“ನೆನಪಿಡಿ, ನೀವು ನಿಮ್ಮ ಕನಸುಗಳನ್ನ ಬೆನ್ನತ್ತಿಲ್ಲ ಎಂದರೆ ನೀವು ಈಗಾಗಲೇ ಸತ್ತಿರುವಿರೆಂದೇ ಅರ್ಥ” ಹೀಗಂತ ಹೇಳಿದ್ದು ಪ್ರಸಿದ್ಧ ಸ್ಟ್ಯಾಂಡ್’ಅಪ್ ಕಾಮಿಡಿಯನ್ ಸ್ಟೀವ್ ಮ್ಯಾಜ಼ನ್. ಸ್ಟೀವ್ ಕೂಡ ಒಬ್ಬ ಕ್ಯಾನ್ಸರ್ ಸರ್ವೈವರ್. “ದ ಲೇಟ್ ಶೋ ವಿತ್ ಡೇವಿಡ್ ಲೆಟರ್’ಮನ್’ ಆತನ ಬಹುದೊಡ್ಡ ಕನಸಾಗಿತ್ತು. ಈಗದು ಸಾಕಾರಗೊಂಡಿದೆ. ಈಗ ಬೇರೊಂದು ಕನಸನ್ನು ಬೆನ್ನತ್ತಿದ್ದಾನೆ. ಅದೇನೆ ಇರಲಿ ಮೇಲಿನ ವಾಕ್ಯ ಮಾತ್ರ ನಿಜಕ್ಕೂ ಸ್ಪೂರ್ತಿದಾಯಕ, ಈ ವಾಕ್ಯವನ್ನ ಓದಿದ ತಕ್ಷಣ, ‘ಅಂದರೆ ನಾನು ಅಲ್ಪ ಸ್ವಲ್ಪ ಬದುಕಿದೀನಿ ಅಂತ ಅರ್ಥ’ ಎಂಬ ಯೋಚನೆಯೊಂದು ಬಂದು ಸಮಾಧಾನವೂ ಆಯಿತು.
ಕ್ಯಾನ್ಸರ್ ನಂತರ ನಮ್ಮ ಆ ಒಡೆದ ಕನಸುಗಳನ್ನ ಮತ್ತೆ ಜೋಡಿಸುವ ಪ್ರಯತ್ನ ಇದೆಯಲ್ಲ ಅದು ಸ್ವಲ್ಪ ಕಷ್ಟವೇ! ಬದುಕಲ್ಲಿ ಸುಲಭವಾಗಿ ಸಿಗುವುದು ಯಾವುದೂ ಇಲ್ಲ ಬಿಡಿ. ಏನು ಮಾಡಬೇಕು,? ಏನಾಗುತ್ತಿದೆ? ನಮ್ಮ ಬದುಕು ಎಲ್ಲಿ ಬಂದು ನಿಂತಿದೆ ಎನ್ನುವುದನ್ನ ಅರ್ಥ ಮಾಡಿಕೊಳ್ಳುವುದಕ್ಕೇ ಸಾಕಷ್ಟು ಸಮಯ ಬೇಕು. ಅಂತಹ ಸಮಯದಲ್ಲಿ ನಾವು ಗೆಲ್ಲುತ್ತೀವೋ ಇಲ್ಲವೋ ಎನ್ನುವುದಕ್ಕಿಂತ ‘ನಾವು ಪ್ರಯತ್ನ ಮಾಡಿದ್ದೇವಾ’ ಎನ್ನುವುದಷ್ಟೇ ಮುಖ್ಯವಾಗುತ್ತದೆ.
