X

ಮಕ್ಕಳ ಶಿಕ್ಷಣದಲ್ಲಿ;ವೃತ್ತಿಯ ಅಸಮಾನತೆಯಲ್ಲಿ ಪೋಷಕರ ಪಾತ್ರ

ತಮ್ಮ ಮಕ್ಕಳು ವಿದ್ಯಾವಂತರಾಗಿ, ಉತ್ತಮ ಸ್ಥಾನ-ಮಾನಗಳನ್ನು ಗಳಿಸಿ, ಕೈತುಂಬಾ ಸಂಬಳ ಗಳಿಸಬೇಕೆಂಬ ಮಹದಾಸೆ ಯಾವ ತಂದೆ-ತಾಯಿಗಿಲ್ಲ ಹೇಳಿ!! …ಈ ಮಾತು ಹಿಂದಿನ ಕಾಲಕ್ಕೆ ಸ್ವಲ್ಪಮಟ್ಟಿಗೆ ಅಪ್ರಸ್ತುತವೆಂದು ಕಂಡರೂ, ಈಗಿನ ಕಾಲಘಟ್ಟಕ್ಕೆ, ಇದು ಅಷ್ಟೇ ಪ್ರಸ್ತುತ. ಕೂಡಿಟ್ಟ ಕೋಟ್ಯಾಂತರ ರುಪಾಯಿಗಳಿದ್ದರೂ, ಮೂರು ತಲೆಮಾರು ನಿಶ್ಚಿಂತೆಯಿಂದ ಇರಬಹುದಾದ ಆಸ್ತಿಯಿದ್ದರೂ, ತಮ್ಮದೇ ಸ್ವಂತ ಉದ್ದಿಮೆಗಳಿದ್ದರೂ, ಮಕ್ಕಳು ಅವರದೇ ಅಸ್ತಿತ್ವವನ್ನು ಕಂಡುಕೊಳ್ಳಬೇಕೆಂಬುದು ಈಗಿನ ತಂದೆ-ತಾಯಿಯರ ಬಯಕೆಯೆಂಬುದು ಸಂತೋಷದ ವಿಷಯ. ಆದರೆ ಇವರು ಎಲ್ಲಾ ವೃತ್ತಿಯ ಬಗ್ಗೆ, ಎಲ್ಲಾ ಶಿಕ್ಷಣದ ವಿಭಾಗಗಳ ಮೇಲೆ ಸಮಾನತೆಯ ಭಾವನೆ ಹೊಂದದಿರುವುದೇ ವಿಪರ್ಯಾಸ.  ಬಹುತೇಕ ಮಕ್ಕಳ ಶಿಕ್ಷಣದ ಹಾದಿಯ ಆಯ್ಕೆಯಲ್ಲಿ,  ಮಕ್ಕಳ ಅಭಿರುಚಿಯ ಆಯ್ಕೆಗೆ ಸ್ವಾತಂತ್ಯವಿಲ್ಲದಿರುವುದೇ ಈ ಭಾವನೆಯಿಂದಾಗಿ. ಅವಿದ್ಯಾವಂತ ಪೋಷಕರು ಈ ಭಾವನೆಯನ್ನು ಹೊಂದಿದರೆ ತಿದ್ದಬಹುದೇನೋ..!!..ವಿದ್ಯಾವಂತರೇ ಹೊಂದಿದರೆ…!! ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಏಲ್ಲಾ ವೃತ್ತಿಯ ಬಗ್ಗೆ ಸಮಾನತೆಯ ಭಾವನೆ ಇದೆ. ಮುಂದುವರಿಯುತ್ತಿರುವ ನಮ್ಮ ರಾಷ್ಟ್ರದ ಕತೆಯೇನು ?…

