X

ಬಾನಾಡಿಗಳಲ್ಲಿ “ಅಪ್ಪ”ನ ಪಾತ್ರ

ಜೂನ್ ಹತ್ತೊಂಬತ್ತರಂದು  ವಿಶ್ವದೆಲ್ಲೆಡೆ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿಯಾಗಿದೆ. ಅವರಿವರು ಅಪ್ಪನನ್ನು ಎಷ್ಟು ಪೀತಿಸುತ್ತಾರೋ, ಗೌರವಿಸುತ್ತಾರೋ ಗೊತ್ತಿಲ್ಲ, ಅಂತೂ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಅಪ್ಪನೊಂದಿಗಿನ ಫೋಟೋಗಳನ್ನು ಒಂದು ದಿನದ ಮಟ್ಟಿಗೆ ಹಂಚಿಕೊಂಡವರೇ. ಆ ಪ್ರೀತಿ, ಗೌರವ ದಿನವೊಂದಕ್ಕೆ ಸೀಮಿತವಾಗದಿದ್ದರೆ ಹಾಗೊಂದು ದಿನವನ್ನು ಆಚರಿಸುವ ಅಗತ್ಯವಿರುತ್ತಿರಲಿಲ್ಲವೆಂಬುದು ಬೇರೆ ವಿಷಯ. ಮನುಷ್ಯ ಬಿಟ್ಟರೆ ಇನ್ಯಾವ ಜೀವಿಯಲ್ಲೂ ಅಪ್ಪ ಅಮ್ಮನ ಅವಲಂಭನೆ, ಪ್ರೀತಿ ಜೀವನ ಪರ್ಯಂತ ಇರುವುದಿಲ್ಲ. ಕೇವಲ ಬಾಲ್ಯಾವಸ್ಥೆಯಲ್ಲಿ ಮಾತ್ರ ಅಪ್ಪ ಅಮ್ಮನ ಪೋಷಣೆ, ಆಕರ್ಷಣೆ. ಒಂದೆರಡು ವರ್ಷಗಳಲ್ಲಿ ಸರ್ವ ಸ್ವತಂತ್ರ. ಮನುಷ್ಯ ಮಕ್ಕಳಲ್ಲಿ ಅಪ್ಪ ಅಮ್ಮರ ಅವಲಂಬನೆಯಿಲ್ಲದೆ ಜೀವನ ಸಾದ್ಯವಾದರೂ ಜೀವನದ ಸ್ವಾರಸ್ಯ ಇರುವುದೇ ಅಪ್ಪ ಅಮ್ಮರ ಪ್ರೀತಿಯ ಬಂಧನದಲ್ಲಿ, ನೀತಿಯ ಶುಶ್ರೂಷೆಯಲ್ಲಿ. ಆದರಿಂದೆಲ್ಲಾ ತಲೆ ಕೆಳಗು. ಮಕ್ಕಳ ಬಾಲ್ಯ ಮುಗಿಯುವುದೇ 30 ವರ್ಷಗಳಾದ ಮೇಲೆ. ಅಪ್ಪನಾರೈಕೆಯಲ್ಲಿ ಡಿಗ್ರಿ ಮೇಲೆ ಡಿಗ್ರಿ ಪಡೆದ ಮೇಲೆ. ಅದರ ಆದಾರದಲ್ಲಿ ಉದ್ಯೋಗ ಗಿಟ್ಟಿದ ಮೇಲೆ. ಆಮೇಲೆ ಅದೆಷ್ಟು ಜೀವನದೊತ್ತಡವೆಂದರೆ ಅಪ್ಪ ಅಮ್ಮನ ಶುಶ್ರೂಷೆ ಯಾವುದೋ ವೃದ್ಧಾಶ್ರಮದ ತಲೆಯ ಮೇಲೆ.

