ಹಡಗಿನಲ್ಲಿ ಬಂದ ಪೊಡವಿಗೊಡೆಯ
ಉಡುಪಿಗೆ ವಿಶ್ವ ಧಾರ್ಮಿಕ ಮತ್ತು ಸಾಂಸ್ಕೃತಿಕ ಭೂಪಟದಲ್ಲಿ ಜಾಗ ಸಿಗುವಂತೆ ಮಾಡಿದ ಶ್ರೀಕೃಷ್ಣನನ್ನು ಸ್ಥಾಪಿಸಿದವರು ದ್ವೈತ ಸಿದ್ಧಾಂತದ ಆದ್ಯಪುರುಷ ಮಧ್ವಾಚಾರ್ಯರು. ಮಧ್ವರು ಅರಬ್ಬಿ ಕಡಲ ತೀರದಲ್ಲಿ ನಿಂತಿದ್ದಾಗ ಸಮುದ್ರದಲ್ಲಿ ಬಿರುಗಾಳಿ ಎದ್ದಿತ್ತಂತೆ. ಜಲಮಾರ್ಗದಲ್ಲಿ ಬರುತ್ತಿದ್ದ ಹಡಗೊಂದು ಈ ಅನಿರೀಕ್ಷಿತ ವೈಪರೀತ್ಯದಿಂದ ಕಂಗೆಟ್ಟು ಡೋಲಾಯಮಾನವಾಯಿತು. ಹಡಗಿನ ತೊಳಲಾಟ ನೋಡಿದ ಆಚಾರ್ಯರು ತಮ್ಮ ಶಲ್ಯವನ್ನು ಗಾಳಿಯಲ್ಲಿ ಬೀಸಿದರು; ತಟವಟ ನಿಂತು ಹಡಗು ಸುರಕ್ಷಿತವಾಗಿ ದಡ ಸೇರುವಂತಾಯಿತು. ತನ್ನ ಹಡಗನ್ನೂ ಪ್ರಾಣವನ್ನೂ ರಕ್ಷಿಸಿದ ಈ ಸಾಧುಪುರುಷನಿಗೆ, ಹಡಗಿನಲ್ಲಿ ತುಂಬಿರುವ ರತ್ನಕನಕಗಳಲ್ಲಿ ಏನನ್ನು ಕೇಳಿದರೂ ಕೊಡುತ್ತೇನೆ ಎಂದನಂತೆ ಅದರ ಮಾಲೀಕ. ಆದರೆ ಮಧ್ವರು ಅದರೊಳಗಿದ್ದ ಬೆಲೆಬಾಳುವ ಸರಕೆಲ್ಲವನ್ನೂ ಬಿಟ್ಟು ಮೂಲೆಯಲ್ಲಿ ಬಿದ್ದಿದ್ದ ಒಂದು ಮಣ್ಣಿನ ಹೆಂಟೆಯನ್ನು ಎತ್ತಿಕೊಂಡರು. ಅದನ್ನು ಎತ್ತಿಕೊಂಡು ಬರುವಾಗ ಹೆಂಟೆ ಮುರಿದು ಅದರೊಳಗಿಂದ ಎರಡು ಮೂರ್ತಿಗಳು ಹೊರಚಾಚಿದವು. ಒಂದು ಬಲರಾಮನದ್ದು; ಇನ್ನೊಂದು ಶ್ರೀಕೃಷ್ಣನದ್ದು. ಬಲರಾಮನನ್ನು ಮಲ್ಪೆಯ ಸಮೀಪದಲ್ಲಿ, ಹಡಗು ಎಲ್ಲಿ ಲಂಗರು ಹಾಕಿತ್ತೋ ಅಲ್ಲಿ ಪ್ರತಿಷ್ಠಾಪಿಸಿದರು. ಕೃಷ್ಣನನ್ನು ಉಡುಪಿಗೆ ತಂದರು. ಇದು, ಉಡುಪಿಗೆ ಮಥುರೆಯ ರಾಧೇಶ್ಯಾಮ ಬಂದ ಕತೆ.
ಪರ್ಯಾಯದ ಪ್ರಾರಂಭ
ಮಧ್ವಾಚಾರ್ಯರು ಕೃಷ್ಣನ ಗುಡಿ ಕಟ್ಟಿ, ಅವನಿಗೆ ನಿತ್ಯೋಪಾಸನೆ ಮಾಡಲು ಅನುವಾಗುವಂತೆ ಸುತ್ತ ಅಷ್ಟಮಠಗಳನ್ನು ಸ್ಥಾಪಿಸಿದರು. ಎಂಟು ಯತಿಗಳನ್ನು ಎರಡೆರಡು ತಿಂಗಳಿಗೊಬ್ಬನಂತೆ ಕೃಷ್ಣನ ಆರಾಧನೆಗೆ ನೇಮಿಸಿದರು. ಈ ಮಠಗಳೇ ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ. ಇವೆಲ್ಲವೂ ಉಡುಪಿಯ ಆಸುಪಾಸಿನಲ್ಲಿರುವ ಎಂಟು ಹಳ್ಳಿಗಳ ಹೆಸರುಗಳು. ಈ ಎರಡು ತಿಂಗಳ ವ್ಯವಸ್ಥೆಗಿಂತ ಎರಡು ವರ್ಷಗಳಿಗೊಬ್ಬರು ಕೃಷ್ಣನ ಪೂಜೆ ಮಾಡುವ ವ್ಯವಸ್ಥೆಯಿದ್ದರೆ ಯತಿಗಳಿಗೂ ಬದರಿ, ಕೇದಾರದಂಥ ದೂರದ ಕ್ಷೇತ್ರಗಳಿಗೆ ಯಾತ್ರೆ ಹೋಗುವುದು ಅನುಕೂಲ ಎಂಬ ಕಾರಣಕ್ಕೆ ಮುಂದೆ ಸೋದೆ ಮಠದ ವಾದಿರಾಜ ಯತಿಗಳು ಹಳೆಯ ಸಂಪ್ರದಾಯಕ್ಕೆ ಬದಲಾವಣೆ ತಂದರು. ಕ್ರಿಸ್ತಶಕ 1522ರಲ್ಲಿ ಈ ಹೊಸ ಪದ್ಧತಿ ಜಾರಿಗೆ ಬಂತು. 