X

ಮಿಲೇ ಸುರ್ ಮೇರಾ ತುಮ್ಹಾರಾ! ಯೇ ಸುರ್ ಬನೇ ಹಮಾರಾ!

ಅದೊಂದು ಸುಂದರ ಬಾಲ್ಯ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಧನುಷ್ಠಂಕಾರಗೊಂಡ ಬಾಣಗಳಂತೆ ಮನೆಗೋಡುತ್ತಿದ್ದ ನಾವು ತಪ್ಪದೆ ಕೇಳುತ್ತಿದ್ದ ಕಾರ್ಯಕ್ರಮವೆಂದರೆ 2:20ಕ್ಕೇನೋ ಪ್ರಸಾರವಾಗುತ್ತಿದ್ದ ಚಿಲಿಪಿಲಿ. ವಾರಕ್ಕೊಂದು ಶಾಲೆಯಂತೆ ನಮ್ಮ ಜಿಲ್ಲೆಯ ಶಾಲಾ ಮಕ್ಕಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮ ಕೇಳಿ ನಮ್ಮ ಶಾಲೆಯವರು ಉಳಿದವರಿಗಿಂತ ಹೆಚ್ಚೋ ಕಡಿಮೆಯೋ; ನಮ್ಮ ಗುಣಮಟ್ಟಕ್ಕೆ ಉಳಿದವರು ಬಂದಾರೋ ಇಲ್ಲವೋ ಎಂದು ಪರೀಕ್ಷಿಸಲು ನಮಗೆ ಸಿಗುತ್ತಿದ್ದ ಅವಕಾಶ ಅದು. ಪರವಾಗಿಲ್ಲ, ಇವನಿಗಿಂತ ನಮ್ಮ ರಾಕೇಶನೇ ಚೆನ್ನಾಗಿ ಕತೆ ಓದ್ತಾನೆ; ಅವಳಿಗಿಂತ ನಮ್ಮ ರೇಷ್ಮಾಳ ಕಂಠವೇ ಚೆನ್ನಾಗಿದೆ ಎಂದೆಲ್ಲ ಹೋಲಿಸಿ ನೋಡಿ ವಿಮರ್ಶೆ ಮಾಡಿದರೆ ಮನಸ್ಸಿಗೊಂದು ಸಮಾಧಾನ! ಆ ಸಣ್ಣಪುಟ್ಟ ಸಮಾಧಾನ, ಸಂತೋಷ, ಭ್ರಮೆಗಳ ಕಾಲ ಕಳೆದುಹೋಗಿ ಮೂರು ದಶಕಗಳೇ ಉರುಳಿದವು.

ಎಲ್ಲರ ಮನೆಯಲ್ಲಿದ್ದಂತೆ ನಮ್ಮಲ್ಲೂ ಒಂದು ರೇಡಿಯೋ ಇತ್ತು. ಗಾಳಿಯಲ್ಲಿ ತೇಲಿ ಬಂದ ಅದೃಶ್ಯ ದನಿಗಳನ್ನು ಹಿಡಿದು ಹಾಕಿ ನಮ್ಮ ಶ್ರವಣೇಂದ್ರಿಯಗಳಿಗೆ ಕೇಳಿಸುವ ಆ ಪುಟ್ಟ ಪೆಟ್ಟಿಗೆಯ ಮ್ಯಾಜಿಕ್ಕಿಗೆ ನಾನಂತೂ ಬೆರಗಾಗಿದ್ದೆ. ಹಳೆಯ ಮರ್ಫಿ ರೇಡಿಯೋ ಪೂರ್ತಿ ಕೆಟ್ಟುಹೋಯಿತೆಂದು ಅದನ್ನು ಮೂಲೆಗೆಸೆವ ಕಾಲ ಬಂದಾಗ ಯಾರಿಗೂ ಹೇಳದೆ ಗುಟ್ಟಾಗಿ ಅದನ್ನು ಹಿತ್ತಿಲಿಗೊಯ್ದು ಒಡೆದು ಒಳಗಿನ ಅಂಗಾಂಗಗಳನ್ನು ಕಂಡು ರೋಮಾಂಚನಗೊಂಡಿದ್ದೆ. ಬಗೆಬಗೆಯ ಬಣ್ಣದ ತಂತಿ, ರೆಸಿಸ್ಟರು, ಟ್ರಾನ್ಸಿಸ್ಟರುಗಳಿಂದ ನಿಬಿಡಗೊಂಡಿದ್ದ ರೇಡಿಯೋ ಒಳಗಿನ ವಿನ್ಯಾಸದ ನಯಾಪೈಸೆ ಅರ್ಥವಾಗದೆ ಹೋದರೂ ಏನನ್ನೋ ಸಾಧಿಸಿದ ಭಾವ ಮಾತ್ರ ಹಲವು ವಾರ ಮನಸ್ಸಿನಲ್ಲಿತ್ತು. ಅವೆಲ್ಲ ತಂತಿಗೊಂತಿಗಳ ನಡುವೆ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಅಂಗೈ ತುಂಬುವಷ್ಟು ದೊಡ್ಡದಿದ್ದ ಅಯಸ್ಕಾಂತದ ಬಟ್ಟಲು. ಇವನ್ನೆಲ್ಲ ಇಟ್ಟುಕೊಂಡು ನಾನೂ ಒಂದು ರೇಡಿಯೋ ಮಾಡಬಾರದೇಕೆ? ನನ್ನದೇ ಧ್ವನಿಯನ್ನು ಊರಿಗೆಲ್ಲ ಕೇಳಿಸಬಾರದೇಕೆ ಎಂಬ ಹುಚ್ಚುಯೋಚನೆಗಳೂ ಬಂದಿದ್ದವೆನ್ನಿ. ಇಂಥ ಯಾವ ಅಸಂಬದ್ಧ ಯೋಚನೆಗಳನ್ನೂ ಮಾಡದೆ ಶಿಸ್ತಿನಿಂದ ಕಳೆದ ಬಾಲ್ಯ ನೀರುನೀರಾಗಿ ನೀರಸವಾಗಿರುತ್ತದೆ ಎಂದೇ ಇಂದಿಗೂ ನಂಬುವವನು ನಾನು.

