ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದು ರಾತ್ರಿ 12 ಗಂಟೆಗೆ ಸರಿಯಾಗಿ 69 ವರ್ಷಗಳು. ನಾಳೆ 70ನೇ ಸ್ವಾತಂತ್ರ್ಯ ದಿನಾಚರಣೆ. ಈ ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತ ಸುಲಭವಾಗಿ ಸಿಕ್ಕಿದ್ದೇನು ಅಲ್ಲ. ಅದೆಷ್ಟೋ ಮಹಾನ್ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವಿದು. ಎಪ್ಪತ್ತು ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕುತ್ತಾ ಒಳ ಹೊಕ್ಕರೆ ನಮಗೆ ತಿಳಿಯುವುದೇನೆಂದರೆ ನಮ್ಮ ದೇಶ ಅದೆಷ್ಟು ಶ್ರೀಮಂತವಾಗಿತ್ತೆಂದು. ಬರೀ ಹಣದಲ್ಲಿ ಮಾತ್ರವಲ್ಲ. ಭವ್ಯ ಪರಂಪರೆಯನ್ನು ಹೊಂದಿರುವ ಭಾರತ ಮಾತೆ ತನ್ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದಳು. ನಮ್ಮ ದೇಶದ ಸಂಪತ್ತಿನ ಅರಿವು ನಮಗೆ ತಿಳಿಯುವ ಮುನ್ನವೇ, ಹಲವಾರು ದಾಯಾದಿಗಳು ನಮ್ಮ ದೇಶವನ್ನು ಇಂಚಿಂಚಾಗಿ ಕೊಳ್ಳೆ ಹೊಡೆದು ತಮ್ಮ ತಮ್ಮ ದೇಶಗಳಿಗೆ ಹೊತ್ತೊಯ್ದರು. ಇಷ್ಟಾದರೂ ನಮಗೆ ತಿಳಿಯಲೇ ಇಲ್ಲ. ಸ್ನೇಹಿತರೆ, ಸ್ವತಂತ್ರ ಭಾರತದ ಪ್ರಜೆಗಳೆ, ಆಗಸ್ಟ್ 15 ನಮಗೆ ಬರೀ ಒಂದು ದಿನ ಸರ್ಕಾರಿ ರಜೆ ಅಷ್ಟೇ ಅಲ್ಲ. ಇದು ಭಾರತೀಯರಿಗೆ ಹೆಮ್ಮೆಯ ವಿಷಯ. ಭಾರತೀಯರು ಶೌರ್ಯ ಮೆರೆದ ದಿನ. 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಹಾಗೂ ಗರ್ವದಿಂದ ಆಚರಿಸುವ ಮುನ್ನ ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ, ಸ್ವಾತಂತ್ರ್ಯ ಪೂರ್ವದ ದಿನಗಳನ್ನು ನೆನೆದು, ಸ್ವಾತಂತ್ರ್ಯಕ್ಕಾಗಿ ದುದಿಡ ಮಹಾನ್ ವ್ಯಕ್ತಿಗಳನ್ನು ಸ್ಮರಿಸೋಣ.