ಶಾನ್ ಸ್ವಾರ್ನರ್ ಚಿಕ್ಕವನಿದ್ದಾಗ ತಾನು ಒಲಂಪಿಕ್’ನಲ್ಲಿ ಭಾಗವಹಿಸಬೇಕು ಎಂದು ಬಯಸಿದ್ದನಂತೆ. ಆದರೆ ಆತನ ಬದುಕು ಇನ್ನಿಲ್ಲದಂತೆ ಬದಲಾಗಿ ಹೋಗಿತ್ತು. ಮೊದಲು ಹಾಡ್’ಕಿನ್ಸ್ ಲಿಂಫೋಮ ನಂತರ ಆಸ್ಕಿನ್ಸ್ ಸಾರ್ಕೋಮ. ಬದುಕು ಯಾವುದೇ ರಣರಂಗಕ್ಕಿಂತ ಕಡಿಮೆ ಇರಲಿಲ್ಲ. ೧೫ ವರ್ಷದ ಶಾನ್’ಗೆ ಕ್ಯಾನ್ಸರ್ ಅನ್ಯಗ್ರಹದ ದೈತ್ಯ ರಾಕ್ಷಸರಾಗಿದ್ದರೆ, ಕೀಮೋನ ಪ್ರತಿ ಹನಿ ವೀರಾವೇಶದಿಂದ ಹೋರಾಡುವ ರಕ್ಷಕ ಸೈನಿಕರಾಗಿದ್ದರು. ಪ್ರತಿದಿನ ಪ್ರತಿಕ್ಷಣ ದೊಡ್ಡ ಯುದ್ಧವೇ ನಡೆಯುತ್ತಿತ್ತು. ನಿರಂತರವಾಗಿ ನಡೆದ ಯುದ್ಧದಲ್ಲಿ ಕೀಮೋ ಸೈನಿಕರೇ ಗೆದ್ದಿದ್ದರು. ಇದೆಲ್ಲದರ ನಂತರ ಹೊಸ ಬದುಕಿಗೆ ಹೊಂದಿಕೊಳ್ಳುವ ಸಾಹಸ ಮಾಡಬೇಕಿತ್ತು.
ಶಾನ್’ನನ್ನು ಸ್ವಿಮ್ಮಿಂಗ್’ನಲ್ಲಿ ಸೋಲಿಸಲಾಗುವುದೇ ಇಲ್ಲ ಎಂಬ ಕಾಲವೊಂದಿತ್ತು ಆದರೆ ಈಗ ಅದು ಬದಲಾಗಿತ್ತು. ಆತನ ರೆಕಾರ್ಡ್’ಗಳನ್ನು ಮುರಿಯಲಾಗಿತ್ತು. ಆದರೆ ಶಾನ್’ಗೆ ಈಗ ಗೆಲ್ಲುವುದು ಮುಖ್ಯವಾಗಿರಲಿಲ್ಲ. ಪ್ರಯತ್ನಿಸುವುದು ಮುಖ್ಯ ಆಗಿತ್ತು. ಸಾಕಷ್ಟು ಪರಿಶ್ರಮದ ನಂತರ ಶಾನ್ ಮತ್ತೆ ಈಜು ಸ್ಪರ್ಧೆಗೆ ಇಳಿದಿದ್ದ. ತನ್ನೆಲ್ಲಾ ಶಕ್ತಿ ಹಾಕಿ ಪ್ರಯತ್ನಿಸಿದ್ದ ಆದರೆ ತನ್ನ ಪ್ರತಿಸ್ಪರ್ಧಿಯಿಂದ ಕೇವಲ ಮೂರು ಸೆಕಂಡ್’ನಲ್ಲಿ ಸೋತಿದ್ದ. ಆದರೆ ಅಂದು ಅಲ್ಲಿ ನೆರೆದಿದ್ದ ಪ್ರೇಕ್ಷಕ ಸಮೂಹ ಎದ್ದು ನಿಂತು ಐದು ನಿಮಿಷಗಳವರೆಗೆ ಶಾನ್’ಗಾಗಿ ಕರತಾಡನ ಮಾಡಿದ್ದರು. ಶಾನ್’ಗೆ ಅಂದು ಸೋತಿದ್ದರೂ ಪ್ರಯತ್ನ ಪಟ್ಟಿದ್ದರ ಬಗ್ಗೆ ತೃಪ್ತಿ ಇತ್ತು.