ಅದಿರಲಿ, ರೇಡಿಯೋ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಿದ್ದೆನಲ್ಲ? ನಮ್ಮಲ್ಲಿ ಅದೊಂದು ಮಾಯಾಪೆಟ್ಟಿಗೆಯನ್ನು ಹಲವು ಮಂದಿ ಹಲವು ಬಗೆಯಲ್ಲಿ ಬಳಸುತ್ತಿದ್ದರು. ಶನಿವಾರ ಬೆಳಿಗ್ಗೆ ಏಳೂವರೆಗೆ ಅದರಲ್ಲಿ ರಸವಾರ್ತೆ ಬರುತ್ತಿತ್ತು. ಅದನ್ನು ನಾನೂ ತಂಗಿಯೂ ತಪ್ಪದೆ ಕೇಳಿಸಿಕೊಳ್ಳುತ್ತಿದ್ದೆವು. ಬುಧವಾರವೋ ಗುರುವಾರವೋ ಮಂಗಳೂರು ಆಕಾಶವಾಣಿಯಿಂದ ತಡರಾತ್ರಿ ಪ್ರಸಾರವಾಗುತ್ತಿದ್ದ ಯಕ್ಷಗಾನ, ಅದು ಅಜ್ಜಿಗೆ ಮೀಸಲು. ಅದೊಂದು ಕಾರ್ಯಕ್ರಮ ತಪ್ಪಿಸಲೇಬಾರದೆಂಬ ಕಾಳಜಿಯಿಂದ ಅಜ್ಜಿ ಸಂಜೆ ಐದಕ್ಕೇ ಬತ್ತಿ ಹೊಸೆದು ದೇವರಿಗೆ ದೀಪ ಇಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಬಿಡುತ್ತಿದ್ದುದನ್ನು ಮೌನವಾಗಿ ನಗುತ್ತ ನೋಡುತ್ತಿದ್ದೆ. ವಿವಿಧ ಭಾರತಿಯಲ್ಲಿ ಬರುತ್ತಿದ್ದ ಬಿನಾಕಾ ಗೀತ್‍ಮಾಲಾ ಕಾರ್ಯಕ್ರಮವನ್ನು ಹುಚ್ಚು ಹಿಡಿದು ಕೇಳಿಸಿಕೊಳ್ಳುತ್ತಿದ್ದ ಮಾಮ, ಈ ಕುಟುಂಬದಲ್ಲಿ ತಾನೊಬ್ಬನೇ ಆಧುನಿಕನೆಂಬುದಕ್ಕೆ ಇದೊಂದು ಪುರಾವೆ ಎಂದು ಬಗೆದಿದ್ದ. ಇಂಥ ನಂಬರಲ್ಲಿ ಇಂಥ ಹಾಡೇ ಬರುತ್ತದೆಂದು ಆಫೀಸಿನಲ್ಲಿ ಬೆಟ್ ಕಟ್ಟಿದ ದಿನ ಮಾತ್ರ ಅವನು ಒಂದು ಕೈಯಲ್ಲಿ ರೇಡಿಯೋ ಮರಿಯನ್ನೂ ಇನ್ನೊಂದು ಕೈಯಲ್ಲಿ ಪೇಪರು ಪೆನ್ಸಿಲನ್ನೂ ಹಿಡಿದು ಚಡಪಡಿಸುತ್ತ ಕೂರುವುದು ವಿಚಿತ್ರ ದೃಶ್ಯವಾಗಿರುತ್ತಿತ್ತು ನಮಗೆಲ್ಲ. ನನ್ನ ಚಿಕ್ಕಮ್ಮ ಪ್ರತಿ ಮಧ್ಯಾಹ್ನ “ಕೋರಿಕೆ” ಎಂಬ ಕಾರ್ಯಕ್ರಮಕ್ಕೆ ಕಿವಿಹಚ್ಚಿ ಕೂತು ಜಗತ್ತಿನ ಯಾರ್ಯಾರು ಯಾವ್ಯಾವ ಹಾಡುಗಳನ್ನು ಕೋರಿ ಪತ್ರ ಬರೆದರೆಂಬ ಲೆಕ್ಕ ತೆಗೆಯುತ್ತಿದ್ದಳು. ಹೆಚ್ಚೂ ಕಡಿಮೆ ಅವಳಿಗೆ ಮಂಗಳೂರ ಆಸುಪಾಸಿನಲ್ಲಿದ್ದ ಎಲ್ಲ ರೇಡಿಯೋ ಕೇಳುಗರ ಪರಿಚಯ ಈ ಕಾರ್ಯಕ್ರಮದ ಮೂಲಕವೇ ಆಗಿಬಿಟ್ಟಿತ್ತೆಂದು