1522ರಿಂದ 1524ರವರೆಗೆ ಪಲಿಮಾರು ಮಠ ಕೃಷ್ಣನ ಪೂಜೆ ನೆರವೇರಿಸುವ ಹೊಣೆ ಹೊತ್ತುಕೊಂಡಿತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಹೊಣೆ ಹಸ್ತಾಂತರವಾಗುತ್ತ ಮೇಲೆ ಸೂಚಿಸಿದ ಅನುಕ್ರಮಣಿಕೆಯಲ್ಲೇ ಮುಂದುವರಿಯಿತು. 1536ರಲ್ಲಿ ಆ ಪಟ್ಟಿಯಲ್ಲಿ ಕೊನೆಯ ಮಠವಾದ ಪೇಜಾವರ ಮಠ ಕೃಷ್ಣನ ಪೂಜೆಗೆ ನಿಂತಿತು. ಹೀಗೆ 1522ರ ಜನವರಿ 18ರಿಂದ 1538ರ ಜನವರಿ ಹದಿನೇಳರವರೆಗೆ ಕೃಷ್ಣನ ಸೇವೆಯ ಈ ಮೊದಲ ಚಕ್ರ ಸಾಂಗವಾಗಿ, ಯಾವ ಗೊಂದಲಗಳಿಲ್ಲದೆ, ಸುಸೂತ್ರವಾಗಿ ನಡೆಯಿತು. ಹೀಗೆ ಸರತಿಯಲ್ಲಿ ಯತಿಗಳು ಒಬ್ಬ ದೇವರ ಉಪಾಸನೆ ಮಾಡುವ ಕ್ರಮವೇ ಪರ್ಯಾಯ. ದೇಶದ ರಾಜಕೀಯದಲ್ಲಿ ಅಧಿಕಾರಕ್ಕಾಗಿ ಹಗ್ಗಜಗ್ಗಾಟಗಳು ನಡೆದಿರಬಹುದು; ಕರ್ನಾಟಕ ರಾಜ್ಯದಲ್ಲೇ ರಾಜಕಾರಣಿಗಳು ಟ್ವೆಂಟಿ-ಟ್ವೆಂಟಿ ಮ್ಯಾಚು ಆಡಲು ಹೋಗಿ ಕಚ್ಚಾಡಿಕೊಂಡು ಚುನಾವಣೆಯನ್ನು ಮೈಮೇಲೆ ಹೇರಿಕೊಂಡದ್ದನ್ನು ನಾವು ನೋಡಿದ್ದೇವೆ. ಆದರೆ ಕಳೆದ 494 ವರ್ಷಗಳಿಂದ ನಡೆದುಕೊಂಡು ಬಂದಿರುವ ಪರ್ಯಾಯ ವ್ಯವಸ್ಥೆಯಲ್ಲಿ ಇದುವರೆಗೂ ಒಂದು ಲೋಪ, ಒಂದು ಅಪಸ್ವರ ಕೇಳಿಬಂದಿಲ್ಲ ಎನ್ನುವುದೊಂದು ವಿಶೇಷ! 2022ನೇ ಇಸವಿಯಲ್ಲಿ ಕೃಷ್ಣಾಪುರ ಮಠಾಧೀಶರು ಪರ್ಯಾಯ ಪೀಠ ಏರುವುದರೊಂದಿಗೆ ಈ ಪದ್ಧತಿಗೆ 500 ವರ್ಷಗಳು ತುಂಬುತ್ತವೆ.
ಮಧ್ವರು ಕೂತ ಸರ್ವಜ್ಞ ಪೀಠ
ಇದೀಗ 2016ನೇ ಇಸವಿಯಲ್ಲಿ ನಡೆಯುತ್ತಿರುವ ಪೇಜಾವರ ಮಠದ ಪರ್ಯಾಯ, 32ನೇ ಚಕ್ರದ ಕೊನೆಯ ಪರ್ಯಾಯ. 33ನೇ ಆವೃತ್ತಿ 2018ರಲ್ಲಿ ಪಲಿಮಾರು ಮಠದೊಂದಿಗೆ ಪ್ರಾರಂಭವಾಗುತ್ತದೆ. ಯಾವ ಮಠದ ಪರ್ಯಾಯವಿದೆಯೋ ಅವರಿಗೆ ಹಿಂದಿನವರು ಕೃಷ್ಣಪೂಜೆಯ ಅಧಿಕಾರವನ್ನು ಬಿಟ್ಟುಕೊಡುತ್ತಾರೆ. ನಿರ್ಗಮಿಸುವವರು ಪರ್ಯಾಯದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸ್ವಾಮೀಜಿಗೆ ಸಾಂಕೇತಿಕವಾಗಿ ಅಕ್ಷಯಪಾತ್ರೆ ಮತ್ತು ಅನ್ನದ ಸಟ್ಟುಗಗಳನ್ನು ಹಸ್ತಾಂತರಿಸುತ್ತಾರೆ. ಅಕ್ಷಯ ಪಾತ್ರೆ ಮತ್ತು ಸಟ್ಟುಗ, ಉಡುಪಿಯ ಮಠದಲ್ಲಿ ಕಳೆದ ಎಂಟುನೂರು ವರ್ಷಗಳಿಂದಲೂ ಇವೆ. ಇವೆರಡನ್ನೂ ಪರ್ಯಾಯದ ದಿನ ನಡೆಯುವ ಮಹಾ ಅನ್ನ ಸಂತರ್ಪಣೆಯ ಸಂದರ್ಭದಲ್ಲಿ ಅನ್ನದ ರಾಶಿಯ ಮೇಲಿಟ್ಟು ಪೂಜಿಸುವ ಕ್ರಮ ಇದೆ. ಮಧ್ವಾಚಾರ್ಯರು ತನ್ನ ಶಿಷ್ಯರಿಗೆ ಕೊಟ್ಟ ಈ ಎರಡು ಸಂಗತಿಗಳಿಂದಲೇ ಉಡುಪಿಯಲ್ಲಿ ಅನ್ನದಾನಕ್ಕೆ ಇದುವರೆಗೆ ಚ್ಯುತಿ ಬಂದಿಲ್ಲ ಎಂಬ ನಂಬಿಕೆ ಇದೆ. ಮರದ ಸಟ್ಟುಗದ ಮೇಲೆ “ಓಂ ನಮೋ ಭಗವತೇ ವಿಷ್ಣವೇ ಅನ್ನಾಧಿಪತಯೇ ಸ್ವಾಹಾ” ಎಂಬ ಮಂತ್ರವನ್ನು ಕಾಣಬಹುದು. ಇದಕ್ಕೆ ದಧಿವಾಮನ ಮಂತ್ರ ಎಂದು ಹೆಸರು. ಮಧ್ವಾಚಾರ್ಯರು ತಂತ್ರಸಾರದಲ್ಲಿ ಇದನ್ನು “ಯಥೇಷ್ಟ ಭಕ್ಷ್ಯಭೋಜ್ಯಾದಿ ದಾತಾ ಮುಕ್ತಿಪ್ರದಾಯಕಃ” ಎಂದು ಹಾಡಿಹೊಗಳಿದ್ದಾರೆ. ಪರ್ಯಾಯದ ಜವಾಬ್ದಾರಿ ಹೊರುವ ಮಠಾಧೀಶರನ್ನು ಮಧ್ವರು ಕೂರುತ್ತಿದ್ದ ಮಣೆಯ ಮೇಲೆ ಕೂರಿಸುವುದು, ಈ ಹಸ್ತಾಂತರದ ಇನ್ನೊಂದು ಅಂಗ. ಆ ಮಣೆಗೆ ಸರ್ವಜ್ಞ ಪೀಠ ಎಂದೇ ಹೆಸರು. ಪರ್ಯಾಯ ಮಠಾಧೀಶರು ಮುಂದಿನ ಎರಡು ವರ್ಷಗಳ ಕಾಲ ಆ ಪೀಠದಲ್ಲಿ ಕೂತೇ ಭಕ್ತರನ್ನು ಹರಸುತ್ತಾರೆ. ಎರಡು ವರ್ಷಗಳ ನಂತರ ತನ್ನ ಅಧಿಕಾರದಂಡವನ್ನು ಮುಂದಿನ ಯತಿಯ ಕೈಗೆ ಕೊಡುವುದರ ಜೊತೆಗೆ, ಯತಿಗಳು ಒಂದು ದುಗ್ಗಾಣಿಯನ್ನೂ ತನ್ನ ಸ್ವಂತಕ್ಕೆ ಎತ್ತಿಟ್ಟುಕೊಳ್ಳದೆ ಹೊರಡಬೇಕು ಎಂಬ ಅಲಿಖಿತ ಸಂವಿಧಾನವಿದೆ. ಹಾಗಾಗಿ, ಅದೆಷ್ಟು ಸಂಪತ್ತನ್ನು ಅವರು ಪರ್ಯಾಯದ ಸಮಯದಲ್ಲಿ ಭಕ್ತರಿಂದ ಸಂಗ್ರಹಿಸಿದ್ದರೂ ಅವೆಲ್ಲವನ್ನೂ ಕೃಷ್ಣನ ಚರಣಗಳಲ್ಲಿ ಇಟ್ಟು ಬರಿಗೈದಾಸರಾಗಿ ಹೊರಹೋಗಬೇಕು. ಈ ಆಯ-ವ್ಯಯದ ಲೆಕ್ಕಾಚಾರದಲ್ಲಿ ಇದುವರೆಗೂ ನಯಾಪೈ ದೋಷ ಕಂಡಿಲ್ಲ ಎನ್ನುವುದೂ ಒಂದು ಸ್ವಾರಸ್ಯಕರ ಸಂಗತಿ.
ರಾಮಕುಂಜದ ಮಾಣಿ ವಿಶ್ವೇಶನಾದುದು
2016ರ ಜನವರಿ 18. ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು, ಕಾಣಿಯೂರು ಸ್ವಾಮಿಗಳಿಂದ ಅಧಿಕಾರ ಪಡೆದು ಸರ್ವಜ್ಞಪೀಠವನ್ನು ಏರುತ್ತಿದ್ದಾರೆ. ಪರ್ಯಾಯದ ಇತಿಹಾಸದಲ್ಲಿ ಇದೊಂದು ದಾಖಲೆ. ಯಾಕೆಂದರೆ, ಹದಿನಾರನೇ ಶತಮಾನದ ಮಹಾಯತಿ ವಾದಿರಾಜರನ್ನು ಹೊರತುಪಡಿಸಿ ಐದು ಬಾರಿ ಕೃಷ್ಣನನ್ನು ಪೂಜಿಸುವ ಸೌಭಾಗ್ಯ ಉಳಿದ ಯಾರಿಗೂ ಬಂದದ್ದಿಲ್ಲ. 2000ದ ಇಸವಿಯಲ್ಲಿ ಪೇಜಾವರ ಶ್ರೀಗಳು ನಾಲ್ಕನೇ ಬಾರಿಗೆ ಪರ್ಯಾಯ ನಡೆಸಿದ್ದರು. ಆಗ ಅವರಿಗೆ 69 ವರ್ಷ ಪ್ರಾಯ. ಸೋದೆ ಮತ್ತು ಪುತ್ತಿಗೆ ಮಠಗಳ ಇಬ್ಬರು ಸ್ವಾಮಿಗಳನ್ನು ಹೊರತುಪಡಿಸಿದರೆ ನಾಲ್ಕು ಬಾರಿ ಪರ್ಯಾಯ ನಡೆಸಿದ ದಾಖಲೆ ಯಾವ ಯತಿಯ ಹೆಸರಲ್ಲೂ ಇರಲಿಲ್ಲ. ಇದೀಗ ಐದನೇ ಬಾರಿಗೆ ಮತ್ತೆ ಕೃಷ್ಣನ ಪೂಜೆ ನಡೆಸುವ ಜವಾಬ್ದಾರಿ ಹೊರುವ ಮೂಲಕ ಪೇಜಾವರರು ಕೃಷ್ಣಭಕ್ತರಲ್ಲಿ ಒಂದು ಬಗೆಯ ಸಂಚಲನವನ್ನೇ ಹುಟ್ಟಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಅವರಿಗೀಗ 85 ವರ್ಷ. ಅಂದೂ ಇಂದೂ ಅವರ ಮೈಯಲ್ಲಿ ಒಂದು ಕಿಲೋ ತೂಕ ಕೂಡ ಹೆಚ್ಚಿದ್ದಿಲ್ಲ. ಕೃಶದೇಹಿ; ನಿಂತಲ್ಲಿ ನಿಲ್ಲದೆ ಪರಿವ್ರಾಜಕನಂತೆ ದೇಶ ಸುತ್ತುವ ಹುಮ್ಮಸ್ಸು; ಹೊಳೆವ ಕಣ್ಣುಗಳು; ಏನನ್ನೋ ಧ್ಯಾನಿಸುತ್ತಲೇ ಇರುವ ಮನಸ್ಸು; ಎಲ್ಲದರಲ್ಲೂ ಕುತೂಹಲ – ಇವು ಪೇಜಾವರರ ಚಹರೆ.
ಉಡುಪಿಯಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ರಾಮಕುಂಜ ಎಂಬ ಹಳ್ಳಿಯಲ್ಲಿ ನಾರಾಯಣಾಚಾರ್ಯ ಮತ್ತು ಕಮಲಮ್ಮನವರ ಎರಡನೆ ಕೂಸಾಗಿ ಪೇಜಾವರ ಶ್ರೀಗಳು 27 – 4 – 1931ರಂದು ಹುಟ್ಟಿದರು. ಪೂರ್ವಾಶ್ರಮದ ಹೆಸರು ವೆಂಕಟರಮಣ ಎಂದು. ಹಳ್ಳಿಯ ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ. ಏಳನೆಯ ವಯಸ್ಸಿಗೆ ಉಪನಯನ. ಉಪನಯನಕ್ಕೆ ಮುನ್ನ ಈ ಹುಡುಗ ತನ್ನ ತಂದೆಯೊಂದಿಗೆ ಉಡುಪಿಯ ದೇವರನ್ನು ಕಾಣಲು ಬಂದಿದ್ದನಂತೆ. ದೇವರ ದರ್ಶನ ಪಡೆದು ಸ್ವಾಮಿಗಳಲ್ಲಿ ಪ್ರಸಾದ ಕೊಳ್ಳಲು ಹೋದ ಹುಡುಗನನ್ನು ಆಗಿನ ಪೇಜಾವರ ಶ್ರೀಗಳಾದ ವಿಶ್ವಮಾನ್ಯರು “ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?” ಎಂದು ಕೇಳಿದರು. “ಹ್ಞೂ, ಆಗುತ್ತೇನೆ” ಎಂದೇಬಿಟ್ಟ ಪುಟಾಣಿ! ಅವರೇಕೆ ಕೇಳಿದರೋ ಇವನಿಂದ ಹ್ಞೂ ಎಂದು ಯಾರು ಹೇಳಿಸಿದರೋ – ಅವೆಲ್ಲವೂ ತರ್ಕದಾಚೆ ನಿಂತ ಸಂಗತಿ. ಅಂತೂ ಅವರಿಬ್ಬರ ನಡುವೆ ಈ ಅನೂಹ್ಯ ಮಾತುಕತೆ ನಡೆಯಿತು. ಹುಡುಗನೋ, ಕೊಟ್ಟ ಮಾತು ಮರೆತಿರಬೇಕು. ಆದರೆ ವಿಶ್ವಮಾನ್ಯರು ಮಾತ್ರ ಸಂಕಲ್ಪ ಮಾಡಿಯೇಬಿಟ್ಟರು! ಲೌಕಿಕ ವ್ಯವಹಾರಗಳಲ್ಲೂ ಮಠದ ಸ್ಥಾವರತೆಯಲ್ಲೂ ಮೊದಲಿಂದಲೂ ಅನಾಸಕ್ತರಾಗಿದ್ದ ಆ ಯತಿ ಹಂಪೆಗೆ ಹೋಗಿದ್ದಾಗ, ಅವರ ನಿರ್ಣಯ ಗಟ್ಟಿಯಾಯಿತು. ಕೂಡಲೇ ರಾಮಕುಂಜದ ನಾರಾಯಣಾಚಾರ್ಯರಿಗೆ ಹೇಳಿಕೆ ಹೋಯಿತು. ಈಗಷ್ಟೇ ಉಪನಯನವಾಗಿ ಅಗ್ನಿಕಾರ್ಯ ಮಾಡುತ್ತ ಮಂತ್ರಗಳನ್ನು ಒಂದೊಂದಾಗಿ ಕಲಿಯುತ್ತಿರುವ ಏಳರ ಹಾಲುಗಲ್ಲದ ಮಾಣಿಯನ್ನು ಮಠದ ಸ್ವಾಮಿ ಮಾಡುವ ನಿರ್ಧಾರ ಮಾಡಿದ್ದೇನೆಂದಾಗ ಯಾವ ತಂದೆಯಾದರೂ ನಡುಗುವುದು ಸಹಜವೇ. ಆದರೆ, ಅಪ್ಪಯ್ಯನಿಗೆ ಸಮಾಧಾನ ಹೇಳುವಂತೆ ಮಗ ತಯಾರಾಗಿ ನಿಂತಿದ್ದ. ಸ್ವಾಮಿಯಾದರೆ ಕೃಷ್ಣನಿಗೆ ಪೂಜೆ ಮಾಡುವ, ಭಕ್ತರಿಗೆ ತೀರ್ಥ-ಪ್ರಸಾದ ಕೊಡುವ ಅವಕಾಶ ಸಿಗುವುದಲ್ಲಾ ಎಂಬ ಉತ್ಸಾಹ ಈ ಮುಗ್ಧನಿಗೆ! ಹುಡುಗುಬುದ್ಧಿಯ ಹುಡುಗನೂ ಆತಂಕಿತ ತಂದೆಯೂ ಹಂಪೆಗೆ ಹೋದರು. “ನಾನು ಸ್ವಾಮಿಯಾಗುತ್ತೇನೆ. ಸ್ವೀಕರಿಸಿ ನನ್ನನ್ನು” ಎಂದು ಹೇಳಿದ ಬಾಲಕನಿಗೆ ಕಾಷಾಯ ವಸ್ತ್ರ ತೊಡಿಸಿ, ತಲೆಯಲ್ಲಿ ಶಿಖೆ ಉಳಿಸಿ, ಪುಷ್ಕರಣಿಯಲ್ಲಿ ಸ್ನಾನ ಮಾಡಿಸಿ ಕೊನೆಗೆ ಹಂಪೆಯ ಚಕ್ರತೀರ್ಥದಲ್ಲಿರುವ ಯಂತ್ರೋದ್ಧಾರ ಮುಖ್ಯಪ್ರಾಣನ ಮುಂದೆ ಸಂನ್ಯಾಸ ದೀಕ್ಷೆ ಕೊಟ್ಟರು ವಿಶ್ವಮಾನ್ಯರು. ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ದಶಮಿಯಂದು ವೆಂಕಟರಮಣ “ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದರು” ಆದ.
