X

ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಮತ್ತು ಸುಧಾರಣೆಯ ಮಾರ್ಗಗಳು

 “ಜ್ಞಾನ ತಲೆಯ ಮೇಲಿನ ಕಿರೀಟ

ವಿನಯ ಕಾಲಿನ ಎಕ್ಕಡ”,

ಎಂಬಂತೆ ನಮ್ಮಲ್ಲಿರುವ ಜ್ಞಾನ ನಮಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗೌರವವನ್ನು ಒದಗಿಸಿದರೆ ನಮ್ಮಲ್ಲಿರುವ ವಿನಯ ನಮ್ಮನ್ನು ಕಾಲಿನಲ್ಲಿರುವ ಚಪ್ಪಲಿಯಂತೆ ರಕ್ಷಿಸುತ್ತದೆ. ಈ ಜ್ಞಾನ-ವಿನಯಗಳ ವೃದ್ಧಿಗೆ ಶಿಕ್ಷಣ ಅತ್ಯಗತ್ಯ. ನಮ್ಮಲ್ಲಿನ ಗುಣಗಳು ನಮ್ಮ ಶಿಕ್ಷಣದ ಮಟ್ಟವನ್ನು ಗುರುತಿಸುತ್ತವೆ, ಅಳೆಯುತ್ತವೆ ಕೂಡ.

“ವಿದ್ಯೆ ಇಲ್ಲದವನು ಪಶುವಿಗೆ ಸಮ” ಎಂಬ ಮಾತನ್ನು ನೀವು ಕೇಳಿಯೇ ಇರುತ್ತೀರಿ. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು ಎಂಬುದನ್ನು ಕಲಿತ ಮಗು ತನ್ನ ಜ್ಞಾನದ ವಿಸ್ತಾರವನ್ನು ಹೆಚ್ಚಿಸಲು ಮುಂದೆ ಅಡಿ ಇಡುವುದೇ ವಿದ್ಯಾಲಯದತ್ತ. ಈ ಯುಗದಲ್ಲಿ ಇದನ್ನು ಶಿಕ್ಷಣ ಸಂಸ್ಥೆಗಳು ಎಂದು ಮರುನಾಮಕರಣ ಮಾಡಿದ್ದೇವೆ.

ಪುರಾಣ, ಇತಿಹಾಸ ಕಾಲಗಳಿಂದಲೂ ಶಿಕ್ಷಣಕ್ಕೆ ಅದರದ್ದೇ ಆದ ಮೌಲ್ಯವಿದೆ. ಆದರೆ ಅಂದಿನಿಂದ ಇಂದಿನವರೆಗೆ ಶಿಕ್ಷಣದ ಪ್ರಸಾರ ನೀತಿಗಳು ಮಾತ್ರ ತಕ್ಕ ಮಟ್ಟಿನ ಬದಲಾವಣೆ ತಂದುಕೊಂಡಿದೆ. ಗುರುಕುಲ ಪದ್ಧತಿಯಿಂದ ಆರಂಭವಾದ ಜ್ಞಾನಾರ್ಜನೆ ಇಂದು ಕಾನ್ವೆಂಟರಿ, ಬೇಬಿ ಸಿಟ್ಟಿಂಗ್,ಯುನಿವರ್ಸಿಟಿಗಳವರೆಗೆ ಬಂದು ನಿಂತಿದೆ. ಹಾಗಂತ ಇದನ್ನು ಆಧುನೀಕರಣ ಅಂತಿರೋ ಅಥವಾ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ ಅಂತಿರೋ ನಿಮ್ಮ ತಿಳಿವಿಗೆ ಬಿಟ್ಟ ವಿಚಾರ.