ಕಾಣುತ್ತದೆ. ಮದುವೆ ಮನೆಯಲ್ಲಿ ಅಪರಿಚಿತ ಬಂಧುಗಳು ತಮ್ಮ ಹೆಸರು ಹೇಳಿ ಪರಿಚಯಿಸಿಕೊಂಡರೆ ಈಕೆ ತಟ್ಟನೆ, “ಹೋದ ಗುರುವಾರ ಕೋರಿಕೆಯಲ್ಲಿ ನೀರ ಬಿಟ್ಟು ನೆಲದ ಮೇಲೆ ಹಾಡು ಕೇಳಿ ಬರೆದವರು ನೀವೇ ಅಲ್ಲವಾ” ಎಂದು ತನ್ನ ಸ್ಮರಣಶಕ್ತಿಯ ಪ್ರದರ್ಶನ ಮಾಡುತ್ತಿದ್ದಳು. ಇನ್ನು ಅಜ್ಜ ಕೇಳುತ್ತಿದ್ದದ್ದು ಮೂರೇ ವಿಷಯ: ರಂಗರಾವ್ ಓದುತ್ತಿದ್ದ ಪ್ರಾದೇಶಿಕ ವಾರ್ತೆ,ಪೇಟೆಧಾರಣೆ ಮತ್ತು ಪ್ರತಿ ಮುಂಜಾವಿನ ಚಿಂತನ. ನನಗೋ ನಡುವೆ ಒಂದಿಷ್ಟು ದಿನ ರೇಡಿಯೋ ಕೇಳಿ ಸಂಸ್ಕøತ ಕಲಿಯುವ ಹುಕಿ ಬಂದು ಬಿಟ್ಟಿತ್ತು. ಬಿಟ್ಟೂಬಿಡದೆ ಕೇಳಿದರೂ ಮೂರು ವರ್ಷದಲ್ಲಿ ನಾನು ಕಲಿತದ್ದು – ಇಯಂ ಆಕಾಶವಾಣೀ. ಸಂಪ್ರತಿ ವಾರ್ತಾಃ ಶ್ರೂಯಂತಾಂ. ಪ್ರವಾಚಕಃ ಬಲದೇವಾನಂದ ಸಾಗರಃ – ಇಷ್ಟೇ! ಪ್ರತಿದಿನ ಹತ್ತು ನಿಮಿಷ ಸಂಸ್ಕøತ ವಾರ್ತೆ ಓದಿದ ನಂತರ ಈ ಮನುಷ್ಯ ಆಕಾಶವಾಣಿಯಲ್ಲಿ ಏನು ಮಾಡುತ್ತಾರೆ ಎಂದು ಬಹಳ ವರ್ಷ ನನಗೆ ಕುತೂಹಲ ಉಳಿದುಬಿಟ್ಟಿತ್ತು. ಆಗಾಗ ರೇಡಿಯೋ ನಾಟಕಗಳನ್ನೂ ಕೇಳುವ ಪ್ರಯತ್ನ ಮಾಡುತ್ತಿದ್ದೆನಾದರೂ ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ತಲೆಬುಡ ಅರ್ಥವಾಗುತ್ತಿರಲಿಲ್ಲ.

ರೇಡಿಯೋ ನಮ್ಮ ಮನೆಯ ಅವಿಭಾಜ್ಯ ಸದಸ್ಯನಾಗಿತ್ತು. ಈ ಪುಟ್ಟ ಪೆಟ್ಟಿಗೆಯಲ್ಲಿ ವಿವಿಧ ಸ್ಟೇಷನ್ನುಗಳ ಧ್ವನಿಯ ಅಲೆಗಳನ್ನು ಹಿಡಿದು ಹಾಕಲು ಕೀಲಿ ತಿರುಪುವುದನ್ನು ನಾವು ಸಂಗೀತ ಕಾರ್ಯಕ್ರಮಕ್ಕೆ ತಂಬೂರಿ ಶ್ರುತಿಗೊಳಿಸುವಷ್ಟೇ ಶ್ರದ್ಧೆಯಿಂದ ಮಾಡುತ್ತಿದ್ದೆವು. ಜೋರು ಹುಕಿ ಬಂದರೆ ಈ ಕಡೆಯಿಂದ ಆ ಕಡೆಯವರೆಗೆ ಸಿಗುವ ಎಲ್ಲಾ ಸ್ಟೇಷನ್ನುಗಳನ್ನೂ ಸೆರೆ ಹಿಡಿದು ಒಂದೊಂದು ನಿಮಿಷ ಕೇಳಿ ಖುಷಿ ಪಡುವ ಆಟ ಆಡುವುದಿತ್ತು. ಆಗೇನಾದರೂ ಇಂಗ್ಲೀಷಿನ ಮಾತು-ಕತೆ ಕೇಳಿಸಿತೋ ನಮಗೆ ಲಂಡನ್ನಿಗೆ ಹೋಗಿಬಂದಷ್ಟೇ ಖುಷಿ! ಕಾರ್ಯಕ್ರಮ ಕೇಳಿ ಮುಗಿಸಿದ ಮೇಲೆ ನಮ್ಮಜ್ಜ ರೇಡಿಯೋ ಮರಿಯನ್ನು ಮೆತ್ತನೆ ಬಟ್ಟೆಯಲ್ಲಿ ಸುತ್ತಿಟ್ಟು ಕಾಪಾಡುತ್ತಿದ್ದರು. ಹಾಗಾಗಿ ಅದನ್ನು ನೋಡಿದಾಗೆಲ್ಲ ನನಗೆ ಯಾವುದೋ ಲೋಕದ ಅದ್ಭುತ ಸಂಗತಿಯೊಂದು ನಮ್ಮ ಪಡಸಾಲೆಯಲ್ಲಿ ಹೀಗೆ ಬಂದು ಕೂತಿದೆ; ಲೋಕದ ಸುದ್ದಿಯನ್ನೆಲ್ಲ ತಂದು ನಮ್ಮೆದುರು ಹರವುತ್ತಿದೆ; ಇದಿಲ್ಲದೇ ಹೋದರೆ ಜಗತ್ತಿನ ವ್ಯವಹಾರಗಳ ಜೊತೆ ನಾವು ಸಂಬಂಧ ಕಳೆದುಕೊಂಡು ದ್ವೀಪಗಳಾಗುತ್ತೇವೆ ಎಂದೇ ಅನ್ನಿಸುತ್ತಿತ್ತು. ಟೀವಿಯೆಂಬೋ ಟೀವಿ ಬಂದ ಮೇಲೂ ನಮ್ಮ ಮನೆಯಲ್ಲಿ ರೇಡಿಯೋದ ಪ್ರತಿಷ್ಠೆಗೇನೂ ಘಾಸಿಯಾಗಿರಲಿಲ್ಲ. ಆದರೆ ಎಂದು ಟಿವಿಯಲ್ಲಿ ಚಾನೆಲುಗಳ ಭರಾಟೆ ಶುರುವಾಯಿತೋ,ರೇಡಿಯೋವನ್ನು ಕಿವಿಯೊಳಗೇ ತುರುಕಿಕೊಂಡಂತೆ ಹಿಡಿದು ಊರೆಲ್ಲ ಓಡಾಡುತ್ತ ಕ್ರಿಕೆಟ್ ಕಾಮೆಂಟರಿ ಕೇಳುವ ಬದಲು ಬಣ್ಣದ ಟಿವಿಯಲ್ಲಿ ಅದರ ನೇರಪ್ರಸಾರವನ್ನೇ ನೋಡಬಹುದೆಂಬ ಅನುಕೂಲ ಯಾವಾಗ ಸಿಕ್ಕಿತೋ ರೇಡಿಯೋದ ಅಸ್ತಿತ್ವಕ್ಕೆ ಬಹುದೊಡ್ಡ ಧಕ್ಕೆ ಒದಗಿತು. ಬರಬರುತ್ತ ನಮ್ಮ ಮನೆಯಲ್ಲಿ ರೇಡಿಯೋ ಕೂಡ ಇದೆ ಎಂಬ ವಿಷಯವನ್ನೇ ಮರೆಯುತ್ತ ಹೋದೆವು. ಒಂದಾನೊಂದು ಕಾಲದಲ್ಲಿ ವಿಜೃಂಭಿಸಿದ್ದ ಈ ಬಾನುಲಿ ಪೆಟ್ಟಿಗೆ ಈಗ ಕಾಲನ ಹೊಡೆತಕ್ಕೆ ಪಕ್ಕಾಗಿ ಉಸಿರು ಕೂಡ ಎತ್ತದೆ ಮರಗಟ್ಟಿ ಕೂತಿತು. ಹಳೆ ಮನೆಯಿಂದ ಹೊಸ ಮನೆಗೆ ಬಿಡಾರ ಬದಲಿಸುವ ವೇಳೆಗೆ ರೇಡಿಯೋ ಅದೆಲ್ಲೋ ಕಳೆದೇಹೋಯಿತೆಂದು ಕಾಣುತ್ತದೆ. ಅಯ್ಯಯ್ಯೋ ಕಾಣದೇ ಹೋಯ್ತಲ್ಲ ಎಂದು ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ! ಪ್ರಾತಿನಿಧ್ಯ ಕಳೆದುಕೊಂಡ ಸಂಗತಿಗಳನ್ನು ನಾವು ಅದೆಷ್ಟು ಕ್ರೂರವಾಗಿ ಬದುಕಿನಿಂದ ಹೊರಗೆಸೆದು ಬಿಡುತ್ತೇವಲ್ಲ ಎಂದು ಇಂದಿಗೂ ಬೇಸರವಾಗುತ್ತದೆ, ಅದನ್ನು ನೆನೆದಾಗೆಲ್ಲ.

