ನಿರ್ಮಿಸಿರುವ ಕಾರಣ, ಅಲ್ಲಿಂದ ಚೀನಿ ಸೈನಿಕ ಓಡಲು ಶುರು ಮಾಡಿದರೆ ಎಲ್ಲೂ ನಿಲ್ಲದೆ ತನ್ನ ಲಗೇಜು ಸಮೇತ ನಮ್ಮ ಗ್ಯಾಂಗ್‍ಟಾಕ್‍ಗೆ ಬಂದು ನಿಲ್ಲಬಹುದು. ಹೇಗಿದೆ ಲೆಕ್ಕಾಚಾರ…? ಅಲ್ಲಿಗೆ ಚೀನಾ ರಾಜಧಾನಿಯಿಂದ ಸೈನಿಕನೊಬ್ಬ ಸಕಲ ಸರಂಜಾಮುಗಳೊಂದಿಗೆ ಕೇವಲ ಐದು ಗಂಟೆಯೊಳಗೆ ನಮ್ಮ ಗಡಿ ಸವರಿಕೊಂಡು ಬರಬಲ್ಲ. ಇದೇ ಕಳವಳಕ್ಕೆ ಕಾರಣವಾಗಿರೋದು. ಕಾರಣ ಯಾವ ಉಪಯೋಗ ಇಲ್ಲದ ಕಣಿವೆಯಲ್ಲಿ ಚೀನಾ ರಸ್ತೆ ರೈಲು ನಿರ್ಮಿಸುತ್ತಿದೆ ಅಂಥದ್ದೊಂದು ಉಸಾಬರಿಯನ್ನು ಯಾಕಾದರೂ ಮಾಡುತ್ತಿದೆ…?

ಹಿಂದೊಮ್ಮೆ ನಡೆದದ್ದೂ ಹೀಗೇನೆ…

ಇಂಥದ್ದೇ ಕಳವಳವನ್ನು ಹಿಂದೆ ಧೋಗ್ಲಾ ಪೋಸ್ಟ್ ಯುದ್ಧಕ್ಕೂ ಮೊದಲೇ ಭಾರತೀಯ ಇಂಟಲಿಜೆನ್ಸಿ ವ್ಯಕ್ತಪಡಿಸಿತ್ತು. ಆ ದಿನಗಳಲ್ಲಿ `ನಾಮ್ಕಾಚು’ ಪರ್ವತ ಶ್ರೇಣಿಯಲ್ಲಿ ಚೀನಿ ಸೈನ್ಯ ಕವಾಯಿತಿನ ಹೆಸರಿನಲ್ಲಿ, ಸರಸರನೇ ಹಲವಾರು ದುರ್ಗಮ ಪರ್ವತಗಳನ್ನು ಹತ್ತಿಳಿದಾಗಲೇ ನಮ್ಮ ಗದ್ದುಗೆಗೆ ವಾಸನೆ ಬಡಿಯಬೇಕಿತ್ತು. ಆದರೆ ಅದಾಗಲೇ ಇಲ್ಲ. ಅಷ್ಟಕ್ಕೂ ಧೊಗ್ಲಾ ಪೋಸ್ಟ್ ಕಾರ್ಯಾಚರಣೆ ಮತ್ತು ಈಗ ಅಲ್ಲೆಲ್ಲೋ ಮೂಲೆವರೆಗೆ ಚೀನಾ ರೈಲು ಹಳಿ ಹಾಕಿಕೊಂಡ ಕಳವಳಕ್ಕೆ ಕಾರಣ ತಿಳಿಯಬೇಕಾದರೆ, ನಿಮಗೆ ಇತಿಹಾಸ ಗೊತ್ತಿರಲೇಬೇಕು.

