ಭೂಮಿಯಲ್ಲಿ ವಿಶೇಷವಾದ ದಿನ. ಅವೆಷ್ಟೋ ಜೋಡಿಗಳು ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದವು. ತಾಯಿಯಾಗುವ ಬಯಕೆ ಹೆಣ್ಣಿಗೆ, ತಂದೆಯ ಅಧಿಕಾರ ಮೆರೆವ ಆಸೆ ಗಂಡಿಗೆ. ಮತ್ತೆ ಬಂಧಗಳ ಪರ್ವ ಆರಂಭವಾಗಿತ್ತು. ಎರಡನೇ ಸೂರ್ಯ ಕೂಡ ಮಾಯವಾಗಿದ್ದ. ಅಂದಿನ ರಾತ್ರಿ ಸುಮಧುರ ಕತ್ತಲು. ಅವೆಷ್ಟೊ ಜೋಡಿಗಳಿಗೆ ಮೊದಲ ರಾತ್ರಿ; ಹಳೆಯದೆಲ್ಲವ ಮರೆತು ನೂತನ ಪ್ರಪಂಚದೆಡೆಗಿನ ವಿನೂತನ ಪಯಣ.
ಸಕಲ ಜೀವ ಸಂಕುಲಗಳೂ ಎರಡನೇ ಸೂರ್ಯನ ಕರಾಳ ಹಸ್ತದಿಂದ ಸೆರೆ ಕಳಚಿಕೊಂಡ ದಿನ. ಎಲ್ಲವೂ ಸುಂದರ; ಮನಸೆಂದಿಗೂ ಭ್ರಮರ. ಹಬ್ಬದ ಕಳೆ ಪ್ರಪಂಚದ ತುಂಬೆಲ್ಲ. ಎಲ್ಲರೂ ಕೂಡಿ ಕುಣಿದು ಸಂಭ್ರಮಿಸುತ್ತಿದ್ದರು. ಬಂದ ಸಮಸ್ಯೆಗಳೆಲ್ಲ ಕಾರ್ಮೋಡದಂತೆ ಕರಗಿ ಹೋಗಿತ್ತು.
ಎಲ್ಲರಿಗೂ ತಿಳಿದಿದೆ, ಯಾರೂ ಶಾಶ್ವತರಲ್ಲ. ಅವರಿಗೂ ಅಂತ್ಯವಿದೆ. ಜೀವನದ ಪ್ರತಿಕ್ಷಣವೂ ಅಂತ್ಯದತ್ತ ಪಯಣ. ಅದೆಷ್ಟೋ ದೀರ್ಘಕಾಲದ ನಿರರ್ಥಕ ಬದುಕಿಗಿಂತ ಇರುವಷ್ಟೇ ದಿನದ ಸತ್ವ ತುಂಬಿದ ಬದುಕು ತೃಪ್ತಿ ಕೊಡುತ್ತದೆ.
ನೀರು, ಗಾಳಿ, ಭೂಮಿ.. ಎಲ್ಲರೂ ಬಂಧುಗಳಂತೆ ಕಂಡುಬಂದರು. ಭೂಮಿಯ ಇತಿಹಾಸದಲ್ಲಿ ನೆನಪಿರಬೇಕಾದ ದಿನ. ಆತ್ಮ ಸಂವೇದನಾ ಶಾಶ್ವತವಾಗಿ ಜೊತೆಯಾದರು.ವಿಶ್ವಾತ್ಮ ಅವರೆಲ್ಲರ ಕೂಡಿ ಬಾಳುವ ನೀತಿಗೆ ಎದುರು ನಿಂತೇ ಸಾಕ್ಷಿಯಾಗಿದ್ದ.
ಸೂರ್ಯ ಪಶ್ಚಿಮದಲ್ಲಿ ಜಾರುತ್ತಿದ್ದ. ಪಡುವಣ ಕಡುಗೆಂಪಾಗುತ್ತಿತ್ತು. ಎರಡನೇ ಸೂರ್ಯನ ಸುಳಿವಿಲ್ಲ. ಬೆಳಕು ಸಂಜೆಗತ್ತಲಾಯಿತು, ಸಂಜೆಗತ್ತಲು ಸುಮಧುರ ರಾತ್ರಿಯಾಯಿತು.
ಕತ್ತಲು.. ಪೂರ್ತಿಯಾಗಿ ಕತ್ತಲು ಮಾತ್ರ..
ಪ್ರತಿಯೊಬ್ಬ ಗಂಡಿನಲ್ಲೂ ಉನ್ಮಾದತೆ ತುಂಬಿಕೊಳ್ಳುವಷ್ಟು..
ಹೆಣ್ಣಿನಲ್ಲಿ ಆಕರ್ಷಣೆ ಹೆಚ್ಚುವಷ್ಟು..
ಕತ್ತಲು ಬಚ್ಚಿಡುವುದನ್ನು ಕಲಿಸುತ್ತದೆ.. ತೆರೆಯುವುದನ್ನು ಕೂಡಾ.. ಮುಚ್ಚಿಡುವುದು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತೆರೆದುಕೊಳ್ಳುವುದು ಕುತೂಹಲವನ್ನು ಅಳಿಸುತ್ತದೆ. ಕತ್ತಲು.. ಕತ್ತಲಿನ ಹಿತ.. ಎಂದುಕೊಂಡ ಆತ್ಮ.
ಮನೆ ಅಚ್ಚುಕಟ್ಟಾಗಿ ಅಲಂಕರಿಸಲಾಗಿತ್ತು. ಅಕ್ಕಪಕ್ಕದವರೆಲ್ಲ ಸೇರಿ ಸಿದ್ಧಪಡಿಸಿದ್ದರು.
“ವಸುದೈವ ಕುಟುಂಬಕಂ”
ಅವೆಷ್ಟೋ ಮನಸುಗಳಿಗೆ ಜೊತೆಯೇ ಇರಲಿಲ್ಲ. ಮುಂದೊಮ್ಮೆ ಸರಿಯಾದ ಸಂಗಾತಿ ಸಿಗಬಹುದೆಂಬ ನಿರೀಕ್ಷೆ. ನಿರೀಕ್ಷೆಗಳೇ ಬದುಕಿನ ಉತ್ಸಾಹ ಹೆಚ್ಚಿಸುವುದು; ಹತಾಶೆಗಳನ್ನು ಬದುಕಿನಿಂದ ದೂರ ನಿಲ್ಲಿಸುವುದು.
ಆತ್ಮ ಮಂಚದ ಮೇಲೆ ಕುಳಿತಿದ್ದ. ತನ್ನ ಕನಸಿನ ಮನೆ ಹೇಗಿರಬೇಕೆಂದು ಕನಸು ಕಾಣುತ್ತಿದ್ದ. ಮನುಷ್ಯನೇ ಹಾಗೇ, ಇಲ್ಲದಿರುವುದರ ಬಗ್ಗೆಯೇ ಯೋಚಿಸುತ್ತಾನೆ. ಸನಾ ಅವನ ಜೊತೆಯಾಗಿಯಾಗಿತ್ತು ಅದಕ್ಕೆ ಅವಳ ಯೋಚನೆ ಕಾಡುತ್ತಿಲ್ಲ.
