X
    Categories: ಕಥೆ

ಸಾಸಿವೆ ತಂದವನು …..

ನಾನು ಆಫೀಸಿನಲ್ಲಿ ಬ್ಯುಸಿ ಆಗಿದ್ದಾಗ ನನ್ನ ಫೋನ್ ರಿಂಗಣಿಸಿತು . ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ತಕ್ಷಣವೇ ಆಸ್ಪತ್ರೆಗೆ ಓಡಿ ಬಂದೆ . ನೀನೆಂದೂಆಸ್ಪತ್ರೆಯ ಕಡೆಗೆ ಮುಖ ಮಾಡಿದವಳೇ ಅಲ್ಲ ಅಮ್ಮ !. ICU ಕೋಣೆಯೊಳಗೆ ಇಣುಕಿ ನೋಡಿದೆ ,ನನ್ನೆಡೆಗೆ ಒಂದು ಕ್ಷೀಣ ನಗು. ನಾನು ಮತ್ತೆ ಮಗುವಾಗಿಹೋದೆ  ಅಮ್ಮ ,ಗಳ ಗಳನೆ ಅತ್ತು ಬಿಟ್ಟೆ . ಐದಾರು  ವೈದ್ಯರ ತಂಡ ನಿನ್ನ ಕೇಸ್  ಬಗ್ಗೆ ಮಾತನಾಡುತ್ತಿದ್ದರು. ನಿನ್ನ ಖಾಯಿಲೆಗೆ ಉದ್ದುದ್ದ ಹೆಸರು ,ನನಗೆಅದ್ಯಾವುದೂ ಬೇಡ ,ನೀನು ಬೇಕು ,ಬರಿ ನೀನು ……

ಒಂದು ಗಡ್ಡೆ ನಿನ್ನ ಮಿದುಳಿನ ತುಂಬಾ ಹರಡಿ ನಿಂತಿತ್ತು . ಒಂದಲ್ಲ ಎರಡು ಅಲ್ಲಲ್ಲ ಮೂರು. ತೀವ್ರ ಪರೀಕ್ಷೆಯ ನಂತರ ಗೊತ್ತಾಗ ತೊಡಗಿತ್ತು . ಕೆಲವೇ ದಿನಗಳಲ್ಲಿ ಆಪರೇಷನ್ ಮಾಡಬೇಕಾಗಿತ್ತು . ನನ್ನೆಲ್ಲಾ ಉಳಿತಾಯ ,ಇನ್ಸೂರೆನ್ಸ್ ಎಲ್ಲ ಹಣವನ್ನು ಒಟ್ಟುಗೂಡಿಸಿ ಕೊಟ್ಟದ್ದಾಯಿತು . ನಿನ್ನ ಮೇಲೆ ಒಂದಲ್ಲ,ಎರಡಲ್ಲ  ಏಳು ಮೇಜರ್ ಆಪರೇಷನ್ ಆದವು . ಆ ನಿನ್ನ ಪುಟ್ಟ ದೇಹ ಅದನ್ನು  ತಡೆದುಕೊಂಡಿದ್ದಾದರು ಹೇಗೆ ?. ಆ ಕೆಲವಾರು ತಿಂಗಳು ನಾನು ಹೇಗೆಬದುಕಿದ್ದೆನೊ ಗೊತ್ತಿಲ್ಲ ,ಅಥವಾ ಜೀವಂತ ಶವವಾಗಿದ್ದೆ .ಆಧ್ಯಾತ್ಮದ ಕಡೆಗೆ ವಾಲತೊಡಗಿದ್ದೆ.

ಆ ಒಂದು ರಾತ್ರಿ ಮಾತ್ರ ನನ್ನ ಜೀವನದಲ್ಲಿ ಮರೆಯದೆ ಉಳಿದು ಬಿಟ್ಟಿದೆ . ಮತ್ತೆ ನಿನ್ನ ICU ಗೆ ಶಿಫ್ಟ್ ಮಾಡಿದ್ದರು . ಜೀವನ್ಮರಣದ ಹೋರಾಟದಲ್ಲಿ ಇದ್ದೆನೀನು . ಆ ಗಾಬರಿಯ ಓಡಾಟ , ಆ ಔಷಧಿಯ ಬಾಟಲಿಗಳು …… ಸತತ ಎಂಟು ತಾಸುಗಳ ಹೋರಾಟಕ್ಕೆ ಜಯ ದೊರೆತಿತ್ತು . ಕೊನೆಗೂ ನೀನು ಬಂದೆ ,ಸಾವಿನೀಚೆಗೆ ಕಾಲಿಟ್ಟು ಒಳ ಬಂದೆ .