ಇದಾಗಿ ಕೆಲವು ವರ್ಷಗಳೇ ಕಳೆದುಹೋಗಿತ್ತು. ಶಾನ್ ಆಗ ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಒಂದು ದಿನ ಆ ಬಾರಿಗೆ ಬಂದಿದ್ದ ಹುಡುಗಿಯೊಬ್ಬಳು “ನಿಮ್ಮ ಕೆಲಸ ಮುಗಿದ ಮೇಲೆ ನನ್ನನ್ನ ಮನೆಗೆ ಡ್ರಾಪ್ ಮಾಡುವಿರಾ?” ಎಂದು ಮಾದಕವಾಗಿ ಕೇಳಿದಳು, ಅದಕ್ಕೆ ಈತ ಮುಗುಳ್ನಕ್ಕು “ಸರಿ” ಎಂದಿದ್ದ. ಸ್ವಲ್ಪ ಹೊತ್ತಿನಲ್ಲೇ ಆಕೆ ಯದ್ವಾ ತದ್ವಾ ಕುಡಿದು ಕಾರು ಓಡಿಸುವ ಸ್ಥಿತಿಯಲ್ಲಿರಲಿಲ್ಲ, ಮಾತು ಕೊಟ್ಟ ತಪ್ಪಿಗೆ ಆಕೆ ತೊದಲು ನುಡಿಯಲ್ಲಿ ಹೇಳುತ್ತಿದ್ದ ಆಕೆಯ ಅಡ್ರೆಸ್’ಗೆ ಆಕೆಯನ್ನು ಕರೆದುಕೊಂಡು ಹೊರಟಿದ್ದ. ಎಷ್ಟೊ ಹುಡುಕಿದ ನಂತರ ಅಂತೂ ಆಕೆಯ ಮನೆ ಸಿಕ್ಕಿತ್ತು. ಆಕೆಯನ್ನು ಸಾವಕಾಶವಾಗಿ ಕರೆದುಕೊಂಡು ಹೋಗಿ ಮನೆ ಬಾಗಿಲು ಬಡಿದಾಗ ಆಕೆಯ ಗೆಳತಿ ಬಾಗಿಲು ತೆಗೆದಿದ್ದಳು. ಒಳಗೆ ಸುಮಾರು ೫-೬ ಹುಡುಗ ಹುಡುಗಿಯರಿದ್ದರು. ಈಕೆಯನ್ನು ಸೋಫಾದ ಮೇಲೆ ಬಿಡುವಾಗ ಅಲ್ಲೇ ಇದ್ದ ಒಬ್ಬಾತ ‘ಮತ್ತೆ ಇದೇ ಸ್ಥಿತಿಯಲ್ಲಿ..’ ಎಂದು ನಕ್ಕಿದ್ದ. ರೂಮಿನಲ್ಲಿ ಎಲ್ಲೆಂದರಲ್ಲಿ ಆಲ್ಕೋಹಾಲ್ ಬಾಟಲ್’ಗಳು, ಕಾಫಿ ಟೇಬಲ್ ಮೇಲೆ ಡ್ರಗ್ಸ್ ಕಂಡು ಬಂದವು. ಶಾನ್ ತಕ್ಷಣ ಅಲ್ಲಿಂದ ಹೊರಟು ಬಂದಿದ್ದ. ಹೊರ ದಾಟಿ ಬರುತ್ತಿದ್ದಂತೇ, “ಇವರೆಲ್ಲಾ ತಮ್ಮ ಬದುಕಿನೊಂದಿಗೆ ಏನು ಮಾಡಿಕೊಳ್ಳುತ್ತಿದ್ದಾರೆ? ಬದುಕು ಹೀಗಿರಬಾರದು” ಎಂದುಕೊಂಡ. ತಕ್ಷಣವೇ “ನಾನೇನು ಮಾಡಿಕೊಳ್ಳುತ್ತಿದ್ದೇನೆ ನನ್ನ ಬದುಕಲ್ಲಿ. ನನ್ನ ಬದುಕು ಹೇಗಿರಬೇಕು?” ಎಂದು ಯೋಚಿಸತೊಡಗಿದ್ದ. ದೊಡ್ಡದೊಂದು ಕನಸಿನ ಮೂಲ ಆ ಘಟನೆಯಾಗಿತ್ತು.