ಅಂದ ಹಾಗೆ, ಆಲ್ ಇಂಡಿಯಾ ರೇಡಿಯೋ ಸೇವೆ ಪ್ರಾರಂಭವಾಗಿ ಇಂದಿಗೆ ಎಂಬತ್ತು ವರ್ಷಗಳೇ ಉರುಳಿ ಹೋಗಿವೆಯಂತೆ. 1923ರಲ್ಲಿ ಮುಂಬೈಯಲ್ಲಿ ಮೊತ್ತಮೊದಲ ರೇಡಿಯೋ ಕ್ಲಬ್ ಶುರುವಾಯಿತಂತೆ. ಅದಾಗಿ ನಾಲ್ಕು ತಿಂಗಳಲ್ಲಿ ಕೋಲ್ಕತ್ತದಲ್ಲೂ ಒಂದು ಕ್ಲಬ್ ಹುಟ್ಟಿತು. ಅದೇ ಮುಂದೆ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ ಆಗಿ, ಮೂರ್ನಾಲ್ಕು ವರ್ಷ ನಡೆದು, ನಷ್ಟದ ಹುಲುಸಾದ ಬೆಳೆ ತೆಗೆದು ಮುಚ್ಚುವ ಪರಿಸ್ಥಿತಿಗೆ ಬಂತು. 1927ರಲ್ಲಿ ಅದನ್ನು ಬ್ರಿಟಿಷ್ ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿತಂತೆ. ದೇಶವಾಸಿಗಳನ್ನು ಒಂದೇ ಏಟಿಗೆ ತಲುಪಬೇಕಾದರೆ ರೇಡಿಯೋಗಿಂತ ಪ್ರಬಲ ಮಾಧ್ಯಮ ಆಗ ಬೇರೇನೂ ಇರಲಿಲ್ಲವಲ್ಲ? ಈ ರೇಡಿಯೋ ಸೇವೆ ಮುಂದೆ1936ರ ಜುಲೈ 8ರಂದು ಆಲ್ ಇಂಡಿಯಾ ರೇಡಿಯೋ ಎಂಬ ಚೆಂದದ ಹೆಸರಲ್ಲಿ ಕಾರ್ಯಾಚರಿಸಲು ತೊಡಗಿತು. ಇದಕ್ಕೆ ಆಕಾಶವಾಣಿ ಎಂಬ ನಾಮಕರಣವಾದದ್ದು 1956ರಲ್ಲಿ. ಹಾಗೆ ಅಚ್ಚ ಭಾರತೀಯ ನಾಮಕರಣವಾಗಲು ಮೂರು ಜನ ಕನ್ನಡಿಗರು ಕಾರಣವಾದರು ಎಂಬುದೊಂದು ವಿಶೇಷ.

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಮನಃಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ. ಎಂ.ವಿ. ಗೊಪಾಲಸ್ವಾಮಿಯವರಿಗೆ ಪಾಠಪ್ರವಚನ ಮುಗಿಸಿ ಮನೆಗೆ ಬಂದಾಗ ಹೊತ್ತು ಕಳೆಯಲೊಂದು ಹವ್ಯಾಸವಿದ್ದರೆ ಒಳ್ಳೆಯದಲ್ಲವೇ ಅನ್ನಿಸಿತಂತೆ. ಕಾರ್ಯ ನಿಮಿತ್ತ ಲಂಡನ್ನಿಗೆ ಹೋದಾಗ ಅಲ್ಲಿ ಅವರು ರೇಡಿಯೋ ಎಂಬ ಮಾಯಾಂಗನೆಯ ಚಮತ್ಕಾರಗಳನ್ನು ನೋಡಿದರು. ಸಣ್ಣದೊಂದು ಟ್ರಾನ್ಸ್‍ಮಿಟರ್ (ಪ್ರೇಷಕ) ಇದ್ದರೆ ಸಾಕು ಮನೆಯಲ್ಲೇ ಒಂದು ರೇಡಿಯೋ ಕೇಂದ್ರವನ್ನು ಸ್ಥಾಪಿಸಿಬಿಡಬಹುದೆಂಬ ಸಂಗತಿ ತಿಳಿದ ಗೋಪಾಲಸ್ವಾಮಿಯವರಿಗೆ ಮೈಯೆಲ್ಲ ರೋಮಾಂಚನದಿಂದ ಮುಳ್ಳೆದ್ದಿತು. ಇಂಥದೊಂದು ಸಾಹಸವನ್ನು ತಾನೂ ಯಾಕೆ ಮೈಸೂರಲ್ಲಿ ಮಾಡಬಾರದು ಎಂದು ತಕ್ಷಣ ನಿರ್ಧರಿಸಿಯೇಬಿಟ್ಟರು. ಕೇವಲ 30 ವ್ಯಾಟ್ ವಿದ್ಯುತ್ ತಿನ್ನುವ ಪ್ರೇಷಕವೊಂದನ್ನು ಖರೀದಿಸಿ ಹಡಗಿನಲ್ಲಿ ನಮ್ಮ ದೇಶಕ್ಕೆ ತಂದರು. ಮೈಸೂರಿಗೆ ತಂದವರೇ ಅಲ್ಲಿ ಇಲ್ಲಿ ಜಾಗ ಹುಡುಕುವ ಕಷ್ಟವನ್ನೇ ತೆಗೆದುಕೊಳ್ಳದೆ ತನ್ನ ಮನೆ “ವಿಠ್ಠಲ ವಿಹಾರ”ದಲ್ಲೇ ಸ್ಥಾಪಿಸಿಬಿಟ್ಟರು! 1935ರ ಸೆಪ್ಟೆಂಬರ್ 10ನೇ ತಾರೀಖಿನ ದಿವ್ಯಮುಹೂರ್ತದಲ್ಲಿ ಮಹಾರಾಜಾ ಕಾಲೇಜಿನಲ್ಲಿ ಕುವೆಂಪು ಕವನವಾಚನದ ಮೂಲಕ ಗೋಪಾಲಸ್ವಾಮಿಯವರ ಏಕವ್ಯಕ್ತಿ ನಿರ್ದೇಶಿತ ಬಾನುಲಿ ಕೇಂದ್ರ ಉದ್ಘಾಟನೆಯಾಗಿ ಬಿಟ್ಟಿತು! ಭಾನುವಾರವೊಂದನ್ನುಳಿದು ಮಿಕ್ಕ ಆರೂ ದಿನ ಸಂಜೆ ಒಂದು-ಒಂದೂವರೆ ಗಂಟೆ ಶಾಸ್ತ್ರೀಯ ಗಾಯನ ಪ್ರಸಾರ ಮಾಡುವ ಹೊಣೆಯನ್ನು ಕೇಂದ್ರದ ನಿರ್ದೇಶಕರೂ ಆದ ಗೋಪಾಲಸ್ವಾಮಿಯವರು ವಹಿಸಿಕೊಂಡರು.

