X

ಸಿಟಿ ಆಫ್ ಜಾಯ್

ಭಾಷ್ಕೋರ್ ಬ್ಯಾನರ್ಜಿಗೆ ಕೋಲ್ಕತ ಅಂದರೆ ಜೀವ. ನಿವೃತ್ತಿಯ ನಂತರ ಮಗಳ ಕೆಲಸಕ್ಕೆ ಅನುಕೂಲವಾಗುತ್ತದೆಂದು ದೆಹಲಿಗೆ ಸ್ಥಾನ ಬದಲಾಯಿಸಿ ಕೂತರೂ ಅವನ ಜೀವವೆಲ್ಲ ಕೋಲ್ಕತ್ತದ ತನ್ನ ವಂಶಜರ ಮನೆಯಲ್ಲೇ. ಆ ಮನೆಯನ್ನು ಮಾರಿ ಬಿಡಿ, ಸಿಗೋಷ್ಟು ದುಡ್ಡು ಜೇಬಿಗಿಳಿಸಿಕೊಳ್ಳಿ ಎನ್ನುವ ಯಾವ ದಲ್ಲಾಳಿಯ ಮಾತನ್ನೂ ಆತ ಕೇಳಲಾರ. ಅಲ್ಲಿ ತನ್ನಮ್ಮನ ಪ್ರಾಣವೇ ಇದೆ; ಅದರ ಕೋಣೆಗಳ ಮೂಲೆ ಮೂಲೆಯನ್ನೂ ಅಮ್ಮನ ಉಸಿರಲ್ಲಿ ಅದ್ದಿ ತೊಳೆದಂತಿದೆ ಎಂದು ದೃಢವಾಗಿ ನಂಬಿರುವವನು ಭಾಷ್ಕೋರ್. ಜೀವಮಾನವಿಡೀ ಮಲಬದ್ಧತೆಯ ಸಮಸ್ಯೆಯಿಂದ ನರಳಿದವನು ಕೊನೆಗೂ ತನ್ನ ಮಹದಾಸೆಯಾದ ಕೋಲ್ಕತ್ತದ ಮನೆಗೆ ಹೋಗಿ, ಸೈಕಲ್ಲಿನಲ್ಲಿ ಊರೆಲ್ಲ ಸುತ್ತಾಡಿ, ರಸ್ತೆ ಬದಿಯಲ್ಲಿ ಕರಿದು ಕೊಡುವ ಕಛೋರಿಯನ್ನು ಹೊಟ್ಟೆ ಬಿರಿಯ ತಿಂದು, ಜೀವನದ ಸಾರ್ಥಕ ಸಮಯವನ್ನು ಟಾಯ್ಲೆಟ್ಟಿನಲ್ಲಿ ಕಳೆದು ಕೊನೆಗೆ ಪ್ರಾಣ ಬಿಡುತ್ತಾನೆ.

ಶೂಜಿತ್ ಸರ್ಕಾರ್ ಅವರ ಈ “ಪಿಕು” ಚಿತ್ರ ನೋಡುತ್ತಿದ್ದಾಗ ನನ್ನೊಳಗೆ ನಾನು ಕಂಡ ಕೋಲ್ಕತ ಬೆಳೆಯುತ್ತ ಹೋಗುತ್ತಿತ್ತು. ನಾನು ಕೋಲ್ಕತ್ತಕ್ಕೆ ಮೊದಲ ಬಾರಿ ಹೋದದ್ದು ಐದು ವರ್ಷದ ಹಿಂದೆ. ಸುಭಾಶ್‍ಚಂದ್ರ ಬಸು ವಿಮಾನ ನಿಲ್ದಾಣದಿಂದ ಹೊರ ಬಂದು ಇನ್ನೇನು ಟ್ಯಾಕ್ಸಿ ಹಿಡಿದು ಹೋಟೇಲಿಗೆ ಹೋಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿಯಿತು ಕೋಲ್ಕತದ ಮಳೆ. ಮಳೆಯೆಂದರೆ ಕುಂಭದ್ರೋಣವೇ. ಇಡೀ ಕೋಲ್ಕತ ನಗರ ಸಮತಟ್ಟಾದ ಬಯಲ ಮೇಲೆ ನಿಂತಿರುವುದರಿಂದ, ಮಳೆ ಮೂರ್ನಾಲ್ಕು ಗಂಟೆ ಬಿಡದೆ ಜಡಿದರೆ ಇಡೀ ನಗರವೇ ಕೆರೆಯ ಮೇಲೆ ತೇಲುವ ತೆಪ್ಪದಂತೆ ಎದ್ದು ನಿಲ್ಲುತ್ತದೆ ಎಂದು ಹೇಳಿ ಟ್ಯಾಕ್ಸಿಯ ಡ್ರೈವರ್ ಭಯ ಹುಟ್ಟಿಸಿದ. ಕೋಲ್ಕತ್ತದ ಟ್ಯಾಕ್ಸಿವಾಲರಲ್ಲಿ ಕೆಲವರು ವಾಚಾಳಿಗಳು. ಇನ್ನು ಕೆಲವರು ಗುಮ್ಮನಗಸುಕರು. ಸೆಳೆದು ಮಾತಾಡಿದರೂ ಜವಾಬು ಕೊಡದ ನಿಗೂಢ ಮನುಷ್ಯರೂ ಇರುತ್ತಾರೆ. ಇಂತಹ ಮೌನಿಗಳಿಗೆ ಬಂಗಾಲಿಯಲ್ಲದ ಗಿರಾಕಿ ಹಿಂಬದಿಯ ಸೀಟಲ್ಲಿ ಕೂತು ಮಾತಿಗೆಳಸುವುದು ಮಹಾ ಹಿಂಸೆಯಂತೆ ಭಾಸವಾಗುತ್ತದೋ ಏನೋ. ವಾಚಾಳಿ ಡ್ರೈವರುಗಳು ಬಂಗಾಳದ ಬಗ್ಗೆ ಇನ್ನಿಲ್ಲದಂತೆ ಕೊರೆಯುತ್ತಾರೆ. ಸುಪ್ರೀಮ್ ಕೋರ್ಟಿನಲ್ಲಿ ವಾದಿಸಿ ಗೆಲ್ಲಬಹುದು ಆದರೆ ಇವರ ಬಳಿ ವಾದಿಸ ಹೋದರೆ ಮಣ್ಣು ಮುಕ್ಕುವುದು ಗ್ಯಾರಂಟಿ. ಇಂಥವರ ಜೊತೆ ವಾಗ್ವಾದಕ್ಕಿಳಿಯುವ ಬದಲು ಹೊರ ನೋಡುತ್ತ ಮೌನವಾಗಿ ಕೂರುವುದು ಸುಖ ಎನ್ನಿಸಿ ಮೈಚೆಲ್ಲುತ್ತೀರಿ. ಗಾಜಿನ ಮೂಲಕ ಅನಾವರಣವಾಗುತ್ತ ಹೋಗುವ ಕೋಲ್ಕತ ಸಿಟಿಯ ಅಂದ ಚೆಂದವನ್ನು ಕಣ್ತುಂಬಿಕೊಳ್ಳುತ್ತೀರಿ. ಹತ್ತಾರು ಮಳಿಗೆಗಳಷ್ಟು ಎತ್ತರ ಬೆಳೆದುನಿಂತ ಕೆಲವು ಕಟ್ಟಡಗಳಿಗೆ ಕಡಿಮೆಯೆಂದರೂ ಇನ್ನೂರು ವರ್ಷ ವಯಸ್ಸಾದ ಹಾಗಿದೆ. ಒಂದು ಗಾಳಿ ಬೀಸಿದರೆ ಸಾಕಪ್ಪಾ, ಹಾಗೆಯೇ ಒರಗಿಕೊಳ್ಳುತ್ತೇನೆಂದು ಹಂಬಲಿಸಿ ನಿಂತಂತಿವೆ. ಅವುಗಳ ಕಿಟಕಿಗಳ ಮರದ ದಾರಂದ ಮುರಿದಿದೆ. ಕಿಟಕಿಯ ಚೌಕಟ್ಟು ನೇರ ನಿಲ್ಲದೆ ಓರೆಯಾಗಿ ಮಾಲಿದೆ. ಕೆಲವು ಕಿಟಕಿಗಳನ್ನು ಮುಚ್ಚಿ ಅರ್ಧಶತಮಾನವೇ ಕಳೆದು ಹೋದಂತಿದೆ.