ಬದಲಾವಣೆ ಜಗದ ನಿಯಮ

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳೂ ಸಾಕಷ್ಟು ಬದಲಾವಣೆಗಳನ್ನು, ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಇದರಲ್ಲಿ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ. ಗಾಂಧೀಜಿಯವರು ಹೇಳುವಂತೆ ‘ಸಾ ವಿದ್ಯಾಯಾ ವಿಮುಕ್ತಯೇ’, ಯಾವುದು ಪರಾವಲಂಬನೆಯಿಂದ ಬಿಡುಗಡೆ ನೀಡುವುದೋ ಅದೇ ನಿಜವಾದ ವಿದ್ಯೆ. ಆದರೆ ಇಂದು ಕೇವಲ ಉದ್ಯೋಗಕ್ಕಾಗಿ ನಾವು ವಿದ್ಯಾದೇಗುಲವನ್ನು ಪ್ರವೇಶಿಸುತ್ತಿದೇವೆಯೇ ಹೊರತು ನಮ್ಮ ಜ್ಞಾನ ವೃದ್ಧಿಗೊಳಿಸಿಕೊಳ್ಳುವುದಕ್ಕಲ್ಲ.

ಶಿಕ್ಷಣ ಸಂಸ್ಥೆಗಳ ಹಿಂದಿರುವ ಉದ್ದೇಶವೇ ನಾಳಿನ ಭಾವೀ ಪ್ರಜೆಗಳನ್ನು ಜ್ಞಾನ ಸಂಪನ್ನರಾಗಿಸುವುದು ಮತ್ತು ಪ್ರಪಂಚದ ಆಗು-ಹೋಗುಗಳನ್ನು ಚರ್ಚಿಸಿ,ನಿರ್ಧರಿಸುವ ಕೌಶಲ್ಯಗಳನ್ನು ಅವರಲ್ಲಿ ತುಂಬುವುದು. ಹಾಗೆಯೇ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು. ಆದರೆ ಇಂದು ಈ ಎಲ್ಲಾ ಉದ್ದೇಶಗಳು ಹಾದಿ ತಪ್ಪುತ್ತಿವೆ ಎಂಬುದೇ ಖೇದ. ಉದ್ದೇಶಗಳೆಲ್ಲ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಗಳು ನಮ್ಮನ್ನು ಕೇವಲ ಅಂಕಗಳ ಹುಳುಗಳನ್ನಾಗಿ ಬೆಳೆಸುತ್ತಿವೆಯೇ ಹೊರತು ಜ್ಞಾನದ ಹುಳುಗಳನ್ನಾಗಿ ಅಲ್ಲ. ಇಂಡಸ್ಟ್ರಿಯಲೈಸೇಶನ್ ಅಥವಾ ವಾಣಿಜ್ಯೀಕರಣದ ಬಿಸಿ ಶಿಕ್ಷಣ ಕ್ಷೇತ್ರಕ್ಕೂ ತಾಗಿ,ಇಂದು ಶಿಕ್ಷಣ ಸಂಸ್ಥೆಗಳೂ ಕೂಡ ಬಂಡವಾಳ ಹಾಕುವ ಅಧಿಕ ಲಾಭ ಗಳಿಸುವ ಕಂಪೆನಿಗಳಾಗಿ ಬೆಳೆಯುತ್ತಿವೆ. ರಾಜಕೀಯ ಘಟಾನುಘಟಿಗಳೂ ಕೂಡ ಸಮಾಜ ಸೇವೆಯ ಹೆಸರಿನಲ್ಲಿ ವಿದ್ಯಾ ಸಂಸ್ಥೆಗಳ ಮೇಲೆ ಹಣ ಸುರಿದು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿರುವ ವಿಷಯ ಚರ್ಚೆಗೆ ಯೋಗ್ಯವಾದುದೇನಲ್ಲ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವದ ನಿರ್ಮಾಣವಾಗಬೇಕು ಎಂದು ಹಾರೈಸುವ ತಂದೆ-ತಾಯಿಯರೂ ಕೂಡ ಅವರವರ ಮಕ್ಕಳ ವ್ಯಕ್ತಿತ್ವವನ್ನು ಮಾರ್ಕ್‍ಗಳಲ್ಲಿಯೇ ಅಳೆಯುತ್ತಿರುವುದು ದುರಂತ.