ಯೋಚನೆಗಳಲ್ಲಿರುವಾಗಲೇ ಸನಾ ಒಳಗೆ ಬಂದಳು. ಎರಡು ಹಣತೆಗಳು ಮಾತ್ರ ಬೆಳಗುತ್ತಿದ್ದುದು, ಬೆಳಕಾಗುತ್ತಿದ್ದದ್ದು. ಕತ್ತಲೆಯನ್ನು ಓಡಿಸುವ ಪ್ರಯತ್ನ!? ನಿತ್ಯಕರ್ಮದ ಇಂಗಿತ!? ವಿಶ್ವದ ಒಂದು ಜೀವಿಯಾಗಿ ಬದುಕ ಪಯಣ ನಡೆಸುತ್ತಿತ್ತು. ಇಂಥ ಯೋಚನೆಗಳಲ್ಲಿ ಕಾಲಹರಣವೇಕೆ? ನನ್ನ, ಸನಾಳ ಮೊದಲ ರಾತ್ರಿ. ಇಲ್ಲಸಲ್ಲದ ಯೋಚನೆಗಳೇಕೆ ಬಂದಿತು?
ತುಂಟ ಮನಸ್ಸು; ಕಳ್ಳ ವಯಸ್ಸು.
ಸನಾ ಪಕ್ಕದಲ್ಲಿಯೇ ಕುಳಿತಳು. ಅದೆಷ್ಟು ಬದಲಾವಣೆ?
ಬದಲಾವಣೆಯೇ ಬದುಕಲ್ಲವೇ?
ಇಷ್ಟು ದಿನದ ಗೆಳತಿ ಸನಾ. ಇಂದೂ ಅದೇ ಸಂವೇದನಾ. ಸಂಬಂಧ ಹೆಂಡತಿಯದು. ಮೊಗದಲ್ಲಿ ಲಜ್ಜೆ ಮೂಡಿತ್ತು, ನಾಚಿಕೆ ಮೇರೆ ಮೀರಿತ್ತು.
ನೆಲ ನೋಡುವ ಕಂಗಳು ಒಮ್ಮೊಮ್ಮೆ ಆತ್ಮನನ್ನೇ ಕುಡಿಯುತ್ತಿದ್ದವು. ಆತ್ಮ ಅವಳ ಕಣ್ಣುಗಳಲ್ಲಿ ಕಣ್ಣು ಸೇರಿಸಿದ. ನೋಟಗಳು ಒಂದಾದವು;ಮನಸ್ಸು ಬೇರಯಾಗುವ ಪ್ರಶ್ನೆಯೇ ಇಲ್ಲ. ಇಬ್ಬರ ಮೊದಲ ರಾತ್ರಿ. ಆತ್ಮ ಮುಖ ನೋಡುತ್ತಲೇ ಸನಾ ತಲೆ ತಗ್ಗಿಸಿದಳು.
ಸ್ತ್ರೀ ಸಹಜ ವರ್ತನೆ.
ಕಾಲ್ಬೆರಳು ರಂಗೋಲಿಯಿಡುತ್ತಿದ್ದರೆ, ಕೈ ಬೆರಳು ಸೆರಗಿನಂಚಿನೊಡನೆ ಲಲ್ಲೆಗರಿಯುತ್ತಿದ್ದವು. ಅವಳ ಸ್ನಿಗ್ಧ ಸೌಂದರ್ಯ, ಅದುರುವ ಕೆಂದುಟಿಗಳ ಕೆಂಪು, ತುಂಬುಗಲ್ಲದ ಇಂಪು… ಹೀರುತ್ತಲೇ ಇದ್ದವು ಆತ್ಮನ ಕಂಗಳು.
ಏನು ಮಾತನಾಡಬೇಕೆಂದು ಇಬ್ಬರಿಗೂ ತಿಳಿಯುತ್ತಿಲ್ಲ. ಮಾತನಾಡುವ ಸಮಯವೂ ಅಲ್ಲ ಎಂಬುದು ತಿಳಿದಿತ್ತು. ಇಂತಹ ಸಮಯದಲ್ಲಿ ಗಂಡು ಮುಂದುವರೆಯಬೇಕು ಆತ್ಮ, ಯೋಚಿಸುತ್ತ ಕುಳಿತರೆ ಹೇಗೆ? ಕೆಣಕಿತು ಆತ್ಮನ ಅಂತರಂಗ.
ಎರಡು ದೀಪಗಳ ಮಂದ ಬೆಳಕು, ಮಂದ್ರ ಕತ್ತಲು. ಸಂವೇದನಾಳ ಸಹಜ ಸೌಂದರ್ಯ ನೂರರಷ್ಟಾಗಿದೆ ನಾಚಿಕೆಯ ಹೊನಲಿಗೆ.
ನಿರಾಭರಣೆ ಸಂವೇದನಾ. ಆತ್ಮ ಸಂವೇದನಾಳ ಪಕ್ಕ ಸರಿದು ಭುಜ ಸ್ಪರ್ಶಿಸಿ ಕುಳಿತ. ಕೈ ಅವಳ ಸೊಂಟದ ಇರೆಯಲ್ಲಿ ಆವರಣವಾಗಿದ್ದರೆ…
ಅವಳ ಮೊಗದಲ್ಲಿ ನಾಚಿಕೆಯ ಕೆಂಪು ಅನಾವರಣವಾಗಿತ್ತು. ಆತ್ಮ ಅದೇಕೋ ಭಾವುಕನಾದ. ಇದೇ ಸ್ಪರ್ಶ ಮೊದಲೆಂದೂ ಇಂಥ ಅನುಭವ ಕೊಡಲಿಲ್ಲ. ಇದೇ ಉನ್ಮಾದತೆ, ಮೋಹಕ ಚಲುವಿನ ಮನಮೋಹಕ ಅಪ್ಯಾಯತೆ. ದೇಹ ಇನ್ನೇನನ್ನೋ ಬಯಸುತ್ತಿದೆ. ಸನಿಹವಿದ್ದಷ್ಟೂ ದೂರವೆನಿಸುತ್ತಿದೆ. ಮತ್ತೇನೋ ಬೇಕೆಂಬ ತವಕ.
ಸಂವೇದನಾ ಮೊದಲ ಬಾರಿಗೆ ಸೀರೆಯನ್ನುಟ್ಟಿದ್ದಳು. ಆತ್ಮನಿಂದಲೇ ಅದರ ಬಗೆಗಿನ ಇತಿಹಾಸ ತಿಳಿದುಕೊಂಡಿದ್ದಳು. ಅವನ ಮನಸಿನ ತೃಪ್ತಿಗೆ ಬೇಕಾದಂತೆ ಬದಲಾಗಿದ್ದಳು ಸನಾ.
ಹೆಣ್ಣು ಹಾಗೆಯೇ, ಹುಟ್ಟಿನಿಂದ ಕೊನೆಯುಸಿರತನಕ ಬದಲಾಗುತ್ತಾಳೆ ತನ್ನವರಿಗಾಗಿ…
ಸೀರೆಯನ್ನು ಉಡುವುದು ಸಹ ಒಂದು ಕಲೆ. ಸೀರೆ ರಸಿಕತೆಯ ಉಗಮಸ್ಥಾನ, ನಾಚಿಕೆಯ ಹೆತ್ತ ತಾಯಿ.
ಕಡುಹಸಿರಿನ ಸೀರೆಯಲ್ಲಿ ಸನಾ;
ಮಳೆಗಾಲದ ಬಿಳಿ ನವಿಲು.
ಆತ್ಮನ ಕೈ ಬೆರಳು ಸನಾಳ ಸೊಂಟದಂಚಿನಲಿ ಆಟವಾಡುತ್ತಿದ್ದವು. ಪುರುಷ ಸ್ಪರ್ಶಕ್ಕೆ ಅವಳ ದೇಹ ಸಣ್ಣಗೆ ಕಂಪಿಸುತ್ತಿತ್ತು. ಆತ್ಮ ಅವಳಿಗೆ ಮತ್ತೂ ಹತ್ತಿರವಾಗಿ ಅವಳ ಗಲ್ಲವನ್ನು ಬೊಗಸೆಯಲ್ಲಿ ಹಿಡಿದ. ಕೆಂದುಟಿಗಳು ನಾಚಿ ನವಿರಾಗಿ ಕಂಪಿಸುತ್ತಿದ್ದವು.