ಕೋಲ್ಕತದ ರಸ್ತೆಗಳು ಸಮತಟ್ಟಾಗಿ ವಿಶಾಲವಾಗಿ ಹರಡಿಕೊಂಡಿರುವುದರಿಂದ, ಇಡೀ ನಗರಕ್ಕೆ ಒಂದು ಬಗೆಯ ವಿಚಿತ್ರ ಕುಬ್ಜತೆ ಪ್ರಾಪ್ತವಾಗಿದೆ. ಕಟ್ಟಡಗಳು ಎಷ್ಟೆಷ್ಟು ಎತ್ತರಕ್ಕಿದ್ದರೂ ಅವೇನೂ ಅಷ್ಟು ದೊಡ್ಡವಲ್ಲ ಎಂದು ಮನಸ್ಸು ಯಾಕೋ ಸುಳ್‍ಸುಳ್ಳೇ ಭ್ರಮಿಸುತ್ತದೆ. ಆಕಾಶದಲ್ಲಿ ಕಟ್ಟಡಗಳ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಅಷ್ಟಬಂಧವನ್ನು ಯಾವ ಕಿರ್ಕಾಫ್‍ನಿಗೂ ಬಿಡಿಸಲು ಸಾಧ್ಯವಿಲ್ಲ. ಇಡೀ ನಗರದ ಮೇಲೆ ದೊಡ್ಡದೊಂದು ಜೇಡ ಬಲೆ ನೇಯುತ್ತ ಹೋಗಿರುವಂತೆ ಕಾಣಿಸುವ ಈ ತಂತಿ-ಕೇಬಲುಗಳ ಜಿಗ್ಗನ್ನು ನೋಡುವುದೊಂದು ವಿಚಿತ್ರ ಖುಷಿ.

ಈ ಊರನ್ನು ಹೊಕ್ಕವನಿಗೆ ಮೊದಲು ಕಾಣುವುದೇ ಶತಮಾನಗಳಿಂದ ಓಡಿ ಓಡಿ ಸದ್ಯಕ್ಕೆ ಸೊಂಟ ಮುರಿದು ಕುಸಿದಂತೆ ನಿಂತ ಸ್ಥಬ್ದ ಕೈಗಾಡಿಗಳು. ಒಂದಾನೊಂದು ಕಾಲದಲ್ಲಿ ಕೋಲ್ಕತದ ತುಂಬ ಈ ಕೈಗಾಡಿಗಳದ್ದೇ ಸಾಮ್ರಾಜ್ಯವಿತ್ತು. ಮೂವತ್ತರಿಂದ ಐವತ್ತು ವರ್ಷಗಳ ಕಾಲ ಕೈಗಾಡಿಗಳನ್ನು ಎಳೆದೇ ಬದುಕು ಸವೆಸಿದವರೂ ಇದ್ದರು. ಆಮ್ನೆಸ್ಟಿಯವರು ಬಂದು ಇದೆಲ್ಲ ನೋಡಿ ಇದು ಮಾನವ ಹಕ್ಕುಗಳ ಮೇಲೆ ಮಾಡುತ್ತಿರುವ ಅಪಹಾಸ್ಯ ಎಂದು ಷರಾ ಬರೆದರು. ಕೈಗಾಡಿಗಳಲ್ಲಿ ಮನುಷ್ಯರನ್ನು ಕುದುರೆಗಳಂತೆ ಎಳೆಸಬಾರದು ಎಂದು ಠರಾವು ತಂದರು. ಆದರೆ ಕೈಗಾಡಿ ಎಳೆಯುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲದಿದ್ದ ಸಾಮಾನ್ಯ ಜನ ನೀವೇನು ಹೋರಾಟ ಬೇಕಾದರೂ ಮಾಡಿಕೊಳ್ಳಿ, ಆದರೆ ನಮ್ಮ ಹೊಟ್ಟೆಗೊಂದು ಹೋಡೀ ಬ್ಯಾಡ್ರಿ! ನಿಮ್ಮ ಕಾನೂನು ಹೋರಾಟ ಕೋಲ್ಕತದ ಹೊರಗೆ ಇಟ್ಟುಕೊಳ್ಳಿ ಎಂದು ಹೊರ ಕಳಿಸಿದರು. ಕೈಗಾಡಿ ಎಳೆಯುವುದು ಮಾನವ ಹಕ್ಕಿನ ಕಗ್ಗೊಲೆ ಎನ್ನುವವರ ಮುಖದಲ್ಲಿ ವ್ಯಕ್ತವಾಗುವ ರೋಷವನ್ನೂ ನೋಡಿದ್ದೇನೆ; ಇದೇನು ಹೂವಿನ ಎಸಳೇ ಎನ್ನುವಂತೆ ಕೈಗಾಡಿಯನ್ನೆತ್ತಿ ಗಿರಾಕಿಯನ್ನು ಕೂರಿಸಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಓಡುವ ಕಾರ್ಮಿಕನ ಮುಖದ ಸುಖವನ್ನೂ ನೋಡಿದ್ದೇನೆ. ಈ ವ್ಯವಸ್ಥೆಯನ್ನು ಯಾವ ಪಟ್ಟಿಗೆ ಸೇರಿಸಬೇಕೋ ಗೊಂದಲವಾಗುತ್ತದೆ!

ಸಂಜೆಯಾಗುತ್ತಿದ್ದಂತೆ ಕೋಲ್ಕತ್ತದ ಬೀದಿಗಳಲ್ಲಿ ಪುಚ್ಕದ ಗಾಡಿಗಳು ಅರಳಿ ನಿಲ್ಲುತ್ತವೆ. ನಾವು ಪಾನಿಪೂರಿ ಅಂದರೆ ಇವರು ಪುಚ್ಕ ಎನ್ನುತ್ತಾರೆ. ಎರಡೂ ಸೇಮ್‍ಸೇಮ್ ಅಲ್ಲವಾ ಎಂದಿರೋ ಇನ್ನೊಂದು ಮುಗಿಯದ ಕದನಕ್ಕೆ ಆಹ್ವಾನ ಕೊಟ್ಟ ಹಾಗೆ! ಇಲ್ಲ ಇಲ್ಲ ನಮ್ಮ ಪುಚ್ಕ ಬೇರೆಯೇ ಎಂದು ಅದರ ಗುಣಾತಿಶಯಗಳ ವರ್ಣನೆಗೆ ನಿಂತು ಬಿಡುತ್ತಾರೆ ಈ ಬಂಗಾಳಿಗಳು. ಹಾಗಾಗಿ ಕಾಸಿಗೊಂದರಂತೆ ಆ ನೀರು ಗೋಲಿಗಳನ್ನು ಬಾಯಿಗೆ ಹಾಕಿಕೊಂಡು ಜಾಗ ಖಾಲಿ ಮಾಡುವುದೇ ಜಾಣತನ. ರಸ್ತೆ ಬದಿಯಲ್ಲಿ ಚರುಮುರಿ ಮಾರುವವನು ತನ್ನ ಸೈಕಲ್ಲಿನ ಸಮೇತ ಕಾರಿನಡಿ ಆತ್ಮಹತ್ಯೆ ಮಾಡಿಕೊಳ್ಳಲು ನುಗ್ಗಿ ಬರುತ್ತಾನೆ. ಅವನ ಸೈಕಲ್ಲಿನ ತುದಿಗೆ ಸಣ್ಣಗೆ ಬಡಿದ ಕಾರು ಥಟ್ಟನೆ ನಿಲ್ಲುತ್ತದೆ. ಚರುಮುರಿ ಗಾಡಿಯಿಂದ ಒಂದಷ್ಟು ಪುರುಲೆ ಗಾಳಿಯಲ್ಲಿ ಹೈಜಂಪ್ ಹೊಡೆದು ರಸ್ತೆಯಲ್ಲಿ ಚೆಲ್ಲಾಡುತ್ತದೆ. ಯುದ್ಧವೊಂದಕ್ಕೆ ಸಿದ್ಧನಾಗಿಯೇ ಬಂದಿದ್ದವನಂತೆ ಆ ಹುಡುಗ ತನ್ನ ಸೈಕಲ್ಲನ್ನು ರಸ್ತೆಯ ನಡು ಮಧ್ಯದಲ್ಲಿ ಬೋಯಿಂಗ್ ವಿಮಾನದಂತೆ ಪ್ರತಿಷ್ಠಾಪಿಸಿ ಕಾರಿನವನ ಜತೆ ಜಗಳಕ್ಕಿಳಿಯುತ್ತಾನೆ. ಅದೆಲ್ಲೋ ಮೂಲೆಯಲ್ಲಿ ಕಾರು-ಟ್ರಾಮುಗಳ ನಡುವಿನ ಚಕ್ರವ್ಯೂಹವನ್ನು ಬಿಡಿಸಲು ಹೆಣಗಾಡುವ ಬಿಳಿ ಅಂಗಿ ತೊಟ್ಟ ಪೋಲೀಸ್ ಪೇದೆ, ಸಿಕ್ಕಿದ್ದೇ ಅವಕಾಶವೆನ್ನುವಂತೆ ಆ ಸಿಕ್ಕಿನಿಂದ ತಪ್ಪಿಸಿಕೊಂಡು ಶಾಂತಿದೂತನಂತೆ ಇತ್ತ ನೆಗೆದು ಬರುತ್ತಾನೆ. ಒಂದಷ್ಟು ಜನ ಕೂಡುತ್ತದೆ. ಒಂದೊಂದು ಮಾತನ್ನೂ ಗಾಳಿ ತುಂಬಿದ ಪುಗ್ಗೆಯಂತೆ ತುಟಿಗಳಿಂದ ಹಾರಿ ಬಿಡುವ ಬಂಗಾಳಿ ಬಾಯಿಗಳನ್ನು ಟ್ಯಾಕ್ಸಿಯೊಳಗಿಂದ ನೋಡುವ ನಿಮಗೆ ವಸಂತ ಸೇನೆಯಂತಹ ಯಾವುದೋ ಮೂಕಿ ಚಿತ್ರವನ್ನು ನೋಡಿದಂತೆ ಭಾಸವಾಗುತ್ತದೆ. ಹತ್ತು ನಿಮಿಷ ಲೋಕಾಭಿರಾಮದಂತೆ ಜಗಳಾಡಿ ಬಂದ ಡ್ರೈವರು ಮತ್ತೆ ಗೇರೆಳೆದು ಗಾಡಿ ಹೊರಡಿಸುತ್ತಾನೆ. ಅವನ ಹಿಂದೆ ಅದುವರೆಗೆ ಸ್ತಬ್ಧವಾಗಿ ನಿಂತಿದ್ದ ರಸ್ತೆ, ವೆಂಟಿಲೇಟರು ಚಾಲೂ ಆದ ಪೇಶಂಟಿನಂತೆ ಮತ್ತೆ ಉಸಿರಾಡತೊಡಗುತ್ತದೆ.