ಶಿಕ್ಷಣ ಸಂಸ್ಥೆಗಳೆಂದರೆ ವ್ಯಕ್ತಿತ್ವ ವಿಕಸನ ಕೇಂದ್ರಗಳು ಎಂಬುದನ್ನು ನಾವೂ ಒಪ್ಪುತ್ತೇವೆ. ಇಲ್ಲಿ ಅದೆಷ್ಟೋ ತಿಳಿದ, ತಿಳಿಯದ ವಿಷಯಗಳ ಕುರಿತು ಚರ್ಚೆಯಾಗುತ್ತದೆ. ವಿದ್ಯಾರ್ಥಿಗಳ ಆಲೋಚನಾ ಪರಿಧಿಯನ್ನು ವಿಸ್ತರಿಸುತ್ತದೆ. ಶಿಕ್ಷಣವಿಲ್ಲದೆ ಇಂದಿನ ಈ ಆಧುನಿಕ ಕಾಲದಲ್ಲಿ ಬದುಕು ಕಟ್ಟಿಕೊಳ್ಳುವುದು ಕನಸಿನ ಮಾತೇ ಸರಿ. ‘ವಿದ್ಯಾ ದದಾತಿ ವಿನಯಂ ವಿನಯಂ ಯಾತಿ ಪಾತ್ರತಾಂ’ ಎಂಬಂತೆ ವಿದ್ಯೆ ನಮಗೆ ವಿನಯವನ್ನು ಕಲಿಸಿದರೆ ವಿನಯ ನಮಗೆ ಎಲ್ಲವನ್ನೂ ಪ್ರಾಪ್ತಿ ಮಾಡುತ್ತದೆ. ಆ ವಿನಯವನ್ನು ಕಲಿಸುವ ಜವಾಬ್ದಾರಿ ನಮ್ಮ ಶಿಕ್ಷಣ ಸಂಸ್ಥೆಗಳದ್ದು.

ಇಂದು ಎಲ್ಲಾ ವಿಷಯಗಳೂ ಕೂಡ ಚರ್ಚೆಗೆ ವೇದಿಕೆಗಳೇ. ಅದರಲ್ಲೂ ಶಿಕ್ಷಣದ ವಿಷಯಕ್ಕೆ ಬಂದರಂತೂ ದಿನಕ್ಕೊಂದೊಂದು ಹೊಸ ಹಸಿ ಬಿಸಿ ವಿಷಯಗಳು ಹೊರ ಬರುತ್ತಲೇ ಇರುತ್ತವೆ. ಅದರಲ್ಲಿಯೂ ಇಂದಿನ ಶಿಕ್ಷಣ ಪದ್ದತಿಯ ಕುರಿತಂತೆ ಬಹುಜನರಿಗೆ ಬೇಸರವಿದೆ. ಕಾರಣ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣದ ಕೊರತೆ. ವಿದ್ಯಾರ್ಜನೆಗೆ ಬಂದ ನಾವು ಕೇವಲ ಮುಂದಿನ ಉತ್ತಮ ಉದ್ಯೋಗದ ಕನಸುಗಾರರೇ ಹೊರತು ನಮ್ಮ ವ್ಯಕ್ತಿತ್ವ ನಿರ್ಮಾಣದ ರಚನಕಾರರಾಗುತ್ತಿಲ್ಲ. ಆದರೆ ಪರಿಸ್ಥಿತಿ ನಾವು ತಿಳಿದಂತೆ ಅಷ್ಟೊಂದು ಹದ ತಪ್ಪಿಲ್ಲವೆನಿಸುತ್ತದೆ. ಆಕಾರವಿಲ್ಲದ ಕಲ್ಲನ್ನು ಶಿಲ್ಪವನ್ನಾಗಿಸುವ ಕೆಲಸ ಶಿಕ್ಷಕರದ್ದು, ಶಿಕ್ಷಣ ಸಂಸ್ಥೆಯದ್ದು, ಇಂದಿನ ಕಲಿಕೆ ವಾರ್ಷಿಕ ಪರೀಕ್ಷೆ, ಸೆಮಿಸ್ಟರ್ ಎಕ್ಸಾಂ ಮುಗಿದ ನಂತರ ಬಳಕೆಗೆ ಬರುತ್ತಿಲ್ಲ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಉದ್ಯೋಗ ಸೃಷ್ಟಿಸುವ ಕಾರ್ಖಾನೆಗಳೆಂದು ಹಣಿದರೆ ಪ್ರಯೋಜನವಿಲ್ಲ.ಬದಲಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳಾಗಬೇಕಿದೆ. ವಿಷಯದ ಕುರಿತು ಚರ್ಚಿಸುವ, ತುಲನೆ ಮಾಡುವ, ವಿಷಯದ ಕ್ಲಿಷ್ಟತೆಯನ್ನು ಅರಿತು ಚಿಂತಿಸುವ ಸಾಮರ್ಥ್ಯವನ್ನು ನಮ್ಮಲ್ಲಿ ತುಂಬಬೇಕಿದೆ. ಇಂದಿಗೂ ವಿದ್ಯಾಸಂಸ್ಥೆಗಳು ಅವುಗಳ ಮೌಲ್ಯಗಳನ್ನು ಉಳಿಸಿಕೊಂಡಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಎಂಬುದನ್ನು ಒಪ್ಪಲಾಗಲಿಕ್ಕಿಲ್ಲ. ವ್ಯಕ್ತಿತ್ವ ನಿರ್ಮಾಣದ ಕೇಂದ್ರಗಳೆನಿಸಿಕೊಂಡವೇ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ವಿಷಯ ಪ್ರತಿನಿತ್ಯದ ಟಿವಿ,ಪೇಪರ್‍ಗಳಲ್ಲಿ ಪ್ರಕಟವಾಗುತ್ತಿರುವುದರ ಉಲ್ಲೇಖ ಪುನಃ ಇಲ್ಲಿ ಅಗತ್ಯವಿಲ್ಲವೆನಿಸುತ್ತದೆ. ಇದೆಲ್ಲವನ್ನೂ ಮೀರಿ ‘ಪುಸ್ತಕ ಭಾರ ಹೊತ್ತವರೆಲ್ಲ ವಿದ್ಯಾವಂತರಲ್ಲ,ಅದು ವಿದ್ಯೆಗೆ ಸಾಧನವಷ್ಟೇ’ ಎಂಬುದನ್ನು ಅರಿಯಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

