X

ಕಾಲ

ಕಾಲ ಎಲ್ಲರಿಗೂ ಸಮಾನವಲ್ಲ
ಕಾಲದ ಹೊಳೆಯಲಿ
ಮೀಯುವರೆಲ್ಲಾ , ಅಲ್ಲಲ್ಲಿ
ನಿಂತೆ ನಿಲ್ಲುವರು
ನೋವು ಮಾಗಲೋ , ನೆನಪನಳಿಸಲೋ
ಹೊಸತನದ ಹೂವರಳಲು .

ಆಗಾಗ ಮತ್ತೆದೇ ಕಾಲದ ಬಯಕೆ
ಕಾಲದ ಸಾಲಕ್ಕೂ ಹರಕೆ
ಸಂಭ್ರಮ ಸಿರಿ ಘಳಿಗೆ ಬಾಚಲು
ಅರಿವಿನ ಗರಿ ಬಿಚ್ಚಲು
ಜಿಪುಣ ಕಾಲ , ನೀಡದು ಅರೆಘಳಿಗೆ
ಕಾಲದೋಟಕೆ ನಮ್ಮ ಹತಾಶ ನಡಿಗೆ.

ಆಗ ಒಂಟಿ ಕಾಲಲಿ
ಕುಂಟೆಬಿಲ್ಲೆ ಆಡಿದ ಕಾಲವೊಂದಿತ್ತು
ಕೇಕೆಹಾಕಿ ಸೋಲಿಸಲು , ಸವರಲು
ಈಗ ಬರೆ ಚುಚ್ಚುವ ಗಂಟೆಗಳ ಮುಳ್ಳು .
ಕಾಲದ ವ್ಯವಹಾರವಿದು ಅಲ್ಲ ಸುಳ್ಳು
ಕ್ಷಣ ಕಾಲದ ಹೊನ್ನ ಸರಕುಗಳಿವು
ಕೊಂಡು ಕೂಡಿಡುವ ಹಾಗಿಲ್ಲ !

ಪಂಥಾಹ್ವಾನಕೆ ನಮ್ಮೆಲ್ಲರನ ದೂಡಿ
ಮುಗ್ಗರಿಸಿ ಬಿದ್ದವರ ನೋಡಿ ,ಇವ
ನಗುತಿರುವ , ತನ್ನ ಹುರಿ ಮೀಸೆಯಡಿ
ಗೆಣೆಕಾರನಾದರೂ ನಿಂತು ತಬ್ಬುವ
ಹಾಗಿಲ್ಲ , ಶರವೇಗದ ಸರದಾರನಿವ
ಶತಮಾನಗಳ ತಿಂದು ತೇಗಿ ,ಓಡುತ್ತಿರುವ
ಕಾಲದೋಟದಲಿ ನನ್ನ ಗೊಂದಲ-
ದ ಹೆಜ್ಜೆ ಗತಿಗೆ ತಾಳ ಹಾಕಲಾರದವ .

ಆರತಿ  ಘಟಿಕಾರ್ 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post