1961 ರ ಆಗಸ್ಟ್ 8 ರಿಂದ ಸೆಪ್ಟಂಬರ್‍ವರೆಗೆ ನಡೆದ ಚೀನಾ ದಾಳಿಯಲ್ಲಿ ಅನಾಮತ್ತಾಗಿ ನಮ್ಮದೊಂದು ಬ್ರಿಗೇಡು ಬಡಿದಾಡಲು ಗುಂಡು, ರಕ್ಷಿಸಿಕೊಳ್ಳಲು ಬಟ್ಟೆಗಳು, ಸರಿಯಾದ ಬೂಟೂಗಳು, ಕೊನೆ ಕೊನೆಗೆ ಕುಡಿಯಲು ನೀರೂ ಇಲ್ಲದೆ ತೀರಿ ಹೋಯಿತಲ್ಲ. ಆಗ ಚೀನಿಯರು ನಮ್ಮ ಹುಡುಗರನ್ನು ಎಣಿ ಎಣಿಸಿ.. ಗುಂಡುಗಳನ್ನಾದರೂ ಯಾಕೆ ಖರ್ಚು ಮಾಡಬೇಕು ಎಂದು ಕಾದು ನಿಂತು ಕೊಂದುಹಾಕಿದರು. ಅವರೆಷ್ಟು ಆತ್ಮ ವಿಶ್ವಾಸದಿಂದ ಇದ್ದರೆಂದರೆ ಒಂದು ವಾರಕಾಲ ಭಾರತೀಯ ಸೈನ್ಯವನ್ನು ಚಳಿಯಲ್ಲಿ ಸಾಯಲು ಬಿಟ್ಟು ಕಾಯುತ್ತಿದ್ದರೂ ಭಾರತೀಯ ಸೇನೆ ಅವರ ನೆರವಿಗೆ ಧಾವಿಸಲಾರದು ಎನ್ನುವುದು ಚೀನಿಯರಿಗೆ ಪಕ್ಕಾ ಮನದಟ್ಟಾಗಿತ್ತು. ಕಾರಣ ಭಾರತೀಯ ಸೇನೆ ಅದಕ್ಕೆ ತಯಾರಿಯಲ್ಲಿರಲಿಲ್ಲ ಎಂದಲ್ಲ. ಅಲ್ಲಿಗೆ ತಲುಪಲು ಭಾರತೀಯ ಸೈನಿಕರಿಗೆ ರಸ್ತೆಗಳೇ ಇರಲಿಲ್ಲ. ಸೈನಿಕನೊಬ್ಬ ತನ್ನ ಪೋಸ್ಟಿಗೆ ಸಾಮಾನು ತಲುಪುವ (?) ಡ್ರಾಪಿಂಗ್ ಝೊನ್ (ಟಿಸಾಂಗಧರ್) ತಲುಪಲೇ ನಾಲ್ಕು ದಿನಗಳ ಕಾಲ ತೆಗೆದುಕೊಂಡರೆ ಅಲ್ಲಿಂದ `ಹತುಂಗ್ಲಾ ರಿಡ್ಜ್’ ತಲುಪಲು ಇನ್ನು ಮೂರು ದಿನ. ಆಮೇಲೆ ಆಚೆ ಕಡೆಯ ಆಯಕಟ್ಟಿನ ಬೆಟ್ಟದ ಇಳಿಜಾರಿನಲ್ಲಿ ಬೀಡು ಬಿಟ್ಟು ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಚೀನಿಯರ ಕಣ್ಣು ತಪ್ಪಿಸಿ ವಾತಾವರಣ ವೈಪರಿತ್ಯದಲ್ಲೂ ಮುಂದುವರೆದರೆ ಮತ್ತೆ ಮೂರು ದಿನ ಬೇಕು ತಲುಪಿದರೆ ಅಲ್ಲಿ ಸ್ಥಾಪಿಸಲಾಗಿತ್ತು ಧೋಗ್ಲಾ ಪೋಸ್ಟ್. ತೀರಾ ಅದರ ಆ ಕಡೆಗೆ ಒಂದೇ ಗುಡ್ಡದ ಸೆರಗಿನಲ್ಲಿ ಚೀನಿಯರ ‘ಪೋಸ್ಟ್’ ಇತ್ತು. ಇವೆರಡರ ಅಂತರ ಕೆಲವೇ ಕೆಲವು ನೂರು ಮೀಟರುಗಳು ಗೊತ್ತಿರಲಿ.