ಪ್ರಾಚೀನ ಕಾಲದಲ್ಲಿ ಭಾರತ ತನ್ನಲ್ಲಿದ್ದ ಅಪಾರವಾದ ಸಂಪತ್ತಿನಿಂದ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿತ್ತು. ಭಾರತದ ಸಾಂಬಾರು ಪದಾರ್ಥಗಳಿಗೆ ಯೂರೋಪ್’ನಲ್ಲಿ ಬಹಳಾ ಬೇಡಿಕೆ. ಯುರೋಪಿಯನ್ನರು ಭಾರತದಲ್ಲಿ ಬಹಳಷ್ಟು ವಸಾಹತುಗಳನ್ನು ಸ್ಥಾಪಿಸಿದರು. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಮೊದಲಿಗರಲ್ಲಿ ಗ್ರೀಕರು ಹಾಗೂ ಪೋರ್ಚುಗೀಸರು ಭಾರತದಲ್ಲಿ ವಿವಿಧ ವ್ಯಾಪಾರಗಳನ್ನು ಪ್ರಾರಂಭಿಸಿದರು ಹಾಗೂ ಉತ್ತಮ ಫಲವನ್ನು ಪಡೆದರು. ಇದರ ಪರಿಣಾಮದಿಂದಾಗಿ ಹಲವಾರು ಪೋರ್ಚುಗೀಸರು ಭಾರತಕ್ಕೆ ವ್ಯಾಪಾರದ ಸಲುವಾಗಿ ಲಗ್ಗೆ ಇಟ್ಟರು. ತದನಂತರ ಫ್ರೆಂಚ್, ಡಚ್, ಮೊಘಲ್ ಹಾಗೂ ಕೊನೆಯದಾಗಿ ಬ್ರಿಟಿಷ್ ದೊರೆಗಳು ಭಾರತವನ್ನು ಆಳಿದರು. 1497ನೇ ಇಸವಿ ಜುಲೈ 8 ರಂದು ಪೋರ್ಚುಗಲ್’ನಿಂದ ಹೊರಟ ವಾಸ್ಕೋಡ ಗಾಮಾ 1498ನೇ ಇಸವಿ ಮೇ 20ನೇ ತಾರೀಖು ಕೇರಳದ ಕ್ಯಾಲಿಕಟ್ ನಗರವನ್ನು ಪ್ರವೇಶಿಸುತ್ತಾನೆ. ಹಾಗೂ ನಗರದಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ಪಡೆದುಕೊಳ್ಳುತ್ತಾನೆ. ವಾಸ್ಕೋಡ ಗಾಮನ ಭಾರತ ಪ್ರವೇಶ ಹೊಸ ಅಧ್ಯಾಯಕ್ಕೆ ಕಾರಣವಾಯಿತು. ವಾಸ್ಕೋಡ ಗಾಮನ ದಂಡಯಾತ್ರೆ ಬಹಳ ಯಶಸ್ವಿಯಾಗುತ್ತದೆ. ವಾಸ್ಕೋಡ ಗಾಮನನ್ನು ಅನುಸರಿಸಿ ಹಲವಾರು ಪೋರ್ಚುಗೀಸರು ಭಾರತದತ್ತ ದಂಡೆತ್ತಿ ಬರುತ್ತಾರೆ. 1502ರಲ್ಲಿ ಪೋರ್ಚುಗೀಸ್ ಸಾಮ್ರಾಜ್ಯ ಕೇರಳದ ಕೊಲ್ಲಮ್’ನಲ್ಲಿ ಪ್ರಥಮ ಯೂರೋಪಿಯನ್ ವ್ಯಾಪಾರ ಕೇಂದ್ರವನ್ನು ಸ್ಥಾಪಿಸುತ್ತದೆ.
ಪೋರ್ಚುಗೀಸರ ನಂತರ ಡಚ್ಚರು ಭಾರತಕ್ಕೆ ದಂಡೆತ್ತಿ ಬರುತ್ತಾರೆ. ಡಚ್ಚರು ಉತ್ತಮ ನಾವಿಕರು. ಭಾರತದಲ್ಲಿದ್ದ ಸಂಪತ್ತಿಗೆ ಮನಸೋತ ಡಚ್ಚರು 1608ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಕಟ್ಟಿ ಭಾರತದಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸುತ್ತಾರೆ. ಫ್ರೆಂಚರು ಭಾರತಕ್ಕೆ ಸ್ವಲ್ಪ ತಡವಾಗಿ ಪ್ರವೇಶಿಸಿತ್ತಾರೆ. 17ನೇ ಶತಮಾನದಲ್ಲಿ ಫ್ರೆಂಚರು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯನ್ನು ಕಟ್ಟಿ ಭಾರತದಲ್ಲಿ ವ್ಯಾಪಾರ ಪ್ರಾರಂಭಿಸುತ್ತಾರೆ. ಭಾರತಕ್ಕೆ ವ್ಯಾಪಾರ ಸಲುವಾಗಿ ಬಂದ ಪೋರ್ಚುಗೀಸ್, ಡಚ್,ಬ್ರಿಟೀಷ್ ಹಾಗೂ ಫ್ರೆಂಚರಲ್ಲಿ ಬಹಳ ಸ್ಪರ್ಧೆ ಏರ್ಪಟ್ಟಿತ್ತು. ಪೋರ್ಚುಗೀಸ್ ಹಾಗೂ ಡಚ್ಚರು ಈ ಸ್ಪರ್ಧೆಯಿಂದ ಹೊರ ನಡೆದ ಮೇಲೆ ಬ್ರಿಟೀಷರ ಹಾಗೂ ಫ್ರೆಂಚರ ನಡುವೆ ಬಹಳ ದೊಡ್ಡ ಗುದ್ದಾಟವೇ ನಡೆದಿತ್ತು. ಇವರಿಬ್ಬರ ಈ ಕಿತ್ತಾಟದಿಂದ ಹಲವಾರು ಕದನಗಳೇ ನಡೆದು ಹೋದವು.