“ನಾಚಿಕೆ ನೋಡು ಎಂದೂ ಕಾಣದಂತೆ” ಮನಸ್ಸಿನಲ್ಲಿಯೇ ಮಾತಾಡಿಕೊಂಡ ಆತ್ಮ.
“ನೀನೆಷ್ಟು ಮೃದು, ಅದೆಷ್ಟು ಕೋಮಲ. ಎಲ್ಲ ಸಮಯದಲ್ಲಿಯೂ ಇಷ್ಟು ಮೃದುತ್ವ ಹೆಣ್ಣಿಗೆ ಹಿತ ನೀಡದು ಗೆಳೆಯಾ” ಸನಾಳ ಮನಸ್ಸೊಂದೇ ಮಾತನಾಡಿದ್ದು.
ಆತ್ಮನ ಪ್ರತೀ ಹೆಜ್ಜೆಯನ್ನೂ ಹಿಂಬಾಲಿಸುತ್ತಿದ್ದಾಳೆ.
ಪೂರ್ತಿಯಾಗಿ ಒಂದೇ ಆಗುವಂತೆ ಹೆಜ್ಜೆಗಳು, ಹಾದಿ. ಸನಾ ಎನ್ನುತ್ತಾ ಅವಳ ಹಣೆಗೆ, ಕೆಂಪು ಕೆನ್ನೆಗೆ, ಗಲ್ಲಕ್ಕೆ ಮುತ್ತನಿಟ್ಟ ಆತ್ಮ. ಅವಳು ಕದಲಲಿಲ್ಲ. ಕಾಡಿಸಿದರೆ ಪ್ರೀತಿ ಹೆಚ್ಚು ಎಂಬ ಭಾವ ಅವಳಿಗೆ. ನಸುನಗು ತುಟಿಯಂಚಲ್ಲಿ ಜಾರಿತು. ಚಂದದ ಹೊಳಪು ಕಂಗಳಲ್ಲೊಮ್ಮೆ ಮಿಂಚಿ ಮರೆಯಾಯಿತು.
ಪರಿಚಯವಿಲ್ಲದ ಹೊಸ ಲೋಕದ
ಬಾಗಿಲು ನಮ್ಮೊಳಗೆ. .
ಅವಿತ ಅಂತರಂಗದ ಕನಸುಗಳ
ಕಲಾವೇದಿಕೆಯಲಿ. .
ಆತ್ಮನಿಗೂ ಇದೆಲ್ಲ ಹೊಸತು. ಕಲಿಯಬೇಕಿದೆ ಆತ;
ಕಲಿಸಬೇಕಿದೆ ಆಕೆಗೂ.
ಅವಳ ಕೈಗಳಲ್ಲಿ ಕೈ ಬೆರೆಸಿದ. ಸಿಹಿ ಮುತ್ತುಗಳ ವ್ಯಾಪಾರ. ಪ್ರತಿ ಮುತ್ತುಗಳೂ ಅವಳ ಮನದ ಪರದೆಯನ್ನು ಒಂದೊಂದಾಗಿ ಜಾರಿಸುತ್ತಿದ್ದವು. ದೇಹದ ಪರಿಧಿಗಳನ್ನು ಮೀರುತ್ತಿದ್ದವು. ಆತ್ಮನೆದುರು ನನ್ನದೆಲ್ಲವೂ ನಿನ್ನದೇ ಎಂದು ನೀಡಲು ಸಿದ್ಧಳಾಗಿದ್ದಳು ಕೊಟ್ಟು ತೆಗೆದುಕೊಳ್ಳುವ ಕ್ರಿಯೆಯಲ್ಲಿ.
ಕೊಟ್ಟಾಗ ಮಾತ್ರ ತೆಗೆದುಕೊಳ್ಳುವ ಅರ್ಹತೆ. ಆತ್ಮ ಅವಳ ತುಟಿಗಳಿಗೆ ತುಟಿ ಸೇರಿಸಿದ. ಎರಡು ಭಾವಸಮುದ್ರಗಳು ದಿಗಂತದಂಚಿನಲಿ ಒಂದಾದಂತೆ; ಎರಡು ಕೋಲ್ಮಿಂಚುಗಳು ಬೆಳಕಾದಂತೆ.
ಮತ್ತೆ ಕತ್ತಲಾದರೂ ಕೋಲ್ಮಿಂಚು ಮರೆಯುವುದೇ ಇಲ್ಲ. ಸಂವೇದನಾ ತಡೆಯದಾದಳು. ಆತ್ಮನನ್ನು ಹತ್ತಿರ ಎಳೆದು ಬಿಗಿಯಾಗಿ ತಬ್ಬಿಕೊಂಡಳು. ಆತ್ಮ ಅವಳ ತುಟಿಗಳನ್ನು ತನ್ನದೇ ಸ್ವಂತ ಮಾಡಿಕೊಂಡ, ಅವಳು ಆತ್ಮನನ್ನು ಖಾಸಾ ಎಂದುಕೊಂಡಳು.
ಅವಳ ಪುಟ್ಟ ನಡು ಅವನನ್ನು ತುಂಬ ಆಕರ್ಷಿಸಿತ್ತು. ಆತ ಉನ್ಮಾದದ ಜಲವಾಗಿ ಭೋರ್ಗರೆಯತೊಡಗಿದ. ಅವಳು ನೀರಿನ ಅಲೆಗಳಂತೆ ಅವನನ್ನೇ ಸೇರತೊಡಗಿದಳು.
ಆತ್ಮ ಏಕಾಗ್ರ ಶಿಲ್ಪಿಯಾದ, ಅವಳು ಆತನ ಕಲೆಗೆ ಕಡೆವ ಶಿಲ್ಪವಾದಳು. ಏಟುಗಳು ಬಿದ್ದರೂ ಎಲ್ಲದಕ್ಕೂ ಸಿದ್ಧ ಎಂಬಂತೆ. ಏಟುಗಳು ಬಿದ್ದಾಗಲೇ ಭಾವಗಳು ಬಯಲಾಗುವುದು. ಆತ್ಮ ಎಲ್ಲವನ್ನೂ ನೋಡಿದ, ಕಾಡಿದ.
ಸಂವೇದನಾ ಎಲ್ಲವನ್ನೂ ಅರ್ಪಿಸಿದಳು, ಎಲ್ಲವನ್ನೂ ತೃಪ್ತಿಸಿದಳು.
ಇಲ್ಲಿ ಹೆಚ್ಚು ಕಡಿಮೆ ಮಾತಿಲ್ಲ. ಸಮಾನತೆ ಎಲ್ಲ ಕಡೆಯಲ್ಲೂ ಬೇಕು. ಅವಳು ಮೌನಿಯಾದರೆ ಅವ ಮಾತಾಗಬೇಕು. ಅವ ಮಾತಾದರೆ ಅವಳು ನಗೆಯ ಕಡಲಾಗಬೇಕು. ಆತ್ಮ ವರ್ಷಿಸುತ್ತಿದ್ದ, ಅವಳು ನೀರಾಗುತ್ತಿದ್ದಳು.
ಒಮ್ಮೊಮ್ಮೆ ಸಿಡಿಲಂತೆ ಆರ್ಭಟಿಸುತ್ತಿದ್ದ. ಅವಳು ಮಳೆಯಲಿ ಕಳೆದು ಹೋಗುತ್ತಿದ್ದಳು. ಸನಾ ಮಹಾ ಧರಿತ್ರಿ, ಅವನ ಪ್ರತೀ ಕುತೂಹಲಕ್ಕೂ ಉತ್ತರವಿದೆ ಎಂದು ತಡೆಯುತ್ತಿದ್ದಳು. ಅವನು ಉತ್ತರದ ಕಡೆ ನಡೆಯುತ್ತಿದ್ದ.