ಬೆಳೆಯ ಸಿರಿ ಮೊಳಕೆಯಲ್ಲಿ
ಸಂನ್ಯಾಸ ಸ್ವೀಕರಿಸಿದ ಮೇಲೆ ವಿಶ್ವೇಶ ತೀರ್ಥರಿಗೆ ತನ್ನ ಗುರುಗಳ ಸಂಪರ್ಕ ಸಿಕ್ಕಿದ್ದು ಕೆಲವೇ ದಿನಗಳ ಕಾಲ. ವಿಶ್ವಮಾನ್ಯರು ಕೊನೆಗೆ ಎಲ್ಲವನ್ನೂ ತ್ಯಜಿಸಿ ಕರ್ಮಠ ತಾಪಸಿಯಂತೆ ನಡೆದುಹೋದರು. ಇಡೀ ಮಠದ ಹೊಣೆಗಾರಿಕೆಯನ್ನು ಈ ಪುಟ್ಟ ಹುಡುಗ ಈಗ ತನ್ನ ಕೃಶ ಹೆಗಲುಗಳ ಮೇಲೆ ಹೊತ್ತು ನಿಲ್ಲಬೇಕಾಗಿತ್ತು. ವಿಶ್ವೇಶರಿಗೆ ಯತಿಜೀವನದ ಪ್ರಾಥಮಿಕ ಪಾಠಗಳೆಲ್ಲ ಮಠದ ವಿದ್ವಾಂಸರಿಂದಲೇ ನಡೆದವು. ತರ್ಕ-ವ್ಯಾಕರಣ-ಮೀಮಾಂಸೆಗಳ ಪಾಠವನ್ನು ಆಗಿನ ಭಂಡಾರಕೇರಿ ಮಠದ ಸ್ವಾಮಿಗಳಾಗಿದ್ದ ವಿದ್ಯಾಮಾನ್ಯ ತೀರ್ಥರು ಮಾಡಿದರು. ಹುಡುಗನ ಚೂಟಿತನವನ್ನು ಅವರಾಗಲೇ ಗುರುತಿಸಿದ್ದರೋ ಏನೋ. 1943ರ ಮಧ್ವನವಮಿಯಂದು ಭಂಡಾರಕೇರಿಯಲ್ಲಿ ನಡೆದ ಮಧ್ವಸಿದ್ಧಾಂತ ಸಂವರ್ಧಿನಿ ಸಭೆಗೆ ಹನ್ನೆರಡರ ವಟು ವಿಶ್ವೇಶರೇ ಅಧ್ಯಕ್ಷ! ಹಾಗೆ ಶಿಷ್ಯನನ್ನು ಮುಂದಿಟ್ಟು ಬೆಳೆಸಿ ಹರಸಿ ಉದ್ಧರಿಸಿದ ಗುರು ವಿದ್ಯಾಮಾನ್ಯರು. ಸುಮಾರು ಎಂಟು ವರ್ಷಗಳ ಕಾಲ ಭಂಡಾರಕೇರಿ ಸ್ವಾಮಿಗಳ ಸಾಂಗತ್ಯದಲ್ಲಿ ತಪಸ್ಸಿನಂತೆ ನಡೆದ ಜ್ಞಾನಾರ್ಜನೆ ವಿಶ್ವೇಶರನ್ನು ಪ್ರಬುದ್ಧ ಯತಿಯಷ್ಟೇ ಅಲ್ಲ; ಚಿಂತಕನಾಗಿಸಿತು. ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಅವರು ಆಗಮತ್ರಯಗಳ ಮೇಲೆ ನಡೆದ ವಿದ್ವತ್ಸಭೆಯ ಅಧ್ಯಕ್ಷಪೀಠ ಅಲಂಕರಿಸಿದರು. ಅವರ ಮಾತುಗಳಿಗೆ ಅಂದು ಉಪಸ್ಥಿತರಿದ್ದು ಕೇಳಿ ಮೆಚ್ಚಿದ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರು, ಸ್ವಾಮಿಗಳನ್ನು ಅರಮನೆಗೆ ಕರೆದು ಸನ್ಮಾನಿಸಿ ಸತ್ಕರಿಸಿದರು. ಅದಾಗಿ ಮರುವರ್ಷ, 1952ರ ಜನವರಿ 18ರಂದು ಪರ್ಯಾಯ ಪೀಠವೇರಿ ಎರಡು ವರ್ಷಗಳ ಕಾಲ ಅವರು ನಡೆಸಿದ ಆಡಳಿತ, ಪೂಜೆ ಮತ್ತು ಅನ್ನಸಂತರ್ಪಣೆ ಉಳಿದೆಲ್ಲರಿಗೆ ಮಾದರಿಯಾಗಿ ನಿಂತಿತು. ಪರ್ಯಾಯದ ಅವಧಿಯಲ್ಲಿ ವಿಶ್ವೇಶ ತೀರ್ಥರು ಮಾಧ್ವ ತತ್ತ್ವಜ್ಞಾನ ಸಮ್ಮೇಳನ ನಡೆಸಿ ಮಾಧ್ವಮತಿಗಳನ್ನು ಒಂದೇ ಆಸರೆಯಡಿ ತರುವ ಕೆಲಸ ಮಾಡಿದರು.
ಅಲ್ಲಿಂದ ಮುಂದಕ್ಕೆ ಅವರದ್ದು ಗಜಗಮನ. ಆನೆ ನಡೆದದ್ದೇ ಹಾದಿಯೇ ವಿನಾ ಅವರಾಗಿ ಯಾವ ಪಂಥ, ವಿಚಾರದೊಡನೆಯೂ ತನ್ನ ಸಂನ್ಯಾಸವನ್ನು ರಾಜಿ ಮಾಡಿಕೊಂಡವರಲ್ಲ. “ನಾನು ಹಿಂದೂ ಧರ್ಮದ ಸಂನ್ಯಾಸಿ. ಹಾಗಾಗಿ ಹಿಂದೂ ಧರ್ಮೀಯರನ್ನು ಸನ್ಮಾರ್ಗದಲ್ಲಿ ನಡೆಸುವುದು, ಅವರಿಗೆ ಮಾರ್ಗದರ್ಶನ ಕೊಡುವುದು ನನ್ನ ಜವಾಬ್ದಾರಿ. ಅವರಿಗೆ ತೊಂದರೆಗಳಾದಾಗ ನ್ಯಾಯಕ್ಕಾಗಿ ದನಿ ಎತ್ತುವುದು ಕೂಡ ನನ್ನ ಹೊಣೆ” – ಬಹುಶಃ ಪೇಜಾವರರು ಇಷ್ಟೊಂದು ಸ್ಪಷ್ಟತೆಯಿಂದ ತನ್ನ ದನಿ ಎತ್ತರಿಸಿ ಹೇಳಿರದಿದ್ದರೆ ಇಂದು ಹಿಂದೂಗಳ ಸ್ಥಾನ ಎಲ್ಲಿರುತ್ತಿತ್ತು ಯೋಚಿಸುವಂತಾಗುತ್ತದೆ. ತನ್ನ ನಿರ್ಭೀತ ನೇರ ನುಡಿಗಳಿಂದಾಗಿಯೇ ಇಂದು ಪೇಜಾವರ ಶ್ರೀಗಳು ಒಂದು ನಿರ್ಧಿಷ್ಟ ಗುಂಪಿನ ಹಗೆ ಕಟ್ಟಿಕೊಳ್ಳಬೇಕಾಗಿದೆ. ಅವರು ಅದೆಷ್ಟು ನಿಷ್ಕಪಟತೆಯಿಂದ ಮಾತನ್ನಾಡಿದರೂ ಅದನ್ನು ಸಂಶಯದಿಂದಲೇ ನೋಡುವವರು ಇದ್ದಾರೆ. ತಮಾಷೆಯೆಂದರೆ ಉಡುಪಿಯಲ್ಲಿ ಯಾವ ಪರ್ಯಾಯ ನಡೆಯುತ್ತಿದ್ದರೂ ಯಾವ ವಿವಾದ ಹುಟ್ಟಿದರೂ ಹೊರಗಿನ ಜಗತ್ತಿನಲ್ಲಿ ಪೇಜಾವರರನ್ನು ಅದಕ್ಕೆ ಗುರಿ ಮಾಡಲಾಗುತ್ತದೆ. “ಹಿಂದೂಗಳ ಜತೆ ನೇರವಾಗಿ ಜಗಳಾಡಲು ಸಿಗುವವರು ನೀವೊಬ್ಬರೇ. ಹಾಗಾಗಿ ಬಯ್ಗುಳವೂ ನಿಮಗೆ, ಹೊಗಳಿಕೆಯೂ ನಿಮಗೇ” ಎಂದು ಒಬ್ಬ ರಾಜಕಾರಣಿ ಹೇಳಿದ್ದುಂಟು! ಅಯೋಧ್ಯಾ ನಗರದಲ್ಲಿ ರಾಮನ ದೇಗುಲ ನಿರ್ಮಾಣವಾಗಬೇಕೆಂದು ವಿಶ್ವೇಶ ತೀರ್ಥರು ದಿಟ್ಟವಾಗಿ ತನ್ನ ಅಭಿಪ್ರಾಯ ಕೊಟ್ಟಾಗ ಹಲವು ರಾಜಕೀಯ ಸಂಘಟನೆಗಳು ಅವರನ್ನು ವಾಚಾಮಗೋಚರ ಬಯ್ದದ್ದುಂಟು. ತೀರ ಇತ್ತೀಚೆಗೂ ಅವರ ಕಾರಿಗೆ ಕಲ್ಲೆಸೆವ ಪುಂಡಾಟಿಕೆಯನ್ನು ಕೆಲವರು ತೋರಿಸಿದರು. ಪೇಜಾವರರು ಮಠವೆಂಬ ಒಂದು ಸಂಸ್ಥೆಯ ಮುಖ್ಯಾಧಿಕಾರಿ. ಅವರಿಗೆ ಅವರದ್ದೇ ಆದ ಕಟ್ಟುಪಾಡುಗಳು, ನಿಷ್ಠೆ-ನಿಯಮ-ನೀತಿಗಳು ಇರುತ್ತವೆ. ಒಬ್ಬ ಕಾರ್ಪೊರೇಟ್ ಕಂಪೆನಿಯ ಉದ್ಯೋಗಿ ಹೇಗೆ ತನ್ನ ಆಫೀಸಿನ ಒಳಹೋಗಲು ಐಡಿ ಕಾರ್ಡ್ ತೋರಿಸಬೇಕೋ ಅಂತಹ ತನ್ನದೇ ಆದ ಸಂವಿಧಾನವನ್ನು ಒಂದು ಮಠವೂ ಹೊಂದಿರುತ್ತದೆ – ಎಂಬುದನ್ನು ಒಪ್ಪಲು ಸಿದ್ಧರಿಲ್ಲದ ಕೆಲವು ಕಿಡಿಗೇಡಿಗಳು ವಿಶ್ವೇಶ ತೀರ್ಥರನ್ನು ತೀರಾ ಕೆಳಮಟ್ಟದಲ್ಲಿ ನಿಂದಿಸಿದ್ದ ಚರಿತ್ರೆಯೂ ಇದೆ. ಅಂಥ ಎಲ್ಲ ಟೀಕೆ-ಟಿಪ್ಪಣಿಗಳನ್ನು ಈ ವಾಮನ ಮೂರ್ತಿ ವಿಷಕಂಠನಂತೆ ನುಂಗಿ ಅರಗಿಸಿಕೊಂಡಿದ್ದಾರೆ ಎನ್ನುವುದೇ ಅಚ್ಚರಿ!
ದಲಿತರ ಕೇರಿಯಲ್ಲಿ ಸಂನ್ಯಾಸಿ
ಪೇಜಾವರರು 1970ರ ದಶಕದಲ್ಲಿ ದಲಿತರ ಕೇರಿಗಳಿಗೆ ಹೋಗುವ ಕಾರ್ಯಯೋಜನೆ ಹಾಕಿಕೊಂಡಾಗ ದೊಡ್ಡ ಮಟ್ಟದಲ್ಲಿ ಅಪಸ್ವರ ಕೇಳಿಬಂದದ್ದುಂಟು. ಪೇಜಾವರರನ್ನು ದ್ವೇಷಿಸುವ, ಜಾತಿ ರಾಜಕೀಯ ಮಾಡಿದ್ದಾರೆ ಎಂಬ ಮಾತುಗಳನ್ನು ಹೇಳುವ ಹಲವರಿಗೆ ಸ್ವಾಮೀಜಿಯವರ ಈ ಸಾಧನೆಗಳ ಪರಿಚಯವೇ ಇರದಿರುವುದು ವಿಚಿತ್ರ. ಸ್ವಾಮೀಜಿಗಳು ಕರಾವಳಿಯ ಹಲವು ಹಳ್ಳಿಗಳನ್ನು ಸಂದರ್ಶಿಸಿ ಅಲ್ಲಿನ ದಲಿತರಿಗೆ ತಾವೂ ಹಿಂದೂ ಧರ್ಮೀಯರೆಂಬ ಭಾವನೆ ಹುಟ್ಟುವಂತೆ, ಗಟ್ಟಿಗೊಳ್ಳುವಂತೆ ಮಾಡಿದ್ದಾರೆ. ಹಲವು ಹಳ್ಳಿಗಳಿಗೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಠದಿಂದ ಆಗಿದೆ. ಇವರನ್ನು ನಮ್ಮವರೆಂದು ಒಪ್ಪಿಕೊಳ್ಳದೆ ಹೋದರೆ, ಮತಾಂತರದ ಕಬಂಧ ಬಾಹುಗಳು ಇವರನ್ನೂ ಸೆಳೆಯುತ್ತವೆ. ನಮ್ಮವರು ಅನ್ಯಮತಗಳಿಗೆ ವಲಸೆ ಹೋದಾಗ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನೆಲದ ಸಂಸ್ಕೃತಿಯೇ ಅಪಾಯ ಎದುರಿಸುವುದು. ಸಂಸ್ಕೃತಿ ಎನ್ನುವುದು ನಮ್ಮತನದ ಪ್ರತೀಕವಾದ್ದರಿಂದ, ಹಣವೋ ನೆಲವೋ ಸಿಗುತ್ತದೆಂಬ ಆಸೆಯಿಂದ ಅನ್ಯಮತಗಳನ್ನು ಅಪ್ಪಿಕೊಳ್ಳುವವರು ಮೂಲತಃ ತಮ್ಮತನವನ್ನು ಕಳೆದುಕೊಳ್ಳುತ್ತಾರೆ. ಈ ಎಚ್ಚರ ಎಲ್ಲರಲ್ಲೂ ಬರಬೇಕು – ವಿಶ್ವೇಶತೀರ್ಥರ ದಲಿತೋದ್ಧಾರದ ಹಿಂದೆ ಈ ಕಾಳಜಿ ಕೆಲಸ ಮಾಡುತ್ತಿದೆ. ಅವರ ದಲಿತೋದ್ಧಾರ ಕಾರ್ಯಕ್ರಮಗಳಿಗೆ ತನ್ನ ಸಮಾಜದ ಒಳಗಿಂದಲೇ ಅಪಸ್ವರ-ಟೀಕೆ ಹೆಚ್ಚಾದಾಗ ಒಮ್ಮೆ ಅವರು ನೊಂದು, ತಾನು ಹೃಷೀಕೇಶಕ್ಕೋ ಬದರಿಗೋ ಹೋಗಿ ಸಂನ್ಯಾಸ ಜೀವನ ನಡೆಸುತ್ತ ಬದುಕು ಸವೆಸುತ್ತೇನೆಂದು ಹೇಳಿದ್ದರು. ಪುಣ್ಯಕ್ಕೆ ಆ ಕೆಲಸ ಮಾಡಬೇಕಾದ ಸಂದರ್ಭ ಬರಲಿಲ್ಲ. ಪೇಜಾವರರ ಕೆಲಸಕ್ಕೆ ಸಮಾಜದ ಎಲ್ಲ ವರ್ಗಗಳೂ ಕೈಜೋಡಿಸಿ ಬೆಂಬಲ ಕೊಟ್ಟವು.
