X

ನಾವು ಒಂದು ಥರಾ ಎಲೆಕ್ಟ್ರೋನ್’ಗಳೇ

“ಅಣು” ನೇ ಅತಿ ಸಣ್ಣ ವಸ್ತು ಆದರೂ ಅದರಲ್ಲಿ ಮತ್ತೆ ಪ್ರೋಟಾನ್,ನುಟ್ರೋನ್  ಮತ್ತು ಎಲೆಕ್ಟ್ರಾನ್ ಗಳು ಇವೆ.ಒಂದು ನ್ಯೂಕ್ವೀಯಸ್ ನಲ್ಲಿ ಪ್ರೋಟಾನ್,ನುಟ್ರೋನ್ ಗಳು ಇದ್ದು ಅದರ ಸುತ್ತು ತಮ್ಮದೇ ಆದ ವೃತ್ತಾಕಾರದ ಕಕ್ಷೆಯಲ್ಲಿ ಗಿರಿಕಿ ಹೊಡೆಯುವ ಎಲೆಕ್ಟ್ರಾನಗಳು. ಎಲ್ಲ ಎಲೆಕ್ಟ್ರಾನಗಳು ತಮ್ಮದೇ ಆದ ಕಕ್ಷೆಯಲ್ಲಿ  ತಿರುಗುತ್ತ ಇರುತ್ತವೆ,ಬೇರೆ ಬೇರೆ ಕಾರಣಗಳಿಂದ ಅವುಗಳು ತಮ್ಮ ಕಕ್ಷೆಯನ್ನು ಬದಲಾಯಿಸುತ್ತ ಇರುತ್ತವೆ.ಕೊನೆಯ ಕಕ್ಷೆಯ ಎಲೆಕ್ಟ್ರಾನ್ಗಳು ಇದೆ ರೀತಿಯಲ್ಲಿ ಇದ್ದು  ಅತಿ  ಹಗುರವಾದ ಬಂಧನದಲ್ಲಿ ಇರುತ್ತವೆ,ಅತಿ ಸಣ್ಣ ಸಣ್ಣ ಕಾರಣಕ್ಕೂ ತಮ್ಮ ಕಕ್ಷೆಯನ್ನು ಬಿಟ್ಟು ಹೋಗುವ ಸ್ವಭಾವ ಇವುಗಳದ್ದು.ಅದಕ್ಕೆ ಇವುಗಳಿಗೆ ಫ್ರೀ ಎಲೆಕ್ಟ್ರೋನ್ಸ್ ಎಂದು ಕರೆಯುತ್ತಾರೆ. 

 