ಹೆಣ್ಣು ಸತ್ವ ದೇವತೆ.
ಗಂಡಿಗೆ ತೃಪ್ತಿಯಾದರೆ ಮಗುವಿಗೆ ಸಂತೃಪ್ತಿ.
ಇದೇ ಹೆಣ್ಣಿನ ಸಾರ್ಥಕತೆ.
ಆತ್ಮ ಸಂವೇದನಾಳ ಎದೆಯ ಕಣಿವೆಯಲ್ಲಿ ಬೆವರಾಗಿ ಹರಿದ. ಬೆನ್ನಿನ ಅಂಗಳದಲ್ಲಿ ಮುತ್ತಿನ ಮಳೆಗರೆದ.
ಸಂವೇದನಾ ಆತ್ಮನ ಎದೆಯ ಮೇಲೆ ಧ್ರುವದ ಹಿಮವಾಗಿ ಕರಗಿದಳು, ಕುತ್ತಿಗೆಯ ಬಳಿ ಬೆಚ್ಚನೆಯ ಎದುಸಿರಾಗಿ ನಲಿದಳು.
ಪುಟ್ಟ ಹಣತೆಗಳು ನಾಚಿಕೊಂಡು ಕಣ್ಮುಚ್ಚಿದವು. ಸಂಪೂರ್ಣ ಕತ್ತಲು.
ಅವಳಿಗೆ ತೆರೆದು ಕೊಳ್ಳುವ ಹಂಬಲ,
ಅವನಿಗೆ ಮುಗಿದು ಹೋಗುವ ದಿಗಿಲು.
ಸಮಯ ಸಾಗುತ್ತಲೇ ಇತ್ತು, ದೇಹ ಮಾಗುತ್ತಲೇ ಇತ್ತು. ಇಬ್ಬರು ಸಮವ್ಯಕ್ತಿಗಳ ಹೋರಾಟ. ಇಬ್ಬರಿಗೂ ಸೋಲುವ ಭಯವಿಲ್ಲ. ಮನಸ್ಸಿನ ನಿಗ್ರಹ ಗೊತ್ತಿರಬೇಕು.
ಬಹಳ ಸಮಯದ ನಂತರ ಇಬ್ಬರೂ ಬೇರೆಯಾದರು. ಸಂವೇದನಾ ಬಿಳುಪು ಚಂದ್ರ, ಆತ್ಮ ಅದರಂಗಳದ ಚಂದದ ಕಲೆ. ಪೂರ್ತಿಯಾಗಿ ಸನಾಳ ಮೇಲೆ ಆವರಿಸಿಕೊಂಡ ಆತ್ಮ. ಭಾರವೇ ಅಲ್ಲದ ಭಾವ. ಬೆತ್ತಲೆ ಬೆನ್ನಿನ ಮೇಲೆ ನವಿರಾಗಿ ಬೆರಳಾಡಿಸುತ್ತಿದ್ದಳು ಸನಾ.
ದೇಹ ಸುಸ್ತಾಗಿತ್ತು. ಮನಸ್ಸು ತೃಪ್ತಿಯ ತೀರದ ಕಡೆ ಸಾಗಿತ್ತು. ಅದೆಷ್ಟೋ ಹೊತ್ತು ಹಾಗೆಯೇ ಮಲಗಿದ್ದರು. ಶಿಲ್ಪಿ ಕಡೆದು ನಡೆದಿದ್ದ, ಶಿಲ್ಪ ಅವನ ಹಿಂದೆಯೇ ನಡೆದಿತ್ತು. ಕಲಾವೇದಿಕೆ ಖಾಲಿ.
ಆತ್ಮನೇ ಕಣ್ತೆರೆದು ” ಏಳು ಗೆಳತಿ” ಎಂದ ಎಲ್ಲಿಗೋ ಹೊರಡಲನುವಾದಂತೆ.
“ಏನು ಆತ್ಮ?” ತೃಪ್ತಿಯ ಧ್ವನಿ. ಮಧುರ ಮಿಲನದ ಸುಮಧುರ ಗೀತ. ಮತ್ತೇನೂ ಬೇಡ ನಾನು ಏಳಲಾರೆ ಎಂಬ ಭಾವ.
ಆತ್ಮ ಬಿಡಲೊಲ್ಲ. ಏಳು ಎನ್ನುತ್ತಾ ಅವಳನ್ನು ತೋಳಲ್ಲಿ ಬಳಸಿ ಎತ್ತಿಕೊಂಡು ನಡೆದ. ಅವಳ ಮುಖ ತೊಳೆಸಿ, ಅವನೂ ಶುದ್ಧವಾದ.. ಶುಭ್ರವಾದ. ಇಬ್ಬರೂ ಮತ್ತೆ ಬಟ್ಟೆಯ ಪರಿಧಿಯಲ್ಲಿ ಸೇರಿಹೋದರು.
“ನಡೆ ಹೋಗೋಣ” ಕೈಲಿ ಕೈ ಬೆರೆಸಿದ. ಇನ್ನೊಂದು ಕೈ ಅವಳ ಸೊಂಟ ಬಳಸಿತ್ತು.
“ಎಲ್ಲಿಗೆ? ಈ ರಾತ್ರಿಯಲ್ಲಿ?” ಬೇಸರಗೊಂಡಳು ಸನಾ.
“ಹೇಳುತ್ತೇನೆ ಬಾ” ಹೆಗಲಿಗೆ ಹಗಲು ಸೇರಿಸಿ ಹೊರನಡೆದ.
ಹೊಸ್ತಿಲು ದಾಟುತ್ತಲೇ ತಂಪುಗಾಳಿ ಇಬ್ಬರ ಮುಖವನ್ನು ತೀಡಿತು. ಇಬ್ಬರಲ್ಲೂ ಹೊಸ ಉತ್ಸಾಹ; ಬದುಕಿನತ್ತ ಹೆಚ್ಚುವ ಆಕರ್ಷಣೆ.
ಗಾಳಿ ಸಂವೇದನಾಳ ಮುಂಗುರುಳಿನೊದನೆ ಲಲ್ಲೆಗರಿಯುತ್ತಿದ್ದರೆ; ಮುಂಗುರುಳು ಅವಳ ತುಂಬು ಗಲ್ಲದೊಡನೆ.
ಸ್ವಲ್ಪವೇ ಬೆಳದಿಂಗಳು.. ಲೆಕ್ಕ ಮಾಡಬಹುದೇನೋ ಎನ್ನಿಸುವ ಅಸಂಖ್ಯ ನಕ್ಷತ್ರಗಳ ಸಾಲು.. ಕತ್ತಲ ನೀರವತೆಯ ಗಾಳಿಯ ತಂಪು.. ಹಿತವೆನ್ನಿಸುವ ನಿಶ್ಯಬ್ಧತೆ.. ಜೊತೆಯಾಗಿ ಸಾಗಲೊಂದು ಜೀವ ಸ್ವಂತದ ಹೆಸರಿನಲ್ಲಿ.
ಇದು ಬದುಕಿನ ಸಂತೃಪ್ತಿ.
ಇದನ್ನೇ ಅಲ್ಲವೇ ಮನುಷ್ಯ ಕಳೆದುಕೊಂಡಿದ್ದು.