ರೇಡಿಯೋ ಕೇಂದ್ರದ ನಿರ್ವಹಣೆ ಮುಂದೆ ಕಷ್ಟವೆನಿಸಿದಾಗ ಗೋಪಾಲಸ್ವಾಮಿಯವರು ಅದನ್ನು ಮೈಸೂರಿನ ಮುನಿಸಿಪಾಲಿಟಿಗೆ ಬಿಟ್ಟುಕೊಟ್ಟರಂತೆ. ಅಲ್ಲಿಂದ ಅದು ಮಹಿಷೂರ ಮಹಾರಾಜರ ಸುಪರ್ದಿಗೆ ಬಂತು. ಭಾರತ ಸ್ವತಂತ್ರವಾಗಿ ಸಂಸ್ಥಾನಗಳೆಲ್ಲ ದೇಶದ ಸಾರ್ವಭೌಮತ್ವವನ್ನು ಒಪ್ಪಿಕೊಂಡು ವಿಲೀನಗೊಂಡಾಗ ಮೈಸೂರರಸರ ಕೈಯಿಂದ ಜಾರಿಹೋದ ಬಾನುಲಿ ಕೇಂದ್ರ, ಕೇಂದ್ರ ಸರಕಾರದ ನಿಯಂತ್ರಣಕ್ಕೊಳಪಟ್ಟಿತು. ಭಾರತದ ಈ ಜನಪ್ರಿಯ ಮಾಧ್ಯಮಕ್ಕೆ ಭಾರತೀಯವಾದದ್ದೇ ಒಂದು ಹೆಸರಿದ್ದರೆ ಒಳ್ಳೆಯದಲ್ಲವೇ ಎಂದು ಬಗೆದ ಸರಕಾರಕ್ಕೆ ಆಗ ಕಂಡದ್ದು ಮೈಸೂರಿನ ಬಾನುಲಿ. ಅದನ್ನು ಆಗಲೇ ಗೋಪಾಲಸ್ವಾಮಿಯವರು ಆಕಾಶವಾಣಿ ಎಂದು ನಾಮಕರಣ ಮಾಡಿದ್ದರು. ಆ ಹೆಸರು ತನಗೂ ಇಷ್ಟವಾದ್ದರಿಂದ ರೇಡಿಯೋ ಕೇಂದ್ರದ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಲೇಖಕ ನಾ. ಕಸ್ತೂರಿಯವರು ಆ ಹೆಸರನ್ನು ಬದಲಾಯಿಸದೆ ಜನಪ್ರಿಯಗೊಳಿಸಿದರು. ಸ್ವಾರಸ್ಯವೆಂದರೆ ಅವರಿಬ್ಬರಿಗೂ ಅಂಥದೊಂದು ಹೆಸರಿಡಲು ಪ್ರೇರಣೆ ಸಿಕ್ಕಿದ್ದು ಮಂಗಳೂರಿನ ಸಮೀಪದ ಹೊಸಬೆಟ್ಟಿನ ವಿದ್ವಾನ್ ರಾಮರಾವ್ ಎಂಬವರು 1932ರಲ್ಲಿ ಬರೆದಿದ್ದ “ಆಕಾಶವಾಣಿ” ಎಂಬ ಪುಸ್ತಕವಂತೆ! ವ್ಯಕ್ತಿಯ ದೇಹ ಕಾಣದೆ ಕೇವಲ ನುಡಿಯಷ್ಟೇ ಕೇಳುವುದಕ್ಕೆ ಅಶರೀರವಾಣಿ ಎನ್ನುತ್ತೇವಷ್ಟೇ?ಹಾಗೆಯೇ ವ್ಯಕ್ತಿಗಳ ಧ್ವನಿಯನ್ನು ಆಕಾಶಮಾರ್ಗವಾಗಿ ಹೊತ್ತು ತಂದು ನಮ್ಮ ಕಿವಿಗಳಿಗೆ ಕೇಳಿಸುವ ಮಾಧ್ಯಮವನ್ನು ಆಕಾಶವಾಣಿ ಎಂದೇಕೆ ಕರೆಯಬಾರದು ಎಂಬುದು ರಾಮರಾಯರ ತರ್ಕ. ಈ ಹೆಸರು ಅದೆಷ್ಟು ಆಕರ್ಷಕವಾಗಿತ್ತೆಂದರೆ ದೇಶದ ಮೂಲೆಮೂಲೆಗೂ ತನ್ನ ಸೇವೆಯನ್ನು ವಿಸ್ತರಿಸಲಿದ್ದ ಆಲ್ ಇಂಡಿಯಾ ರೇಡಿಯೋ ತನ್ನ ಹೆಸರನ್ನೂ ಆಕಾಶವಾಣಿ ಎಂದೇ ಬದಲಾಯಿಸಿಕೊಂಡು ಬಿಟ್ಟಿತು! ಹೀಗೆ ಈ ನಾಮಕರಣದ ಯಶಸ್ಸನ್ನು ಮೂವರು ಕನ್ನಡಿಗರಿಗೂ ನಾವು ಸಮನಾಗಿ ಹಂಚಿ ಹಾಕಬೇಕು!

