X

ನೇತ್ರಾವತಿ ಅತ್ತ ಸದ್ದು..

ಅತ್ತವಳೆ ನೇತ್ರಾವತಿ ಗೊಳೋ
ಬೆತ್ತಲೆ ನೆಲವಾಗೊ ಸಂಕಟಕೆ
ತಂದಿಕ್ಕಿದೆ ಆತಂಕ ಭವಿತದ ರಚ್ಚೆ
ಭೀತಿ ಎತ್ತಿನ ಹೊಳೆಯಲಿ ಕೊಚ್ಚೆ..

ಜೀವನಾಡಿಯಾದವಳು ಮಾತೆ
ಕರಾವಳಿಗವಳು ಕನ್ನಡಿಯಂತೆ
ಕಣ್ಣಾಗ್ಹರಿಸಿಹಳು ಜೀವ ಜಲಧಾರೆ
ನೇತ್ರದಿ ನೆತ್ತರ ಹರಿಸೆ ದಿಕ್ಕಿನ್ಯಾರೆ ?

ಧರ್ಮಸ್ಥಳದಲಿ ಮುಳುಗು ಹಾಕಿ
ಮೀಯುವ ಭಕ್ತರ ತೋಯಿಸೊ ಶಕ್ತಿ
ಬತ್ತಿಸೆ ಪಾತ್ರ ಕುಗ್ಗಿ, ಮಬ್ಬುಕಣ್ಣ ಮಂಜೆ
ತೊಳೆಯಲ್ಯಾರ ಸೊರಗೆ, ನಾನಾಗೆ ಬಂಜೆ ?

ಕುಡಿಕುಡಿದು ಜನಮನ ಸುತ್ತಲ ನಿಸರ್ಗ
ಮಾಡಿಲ್ಲವೆ ಪ್ರಕೃತಿಯ ಅವನಿಯ ಸ್ವರ್ಗ ?
ಬೇಕೇಕೆ ಸಹಜವ ಕೆಡಿಸೊ ಸಂಚಿನ ಮೇಳ
ಬಲಿಯೇಕೆ ಸ್ವಾರ್ಥಕೆ ಯೋಜನೆ ಖೂಳ ?

ಬಿಡಿರಯ್ಯ ಹೊಳೆ ನದಿ ನಾಡಿನ ಮಾತೆ
ಬಾಯ್ಮುಚ್ಚಿಸುವುದಲ್ಲ, ಬರಿ ವಾದದ ಮಾತೆ
ಕೈಗೂಡಿಸಲಿದ್ದರೆನ್ನ ಉಳಿಸಿ ಬೆಳೆಸಿ ಸಲಹಿ
ಕಾಡದೆ ದೂರವಿದ್ದರು ಸರಿ, ಪೊರೆವೆ ರಕ್ಷಿಸಿ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post