ಶಿಕ್ಷಣವನ್ನು ಸಾರ್ವತ್ರಿಕ ನೆಲೆಗಟ್ಟಿನಲ್ಲಿ ಎಲ್ಲರಿಗೂ ಒದಗಿಸಲು ನಾವು ಕಟ್ಟಿಕೊಳ್ಳುವ ಶಿಕ್ಷಣ ವ್ಯವಸ್ಥೆ ಸಮಾನತೆ, ಸಮತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಬೇಕಾಗಿರುವುದು ನಾವೇ ರೂಪಿಸಿಕೊಂಡ  ಸಂವಿಧಾನದ ಆಶಯ ಮತ್ತು ಆದ್ಯತೆ. ಆದರೆ ರಾಜ್ಯದಲ್ಲಿ ನಾವು ಕಟ್ಟಿಕೊಂಡಿರುವ ಶಿಕ್ಷಣ ವ್ಯವಸ್ಥೆ ಇದಕ್ಕೆ ಅಪವಾದವಾಗಿದ್ದು, ಒಂದೆಡೆ ಅಸಮಾನತೆ ಮತ್ತು ತಾರತಮ್ಯಮವನ್ನು ತನ್ನ ಒಡಲಿನಲ್ಲಿರಿಸಿಕೊಂಡರೆ ಮತ್ತೊಂದೆಡೆ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ತನ್ನ ಮೂಲಮಂತ್ರವನ್ನಾಗಿಸಿಕೊಂಡಿದೆ.