ಒಂದು ಕ್ಷಣ ಯೋಚನೆ ಮಾಡಿದ್ರೆ ನಾವು ಒಂದು ಥರಾ  ಎಲೆಕ್ಟ್ರೋನಗಳೇ ಅನಿಸುತ್ತೆ, ನಾವು ಒಂದು ವಸ್ತು ಅಥವಾ ಒಂದು  ವ್ಯಕ್ತಿಯ ಸುತ್ತು ಗಿರಿಕಿ ಹೊಡೆಯುತ್ತ  ಇರುತ್ತೇವೆ.ವಸ್ತು  ಅಥವಾ  ವ್ಯಕ್ತಿಯನ್ನು ಒಂದು ನ್ಯೂಕ್ವೀಯಸ್ ಮಾಡಿಕೊಂಡು ನಾವು ಎಲೆಕ್ಟ್ರಾನ್ ಗಳ ಹಾಗೆ ಅವುಗಳನ್ನು ಸುತ್ತುತ್ತಾ,ಆಕರ್ಷಣೆ ಹೆಚ್ಚು ಇದ್ದಾಗ ಮೊದಲನೇ ಕಕ್ಷೆಯಲ್ಲಿಯೇ ಸುತ್ತುತ್ತಾ ಇರುತ್ತೇವೆ, ಸಮಯ ಕಳೆದಂತೆ ಅಥವಾ  ಆಕರ್ಷಣೆ  ಕುಂದಿದಂತೆ ಮೊದಲನೇ ಕಕ್ಷೆಯಿಂದ ಎರಡನೇ ಕಕ್ಷೆಗೆ,ಎರಡರಿಂದ ಮೂರು ಹೀಗೆ ಫ್ರೀ ಎಲೆಕ್ಟ್ರಾನ್ಗಳಾಗಿ ಆ ವ್ಯಕ್ತಿ ವಿಷಯ ಅಥವಾ ವಸ್ತುವಿನಿಂದ ದೂರ ಹೋಗುತ್ತೇವೆ.ಪ್ರಸ್ತುತ ವಸ್ತುವಿನಿಂದ ದೂರ ಹೋದರು ಬೇರೆ ವಸ್ತು ವಿಷಯದ ಕಕ್ಷೆಯಲ್ಲಿ ಇದ್ದೆ ಇರುತ್ತೇವೆ.
ಅಪ್ಪ,ಅಮ್ಮ,ಆಪ್ತ ಗೆಳೆಯ,ಆಪ್ತ ಗೆಳತಿಯೊಂದಿಗೆ ಒಳ್ಳೆ ಸಂಬಂದ ಇದ್ದರೆ ಅವರ ನುಕ್ಲೆಯುಸ್ ನಲ್ಲಿ ಮೊದಲ ಕಕ್ಷೆಯಲ್ಲಿ ಸುತ್ತುತ್ತಾ ಇರುತ್ತೇವೆ.ಇನ್ನು ಅಣ್ಣ,ಅಕ್ಕ,ಸೋದರ ಸಂಬಂದಿ,ಗೆಳೆಯರು,ಗುರುಗಳು,ಹಿತೈಷಿಗಳ ಎರಡನೇ ಕಕ್ಷೆಯಲ್ಲಿದ್ದರೆ,ಸಹಪಾಟಿಗಳು,ಪಕ್ಕದಮನೆಯವರು,ಸೋದರ ಸಂಬಂದಿಗಳ ಕಕ್ಷೆಯಲ್ಲಿ ನಮ್ಮ ಆಕರ್ಷಣೆ ಮತ್ತು ಪರಿಚಯಕ್ಕೆ ತಕ್ಕಂತೆ ಮೂರು,ನಾಲ್ಕನೆಯ ಕಕ್ಷೆಯಲ್ಲಿ ಇರುತ್ತೇವೆ.ತೀರಾ ಪರಿಚಿತವಿಲ್ಲದ,ಒಂದು ಸಣ್ಣ ನಗು,ಒಂದು ಹಲೋ,ನಮಸ್ತೆಗೆ ಅಸ್ಟೆ ಸೀಮಿತವಾದ ಸಂಬಂದಗಳು ಇರುತ್ತವೆ ಅದರಲ್ಲೇ ನಾವು ಫ್ರೀ ಎಲೆಕ್ಟ್ರೋನ್,ಅವರು ಇರುವ ವರೆಗೆ ಮಾತ್ರ ಅವರ ಜೊತೆ ಅವರನ್ನ ಬಿಟ್ಟು ಮುಂದೆ ಹೋದರೆ ಆಯಿತು ಅವರ ಬಗ್ಗೆ ಯಾವುದೇ ಯೋಚನೆ ಇರಲ್ಲ.ಇದು ಪ್ರತಿ ವ್ಯಕ್ತಿಗೆ ಸಂಬಂದ ಪಡುತ್ತದೆ ಹಾಗಾಗಿ ಅಮ್ಮನ ಮೊದಲನೆಯ ಕಕ್ಷೆಯಲ್ಲಿ ನಾನಿರುತ್ತೆನೆ,ಆದರೆ ನೀವು ಅಕ್ಕ ಅಥವಾ ಅಪ್ಪನ ಮೊದಲನೇ ಕಕ್ಷೆಯಲ್ಲಿ ಸುತ್ತುತ್ತಾ ಅಮ್ಮನ ಎರಡನೇ ಕಕ್ಷೆಯಲ್ಲಿ ಇದ್ದರು ಇರಬಹುದು.ಅದು ನಮ್ಮ ನಮ್ಮ ಸಂಬಂದಗಳಿಗೆ ಬಿಟ್ಟದ್ದು.

 

ನಾವು ಪ್ರತಿ ವಸ್ತು ಅಥವಾ ವ್ಯಕ್ತಿಯ ಒಂದೇ ಕಕ್ಷೆಯಲ್ಲಿ ಇರುವುದು ಸ್ವಲ್ಪ ಕಡಿಮೆ,ವರ್ಷದ ಹಿಂದೆ ಪರಿಚಯವೇ ಇಲ್ಲದ ನನ್ನ ಸಹದ್ಯೋಗಿ ಪ್ರಸ್ತುತ ನನ್ನ ನೆಚ್ಚಿನ ಗೆಳೆಯ,ಫ್ರೀ ಎಲೆಕ್ಟ್ರಾನ್ ಆಗಿದ್ದ ನಾನು ಈಗ ಅವನ ನುಕ್ಲೆಯಸ್ ನ ಎರಡನೇ ಕಕ್ಷೆಯಲ್ಲಿಯೇ ಇದ್ದೇನೆ.ಅಕ್ಕನ ಜೊತೆ ಒಂಥರಾ ಪ್ರೀತಿ ಇದ್ದಾಗ,ಅವಳು ಉಡುಗರೇ ಕೊಟ್ಟಾಗ,ಏನೋ ಸಮಸ್ಯೆ ಹೇಳಿಕೊಂಡು ಅತ್ತಾಗ  ಮೊದಲನೇ ಕಕ್ಷೆ,ಜಗಳ ಆಗಿ ಮಾತು ಬಿಟ್ಟರೆ ಆದರೆ ಫ್ರೀ ಎಲೆಕ್ಟ್ರಾನ್.ಕೆಲವು ಸಂಬಂದಗಳು ಮೂಡವ ಮುಂಚೆಯೇ ಮುರಿಯುತ್ತವೆ,ಬಸ್ಸಿನ ಕಿಟಕಿಯಲ್ಲಿ ನೋಡಿದ ಹುಡುಗಿ,ಮಾರು ದೂರದಲ್ಲೇ ಹಾರಿ ಹೋದ ನವಿಲು,ಖಾಲಿ ರಸ್ತೆಯಲ್ಲಿ ಕಾಣುವ ಬಿಸಿಲು ಕುದುರೆ ಇವುಗಳು ಕ್ಷಣಾರ್ದದಲ್ಲಿ ಬಂದು ಹೋಗುವದರಿಂದ ನಾವು ಕೂಡ ಅದೇ ಗತಿಯಲ್ಲಿ ಫ್ರೀ ಎಲೆಕ್ಟ್ರಾನ್ ನಿಂದ ಮೊದಲನೇ ಕಕ್ಷೆಗೆ ಹೋಗಿ ಮತ್ತೆ ಫ್ರೀ ಎಲೆಕ್ಟ್ರಾನ್ ಗಳಾಗುತ್ತೇವೆ.

