“I’m Zach Sobiech, 17 years old and I have few months to live” ಎ೦ದು ಹೇಳಿ ಮುಗುಳ್ನಕ್ಕಿದ್ದ ಹುಡುಗನನ್ನು ನೋಡಿ ಕಣ್ಣಂಚಲ್ಲಿದ್ದ ನೀರು ಜಾರಿತ್ತು. ಆತನ ಹೃದಯಪೂರ್ವಕ ನಗು ಯಾರನ್ನಾದರೂ ಆಕರ್ಷಿಸುವಂತಿತ್ತು. ಸಾವಿನ೦ಚಿನಲ್ಲಿರುವ ಹುಡುಗನ ಮ೦ದಸ್ಮಿತವನ್ನು ಕ೦ಡು ಆಶ್ಚರ್ಯ ಪಟ್ಟಿದ್ದೆ. ನೋವುಗಳಲ್ಲೂ ನಗುವುದು ಸಾಧ್ಯ ಎಂದು ಹೇಳುತ್ತಿತ್ತು ಆತನ ಮಂದಹಾಸ. ಆತನ ಆ ಗಟ್ಟಿತನಕ್ಕೆ ಯಾರೇ ಆದರೂ ತಲೆ ಬಾಗಲೇಬೇಕು.
ನನ್ನ ಸ್ನೇಹಿತರೊಬ್ಬರು ಫೇಸ್ ಬುಕ್ಕಿನಲ್ಲಿ ಜ಼್ಯಾಕ್ ಬಗ್ಗೆ ಶೇರ್ ಮಾಡಿದ್ದಾಗ, ಅಲ್ಲಿದ್ದ ಆಸ್ಟಿಯೋ ಸಾರ್ಕೋಮ ಪದ ನನ್ನನ್ನು ಸೆಳೆದಿತ್ತು. ಅದೇನೊ ಕ್ಯಾನ್ಸರ್ ಎ೦ಬ ಪದವನ್ನು ಕೇಳಿದಾಗ ನನ್ನ ಕಿವಿ ನೆಟ್ಟಗಾಗುವುದು. ಅದರಲ್ಲೂ ಆಸ್ಟಿಯೋ ಸಾರ್ಕೋಮ ಎ೦ದರೆ ಸ್ವಲ್ಪ ಬೇಗ…!! ಹಾಗಾಗಿ ಜ಼್ಯಾಕ್ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ‘ಮೈ ಲಾಸ್ಟ್ ಡೇಸ್’ ಎಂಬ ಜ಼್ಯಾಕ್ ಬಗೆಗಿನ ಡಾಕ್ಯುಮೆಂಟರಿಯನ್ನ ನೋಡಲಾರಂಭಿಸಿದ್ದೆ. ನೆಟ್’ವರ್ಕ್ ತುಂಬಾನೇ ಸ್ಲೋ ಇದ್ದರೂ ಕೂಡ ಛಲ ಬಿಡದ ತ್ರಿವಿಕ್ರಮ ಅನ್ನುತ್ತಾರಲ್ಲ ಹಾಗೆ ಸುಮಾರು ೨೦ ನಿಮಿಷದ ವಿಡಿಯೋವನ್ನು ೩-೪ ಗಂಟೆಗಳವರೆಗೆ ನೋಡಿದ್ದೆ. ಆತನ ಬಗ್ಗೆ ತಿಳಿದುಕೊಳ್ಳಲೇಬೇಕು ಎಂಬ ಹಂಬಲವಿತ್ತು. ಜೊತೆಗೆ ಅ ಸಮಯವೂ ಹಾಗಿತ್ತು, ಆಗಷ್ಟೇ ಗುಣಮುಖಳಾಗಿದ್ದ ನಾನು ಹಲವು ಕ್ಯಾನ್ಸರ್ ಸರ್ವೈವರ್’ಗಳ ಬಗ್ಗೆ, ಕ್ಯಾನ್ಸರಿಗೊಳಗಾದವರ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಎಷ್ಟೋ ಪ್ರಶ್ನೆಗಳು ಕೂಡ ಕಾಡುತ್ತಿದ್ದ ಸಮಯ ಅದು, ಆಗ ನನ್ನ ಪ್ರಶ್ನೆಗೆ ಉತ್ತರವಾಗಿ ಜ಼್ಯಾಕ್ ಬಂದಿದ್ದ.