1600ನೇ ಇಸವಿಯಲ್ಲಿ, ಬ್ರಿಟಿಷರ ರಾಣಿ ಎಲಿಜಬೆತ್ I ವ್ಯಾಪಾರಿಗರಿಗೆ ಒಂದು ವ್ಯಾಪಾರ ಕೇಂದ್ರ ಪ್ರಾರಂಭಿಸಲು ಅನುಮತಿ ನೀಡುತ್ತಾಳೆ. ಇದರ ಪರಿಣಾಮವಾಗಿ ಹುಟ್ಟಿಕೊಂಡ ಕಂಪೆನಿಯೇ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ. ಈ ಕಂಪನಿ ಮುಂದೆ ಬಹಳ ಶಕ್ತಿಯುತವಾದ ಕಂಪನಿಯಾಗಿ ಬೆಳೆಯುತ್ತದೆ. ಜಗತ್ತಿನ ಅರ್ಧದಷ್ಟು ವ್ಯಾಪಾರ ವಹಿವಾಟುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಸಹಭಾಗಿತ್ವವನ್ನು ಸಾಧಿಸಿ ಬಿಡುತ್ತದೆ. ಹತ್ತಿ, ರೇಷ್ಮೆ, ಉಪ್ಪು, ಟೀ, ಹಾಗೂ ಸಾಂಬಾರು ಪದಾರ್ಥಗಳ ವ್ಯಾಪಾರದಲ್ಲಿ ಹೆಸರು ಗಳಿಸುತ್ತದೆ. ಹೀಗೆ ಮುಂದುವರಿದು ಬ್ರಿಟಿಷರು ಭಾರತದಾದ್ಯಂತ ತಮ್ಮ ಹಿಡಿತವನ್ನು ಸಾಧಿಸಿ ಬಿಡುತ್ತಾರೆ. 1856ನೇ ಇಸವಿಯ ಆಸುಪಾಸಿನಲ್ಲಿ ಬ್ರಿಟೀಷರು ಭಾರತದ ಬಹುತೇಕ ನಗರಗಳಲ್ಲಿ ತಮ್ಮ ಅಧಿಪತ್ಯವನ್ನು ಸಾಧಿಸುತ್ತಾರೆ. ಭಾರತೀಯರು ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಲು ಪ್ರಾರಂಭ ಮಾಡುತ್ತಾರೆ. ಇದರ ಪರಿಣಾಮವಾಗಿ 18 ಹಾಗೂ 19ನೇ ಶತಮಾನದಲ್ಲಿ ಹಲವಾರು ದಂಗೆಗಳು ಹತ್ತಿಕೊಳ್ಳುತ್ತವೆ. ತಮಿಳುನಾಡಿನ ದಳವಾಯಿ ಪುಲಿ ಥೆವರ್ ಬ್ರಿಟಿಷರ ದಬ್ಬಾಳಿಕೆ ಹಾಗೂ ಅಳ್ವಿಕೆಯನ್ನು ವಿರೋಧಿಸುತ್ತಾನೆ. ತದನಂತರ ಹಲವಾರು ನಾಯಕರು ಬ್ರಿಟಿಷ್ ಆಡಳಿತವನ್ನು ವಿರೋಧಿಸಲು ಪ್ರಾರಂಭಿಸುತ್ತಾರೆ. 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮೀರತ್’ನಲ್ಲಿ ಪ್ರಾರಂಭವಾಗುತ್ತದೆ. ಈ ಸಂಗ್ರಾಮ ಬಹಳಾ ಬೇಗ ಭಾರತದ ಹಲವಾರು ಪ್ರದೇಶಗಳಿಗೆ ಹರಡುತ್ತದೆ. ಮಾರ್ಚ್ 29ನೇ ತಾರೀಖು ಭಾರತದ ಹೆಮ್ಮೆಯ ಸಿಪಾಯಿ ಮಂಗಲ್ ಪಾಂಡೆ ಬ್ರಿಟೀಷ್ ಆಡಳಿತದ ವಿರುದ್ಧ ದಂಗೆ ಏಳುತ್ತಾನೆ. ಬ್ರಿಟಿಷ್ ಆಡಳಿತವನ್ನು