ಇಲ್ಲಿ ಆಗಿನ ಭೌಗೋಳಿಕ ಸ್ಥಿತಿ ಕೊಂಚ ಅರಿವಾಗಬೇಕು. ಪರ್ವತಗಳ ಗುಂಪೊಂದನ್ನು ಊಹಿಸಿಕೊಳ್ಳಿ. ಅದರ ಸೆರಗಿನಲ್ಲೇ ಜಾಗ ಸಿಕ್ಕರೆ ಅದೇ ಕಾಲ್ದಾರಿ. ಒಂದೊಂದನ್ನೂ ಹತ್ತಿ ಇಳಿಯಲು ಒಂದೊಂದು ದಿನ ಬೇಕೇ ಬೇಕು. ಆವತ್ತು ಇದ್ದ ಏಕೈಕ ಊರು `ತೊಸೊಮ್’ನ್ನು ನಮ್ಮವರೇ ಖಾಲಿ ಮಾಡಿಸಿ, ಅವರನ್ನೆಲ್ಲಾ ಒಯ್ದು `ತವಾಂಗ್’ ನ ಕೆಳಗೆ ಬಿಟ್ಟು ಬಂದಿದ್ದರು. ಇಂಥಾ ಪರ್ವತದ ಗುಂಪಿನಲ್ಲಿ ಶೀತ ಮಾರುತ ತಡೆಯುವ ಇನ್ನು ಎತ್ತರದ ಒಂದು ಪರ್ವತ ಇದೆ. ಅದರ ಮೇಲೆ ಬೀಡು ಬಿಟ್ಟಿರುವ ಚೀನಿ ಸೈನಿಕನಿಗೆ ಇಲ್ಲಿ ನಡೆಯುವುದೆಲ್ಲವೂ ನೇರಾನೇರ ದರ್ಶನ ಮತ್ತು ನೈಸರ್ಗಿಕ ರಕ್ಷಣೆ ಬೇರೆ. ಇಲ್ಲಿ ಗಡಿ ಎನ್ನುವುದು ಇಲ್ಲವೇ ಇಲ್ಲ. ಇದ್ದರೂ ಅದನ್ನು ರಕ್ಷಿಸಿಕೊಳ್ಳುವುದು ಎರಡೂ ಕಡೆಯವರಿಗೆ ಅಸಾಧ್ಯವೇ. ಹಿಮ, ಶೀತ ಮಾರುತ, ಆಹಾರ ಇಲ್ಲದ ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆಯಲ್ಲಿ ಬಡಿದಾಡಬೇಕು. ಇಂಥಾ ಜಾಗದಲ್ಲಿ ಕೇವಲ ಬಾಟಲಿ ನೀರು, ಕಿತ್ತು ಹೋದ ಕಾಲು ಚೀಲದೊಂದಿಗೆ ಎಣಿಸಿದರೆ ನಾಲ್ಕು ಸುತ್ತಿಗೂ ಬಾರದ, ಸರಿಯಾಗಿ ಹಾರದ ಗುಂಡುಗಳ ಸಮೇತ ನಮ್ಮ ಸೈನಿಕ ಅದಿನ್ನೆಷ್ಟು ಹೊತ್ತು ಕುಳಿತಾನು ಇಲ್ಲಿ ಸರಹದ್ದು ಕಾಯ್ದುಕೊಳ್ಳಲು.

