X

ನಡೆ ನೀನು‌ ನಡೆ!

 

ಭಾವ ಬಂಧನದ ಮೇರೆ ಮೀರಿ,
ನೂರಾರು ಕನಸುಗಳ ಕೋಟೆ ದಾಟಿ,
ಹೊರಟಿದೆ‌‌ ಪಯಣ,
ಗಮ್ಯದ ಕಡೆ ಗಮನ!

ಅಂತ್ಯವ ಯಾರು ಬಲ್ಲರು?
ಶುರುವ ಯಾರು ಮರೆಯಕೂಡದು!
ನಡೆದು ಬಂದ ದಾರಿ ತಿರುಗಿ
ನೋಡಿದಾಗ,
ನೀನು ಯಾರೆಂದು ನಿನಗೆ ನೆನಪಾಗುವುದು!

ಇಲ್ಲಸಲ್ಲದ ಅಹಮಿಕೆಗೆ ಸಿಲುಕಿ,
ಕಳೆದುಕೊಳ್ಳದಿರು ನಿನ್ನ ಅಸ್ತಿತ್ವ,
ಹೆಜ್ಜೆ ಹೆಜ್ಜೆಗೂ ಇದೆ ಇಲ್ಲಿ ಪರೀಕ್ಷೆ
ನೀ ಉತ್ತರವ ತುಂಬಿ ಹೋಗು
ಕಾಡುವ ಪ್ರತಿ ಪ್ರಶ್ನೆಗೆ!

ನಿನ್ನವರೆನ್ನುವರೇ ನಿನಗಿಲ್ಲಿ ಹಿತಶತ್ರು ;
ವೃಥಾ ವ್ಯಯಿಸದಿರು ನಿನ್ನ‌ ಕಾಲವ ಅವರನ್ನು ದೂರುತಾ ಎಂದೂ!

ಮರೆಯದಿರು ನಿನಗೆ ನೀನೇ ಗೆಳೆಯ….
ಬದುಕೆಂಬ ಪಾಠಶಾಲೆಯಲಿ ನೀ ಸದಾ‌ ವಿದ್ಯಾರ್ಥಿ ಎಂಬುದ ಮರೆಯದಿರಯ್ಯಾ!

ಅವಮಾನವ ಸನ್ಮಾನವೆಂದು ಸ್ವೀಕರಿಸು,
ಬಂದ ಗೌರವವ ನಿನ್ನದಲ್ಲವೆಂದು ಭಾವಿಸು,
ತಲುಪಬೇಕಾದ ನಿಲ್ದಾಣವಿದು ಇದೆ ಬಹುದೂರ,
ಆರಂಭದಲ್ಲೇ ನೀ ಗರ್ವಕ್ಕೆ ದಾಸನಾದರೆ
ಕ್ರಮಿಸದೆ ಹಿಂದುಳಿಯುವೆ ಈ ದಾರಿಯ!

ಅಸೂಯೆ ಅಹಂಕಾರವೆಂಬ ಭೂತವ ಮೆಟ್ಟಿ ನಿಲ್ಲು,
ಜಾತಿ-ಗೀತಿ ಎಂಬ ಅನೀತಿಯ ಸುಟ್ಟು ಹಾಕು,
ದುಃಖದ‌ ಅಲೆ ಅಪ್ಪಳಿಸಿದಾಗಲೂ ಕುಗ್ಗದಿರು,
ಖುಷಿಯ ತಂಗಾಳಿ ಸೋಕಿದಾಗಲೂ ಹಿಗ್ಗದಿರು.
ಸೋತು ಗೆಲ್ಲು, ನೀ‌ ಸೋತು ಗೆಲ್ಲು.

ತಿಳಿ ನೀ‌‌ ಮನವೇ,
ಬದುಕೊಂದು ಪ್ರಯಾಣವೇ ಹೊರತು
ಸ್ಪರ್ಧೆಯಲ್ಲ!
ಕೂಡಿ ನಡೆ ಎಲ್ಲರೊಂದಿಗೆ ಖುಷಿಯ ಕಡೆ.

ಈ ದಾರಿಯಲ್ಲಿ ಹೋಗುವಾಗ….

ಕೊಟ್ಟ ಮಾತನು ತಪ್ಪದ ಪುಣ್ಯಕೋಟಿಯ ನಡೆಯು ನಿನ್ನಲ್ಲಿರಲಿ!
ಗುರಿಯು ತಪ್ಪದ ಅರ್ಜುನ ಗುಣವು ನಿನ್ನದಾಗಿರಲಿ!
ಕಷ್ಟಗಳ ಚಕ್ರವ್ಯೂಹವ ಬೇಧಿಸುವ ಅಭಿಮನ್ಯುವಿ‌ನ ಶಕ್ತಿ ನಿನ್ನಲಿ ಒಡಮೂಡಲಿ!

ಹೌದೌದು,
ಕರ್ಣ‌ನ ಉದಾರತೆ !
ರಾಧೆಯ ಪ್ರೇಮ !
ಹನುಮನ ನಿಷ್ಠೆ !
ಶಬರಿಯ ತಾಳ್ಮೆ !
ಏಕಲವ್ಯನ ಶ್ರದ್ಧೆ !
ನಿನ್ನಲ್ಲಿರಲಿ…..

“ನಡೆ ನೀನು ನಡೆ ನೀನು… ನಿನ್ನೆಯ ನೋವ ಮರೆತು, ನಾಳಿ‌ನ ಯೋಚನೆಯ ತೊರೆದು,
ನಾನು ನನ್ನದೆಂಬ ಆಜ್ಞಾನವ ಕೊಂದು.”

 

  • ಆಕಾಂಕ್ಷಾ ಶೇಖರ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post