ವಿರೋಧಿಸುತ್ತಾನೆ. ಇದರಿಂದ ಎಲ್ಲೆಡೆ ಬ್ರಿಟಿಷರ ವಿರುದ್ಧ ದಂಗೆಗಳು ಹತ್ತಿಕೊಳ್ಳುತ್ತವೆ. ಬ್ರಿಟೀಷರ ಪಾಲಿಗೆ ಇದು ಸಿಪಾಯಿ ದಂಗೆ ಎಂದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿದೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾಳೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ದಬ್ಬಾಳಿಕೆಯನ್ನು ವಿರೋಧಿಸಿದ ದಿಟ್ಟ ಮಹಿಳೆ ಈಕೆ. ಇವರುಗಳ ಜೊತೆ ನಾನಾ ಸಾಹಿಬ್, ತಾಂತ್ಯ ಟೋಪೆ, ಬೇಗಮ್ ಹಜರತ್ ಮಹಲ್, ಕನ್ವರ್ ಸಿಂಗ್ ಹಾಗೂ ಇನ್ನೂ ಹಲವಾರು ನಾಯಕರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಬ್ರಿಟಿಷರ ನಿದ್ದೆಗೆಡಿಸಿದ್ದಾರೆ.
19ನೇ ಶತಮಾನದಲ್ಲಿ ಭಾರತ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಗಳನ್ನು ಕಂಡಿತು. ರಾಮಮನೋಹರ ರಾಯ್ ಅವರ ಬ್ರಹ್ಮ ಸಮಾಜ, ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರಂತಹ ಧಾರ್ಮಿಕ ನಾಯಕರು ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ. ಈ ಸಾಲಿನಲ್ಲಿ ಶ್ರೀ ಆರೋಬಿಂದೊ, ಸೋದರಿ ನಿವೇದಿಯಾ, ದಯಾನಂದ ಸರಸ್ವತಿ, ಸುಬ್ರಹ್ಮಣ್ಯ ಭಾರತಿ, ಬಂಕಿಮ ಚಂದ್ರ ಚಟರ್ಜಿ, ರವೀಂದ್ರನಾಥ ಠಾಗೋರ್ ಹಾಗೂ ದಾದಾ ಭಾಯಿ ನವರೋಜಿ ಭಾರತದ ಪರಂಪರೆಯನ್ನು ಉಳಿಸಿಕೊಳ್ಳಲು ಬಹು ಮುಖ್ಯ ಪಾತ್ರ ವಹಿಸಿದ್ದಾರೆ. “Swaraj is my birth right and I shall have it” ಎಂಬ ದಿಟ್ಟ ನುಡಿಗಳಿಂದ ಬಾಲ ಗಂಗಾಧರ ತಿಲಕ್ ಬ್ರಿಟೀಷರ ವಿರುದ್ಧ ಧ್ವನಿ ಎತ್ತಿದ್ದಾರೆ. ಬಿಪಿನ್ ಚಂದ್ರಪಾಲ್. ಲಾಲಾ ಲಜಪತತ್ ರಾಯ್, ಗೋಪಾಲಕೃಷ್ಣ ಗೋಖಲೆಯಂತವರ ಶ್ರಮದಿಂದ ಸ್ವಾತಂತ್ರ್ಯ ಸಂಗ್ರಾಮ ಮತ್ತಷ್ಟು ಶಕ್ತಿಯನ್ನು ಪಡೆದುಕೊಂಡಿತು.