ಈಗಲೂ ತವಾಂಗ್ ತಲುಪಲೇ ದಿನವೀಡಿ ಚಲಿಸಬೇಕಾಗುತ್ತದೆ. ಕಾರಣ ಆ ರಸ್ತೆಯಲ್ಲಿ ಈಗಲೂ ಗಂಟೆಗೆ 25. ಕಿ.ಮೀ. ಜಾಸ್ತಿ ಹೋಗಲು ಸಾಧ್ಯವಿಲ್ಲ. ರಸ್ತೆ ಎನ್ನುವುದು ಹೆಸರಿಗೆ ಮಾತ್ರ. ಅಂಥಾ ಸ್ಥಳಕ್ಕೆ ಚೀನಿಯರು ಮಾತ್ರ ತೀರ ಸಲೀಸಾಗಿ ನಡೆದು ಬಂದಿದ್ದರಲ್ಲದೆ ಅನಾಮತ್ತು ಆರು ಸಾವಿರದಷ್ಟಿದ್ದ ಸೈನ್ಯವನ್ನು ಅಲ್ಲಿ ಜಮೆ ಮಾಡಿಕೊಂಡು ತಿಂಗಳು ಕಾಲಕ್ಕೆ ಬೇಕಾಗುವಷ್ಟು ದಿನಸಿಯಿಂದ ಹಿಡಿದು ಮದ್ದು ಗುಂಡಿನ ಸಂಗ್ರಹವನ್ನು ಅತ್ಯಂತ ಕರಾರುವಾಕ್ಕಾಗಿ ಮಾಡಿಕೊಂಡಿದ್ದರು.

ಈ ಈಶಾನ್ಯ ರಾಜ್ಯಗಳದ್ದು ಇನ್ನೂ ಒಂದು ಸಮಸ್ಯೆ ಇದೆ. ಅದೆಂದರೆ ಎಳೂ ರಾಜ್ಯಗಳೂ ಸೇರಿ ನಾಲ್ಕು ರಾಷ್ಟ್ರಗಳೊಂದಿಗೆ (ಮ್ಯಾನ್ಮಾರ್, ಭೂತಾನ್, ಬಾಂಗ್ಲಾ ಮತ್ತು ಚೀನಾ) ಸರಹದ್ದನ್ನು ಹಂಚಿಕೊಂಡಿರುವ ಒಟ್ಟಾರೆ ಉದ್ದ ನಾಲ್ಕೂವರೆ ಸಾವಿರ ಕಿ.ಮಿ. ಗಳು. ಅಸಲಿಗೆ ಯಾವ ರಾಜ್ಯದ ಗಡಿಯೂ ಭದ್ರವಿಲ್ಲ ಮತ್ತು ಎಲ್ಲಿದೆ ಎನ್ನುವಂತೆ ಸರಿಯಾಗಿ ಗುರ್ತೇ ಇಲ್ಲ. ಇನ್ನು ಇವೆಲ್ಲಾ ರಾಜ್ಯವನ್ನು ಭಾರತದೊಂದಿಗೆ ಸೇರಿಸಿರುವ ಪ್ರದೇಶ ಮಾತ್ರ ಕೇವಲ 22 ಕಿ.ಮೀ. ನಷ್ಟಿದೆ. ಇಲ್ಲಿಂದಲೇ ಭಾರತಕ್ಕೆ ಸಂಪರ್ಕದ ಹೆದ್ದಾರಿ `ಸಿಲಿಗುರಿ ಕಾರಿಡಾರ್’ ಇರುವುದು. ಇದು ಭಾರತ ಮತ್ತು ಈಶಾನ್ಯ ರಾಜ್ಯಗಳ `ಚಿಕನ್‍ನೆಕ್’. ಈಗ ಕ್ಯಾತೆ ತೆಗೆಯುತ್ತಿರುವ ಚೀನಾ ತನ್ನ ರೈಲು ಮಾರ್ಗವನ್ನು ಎಲ್ಲಿಯವರೆಗೆ ಎಳೆ ತಂದಿದೆ ಎಂದು ಒಮ್ಮೆ ಭೂಪಟ ಇಟ್ಟುಕೊಂಡು ನೋಡಿ.