ಅದೇನೇ ಇರಲಿ ನಮ್ಮನ್ನು ಸಾಕಿ ಸಲಹುವಲ್ಲಿ ಅಮ್ಮನಷ್ಟೇ ಅಪ್ಪನ ಪಾತ್ರವೂ ಬಲು ವಿಶೇಷ. ಹೆಚ್ಚಿನ ಮಕ್ಕಳಿಗೆ ತಮ್ಮ ಬಾಲ್ಯದಲ್ಲಿ ಅಪ್ಪ ಒಬ್ಬ ““super hero”!  ತನ್ನಪ್ಪನಿಗಿಂತ ಶ್ರೇಷ್ಠ ಜಗತ್ತಿನಲ್ಲಿ ಯಾರೂ ಇಲ್ಲ ಎಂಬ ಭಾವ. ಅಪ್ಪ ಎಂದರೆ ದೈರ್ಯ. ಏನೇ ತೊಂದರೆ ಬಂದರೂ ಅಪ್ಪನ ರಕ್ಷಣೆ ಇದೆ ಎಂಬ ನಂಬಿಕೆ. ತನ್ನಪ್ಪ ಅತ್ಯಂತ ಬಲಾಢ್ಯ, ಶಕ್ತಿಶಾಲಿ ಎಂಬ ಗರ್ವ ಹೆಚ್ಚಿನ ಮಕ್ಕಳಲ್ಲಿರುತ್ತದೆ. ವರ್ಷ ಕಳೆದಂತೆ, ಬುದ್ಧಿ ಬೆಳದಂತೆ ಮಕ್ಕಳಿಗೆ ವಾಸ್ತವದ ಅರಿವಾಗುತ್ತದೆ. ಮಕ್ಕಳು ಬಾಲ್ಯದಲ್ಲಿ ನಂಬಿದ  ಅಪ್ಪನನ್ನು ಉಳಿಸಿಕೊಳ್ಳುವುದು ಆಯಾಯ ಅಪ್ಪಂದಿರ ಸಾಧನೆ ಸಾಮರ್ಥ್ಯದ ಮೇಲಿರುತ್ತದೆ.

ಜೀವ ಲಕ್ಷಣಗಳು ಒಂದೇ ಆದರೂ ಭಾವ ಲಕ್ಷಣಗಳಿಂದ ಭಿನ್ನವಾಗಿರುವ ಮನುಷ್ಯನನ್ನು ಬಿಟ್ಟು ಉಳಿದ ಸ್ತನಿಗಳ ಕುರಿತು ನೋಡುವುದಾದರೆ ಬಹುತೇಕ ಗಂಡಿಗೆ ಕೌಟುಂಬಿಕ ಜವಾಬ್ಧಾರಿ ಇಲ್ಲ. ಆದರೂ ಸಿಂಹಗಳಂಥ ಕೆಲವು ಜೀವಿಗಳಲ್ಲಿ ಮಕ್ಕಳಿಗೆ ಬೇಟೆ ಹೇಳಿಕೊಡುವ ಜವಾಬ್ಧಾರಿ ಅಪ್ಪನಿಗೊಂದಷ್ಟು ಇರುತ್ತದೆ. ಮಂಗಗಳಲ್ಲಿ ತುಸು ಮಟ್ಟಿನ ಕೌಟುಂಬಿಕ ಜೀವನವನ್ನು ಕಾಣಬಹುದು. ಗುಂಪಾಗಿ ಜೀವಿಸುವ ಜಿಂಕೆ, ಹಂದಿ, ಕಾಡೆಮ್ಮೆ, ಆನೆಗಳಲ್ಲಿ ಅಷ್ಟಿಷ್ಟು ಪ್ರೀತಿಯ ನಂಟು ಇದ್ದೀತು. ಅಂತೂ ಎಲ್ಲಾ ಜೀವಿಗಳಿಗೂ ಜೀವನ ಪ್ರೀತಿ ಉಳಿಯುವಂತೆ ಬೇರೆ ಬೇರೆ ರೀತಿಯ ನಂಟನ್ನು, ಅಂಟನ್ನು ಜೀವ ಧಾರಕವಾದ ನಮ್ಮ ಪ್ರಕೃತಿ ಎಲ್ಲಾ ಜೀವಿಗಳಲ್ಲೂ ಹಂಚಿಟ್ಟಿದೆ. ಪ್ರೀತಿಯ ಅಂಟು ಬಾನಾಡಿಗಳಲ್ಲಿ ಹೇಗಿದೆ? ಎಂಬುದನ್ನು ಈಗ ನೋಡೋಣ.