ಆಲ್ ಇಂಡಿಯಾ ರೇಡಿಯೋ ಸಂಸ್ಥೆಯ ಅತ್ಯಂತ ಜನಪ್ರಿಯ ವಿವಿಧ ಭಾರತಿ ಸೇವೆ ಪ್ರಾರಂಭವಾದದ್ದು ಅಕ್ಟೋಬರ್ 3, 1958ರಲ್ಲಿ. ಇದರ ಮೂಲಕ ಬೆಳಕಿಗೆ ಬಂದ ಕಲಾವಿದರಿಗೆ ಲೆಕ್ಕವಿಲ್ಲ. ಹಿಂದಿಯ ಹಿರಿತೆರೆ ಕಿರಿತೆರೆಗಳಲ್ಲಿ ಹೆಸರು ಮಾಡಿದ ಸ್ಮಿತಾ ಪಾಟೀಲ್, ರೇಣುಕಾ ಶಹಾನೆ ತಮ್ಮ ರೂಪಲಾವಣ್ಯಕ್ಕಾಗಿ ಜನಪ್ರಿಯರಾಗುವ ಮೊದಲು ಆಕಾಶವಾಣಿಯಲ್ಲಿ ವಾರ್ತಾವಾಚನ ಮಾಡಿ ಗಮನ ಸೆಳೆದವರು. ಅಮಿತಾಬ್ ಬಚ್ಚನ್ ಆಕಾಶವಾಣಿಯಲ್ಲಿ ನಿರೂಪಕನಾಗಲು ಅರ್ಜಿ ಹಾಕಿ ಅಮೀನ್ ಸಯಾನಿಯಿಂದ ತಿರಸ್ಕøತನಾದ್ದರಿಂದಲೇ ಬಾಲಿವುಡ್‍ನಲ್ಲಿ ಅದೃಷ್ಟ ಪರೀಕ್ಷಿಸಲು ಸಾಧ್ಯವಾಯಿತು! ರೇಡಿಯೋ, ಅಷ್ಟೇ ತಾನೆ ಎಂದು ಮೂಗು ಮುರಿಯಬೇಡಿ ಸ್ವಾಮಿ; ಪ್ರಪಂಚದ 54ದೇಶಗಳಲ್ಲಿ ನಮ್ಮ ಆಕಾಶವಾಣಿಗೆ ಶ್ರೋತೃಗಳಿದ್ದಾರೆ! ಮಾತ್ರವಲ್ಲ; ಭಾರತದ ಆಕಾಶವಾಣಿ ಹೊರದೇಶಗಳ ಒಟ್ಟು 16 ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ತಯಾರಿಸಿ ಬಿತ್ತರಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಸ್ವಾತಂತ್ರ್ಯ ಬಂದಾಗ ಕೇವಲ ಆರು ನಗರಗಳಲ್ಲಷ್ಟೇ ಕಾರ್ಯ ನಿರ್ವಹಿಸುತ್ತಿದ್ದ ಆಕಾಶವಾಣಿ ಇಂದು ದೇಶಾದ್ಯಂತ 419ಸ್ಟೇಷನ್‍ಗಳನ್ನು ಹೊಂದಿದೆ. 23 ಭಾಷೆಗಳಲ್ಲಿ, 146ಉಪಭಾಷೆಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದೆ. ಅಧಿಕಾರದ ವಿಕೇಂದ್ರೀಕರಣಕ್ಕೆ ಆಕಾಶವಾಣಿಗಿಂತ ಉತ್ತಮ ಉದಾಹರಣೆ ಇರಲಿಕ್ಕಿಲ್ಲ. ದೆಹಲಿಯಿಂದ ಸಾವಿರಾರು ಮೈಲಿ ದೂರವಿದ್ದರೂ ತನ್ನ ಸ್ಥಳೀಯತೆಗೆ ತಕ್ಕ ವ್ಯಕ್ತಿತ್ವ ಬೆಳೆಸಿಕೊಳ್ಳುವ ಸ್ವಾತಂತ್ರ್ಯ ಮಂಗಳೂರಿನ ಆಕಾಶವಾಣಿಗೆ ಸಿಕ್ಕಿದ್ದರಿಂದ ಕದ್ರಿ ಗೋಪಾಲನಾಥರಂಥ ಕಲಾವಿದರನ್ನು ಬೆಳೆಸಲು ಅವಕಾಶವಾಯಿತು. ಕಾಳಿಂಗ ನಾವಡರ ಧ್ವನಿಯನ್ನು ಕನ್ನಡನಾಡಿನ ಲಕ್ಷಾಂತರ ಕಿವಿಗಳಿಗೆ ತಲುಪಿಸಿದ ಅಗ್ಗಳಿಕೆ ಆಕಾಶವಾಣಿಯದ್ದು. ಕನ್ನಡದ ಹಲವು ದಿಗ್ಗಜಗಳ ಧ್ವನಿಯನ್ನು ಕಾಪಿಟ್ಟು ಮುಂದಿನ ತಲೆಮಾರಿಗೆ ತಲುಪಿಸಿದ ಕೀರ್ತಿ ಆಕಾಶವಾಣಿಯದ್ದು. ಪಾಡ್ದನ, ಶ್ರೀಕೃಷ್ಣ ಪಾರಿಜಾತ,ಮಂಟೇಸ್ವಾಮಿಯ ಕಾವ್ಯದಂಥ ಮೌಖಿಕ ಪರಂಪರೆಯನ್ನು ರಕ್ಷಿಸಿ ಮುಂದಿನವರಿಗೆ ಕರ್ಣರಸಾಯನ ದೊರಕಿಸಿಕೊಟ್ಟ ಪುಣ್ಯ ಆಕಾಶವಾಣಿಯದ್ದು!