ಶಾನ್ ಎಷ್ಟೋ ದಿನಗಳವರೆಗೆ ಆ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದ. ಎಲ್ಲವೂ ಸರಿಯಾಗಿಯೇ ಇತ್ತು ಬದುಕಲ್ಲಿ ಆದರೂ ಏನೋ ಒಂದು ಕೊರತೆ ಇದೆ ಎಂಬ ಭಾವ ಆತನನ್ನು ಕಾಡುತ್ತಿತ್ತು. ಏನು ಮಾಡಬೇಕು, ತಾನು ಏನಾಗಬೇಕು ಎಂದು ಯೋಚಿಸುತ್ತಿದ್ದ. ಅತಿ ಎತ್ತರಕ್ಕೆ ನಿಲ್ಲಬೇಕು ಎಂಬ ಆಸೆ ಚಿಗುರೊಡೆಯಲಾರಂಭಿಸಿತ್ತು. ಅತಿ ಎತ್ತರ ಎಂದಾಗ ನೆನಪಾಗಿದ್ದೇ ಮೌಂಟ್ ಎವೆರೆಸ್ಟ್. ಜಗತ್ತಿನ ಅತಿ ಎತ್ತರದ ಪರ್ವತ ಹತ್ತಬೇಕೆಂದು ನಿರ್ಧರಿಸಿಯೂ ಬಿಟ್ಟ. ಆತನ ಕನಸು ಸಂಪೂರ್ಣವಾಗಿ ‘ಇಂಪ್ರಾಕ್ಟಿಕಲ್’ ಎನ್ನುವಂತಿತ್ತು. ಆದರೆ ಆತ ಅದನ್ನ ಸಾಧಿಸಿ ತೋರಿಸಿದ್ದ. ಬೇರೆಯವರು ನಂಬಿದ್ದರೋ ಇಲ್ಲವೋ ಆದರೆ ಆತ ತನ್ನ ಕನಸುಗಳನ್ನ ಸಂಪೂರ್ಣವಾಗಿ ನಂಬಿದ್ದ. ತನ್ನನ್ನು ತಾನು ನಂಬಿದ್ದ. ಅದರ ಪರಿಣಾಮವೇ ಆತ ಎವೆರೆಸ್ಟ್’ನ ತುತ್ತತುದಿಯಲ್ಲಿ ಕಣ್ತುಂಬಿ ನಿಂತಿದ್ದ. ಅಂದು ಆತನಿಗೆ ಆ ಇಡೀ ಪರ್ವತವೇ ‘ಯು ಡಿಡ್ ಇಟ್ ಶಾನ್’ ಎಂದಂತೆ ಭಾಸವಾಗುತ್ತಿತ್ತು.