ಹೆಚ್ಚಿನ ಹಕ್ಕಿಗಳಲ್ಲಿ ಗಂಡು ಮತ್ತು ಹೆಣ್ಣು ಎರಡೂ ಸಮಾನವಾಗಿ ಕುಟುಂಬ ನಿರ್ವಹಣೆ ಮಾಡುತ್ತವೆ. ನಮ್ಮಂತೆ ಹಕ್ಕಿಗಳಿಗೆ ಶಾಶ್ವತವಾದ ಸೂರಿಲ್ಲ. ಪ್ರತಿ ಸಂತಾನೋತ್ಪತ್ತಿ ಕಾಲದಲ್ಲಿ ಹೊಸದಾಗಿ ಗೂಡು ನಿರ್ಮಿಸುತ್ತವೆ. ಗೂಡು ನಿರ್ಮಾಣದಲ್ಲಿ ಹೆಚ್ಚಾಗಿ ಗಂಡು ಸಾಮಗ್ರಿಗಳನ್ನು ತಂದೊದಗಿಸುತ್ತದೆ, ಹೆಣ್ಣು ಅವನ್ನು ತನಗೆ ಬೇಕಾದಂತೆ ಜೋಡಿಸಿ ಮನೆಯನ್ನು ನಿರ್ಮಾಣ ಮಾಡುತ್ತದೆ. 90% ಹಕ್ಕಿಗಳು moಟಿogಥಿಟಿಥಿ, ಅಂದರೆ ಆ ಸಂತಾನೋತ್ಪತ್ತಿ ಸಮಯದಲ್ಲಿ ಒಂದು ಗಂಡಿಗೆ ಒಂದು ಹೆಣ್ಣು. ಮಗುವಿನ ಪೋಷಣೆ ಆ ಸಂತಾನೋತ್ಪತ್ತಿ ಸಮಯಕ್ಕೆ ಮಾತ್ರ ಸೀಮಿತ. ಮುಂದಿನ ಸಂತಾನೋತ್ಪತ್ತಿ ಸಮಯದಲ್ಲಿ ಹೆಣ್ಣೂ ಇದೇ ಗಂಡನ್ನು ಆರಿಸಬೇಕೆಂದೇನೂ ಇಲ್ಲ. ಯಾವ ಗಂಡು ಹೆಚ್ಚು ಶಕ್ತನೋ ಅವನನ್ನು ಹೆಣ್ಣು ಆರಿಸುತ್ತಾಳೆ.