ಕಾರಣ ಯಾವುದೇ ವಾಣಿಜ್ಯಿಕರಣ, ಅಂತರಾಷ್ಟ್ರೀಯ ವ್ಯವಹಾರ ಇತ್ಯಾದಿಗಳ ಅವಕಾಶವೂ ಇಲ್ಲವೇ ಇಲ್ಲ ಈ ಗಡಿಯಲ್ಲಿ. ಝೀರೋ ಪಾಯಿಂಟ್‍ನಲ್ಲಿ 131 ಶತಕೋಟಿ ಸುರಿದು ದಾರಿ ನಿರ್ಮಿಸಿದೆ ಎಂದರೆ ಯಾರಿಗೆ ಯಾವ ಭರವಸೆ..? ಯಾವಾಗ ಸೈನ್ಯ ಜಮಾವಣೆ ಮಾಡಲಿಕ್ಕಿಲ್ಲ. ಅಷ್ಟಕ್ಕೂ ಬಾಂಗ್ಲಾ ಮತ್ತು ಇತರ ದೇಶಗಳ ಗಡಿಯಾದರೆ ಸುಲಭಕ್ಕೆ ನಮ್ಮ ಅರಿವಿಗೆ ಏನು ನಡೆಯುತ್ತಿದೆ ಎಂದರಿವಾಗಿ ಬಿಡುತ್ತದೆ. ಬಾಂಗ್ಲ ಗಡಿಯಲ್ಲಿ 1980 ರಿಂದ ಹಾಕಿದ ಸುಭದ್ರ(?) ಬೇಲಿಯ ಜೊತೆಗೆ ಸರಹದ್ದು ಹಂಚಿಕೊಂಡಿದ್ದು “ಡಿಮಾಗಿರಿ” ಹಳ್ಳಿಯೇ ಅಸಲು ಸರಹದ್ದು. ಇಲ್ಲಿನ ಬುದ್ಧನ ಅನುಯಾಯಿಗಳಾದ, ಭಾರತೀಯರಿಗೆ ಅತೀವ ನಿಷ್ಠೆ ವ್ಯಕ್ತಪಡಿಸುವ `ಚಕ್ಮಾ..’ ಎನ್ನುವ ಮೂಲ ಜನಾಂಗೀಯರಿದ್ದಾರೆ. ಹಾಗೆ ಎರಡೂ ಕಡೆಯಲ್ಲಿ ಬಿ.ಎಸ್.ಫ್.ಗೆ ಒಂದು ಪಕ್ಕಾ ಲೆಕ್ಕಾಚಾರವಿದೆ. ಎಲ್ಲಿ ಏನು ನಡೆಯುತ್ತದೆ ಎಂದು. ಕಾರಣ ಇಲ್ಲಿಂದ ಹೊರಟವರು ಲುಂಗ್‍ಲುಯಿ ಮೂಲಕ ಐಸ್ವಾಲ್ ದಾಟಿ ಆಸ್ಸಾಮ್ ತಲುಪುತ್ತಾರೆ.