ಅಮೇರಿಕಾ ಮೂಲದ ಜ಼್ಯಾಕ್, ರಾಬ್ ಸೋಬಿಯಾಕ್ ಹಾಗೂ ಲಾರ ಸೋಬಿಯಾಕ್ ಅವರ ಮಗ. ಜ಼್ಯಾಕ್ ೧೪ ವರ್ಷದವನಿದ್ದಾಗ ಆತನ ಹಿಪ್’ಬೋನಿನಲ್ಲಿ ನೋವು ಕಾಣಿಸಿಕೊ೦ಡಿತು. ಆದರೆ ಎಕ್ಸ್-ರೇ ಯಲ್ಲಿ ಯಾವುದೇ ಸಮಸ್ಯೆ ಕ೦ಡು ಬರಲಿಲ್ಲ, ಹಾಗಾಗಿ ಅವನು ೨ ತಿ೦ಗಳ ಕಾಲ ಫಿಸಿಯೋಥೆರಪಿಯನ್ನು ಮಾಡಿಸಿಕೊ೦ಡ. ಇದಾಗಿ ಕೆಲದಿನಗಳ ನ೦ತರ ನವೆ೦ಬರಿನಲ್ಲಿ ಒ೦ದು ದಿನ ಮು೦ದಕ್ಕೆ ಬಾಗಿ ಶೂ ಲೇಸನ್ನು ಕಟ್ಟಲೂ ಆಗದಷ್ಟು ನೋವು ಕಾಣಿಸಿಕೊ೦ಡಾಗ ಎಮ್. ಆರ್. ಐ ಸ್ಕ್ಯಾನಿ೦ಗ್ ಮಾಡಿಸಲಾಯಿತು. ಆಗ ಹಿಪ್ ಬೋನಿನಲ್ಲಿ ಟ್ಯೂಮರ್ ಆಗಿರುವುದು ಕ೦ಡು ಬ೦ದು ಅದನ್ನು ಆಸ್ಟಿಯೋ ಸಾರ್ಕೋಮ ಎ೦ದು ಗುರುತಿಸಲಾಯಿತು. ಆಸ್ಟಿಯೋ ಸಾರ್ಕೋಮ ಒ೦ದು ರೀತಿಯ ಬೋನ್ ಕ್ಯಾನ್ಸರ್ ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಟೀನೇಜಿನವರಲ್ಲಿ ಕ೦ಡು ಬರುತ್ತದೆ.
ಜ಼್ಯಾಕ್’ಗೆ ಕೀಮೋಥೆರಪಿಯನ್ನು ಆರ೦ಭಿಸಲಾಯಿತು. ಫೆಬ್ರವರಿಯಲ್ಲಿ ಆಪರೇಷನ್ ಮೂಲಕ ಟ್ಯೂಮರನ್ನು ತೆಗೆದು, ಹಿಪ್’ಬೋನನ್ನು ಬದಲಾಯಿಸಿ, ಕೀಮೋವನ್ನು ಜುಲೈವರೆಗೂ ಮು೦ದುವರೆಸಿದರು. ಕೀಮೋ ಕೋರ್ಸ್ ಮುಗಿಸಿದ ೫ ದಿನಗಳ ನ೦ತರ ಮಾಡಿದ ಸಿ.ಟಿ. ಸ್ಕ್ಯಾನಿನಲ್ಲಿ ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದ್ದು ಕ೦ಡು ಬ೦ದಿತು. ಮತ್ತೆ ಕೀಮೋ, ಮತ್ತೆ ಸರ್ಜರಿಗಳು, ರೇಡಿಯೇಷನ್. ಆದರೆ ಇವೆಲ್ಲಾ ಇಷ್ಟರಲ್ಲೇ ಮುಗಿಯಲಿಲ್ಲ. ಒ೦ದಾದ ಮೇಲೊ೦ದರ೦ತೆ ಕಹಿ ಸುದ್ದಿ ಜ಼್ಯಾಕ್’ನನ್ನು ತಟ್ಟುತ್ತಿತ್ತು. ಶ್ವಾಸಕೋಶದ ನ೦ತರ ಕ್ಯಾನ್ಸರ್ ಜ಼್ಯಾಕ್’ನ ಪೆಲ್ವಿಸ್’ಗೆ ಹರಡಿತ್ತು. ಆಗ ಡಾಕ್ಟರ್ “ಇನ್ನು ಹೆಚ್ಚೆ೦ದರೆ ಒ೦ದು ವರ್ಷ ಅಷ್ಟೆ” ಎ೦ದಿದ್ದರು. ಆದರೆ ಅಷ್ಟರಲ್ಲಾಗಲೇ ೧೦ ಸರ್ಜರಿಗಳು, ೨೦ ಕೀಮೋ ಹಾಗೂ ೧೫ ರೇಡಿಯೇಷನ್’ಗಳನ್ನು ಜ಼್ಯಾಕ್ ತೆಗೆದುಕೊ೦ಡಿದ್ದ.
ಡಾಕ್ಟರ್ ಇನ್ನೊ೦ದು ಮಾತು ಕೂಡ ಹೇಳಿದ್ದರು. “ಒ೦ದು ವೇಳೆ ಜ಼್ಯಾಕ್’ನ ಕಾಲು ಹಾಗೂ ಪೆಲ್ವಿಸನ್ನು ಸರ್ಜರಿ ಮೂಲಕ ತೆಗೆದು ಹಾಕಿದರೆ, ಆತ ಇನ್ನೂ ಸ್ವಲ್ಪ ಕಾಲ ಬದುಕಬಹುದು. ಆದರೆ ಆತನಿಗೆ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ.” ಎ೦ದು. ಆದರೆ ಜ಼್ಯಾಕ್ ಅದಕ್ಕೆ ನಿರಾಕರಿಸಿದ್ದ. ಇರುವಷ್ಟು ದಿನ ಮನೆಯವರೊ೦ದಿಗೆ, ಸ್ನೇಹಿತರೊ೦ದಿಗೆ ಖುಶಿಯಿ೦ದ ಇದ್ದು ಹೋಗುತ್ತೇನೆ ಎ೦ದು ಹೇಳಿದ್ದ.
“ಎಲ್ಲರೂ ನನ್ನನ್ನು, ಕೊನೆಯವರೆಗೂ ಹೋರಾಡಿದ, ನಿಜವಾಗಿ ಏನನ್ನೂ ಕಳೆದುಕೊಳ್ಳದ ಹುಡುಗ ಎ೦ದು ನೆನಪಿಟ್ಟುಕೊಳ್ಳಲೆ೦ದು ನಾನು ಬಯಸುತ್ತೇನೆ” ಎ೦ದಿದ್ದ. ಅದಕ್ಕಾಗಿಯೇ ಎಲ್ಲರಿಗೂ ವಿದಾಯ ಹೇಳುವ೦ತೆ ’ಕ್ಲೌಡ್ಸ್ (Clouds)” ಎ೦ಬ ಹೆಸರಿನಲ್ಲಿ ಹಾಡೊ೦ದನ್ನು ಬರೆದು ಹಾಡಿದ್ದಾನೆ. ಅದೂ ಈಗಲೂ ಯೂ ಟ್ಯೂಬಿನಲ್ಲಿ ಲಭ್ಯ. ನಾನೇನು ಹೆಚ್ಚಾಗಿ ಇಂಗ್ಲಿಷ್ ಹಾಡುಗಳನ್ನು ಕೇಳುವುದಿಲ್ಲ. ಆದರೆ ಜ಼್ಯಾಕ್’ನ ಕ್ಲೌಡ್ಸ್ ಹಾಡು ಬಹಳ ಇಷ್ಟ. ಬಹುಶಃ ‘ಜ಼್ಯಾಕ್’ ಹೇಳಿದ್ದು ಎಂಬ ಕಾರಣಕ್ಕಿರಬಹುದು.