ಇನ್ನು, ಈ ನಗರದ ಕೇಂದ್ರ ಭಾಗಕ್ಕೆ ಬಂದಿರಿ ಎಂದಿಟ್ಟುಕೊಳ್ಳಿ. ಗ್ರ್ಯಾಂಡ್ ಹೋಟೇಲಿನ ಎದುರು ನಿಂತವರಿಗೆ ಅದೊಂದು – ಒಬೇರಾಯ್ ಕಟ್ಟಿದ ಫೈವ್‍ಸ್ಟಾರ್ ಹೋಟೆಲು ಎಂದು ಗುರುತು ಹಿಡಿಯಲು ಹತ್ತು ನಿಮಿಷ ಬೇಕಾಗುತ್ತದೆ. ಏಕೆಂದರೆ ನೂರಾರು ಜನ ಆ ಹೋಟೇಲಿನ ಕಂಪೌಂಡುಗುಂಟ ನಾನಾ ನಮೂನೆಯ ಫೂಟ್‍ಪಾತ್ ಅಂಗಡಿಗಳನ್ನು ತೆರೆದು ಕೂತಿದ್ದಾರೆ. ಎರಡು ರುಪಾಯಿಯ ಕರ್ಚೀಪಿನಿಂದ ಹಿಡಿದು ಎರಡು ಸಾವಿರ ಬೆಲೆ ಬಾಳುವ ಒಂದೂವರೆ ಅಡಿ ಎತ್ತರದ ಮೋಟಾರ್ ಕಾರಿನವರೆಗೆ ಅಲ್ಲಿ ಸಿಗದ ವಸ್ತು ಇಲ್ಲ. ಸಂಜೆ ಆರರ ನಂತರ ಆ ಇಡೀ ಜಾಗ ಗಿಜಿಗಿಜಿಯಿಂದ ತುಂಬಿಹೋಗುತ್ತದೆ. ದೊಡ್ಡಬಾಯಿಯ ಬಂಗಾಳಿ ಹೆಂಗಸರು ಮಾತನ್ನು ಜಗಳದಂತೆಯೋ ಜಗಳವನ್ನು ಮಾತಿನಂತೆಯೋ ಆಡುತ್ತ ಒಟ್ಟಾರೆ ಚೌಕಾಸಿ ವ್ಯವಹಾರಕ್ಕೆ ಇಳಿದಿರುತ್ತಾರೆ. ಪಡ್ಡೆ ಹುಡುಗರು ಬಣ್ಣ ಬಣ್ಣದ ಕನ್ನಡಕ ಹಾಕಿ ನೋಡಿ ಹಕ್ಕಿ ಹೊಡೆಯಲು ಕಾತರರಾಗಿರುತ್ತಾರೆ. ಈ ರಂಗೀಲಪೇಟೆ ಮುಗಿದ ಮೇಲೆ ಸಿಗುವ ಅರ್ಧ ಫರ್ಲಾಂಗು ಕತ್ತಲೆ ದಾರಿಯಲ್ಲಿ ವೇಶ್ಯೆಯರು ಗಿರಾಕಿಗಳಿಗೆ ಬಲೆ ಹಾಕುತ್ತಿರುತ್ತಾರೆ. ಅವರತ್ತ ಅಪ್ಪೀತಪ್ಪೀ ಕಣ್ಣು ಹಾಕಿದರೆ ಸಾಕು, ಅದನ್ನೇ ಗ್ರೀ ನ್‍ಸಿಗ್ನಲ್ ಎಂದು ಭಾವಿಸಿದ ಪಿಂಪುಗಳು ನಿಮ್ಮೊಡನೆ ಅರ್ಧ ಮೈಲಿ ಮಾತಾಡಿಕೊಂಡು ಬರುತ್ತಾರೆ. ರಷ್ಯನ್ ಬೇಕಾ ಸರ್? ಏಕದಂ ಮಸ್ತ್ ಮಾಲು ಸರ್! ಸೋನಾಗಚಿಗೆ ಹೋಗಿ ಟೋಪಿ ಹಾಕಿಸ್ಕೊಂಡು ಬಿಟ್ಟೀರ! ರಷ್ಯನ್ ಅಂತ ಹೇಳಿ ನೇಪಾಳಿಗಳನ್ನ ಕೊಡ್ತಾರೆ ಹಲ್ಕಟ್ ಜನ, ನಮ್ಮನ್ನ ಕೇಳಿ. ಪೂರಕ್ಕೆ ಪೂರ ವಿದೇಶಿ ಮಾಲು. ಕೊಟ್ಟ ದುಡ್ಡಿಗೆ ಪೂರಕ್ಕೆ ಪೂರ ಪೈಸಾ ವಸೂಲ್! ಎಂದು ಬಗೆ ಬಗೆಯ ಬಣ್ಣದ ಟೋಪಿ ತೋರಿಸುತ್ತಾರೆ. ಇಲ್ಲಿ ಇಂಥಾದ್ದೇ ಮಾತುಕತೆ ನಡೆಯುತ್ತಿದೆ ಎನ್ನುವುದನ್ನು ಅನುಭವದಿಂದ ಊಹಿಸುವ ನಡು ವಯಸ್ಕನೊಬ್ಬ ಎಷ್ಟಪ್ಪ ರೇಟು ಎನ್ನುತ್ತ ಬಳಿ ಸಾರುತ್ತಾನೆ. ವಿಲಿವಿಲಿ ಒದ್ದಾಡುತ್ತಿದ್ದ ನಿಮ್ಮನ್ನು ಮರಳಿ ನೀರಿಗೆ ಬಿಟ್ಟು ಪಿಂಪು ಹೊಸ ಮೀನನ್ನು ಬಲೆ ತುಂಬಿಸಿಕೊಳ್ಳುತ್ತಾನೆ.

ಕೋಲ್ಕತ ಒಂದಾನೊಂದು ಕಾಲದಲ್ಲಿ ಭಾರತದ ರಾಜಧಾನಿಯಾಗಿತ್ತು! ಬ್ರಿಟಿಷ್ ಭಾರತದ ಮೊದಲ ರಾಜಧಾನಿಯಾಗಿದ್ದ ಹೆಮ್ಮೆ ಈ ನಗರದ್ದು. ದೆಹಲಿಗೆ ಆಧುನಿಕತೆ ಬರುವ ಮೊದಲೇ ಕೋಲ್ಕತ್ತಕ್ಕೆ ಬಂತು. ಹಾಗೆ ನೋಡಿದರೆ ಬ್ರಿಟಿಷರಿಗಿಂತ ಬಹಳ ಮೊದಲೇ ದೆಹಲಿಯ ರಾಜರಿಗೆ ಇದು ಎರಡನೇ ರಾಜಧಾನಿಯಾಗಿತ್ತು ಎನ್ನಬಹುದು. ಆಗಿನ ಕಾಲದಲ್ಲೇ ಕಟ್ಟಿದ ಗ್ರ್ಯಾಂಡ್‍ಟ್ರಂಕ್ ರಸ್ತೆ ಮಧ್ಯೇತಿಹಾಸದ ಅದ್ಭುತಗಳಲ್ಲೊಂದು. ವಿಕ್ಟೋರಿಯ ರಾಣಿ ಭಾರತಕ್ಕೆ ಭೇಟಿ ಕೊಟ್ಟ ನೆನಪಿಗಾಗಿ ಬ್ರಿಟಿಷರು ಕೋಲ್ಕತ್ತದಲ್ಲಿ ಭವ್ಯವಾದ ವಿಕ್ಟೋರಿಯ ಮೆಮೊರಿಯಲ್ ಕಟ್ಟಿದರು. ಅದರ ಪಕ್ಕದಲ್ಲೆ ಕೆಥೆಡ್ರಲ್ ಚರ್ಚು ಇದೆ. ವಿಶಾಲವಾದ ಈಡನ್ ಮೈದಾನ ಇದೆ. ಬ್ರಿಟಿಷರ ದಬ್ಬಾಳಿಕೆಯನ್ನು ನಾಲ್ನೂರು ವರ್ಷ ಸಹಿಸಿಕೊಂಡೂ ಅವರು ಹೇಳಿಕೊಟ್ಟದ್ದನ್ನೆಲ್ಲ ಅವರಿಗಿಂತ ಚೆನ್ನಾಗಿ ಕಲಿತು ಪಳಗಿದ ಬುದ್ಧಿವಂತರು ಈ ಬಂಗಾಳಿಗಳು! ಅವರಿಗೆ ತಮ್ಮ ನೆಲ ಜಲದ ಬಗ್ಗೆ ಅಭಿಮಾನ ಇರುವಂತೆಯೇ ಬ್ರಿಟಿಷರಿಂದ ಆಳಿಸಿಕೊಂಡ ಬಗ್ಗೆಯೂ ಗುಪ್ತ ಪ್ರೀತಿ ಇರುವಂತಿದೆ. ಬಂಗಾಳಿಯ ಸ್ಪಷ್ಟಛಾಯೆ ಇದ್ದರೂ ಅವರು ತಮ್ಮ ಇಂಗ್ಲೀಶು ಆಕ್ಸ್’ಫರ್ಡಿನ ಓಣಿಯಲ್ಲಿ ಆಡುವ ಮಾತಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲ ಎಂದೇ ಭಾವಿಸುತ್ತಾರೆ.

