ಒಂದೆ ತಾಯಿಯ ಮಕ್ಕಳಂತಾ
ವೊಂದುಗೂಡುತ ಬಾಳಿಬದುಕುವೆ
ವಿಂದು ನಮಿಸುತೆ ಭಾರತಾಂಬೆಯ ದಿವ್ಯಚರಣಕ್ಕಂ |
ಪಿಂದೆ ಪರಕೀಯ ಬ್ರಿಟಿಷರುಗ
ಳೆಂದ ಮಿಥ್ಯದ ಮೋಡಿಮಾತಿಗೆ
ನಂದಿಪೋದರು ನಮ್ಮ ಭುವಿಯ ಸ್ವಾರ್ಥದರಸುಗಳು || ೧||
ಬೇಗಬೇಗನೆ ಮೋಸಗೊಳಿಸುತ
ಜಾಗವೆಲ್ಲವ ಸೂರೆಗೈಯುತ
ಸಾಗಿ ಬಂದರು ನಮ್ಮ ರಾಷ್ಟ್ರದ ಮೇಲೆ ಕಣ್ಣಿಡುತ |
ತೂಗಿ ನೇಲುವ ತೋಟದಲ್ಲಿನ
ಬೀಗಿ ಕೊಬ್ಬಿದ ಫಲಗಳೆಲ್ಲವ
ಸಾಗಿಸುತ ಲಾಭವನೆ ಗಳಿಸಿಹರವರ ದೇಶದಲಿ ||೨||
ಮಂದಿಗಾಗಿರೆ ಗಾಂಧಿ ನಾಯಕ
ಹೊಂದಿ ದುಡಿಯಲು ಸತ್ಯಪಥದಲಿ
ನಿಂದರಧಿಕ ಪರಾಕ್ರಮಿಗಳೀ ದೇಶರಕ್ಷಣೆಗೆ |
ಹಿಂದಿರುಗದೆಲೆ ಮುಂದೆ ನುಗ್ಗುತೆ
ಕುಂದದೆಲೆ ಹೋರುತ್ತೆ ತಾವೇ
ಬಂಧಮೋಚನೆಗೆಂದು ಬಲಿಯಾದರ್ ಮಹಾವೀರರ್ ||೩||
ತಮ್ಮ ದೇಹದೊಳಂದು ರಕ್ತವ
ಚಿಮ್ಮಿಸುತೆ ವಿಜಯಾಟ್ಟಹಾಸದಿ
ನಮ್ಮ ಭೂಮಿಯ ದಾಸ್ಯ ನೀಗೆ ಹುತಾತ್ಮರಾಗುತಲಿ |
ಅಮ್ಮ ನೊಂದಿರೆ ಪಾರತಂತ್ರದೆ
ಹೆಮ್ಮೆಕಂದನು ತೊಡೆದನಲ್ಲಿಯೆ
ಒಮ್ಮನದಿ ಜಯವನ್ನು ಸಾಧಿಸಿ ಮೆರೆದನೊಸಗೆಯನು|| ||೪||
ವೀರತನದಲಿ ಹೋರಿದಂತಹ
ಧೀರತನಯರ, ಜೀವದಾತರ,
ಭಾರತಸ್ವಾತಂತ್ರ್ಯದಿವಸದೆ ನೆನೆವೆವಾಮೆಂತೋ |
ಕೋರಿ ಶಾಂತಿಯ ಕರವ ಮುಗಿವೆವು
ದಾರಿಬೆಳಗಿಹ ಧನ್ಯಯೋಧರ
ಹಾರುತಲಿರುವ ಬಾವುಟವ ನೋಡುತ್ತೆ ತನ್ಮಯದಿ ||೫||
ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲಿಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ 7 ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ 7 ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, 7 ಮಾತ್ರೆಗಳ ಗಣಗಳು ಕಡ್ಡಾಯವಾಗಿ3+4 ಮಾದರಿಯಲ್ಲಿರಬೇಕು. ಅಂದರೆ 3 ಮಾತ್ರೆಯ ಗಣದ ನಂತರ 4 ಮಾತ್ರೆಯ ಗಣವು ಬಂದು, ಒಟ್ಟು 7 ಮಾತ್ರೆಗಳ ಗಣವಾಗಬೇಕು.
ಪದ್ಯವು ಆದಿಪ್ರಾಸದಿಂದ ಕೂಡಿರಬೇಕು. ಪ್ರತಿ ಷಟ್ಪದಿಯಲ್ಲಿಯೂ ಎಲ್ಲ ಗೆರೆಗಳ ದ್ವಿತೀಯ ವ್ಯ೦ಜನ ಅಕ್ಷರ ಹಾಗೂ ಪ್ರಥಮ ಅಕ್ಷರದ ಸ್ವರ, ಒ೦ದೆ ಆಗಬೇಕು.
ಉದಾ: ಹದಿನೈದನೇ ಶತಮಾನದ ಕುಮಾರವ್ಯಾಸನ ಕರ್ನಾಟಭಾರತ ಕಥಾಮಂಜರಿ (ಗದುಗಿನ ಭಾರತ)
೩|೪|೩|೪
೩|೪|೩|೪
೩|೪|೩|೪|೩|೪|-
೩|೪|೩|೪
೩|೪|೩|೪
೩|೪|೩|೪|೩|೪|-
-Shylaja kekanaje
shylasbhaqt@gmail.com
Facebook ಕಾಮೆಂಟ್ಸ್