ಹಕ್ಕಿಯ ಗೂಡು ಎಂದಾಕ್ಷಣ ಗೊತ್ತಿರುವ ಎಲ್ಲರಿಗೂ ಗೀಜುಗನ ಗೂಡು ನೆನಪಿಗೆ ಬಂದೀತು  baya weaver (Ploceus philippinus). ಪ್ರಪಂಚದ ಅತ್ಯಂತ ಸುಂದರ ಹಕ್ಕಿ ಗೂಡುಗಳಲ್ಲಿ ಇದೂ ಒಂದು. ಇಂಥಾ ಸುಂದರ ಗೂಡಿನ ಸಂಪೂರ್ಣ ನಿರ್ಮಾಣ ಗಂಡು ಹಕ್ಕಿಯದ್ದೇ. ಕೆರೆ/ತೊರೆಯ ತೀರದ ಮುಳ್ಳಿನ ಗಿಡದ ತುದಿಯಲ್ಲಿ ತನ್ನ ಕೊಕ್ಕಿನ ಬಲದಿಂದ, ಹುಲ್ಲಿನ ಸಹಾಯದಿಂದ ಗಂಡು ಗೀಜುಗ ಗೂಡು ನಿರ್ಮಾಣ ಮಾಡುತ್ತದೆ. ಅರ್ಧ ಗೂಡು ನಿರ್ಮಾಣ ಮಾಡಿ ಹೆಣ್ಣನ್ನು ಹೆಮ್ಮೆಯಿಂದ ಕರೆಯುತ್ತದೆ. ಹೆಣ್ಣು ಹಕ್ಕಿ ಗೂಡನ್ನು ಪರಿಶೀಲಿಸಿ ಮುಂದೆ ಮೊಟ್ಟೆ ಇಟ್ಟು ಮರಿ ಮಾಡಲು ಯೋಗ್ಯವೆಂದೆನಿಸಿದರೆ ಮಾತ್ರ ಗಂಡಿಗೆ ಒಲಿಯುತ್ತದೆ. ಗಮನಿಸಿ ಹೆಣ್ಣು ಒಲಿಯುವುದು ಗಂಡಿನ ರೂಪಕಷ್ಟೇ ಅಲ್ಲ, ಅದರ ಕರ್ಮ ಕೌಶಲ್ಯಕ್ಕೆ ಕೂಡಾ. ಹೆಣ್ಣು ಒಲಿದರೆ ಗಂಡು ಮನೆ ನಿರ್ಮಾಣವನ್ನು ಮುಂದುವರಿಸುತ್ತದೆ, ತಿರಸ್ಕರಿಸಿದರೆ ಆ ಗೂಡನ್ನು ಅರ್ಧಕ್ಕೇ ನಿಲ್ಲಿಸಿ ಹೊಸದಾಗಿ ಗೂಡನ್ನು ನಿರ್ಮಿಸುತ್ತದೆ. ಗೂಡು ಪೂರ್ಣವಾದ ಮೇಲೆ ಅದರೊಳಗೆ ಮೊಟ್ಟೆ ಇಟ್ಟು ಮರಿ ಮಾಡುವುದು. ಗಂಡು ಹಕ್ಕಿಗೆ ಆಮೇಲೆ ಜವಾಬ್ದಾರಿ ಇಲ್ಲ. ( ಗಂಡು ಗೀಜುಗ ಮರಿಗಳಿಗೆ ಉಣಿಸುವುದು ಅಪರೂಪಕ್ಕೆ ದಾಖಲಾಗಿದೆ). ಗಂಡು ಆಮೇಲೆ ಇನ್ನೊಂದು ಗೂಡು ನಿರ್ಮಾಣ ಮಾಡಿ ಮತ್ತೊಂದು ಹೆಣ್ಣನ್ನು ಆಕರ್ಷಿಸುತ್ತದೆ (polygyny). 4-5 ತಿಂಗಳ ಸಂತಾನಾಭಿವೃದ್ಧಿಯ ಅವಧಿಯಲ್ಲಿ ಒಂದು ಗಂಡು 5-6 ಹೆಣ್ಣಿನೊಂದಿಗೆ ಸಂಸಾರ ಮಾಡುವುದೂ ದಾಖಲಾಗಿದೆ. ಎಂಬಲ್ಲಿಗೆ ಗಂಡು ಗೀಜುಗಕ್ಕೆ ಅಪ್ಪನಾದ ಮೇಲೆ ಯಾವುದೇ ಜವಾಬ್ದಾರಿ ಇಲ್ಲ ಎಂಬುದನ್ನು ಗಮನಿಸಿ.