ಶಾನ್ ಈಗ ಸಾಕಷ್ಟು ಯಶಸ್ಸನ್ನ ಕಂಡಿದ್ದಾನೆ. ಇವತ್ತು ಈ ದೇಶದಲ್ಲಿದ್ದರೆ, ನಾಳೆ ಮತ್ತೊಂದು. ಇವತ್ತು ಈ ಪರ್ವತದಲ್ಲಿದ್ದರೆ, ನಾಳೆ ಇನ್ನೆಲ್ಲೋ. ಸೆಮಿನಾರ್’ಗಳು, ಮ್ಯಾರಥಾನ್, ಸಂದರ್ಶನಗಳು. ಯಾರಿಗಾದರೂ ಬದುಕು ಹೀಗಿರಬೇಕು ಎನ್ನಿಸುವಂತಹ ಬದುಕು ಆತನದ್ದು. ಆದರೆ ಆ ಯಶಸ್ಸಿನ ಹಿಂದಿನ ನೋವು, ಪರಿಶ್ರಮ, ಧೈರ್ಯ. ತಾಳ್ಮೆ, ಭರವಸೆ ಕಾಣಿಸುವುದೇ ಇಲ್ಲ. ಇಂತಹ ಬದುಕು ಬೇಕೆಂದರೆ ಅಂತಹ ನೋವನ್ನೂ ಅಪ್ಪಿಕೊಳ್ಳಬೇಕು.
ನಿಜ ಹೇಳಬೇಕೆಂದರೆ ಕನಸುಗಳೇ,ನಾವಿನ್ನೂ ಬದುಕಿದ್ದೇವೆ ಎಂಬ ಭಾವವನ್ನು ತುಂಬುವುದು. ಕನಸುಗಳನ್ನ ಕಾಣುತ್ತಾ, ಅದಕ್ಕಾಗಿ ಹಪಹಪಿಸುತ್ತಾ, ಪರಿಶ್ರಮ ಪಡುತ್ತಾ, ತಾಳ್ಮೆ ಕಳೆದುಕೊಳ್ಳದೇ ಪ್ರತಿದಿನ ಅದು ಸಾಕಾರಗುಳ್ಳುವುದನ್ನು ಕಲ್ಪಿಸಿಕೊಂಡಾಗಲೆಲ್ಲಾ ಮನದಲ್ಲಿ ತೃಪ್ತಿಯ ಭಾವ ತುಂಬಿ ಹೃದಯ ಜೋರಾಗಿ ಹೊಡೆದುಕೊಳ್ಳುವುದಲ್ಲ ಆಗಲೇ ನಮ್ಮ ಅಸ್ತಿತ್ವ ನಮಗೆ ಭಾಸವಾಗುವುದು!!
ಬದುಕಿನಲ್ಲಿ ಕನಸು ಎಷ್ಟು ಅಮೂಲ್ಯವೋ, ಅಗತ್ಯವೋ ಹಾಗೆ ವಾಸ್ತವದ ಅರಿವು ಇಟ್ಟುಕೊಳ್ಳಬೇಕಾದುದು ಅಷ್ಟೇ ಮುಖ್ಯ. ಕನಸು ಕಲ್ಪನೆಯಷ್ಟು ಸುಲಭವಲ್ಲ. ಮೊನ್ನೆ ಸದ್ಗುರುವಿನ ಲೇಖನ ಓದುವಾಗ ಅವರು ಹೇಳಿದ ಮಾತು ಬಹಳ ಇಷ್ಟ ಆಯಿತು. ಸಾಮಾನ್ಯವಾಗಿ ಕನಸು ಕಾಣುವಾಗ, ಅದನ್ನ ಕಲ್ಪಿಸಿಕೊಳ್ಳುವಾಗ ನಾವು ಅಲ್ಲಿ ಬರುವ ಅಡೆತಡೆಗಳನ್ನ ಗಮನಕ್ಕೆ ತೆಗೆದುಕೊಂಡಿರುವುದಿಲ್ಲ ಎಂದು. ನಿಜವೇ! ಕಲ್ಪನೆಯಲ್ಲಿ ನಮ್ಮ ಕನಸು ಸುಲಭವಾಗಿ ಸಾಕಾರಗೊಂಡಿರುತ್ತದೆ. ಆದರೆ ವಾಸ್ತವದಲ್ಲಿ ಹಾಗಲ್ಲ. ಪರಿಶ್ರಮ. ತಾಳ್ಮೆ, ಧೈರ್ಯ, ಯಾವುದೇ ಕಾರಣಕ್ಕೂ ಕನಸುಗಳನ್ನ ಕೈ ಬಿಡದಂತಹ ಮನಸ್ಥಿತಿ, ಎಲ್ಲ ಅಡೆ ತಡೆಗಳ ನಡುವೆಯೂ ಸ್ಥಿರವಾಗಿದ್ದು ಮುನ್ನಡೆಯುವ ನಿರ್ಧಾರ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ನಂಬಿಕೆ ಬೇಕು. ಇವೆಲ್ಲವನ್ನು ಕಾಯ್ದುಕೊಂಡಾಗಲೇ ಕನಸು ಸಾಕಾರಗೊಳ್ಳುವುದು.