 ‘ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ’ ಅಂತೆಯೇ ಲಭ್ಯವಿರುವ ಅತ್ಯಮೂಲ್ಯ, ಉಪಯುಕ್ತ ಪುಸ್ತಕಗಳ ಓದಿನ ಬಗೆಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಬೇಕು. ಈ ಮೂಲಕ ಉತ್ತಮ ವ್ಯಕ್ತಿಗಳ ವ್ಯಕ್ತಿತ್ವದ ನಿರ್ಮಾಣವಾಗಬೇಕು. ಇದಕ್ಕೆ ಶಿಕ್ಷಣ ಸಂಸ್ಥೆಗಳಲ್ಲದೇ ಇನ್ನಾವ ಪರಿಸರವೂ ಸೂಕ್ತವಾದುದಲ್ಲ. ಹಿಂದಿನ ಕಾಲದಲ್ಲಿ ‘ಹಿಂದೆ ಗುರು ಇದ್ದ ಮುಂದೆ ಗುರಿ ಇತ್ತು ಸಾಗುತ್ತಿತ್ತು ಜ್ಞಾನಿಗಳ ದಂಡು, ಇಂದು ಹಿಂದೆ ಗುರು ಇಲ್ಲ ಮುಂದೆ ಗುರಿ ಇಲ್ಲ ಸಾಗುತ್ತಿದೆ ಹೇಡಿಗಳ ದಂಡು’ ಎಂಬ ಮಾತಿನಂತೆ ಇಂದು ಒಬ್ಬ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ನಾಲ್ಕಾರು ಜನರೊಂದಿಗೆ ಬೆರೆಯುವ,ಮಾತನಾಡುವ, ಆಲೋಚನೆಗಳನ್ನು ಹಂಚಿಕೊಳ್ಳುವ ಕೌಶಲವಿಲ್ಲವೆಂದರೆ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿತ ಕಂಡಿದೆ ಎಂಬುದನ್ನು ನೀವೇ ಯೋಚಿಸಿ. ಮಗುವನ್ನು ಹುಟ್ಟಿಸುವುದು ಸೃಷ್ಟಿಯ ಪರಂಪರೆಯಾದರೆ ಅದಕ್ಕೆ ಶಿಕ್ಷಣ ಕೊಡುವುದು ಭೂಮಿಯ ಮೇಲೆ ನಾವೇ ಕಂಡುಕೊಂಡ ಸುಧಾರಣೆ. ಇದನ್ನು ನಾವು ಮರೆಯುವಂತಿಲ್ಲ. ನಮ್ಮ ಸುಧಾರಣೆಗಳನ್ನು ನಾವೇ ರಕ್ಷಿಸಬೇಕಾದ ಅನಿವಾರ್ಯತೆಯೂ ಇಂದು ನಮ್ಮ ಮುಂದಿದೆ.

“Experience cannot be explained” ಹಾಗಾಗಿ ಅನುಭವವನ್ನು ಅನುಭವಿಸುವ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ. ಅವರಿಗೆ ಶಿಕ್ಷಣದಲ್ಲಿ ಆಸಕ್ತಿ, ಕುತೂಹಲ ಇರಬೇಕೇ ವಿನಃ ಒತ್ತಡ ಇರಕೂಡದು. ಇದರಿಂದ ಅವರ ಮಾನಸಿಕ ಆರೋಗ್ಯ ಕೆಡುವುದರ ಜೊತೆಗೆ ಶೈಕ್ಷಣಿಕವಾಗಿಯೂ ಹಿಂದೆ ಬೀಳುವ ಸಾಧ್ಯತೆಯಿದೆ. ಕೇವಲ ನಾಲ್ಕು ಗೋಡೆಗಳಿಗೆ ನಮ್ಮ ಶಿಕ್ಷಣವನ್ನು ಸೀಮಿತಗೊಳಿಸದೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಯಂತಹ ಇತರ ಕ್ಷೇತ್ರಗಳತ್ತ ಶಿಕ್ಷಣದ ಪರಿಧಿಯನ್ನು ವಿಸ್ತರಿಸುವ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆಯದ್ದು. ಆಗ ಮಾತ್ರ ನಮ್ಮ ಶಿಕ್ಷಣ ನೀತಿ ಕೇವಲ ಉದ್ಯೋಗ ಸೃಷ್ಟಿಸುವ ಕಾರ್ಖಾನೆಗಳು ಎಂಬ ಕಪ್ಪು ಹಣೆಪಟ್ಟಿಯಿಂದ ಮುಕ್ತರಾಗಲು ಸಾಧ್ಯ