 

ವ್ಯಕ್ತಿ ಮತ್ತು ಸಂಬಂದಗಳು ಮಾತ್ರ ಅಲ್ಲದೆ,ವಸ್ತು ಮತ್ತು ವಿಷಯದಲ್ಲೂ ನಾವು ಹೀಗೆ ಇದ್ದೇವೆ ಅನಿಸುತ್ತದೆ.ಇದೇ ಜಾಗದಲ್ಲಿ ಬರುವ ಬರವಣಿಗೆಗಳು ನನಗೆ ತುಂಬಾ ಇಷ್ಟ,ಅದನ್ನು ಯಾರು ಬರಿಯುತ್ತಾರೋ ಗೊತ್ತಿಲ್ಲ ಆ ವಿಷಯಗಳ ಮೊದಲ ಕಕ್ಷೆಯಲ್ಲಿ ತಿರುಗುವುದು ನನ್ನ ಹವ್ಯಾಸ ಆಗಿದೆ,ಸಂಗೀತ ಕೇಳುವ,ಅದರ ಸಾಹಿತ್ಯದಲ್ಲೂ ಮೊದಲನೇ ಕಕ್ಷೆ ಆದರೆ ಅದೇ ರೀತಿ ಆಂಗ್ಲ ಭಾಷೆಯ ಸಂಗೀತ ಬಂದರೆ ಐದೋ ಆರೋ ಕಕ್ಷೆಗೆ ಜಿಗಿಯುತ್ತೇನೆ.ಅಮ್ಮ ಮಾಡಿದ ಅಡುಗೆಯ ಮೊದಲನೇ ಕಕ್ಷೆ ಆದರೆ ನಾನೇ ಮಾಡಿದ ಉಪ್ಪಿಟ್ಟು ಕೊನೆಯ ಕಕ್ಷೆ.

ನಮ್ಮ ನಡುವಳಿಕೆಗಳು ಎಲೆಕ್ಟ್ರಾನ್ಗಳ ನಡುವಳಿಕೆ ಹೋಲಿಕೆ ಮಾಡುವುದು ಕಷ್ಟ ಆದರು ಬಹಳ ದಿನದಿಂದ  ಅದೊಂದು ಕಲ್ಪನೆ ಸಿಕ್ಕಾಪಟ್ಟೆ ಕಾಡುತ್ತಿದೆ.ಪ್ರತಿ ವಿಷಯದಲ್ಲೂ ಈ ಪರಿಕಲ್ಪನೆ ಗಮನಿಸಿದರೆ ಹೊಂದಾಣಿಕೆ ಮಾಡಬಹುದು ಅನಿಸುತ್ತದೆ.ನನ್ನ ಅನಿಸಿಕೆ ಇರುವದು ಹೀಗೆ ನಿಮ್ಮಗು ಹೀಗೆ ಏನಾದರು ಅನಿಸಿದ್ದರೆ ದಯವಿಟ್ಟು ತಿಳಿಸಿ,ನಿಮ್ಮ ವಿಷಯದ ಓದುಗರನಾಗಿ ನಾನು ನಿಮ್ಮ ಮೊದಲನೇ ಕಕ್ಷೆಯಲ್ಲಿ ಗಿರಿಕಿ ಹೊಡೆಯಲು ಕಾಯುತ್ತಿದ್ದೇನೆ.

Facebook ಕಾಮೆಂಟ್ಸ್

Anand Rc: ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.
Related Post