ಈಗ ವಾರ್ಡ್ಗೆ ಶಿಫ್ಟ್ ಮಾಡಿದ್ದರು ನಿನ್ನ . ಕಿಮೋಥೆರಪಿ ಶುರುವಾಗಿತ್ತು . ಮಾರುದ್ದ ಮಲ್ಲಿಗೆ ಮುಡಿಯುತ್ತಿದ್ದ ನಿನ್ನ ಕೂದಲು ಮಾಯವಾಗಿತ್ತು . ನಿನ್ನ ದೇಹಮುಂಚಿನ ಅರ್ಧದಷ್ಟು ಆಗಿಹೋಗಿತ್ತು . ಆದರು ನೀನೆ ಗೆದ್ದುಬಿಟ್ಟೆ . ಕದ ತಟ್ಟಿ ಒಳಗೆ ಬರಲೇ ? ಎಂದು ಕೇಳಿದ ಸಾವನ್ನು ನನಗೆ ಕೆಲಸವಿದೆ ಹೋಗು ಎಂದುಒದ್ದೋಡಿಸಿದ್ದೆ .

ಆದರೂ ಮನೆಯಲ್ಲಿ ನಿನ್ನ ನಗುವಿಲ್ಲ , ಗೆಜ್ಜೆಯ  ದನಿಯಿಲ್ಲ . ನಿನ್ನ ಇರವನ್ನು ತೋರಿಸುತ್ತಿದ್ದದ್ದು ಎಲೆಕ್ಟ್ರಾನಿಕ್ಸ್ ಉಪಕರಣಗಳ ‘ಬ್ಲಿಪ್ ‘ ಶಬ್ದ ಮಾತ್ರ .ಕೊನೆಗೂ ಚಿಕೆತ್ಸೆ ಮುಗಿದಿತ್ತು . ನಿನ್ನ ಮಿದುಳಿಗೆ ಕೆಲವು ಕಡೆ ಗಾಯವಾಗಿ ಹೋಗಿತ್ತು . ನೀ ನನ್ನ ಸಾಕಿದಂತೆ ನಾ ನಿನ್ನ ಸಾಕಬೇಕಿತ್ತು . ನೀನು ನೂರಕ್ಕೆನೂರರಷ್ಟು ನನ್ನ ಮೇಲೆ ಅವಲಂಬಿ .

ಅಡಿಗೆ ಮನೆಗೆ ಕಾಲೇ ಇಟ್ಟಿರದ ನಾನು ಅಡಿಗೆ ಮಾಡುವುದು ಕಲಿತೆ . ದೀಪಾವಳಿಯಂದು ನಾನು ಮಾಡಿದ ಹೋಳಿಗೆ ತಂದಿಟ್ಟಾಗ ನಿನ್ನ ಕಣ್ಣಂಚಲ್ಲಿ ನೀರುಬಂದಿತ್ತು . ಮನೆಯಲ್ಲಿ ಸ್ಮಶಾನ ಮೌನ ನನಗೆ ಅಸಹನೀಯ ಆಗತೊಡಗಿತ್ತು .

ನಿನ್ನ ಕೈಗೆ ಪೆನ್ನು ಕೊಟ್ಟು ಬರಿ ,ಬರಿ ಎಂದು ಹೇಳುವೆ . ನೀನು  ಗೀಚಿದ ಗೆರೆಗಳಲ್ಲಿ ನನ್ನದು ಅಕ್ಷರ ಹುಡುಕುವ ಸಾಹಸ.

ನಿನ್ನ ಮ್.. ಮ್ ಶಬ್ದದಲ್ಲಿ ನನ್ನ ಹೆಸರು ಕೆಳುತ್ತಿದೆಯೇ ಎಂದು ನೋಡುತ್ತಿದೇನೆ. ಅದೆಷ್ಟೋ ದೀಪಾವಳಿ ,ಸಂಕ್ರಾಂತಿಗಳು ಕಳೆದು ಹೋಗುತ್ತಿದೆ ……

*********************************************************************************

ಹದಿನೈದು ವಸಂತಗಳು ಕಳೆದು ಹೋಗಿದೆ . ಆದರೆ ವಿಶುವಿನ ನಿಷ್ಠೆ ಮಾತ್ರ ಕಡಿಮೆ ಆಗಿಲ್ಲ . ಬಹುಶಃ ಕಡಿಮೆಯೂ ಆಗುವುದಿಲ್ಲ . ಸಾವಿರದ ಮನೆಯಿಂದಸಾಸಿವೆ ತರುವ ಪ್ರಯತ್ನದಲ್ಲಿದ್ದಾನೆ ….

-Gurukiran

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post