ಬಹುಶಃ ಈ ದೇಶದಲ್ಲಿ ತಮ್ಮ ಸಂಸ್ಕøತಿಯನ್ನು ಬಂಗಾಳಿಗಳಷ್ಟು ಉತ್ಕಟವಾಗಿ ಆರಾಧಿಸುವವರು ಬೇರೆ ಇರಲಿಕ್ಕಿಲ್ಲ. ಪ್ರೀತಿ ಬೇರೆ ಆರಾಧನೆ ಬೇರೆ. ಬಂಗಾಳಿಗಳದ್ದು ಪ್ರೀತಿ ಅಭಿಮಾನಗಳನ್ನೂ ಮೀರಿದ ಆರಾಧನೆ. ಅದನ್ನು ಕುರುಡು ಎನ್ನುವಂತಿಲ್ಲ. ಭಾರತದಲ್ಲಿ ಗುಜರಾತಿನಷ್ಟು ಉದ್ದದ ಕರಾವಳಿ ಬೇರೆ ರಾಜ್ಯಕ್ಕಿಲ್ಲ. ಗುಜರಾತ್ ಅತ್ಯಧಿಕ ಪ್ರಮಾಣದಲ್ಲಿ ಮೀನು ಹಿಡಿಯುತ್ತದೆ. ಆದರೆ, ಮೀನು ಎಂದೊಡನೆ ನಮಗೆ ನೆನಪಾಗುವುದು ಗುಜರಾತಲ್ಲ, ಬಂಗಾಳ! ಇವರು ತಮ್ಮ ದೇವಿಗೂ ಮೀನಿನ ನೈವೇದ್ಯ ಇಟ್ಟು ಅವಳನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡುಬಿಟ್ಟಿದ್ದಾರೆ. ಉತ್ತರ ಭಾರತದಲ್ಲಿ ಎಲ್ಲಿ ಹೋದರೂ ನಿಮಗೆ ಪಾನಿಪೂರಿ ಸಿಗುತ್ತದೆ. ಪಂಜಾಬಿಗಳು ಐಸ್ ತುಂಡು ಹಾಕಿದ ನೀರಲ್ಲಿ ಪೂರಿಯನ್ನು ಅದ್ದಿ ಥಂಡಾ ಪಾನಿ ಪೂರಿ ಕೂಡ ತಿನ್ನುತ್ತಾರೆ. ಆದರೆ ತಿನ್ನುವುದರಲ್ಲಿ ಬಂಗಾಳಿಗಳನ್ನು ಮೀರಿಸುವವರು ಇರಲಿಕ್ಕಿಲ್ಲ. ಇನ್ನು, ಕರಿದದ್ದು ಹುರಿದದ್ದು ಎಲ್ಲದಕ್ಕೂ ಸಾಸಿವೆ ಎಣ್ಣೆಯ ಲೇಪನ ಕೊಡುವ ಬಂಗಾಳಿಗಳಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದರೆ ನಿಮ್ಮನ್ನು ಕಡಿದು ತೋರಣ ಕಟ್ಟಿಯಾರು! ಯಾಕೆಂದರೆ ಅವರ ಲೆಕ್ಕಾಚಾರದ ಪ್ರಕಾರ ಬಂಗಾಳಿ ರುಚಿ ಸಂಸ್ಕøತಿಗೆ ಸಮನಾದದ್ದು ಈ ಜಗತ್ತಿನಲ್ಲೇ ಯಾವುದೂ ಇಲ್ಲ. ಇನ್ನು ಬಂಗಾಳಿಗಳ ಮದುವೆಯೋ, ಅದೊಂದು ಉತ್ಸವ!