ಅಮೇರಿಕಾ, ಜಪಾನ್ನಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪಿ. ಹೆಚ್. ಡಿ ವ್ಯಾಸಾಂಗ ಮಾಡುವವನೂ ಕೂಡಾ ಪೆಟ್ರೋಲ್ ಬಂಕುಗಳಲ್ಲೋ, ಲ್ಯಾಬ್ ಸಹಾಯಕನಾಗಿಯೋ, ಟ್ಯೂಷನ್ ತರಗತಿಗಳನ್ನೋ ನಡೆಸುವ ಕೆಲಸ ನಿರ್ವಹಿಸುವುದುಂಟು. ಅವರ ಇತರ ಖರ್ಚುಗಳನ್ನು ಈ ಮೂಲಕ ಭರಿಸುವುದುಂಟು. ಆದರೆ ನಮ್ಮ ದೇಶದಲ್ಲಿ ಯಾಕಿಲ್ಲ…? ಈ ವೃತ್ತಿಯನ್ನು ನಿರ್ವಹಿಸಿದರೆ ತನ್ನ ಘನತೆಗೆ ಕುತ್ತು ಬರಬಹುದೇನೋ ಅಥವಾ ಪಕ್ಕದ ಮನೆಯವರು ಏನಂದುಕೊಂಡಾರೋ ? ಎಂಬ ಸಂಕುಚಿತ ಭಾವನೆ ಇದ್ದೇ ಇದೆ.

ಮಕ್ಕಳು ಹುಟ್ಟಿದ ತಕ್ಷಣವೇ, ಅವರ ವೃತ್ತಿಯ ಆಯ್ಕೆಯನ್ನು ತೀರ್ಮಾನಿಸಿಬಿಡುವ ಪೋಷಕರಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿರುವಾಗಲೇ ಇಂಜಿನಿಯರ್ ಅಥವಾ ಡಾಕ್ಟೇ ಆಗಬೇಕೆಂದು ಕಿವಿತುಂಬಿಸುವವರಿದ್ದಾರೆ. ಹತ್ತನೇ ತರಗತಿಯಲ್ಲಿ ಗಳಿಸಿದ ಅಂಕದ ಆಧಾರದಲ್ಲೇ, ಅವರ ಜೀವನವನ್ನು ನಿರ್ಧರಿಸುವವರಿದ್ದಾರೆ. ಪಿ.ಯು.ಸಿ. ಪರೀಕ್ಷೆಯಲ್ಲಿ ತಾವು ಅಂದುಕೊಂಡಂತೆ ಮೆಡಿಕಲ್ ಸೀಟ್  ಸಿಗಲಿಲ್ಲವೆಂದು ಮಕ್ಕಳನ್ನು ಅಳಿಸಿ, ಅವರ ಆತ್ಮವಿಶ್ವಾಸವನ್ನು ಕೆಡವಿ, ಆಕಾಶವೇ ತಮ್ಮ ತಲೆಗೆ ಬಿದ್ದಂತೆ ಭಾವಿಸುವ ಹೆತ್ತವರಿದ್ದಾರೆ. ಫೇಲಾದರಂತೂ, ಯಾವುದಕ್ಕೂ ನಾಲಾಯಕ್ ಎಂದು ಸರ್ಟಿಫಿಕೇಟ್ ನೀಡುವವರಿದ್ದಾರೆ. ಇದರಿಂದಾಗಿ ವಿದ್ಯಾರ್ಧಿಗಳ ತಲೆ ಪ್ರೆಷರ್ ಕುಕ್ಕರ್ನಲ್ಲಿ ಬೇಯುವ ಆಹಾರ ಪದಾರ್ಥಗಳಂತೆ ಬೇಯುವುದಂತೂ ಸತ್ಯ.