ಆಗಿನಂತೆ ಕಠಿಣ ತಪಸ್ಸಿನಿಂದ ವಿದ್ಯೆಯನ್ನು ಪಡೆಯಬೇಕೆಂಬ ಅನಿವಾರ್ಯತೆ ನಮಗಿಲ್ಲ. ಮುಂದುವರೆದಿರುವ ತಂತ್ರಜ್ಞಾನ ಜ್ಞಾನ ವೃದ್ದಿಗಾಗಿ ಅಪರಿಮಿತ ಸೌಲಭ್ಯಗಳನ್ನು ನಮ್ಮ ಮುಂದಿರಿಸಿದೆ. ಆದರೆ ಅದನ್ನು ಬಳಸುವ ರೀತಿಯಲ್ಲಿ ನಾವು ಎಡವುತ್ತಿದ್ದೇವೆ. ಬೇಕಾದ ಕೆಲಸಗಳಿಗಿಂತ ಬೇಡದ ವಿಷಯಗಳೇ ನಮಗೆ ಹಿತವೆನಿಸುತ್ತದೆ. ನಮ್ಮ ಸಮಗ್ರ ಉತ್ಥಾನಕ್ಕೆ ಶಿಕ್ಷಣ ಕ್ರಮ ಎಷ್ಟು ಮುಖ್ಯವೋ ವಿದ್ಯಾರ್ಥಿಯ ಕಲಿಕಾ ನೀತಿಯೂ ಅಷ್ಟೇ ಮುಖ್ಯ. ಊಟವನ್ನು ತಯಾರಿಸಿ ಬಾಯಿಯವರೆಗೆ ತರಬಹುದು ಆದರೆ ಅದನ್ನು ತಿನ್ನುವ ಕಲೆ ನಮಗೆ ತಿಳಿದಿರಬೇಕಷ್ಟೆ. ಇಂದಿನ ಸಾಮಾಜಿಕ ಅಂತರ್ಜಾಲಗಳು ಮಕ್ಕಳನ್ನು ಶಿಕ್ಷಿತರನ್ನಾಗಿಸುವುದಕ್ಕಿಂತ ಹೆಚ್ಚಾಗಿ ಅವರನ್ನು ಕಂಪ್ಯೂಟರ್‍ನ ಹುಳುಗಳನ್ನಾಗಿಸಿದೆ. ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ತಂತ್ರಜ್ಞಾನದ ಬಳಕೆ ಅತಿಯಾಗೇ ಆಗುತ್ತಿದೆ. ಹಿಂದೆ ಒಂದು ವಿಷಯಕ್ಕಾಗಿ ಹತ್ತಾರು ಪುಸ್ತಕಗಳ ಮೊರೆ ಹೋಗುತ್ತಿದ್ದ ನಾವು ಇಂದು ಹತ್ತಾರು ವಿಷಯಗಳಿಗಾಗಿ ಒಂದು ಸರ್ಚ್ ಇಂಜಿನ್‍ನ್ನು ಅವಲಂಬಿಸಿದ್ದೇವೆ. ಶಾಲೆಯಲ್ಲಿ ನೀಡುವ ಯಾವುದೇ ಕೆಲಸಗಳಿಗೂ ನಾವು ಗ್ರಂಥಾಲಯದ ಮುಖ ನೋಡಲಾರೆವು. ಬದಲಿಗೆ ನಮ್ಮ ಪಾದ ಸೈಬರ್ ಕೆಫೆಗಳ ಕಡೆ ಮುಖ ಮಾಡಿರುತ್ತದೆ.

ಶಿಕ್ಷಣ ಪ್ರಸಾರ ಕ್ರಮದಲ್ಲಿ ಎಷ್ಟೇ ಬದಲಾವಣೆಗಳಾದರೂ ಮೌಲ್ಯಯುತ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶವಾಗಿದ್ದರೆ ನಮ್ಮ ಪೂರ್ವಜರ ಶಿಕ್ಷಣ ನೀತಿಗಳನ್ನು ಬಳಸುವುದೇ ಉಪಯುಕ್ತವೆನಿಸುತ್ತದೆ. ಹಿಂದೆ ಒಬ್ಬ ಜ್ಞಾನಿ ಉತ್ತಮ ಮಾತುಗಾರನೂ ಆಗಿರುತ್ತದ್ದ (ಉದಾ: ಗಾಂಧೀಜಿ, ವಿವೇಕಾನಂದ ಇತ್ಯಾದಿ). ಆದರೆ ಇಂದು ಡಿಗ್ರಿ ಸರ್ಟಿಫಿಕೇಟ್ ಪಡೆದಾತ ತನ್ನ ಪರಿಚಯ ಮಾಡಿಕೊಳ್ಳಲು ಪರದಾಡುವ ವಿಷಯ ನಿಮಗೆ ಹೊಸತೇನಲ್ಲ ಬಿಡಿ.