Baya weaver

ಗೀಜುಗನ ಹತ್ತಿರದ ನೆಂಟ ಗುಬ್ಬಚ್ಚಿ  house sparrow (Passer domesticus). ಅದೇ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿ! ಕೊನೆಯವರೆಗೂ ಹೆಣ್ಣಿನ ರಕ್ಷಣೆಯ ಹೊಣೆ ಹೊತ್ತಿರುತ್ತದೆ. ಹೆಣ್ಣು ಹಕ್ಕಿ ಮೊಟ್ಟೆಗೆ ಕಾವು ಕೊಡುವಾಗ ಗಂಡು ಹಕ್ಕಿ ಹೊರಗಡೆ ಕುಳಿತುಕೊಂಡು ಇತರೆ ಜೀವಿಗಳು ಹತ್ತಿರ ಸುಳಿಯದಂತೆ ರಕ್ಷಿಸುತ್ತದೆ. ಡಾ.ಸಲಿಂ ಅಲಿಯವರು ಒಮ್ಮೆ ಹೀಗೆ ರಕ್ಷಣೆ ನೀಡುವ ಗಂಡನ್ನು ಸಾಯಿಸಿದರಂತೆ. ಮರುದಿನ ಮತ್ತೊಂದು ಗಂಡು ಹಕ್ಕಿ ಹೆಣ್ಣಿನ ಕಾವಲು ಕಾಯುತ್ತಿತ್ತಂತೆ. ಹೀಗೆ 6-7ಗಂಡನ್ನು ಸಾಯಿಸಿ ಗುಬ್ಬಚ್ಚಿಯ ಅಧ್ಯಯನ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ಹೆಣ್ಣಿಗೆ ರಕ್ಷಣೆಗಾಗಿ ಹಲವು ಗಂಡು.

ಭಾರತದ ಅತ್ಯಂತ ಎತ್ತರದ ಹಕ್ಕಿಗಳಲ್ಲಿ ಒಂದು ಫ್ಲೆಮಿಂಗೋ. ಇವು ಜೀವನ ಪರ್ಯಂತ ಜೋಡಿ. ಸಾವಿರಗಟ್ಟಲೆ ಹಕ್ಕಿಗಳು ಸದಾ ಒಟ್ಟಿಗೇ ಇರುತ್ತವೆ. ಮರಿ ಮಾಡಿದ ಮೇಲೂ ಅವು ಮತ್ತೆ ಹಿಂಡನ್ನು ಸೇರಿಕೊಳ್ಳುತ್ತವೆ. ಅಚಾನಕ್ ಗಂಡೋ ಹೆಣ್ಣೋ ಸತ್ತರೆ ಅವು ಮರು ಮದುವೆ ಆಗುವುದೂ ಇದೆ, ಆಗದೆ ವಿಧುರನಾಗಿ ಉಳಿಯುವುದೂ ಇದೆ. ಗುಂಪಿನಲ್ಲಿದ್ದು ಒಂಟಿಯಾಗಿ ಬದುಕುತ್ತದೆ. ಈ ರೀತಿಯ ನಡತೆಯನ್ನು ಗೂಸ್ ಹಕ್ಕಿಗಳಲ್ಲಿ, ಸಾರಸ್ ಕ್ರೇನ್‍ನಲ್ಲೂ ಕಾಣಬಹುದು.