ಇಂದಿಗೂ ದಲಿತರ ಕೇರಿಗೆ ಭೇಟಿ ಕೊಡುವ ಕಾರ್ಯಕ್ರಮಗಳು ಮುಂದುವರಿದಿವೆ. ಉಡುಪಿ ಸುತ್ತಲಿನ ನಕ್ಸಲೈಟ್ ಪೀಡಿತ ಪ್ರದೇಶಗಳ ಒಳಗೆ ಪಾದ ಸವೆಸಿ ಅಲ್ಲಿನ ಜನರಲ್ಲಿ ಸರಿಯಾದ ತಿಳಿವಳಿಕೆ ಮೂಡಿಸುವ ಕೆಲಸ ಪೇಜಾವರರಿಂದ ಆಗಿದೆ. ಸರಕಾರದ ಯಾವ ಸವಲತ್ತುಗಳೂ ಸಿಗದ ಕುಗ್ರಾಮಗಳಿಗೆ ಇವರು ಬೆಳಕು, ನೀರು, ಸ್ವಚ್ಛತೆ, ಉದ್ಯೋಗ, ಶಿಕ್ಷಣ ಸಿಗಲು ಬೇಕಾದ ಎಲ್ಲಬಗೆಯ ನೆರವುಗಳನ್ನೂ ನೀಡಿದ್ದಾರೆ. ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ಉಚಿತ ವಿದ್ಯಾರ್ಥಿನಿಲಯಗಳನ್ನು ಮಠ ನಡೆಸುತ್ತಿದೆ. ಇಷ್ಟೆಲ್ಲ ಸಮಾಜೋದ್ಧಾರದ ಕೆಲಸಗಳನ್ನು ನಿರ್ಬಿಢೆಯಿಂದ ಕೈಗೆತ್ತಿಕೊಂಡರೂ ಪೇಜಾವರರು ಜಾತಿವಾದಿ, ಕೋಮುವಾದಿ, ದಲಿತವಿರೋಧಿ ಎಂಬ ಹಣೆಪಟ್ಟಿಗಳನ್ನು ಹೊರಬೇಕಾಗಿದೆ ಎನ್ನುವುದು ವಿಪರ್ಯಾಸ, ಅಷ್ಟೇ ಬೇಸರದ ಸಂಗತಿ.
ಪೇಜಾವರರ ಪರ್ಯಾಯ
ಉಡುಪಿಯ ಪ್ರತಿಯೊಂದು ಮಠದ ಪರ್ಯಾಯದಲ್ಲೂ ಜನರಿಗೆ ಒಂದಿಲ್ಲೊಂದು ನಿರೀಕ್ಷೆಗಳಿರುವುದುಂಟು. ಆದರೆ ಪೇಜಾವರರ ಪರ್ಯಾಯ ಎಂದರೆ ಅದಕ್ಕೆ ಬೇರೆಯೇ ಗತ್ತು, ಬೇರೆಯೇ ತೂಕ! ಅವರ ಪರ್ಯಾಯದಲ್ಲಿ ನಡೆವಷ್ಟು ಕಾರ್ಯಕ್ರಮಗಳು, ಸಂಭ್ರಮ-ಸಮಾರಂಭಗಳನ್ನು ಉಳಿದವರು ಬೆಂಬತ್ತಿ ಸರಿಗಟ್ಟುವುದು ಸವಾಲಿನ ಕೆಲಸ! ವಿಶ್ವೇಶ ತೀರ್ಥರ ಪರ್ಯಾಯದಲ್ಲಿ ಏನಾದರೊಂದು ವಿಶೇಷ ಇದ್ದೇ ಇರುತ್ತದೆ ಎನ್ನುವುದು ಅವರ ವಿರೋಧಿಗಳಿಗೂ ಗೊತ್ತು. ಯಾಕೆಂದರೆ ಆ ಎರಡು ವರ್ಷಗಳಲ್ಲಿ ನಡೆವ ಸಾಂಸ್ಕೃತಿಕ, ವೈಚಾರಿಕ, ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ವಿರೋಧಿಗಳಿಗೂ ವೇದಿಕೆಯಲ್ಲಿ ಸಮಪಾಲು ಸಿಗುತ್ತದೆ. ಉಡುಪಿಗೆ ಬಂದು ವೇದಿಕೆಯಲ್ಲಿ ತಮ್ಮ ತತ್ತ್ವ-ಸಿದ್ಧಾಂತಗಳನ್ನು ಜೋರುದನಿಯಲ್ಲಿ ಹೇಳಿ, ಕೆಲವೊಮ್ಮೆ ಶ್ರೀಗಳನ್ನು ಜರೆದು ಕೊನೆಗೆ ಅವರಿಂದಲೇ ಸನ್ಮಾನಿಸಿಕೊಂಡು ಹೋಗುವವರು ಇದ್ದಾರೆ! ವೈದಿಕವಾದ ಎಲ್ಲವನ್ನೂ ಹೀಯಾಳಿಸುವ ಚಂದ್ರಶೇಖರ ಪಾಟೀಲರಂಥ ಸಾಹಿತಿಗಳೂ ಪೇಜಾವರರ ಪರ್ಯಾಯದಲ್ಲಿ ವೇದಿಕೆಯಲ್ಲಿ ಮಾತಾಡುತ್ತ, “ಈ ಸ್ವಾಮಿಗಳ ಪ್ರೀತಿ ಧೃತರಾಷ್ಟ್ರನ ಆಲಿಂಗನದಂತೆ. ಅಪ್ಪಿಕೊಂಡವನನ್ನೇ ಮುರಿದುಹಾಕುತ್ತದೆ” ಎಂದು ಮಾತಾಡಿ ಶಾಲು ಹೊದೆಸಿಕೊಂಡು ಸನ್ಮಾನಿತರಾಗಿದ್ದಾರೆ! ತಾನಾಗಿ ತನ್ನ ವೈರಿಗಳಿಗೆ ವೇದಿಕೆ ಒದಗಿಸಿಕೊಡುವುದರಿಂದಲೇ ಬಹುಶಃ ಪೇಜಾವರರು ವಿರೋಧಿಗಳಿಗೂ ಬೇಕು.