ಬ್ರಿಟಿಷರ ದಬ್ಬಾಳಿಕೆ 19ನೇ ಶತಮಾನಕ್ಕೆ ಅಂತೂ ಇಂತೂ ಕೊನೆಗೊಳ್ಳುತ್ತದೆ. 1920ನೇ ಇಸವಿಯ ನಂತರ ಭಾರತೀಯರ ಸ್ವಾತಂತ್ರ್ಯ ಸಂಗ್ರಾಮದ ಕೂಗು ಬ್ರಿಟೀಷರ ಮೈಮನ ನಡುಗಿಸುವಂತೆ ಎಲ್ಲೆಡೆಯೂ ಆವರಿಸುತ್ತದೆ. ಮಹಾತ್ಮಾ ಗಾಂಧೀಜಿಯವರ ಆಗಮನ ಹೊಸತೊಂದು ಶಕ್ತಿಯಾಗಿ ಸಂಗ್ರಾಮದ ಕಿಚ್ಚನ್ನು ಹೆಚ್ಚಿಸುತ್ತದೆ. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ಜೀವನ ಪ್ರಾರಂಭಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಸಮುದಾಯದ ಮೂಲಕ ನಾಗರೀಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾರೆ. ನಂತರ 1915ರಲ್ಲಿ ಭಾರತಕ್ಕೆ ಹಿಂತಿರುಗುತ್ತಾರೆ. ಬ್ರಿಟೀಷ್ ಆಡಳಿತದ ವಿರುದ್ಧ ಚಳವಳಿಯನ್ನು ಪ್ರಾರಂಭಿಸುತ್ತಾರೆ. ಜಗತ್ತಿನ ಬೇರೇ ದೇಶಗಳು ಸ್ವಾತಂತ್ರ್ಯಕ್ಕಾಗಿ ಹಿಂಸಾ ಮಾರ್ಗವನ್ನು ಅನುಸರಿಸಿದರೆ, ಗಾಂಧೀಜಿಯವರು ಅಹಿಂಸಾ ಮಾರ್ಗವನ್ನು ಅನುಸರಿಸುತ್ತಾರೆ.
ಗಾಂಧಿಜಿಯ ತತ್ವಗಳಿಂದ ಪ್ರೇರಿತರಾದ ಗಾಂಧಿಜಿಯವರ ಸಮಕಾಲೀನ ನಾಯಕರು ಸರ್ದಾರ್ ವಲ್ಲಭಭಾಯ್ ಪಟೇಲ್, ಮೌಲಾನಾ ಆಜಾದ್, ಸರೋಜಿನಿ ನಾಯ್ಡು, ರಾಜೇಂದ್ರ ಪ್ರಸಾದ್, ಸಿ ಅರ್ ದಾಸ್, ಚಕ್ರವರ್ತಿ ರಾಜಗೋಪಾಲಚಾರಿ ಹಾಗೂ ಸಿ ಎಫ್ ಅ್ಯಂಡ್ರೆವ್. ಗಾಂಧೀಜಿಯವರು 1924ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರಸ್’ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ.