ಪಕ್ಷಿ ಲೋಕದ ವೈಶಿಷ್ಟ್ಯಕ್ಕೆ ಮತ್ತೊಂದು ಉದಾಹರಣೆ ಬಣ್ಣದ ಉಲ್ಲಂಕಿ  greater painted-snipe(Rostratula benghalensis).  ಇಲ್ಲಿ ಗೀಜುಗದ ತದ್ವಿರುದ್ದ ಸಂಗತಿ. ಹೆಚ್ಚಿನ ಪಕ್ಷಿಗಳಲ್ಲಿ ಗಂಡು ಹಕ್ಕಿ ಸುಂದರವಾದರೆ, ಬಣ್ಣದ ಉಲ್ಲಂಕಿಯಲ್ಲಿ ಹೆಣ್ಣು ಸುಂದರಿ. ತನ್ನ ಸುಂದರ ಮೈಬಣ್ಣದಿಂದ ಗಂಡು ಹಕ್ಕಿಯನ್ನು ಆಕರ್ಷಿಸುತ್ತದೆ. 5-6 ಗಂಡು ಹಕ್ಕಿಗಳಲ್ಲಿ ಒಂದನ್ನು ಆರಿಸುತ್ತದೆ. ಮಿಲನದ ನಂತರ ಮೊಟ್ಟೆ ಇಡುವುದಷ್ಟೇ ಇದರ ಜವಾಬ್ದಾರಿ. ಮೊಟ್ಟೆಗೆ ಕಾವು ಕೊಡುವುದು, ಮರಿಗಳ ಪಾಲನೆ ಪೂರ್ತಿ ಗಂಡಿಂದೇ. ಈ ಸಮಯದಲ್ಲಿ ಹೆಣ್ಣು ಮತ್ತೊಂದು ಗಂಡಿನೊಂದಿಗೆ ಕೂಡಿ ಮತ್ತೆ ಮೊಟ್ಟೆ ಇಡುತ್ತದೆ (poly andra).. ಒಂದು ಸಂತಾನೋತ್ಪತ್ತಿ ಸಮಯದಲ್ಲಿ 3-4 ಗಂಡಿನೊಂದಿಗೆ ಸಂಸಾರ ಮಾಡುತ್ತವಂತೆ. ಲಾಲನೆ, ಪಾಲನೆಯನ್ನು ಆದರ್ಶ ಎಂದು ಪರಿಗಣಿಸುವುದಾದರೆ ಬಾನಾಡಿ ಲೋಕದ ಆದರ್ಶ ಅಪ್ಪ ಈ ಬಣ್ಣದ ಉಲ್ಲಂಕಿ ಎಂದರೆ ಅತಿಶಯೋಕ್ತಿಯಲ್ಲ. ಗುಡ್ಡಗಾಡು ಹಕ್ಕಿ barred buttonquail (turnix suscitator) ಮತ್ತು ಕೆಂಪು ಕತ್ತಿನ ಫೆಲೊರೋಪ್  red-necked phalarope (Phalaropus lobatus) ಹಕ್ಕಿಗಳೂ ಕೂಡಾ poly andra.  ಇವುಗಳಲ್ಲೂ ಹೆಣ್ಣು ಹಕ್ಕಿ ವರ್ಣರಂಜಿತವಾಗಿದ್ದು, ಹಲವು ಗಂಡುಗಳೊಡನೆ ಸಂಸಾರ ಮಾಡುತ್ತವೆ. ಲಾಲನೆ ಪಾಲನೆ ಗಂಡಿನ ಜವಾಬ್ದಾರಿ.

