ಪೋಸ್ಟ್ ಮಾಸ್ಟರ್ ಮಂಜಪ್ಪ ನರಹರಿ ಬೆಟ್ಟದ ಹತ್ತಿರ ವಿಷ ಕುಡಿದು ಸತ್ತುಬಿದ್ದಿದ್ದಾರೆ!
ಈ ವಿಷಯ ಕೆಲವರಿಗೆ ಆಘಾತ ತಂದರೆ ಮತ್ತೆ ಹಲವರಿಗೆ ಒಳಗೊಳಗೇ ಖುಷಿ ತಂದಿತ್ತು.
ಊರೆಲ್ಲಾ ಸುದ್ದಿ ಹರಡಲು ಹೊತ್ತು ಬೇಕಾಗಿರಲಿಲ್ಲ. ಸಾಕಷ್ಟು ಬಾರಿ 24 ಗಂಟೆ ಟಿ.ವಿ.ಚಾನೆಲ್ ತನ್ನ ಫ್ಲ್ಯಾಷ್ ಸ್ಕ್ರೋಲ್ ನಲ್ಲಿ ಈ ವಿಷಯ ಬಿತ್ತರಿಸಿದ ಕಾರಣ ಮಂಜಪ್ಪನ ಹೆಣ ಎತ್ತುವುದರೊಳಗಾಗಿ ದೂರದೂರಿನಲ್ಲಿದ್ದ ಮಂಜಪ್ಪನ ತಮ್ಮ ಸುಬ್ಬಪ್ಪನೂ ಊರಿಗೆ ಹೊರಟಿದ್ದ.
ಮಂಜಪ್ಪನಿಗೆ ಸಾಯುವ ವಯಸ್ಸೇನೂ ಅಲ್ಲ. ಆತ ವಿಟ್ಲ ಹತ್ತಿರದ ಹಳ್ಳಿಯೊಂದರಲ್ಲಿ ಪೋಸ್ಟ್ ಮಾಸ್ಟರ್ ಆಗಿ ಊರಿನ ಜನರ ವಿಶ್ವಾಸ ಗಳಿಸಿದ್ದ ವ್ಯಕ್ತಿಯೂ ಹೌದು.
ಸಣ್ಣ ಪ್ರಮಾಣದ ಕುಡಿತದ ಚಟ, ಲಾಟರಿಯ ಹವ್ಯಾಸ ಇರುವುದನ್ನು ಬಿಟ್ರೆ ಯಾವ ದುರಭ್ಯಾಸದ ಆಸಾಮಿಯೇನೂ ಅವನಲ್ಲ.
ಅದಕ್ಕಾಗಿಯೇ ಬೀಡಿ ಬ್ರಾಂಚಿನ ಖಾದರಾಕ, ಕೋಳಿ ಫಾರ್ಮಿನ ಸೋಜ, ಕ್ಯಾಂಟೀನಿನ ತಿಂಗಳಾಯರು ತಿಂಗಳು ತಿಂಗಳು ಮಂಜಪ್ಪನ ಕೈಗೆ ಆರ್.ಡಿ. ಹಣ ತಲಾ ಒಂದು ಸಾವಿರ ಕೊಡುವುದು.
‘ಎಂಥ ಮಾರ್ರೆ, ಮಂಜಪ್ಪನ ಕೈಗೆ ಹಾಗೆಲ್ಲಾ ರಶೀದಿ ಇಲ್ಲದೆ ಹಣ ಕೊಡುವುದುಂಟ, ಅವ ಲೆಕ್ಕ ಇಟ್ತಿದ್ದಾನ, ಪಾಸ್ ಪುಸ್ತಕ ಎಂಟರ್ ಮಾಡಿದ್ದಾನ ಅಂತ ನೋಡಿದ್ದೀರ’ ಎಂದು ಸೀರೆ ಅಂಗಡಿಯ ಯಶವಂತ ಸೋಜರನ್ನು ಆವಾಗಾವಾಗ ಹೆದರಿಸುತ್ತಾ ಇರುವುದು, ಬಾಯಲ್ಲಿ ಎಲೆ ಅಡಿಕೆ ತುಂಬಿಸಿ ಹತ್ತಿರದ ತೋಡಿಗೆ ಪಿಚಕ್ಕೆಂದು ಉಗಿಯುತ್ತಾ ಸೋಜರು ‘ನಿನಗೆ ಮಂಡೆ ಸರಿ ಇಲ್ಲ. ಸ್ವಲ್ಪ ಮನುಷ್ಯರಲ್ಲಿ ನಂಬಿಕೆ ಬೇಕು ಮಾರ್ರೆ’ ಎಂದು ಬೈಯ್ಯುವುದು ನಡೆಯದಿದ್ದರೆ, ತಿಂಗಳಾಯರ ಕ್ಯಾಂಟೀನಿನ ಸಂಜೆಯ ಗೋಳಿಬಜೆ, ಚಾ ಕರಗುವುದೇ ಇಲ್ಲ.
ಹಾಗಾಗಿಯೇ ಸಡನ್ ಆಗಿ ಪೋಸ್ಟ್ ಮಾಸ್ಟರ್ ಸತ್ತದ್ದು ಈ ತ್ರಿಮೂರ್ತಿಗಳಿಗೆ ಮಂಡೆಬಿಸಿ ತಂದದ್ದು.
******************
ಇದಾಗಿ ವಾರವಾಯಿತು.
ಬೆಳ್ಳಂಬೆಳಗ್ಗೆ ಸೋಜರ ಹೆಂಡತಿ ‘ಕಾಲೆ ಪಾಂಚ್ ಹಜಾರ್ ಅರ್ಜೆಂಟ್ ’ ಎಂದು ಪೀಡಿಸಿದ ಕಾರಣ ಪೋಸ್ಟ್ ಆಫೀಸಿಗೆ ಹೋಗುವ ಪ್ರಸಂಗ ಬಂತು. ಹೊಸ ಪೋಸ್ಟ್ ಮಾಸ್ಟರ್ ಸೋಜರ ಹತ್ತಿರ ಪಾಸ್ ಪುಸ್ತಕ ಕೊಡಿ ಎಂದು ಸಹಜವಾಗಿಯೇ ಕೇಳಿದ.
‘ಎಂಥ ಸೋಜರೇ ನಿಮ್ಮ ಆರ್.ಡಿಯಲ್ಲಿ ಹಣವೇ ಇಲ್ವಲ್ಲ!’
ಎಂದು ಸೋಜರು ಬಾಯಿಬಿಟ್ಟು ನೋಡುವಂತೆ ಪೋಸ್ಟ್ ಮಾಸ್ಟರ್ ವಿವರಿಸಿದಾಗಲೇ ಮಂಜಪ್ಪನ ಆದರ್ಶರೂಪ ಸೋಜರ ಚಿತ್ತದಿಂದ ಕರಗುತ್ತಾ ಹೋಯಿತು. ಸೀದ ಸೋಜರು ತಿಂಗಳಾಯರ ಕ್ಯಾಂಟೀನಿಗೆ ಹೋಗಿ ಸೋಡ ಶರಬತ್ತು ಎರಡೆರಡು ಗ್ಲಾಸು ಕುಡಿದ ಬಳಿಕವೇ ಸ್ಥಿಮಿತಕ್ಕೆ ಬಂದದ್ದು.
ವಿಷಯ ಗೊತ್ತಾಗಿ ಅಲ್ಲಿಗೆ ಕುಹಕ ನಗೆ ಬೀರುತ್ತಾ ಬಂದ ಯಶವಂತ ಹೇಳಿದ. ‘ನಾನು ಹೇಳಿದ್ದಲ್ಲ ಮಾರ್ರೆ, ಆ ಮಂಜಪ್ಪನನ್ನು ನಂಬಬೇಡಿ. ಅವ ಸರಿ ಇಲ್ಲ. ಲೆಕ್ಕ ಸಮಾ ಉಂಟ ಅಂತ ನೋಡಬೇಕಲ್ಲ ಸೋಜರೆ’ ಎಂದು ಮತ್ತೆ ಚುಚ್ಹಿದ.