1947ರಲ್ಲಿ ಭಾರತದ ಒಟ್ಟು ವಿಸ್ತೀರ್ಣದ 2.5%ಮತ್ತು ಒಟ್ಟು ಜನಸಂಖ್ಯೆಯ 10%ನ್ನು ಮಾತ್ರ ತಲುಪುತ್ತಿದ್ದ ರೇಡಿಯೋ ಇಂದು ದೇಶದ 92%ಭೂಭಾಗವನ್ನೂ 99.2% ಜನಸಂಖ್ಯೆಯನ್ನೂ ಮುಟ್ಟುತ್ತಿದೆ! ರೇಡಿಯೋ ಜಮಾನ ಮುಗಿದೇ ಹೋಯಿತು ಎಂಬಷ್ಟರಲ್ಲಿ ಅದು ಎಫ್‍ಎಂ ಎಂಬ ಹೊಸ ಅವತಾರದಲ್ಲಿ ಪೂರ್ಣಾವತಾರಿಯಾಗಿ ಅರಳಿ ನಿಂತದ್ದು ರೋಚಕ! ಬೆಂಗಳೂರಂಥ ನಗರದಲ್ಲಿ, ಅರ್ಧಕ್ಕರ್ಧ ಜನ ರಸ್ತೆಯಲ್ಲಿ, ಟ್ರಾಫಿಕ್ ಮಧ್ಯೆ ಸಿಕ್ಕಿ ಆಯುಷ್ಯ ಮುಗಿಸುವ ಪರಿಸ್ಥಿತಿಯಲ್ಲಿರುವಾಗ ಅವರ ಸಂಗಾತಿಯಾಗಿ ಒದಗಿ ಬಂದಿರುವುದು ಇವೇ ಎಫ್‍ಎಂಗಳು. ಮನೆಯಲ್ಲಿ ಹೆಂಡತಿಯ ಪ್ರೀತಿ ಗಳಿಸಲು ಏನೇನು ಕಸರತ್ತುಗಳನ್ನು ಮಾಡಬೇಕೆಂಬುದರಿಂದ ಹಿಡಿದು ತೆರಿಗೆ ಅರ್ಜಿ ಭರ್ತಿ ಮಾಡುವ ವಿಧಾನದವರೆಗೆ ಎಲ್ಲವನ್ನೂ ಇಂದಿನ ಎಫ್‍ಎಂ ರೇಡಿಯೋ ನಿರೂಪಕರು ಹೇಳುತ್ತ ಹೊಸ ತಲೆಮಾರಿನ ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಚೆನ್ನೈಯಲ್ಲಿ ಕಳೆದ ವರ್ಷ ಪ್ರವಾಹ ಕಾಣಿಸಿಕೊಂಡು ವಾರವಿಡೀ ನಗರ ಸ್ತಬ್ಧಸ್ಥಿತಿಗೆ ಹೋದಾಗ ಜನರಿಗೆ ಅಗತ್ಯ ನೆರವು ಕೊಡಲು ರೇಡಿಯೋ ಚಾನೆಲ್‍ಗಳು ನೆರವಾದವಂತೆ. ಪತ್ರಿಕೆ ಬಿಡಿಸಲು ಆಗದ, ಟಿವಿ ಪರದೆಯ ಮೇಲೆ ಕಣ್ಣು ನೆಡಲಾಗದ ಸನ್ನಿವೇಶಗಳಲ್ಲೆಲ್ಲ ಜನ ರೇಡಿಯೋಗೆ ಕಿವಿ ಕೊಟ್ಟು ಕೂರುವಂತಾಗಿದೆ. ಆಕಾಶವಾಣಿಯ ಧ್ಯೇಯವಾಕ್ಯವೇ “ಬಹುಜನ ಹಿತಾಯ ಬಹುಜನ ಸುಖಾಯ” ನೋಡಿ!

ಸದ್ಯಕ್ಕೆ ನಾನೂ, ಅಟ್ಟದಲ್ಲಿ ಬೀಗ ಜಡಿದು ಒಗೆದಿರುವ ಹತ್ತಾರು ಪೆಟ್ಟಿಗೆಗಳನ್ನೆಲ್ಲ ದೂಳೊರೆಸಿ ತೆರೆದು ಮೆತ್ತಗಿನ ಬಟ್ಟೆಯಲ್ಲಿ ಸುತ್ತಿಟ್ಟ ಅಜ್ಜನ ಕಾಲದ ರೇಡಿಯೋವನ್ನು ಹುಡು ಕಿತೆಗೆದು ಪ್ರೀತಿಯಿಂದ ಮೈದಡವಬೇಕಿದೆ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post