ಮಾಡುವ ಎಲ್ಲವನ್ನೂ ಅತಿರೇಕದಿಂದ ಮಾಡುವ ಬಂಗಾಳಿಗಳ ನೆತ್ತರ ಗುಣವೋ ಏನೋ, ಕೋಲ್ಕತ ಕೂಡ ಅಂಥದೊಂದು ನಶೆಯಲ್ಲಿ ಸದಾ ತೇಲಾಡುತ್ತಿರುವಂತೆಯೇ ಕಾಣುತ್ತದೆ. ಕೋಲ್ಕತ್ತದ ಒಂದೊಂದು ಹಳೆ ಮನೆಯೂ ವಸ್ತು ಸಂಗ್ರಹಾಲಯವೆ. ರಾಮಕೃಷ್ಣ ಪರಮಹಂಸ, ಶಾರದಾ ದೇವಿ, ಸ್ವಾಮಿ ವಿವೇಕಾನಂದ, ಸತ್ಯಜಿತ್ ರೇ, ಟೆಲಿಗ್ರಾಫ್ ಪತ್ರಿಕೆ, ದುರ್ಗಾಮಾತೆ ಮತ್ತು ರಬೀಂದ್ರೊ ಶೊಂಗೀತ್ ಇಲ್ಲದ ಮನೆ ಬಂಗಾಳಿಗಳ ಪಾಲಿಗೆ ಮನೆಯಲ್ಲ. ಮೀನಿಲ್ಲದ ಊಟ ಊಟವಲ್ಲ. ಶೊಂದೇಶ್, ರೊಶೊಗುಲ್ಲ ಇಲ್ಲದ ಸಮಾರಂಭಕ್ಕೆ ಕಳೆಯೇ ಇಲ್ಲ. ಅಲ್ಲಿನ ಮೀನು ಮಾರ್ಕೆಟ್ಟಿನಲ್ಲಿ ಸುತ್ತಾಡುವುದೊಂದು ವಿಶಿಷ್ಟ ಅನುಭವ. ಅಲ್ಲಿ ನಡೆಯುವ ಮಾತುಕತೆಯ ಗದ್ದಲದಿಂದ ವಿದ್ಯುತ್ ತಯಾರಿಸಬಹುದಾಗಿದ್ದರೆ, ಅದೊಂದರಿಂದಲೇ ಅಲ್ಲಿನ ನ್ಯೂ ಮಾರ್ಕೆಟ್ಟನ್ನು ಬೆಳಗಬಹುದಾಗಿತ್ತು. ಹಿಲ್ಸಾ, ಫಾನ್ಸ, ಕಮಿಲ ಎಂದು ಬಗೆ ಬಗೆಯ ಮೀನುಗಳನ್ನು ಬಂಗಾಳಿಗಳು ಇಷ್ಟಪಟ್ಟು ತಿನ್ನುತ್ತಾರೆ. ಅದಕ್ಕೆ ಸರಿಯಾಗಿ ಈ ನಗರದ ಹೃದಯ ಭಾಗದಲ್ಲಿ ಹರಿಯುವ ಗಂಗೆಯ ನೀರಲ್ಲಿ ಬೇಕು ಬೇಕಾದಷ್ಟು ಮೀನು ಸಿಗುತ್ತದೆ. ದೊಡ್ಡ ಬೊಟ್ಟಿನ ಹೆಂಗಸರು ಎಷ್ಟು ಸಣ್ಣ ತುಂಡು ಕೇಳಿದರೂ ಬೆಸ್ತರ ಹೆಂಗಸರು ಅಷ್ಟು ಸಣ್ಣದಾಗಿ ಮೀನನ್ನು ಕತ್ತರಿಸಿ ಕೊಡುತ್ತಾರೆ. ಕೇಳುವ ಕಡೆಯವಳ ಜಿಪುಣತನವೂ ಕೊಡುವ ಕಡೆಯವಳ ವ್ಯಾಪಾರೀ ಬುದ್ಧಿಯೂ ಯಾವುದೋ ದಿವ್ಯ ಬಿಂದುವಿನಲ್ಲಿ ಸಂಧಿಸಿ ಅವರಿಬ್ಬರಿಗೂ ಮೆಚ್ಚಿಗೆಯಾಗುವ ವ್ಯಾಪಾರ ನಡೆದು ಹೋಗುತ್ತದೆ. ಇನ್ನು ಸಂಜೆ ರೊಶೊಗುಲ್ಲ ತಿನ್ನುವ ಮನಸ್ಸಾದರೆ ಏನು ಮಾಡಬೇಕು? ನೇರವಾಗಿ ಶ್ಯಾಂ ಬಝಾರಿಗೇ ಹೋಗಬೇಕು. ಹಾಗೆಲ್ಲ ಒಂದು ರೊಶೊಗುಲ್ಲಕ್ಕಾಗಿ ಅಷ್ಟು ದೂರ ನಡೆಯಬೇಕಲ್ಲ ಎನ್ನುವ ಚಿಂತೆಯೇನಿಲ್ಲ ಬಂಗಾಳಿಗಳಿಗೆ. ಒಮ್ಮೆ ಭಕ್ಷ್ಯ ಭಂಡಾರ ಹೊಕ್ಕರೆ ಒಂದೇಳೆಂಟು ರೊಶೊಗುಲ್ಲ, ಐದಾರು ಶೊಂದೇಶ್, ಇನ್ನೈದಾರು ಮಲಾಯ್ ಚೊಮ್‍ಚೊಮ್, ಎರಡು ಶೊರ್ ಭಾಜ, ಅದರ ಮೇಲೆರಡು ರಾಧ ಬಲ್ಲವಿ – ಇವಿಷ್ಟನ್ನು ಮುಗಿಸದೆ ಹೊರ ಬರುವವರಲ್ಲ ಎನ್ನುವುದು ಅಂಗಡಿಯಲ್ಲಿ ಕೂತ ವರ್ತಕನಿಗೂ ಗೊತ್ತಿದೆ. ಈ ಭಕ್ಷ್ಯ ಸಮಾರಾಧನೆಗೆ ಅರ್ಥಪೂರ್ಣ ಪರಿಸಮಾಪ್ತಿ ಹಾಡಬೇಕಾದರೆ ಕೊನೆಗೆ ಒಂದು ಕೊಡದಲ್ಲಿ ಮಿಶ್ಟಿ ಡೊಯಿ ಇರಲೇಬೇಕು. ಇಷ್ಟೆಲ್ಲ ಉದರಾಲಯಕ್ಕೆ ಸೇರಿದರೇನೇ ಶ್ಯಾಂ ಬಝಾರಿಗೆ ಹೋದದ್ದಕ್ಕೂ ಒಂದು ಮರ್ಯಾದೆ!

ಕೋಲ್ಕೊತ ನಿಜಕ್ಕೂ ಒಂದು ವಿಚಿತ್ರ ನಗರ. ಇದೊಂದು ಆಧುನಿಕ ನಗರವೇ? ಅಥವಾ ಹಳ್ಳಿಯೇ? ಹಳ್ಳಿಯ ನಟ್ಟ ನಡುವಲ್ಲಿ ಅರಳಿ ನಿಂತ ನಗರವೇ? ನಗರದ ನಟ್ಟ ನಡುವಲ್ಲಿ ಕೊಡೆ ಬಿಚ್ಚಿ ಅರಳಿದ ಹಳ್ಳಿಯೆ? ನನಗೆ ಪ್ರತಿ ಸಲವೂ ಈ ಗೊಂದಲ ಕಾಡಿಯೇ ಕಾಡುತ್ತದೆ. ಕೋಲ್ಕೊತದ ಬೀದಿಗಳಲ್ಲಿ ಬೆಳಗ್ಗೆ ಆರು ಗಂಟೆಗೆ ನಡೆವವರು, ಅಲ್ಲೇ ರಸ್ತೆ ಬದಿಯ ಕೈ ಪಂಪಿನಲ್ಲಿ ನೀರು ತುಂಬಿಸಿಕೊಂಡು ಮೈಗೆ ಸುರಿದುಕೊಳ್ಳುವ ಕಾರ್ಮಿಕ ವರ್ಗವನ್ನು ನೋಡಬಹುದು. ಚಳಿಗಾಲಕ್ಕೆ ಅವರಿಗೆ ಬಿಸಿ ನೀರು ಮಾರುವವರೂ ಇರುತ್ತಾರೆ. ಡಾಲ್ಡ ತುಂಬುವ ಟಿನ್ನಿನ ಡಬ್ಬದಲ್ಲಿ ಬಿಸಿ ನೀರಿಗೆ ಒಂದು ರುಪಾಯಿ ಬೆಲೆ. ಅವರು ಮಿಂದ ಕೊಳಕು ನೀರು ರಸ್ತೆಯಲ್ಲಿ ಎಲ್ಲೆಲ್ಲೊ ಅಳಿಸಿ ಹೋದ ಗೆರೆಗಳಲ್ಲಿ ದಾರಿ ಹುಡುಕಿಕೊಂಡು ಅದೆಲ್ಲೋ ಇರುವ ತೂತಿನಲ್ಲಿ ಸೇರಿ ಮಾಯವಾಗುತ್ತದೆ. ಫುಟ್‍ಪಾತಿನಲ್ಲಿ ಅಲ್ಲಲ್ಲಿ ಮಟ್ಟಿಚಾಯ್ ಮಾರುವ ಮುದುಕರು ಕೂತಿರುವುದುಂಟು. ಇವರಿಗೆ ಚಾಯ್ ಮಾಡಲು ಇದ್ದಿಲು ಮಾರುವವರೂ ಇದ್ದಾರೆ. ಎರಡು ಸೇರು ಇದ್ದಿಲನ್ನು ಮೂವತ್ತು ರುಪಾಯಿಗೆ ಕೊಳ್ಳುವ ಚಾಯ್‍ವಾಲ, ಎರಡು ರುಪಾಯಿಗೆ ಶುಂಠಿ-ಯಾಲಕ್ಕಿಗಳ ಹಬೆಯಾಡುವ ಮಟ್ಟಿಚಾಯ್ ಮಾಡಿಕೊಡುತ್ತಾನೆ. ಅಯ್ಯಯ್ಯಪ್ಪ, ಇದಂತೂ ಪಕ್ಕಾ ಹಳ್ಳಿ ಎನ್ನುತ್ತ ಸ್ವಲ್ಪ ಮುಂದೆ ಬಂದು ಪಾರ್ಕ್ ರೋಡಿಗೆ ತಿರುಗಿದರೆ, ಅಲ್ಲಿ ಯುರೋಪಿಯನ್ ಬ್ರೇಕ್‍ಫಾಸ್ಟ್ ಕೊಡುವ ಫ್ಲೂರಿ ಬೇಕರಿ ಇದೆ. ಮಟ್ಟಿಚಾಯ್ ಮಾರಿದ ರಸ್ತೆಯ ಪಕ್ಕದ ಗಲ್ಲಿಯಲ್ಲಿ ಸಂಜೆ ಅರಳುವ ಬಾರುಗಳಲ್ಲಿ ದೊಡ್ಡ ಬಿಂದಿಯ ಸಡಿಲ ಮೊಲೆಗಳ ಹೆಂಗಸರು ಜರಿಯಾಡುವ ಸೀರೆಯುಟ್ಟು ರಿತುಪರ್ಣೊ ಘೋಷನ ಚಿತ್ರದ ಬಗ್ಗೆ ಮಾತಾಡುತ್ತ ಸೋಡ ಬೆರೆಸದೆ ಬ್ರಾಂಡಿ ಹೀರುತ್ತಾರೆ. ಅವನ್ನೆಲ್ಲ ನೋಡಿದ ಮೇಲೆ ಇದೊಂದು ವಿಚಿತ್ರ ನಗರ ಅನ್ನಿಸದಿರುವುದು ಹೇಗೆ?

ಕೋಲ್ಕತ್ತದ ಜನ ಯಾವುದನ್ನೂ ತೋರಿಕೆಗಾಗಿ ಮಾಡುವುದಿಲ್ಲ; ಹೊರಜಗತ್ತಿಗೆ ಹಾಗೆಂದು ಕಂಡರೂ. ತನಗೆ ರವೀಂದ್ರ ಸಂಗೀತ ಗೊತ್ತು ಎಂದು ತೋರಿಸಿಕೊಳ್ಳುವ ಬಂಗಾಳಿಗೆ ಹಾಗೆ ತೋರಿಸಿಕೊಳ್ಳುವಷ್ಟೇ ಅದು ತನ್ನ ಆತ್ಮಕ್ಕೂ ಬೇಕು ಎನ್ನುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬ ಬಂಗಾಳಿ ಸಿತಾರವೋ ಸರೋದವೋ ಸತ್ರಂಜೋ ಯಾವುದಾದರೊಂದು ವಾದ್ಯವನ್ನು ಕಲಿಯುತ್ತಾನೆ. ಬಣ್ಣದ ಕುರ್ತಾ ತೊಡುತ್ತಾನೆ. ದಪ್ಪಕಟ್ಟಿನ ಕನ್ನಡಕ ಹಾಕುತ್ತಾನೆ. ತನ್ನ ಸರ್’ನೇಮು ಬಂದೋಪಾಧ್ಯಾಯನೋ ಭಟ್ಟಾಚಾರ್ಯನೋ – ಅವನ್ನೆಲ್ಲ ಮುರಿಯದೆ ಹಾಗ್ಹಾಗೇ ಇಟ್ಟುಕೊಳ್ಳುತ್ತಾನೆ. ದುರ್ಗಾಪೂಜೆಯನ್ನು ರಾಷ್ಟ್ರೀಯ ಹಬ್ಬವೆನ್ನುವಂತೆ ಆಚರಿಸುತ್ತಾನೆ. ರಾಮಕೃಷ್ಣರಿಗೆ ಭಕ್ತಿಯಿಂದ ನಮಿಸುತ್ತಾನೆ. ಕಾಳಿಘಾಟಿಗೆ ಹೋಗಿ ಬರುತ್ತಾನೆ. ಬಂಗಾಳಿ ತಿನಿಸುಗಳನ್ನು ಆಸ್ವಾದಿಸುತ್ತಾನೆ. ಎಷ್ಟೇ ಆಧುನಿಕನಾದರೂ ಸತ್ಯಜಿತ್ ರೇ ಪುಸ್ತಕಗಳನ್ನು ಓದುತ್ತಾನೆ. ಮಿಥುನ್ ದಾ ಚಿತ್ರಗಳನ್ನು ನೋಡುತ್ತಾನೆ. ಅವನ ಪಾಲಿಗೆ ಸೌರವ್ ಗಂಗೂಲಿ ಮೊದಲ ಕ್ರಿಕೆಟ್ ದೇವತೆ. ತೆಂಡುಲ್ಕರ್ ಏನಿದ್ದರೂ ಆಮೇಲೆ. ಕೋಲ್ಕತ್ತದ ಬಂಗಾಳಿ ವರ್ಷಕ್ಕೊಮ್ಮೆ ಮರೆಯದೆ ನ್ಯೂ ಮಾರ್ಕೆಟ್ಟಿಗೆ ಹೋಗಿ ಕ್ರಿಸ್‍ಮಸ್ ಶಾಪಿಂಗ್ ಮಾಡುತ್ತಾನೆ. ಸಂಜೆ ಪುಚ್ಕ ತಿನ್ನುತ್ತಾನೆ. ಕಾಲೇಜ್ ಸ್ಟ್ರೀಟಿಗೆ ಹೋಗಿ ಪುಸ್ತಕ ಕೊಳ್ಳುತ್ತಾನೆ. ಟೆಲಿಗ್ರಾಫಿನ ಸುದ್ದಿ ನಿತ್ಯ ಓದುತ್ತಾನೆ. ನಗರಕ್ಕೆ ಹೊಸದಾಗಿ ಬಂದವನ ಜೊತೆ ಹೌರಾ ಬ್ರಿಜ್ ದಾಟುವಾಗ ಮಾತ್ರ “ಇದರಲ್ಲಿ ಹತ್ತು ಸಾವಿರ ಟನ್ ಅಸಲೀ ಉಕ್ಕು ಇದೆ ಗೊತ್ತಾ?” ಎಂದು ಕಣ್ಣರಳಿಸಿ ಹೇಳುವುದಕ್ಕಂತೂ ಮರೆಯುವುದಿಲ್ಲ.