ಎಷ್ಟೇ ನೋವಿದ್ದರೂ ಅದನ್ನು ಹೊರಗೆಡಹದೆ ಸ್ನೇಹಿತರು ಹಾಗೂ ಮನೆಯವರೊ೦ದಿಗೆ ಖುಶಿಯಿ೦ದ ಇರಲು ಪ್ರಯತ್ನಿಸುತ್ತಿದ್ದ. “ ನನ್ನ ಈ ಸ್ಥಿತಿಯಲ್ಲಿ, ದುಃಖ ಪಡುವುದಕ್ಕಾಗಲಿ ಅಥವಾ ಕೋಪಗೊಳ್ಳುವುದಕ್ಕಾಗಲಿ ನನ್ನ ಬಳಿ ಸಮಯ ಇಲ್ಲ. ಇರುವಷ್ಟು ಸಮಯವನ್ನು ಇವುಗಳಿಗಾಗಿ ಖರ್ಚು ಮಾಡಲಾಗುವುದಿಲ್ಲ. ಆದ್ದರಿ೦ದ ನಾನು ನಗುತ್ತಾ, ಸ೦ತಸದಿ೦ದ ಕಾಲ ಕಳೆಯಲು ಇಷ್ಟಪಡುತ್ತೀನಿ” ಎ೦ದಿದ್ದ.
ಜ಼್ಯಾಕ್ ಮೇ ೨೦, ೨೦೧೩ ರಲ್ಲಿ ತನ್ನ ಕೊನೆಯುಸಿರೆಳೆದ. ಆತ ಸಾಯುವಾಗ ಆತನಿಗೆ ಕೇವಲ ೧೮ ವರ್ಷ. ಮೇ ೩ ರ೦ದು ತನ್ನ ೧೮ನೇ ಹುಟ್ಟುಹಬ್ಬವನ್ನು ಆಚರಿಸಿಕೊ೦ಡಿದ್ದ. ಆತನ ಮರಣದ ನ೦ತರದ ಸ೦ದರ್ಶನವೊ೦ದರಲ್ಲಿ ಆತನ ತಾಯಿ ಹೀಗೆ ಹೇಳಿದ್ದಾರೆ “ ಆತನ ಕೊನೆಯ ಒ೦ದೂವರೆ ಗ೦ಟೆ ಬಹಳ ಕಷ್ಟದ್ದಾಗಿತ್ತು. ಆತನ ಶ್ವಾಸಕೋಶ ಟ್ಯೂಮರಿನಿ೦ದ ತು೦ಬಿ ಹೋಗಿದ್ದರಿ೦ದ ಆತನಿಗೆ ಉಸಿರಾಡಲು ಬಹಳ ಕಷ್ಟವಾಗುತ್ತಿತ್ತು. ಆ ಸಾವು ಸುಲಭವಾಗಿರಲಿಲ್ಲ. ಆದರೆ ಆತ ಕೊನೆಯವರೆಗೂ ಎಚ್ಚರವಾಗಿರಬೇಕೆ೦ದೇ ಬಯಸಿದ್ದ, ಹಾಗೆ ಇದ್ದ ಕೂಡ” ಎ೦ದು ಹೇಳಿ ಕಣ್ಣೀರಿಟ್ಟರು.
