ಸಮಾಜ ತಿದ್ದಲು ಬಂದವರ
ಲೇಖನಿಯ ಇಂಕು ಖಾಲಿಯಾಗುತಿದೆ,
ಚಾಟಿಂಗು ಡೇಟಿಂಗುಗಳ ಸೆಲೆಯಲ್ಲಿ
ಯುವಕರ ಗಡಿಯಾರದ ಮುಳ್ಳು ಸ್ತಬ್ದವಾಗಿದೆ,
ಬಾರು ಬೀರಿನ ನಿಶೆಯ ನಶೆಯಲ್ಲಿ
ದ್ವಜದ ತಿರಂಗ ತಿರುಗು ಮುರುಗಾಗಿದೆ,
ನಿಂತು ಸೇದಿದ ಸಿಗರೇಟ್
ಕುಂತು ಸೇದಿದ ಹುಕ್ಕದ ಹೊಗೆಯು
ನಾಲ್ಕು ಸಿಂಹಗಳ ಕಣ್ಣು ಮುಸುಕಿದೆ,
ಪಿಜಾ ಬರ್ಗರ್ ತಿಂದ ಹೊಟ್ಟೆಗೆ
ಭರತ ನೆಲವು ಮಾಯವಾದಂತನಿಸಿದೆ,
ಪೆಪ್ಸಿ ಕೋಲಗಳ ಘಾಟು
ಈ ಮಣ್ಣ ಗಂಧವನು ಮರೆಸುತಿದೆ,
ಕಾವಿಯ ಕಳ್ಳಾಟಕದಿ
ಧರ್ಮ ದೀಪವು ನಂದುತಿದೆ,
ಖಾದಿಗೆ ತೇಪೆ ಹಚ್ಚಲು
ತಿದ್ದುಪಡಿಯೆ ಸೂಜಿ-ದಾರವಾಗಿದೆ,
ರಾಜಕಾರಣದಿ ಜಾತಿ
ಹಾರದೊಳಗಿನ ದಾರವಾಗಿದೆ,
ಶೋಷಣೆಯ ಘೋಷಣೆ ಗಳ ಕೇಳಿ
ನ್ಯಾಯದೇವಿಯ ಕಣ್ಪಟ್ಟಿ ಒದ್ದೆಯಾಗಿದೆ,
ತಿದ್ದಲು ಹೊರಟ ಲೇಖನಿಯೂs ಧನವ ಭಯಸಿದೆ
ಭ್ರಷ್ಟ ಕತ್ತಲ ಬೀದಿಯಲಿ ಬೆತ್ತಲಾಗಿದೆ,
ಕಡೆಗೂ ಇಂಕು ಮುಗಿದಿದೆ.!!
– ಕೃಷ್ಣಾನಂದ ಪುರೋಹಿತ್
Facebook ಕಾಮೆಂಟ್ಸ್