ಗೊಂದಲದ ಬದುಕಿನಲ್ಲಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಬ್ಬರ ಮನಸ್ಸು ಕೂಡ ಒಂದೇ ರೀತಿ ಯೋಚನೆ ಮಾಡುವುದು ಕಷ್ಟ. ಒಂದೇ ದಾರಿಯಲ್ಲಿ ಜೊತೆಯಾಗಿ ನಡೆಯುವುದು ಅಷ್ಟೆ. ಅದಕ್ಕೊಂದು ಬಂಧ ಬೇಕು. ನಂಬಿಕೆಯ ನೆರಳು ಬೇಕು. ದಾರಿ ಸಾಗಲು ಪ್ರೀತಿಯ ಬೆಳಕು ಬೇಕು.
ಇಬ್ಬರೂ ಮಾತನಾಡುತ್ತಿಲ್ಲ. ಅದೆಷ್ಟೋ ಬಾರಿ ಮೌನವೇ ಮಾತುಗಳನ್ನು ತುಂಬಿಕೊಡುತ್ತದೆ.
ಮಾತು ಮೌನದ ಸೆರಗಲ್ಲಿ ಖಾಲಿಯಾಗಿ ಬಿಡುತ್ತದೆ, ಕಾಣೆಯಾಗಿ ಬಿಡುತ್ತದೆ.
ಆತ್ಮ ತನ್ನನ್ನು ಹೊತ್ತಲ್ಲದ ಹೊತ್ತಿನಲ್ಲಿ ಹೊರಗೆ ಕರೆತಂದದ್ದೇಕೆಂದು ಅರ್ಥವಾಯಿತು ಸನಾಗೆ.
“ನಾನು ನಿನ್ನನು ಹೊರ ಕರೆದುಕೊಂಡು ಬಂದ ಕಾರಣ ಇಷ್ಟೇ ಗೆಳತಿ ಜೊತೆ ನಡೆಯಲು. ಎಲ್ಲವೂ ಮುಗಿಯುವ ಮುನ್ನವೇ ಹೊಸ ಅಧ್ಯಾಯವ ಮತ್ತೆ ಪ್ರಾರಂಭಿಸಲು. ಮುಗಿದು ಹೋದರೆ ಮತ್ತೇನೋ ಪ್ರಾರಂಭವಾಗುವ ದಿಗಿಲು. ಮುಗಿಯುವ ಮುನ್ನವೇ ಪ್ರಾರಂಭವಾದರೆ ಅಂತ್ಯವಾಗುವ ಮಾತೇ ಇಲ್ಲ.”
ನೀನೆಷ್ಟು ಒಳ್ಳೆಯವನು ಆತ್ಮ ಅವಳ ಮನ ಹಿಗ್ಗಿತು ಅವನ ಸಹವಾಸದ ಕ್ಷಣಗಳಿಗೆ ಮರುಳಾಗಿ, ಹೆಮ್ಮೆಯೆನಿಸಿತು ಆತ್ಮನ ಸಾಂಗತ್ಯಕ್ಕೆ ಮನಸಾಗಿ.
“ಬರೀ ಬೆಳಕು, ಬೆಳದಿಂಗಳು, ನಕ್ಷತ್ರ ತೋರಿಸಿ ನಗಿಸಲು ನಿನ್ನ ಕರೆದುಕೊಂಡು ಬಂದಿದ್ದಲ್ಲ ಗೆಳತಿ, ಕೇವಲ ದೇಹದಾಸೆಗಳು ಮಾತ್ರ ಮುಖ್ಯವಲ್ಲ. ಅದಕ್ಕೂ ಮೀರಿದ ಸುಖದ ಪ್ರಪಂಚವಿದೆ. ಅದು ಪ್ರೇಮವನ್ನು ಕಾಮವನ್ನು ಬೇರೆಯಾಗಿಸುವ ದಿವ್ಯ ಪರ್ವ. ಕಾಮಕ್ಕೂ ಪ್ರೇಮಕ್ಕೂ ವ್ಯತ್ಯಾಸವೇನು ಎಂಬ ಸಂದೇಹ ಮೂಡಿತ್ತು ಒಮ್ಮೆ. ಅದನ್ನು ತಿಳಿಯಲು ಈ ನಡಿಗೆ. ”
ಸುಖದ ನೆರಳಿನಿಂದ ಸಾರ್ಥಕತೆಯ ಬೆಳಕಿನೆಡೆಗೆ ಆತ್ಮ ಎಲ್ಲದನ್ನೂ ಯೋಚಿಸಿಯೇ ಮಾಡುತ್ತಿದ್ದ. ಮಾಡಿದ ಮೇಲೆ, ಮುಗಿದ ಮೇಲೆ ಮತ್ತೆ ಯೋಚನೆಗೆ ಅವಕಾಶವಿರುವುದಿಲ್ಲ.
ದೇಹದ ಸುಖ ಪ್ರತಿ ಜೀವಿಯು ಬಯಸುತ್ತದೆ, ಪಡೆಯುತ್ತದೆ ಕೂಡ. ಪ್ರಾಣಿಗಳಿಗೂ, ಮನುಷ್ಯನಿಗೂ ವ್ಯತ್ಯಾಸ ಸಿಗಬೇಕಾಗಿರುವುದು ಇಲ್ಲಿಯೇ. ದೇಹ ಸುಖ ಪಡೆದ ಪ್ರಾಣಿ ಪರಿಚಯ ಮರೆತು ಮರೆಯಾಗುತ್ತದೆ. ಮನುಷ್ಯ..?
ಪರಿಚಯದ ಮೂಲಕ ಮಾತ್ರ ಸುಖದ ಹಾದಿ.
ಅವೆಷ್ಟೋ ಸಂದರ್ಭಗಳು ದೇಹ ಸುಖ ಪಡೆದ ಮೇಲೆ ಪರಿಚಯವಾಗಿ ಜೊತೆಯಾದ ಕಥೆಗಳು ಎಷ್ಟೋ ಇವೆ.
ಪ್ರೇಮ!! ಕಾಮದಧ್ಯಾಯ ಮುಗಿದ ಮೇಲೆಯೂ ಇಬ್ಬರೂ ಒಬ್ಬರೇ ಎಂಬಂತೆ ನಡೆಯುವುದು ಜೊತೆಯಲ್ಲಿ.
ಅವನ್ಯಾರೋ, ಅವಳ್ಯಾರೋ ಆಗಿ ಕಳೆದು ಹೋದರೆ ಮನುಷ್ಯನೂ ಪ್ರಾಣಿಯೇ.
ನನಗೆ ನೀನು, ನಿನಗೆ ನಾನು ಎಂಬಂತೆ ಕೈಲಿ ಕೈ ಬೆರೆಸಿ ನಡೆಯುವುದು ಪ್ರೇಮ, ಅದ್ಭುತ ಕ್ಷಣಗಳು ಆತ್ಮ ನಿನ್ನ ಜೊತೆ ಎಂದುಕೊಂಡಳು ಸನಾ.
ಇಬ್ಬರೂ ನಡೆಯುತ್ತಲೇ ಇದ್ದರು. ಹಾದಿಯ ಬದಿಯಲ್ಲಿ ಹಸಿರು ಹಾಸಿತ್ತು. ಸ್ವಲ್ಪ ಹೊತ್ತು ಕುಳಿತು ಬಿಡುವ ಬಯಕೆ. ಆತ್ಮ ಅತ್ತ ಕಡೆ ಹೆಜ್ಜೆ ಹಾಕಿದ. ಅವನ ಅರ್ಧಾಂಗಿ ಸನಾ ಅವನ ಜೊತೆಯೇ ಸಾಗಿದಳು.