‘ನಿಮ್ಮ ಕನಸುಗಳನ್ನ ಬರೆದಿಡಿ’ ಎಂದು ಹೇಳುವುದನ್ನ ನೀವು ಕೇಳಿರಬಹುದು. ನಾನು ಬರೆದಿಟ್ಟಿದ್ದೀನಿ ಕೂಡ. ‘ಎಲ್ಲಿ ತೋರಿಸು’ ಅಂತ ಕೇಳಬೇಡಿ. ಅದು ಟಾಪ್ ಸಿಕ್ರೇಟ್!!! ಕನಸುಗಳನ್ನ ಬರೆದಿಟ್ಟಾಕ್ಷಣ ಅವು ನನಸಾಗುವುದಿಲ್ಲ. ಯಾಕೆಂದರೆ ನಮ್ಮ ಬಳಿ ಇರುವುದು ‘ಶಕಲಕ ಬೂಮ್ ಬೂಮ್’ನ ಪೆನ್ಸಿಲ್ ಅಲ್ಲ. ಬರೆದು ಯವುದೋ ಮೂಲೆಯಲ್ಲಿ ಯಾವುದೋ ಹಳೆಯ ಪುಸ್ತಕಗಳ ಸಂದಿಯಲ್ಲಿಟ್ಟರೂ ಉಪಯೋಗವಿಲ್ಲ. ಪ್ರತಿದಿನ ಅದನ್ನ ನೋಡುತ್ತಿರಬೇಕು. ಅವು ನಮ್ಮನ್ನ ಮೋಟಿವೇಟ್ ಮಾಡುತ್ತವೆ. ನಿಜವಾಗಿ ನಾವು ನಮ್ಮ ಬದುಕಲ್ಲಿ ಏನನ್ನು ಬಯಸುತ್ತಿದ್ದೇವೆ, ನಮ್ಮ ಗುರಿ ಯಾವುದು ಎಂಬುದನ್ನ ನೆನಪಿಸುತ್ತದೆ. ಪ್ರತಿದಿನ ಆ ಕನಸಿಗಾಗಿ ಬದುಕುವಂತೆ, ಶ್ರಮಿಸುವಂತೆ ಪ್ರೇರೆಪಿಸುತ್ತದೆ. ಬದುಕಿನಲ್ಲಿ ನಾವು ಸಾಗುತ್ತಿರುವ ದಾರಿಯ ಬಗ್ಗೆ ಅವಲೋಕಿಸುವಂತೆ ಮಾಡುತ್ತದೆ. ಸಾಧಿಸುವ ಛಲ, ಶ್ರಮ, ಅವಲೋಕನ ಇವುಗಳೇ ತಾನೇ ಬದುಕು ಸಾರ್ಥಕವಾಗಲು ಬೇಕಾಗಿರುವುದು.!! ಬದುಕು ‘ಬದುಕು’ ಎನಿಸಿಕೊಳ್ಳಲು ಕನಸುಗಳ ಬೆನ್ನತ್ತಬೇಕು..
Facebook ಕಾಮೆಂಟ್ಸ್