Greater painted snipe

ಆದರ್ಶದ ಮಾತು ಬಂದಾಗ ನೆನಪಿಗೆ ಬರುವ ಮತ್ತೊಂದು ಹಕ್ಕಿ ಮಂಗಟ್ಟೆ ಹಕ್ಕಿ Hornbill. ಮರದ ಪೊಟರೆಯಲ್ಲಿ ಗೂಡು ಮಾಡಿದ ನಂತರ ಹೆಣ್ಣು ಪಕ್ಷಿ ಗೂಡಿನಲ್ಲಿ ಮೊಟ್ಟೆ ಇಟ್ಟು ತನ್ನ ಪುಕ್ಕಗಳನ್ನೆಲ್ಲ ಉದುರಿಸುತ್ತದೆ. ಗಂಡು ಮಂಗಟ್ಟೆ ಮಣ್ಣಿನಿಂದ ಪೊಟರೆಯನ್ನು ಮುಚ್ಚುತ್ತದೆ. ಆಹಾರ ಕೊಡಲು ಎಷ್ಟು ಬೇಕೋ ಅಷ್ಟು ದೊಡ್ಡ ಉದ್ದನೆಯ ಸೀಳನ್ನು ಮಾತ್ರ ಬಿಡುತ್ತದೆ. ಮೊಟ್ಟೆಯೊಡೆಯುವಷ್ಟು ದಿನ ಕಾವು ಕೊಟ್ಟು ಹೆಣ್ಣಿಗೆ ಆಹಾರ ಒದಗಿಸುವ ಕರ್ತವ್ಯ ಗಂಡಿನದೇ. ಮೊಟ್ಟೆಯಿಂದ ಮರಿ ಹೊರ ಬಂದ ನಂತರ ಗಂಡು ಮಂಗಟ್ಟೆ ಅಂಟಿಸಿದ ಮಣ್ಣನ್ನು ತೆಗೆಯುತ್ತದೆ. ಆ ವೇಳೆಗಾಗಲೇ ಸುದೀರ್ಘ ಅಜ್ಞಾತವಾಸದಲ್ಲಿ ತಾನು ಕಳೆದುಕೊಂಡಿದ್ದ ರೆಕ್ಕೆಪುಕ್ಕಗಳು ಮತ್ತೆ ಹೆಣ್ಣಿಗೆ ಮೂಡಿ ಬರುತ್ತವೆ. ಹಾರಲು ಶಕ್ತವಾಗುತ್ತದೆ. ಹೀಗೆ ಹೊರ ಬಂದ ಅಮ್ಮನೊಡಗೂಡಿ ಅಪ್ಪ ಹೊಸ ಮರಿಯನ್ನು ಬಂಧಿಸಿ ಸೀಳಿನ ಮೂಲಕ ಆಹಾರವನ್ನು ಅಪ್ಪ ಅಮ್ಮಂದಿರಿಬ್ಬರೂ ಜೊತೆಯಾಗಿ ಒದಗಿಸುತ್ತವೆ. ಹಾಗಾಗಿ ಗಂಡು ಮಂಗಟ್ಟೆ ಪಕ್ಷಿಲೋಕದ ಆದರ್ಶ ಪತಿ! ಹೆಣ್ಣು ಪಕ್ಷಿ ಕಾವು ಕೊಡುವ ಸಂದರ್ಭದಲ್ಲಿ ಗಂಡು ಹಕ್ಕಿ ಅಚಾನಕ್ ಸಾವನ್ನಪ್ಪಿದರೆ, ಆಹಾರವಿಲ್ಲದೆ ಮತ್ತು ಹೊರ ಬರಲಾರದೆ ಹೆಣ್ಣು ಮಂಗಟ್ಟೆಯೂ ಸಾವನಪ್ಪುತ್ತದೆ.

Indian grey hornbill

ತಿಂಗಳ ಹಿಂದೆ ಬರೆದ ಕಪ್ಪೆಬಾಯಿಯ ಲೇಖನದಲ್ಲಿ ಗಂಡು ಕಪ್ಪೆಬಾಯಿ  frogmouths ಹಗಲಲ್ಲಿ ಕಾವು ಕೊಟ್ಟು ಹೆಣ್ಣು ಇರುಳಲ್ಲಿ ಕಾವು ಕೊಡುತ್ತದೆ ಎಂಬುದನ್ನು ಮತ್ತೆ ಗಮನಿಸಿ. ಬಕ ಪಕ್ಷಿ (Heron), ಬೆಳ್ಳಕ್ಕಿ (Egrets) ಮತ್ತು ಕೆಲ ಪ್ರಭೇದದ ಮರಕುಟುಕಗಳಲ್ಲಿ (woodpeckers) ಗಂಡು ಪಕ್ಷಿಯೂ ಮೊಟ್ಟೆಗೆ ಕಾವು ಕೊಡುತ್ತದೆ. ಇಲ್ಲೆಲ್ಲ ಅಪ್ಪನಿಗಿರುವ ಮಹತ್ತರ ಪಾತ್ರವನ್ನು ಊಹಿಸಿ. ನಾನು ಕಂಡಂತೆ ಗೂಬೆಗಳಲ್ಲಿ (owls) ಕಾವು ಕೊಡುವ ಅವಧಿ ಬಲು ದೀರ್ಘ. 35 – 48 ದಿನ. ಅಷ್ಟೂ ಸಮಯದಲ್ಲಿ ಹೆಣ್ಣು ಗೂಡು ಬಿಟ್ಟು ಹಂದುವುದು ಬಲು ಕಡಿಮೆ. ಗಂಡು ಗೂಬೆ ಹೆಣ್ಣಿಗೆ ಉಪಚರಿಸಿ ಅಪ್ಪನ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತದೆ.