“ಈ ಪ್ರೀತಿಯನ್ನು ನಾನೆಂದೂ ಕಳೆದುಕೊಳ್ಳುವುದಿಲ್ಲ ತಾನೇ?” ಕೇಳಬೇಕೆಂದುಕೊಂಡಳು. ಕೇಳುವುದು ಹೇಗೆ!? ಆತನಿಗೆ ಕೇವಲ ತನ್ನ ದೇಹದ ಮೇಲೆ ಮೋಹವಿದ್ದರೆ ದಿನ ಕಳೆದಂತೆ ದೇಹದ ಚರ್ಮ ಸುಕ್ಕಾದಂತೆ ನನ್ನೆಡೆಗಿನ ವ್ಯಾಮೋಹ ಮುಗಿದು ಹೋಗಿ ಬಿಡುತ್ತದೆ. ಆಕರ್ಷಣೆ ಅಸಹಾಯಕತೆಯೆಂಬ ಹೆಸರಿನಡಿ ಮರೆಯಾಗಿಬಿಡುತ್ತದೆ. ಆದರೆ ಆತ್ಮನದು ಎಲ್ಲವನ್ನೂ ಮೀರಿದ ಪ್ರೇಮ. ಪವಿತ್ರ ಪ್ರೇಮ. ಅದು ಶಾಶ್ವತ ಎಂದು ತಿಳಿದಿದ್ದಾಳೆ ಸನಾ.
ಆದರೂ ಹೆಣ್ಣು ಅವಳು, ಕೃತಿಗಿಂತ ಮಾತುಗಳಲ್ಲೂ ಕಳೆದು ಹೋಗುವುದನ್ನು ಕಲಿತೆ ಬಿಟ್ಟಿರುತ್ತಾಳೆ. ಅವನೆಷ್ಟು ಪ್ರೀತಿಯಿತ್ತರೂ ಒಮ್ಮೆ ಬಾಯ್ಬಿಡಬಾರದೇ ಎಂದು ಬಯಸುತ್ತಾಳೆ. ಹುಡುಗ ಮಾತಿನೆದುರು ಬೇಗ ಬೋರಾಗುತ್ತಾನೆ.
ಆತ್ಮ ಹುಲ್ಲು ಹಾಸಿಗೆಯ ಮೇಲೆ ಕಾಲು ಚಾಚಿ ಕುಳಿತ. ಸಂವೇದನಾ ಅವನ ಮಡಿಲಲ್ಲಿ ತಲೆಯಿಟ್ಟು ಮಲಗಿದಳು, ಮಗುವಾದಳು. ಆತ್ಮ ಅವಳ ಮುಖವನ್ನೇ ನೋಡುತ್ತಿದ್ದ. ಹಿತವಾಗಿ ಹಣೆ ಸವರುತ್ತಿದ್ದ. ಅವನ ಬೆಚ್ಚನೆಯ ಅಂಗೈಲಿ ಅವಳ ನೀಳ ಬೆರಳುಗಳು ಆಡಿಕೊಳ್ಳುತ್ತಿದ್ದವು.
ಉನ್ಮಾದವಲ್ಲ; ವ್ಯಾಮೋಹ, ಜೊತೆಯಿರುವ ಜೀವದ ಮೇಲೆ. ನಸುನಗುತ್ತಿದ್ದಳು ಸನಾ. ಆತ್ಮ ಆಗಸದೆಡೆಗೆ ನೋಡಿದ. ಅಷ್ಟಮಿಯ ಚಂದ್ರ, ಅಷ್ಟೆ ಬೆಳದಿಂಗಳು. ಆದರೂ ಸಾಲು ಸಾಲು ನಕ್ಷತ್ರಗಳ ಜಾತ್ರೆ., ನೆನಪಿನಂಗಡಿಗಳ ಯಾತ್ರೆ. ಕೃಷ್ಣ ಚುಕ್ಕಿಯೊಂದು ಮಿಣುಕಾಗುತ್ತಿತ್ತು ಚಂದ್ರನ ಬಳಿ.
ಆತ್ಮನಿಗೆ ವರ್ಷಿ ನೆನಪಾದ. ಅವನಿರಬಹುದೇ ನಕ್ಷತ್ರಗಳ ತೇರಿನಲಿ? ಕೃಷ್ಣಚುಕ್ಕಿಗಳ ಊರಿನಲ್ಲಿ ಸೇರಿರಬಹುದೇ ವರ್ಷಿ? ಕಣ್ಣಾಲಿಗಳು ತುಂಬಿ ನಿಂತವು. ಹೊರ ಬರುವ ಮುನ್ನವೇ ಸನಾ ಆತ್ಮನ ಬೆರಳನ್ನು ಗಟ್ಟಿಯಾಗಿ ಕಚ್ಚಿದಳು. “ಆ” ಎಂದು ಚೀರಿಕೊಂಡ ಆತ್ಮ. ನಕ್ಕಳವಳು. ಕಂಬನಿಯ ಹನಿ ಸನಾಳ ಗಲ್ಲ ಸೇರಿತು. “ನನಗೆ ನೋವಾದರೆ ನಗುತ್ತೀಯಾ?” ಮುಗ್ಧ ಪ್ರಶ್ನೆಯಾದ ಆತ್ಮ.
“ಹೌದು, ಏನು ಮಾಡುವೆ ನೀನು?” ಮತ್ತೆ ನಕ್ಕಳವಳು. “ಗಂಭೀರ ಮುಖಮುದ್ರೆಗೆ ಕಚಗುಳಿಯಿಕ್ಕಿದೆ ಅಷ್ಟೆ”
ಅವ ನಕ್ಕ ನಗುವಿನ ಮಳೆ; ಹಸಿರಾಯಿತು ಇಳೆ.
ಆತ್ಮ ಅವಳ ಕಿವಿಯನ್ನು ಮೆಲ್ಲಗೆ ಹಿಂಡಿದ. “ಅಮ್ಮಾ” ಎಂದಳವಳು. ಈಗ ನಗುವ ಬಾರಿ ಆತ್ಮನದು. “ನಾನು ನಿನ್ನ ಜೊತೆ ಮಾತನಾಡುವುದಿಲ್ಲ” ಎಂದರೆ ಗಂಭೀರನಾದ ಆತ್ಮ “ಅದಕ್ಕೆಂದೇ ಇಷ್ಟು ಕಾಡಿಸಿದ್ದಲ್ಲವೇ??” ಎಂದ.
ಚಿಕ್ಕ ಮಗುವಿನಂತೆ ಮುನಿಸಿಕೊಂಡು ಮಡಿಲಿನಿಂದ ಏಳಲನುವಾದಳು ಸನಾ. ಅವಳನ್ನು ಎಳೆದು ಬಲವಾಗಿ ತಬ್ಬಿಕೊಂಡ ಆತ್ಮ. ಎರಡು ಕ್ಷಣದ ಬಿಸಿಯಪ್ಪುಗೆಯಿಂದ ಹೊರಬಂದ ಸನಾ ಅವನ ಹಣೆಗೊಂದು ಮುತ್ತನಿಟ್ಟಳು. ಆತನ ಭುಜಕ್ಕೆ ಆನಿಸಿ ಕುಳಿತ ಸನಾ “ಗೆಳೆಯಾ, ನಾನೊಂದು ಸತ್ಯ ಹೇಳಲೇ?” ಎಂದುಲಿದಳು.
“ಹೇಳು” ಅವಳನ್ನು ಎದೆಯ ಮೇಲೆಳೆದುಕೊಂಡ ಆತ್ಮ. ಅವಳು ಬದುಕಿನ ಮಹಾಸತ್ಯವನ್ನೇ ಬಿಚ್ಚಿಡುವಳೆಂದು ತಿಳಿದಿರಲಿಲ್ಲ ಆತನಿಗೆ.