ಸುಭಾಷ್ ಚಂದ್ರ ಬೋಸ್ ಒಬ್ಬ ಅಪ್ರತಿಮ ದೇಶಭಕ್ತ. ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರುವುದರ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸ್ವರಾಜ್ ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಬೋಸರಿಗೆ ಗಾಂಧಿಜಿಯವರ ಅಹಿಂಸಾ ತತ್ವದಲ್ಲಿ ಯಾವುದೇ ನಂಬಿಕೆ ಇರುವುದಿಲ್ಲ. ಹಾಗಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ತೊರೆಯುತ್ತಾರೆ. ಆದರೂ ಬೋಸರು ಸ್ವಾತಂತ್ರ್ಯ ಹೋರಾಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. 1942ನೇ ಇಸವಿ 8ನೇ ತಾರೀಖು ಗಾಂಧಿಯವರು ಕ್ವಿಟ್ ಇಂಡಿಯಾ ಎಂಬ ಚಳವಳಿಯನ್ನು ಪ್ರಾರಂಭಿಸುತ್ತಾರೆ. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಕೂಗು ಎಲ್ಲೆಡೆಯೂ ಮೊಳಗಲು ಪ್ರಾರಂಭಿಸುತ್ತದೆ. ಈ ಚಳವಳಿಯಲ್ಲಿ ಭಾಗವಹಿಸಿದ ಹೋರಾಟಗಾರರನ್ನು ಬ್ರಿಟೀಷರು ಬಂಧನದಲ್ಲಿಡುತ್ತಾರೆ. ಅದೇನೆ ಆಗಲಿ ಈ ಚಳವಳಿಯಿಂದ ಬ್ರಿಟಿಷರಿಗೆ ಮನವರಿಕೆಯಾಗಿದ್ದೇನೆಂದರೆ, ಇನ್ನು ಭಾರತದಲ್ಲಿ ತಮ್ಮ ಅಧಿಕಾರ ನಡೆಯುವುದಿಲ್ಲವೆಂದು. ಈ ಎಲ್ಲ ಬೆಳವಣಿಗೆಗಳಿಂದ ಬ್ರಿಟೀಷರು ತಮ್ಮ ಅಧಿಕಾರದ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತಾರೆ. ಅಂತೂ ಇಂತು 1947ನೇ ಇಸವಿ 15ನೇ ತಾರೀಖು ಮಧ್ಯ ರಾತ್ರಿ ಬ್ರಿಟಿಷರು ಭಾರತ ಬಿಟ್ಟು ತೊಲಗುತ್ತಾರೆ. ಆಗಸ್ಟ್ 15ನೇ ತಾರೀಖು ರಾತ್ರಿ 12.02 ಕ್ಕೆ ಭಾರತ ಸಾರ್ವಭೌಮ ದೇಶವಾಗುತ್ತದೆ. ಈವತ್ತು ನಾವು ಸ್ವತಂತ್ರವಾಗಿ ಬದುಕುತ್ತಿರುವುದಕ್ಕೆ ಕಾರಣ ಸ್ವಾತಂತ್ರ್ಯಕ್ಕಾಗಿ ತಮ್ಮ ತನು ಮನವನ್ನು ಮುಡಿಪಿಟ್ಟ ಈ ಎಲ್ಲಾ ಹೋರಾಟಗಾರರು.
ನಾಳೆ 70ನೇ ಸ್ವಾತಂತ್ರ್ಯ ದಿನಾಚರಣೆ. ಭಾರತದ ಎಲ್ಲಾ ಪ್ರಜೆಗಳು ಈ ಸಂಭ್ರಮದ ದಿನಕ್ಕಾಗಿ ಕಾಯುತ್ತಿದ್ದಾರೆ. ಇದು ಭಾರತೀಯರಿಗೆ ಹೆಮ್ಮೆಯ ದಿನ. ಬನ್ನಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಎಲ್ಲಾ ದೇಶಪ್ರೇಮಿಗಳನ್ನು ನೆನೆದು ಭಾರತ ಮಾತೆಗೆ ನಮಿಸೋಣ.
ವಂದೇ ಮಾತರಂ…………ಜೈ ಹಿಂದ್…………..
Facebook ಕಾಮೆಂಟ್ಸ್