X

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦
___________________________________

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು ? |
ಚಂಡ ಚತುರೋಪಾಯದಿಂದಲೇನಹುದು ? ||
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು |
ಅಂಡಲೆತವಿದಕೇನೊ ? – ಮಂಕುತಿಮ್ಮ || ೦೨೦ ||

ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ದಾಸರು ಎಂದೊ ಹೇಳಿಬಿಟ್ಟಿದ್ದಾರೆ. ಅದರೊಂದು ಮುಖವನ್ನು ಈ ಪದ್ಯದ ಸಾರವೂ ಅನುರಣಿಸುತ್ತದೆ ಮೂಢನಂಬಿಕೆಗಳ ಹಿಂದೆ ನಡೆವ ಜಗವನ್ನು ಛೇಡಿಸುವ ದನಿಯಲ್ಲಿ. ಮಾನವನ ಆಸೆ, ಆಕಾಂಕ್ಷೆಗಳಿಗೆ ಕೊನೆ ಮೊದಲಿಲ್ಲದ ಕಾರಣ ಏನಾದರೊಂದು ಅಹವಾಲು ಹಿಡಿದು ಅದರ ಪೂರೈಕೆಗೆ ಯಾರದೋ ದುಂಬಾಲು ಬೀಳುವ ಪ್ರವೃತ್ತಿ ಸಹಜವಾಗಿ ಕಾಣುವಂತದ್ದು. ತನ್ನ ಬಂಧು, ಬಳಗ, ನೆಂಟರಿಷ್ಟರ ಮೊರೆಹೊಕ್ಕೊ, ಗೊತ್ತಿರುವ, ಗೊತ್ತಿರದಿರುವೆಲ್ಲರ ಕೈ, ಕಾಲು ಹಿಡಿದೊ ತಮ್ಮ ಬಯಕೆ ಪೂರೈಸಿಕೊಳ್ಳುವುದು ಅದರಲ್ಲೆಲ್ಲ ಪ್ರಮುಖವಾಗಿ ಕಾಣುವ ವಿಧಾನವಾದರೂ, ಅದನ್ನು ಮೀರಿದ ಮುನ್ನುಡಿಯಾಗಿ ಕಂಡ-ಕಂಡ ದೇವರಿಗೆ ಕೈ ಜೋಡಿಸಿ, ಹರಕೆ ಹೊತ್ತು, ಪೂಜೆ ಪುನಸ್ಕಾರದ ಆಮಿಷಗಳನ್ನೊಡ್ಡಿ ತಮ್ಮ ಕಾಮನೆಗಳನ್ನು ಪೂರೈಸುವಂತೆ ಬೇಡಿಕೊಳ್ಳುವುದು ಸಾಧಾರಣ ಪ್ರತಿಯೊಬ್ಬರಲ್ಲಿ ಕಾಣಬಹುದಾದ ಸಂಗತಿ.

ಆ ಆಸೆ, ಕಾಮನೆ, ಕಾರ್ಯಸಾಧನೆಗಳ ತೀವ್ರತೆ ಎಷ್ಟಿರುತ್ತದೆಂದರೆ, ಅದಕ್ಕಾಗಿ ಮಾನವ ಎಂತಹ ಚಂಡ-ಚತುರೋಪಾಯಗಳನ್ನು ಮಾಡಲೂ ಸಿದ್ಧ. ಸಾತ್ವಿಕ ಪೂಜೆಯಿಂದ ಹಿಡಿದು ತಾಮಸಿ ಮಾಯಾ, ಮಾಟ, ಮಂತ್ರದಂತಹ ವಿಸ್ತಾರದವರೆಗೆ ಎಲ್ಲಕ್ಕೂ ಸಿದ್ಧವಾಗಿಬಿಡುತ್ತದೆ ಹುಲುಮಾನವ ಮನಸ್ಸು. ಸಾಮ, ದಾನ, ಬೇಧ, ದಂಡಾದಿ ಚತುರೋಪಾಯಗಳನ್ನು ಬಳಸಿ ಯಾವ ಹುನ್ನಾರವನ್ನು ಮಾಡಿಯಾದರೂ ಸರಿ, ತಾನಂದುಕೊಂಡಿದ್ದನ್ನು ಸಾಧಿಸುವ, ತನ್ನ ಬಯಕೆಯನ್ನು ಪೂರೈಸಿಕೊಳ್ಳುವ, ಯಾವ ನೈತಿಕಾನೈತಿಕ ಮಟ್ಟಕ್ಕಾದರೂ ಇಳಿಯುವ ಮಾನವ ಇದನ್ನೆಲ್ಲಾ ನಿಜಕ್ಕು ಮಾಡುವ ಅಗತ್ಯವಿದೆಯೆ ? ಎಂದು ಕೇಳುತ್ತಾನೆ ಮಂಕುತಿಮ್ಮ.