ಪಲಿಮಾರು-ಅದಮಾರು ಮಠಗಳ ಪರ್ಯಾಯ ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮುನ್ನೆಲೆ ಪಡೆದರೆ ವಿಶ್ವೇಶ ತೀರ್ಥರ ಪರ್ಯಾಯದಲ್ಲಿ ಮುಖ್ಯವಾಗಿ ವಿಜೃಂಭಿಸುವುದು ಸಾಂಸ್ಕೃತಿಕ ವೈಭವ. ದೇಶವಿದೇಶದ ಕಲಾವಿದರನ್ನು ಉಡುಪಿಗೆ ಕರೆಸಿ ಇಲ್ಲಿನ ವೇದಿಕೆಗಳಲ್ಲಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡುವುದು ವಿಶ್ವೇಶರ ಅಪರೂಪದ ಗುಣ. ಅವರ ಕಾಲದಲ್ಲಿ ಕೃಷ್ಣಮಠಕ್ಕೆ ಹೊಂದಿಕೊಂಡಿರುವ ರಾಜಾಂಗಣ ಎಂಬ ಸಭಾಂಗಣ ನಿಜಾರ್ಥದಲ್ಲಿಯೂ ರಾಜಾಂಗಣವೇ ಆಗಿಬಿಡುತ್ತದೆ. ಬಹುಶಃ ಈ ಬಾರಿ, ಅದರ ಜೊತೆಗೆ ಒಂದಷ್ಟು ರಾಜಕೀಯ ನಾಯಕರನ್ನೂ ಹತ್ತಿರದಿಂದ ನೋಡುವ, ಅವರ ಮಾತುಗಳನ್ನು ಕೇಳುವ ಸುಯೋಗ ಉಡುಪಿಯ ಸ್ಥಳೀಯರಿಗೆ ಬರಬಹುದು. ವಾಜಪೇಯಿಯವರಿಂದ ಹಿಡಿದು ದೇಶದ ಎಲ್ಲ ಪ್ರಮುಖ ಮುತ್ಸದ್ದಿಗಳನ್ನು ಆತ್ಮೀಯವಾಗಿ ಮಾತಾಡಿಸುವ ಸಲುಗೆ ಪೇಜಾವರರಿಗೆ ಇದೆ. ವಿಶ್ವಹಿಂದೂ ಪರಿಷತ್ ಜೊತೆ ಅವರು ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಅಡ್ವಾನಿಯವರ ಜೊತೆ ಅವರ ಗೆಳೆತನ ಅಪರೂಪದ್ದು. ಬೆಂಕಿಚೆಂಡು ಎಂದೇ ಖ್ಯಾತವಾದ ಉಮಾಭಾರತಿ, ಪೇಜಾವರ ಸ್ವಾಮಿಗಳಿಂದಲೇ ದೀಕ್ಷೆ ಪಡೆದ ಸನ್ಯಾಸಿನಿ. ರಾಮನ ಮಂದಿರ ಅಯೋಧ್ಯೆಯಲ್ಲಿ ಆಗಲೇಬೇಕೆಂಬ ಸಾಧುಗಳ ವೃಂದದಲ್ಲಿ ಪೇಜಾವರರದ್ದು ಗಟ್ಟಿ ದನಿ. ಈ ಕಾಲದ ಸಾಕ್ಷಿಯಾಗಿರಬೇಕು; ಯಾವ ಕಾರಣಕ್ಕೂ ತನ್ನ ಅಭಿಮತವನ್ನು ಮುಚ್ಚಿಡಬಾರದು ಎನ್ನುವುದು ಶ್ರೀಗಳ ನಿಲುವು. ಇದೇ ಕಾರಣಕ್ಕೆ ಅವರು ಹಲವು ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಥವಾ ವಿವಾದ ಹುಟ್ಟಿದಾಗೆಲ್ಲ ಮಾಧ್ಯಮಗಳು ಪೇಜಾವರರ ಬಳಿ ಓಡಿ ಅಭಿಪ್ರಾಯ ಕೇಳುವುದೂ ಅದಕ್ಕೆ ಕಾರಣವಿರಬಹುದು. ಅದೆಲ್ಲ ಏನೇ ಇರಲಿ, ಪೇಜಾವರರ ಪರ್ಯಾಯ ಈ ಸಲ ನ ಭೂತೋ ನ ಭವಿಷ್ಯತಿ ಎಂಬಂತೆ ಅತ್ಯಂತ ವೈಭವದಿಂದ ವೈವಿಧ್ಯಮಯವಾಗಿ ಶ್ರೀಮಂತವಾಗಿ ನಡೆದಿದೆ. ಪರ್ಯಾಯವೆಂಬ ದೈವಾರ್ಷಿಕ ಸಂಭ್ರಮಕ್ಕೆ ಪೇಜಾವರ ಶ್ರೀಗಳಿಂದ ಹೊಸಕಳೆ ಬಂದಿದೆ ಅನ್ನುವುದೂ ಅಷ್ಟೇ ನಿಜ.
(ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಮತ್ತು ಸರ್ವಜ್ಞ ಪೀಠಾರೋಹಣದ ಸಂದರ್ಭದಲ್ಲಿ ‘ಕರ್ಮವೀರ’ ಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟ ಲೇಖನದ ಆಯ್ದ ಭಾಗ)
Facebook ಕಾಮೆಂಟ್ಸ್