ಕೇವಲ ನಾಲ್ಕು ಗೋಡೆಗಳ ಮದ್ಯೆ ನಿರ್ಧರಿತ ವಿಷಯಗಳನಷ್ಟೇ ಕಲಿಯುವ ಬದಲು ಅದನ್ನು ಚಿಂತಿಸಿ ವಿಮರ್ಶಕರಗಬೇಕು. ವಿಷಯಗಳನ್ನು ಸಮ್ಮನೆ ಒಪ್ಪಿಕೊಳ್ಳುವುದಕ್ಕಿಂತ ಅದರ ಆಗು-ಹೋಗುಗಳ ಬಗ್ಗೆ ಚಿಂತಿಸುವಂತಾಗಬೇಕು ಅಂತಹ’ಟ್ರೂ ಎಜುಕೇಶನ್’ನ ಅಗತ್ಯ ಇಂದಿನ ವಿದ್ಯಾರ್ಥಿಗಳಿಗಿದೆ.

ಅಭಿವೃದ್ದಿ ಪಥದತ್ತ ಮುನ್ನುಗ್ಗುತ್ತಿರುವ ದೇಶದ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅತ್ಯಗತ್ಯ. ಇವತ್ತಿನ ದಿನಗಳಲ್ಲಿ ಯಾವ ರೀತಿಯ ಶಿಕ್ಷಣದ ಅಗತ್ಯವಿದೆ?ಯಾವ ರೀತಿಯಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ? ಮೌಲ್ಯಗಳ ಕೊರತೆಯನ್ನು ನೀಗಿಸುವ ಪರಿಯಾದರೂ ಹೇಗೆ? ಎಂಬುದನ್ನು ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕು. ಹಾದಿ ತಪ್ಪುತ್ತಿರುವ ಶಿಕ್ಷಣ ಪದ್ಧತಿಯನ್ನು ಸರಿದಾರಿಗೆ ತರುವ ಜವಾಬ್ದಾರಿ ಕೇವಲ ಶಿಕ್ಷಣ ವ್ಯವಸ್ಥೆಯದ್ದಾಗಲಿ, ಸರ್ಕಾರದ್ದಾಗಲಿ ಅಲ್ಲ ಅಲ್ಲಿನ ಸೌಲಭ್ಯವನ್ನು ಪಡೆಯುತ್ತಿರುವ ನಮ್ಮೆಲ್ಲರದ್ದೂ ಕೂಡ. ವ್ಯಕ್ತಿತ್ವ ನಿರ್ಮಾಣದ ಶಿಲ್ಪಶಾಲೆಗಳನ್ನು ಕಾರ್ಖಾನೆಗಳನ್ನಾಗಿಸುವ ಹುಂಬರಾಗದೇ ಪರಿಪೂರ್ಣ ಶಿಕ್ಷಣದ ಪ್ರಜ್ಷಾವಂತ ಪಾಲುದಾರರಾಗೋಣ. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಅಳಿಸಿ ಸುಧಾರಣೆಯ ಮಾರ್ಗದಲ್ಲಿ ವಿಜಯಿಗಳಾಗೋಣ ಏನಂತೀರಾ?

ಪವಿತ್ರ ಬಿದ್ಕಲ್‍ಕಟ್ಟೆ 

ಪತ್ರಿಕೋಧ್ಯಮ ವಿಭಾಗ

ಎಸ್.ಡಿ.ಎಮ್ ಕಾಲೇಜ್, ಉಜಿರೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post