“ಆತ್ಮ ನಾನು ಮತ್ತು ನೀನು ಒಂದುಗೂಡಿದೆವಲ್ಲ. ನನಗೆ ಖುಷಿ ಮತ್ತು ತೃಪ್ತಿ ಎರಡೂ ದೊರೆಯಿತು”
ಆತ್ಮನಿಗೆ ಅರ್ಥವಾಗಲಿಲ್ಲ. “ಬಿಡಿಸಿ ಹೇಳು ಗೆಳತಿ” ಎಂದ ರಾಗವಾಗಿ. ಹೆಣ್ಣು ಹೃದಯವೇ ಹಾಗೆ. ಎಲ್ಲವನ್ನೂ ಅಳೆದು ತೂಗಿ ನೋಡುತ್ತದೆ. ಸಣ್ಣ ಪುಟ್ಟದು ಸಂತೋಷವೇ ಅವಳಿಗೆ. ಪೂರ್ತಿಯಾಗಿ ಬರಿದಾಗಿರುವೆನೆಂದು ಗುಟ್ಟೊಂದಿಷ್ಟನ್ನು ಉಳಿಸಿಕೊಂಡು ಬಿಟ್ಟಿರುತ್ತಾಳೆ.
“ನನ್ನ ದೇಹ ಖುಶಿಗೊಂಡಿತು, ಮನಸ್ಸು ತೃಪ್ತಿಗೊಂಡಿತು.”ಎಂದಳು ಹುಸಿ ನಾಚಿಕೆಯಿಂದ. “ದೇಹದ ಖುಷಿಗೆ ಅಲ್ಲವೇ ಮನಸ್ಸು ತೃಪ್ತಿ ಹೊಂದುವುದು?” ಎಂದ ಆತ್ಮ. ಗಂಡು ಭಾವನಾತ್ಮಕವಾದರೂ ಬರಿದಾದರೆ ಪೂರ್ತಿ ಬೆತ್ತಲೆಯೇ. ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲ, ಅರ್ಥೈಸಲಾರ. ಸನಾ ಆತ್ಮನ ಮುಖ ನೋಡಿದಳು. “ಇಲ್ಲ ಆತ್ಮ ದೇಹದ ಸುಖ ಮಾತ್ರ ತೃಪ್ತಿಯಲ್ಲ. ದೇಹದ ಖುಷಿಯನ್ನು ಹೇಗಾದರೂ ಪಡೆಯಬಹುದು, ಸ್ವತಂತ್ರವಾಗಿ! ಯಂತ್ರಗಳಿಂದ! ಹೇಗೆಲ್ಲ ಹೊಂದಬಹುದು. ಮನಸ್ಸಿನ ತೃಪ್ತಿ ಸಿಗುವುದು ದೇಹದ ಸುಖದಿಂದಲ್ಲ. ಮನಸ್ಸಿನ ತೃಪ್ತಿಯ ಸಣ್ಣ ಪಾಲು ಮಾತ್ರ ದೇಹಕ್ಕೆ ಸಂಬಂಧಪಟ್ಟ ವಿಷಯ ಆತ್ಮ.”
ಆದರೂ ಆರ್ಥವಾಗಲಿಲ್ಲ ಆತ್ಮನಿಗೆ. “ಅದು ಹೇಗೆ ಹೇಳು.”
ಸನಾ ಮಾತಾಡಲು, ಆತ್ಮ ಅದಕ್ಕೆ ಕಿವಿಯಾದ. “ಗೆಳೆಯಾ ಹೆಣ್ಣು ಎಷ್ಟು ಘಟ್ಟಿ, ಪ್ರಭಾವಿ, ಸಮಾನತೆ ಬೇಕು ಎಂದರೂ ಅವಳು ದೈಹಿಕವಾಗಿ ಗಂಡಸಿನಷ್ಟು ಶಕ್ತಿಶಾಲಿಯಲ್ಲ. ಎದುರಿನಲ್ಲಿ ಅವಳೆಷ್ಟೇ ಹೇಳಿದರೂ ಅಂತರಾಳದಲ್ಲಿ ಅವಳಿಗೂ ಗೊತ್ತದು. ಅವಳ ಪರಿಸ್ಥಿತಿ ಅಂತಹದೆಂದಲ್ಲ. ಅವಳ ದೇಹಸ್ಥಿತಿಯೇ ಹಾಗೆ. ಇದರಿಂದ ಅವಳ Ego ಪೆಟ್ಟು ತಿನ್ನುತ್ತಿರುತ್ತದೆ. ತಾನು ಗಂಡನ್ನು ಸೋಲಿಸಲೇಬೇಕೆಂದು ಅವಳ ಯೋಚನೆಗಳು ಸಾಗುತ್ತಿರುತ್ತವೆ. ಗಂಡು ಹೆಣ್ಣಿನ ಸೌಂದರ್ಯವನ್ನು ಇಣುಕಿ ನೋಡುತ್ತಿದ್ದರೆ ಹುಡುಗಿಯದು ಕಳ್ಳ ಕಣ್ಣಾಗುವುದು ಇದಕ್ಕೆ. ಒಮ್ಮೆ ದೃಷ್ಟಿ ಸೇರಿಸಿದಂತಾದರೆ ಹುಡುಗ ಹತ್ತಿರ ಬರಲಾರ, ನೋಡದೆ ಇರಲಾರ.
ಇಂಥದೊಂದಿಷ್ಟು ಸಣ್ಣ ಕ್ರಿಯೆಗಳು ಅದಕ್ಕೆ ಅವಳು ಬಯಸಿದ ಪ್ರತಿಕ್ರಿಯೆಗಳು ನಡೆದಲ್ಲಿ ಅವಳ Ego ತೃಪ್ತಿಗೊಳ್ಳುತ್ತದೆ. ದೇಹಗಳ ಒಗ್ಗೂಡುವಿಕೆಯಲ್ಲೂ ಹೀಗೆ ಆತ್ಮ.ನೀನು ನನ್ನೆದುರು ಸೋಲುತ್ತಿರುವ ಭಾವ ನನ್ನನ್ನು ತೃಪ್ತಿಗೊಳಿಸುತ್ತದೆ. ಒಂದು ಗಂಡು, ಸಾಮರ್ಥ್ಯಯುತವಾದ ಗಂಡಸು ತನ್ನದೆಲ್ಲವನ್ನೂ ಕೊಟ್ಟು ಖಾಲಿಯಾಗಿ ಪಕ್ಕ ಮಲಗಿದಾಗ ಮನಸ್ಸು ತೃಪ್ತಿಯಾಗುತ್ತದೆ ಆತ್ಮ, ಇದೇ ಸತ್ಯ.
ಕೇವಲ ಯಂತ್ರದಿಂದ ಅಥವಾ ಕ್ಷಣಿಕ ಸಹವಾಸದಿಂದ ಮನಸ್ಸು ತೃಪ್ತಿಯಾಗಲಾರದು. ದೇಹದ ವಾಂಛೆಗಳು ತೀರಬಹುದಷ್ಟೆ, ಇದೇ ಸತ್ಯ ಗೆಳೆಯಾ. ದೇಹದ ಮಿಲನ ಹೆಣ್ಣಿಗೆ ನೀಡುವುದು ಕೇವಲ ದೇಹ ಸುಖವಲ್ಲ. ಮಾನಸಿಕ ತೃಪ್ತಿಯನ್ನೂ ನೀಡುತ್ತದೆ. ಅಹಂ ನೀಗಿಸುತ್ತದೆ.”