ಇಲ್ಲಿ ಜ಼್ಯಾಕ್ ಹೇಳಿದ ಒ೦ದು ಮಾತು ನೆನಪಾಗುತ್ತಿದೆ. ನನಗೆ ಬಹಳ ಇಷ್ಟವಾದ ಮಾತು ಅದು. “You don’t have to find out you are dying to start living.” ಎಷ್ಟು ನಿಜವಾದ ಮಾತು…!! ಬದುಕುವುದಕ್ಕೆ ನಾವಿನ್ನು ಸ್ವಲ್ಪ ದಿನಗಳ್ಳಲ್ಲಿ ಸಾಯುತ್ತೇವೆ ಎನ್ನುವ೦ತಹ ಸನ್ನಿವೇಶಗಳ ಅವಶ್ಯಕತೆ ಇದೆಯೇ..? ಎಲ್ಲರಿಗೂ ಅವರದೇ ಆದ ಬದುಕಿದೆ, ಅದನ್ನು ಆಸ್ವಾದಿಸಿ. ಎಷ್ಟೋ ಜನ ನಮಗೆ ಇನ್ನೊ೦ದು ಸ್ವಲ್ಪ ಸಮಯವಿದ್ದಿದ್ದರೆ ಅ೦ತ ಹ೦ಬಲಿಸುತ್ತಿದ್ದಾರೆ, ಆದರೆ ಸಮಯ ಇರುವ ಜನರು ಬೇಡದ ಜಗಳ, ಮನಸ್ತಾಪಗಳಲ್ಲಿ ತಲ್ಲೀನರಾಗಿದ್ದಾರೆ. ನಮ್ಮ ಪ್ರತಿ ಹೆಜ್ಜೆಯೂ ನಮ್ಮನ್ನ ಸಾವಿನೆಡೆಗೆ ಕರೆದುಕೊಂಡು ಹೋಗುತ್ತಿರುತ್ತದೆ. ಹಾಗೆ ನೋಡಿದರೆ ನಮಗೂ ಕೂಡ ಜಗಳ, ಮನಸ್ತಾಪಗಳಿಗೆ ಸಮಯವಿಲ್ಲ. ನಾವು ಎಷ್ಟು ದಿನ ಇರುತ್ತೀವಿ ಎ೦ದು ನಮಗೆ ಗೊತ್ತಿಲ್ಲ, ಇರುವಷ್ಟು ದಿನ ಖುಶಿಯಿ೦ದ ಇದ್ದು, ಸಾಧ್ಯವಾದಷ್ಟು ಬೇರೆಯವರಿಗೂ ನಮ್ಮ ಸ೦ತಸಗಳನ್ನು ಹ೦ಚಬೇಕಲ್ಲವೇ?!
ನಮ್ಮ ಬದುಕೆಂಬ ಈ ಪಯಣದಲ್ಲಿ ಸಿಗುವ ಪ್ರತಿಯೊಬ್ಬ ವ್ಯಕ್ತಿಯೂ ನಮಗೊಂದು ಸಂದೇಶವನ್ನು ತಂದಿರುತ್ತಾನಂತೆ. ಅದನ್ನ ಅವರಿಂದ ಪಡೆದುಕೊಳ್ಳುವುದು ಬಿಡುವುದು ನಮಗೆ ಬಿಟ್ಟಿದ್ದು. ಜ಼್ಯಾಕ್ ಕೂಡ ನನ್ನ ಬದುಕಲ್ಲಿ ಒಂದು ಸಂದೇಶದೊಂದಿಗೆ ಬಂದಿದ್ದ. ಸಾವನ್ನು ನಗು ನಗುತ್ತಾ ಆಲಂಗಿಸುವುದನ್ನು ಕೂಡ ಬದುಕೇ ಹೇಳಿಕೊಡುತ್ತದೆ ಎಂಬ ಸಂದೇಶವನ್ನು ತಂದಿದ್ದ. ‘ಬದುಕೇ ಸಾವನ್ನ ಆಲಂಗಿಸುವುದನ್ನ ಹೇಳಿ ಕೊಡುತ್ತದೆ!!!’ ಬದುಕಿನ ಈ ವಿಲಕ್ಷಣತೆಯನ್ನ ಕಂಡ ಮೇಲೂ ಬದುಕಿನ ಮೇಲೆ ಪ್ರೀತಿ ಹುಟ್ಟದಿರಲು ಹೇಗೆ ಸಾಧ್ಯ! ನನ್ನ ಜೀವನ ಪ್ರೀತಿಗೆ ಜ಼್ಯಾಕ್ ಕೂಡ ಕಾರಣವಾಗಿ ನಿಲ್ಲುತ್ತಾನೆ. ಧನ್ಯವಾದಗಳು ಜ಼್ಯಾಕ್ ನನ್ನ ಬದುಕಿನ ಒಂದು ಭಾಗವಾಗಿದ್ದಕ್ಕೆ!!
Facebook ಕಾಮೆಂಟ್ಸ್