ಮಕ್ಕಳು ತಮ್ಮ ಅಭಿರುಚಿಗೆ ತಕ್ಕಂತಹ ವಿಷಯಗಳನ್ನು ತಮ್ಮ ಕಲಿಕೆಗೆ ಆಯ್ದುಕೊಳ್ಳಬೇಕು. ಹೆತ್ತವರು ವಿಷಯದ ಆಯ್ಕೆಗೆ ಸಲಹೆಯನ್ನು ನೀಡಿದರೂ, ಅಂತಿಮ ಆಯ್ಕೆಯು ವಿದ್ಯಾರ್ಥಿಗಳದ್ದೇ ಆಗಿರಬೇಕು. ಇಲ್ಲವಾದಲ್ಲಿ ಹಿಂದಿನ ಕಾಲದಲ್ಲಿ ಹುಡುಗಿ-ಹುಡುಗನ ಅಭಿಪ್ರಾಯ ಕೇಳದೆ ಹಿರಿಯರು ಮದುವೆ ಮಾಡಿಸಿದಂತಾಗುತ್ತದೆ. ವಿದ್ಯಾರ್ಥಿಗಳ ಬದುಕು ಸ್ವಯಂಚಾಲಿತ ಯಂತ್ರಗಳಿಗಿಂತ ಭಿನ್ನವಾಗಿರುವುದಿಲ್ಲ. ಈ ರೀತಿಯ ಒತ್ತಡದ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳು ಜ್ಞಾನವಂತರಾಗುತ್ತಾರೆ ಎಂದು ಹೇಳುವುದು ಕಷ್ಟವಾದೂ, ಸರ್ಕಸ್ನಲ್ಲಿ ಪಳಗಿದ ಕರಡಿಯಂತೆ ಪಳಗಿರುತ್ತಾರೆ ಎಂಬುವುದಂತೂ ಸತ್ಯ.

ಈಗಾಗಲೇ ಹತ್ತನೇ ತರಗತಿಯ,ಪಿಯುಸಿಯ ಫಲಿತಾಂಶವು ಪ್ರಕಟಗೊಂಡಿದೆ. ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಒತ್ತಡ ಹೇರದೆಯೇ, ಅವರ ಅಭಿರುಚಿಯ ದಾರಿಯಲ್ಲಿ ಕಳುಹಿಸುವುದು ಪೋಷಕರ ಕರ್ತವ್ಯ. ಹೆಚ್ಚು ಅಂಕಗಳಿಸಿದವನಿಗೆ ಸಯನ್ಸ್;ಕಡಿಮೆ ಅಂಕಗಳಿಸಿದವನಿಗೆ ಕಾಮರ್ಸ್; ಎಂಬ ಭಾವನೆಯನ್ನು ಕಿತ್ತೆಸೆಯಬೇಕಾಗಿದೆ. ಅದೇ ರೀತಿಯಲ್ಲಿ ಕುಲ ವೃತ್ತಿಯನ್ನೂ, ಕುಲ ಕಸುಬಿನ ಕಡೆಗೂ ಒಂದು ದೃಷ್ಟಿ ಹರಿಸಬೇಕಾಗಿದೆ. ಈ ದೇಶಕ್ಕೆ ಒಬ್ಬ ಡಾಕ್ಟರ್, ಇಂಜಿನಿಯರ್ ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಶಿಕ್ಷಕ,ಕೃಷಿಕನೂ ಕೂಡಾ ಅಷ್ಟೇ ಮುಖ್ಯ. ಒಂದೊಂದು ವೃತ್ತಿಯೂ ತನ್ನದೇ ಆದ ಪ್ರಾಮುಖ್ಯತೆಯನ್ನ ಹೊಂದಿದೆ. ಯಾವುದೂ ಮೇಲಿಲ್ಲ; ಯಾವುದೂ ಕೆಳಗಲ್ಲ; ಎಂಬ ಭಾವನೆಯನ್ನು ಮನ ಮನದಲ್ಲಿ, ಜನಜನರಲ್ಲಿ ಬೆಳೆಸಬೇಕಾಗಿದೆ; ಮಕ್ಕಳಲ್ಲಿ ತುಂಬಬೇಕಾಗಿದೆ. ಈ ರೀತಿಯಾಗಿ ವೃತ್ತಿಯ ಅಸಮಾನತೆಯನ್ನು ಪರಿಹರಿಸಿ, ದೇಶದ ಸಮತೋಲನವನ್ನು ಕಾಯ್ದುಕೊಳ್ಳೋಣ….

– ಕೃಷ್ಣ ಕುಮಾರ್ ಪಟ್ಟಾಜೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post