ಮಾತು ಮುಗಿಯಿತು ಎಂಬಂತೆ ಆತ್ಮನ ಮುಖ ನೋಡಿದಳು. ಆತ್ಮ ಅವಳನ್ನು ತಬ್ಬಿಕೊಂಡು ಹಣೆಯ ಮೇಲೊಂದು ಮುತ್ತನಿಟ್ಟ. ಇವಳಿಷ್ಟು ಬರಿದಾಗುವಳಲ್ಲ ನನ್ನೆದುರು?? ಪೂರ್ತಿಯಾಗಿ ಬೆತ್ತಲಾಗದಿರು ಗೆಳತಿ, ಗೌಪ್ಯತೆ ಉಳಿಸಿಕೋ ಎಂದು ಹೇಳಬೇಕೆಂದುಕೊಂಡ. ಅದೇಕೋ ಮನ ಹಿಂಜರಿಯಿತು.
ಹೆಣ್ಣು ಪ್ರೀತಿಸಿದರೆ ಜಲವಾಗುತ್ತಾಳೆ;
ಬಿಟ್ಟು ನಿಂತರೆ ಭೋರ್ಗರೆತ ಅಬ್ಬರದ ಅಲೆಗಳಂತೆ.
ಸಂಗಾತಿಯೆಂದರೆ ಬದುಕಾಗಿ ಬಿಡುತ್ತದೆ, ಬದುಕೇ ಆಗಿಬಿಡುತ್ತದೆ ಅವಳಿಗೆ. ಒಮ್ಮೆ ಜೊತೆಯಾದರೆ ಬರಿದಾಗುತ್ತಲೇ ಹೋಗುತ್ತಾಳೆ; ಕೆಲವೊಮ್ಮೆ ಅವನೆಂಬುವನು ತುಂಬಿಕೊಳ್ಳುವುದೇ ಕಷ್ಟ. ಪೂರ್ತಿಯಾಗಿ ಬೆತ್ತಲಾಗಿ ಬಿಡುತ್ತಾಳೆ; ಆಗಲೇ ಅವನ ಮನಸ್ಸಲ್ಲಿ ಕತ್ತಲು.
ಜೊತೆಗಾತಿಯ ಜೊತೆಯೂ ಗೌಪ್ಯತೆ ಇರಬೇಕೆ?? ಕೆಲವೊಂದು ವಿಷಯಗಳಲ್ಲಿ, ವಿಷಯಾಂತರಗಳಲ್ಲಿ ಎಂದಿತು ಆತ್ಮನ ಮನಸ್ಸು. ಇವಳೆಲ್ಲವನ್ನೂ ಹೇಳುತ್ತಿದ್ದರೆ, ನಾನೆಲ್ಲದಕ್ಕೂ ಕಿವಿಯಾಗಿ ಕೇಳುತಿದ್ದರೆ ಇವಳ ಮೇಲಿನ ಆಕರ್ಷಣೆ ಹೀಗೆ ಉಳಿದಿರಲು ಸಾಧ್ಯವೇ? ಕುತೂಹಲಗಳೇ ಉಸಿರು ಕಟ್ಟಿದ್ದರೆ ಬದುಕು ಹಸಿರಾಗುವುದೇ ಇಲ್ಲ. ಆತ್ಮ ಯೋಚಿಸುತ್ತಲೇ ಇದ್ದ.
ಅವಳು ಬಿಚ್ಚಿಟ್ಟ ಸತ್ಯ ಆತ್ಮನಿಗೆ ಮಿಲನದ ಮುಂಚೆಯೇ ಎದುರಾಗಿತ್ತು. ಗಂಡು ಕೂಡ ಕೇವಲ ದೇಹ ಸುಖ ಮಾತ್ರ ಪಡೆಯುವುದಿಲ್ಲ. ಸೌಂದರ್ಯ ದೇವತೆ ಅವಳು. ತನ್ನನ್ನು ಮಾತ್ರ ಪ್ರೀತಿಸುವ ಹೆಣ್ಣಿಗೆ ತೃಪ್ತಿ ಕೊಡುತ್ತಿದ್ದೇನೆ ಎಂಬ ಭಾವ ಅವನನ್ನು ಮತ್ತೂ ಮೆರೆಯುವಂತೆ ಮಾಡುತ್ತದೆ.
ಗಂಡಿನ ಸ್ಪರ್ಶದಿಂದ ಹೆಣ್ಣು ಉನ್ಮಾದಗೊಳ್ಳುತ್ತಿದ್ದರೆ ಗಂಡು ಉಕ್ಕೇರುತ್ತಿರುತ್ತಾನೆ. ಇದನ್ನು ಯಾವ ಯಂತ್ರಗಳೂ ಕೊಡಲಾರವು ಎಂದು ತಿಳಿದಿತ್ತು ಆತ್ಮನಿಗೆ.
ಅದನ್ನು ಸಂವೇದನಾ ತಿಳಿಸಿದ್ದಳು.ಆತ್ಮ ಹಿಂಜರಿದ ಇವಳಿಗೆ ಆಕರ್ಷಣೆ ಕಡಿಮೆಯಾದರೆ ಬರಿದಾಗಲು ಅವಕಾಶಗಳೆಲ್ಲಿ? ಹೆಣ್ಣಿಗಿಂತ ಗಂಡು ಸ್ವಂತದ ವಸ್ತುವನ್ನು, ತನ್ನನ್ನು ಪ್ರೀತಿಸುವ ಜೀವಿಯನ್ನು ಹೆಚ್ಚು ಪ್ರೇಮಿಸುತ್ತಾನೆ ಬಹುಶಃ ಎಂದುಕೊಂಡ.
ಅವರವರದೇ ಭಾವಗಳು.. ಯೋಚನೆಗಳ ಸಾಲು..
ಮನುಷ್ಯ ಬದಲಾಗುವುದು ಕಷ್ಟ. ಅವನದೇ ಯೋಚನೆಗಳಿಗೆ ಅಂಟಿಕೊಂಡು, ಆದರ್ಶಗಳೆಂಬುದಕ್ಕೆ ಜೋತು ಬಿದ್ದಿರುತ್ತಾನೆ. ಅವುಗಳಿಂದ ದೂರಾಗುವುದು ಇಷ್ಟವಿಲ್ಲ ಅವನಿಗೆ. ಬದುಕೇ ಬದಲಾಯಿಸಬೇಕು, ಇಲ್ಲವೇ ಬದುಕಾಗುವ ಪ್ರೀತಿ, ಸಂಗಾತಿ…!!
ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. “ನಾನೂ ಒಂದು ಸತ್ಯ ಹೇಳಲಾ??” ಆತ್ಮನ ಮುಖ ನೋಡಿ ಗಂಭೀರ ವಿಷಯವಿರಬೇಕು ಎಂದುಕೊಂಡು ನೋಡುತ್ತಾ ಕುಳಿತಳು, ಕೇಳಲನುವಾದಳು.
ಆತ್ಮ ಅವಳ ಕಂಗಳಲ್ಲಿ ಕಣ್ಣು ಸೇರಿಸಿ “ಗುರುವಿಲ್ಲದೇ ಕಲಿಯುವ ಕಲೆಯೆಂದರೆ ಇದೊಂದೆ” ನಕ್ಕ. ಅವಳು ನಾಚಿದಳು.
ಕಲಿಯಬೇಕು ನೀನು, ಕಲಿಸಬೇಕಿದೆ ನನಗೂ. ನಡೆ ಹೋಗೋಣ” ಕಿವಿಯ ಬಳಿ ಪಿಸುಗುಟ್ಟಿದಳು. ಆತ್ಮ ಎರಡೂ ಮಾತಾಗಲಿಲ್ಲ.
ಅವನು ಮಳೆಗರೆದ;
ಅವಳು ಇಳೆಯಾದಳು;
ಬದುಕಿನಲ್ಲಿ ಹೊಸ ಕಳೆ.
Facebook ಕಾಮೆಂಟ್ಸ್