ಎಷ್ಟೆ ಗಳಿಸಲಿ, ಏನೇ ಉಳಿಸಲಿ, ಏನೇ ವೈಭೋಗದಿಂದ ಮೆರೆದಾಡಲಿ ಪ್ರತಿಯೊಬ್ಬನಿಗು ನಿಜಕ್ಕೂ ಬೇಕಾಗಿರುವುದು ಒಂದಷ್ಟು ಹಿಡಿಯನ್ನ (ತಂಡುಲ) ಮತ್ತು ಮಾನ ಮುಚ್ಚುವ ಗೇಣುದ್ದದ ಬಟ್ಟೆ ಮಾತ್ರ. ಆ ಕನಿಷ್ಠದಗತ್ಯದ ಹೊರತಾಗಿ ಮಿಕ್ಕೆಲ್ಲವು ಬರಿಯ ತೋರಿಕೆಯ ವೈಭವವೆ ಹೊರತು ಮತ್ತೇನು ಇಲ್ಲ. ಇಂತಿರುವಾಗ, ಅಷ್ಟೆಲ್ಲಾ ಹುನ್ನಾರ, ಸಂಚು ನಡೆಸುತ್ತ ಅಂಡಲೆಯುವ ಪಾಡಾದರು ಏಕೆ ಬೇಕು ? ಎಂದು ಪ್ರಶ್ನಿಸುತ್ತ ಸರಳ ಜೀವನ ಸತ್ಯವನ್ನು ಬಿಚ್ಚಿಡುತ್ತಾನೆ. ಯಾವಾಗ ಆ ದೊಡ್ಡ ಲಾಲಸೆಗಳಿರದೊ ಆಗ ದೇವರಲ್ಲಿ ಬೇಡುವುದೂ ಕೂಡ ಐಹಿಕದ, ಲೌಕಿಕ ಸೌಖ್ಯದ ಬದಲು ಅಲೌಕಿಕದ, ವ್ಯಕ್ತಿ ವಿಕಸನದ ಸಾತ್ವಿಕ ಲಾಲಸೆಯಾಗಿಬಿಡುತ್ತದೆ. ಅದರತ್ತ ಚಿಂತಿಸುವಂತೆ ಪ್ರೇರೇಪಿಸುತ್ತದೆ, ಈ ಪದ್ಯದ ಸರಳ ಸಾಲುಗಳು. ಅಶನವಸನಾದಿ ಮೂಲಭೂತ ಅಗತ್ಯಗಳ ಆಶಯವನ್ನು ಮೀರಿ ಮಿಕ್ಕಿದ್ದೆಲ್ಲ ಬರಿ ಸೋಗಿನ, ಡಂಭಾಚಾರದ ಪ್ರಪಂಚದ ಅನಗತ್ಯ ಅವತಾರಗಳು ಎಂದರಿತಿದ್ದೂ ಅವುಗಳನ್ನು ಬೆನ್ನಟ್ಟುವ ಮನಸೆಂಬ ಚಪಲ ಚೆನ್ನಿಗರಾಯನ (ಚಿತ್ತ ಪ್ರವೃತ್ತಿಯ) ಸೂಕ್ಷ್ಮ ಅಣಕವು ಇಲ್ಲಿ ಪ್ರತಿಬಿಂಬಿತವಾಗಿದೆ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post