ಇದೆಲ್ಲ ಯೋಚನೆ ಬರುತ್ತಿದೆ ನನಗೆ ಪಿಕು ಚಿತ್ರ ನೋಡುವಾಗ. ಈ ಕೋಲ್ಕತ ಒಂದು ನಗರವಲ್ಲ; ಅದೊಂದು ಜೀವನ ಕ್ರಮ ಎಂದು ಅನಿಸುತ್ತದೆ. ಅಂಥದೊಂದು ನಗರ ಪ್ರಜ್ಞೆ ಬಹುಶಃ ಬೆಂಗಳೂರಿಗೆ ಬಾರದು. ಇಲ್ಲಿದ್ದು ಇಪ್ಪತ್ತು ವರ್ಷವಾದರೂ ಯಾರಿಗೂ ಇದು ನನ್ನ ನಗರ ಅನ್ನಿಸುವುದಿಲ್ಲ. ಬೆಂಗಳೂರಿಂದ ಒಂದು ರಾತ್ರಿಯಷ್ಟು ದೂರವಿರುವ ಊರವರಿಗೆ ವಾರಾಂತ್ಯ ಬಂದರೆ ಇಲ್ಲಿ ಉಳಿಯಬೇಕು ಅನ್ನಿಸುವುದಿಲ್ಲ. ಇಲ್ಲಿಯೇ ಇರುವವರಿಗಂತೂ ಏನು ಮಾಡೋದು ಎಲ್ಲಿಗೆ ಹೋಗೋದು ಪ್ರಶ್ನೆಗಳು ಹುಟ್ಟುತ್ತವೆ. ದೆಹಲಿ, ಯೂಪಿಗಳಿಂದ ಬಂದು ಬೀಡು ಬಿಟ್ಟ ಜನ ಶನಿವಾರ ಸಂಜೆ ಪಬ್ಬುಗಳಿಗೆ ಅಲೆಯುತ್ತಾರೆ. ಸಾಹಿತ್ಯದ ಅಷ್ಟಿಷ್ಟು ಆಸಕ್ತಿ ಇರುವವರು ಭಾನುವಾರದ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಅಷ್ಟೆ, ಅಲ್ಲಿಗೆ ಈ ಸಿಟಿಯ ಪರಿಧಿಯನ್ನು ನಾವು ತಲುಪಿ ಆಯಿತು! ಅದರಾಚೆಗೆ ಈ ನಗರ ನಮಗೆ ದಕ್ಕುವುದಿಲ್ಲ. ಕೋಲ್ಕತದ ಬಂಗಾಳಿ ಬಾಬುಗಳಂತೆ ಈ ನಗರದ ಎಲ್ಲವನ್ನೂ ಎಲ್ಲ ರೀತಿಯಿಂದಲೂ ಅನುಭವಿಸುವ ಉತ್ಕಟ ಬಯಕೆ ಯಾಕೋ ಮೂಡುವುದೇ ಇಲ್ಲ. ವಿದ್ಯಾರ್ಥಿ ಭವನಕ್ಕೆ ಹೋಗುವವರು ಇಂದಿರಾ ನಗರಕ್ಕೆ ಹೋಗಲಾರರು. ಇಂದಿರಾ ನಗರದ ಟಾಕೋ ಬೆಲ್ ಗಿರಾಕಿಗಳು ಮಲ್ಲೇಶ್ವರದ ವೀಣಾ ಸ್ಟೋರಿನಾಚೆ ಸುಳಿಯಲಾರರು. ಈ ನಗರಕ್ಕೆ ತನ್ನದೇ ಆದ ಉಡುಪಿನ ಸಂಸ್ಕøತಿ, ಊಟದ ಸಂಸ್ಕøತಿ, ಓದಿನ ಸಂಸ್ಕøತಿ, ಆಚರಣೆಗಳ ಸಂಸ್ಕøತಿ ಇವೆಲ್ಲ ಇಲ್ಲವೇ ಇಲ್ಲವಲ್ಲ ಎಂದು ಬೇಸರದಿಂದ ಆಶ್ಚರ್ಯ ಪಡುವಂತಾಗುತ್ತದೆ. ಹಾಗಾಗಿಯೇ ಬಹುಶಃ ಯಾವ ಬಾಲಿವುಡ್ ಚಿತ್ರ ನಿರ್ದೇಶಕರಿಗೂ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನ ಫ್ಲೇವರಿನಲ್ಲಿ ಚಿತ್ರ ಮಾಡಲು ಮನಸ್ಸಾಗುವುದಿಲ್ಲ. ಮನಸ್ಸಾದರೂ ತಕ್ಕ ಕತೆ ಸಿಗುವುದು ಸಂಶಯ. ಜಯಂತ ಕಾಯ್ಕಿಣಿಯಂತಹ ಕತೆಗಾರರಿಗೆ ಬೆಂಗಳೂರಲ್ಲಿ ನೆಲೆಸಿದ ಮೇಲೂ ಮನಸ್ಸಿನ ಕ್ಯಾನ್ವಾಸಿನಲ್ಲಿ ಹರಡಿನಿಂತ ಮುಂಬಯಿಯನ್ನು ಬದಿಗಿಡುವುದು ಸಾಧ್ಯವಾಗುತ್ತಿಲ್ಲ.

ಕೋಲ್ಕತ, ಸಾಯುತ್ತಿರುವ ನಗರ ಎಂಬ ಗುಲ್ಲು ಇದೆ. ಇಂದು-ನಿನ್ನೆಯದಲ್ಲ; ವರ್ಷಗಳಿಂದ ಕೇಳಿಬರುತ್ತಿರುವ ಮಾತದು. ಈ ಜಗತ್ತಿನಲ್ಲಿ ಕೊಟ್ಟ ಕೊನೆಯ ಬಂಗಾಳಿ ಬದುಕಿರುವವರೆಗೆ ಕೋಲ್ಕತ ಸಾಯುವುದು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಆದರೆ ಬೆಂಗಳೂರಿನ ವಿಷಯದಲ್ಲಿ ಹಾಗೆ ಹೇಳುವುದು ಕಷ್ಟ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post