ಹಾಗೇಯೆ ಮನ್ಮಾರ್‍ನಲ್ಲಿರುವ ಬರ್ಮೀಯರದ್ದೂ ಅತಿ ಹೆಚ್ಚು ಮತ್ತು ನೇರ ರಸ್ತೆಯ ಸಂಪರ್ಕ ಇರುವ `ತಾಮು’ ಹೊರತು ಪಡಿಸಿದರೆ ಉಳಿದಂತೆ ಗಡಿ ಸುಭದ್ರವೇ. ಬಾರ್ಡರ್ ಸೆಕ್ಯೂರಿಟಿಯ ಕಣ್ಣು ತಪ್ಪಿಸುವುದು ಸಾಧ್ಯವೇ ಇಲ್ಲ. ಆದರೆ ಚೀನಾದ ಸರಹದ್ದೇ ಬೇರೆ. ಇಲ್ಲೇ ಭಾರತ, ಇಲ್ಲೇ ಚೀನಾ ಎನ್ನಿಸುವ ಸ್ಪಷ್ಟ ಸರಹದ್ದು ಗುರುತಿಸುವುದು ಆ ಪರಿಸರದಲ್ಲಿ ಅಸಾಧ್ಯ ಮತ್ತು ಗುರುತಿಸಿದ್ದೂ ಇಲ್ಲ. ಕಾರಣ ನೆಲ ಎನ್ನುವುದು ಒಂದರ ಆಚೆ ಇನ್ನೊಂದು ಕೊರಕಲು ಅಷ್ಟೆ. ಅದೂ ಕೂಡ ಅಲ್ಲಿನ ನದಿಯ ಹರಿವನ್ನು ಅವಲಂಭಿಸಿದ್ದು ಭೂಕುಸಿತದಿಂದ ಆಗೀಗ ದಿಕ್ಕು ಬದಲಿಸುತ್ತದೆ. ಕಾರಣ ಅಲ್ಲಿನ ನಿಸರ್ಗದ ನಿಯಮವೇ ಹಾಗೆ. ಇಲ್ಲಿ ಗಡಿಗುಂಟ ಕೂತು ಸರಹದ್ದು ಕಾಯುವ ಸಾಧ್ಯತೆ ಇಲ್ಲವೆ ಇಲ್ಲ. ಇಂಥದರಲ್ಲಿ ಚೀನಾ ಇಲ್ಲಿ ರೈಲು ತಂದು ನಿಲ್ಲಿಸುತ್ತಿದೆ. ಈಗ ಹೇಗಾದರೂ ಮಾಡಿ ನಮ್ಮವರೂ ಕೂಡಾ ತವಾಂಗ್‍ನ ನೆತ್ತಿಯನ್ನು ಸವರುವ ಸಾಮಥ್ರ್ಯ ಪಡೆದಿದ್ದಾರೆನ್ನುವುದು ಚೀನಿಗೆ ಗೊತ್ತಿಲ್ಲದ್ದೇನಲ್ಲ. ಅದಕ್ಕಾಗೆ ಈ ಬಾರಿ ಅದು ಸಿಕ್ಕಿಮ್ ಕಡೆ ತಲೆ ಹಾಕಿದೆ.

ಉಳಿದಂತೆ ಏನೇ ಇದ್ದರೂ ಚೀನಾ ಏರುಗತಿಯಲ್ಲಿ ಭಾರತಕ್ಕಿಂತ ತುಂಬ ಮುಂದಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಕಾರಣ ಚೀನಾದ ಆರ್ಥಿಕತೆಯ ಲೆಕ್ಕಾಚಾರ ನಮ್ಮ ಸುಲಭದ ಅರಿವಿಗೆ ಲಭ್ಯವಾಗಲಾರದು. ಅದು ತನ್ನ ಆರ್ಥಿಕ ಚೇತರಿಕೆಗೆ ಒತ್ತು ಕೊಡುವ ಹೊತ್ತಿಗೆ ಭಾರತಕ್ಕೆ ಆರ್ತಿಕ ಚೇತರಿಕೆ ಎಂದರೇನೆಂದೇ ಗೊತ್ತಿರಲಿಲ್ಲ. ಪ್ರಸ್ತುತ 670 ಲಕ್ಷಕೋಟಿ ಅವರದ್ದಾದರೆ ನಮ್ಮದು 134 ಲಕ್ಷ ಕೋಟಿ. ಸುಮಾರು 33.5 ಲಕ್ಷ ಕೋಟಿಯಷ್ಟು ಚೀನಾದ ಪಾಲಿದೆ ವಿಶ್ವದ ಆರ್ಥಿಕತೆಯಲ್ಲಿ. ಆದರೆ ನಮ್ಮ ಬೆಳವಣಿಗೆಗೆ ವೇಗ ಮತ್ತು ಅಂತರಾಷ್ಟ್ರೀಯ ಆಯಾಮ ದೊರಕಿದ್ದೇ ಕಳೆದ ಎರಡು ವರ್ಷಗಳಿಂದ ಪ್ರಸ್ತುತ ಸರಕಾರ ಆ ಮಟ್ಟದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದರಿಂದ. ಇವತ್ತು ಜಾಗತಿಕವಾಗಿ ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುವ ಮಂಚೂಣಿಯಲ್ಲಿರುವ ರಾಷ್ಟ್ರಗಳೆಂದರೆ ಚೀನಾ ಮತ್ತು ಭಾರತವೇ. ಪ್ರಸ್ತುತ ಗಣನೀಯ ಏರಿಕೆ ಶೇ. 19 ದಾಖಲಿಸುತ್ತಿದೆ ಎಂದರೂ ಚೀನಾದ ದೈತ್ಯ ಆರ್ಥಿಕ ಶಕ್ತಿಗೆ ಹೋಲಿಸಿದರೆ ಅಗಾಧ ವ್ಯತ್ಯಾಸದಲ್ಲಿದೆ. ಕಾರಣ ವಿಶ್ವದ ಆರ್ಥಿಕ ಕುಸಿತ ಮತ್ತು ಅತಿಮಂದ ಬೆಳವಣಿಗೆಯ ನಡುವೆ ಅವುಗಳ ಹತ್ತರಷ್ಟು ವೇಗದಲ್ಲಿ ಎರಡೂ ದೇಶಗಳೂ ದಾಪುಗಾಲಿಡುತ್ತಿವೆಯಾದರೂ ನೆರೆಯ ರಾಷ್ಟ್ರದ ವೇಗವನ್ನು ನಾವು ಸರಿದೂಗಿಸಲು ಈಗಿನ ವೇಗದಲ್ಲಿ ಮತ್ತು ರಾಜಕೀಯ ಸ್ಥಿರತೆ ಹೀಗೆ ಇದ್ದಲ್ಲಿ ಇದರ ದೂರಗಾಮಿ ಪರಿಣಾಮ ಗೊತ್ತಾಗಲು ನಮಗೆ ಕನಿಷ್ಟ ಇನ್ನೊಂದೈದು ವರ್ಷ ಬೇಕಿದೆ. ಕೆಲವೇ ಕೆಲವು ಆರ್ಥಿಕ ಮತ್ತು ಅರ್ಥಶಾಸ್ತ್ರಜ್ಞರಿಗೆ ಮಾತ್ರ ಈಗೀಗ ಭಾರತೀಯ ಪ್ರಧಾನಿ ಅದ್ಯಾಕೆ ವಿದೇಶ ಸುತ್ತುತ್ತಿದ್ದರು ಎನ್ನುವುದು ಅರಿವಾಗತೊಡಗಿದೆ. ಇದು ಜಾಗತಿಕವಾಗಿ ಪ್ರಶಂಸೆಗೊಳಪಡುತ್ತಿದ್ದರೆ ಇತ್ತ ನಮ್ಮಲ್ಲಿ ಗಂಜಿ ಕೇಂದ್ರಗಳು ಮುಚ್ಚಿಯಾವು ಎನ್ನುವ ಸಂಕಟದಲ್ಲಿ ಬುದ್ಧಿಜೀವಿಗಳು `ಪ್ರಧಾನಿ ಟೂರ್ ಮಾಡ್ತಾರಪ್ಪೋ..’ ಎಂದು ಹುಯಿಲಿಡುತ್ತಿದ್ದಾರೆ. ಅರೆಬಬೇಯುವುದು ಎಂದರೆ ಇದೇನಾ..?