ಅಂಬರಕೀಚುಗ  ashy woodswallow (Artamus fuscus), ಚಿತ್ರಪಕ್ಷಿ (minivet), ಜೇನ್ನೊಣಬಾಕ (bee-eaters) ಪಕ್ಷಿಗಳಲ್ಲಿ ನಾವು ಕೌಟುಂಬಿಕ ಜೀವನವನ್ನು ಕಾಣಬಹುದು. ಇಲ್ಲಿ ಗಂಡು ಹೆಣ್ಣು ಅಲ್ಲದೆ ಹಿಂದಿನ ಅವಧಿಯ ಮಕ್ಕಳೂ, ಅಂದರ ಈಗಿನ ಮರಿಗಳ ಅಕ್ಕ ಅಣ್ಣಂದಿರೂ ಬಾಣಂತನಕ್ಕೆ ಸಹಾಯ ಮಾಡುವುದನ್ನು ಕಾಣಬಹುದು. ನಾ ಕಂಡಂತೆ ಖಗರತ್ನ (purple-rumped sunbird) ಪಕ್ಷಿಯಲ್ಲಿ ಗೂಡು ನಿರ್ಮಾಣ ಮಾಡುವುದು ಸಂಪೂರ್ಣ ಹೆಣ್ಣು ಪಕ್ಷಿ. ಮೊಟ್ಟೆಯೊಡೆದು ಮರಿ ಬಂದ ನಂತರ ಆಹಾರ ಒದಗಿಸುವುದು ಮಾತ್ರ ಮಾತ್ರ ಅಪ್ಪನ ಕೆಲಸ, ಎಂಬಲ್ಲಿಗೆ ಹೆಣ್ಣು ಹೆಚ್ಚು ಶ್ರಮ ಜೀವಿ ಎನಿಸುತ್ತದೆ.

Purple-rumped sunbird

ಅಪ್ಪ, ಅಮ್ಮರ ಪಾತ್ರದ ಬಗೆಗೆ ಅಧ್ಯಯನ ಮಾಡುತ್ತಾ ಹೋದರೆ ಇನ್ನಷ್ಟು ಕೌತುಕ ಸಂಗತಿಗಳು ಹೊರ ಬಂದಾವು. ಆದರೆ ಅದು ಅದ್ದಕ್ಕಾಗಿಯೇ ಮೀಸಲಾದ ವಿಜ್ಞಾನಿಗಳಿಂದ ಅದೊಂದು ಉದ್ಯೋಗವಾಗಿ ಆಗಬೇಕಿದೆ. ಹಾಗೆ ಆಗುವುದರಿಂದ ಪಕ್ಷಿ ಲೋಕಕ್ಕಾಗಲೀ, ಮನುಷ್ಯನಿಗಾಗಲೀ ಪ್ರಯೋಜನವಿಲ್ಲ. Citizen scientistಗಳು ಆಗೋಣ ನಾವೆಲ್ಲ.

ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ, ಶಿವಶಂಕರ ಕಾರ್ಕಳ.

ಮುಂದಿನ ಕಂತಿನಲ್ಲಿ : ಶುಕ ಲೋಕೊಳಗೊಂದು ಒಂದು ಸುತ್ತು.

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post