ಆಗಲೇ ಬೀಡಿ ಬ್ರಾಂಚಿನ ಖಾದರಾಕ ಮತ್ತಿತರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು.
ಅಸ್ಟು ಹೊತ್ತಿಗಾಗಲೇ ಊರಿನ ಬಿಬಿಸಿ ಹಮೀದ್ ಹೊಸ ಸುದ್ದಿ ತಂದಿದ್ದ…
********
ಮಂಜಪ್ಪ ಆಗಾಗ ಬೆಂಗಳೂರಿಗೆ ಹೋಗುತ್ತಿದ್ದ ವಿಷಯ ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ಅವನಿಗೆ ಕುದುರೆ ರೇಸ್ ಹುಚ್ಹಿದ್ದದ್ದು ಯಾರಿಗೂ ಗೊತ್ತಿರಲಿಲ್ಲ. ಹಣ ಬಂದಾಗ ಟರ್ನೋವರ್ ಮಾಡ್ತಿದ್ದ.
ಹಮೀದನ ದೋಸ್ತಿ ಮುರಳಿಗೆ ಮಂಜಪ್ಪ ಬೆಂಗಳೂರಿನ ಆನಂದರಾವ್ ಸರ್ಕಲ್’ನಲ್ಲಿ ಕಂಡ ಬಳಿಕ ಪತ್ತೇದಾರಿ ಕೆಲಸ ಮಾಡಿದಾಗಲೇ ಕುದುರೆ ಬಾಲಕ್ಕೆ ಮಂಜಪ್ಪ ಹಣ ಕಟ್ತಿದ್ದು ಖಾತ್ರಿಯಾಯ್ತು. ಹೀಗಾಗಿಯೇ ಹಣ ಟೈಟ್ ಆಗಿ ಮಂಜಪ್ಪ ಎಂಡ್ರೇಕ್ಸ್ ಕುಡಿದು ಪ್ರಾಣ ಬಿಟ್ಟ ಎಂಬ ಸುದ್ದಿಯನ್ನು ಹಮೀದ್ ಹೇಳಿದಾಗ ತಿಂಗಳಾಯರ ಚಾ ತಣ್ಣಗಾಯಿತು.
*********
ಸೋಜರ 18 ಸಾವಿರ, ತಿಂಗಳಾಯರ 20 ಸಾವಿರ ಹೀಗೆ ಇಡೀ ಹಳ್ಳಿಯ ಎರಡು ಲಕ್ಷ ಹಣ ಮಂಜಪ್ಪ ಗುಳುಂ ಮಾಡಿದ್ದ. ಮೇಲಧಿಕಾರಿ ಯವುದೋ ವಿಷಯಕ್ಕೆ ಲೆಕ್ಕ ಕೇಳಿದಾಗ ಬೆಬ್ಬೆಬ್ಬೆಯಾಡಿದ ಮಂಜಪ್ಪ, ಮೂರು ದಿನ ರಜ ಹಾಕಿ ಬೆಂಗಳೂರಿಗೆ ಹೋದ. ಅಲ್ಲಿ ಮತ್ತೆ ಸೋಲು..
ಈ ಬಾರಿ ಟರ್ನ್ ಓವರ್ ಮಾಡಲೂ ಪುರುಸೊತ್ತಿರಲಿಲ್ಲ.
ಮತ್ತೆ ಆತ ಬದುಕುವ ನಿರ್ಧಾರವನ್ನೇ ಕೈಬಿಟ್ಟ.
ಆದರೆ ನರಹರಿ ಬೆಟ್ಟದಿಂದ ಹಾರುವ ಬದಲು ಎಂಡ್ರೆಕ್ಸ್ ಕುಡಿದು ಯಾಕೆ ಸತ್ತ ಎಂಬುದು ತಿಂಗಳಾಯರ ಹೋಟೆಲ್ ಚರ್ಚಾಕೂಟದ ಮೇಧಾವಿಗಳ ತಲೆಕೂದಲು ಉದುರಿದರೂ ಗೊತ್ತಾಗಲಿಲ್ಲ.!
Facebook ಕಾಮೆಂಟ್ಸ್