ಇದಕ್ಕೆ ಸರಿಯಾಗಿ ಅಲ್ಲಿ ತನ್ನ ರೈಲು ಹಾಕಿರುವ ವಿಷಯವನ್ನು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆಳಸುವುದನ್ನು ತಪ್ಪಿಸಲು ಮೊನ್ನೆ ಲಡಾಖ್ ನ 21 ನೇ ಮೈಲಿ ಕಲ್ಲಿನ ಬಳಿಯಲ್ಲಿರುವ ಹಳ್ಳಿಯಾದ “ಬರಾಸ್ತ್ಕೆ” ಎಂಬಲ್ಲಿ ತನ್ನ ಸರಹದ್ದನ್ನು ವಿಸ್ತರಿಸಿದ್ದು ಸೈನಿಕರನ್ನು ಕಳುಹಿಸಿ ಕ್ಯಾಂಪ್ ಪೋಸ್ಟ್ ಉಂಟು ಮಾಡಿದೆ. ಅಲ್ಲಿಗೆ ಗಸ್ತು ತಿರುಗುತ್ತಿದ್ದ ಭಾರತದ ಸೈನಿಕರಿಗೆ ಇದು ಚೀನ ಸರಹದ್ದು ಎನ್ನುವ ಬ್ಯಾನರ್ ಪ್ರದರ್ಶಿಸಿದೆ. ಅಲ್ಲಿಗೆ ಶೀಗಾಛೆಯ ಗಲಾಟೆ ಮರೆತು ಬಿಡುತ್ತಿದೆ ಹಿಂದೆಯೂ ಹೀಗೆ ಪ್ರತಿ ಹಂತದಲೂ ನಡೆದಿದ್ದು ಇತಿಹಾಸ. ಈಗಲೂ ಎಚ್ಚರಗೊಳದಿದ್ದರೆ ಈ ಬಾರಿ ಕೈಗೆತ್ತಿಕೊಳ್ಳುವ ಮೊದಲೆ ನಮ್ಮ ಈಶಾನ್ಯ ಭಾರತದ ಮೇಲೆ ಚೀನಿ ಬಂದೂಕು ಬಿಸಿಯಾಗಲಿದೆಯಾ…? ಹಾಗೊಂದು ಲೆಕ್ಕಾಚಾರ ಹರಿದಾಡತೊಡಗಿದೆ.

ಆದರೆ ಮೋದಿಯಂತಹ ಪ್ರಧಾನಿ ಗದ್ದುಗೆಯ ಮೇಲಿರುವವರೆಗೆ ಈ ದುಸ್ಸಾಹಸ ಬೇಡವೇ ಬೇಡ ಎಂದು ಅಲ್ಲಿನ ಸಲಹೆಗಾರರ ಅಭಿಪ್ರಾಯ. ಕಾರಣ ಜಗತ್ತಿನಲ್ಲೇ ಅತ್ಯಂತ ದುರ್ಗಮವಾದ ಕಾರ್ಯಚರಣೆಯನ್ನು ಮಾಡಿ ದಕ್ಕಿಸಿಕೊಂಡ ಶ್ರೇಯಸ್ಸು ಇರುವುದು ಸಧ್ಯ ಭಾರತದ ಪ್ರಧಾನಿಗೆ ಮಾತ್ರ. ಈ ಕಾರಣವೇ ಇವತ್ತು ಈ ದೇಶದ ಋಣದಲ್ಲಿದ್ದೂ, ದೇಶದ್ರೋಹಿಗಳ ಬೆಂಬಲಿಸುತ್ತಿದ್ದ ಬುದ್ದಿಜೀವಿಗಳಿಗೆ ಇನ್ನಿಲ್ಲದ ನವೆಯಾಗುತ್ತಿದೆ.

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post